“ಜಾತಿ ವಿನಾಶ ಮತ್ತು RSS?”
ಜಾತಿಯೇ ಈ ದೇಶದ ಅಸ್ಮಿತೆ ಎಂದು ಘೋಷಿಸಿರುವ….
ಅಂಬೇಡ್ಕರ್ ಅವರ ಜಾತಿ ವಿನಾಶ ಪರಿಕಲ್ಪನೆಯನ್ನು ವಿಕೃತಿ ಎಂದು ಕರೆದ….
ಅಂಬೇಡ್ಕರ್ ಸುಟ್ಟ ಮನುಸ್ಮೃತಿಯನ್ನು ದೇಶದ ಸಂವಿಧಾನವಾಗಬೇಕೆಂದು ಬಯಸುವ….
ಆರೆಸ್ಸೆಸ್ ಜಾತಿ ವಿನಾಶ ಮಾಡುತ್ತದೆಯೇ?
ಜಾತಿ ವ್ಯವಸ್ಥೆಯ ಬಗ್ಗೆ ಆರೆಸ್ಸೆಸ್ ನ ನಾಯಕರ ಘೋಷಿತ ಅಭಿಪ್ರಾಯಗಳೇನಾಗಿತ್ತು ಸ್ವಲ್ಪ ಗಮನಿಸೋಣ… :
ಸಾವರ್ಕರ್ ಅವರ ನಂತರ RSS ತನ್ನ ಎರಡನೇ ಸೈದ್ಧಾಂತಿಕ ಗುರು ಎಂದು ಭಾವಿಸುವ RSS ನ ಎರಡನೇ ಸರಸಂಘ ಚಾಲಕ ಗೋಲ್ವಾಲ್ಕರ್ ಅವರು ಜಾತಿ ವಿನಾಶದ ಪರಿ ಕಲ್ಪನೆಯನ್ನು ದೇಶವಿರೋಧಿ ಎಂದು ಬಣ್ಣಿಸಿ ಹೀಗೆ ಹೇಳುತ್ತಾರೆ : “ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ..ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ , ಕನಿಷ್ಟ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ”
(The Organiser, 26 January 1962)
ಅಷ್ಟು ಮಾತ್ರವಲ್ಲ. ಸಂಘಪರಿವಾರದ ಈ ಕುಲಪುರೋಹಿತರು ಜಾತಿ ಅಸ್ಮಿತೆಯನ್ನು ಕಾಪಾಡಲು ಇನ್ನೂ ಚಿತ್ರವಿಚಿತ್ರವಾದ ಆದರೆ ಅಪಾಯಕಾರಿಯಾದ ವಾದಗಳನ್ನು ಮುಂದಿಡುತ್ತಾರೆ. ಅವರ ಪ್ರಕಾರ :” ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ ಬುದ್ಧನ ಚಿಂತನೆಗಳ ದುಶ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಅಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ ದೆಹಲಿ ಪ್ರಾಂತ್ಯಗಳು ಪ್ರಧಾನವಾಗಿ ಹಿಂದುವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು” (RSS and Democracy (Delhi: Sampradayikta Virodhi Committee, nd) – ಆನಂದ್ ತೇಲ್ತುಂಬ್ಡೆ ಯವರು ಸಂಪಾದಿಸಿರುವ HINDUTVA AND DALITS ಗ್ರಂಥದಲ್ಲಿ ಉಲ್ಲೇಖಿತ)
ದಲಿತರು ಸ್ವಧರ್ಮದಲ್ಲೇ ಸಾಯಬೇಕು- ದೀನದಯಾಳ್ ಉಪಾಧ್ಯ
ಆರೆಸ್ಸೆಸ್ಸಿನ ಮತ್ತೊಬ್ಬ ಗುರುವಾದ ಹಾಗೂ ಮೋದಿಯವರು ಬಹುವಾಗಿ ಉಲ್ಲೇಖಿಸುವ ದೀನ್ ದಯಾಳ್ ಉಪಾಧ್ಯ ಅವರಂತೂ ಇದೇ ಅತ್ಯಂತ ಅಪಾಯಕಾರಿ ಚಿಂತನೆಯನ್ನು ಘೋರವಾದ ಮೃದು ಭಾಷೆಯಲ್ಲಿ ಮುಂದಿಡುತ್ತಾರೆ:
“ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರು ಸಮಾನರಲ್ಲ. ಪ್ರತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ. ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ. ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ”
ಇದನ್ನು ಮುಂದುವರೆಸಿಯೇ ಮೋದಿಯವರು ಚರಂಡಿ ಸ್ವಚ್ಚ ಮಾಡುವ ಪೌರಕಾರ್ಮಿಕರು ತಮ್ಮ ವೃತ್ತಿಯಲ್ಲಿ ಘನತೆಯನ್ನು ಮತ್ತು ದೇವರನ್ನು ಕಾಣುವ ಕರ್ಮಯೋಗಿಗಳು ಎಂದು ಬೊಗಳೆಯಾಡಿದ್ದು.(upadhya , P. Bhishikar, Pandit Deendayal Upadhyaya: Ideology and Perception—Concept of the Rashtra, vol. 5)
ಈಗ ಮತ್ತೆ ಇದೆ RSS ಜಾತಿ ವಿನಾಶಕ್ಕೆ ಆರೆಸ್ಸೆಸ್ ಸೇರಿರಿ ಎಂದು ಕರೆ ಕೊಡುತ್ತದೆ ಎಂದರೆ .. RSS ಎಂಬ ಈ ಜಂತು
ಎಂಥ ಹಲವು ನಾಲಗೆ ವಿಷಸರ್ಪವಿರಬೇಕು ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply