ನ್ಯೂಡೆಲ್ಲಿ : ಮಾರ್ಚ್ 14, ಹೋಳಿ ಹಬ್ಬದಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಅವಾಘಡದಲ್ಲಿ ಹಣದ ಮೂಟೆಗಳು ಸುಟ್ಟುಹೋಗಿರುವುದಾಗಿ ಆರೋಪ ಕೇಳಿಬಂದಿದೆ.
ಶನಿವಾರ ರಾತ್ರಿ ಸ್ಟೋರ್ ರೂಂನಲ್ಲಿ ಸುಟ್ಟ ಹಣದ ಫೋಟೋಗಳು ಮತ್ತು ವೀಡಿಯೊ ಕ್ಲಿಪ್ ಅನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಇವುಗಳೊಂದಿಗೆ ಸಂಬಂಧಿತ ವರದಿಯನ್ನು ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿಯೂ ಲಭ್ಯವಾಗುವಂತೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದಲ್ಲಿ ಘಟನೆಯ ಆಂತರಿಕ ತನಿಖೆ ನಡೆಯುತ್ತಿದೆ. ಈ ವಿವಾದದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ನ್ಯಾಯಾಂಗ ಕರ್ತವ್ಯಗಳನ್ನು ನಿಯೋಜಿಸಬರದೆಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂಚಿಸಿದ್ದಾರೆ.
ಈ ನಡುವೆ ಸುಟ್ಟ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಸ್ಪಷ್ಟಪಡಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಅವರನ್ನು ಅವಮಾನಿಸುವ ಸಂಚು ಎಂದು ಆರೋಪಿಸಿದರು. ಸುಟ್ಟ ನಗದು ಫೋಟೋಗಳು ಮತ್ತು ವಿಡಿಯೋ ಕ್ಲಿಪ್ನ ಸತ್ಯಾಸತ್ಯತೆಯನ್ನು ಅವರು ಪ್ರಶ್ನಿಸಿದ್ದಾರೆ. ಸರಕಾರ ಮಂಜೂರು ಮಾಡಿರುವ ನಿವಾಸದ ಸಿಬ್ಬಂದಿ ವಸತಿ ಗೃಹದ ಬಳಿ ಇರುವ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದರು. ಹಳೆಯ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ತೋಟದ ವಸ್ತುಗಳನ್ನು ಇಡುವ ಸ್ಟೋರ್ ರೂಂ ಇದಾಗಿದೆ ಎಂದರು. ಬೀಗ ಹಾಕದ ಈ ಸ್ಟೋರ್ ರೂಂ ನೇರವಾಗಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸಿಲ್ಲ ಎಂದರು
ಮತ್ತೊಂದೆಡೆ, ಅವರು ಮತ್ತು ಅವರ ಪತ್ನಿ ಮಧ್ಯಪ್ರದೇಶದ ಭೋಪಾಲ್ಗೆ ಹೋದಾಗ, ಆ ರಾತ್ರಿ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಹೇಳಿದ್ದಾರೆ. ಆ ಸಮಯದಲ್ಲಿ ಅವರ ಮಗಳು, ವಯಸ್ಸಾದ ತಾಯಿ ಮನೆಯಲ್ಲಿದ್ದರು ಎಂದು ಅವರು ಹೇಳಿದರು. ಆ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅವರ ಮಗಳು ಮತ್ತು ಖಾಸಗಿ ಕಾರ್ಯದರ್ಶಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಬೆಂಕಿಯನ್ನು ನಂದಿಸುವಾಗ ಅವರ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿ ದೂರದಲ್ಲಿದ್ದರು ಎಂದರು. ಆಗ ಅಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ ಎಂದರು.
ಆದರೆ, ಆ ಸ್ಟೋರ್ ರೂಂನಲ್ಲಿ ತಾವು ಅಥವಾ ಅವರ ಕುಟುಂಬ ಸದಸ್ಯರು ಹಣ ಸಂಗ್ರಹಿಸಿಲ್ಲ ಎಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸುಟ್ಟ ಕರೆನ್ಸಿಯ ಅವಶೇಷಗಳನ್ನು ತೋರಿಸಲಿಲ್ಲ ಎಂದರು. ಇಷ್ಟು ದೊಡ್ಡ ಮೊತ್ತದ ಹಣವನ್ನು ನಿಜವಾಗಿಯೂ ವಸೂಲಿ ಮಾಡಿದ್ದರೆ, ಅದರ ಬಗ್ಗೆ ಏಕೆ ಹೇಳಲಿಲ್ಲ ಎಂದು ಅವರು ಪ್ರಶ್ನಿಸಿದರು. ತಮ್ಮ ನಿವಾಸದಿಂದ ಪ್ರತ್ಯೇಕವಾದ ಸ್ಟೋರ್ ರೂಂನಲ್ಲಿ ಹಣದ ಕಟ್ಟುಗಳನ್ನು ಸುಟ್ಟು ಹಾಕಲಾಗಿದೆ ಎಂಬ ಆರೋಪವನ್ನು ಅವರು ಆಧಾರರಹಿತ ಮತ್ತು ಅವೈಜ್ಞಾನಿಕ ಎಂದು ನಿರಾಕರಿಸಿದರು.
Leave a reply