ತ್ರಿಪುರ : ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಭಾಷಾ ವಿವಾದ ಭುಗಿಲೆದ್ದಿದೆ. ರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದಾದ ಕೊಕ್ಬೊರೊಕ್ಗೆ ರೋಮನ್ ಲಿಪಿಯನ್ನು ಅಳವಡಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಶುಕ್ರವಾರ ವಿಧಾನಸಭೆಯ ಆರಂಭದ ಮೊದಲ ದಿನವೇ, ರಾಜಧಾನಿ ಅಗರ್ತಲಾದಲ್ಲಿ ಟ್ವಿಪ್ರಾ ಸ್ಟೂಡೆಂಟ್ಸ್ ಫೆಡರೇಶನ್ (ಟಿಎಸ್ಎಫ್) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ವಿಧಾನಸಭೆ, ಹೈಕೋರ್ಟ್ ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಗಳನ್ನು ನಿರ್ಬಂಧಿಸಲಾಗಿತ್ತು. ತಮ್ಮ ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆ (ಟಿಎಸ್ಎಫ್) ಒತ್ತಾಯಿಸಿತು.
ಏತನ್ಮಧ್ಯೆ, ಟಿಎಸ್ಎಫ್ ಮತ್ತು ಯೂತ್ ಟಿಪ್ರಾ ಫೆಡರೇಶನ್ (ವೈಟಿಎಫ್)ನ ನೂರಾರು ಕಾರ್ಯಕರ್ತರು ಪ್ರಮುಖ ರಸ್ತೆ ಜಂಕ್ಷನ್ಗಳಲ್ಲಿ ಜಮಾಯಿಸಿದರು. ಕೊಕ್ಬೊರೊಕ್ ಗೆ ರೋಮನ್ ಲಿಪಿಯನ್ನು ಅಳವಡಿಸಬೇಕೆಂದು ಘೋಷಣೆಗಳನ್ನು ಕೂಗಿದರು . ಈ ನಿಟ್ಟಿನಲ್ಲಿ ಭಿತ್ತಿ ಫಲಕಗಳನ್ನು ಪ್ರದರ್ಶಿಸಲಾಯಿತು. ಮತ್ತೊಂದೆಡೆ, ಅಧಿಕೃತ ದಾಖಲೆಗಳು ಮತ್ತು ಶಿಕ್ಷಣದಲ್ಲಿ ಪ್ರಸ್ತುತ ಬಳಸುತ್ತಿರುವ ಬಂಗಾಳಿ ಲಿಪಿಯ ಬದಲಿಗೆ ರೋಮನ್ ಲಿಪಿಯನ್ನು ಜಾರಿಗೆ ತರಬೇಕು ಎಂದು ಬುಡಕಟ್ಟು ವಿದ್ಯಾರ್ಥಿ ಒಕ್ಕೂಟದ ನಾಯಕ ಒತ್ತಾಯಿಸಿದರು. ದೊಡ್ಡ ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಲಿಪಿಯ ಮಹತ್ವವನ್ನು ಗುರುತಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಇದರಿಂದ ಸಚಿವರು, ಶಾಸಕರು ವಿಧಾನಸಭೆಗೆ ತೆರಳಲು ಪರದಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ಪ್ರತಿಭಟನೆಯನ್ನು ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಆದರೆ ತಮ್ಮ ಬೇಡಿಕೆಗಾಗಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬುಡಕಟ್ಟು ವಿದ್ಯಾರ್ಥಿ ಸಂಘಟನೆಗಳು ಸ್ಪಷ್ಟಪಡಿಸಿವೆ.
Leave a reply