ಮೋದಿ ಸರ್ಕಾರ ಮುಂದುವರೆಸಿರುವ ಮುಸ್ಲಿಂ ದಾಳಿಯ ಭಾಗವಾಗಿ ಕಳೆದ ಆಗಸ್ಟಿನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಮತ್ತು ತೆಲುಗು ದೇಶಂ ಪಕ್ಷಗಳ ಸಂಪೂರ್ಣ ಸಮ್ಮತಿಯಿಲ್ಲದ ಕಾರಣಕ್ಕೆ Joint Parliamentary Committee – JPC-ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲ್ಪಟ್ಟಿತ್ತು. ಅದು ತನ್ನ ವರದಿಯನ್ನು ನೀಡಿದ್ದು ಫ಼ೆಬ್ರವರಿ 13 ರಂದು ಅದನ್ನು ಎರಡೂ ಸದನಗಳಲ್ಲಿ ಮಂಡಿಸಲಾಗಿದೆ. ಅದರ ಸಂಪೂರ್ಣ ಪಠ್ಯವು ಈಗ ಸದನದ ವೆಬ್ ಸೈಟಿನಲ್ಲಿ ಲಭ್ಯವಿದೆ. ಈ ಜೆಪಿಸಿ ಎಂಬುದೇ ಮುಸ್ಲಿಮರ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ ಸಂಘಿಗಳು ಪ್ರಾರಂಭಿಸಿರುವ ದಾಳಿಗೆ ಸಂಸದೀಯ ಒಪ್ಪಿಗೆ ಪಡೆದುಕೊಳ್ಳುವ ಮಾರ್ಗವಷ್ಟೆ ಆಗಿತ್ತು ಎಂಬುದನ್ನು ಅದರ ವರದಿಯನ್ನು ಮತ್ತು ಶಿಫ಼ಾರಸ್ಸುಗಳನ್ನು ಕಣ್ಣಾಡಿಸಿದರೆ ಗೊತ್ತಾಗುತ್ತದೆ. ವರದಿಯ ಶಿಫ಼ಾರಸ್ಸುಗಳನ್ನು ಮತ್ತದರ ಹುನ್ನಾರಗಳ ಬಗ್ಗೆ ಚರ್ಚಿಸುವ ಮುನ್ನ ಈ ವಕ್ಫ್ ಮತ್ತು ಅದರ ನಿರ್ವಹಣೆ ಹೇಗಿತ್ತು ಎಂಬುದರ ಸಂಕ್ಶಿಪ್ತ ಪರಿಚಯ ಮಾಡಿಕೊಳ್ಳುವುದು ಅಗತ್ಯ. ಆಗ ಮಾತ್ರ ಸಂಘಿಗಳ ಕೋಮುವಾದಿ ಹುನ್ನಾರ ಇನ್ನಷ್ಟು ಸ್ಪಷ್ಟವಾಗುತ್ತದೆ.
ವಕ್ಫ್ ಎಂದರೇನು? ವಕ್ಫ್ ಬೋರ್ಡ್ ಎಂದರೇನು? ವಕ್ಫ್ ಬೋರ್ಡ್ ನಿರ್ವಹಣೆ ಹೇಗೆ?
ವಕ್ಫ್ ಎಂಬುದು ಒಂದು ಅರಬ್ಬಿ ಪದ. ಇದರ ಅರ್ಥ ದೇವರ ಹೆಸರಿನಲ್ಲಿ ಕೊಟ್ಟ ದತ್ತಿ ಎಂತಲೂ ಮತ್ತು ಈ ದತ್ತಿ ಮತ್ತೆ ಬೇರೆಯವರಿಗೆ ಪರಭಾರೆ ಆಗದ ಶಾಶ್ವತ ಹಾಗೂ ಅಂತಿಮ ಕೊಡುಗೆ ಎಂದು. ಇಸ್ಲಾಮಿನಲ್ಲಿ ನೈಜ ಅನುಯಾಯಿಗಳಾದವರು ಪರ್ತಿವರ್ಷ ತಮ್ಮ ಆದಾಯದ ಶೇ. 2.5 ರಷ್ಟನ್ನು ಸಮಾಜಕ್ಕೆ ಕಡ್ಡಾಯವಾಗಿ ವಿನಿಯೋಗಿಸಬೇಕು. ಇದನ್ನು ಝಕಾತ್ ಎಂದು ಕರೆಯುತ್ತಾರೆ. ಇದಲ್ಲದೆ ಝದಾಕ ಹಾಗೊ ಇನ್ನಿತರ ಕೊಡುಗೆಗಳು ಕಡ್ಡಾಯವಲ್ಲ. ಸ್ವಪ್ರೇರಿತ. ಅದರ ಪ್ರಕಾರ ಇಸ್ಲಾಮ್ ಅನುಯಾಯಿಗಳು ತಮಗೆ ಜೀವನ ನಡೆಸಲು ನ್ಯಾಯಯುತವಾಗಿ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಸ್ವಪ್ರೇರಿತರಾಗಿ ಅದನ್ನು ಸಮುದಾಯದ ಧಾರ್ಮಿಕ, ಪವಿತ್ರ, ಹಾಗೂ ಸಾಮಾಜಿಕ ಕೆಲಸಗಳಿಗೆ ಬಳಸಲು ದತ್ತಿದಾನವಾಗಿ ಕೊಡಬಹುದು. ಈ ರೀತಿ ಪ್ರಧಾನವಾಗಿ ಮುಸ್ಲಿಮರು, ಕೆಲವೊಮ್ಮೆ ಮುಸ್ಲಿಮೇತರರು ಕೂಡ ತಮ್ಮ ಸ್ಥಿರ ಜಾಗೂ ಚರಾಸ್ತಿಗಳನ್ನು ಸಮುದಾಯದ ಒಳಿತಿಗೆ ಕೊಡುವ ದತ್ತಿಯನ್ನು ವಕ್ಫ್ ಎಂದು ಕರೆಯುತ್ತಾರೆ. ಇದು ಮುಸ್ಲಿಮ್ ಧಾರ್ಮಿಕ ಜೀವನದ ಭಾಗವೂ ಆಗಿದೆ. ಈ ವಕ್ಫ್ ಅನ್ನು ದೇವರ ಒಡೆತನದ ಹೆಸರಲ್ಲಿ ನೀಡಲಾಗಿರುತ್ತಾದ್ದರಿಂದ ಅದನ್ನು ಬಳಸಬಹುದೇ ವಿನಾ ಅದರ ಮೇಲೆ ಯಾರ ಒಡತನವೂ ಇರುವುದಿಲ್ಲ. ಒಡೆತನದ ವರ್ಗಾವಣೆಯೂ ಸಾಧ್ಯವಿಲ್ಲ. ಇವುಗಳ ನಿರ್ವಹಣೆಗೆ 1913 ರಲ್ಲಿ ವಕ್ಫ್ ಕಾಯಿದೆಯೂ ರೂಪುಗೊಂಡಿತು. ಮುಸ್ಲಿಮರ ದತ್ತಿಗಳನ್ನು ನಿರ್ವಹಿಸಲು ವಕ್ಫ್ ಬೋರ್ಡ್ ಕೂಡ ರೂಪುಗೊಂಡಿತು.
ಸ್ವಾತಂತ್ರ್ಯೋತ್ತರದಲ್ಲಿ ಜಾರಿಯಾದ ಸಂವಿಧಾನದಲ್ಲಿ ಆರ್ಟಿಕಲ್ 25, 26, 27 ಮತ್ತು 28 ಈ ದೇಶದ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಖಾತರಿ ಮಾಡುತ್ತದೆ. ಈ ದೇಶದ ಎಲ್ಲಾ ಜನರಿಗೆ ಅವರು ಬಯಸುವ ಧರ್ಮವನ್ನು ಆಚರಿಸುವ ಹಾಗೂ ಅಚರಿಸದೇ ಇರುವ ಹಕ್ಕುಗಳನ್ನು ಕೊಡುತ್ತದೆ. ಹಾಗೂ ಆರ್ಟಿಕಲ್ 26 ರ ಎ,ಬಿ,ಸಿ,ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಮತ್ತು ಅವನ್ನು ಕಾನೂನು ರೀತ್ಯ ನಿರ್ವಹಣೆ ಮಾಡುವ ಹಕ್ಕನ್ನು ಕೊಡುತ್ತದೆ.
ಇದರಂತೆ ಹಿಂದೂಗಳು, ಸಿಕ್ಕರು , ಕ್ರಿಸ್ಚಿಯನ್ನರು , ಮುಸ್ಲಿಮರು ಇತರ ಎಲ್ಲಾ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುವುದನ್ನು ಮುಂದುವರೆಸಿದರು. ಈ ಕಾಯಿದೆಯು ಸರ್ಕಾರ ಕಾನೂನಿನ ಪ್ರಕಾರ ಆಸ್ತಿ ನಿರ್ವಹಣೆಯ ವಿಷಯದಲ್ಲಿ ಕಾನೂನು ಪಾಲಿಸಲಾಗುತ್ತಿದೆಯೇ ಇಲ್ಲವೇ ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಸೆಕ್ಯುಲಾರ್ ಅಂಶಗಳಿಗೆ ಮಾತ್ರ ತನ್ನ ಮದ್ಯಪ್ರವೇಶವನ್ನು ಸೀಮಿತಗೊಳಿಸುತ್ತದೆ. ಈ ನಿಯಮದ ಭಾಗವಾಗಿಯೇ ಮುಸ್ಲಿಮ್ ಸಮುದಾಯವು ಧಾರ್ಮಿಕ, ಪವಿತ್ರ ಹಾಗೂ ದತ್ತಿ ದಾನಗಳ ಸಾಮಾಜಿಕ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯಿದೆಯನ್ನು ಕೇಂದ್ರ ಸರ್ಕಾರ 1955 ರಲ್ಲಿ ಪಾಸುಮಾಡಿತು. ಇದಕ್ಕೆ 1995 ರಲ್ಲಿ ಹಾಗೂ 2013 ರಲ್ಲಿ ದೊಡ್ಡ ತಿದ್ದುಪಡಿಗಳನ್ನು ಮಾಡಲಾಯಿತು.
ವಕ್ಫ್ ಕಾಯಿದೆಯ ಭಾಗವಾಗಿ ಪ್ರತಿಯೊಂದು ರಾಜ್ಯವು ಯಾವ ಯಾವ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಗುರುತಿಸಲು ಒಬ್ಬರು ಸರ್ವೇ ಕಮಿಷನರ್ ಅವರನ್ನು ಸರ್ಕಾರ ನೇಮಿಸಬೇಕು. ರಾಜ್ಯ ವಕ್ಫ್ ಬೋರ್ಡನ್ನು ಆಡಳಿತ ರೂಢ ಸರ್ಕಾರವೇ ನೇಮಿಸುತ್ತದೆ. ಇದಲ್ಲದೆ ಒಂದು ವಕ್ಫ್ ಟ್ರಿಬ್ಯುನಲ್ ಅನ್ನೂ ಕೂಡ ಈ ಕಾಯಿದೆಯ ಪ್ರಕಾರ ಸರ್ಕಾರ ಸ್ಥಾಪಿಸಬೇಕು. ಇದ್ ವಕ್ಫ್ ಆಸ್ತಿಯ ಘೋಣೆಯ ಬಗ್ಗೆ ತಗಾದೆ ಹುಟ್ಟಿದಾಗ ನ್ಯಾಯ ಪಂಚಾಯತಿಯನ್ನು ಮಾಡುತ್ತದೆ. ವಕ್ಫ್ ಟ್ರಿಬ್ಯುನಲ್ ಅನ್ನೂ ಕೂಡ ಸರ್ಕಾರವೇ ನೇಮಿಸುತ್ತದೆ. ಅದರ ಮುಖ್ಯಸ್ಥರು ಸೆಷನ್ ಮತ್ತು ಜಿಲಾ ನ್ಯಾಯಾಧೀಶರ ಸ್ಥಾಯಿಯ ನ್ಯಾಯಂಗದ ಅಧಿಕಾರಿ, ಹಾಗೂ ಸಹಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಮತ್ತು ಇಸ್ಲಂ ಪರಿಣಿತರು ಸದಸ್ಯರಾಗಿರುತ್ತಾರೆ.
ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ವಕ್ಫ್ ಬೋರ್ಡ್ ಮತ್ತು ವಕ್ಫ್ ಟ್ರಿಬ್ಯುನಲ್ ಎರಡನ್ನು ಸರ್ಕಾರ ನೇಮಿಸುತ್ತದೆ. ಎರಡನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಇದು ಮುಸ್ಲಿಂ ಸಮುದಾಯದ ಸ್ವತಂತ್ರ ನಿರ್ವಹಣೆಯಲ್ಲಿರುವ ಸಂಸ್ಥೆಗಳಲ್ಲ. ಇವನ್ನು ಬಿಜೆಪಿ ಸರ್ಕಾರವಿದ್ದಾಗ ಬಿಜೆಪಿ ನೇಮಿಸಿರುತ್ತದೆ. ಕಾಂಗ್ರೆಸ್ ಇದ್ದಾಗ ಕಾಂಗ್ರೆಸ್. ಹಾಗೇ ನೋಡಿದರೆ ಮುಸ್ಲಿಂ ಧಾರ್ಮಿಕ ದತ್ತಿ ಸಂಸ್ಥೆಗಳಿಗಿಂತ ಹಿಂದೂ ಹಾಗೂ ಸಿಖ್ ಮಠಗಳ ಮತ್ತು ದೇವಸ್ಥಾನಗಳ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ಸರ್ಕಾರದ ಇಷ್ಟೊಂದು ವ್ಯವಸ್ಥಿತ ಮಧ್ಯಪ್ರವೇಶವಿಲ್ಲ.
ಮೋದಿ ಮಸೂದೆಯ ದುರುದ್ದೇಶಗಳು
ಇದೀಗ ಕೋಮುವಾದಿ ಬಿಜೆಪಿ ಸರ್ಕಾರ ವಕ್ಫ್ ಕಾಯಿದೆಗೆ ಅಮೂಲಾಗ್ರ ತಿದ್ದುಪಡಿ ಮಾಡಲು ಹೊರಟಿದೆ. ಅದಕ್ಕಾಗಿ United Wakf -Management, Empowerment, Efficiency, Development-Act- UMEED- – ಮಸೂದೆಯನ್ನು ಜಾರಿಗೆ ತರುತ್ತಿದೆ. ವಾಸ್ತವದಲ್ಲಿ ಉರ್ದುವಿನಲ್ಲಿ ಉಮೀದ್ ಎಂದರೆ ನಿರೀಕ್ಷೆ ಭರವಸೆ ಎಂದು. ಆದರೆ ಇದು ಅವೆಲ್ಲವನ್ನು ನಾಶ ಮಾಡುವ ಕಾಯಿದೆಯಾಗಿದೆ. ಈವರೆಗೆ ವಕ್ಫ್ ಗೆ ಮಾಡಲಾದ ತಿದ್ದುಪಡಿಗಳು ಅದರಲ್ಲೂ 1995 ರಲ್ಲಿ ಮಾಡಲಾದ ತಿದ್ದುಪಡಿಗಳು ಪ್ರಾಧಾನವಾಗಿ ವಕ್ಫ್ ಆಸ್ತಿಗಳು ಮುಸ್ಲಿಮ್ ಸಮುದಾಯದ ಪರಿಣಮಕಾರಿ ಬಳಕೆಗೆ ಪೂರಕವಾಗಿತ್ತು ಮತ್ತು ಅದರ ನಿರ್ವಹಣೆಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರಗಳನ್ನು ನಿಯಂತ್ರಿಸುವ ಉದ್ದೇಶಗಳನ್ನು ಹೊಂದಿದ್ದವು. ಆದರೆ ಮೋದಿ ಸರ್ಕಾರದ ತಿದ್ದುಪಡಿಗಳ ಸಾರಾಂಶ ವಕ್ಫ್ ಆಸ್ತಿಗಳನ್ನು ಕಬ್ಜಾ ಮಾಡುವ ಮತ್ತು ಅಳಿದುಳಿದ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲೂ ಸಮುದಾಯದ ನಿಯಂತ್ರಣವನ್ನು ತಪ್ಪಿಸುವ ಉದ್ದೇಶವನ್ನೇ ಹೊಂದಿದೆ.
ಈ ಉದ್ದೇಶವನ್ನು ಮೋದಿ ಸರ್ಕಾರ ಪ್ರಧಾನವಾಗಿ:
- ವಕ್ಫ್ ಆಸ್ತಿ ಎಂದರೆ ಏನು? ಮತ್ತು ಯಾವುದಲ್ಲ?
- ವಕ್ಫ್ ಆಸ್ತಿ ತಗಾದೆಯ ನಿರ್ವಹಣೆ ಯ ಅಧಿಕಾರ
- ವಕ್ಸ್ ನಿರ್ವಹಣ ಮಂಡಳಿಯ ರಚನೆಯೆ ಮಾನದಂಡಗಳ
ಎಂಬ ಈ ಅಂಶಗಳಿಗೆ ದುರುದ್ದೇಶ ಪೂರ್ವಕವಾದ ತಿದ್ದುಪಡಿಗಳನ್ನು ತರುವ ಮೂಲಕ ಸಾಧಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.
UMEED – ಮಸೂದೆಯ ಕೋಮುವಾದಿ ಅಂಶಗಳು
1.ಬಹುಪಾಲು ವಕ್ಫ್ ಆಸ್ತಿಗಳಿಗೆ ನೂರಾರು ವರ್ಷಗಳ ಇತಿಹಾಸವಿದ್ದು ಅವುಗಳಲ್ಲಿ ಬಹುಪಾಲು ಮೌಖಿಕ ಒಡಂಬಡಿಕೆಯ ಮೂಲಕ ಮಾಡಿಕೊಳ್ಳಲಾಗಿದೆ. ಅದನ್ನು Wakf by User- ಬಳಕೆಯ ಪ್ರಮಾಣದ ಮೂಲಕ ವಕ್ಫ್ ಎಂದು ಘೋಷಿತವಾಗುವ ವಕ್ಫ್ ಆಸ್ತಿಗಳು. ಎಂದು ವರ್ಗೀಕರಿಸಲಾಗುತ್ತದೆ. ಆದರೆ ಮೋದಿ ಮಸೂದೆ ಪ್ರಸ್ತಾಪಿಸಿರುವ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಆರು ತಿಂಗಳೊಳಗೆ ಕಾಗದ ಪತ್ರ ತೋರಿಸಿ ದಾಖಲಾಗದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ.
2.ಈವರೆಗೆ ವಕ್ಫ್ ಆಸ್ತಿಯನ್ನು ನಿಗದಿ ಪಡಿಸಲು ಸರ್ಕಾರ ಒಬ್ಬ ಸ್ವಾಯತ್ತ ಸರ್ವೆಯರ್ ಅನ್ನು ನೇಮಿಸುತ್ತಿತ್ತು. ಸಾಮಾನ್ಯವಾಗಿ ಆ ವ್ಯಕ್ತಿಗೆ ಇಸ್ಲಾಮಿಕ್ ಕಾನೂನು ಮತ್ತು ವಕ್ಫ್ ವಿಷಯಗಳಲ್ಲಿ ಪರಿಣಿತಿ ಇರುತ್ತಿತ್ತು. ಆದರೆ ಈಗ ಮೋದಿ ಮಸೂದೆಯ ಪ್ರಕಾರ ಆ ಎಲ್ಲಾ ಜವಾಬ್ದಾರಿಗಳನ್ನು ಒಬ್ಬ ಜಿಲಾಧಿಕಾರಿಗೆ ನೀಡಲಾಗಿದೆ. ಅದರಲ್ಲೊ ಒಂದು ಆಸ್ತಿ ಸರ್ಕಾರಕ್ಕೆ ಸೇರಿದ್ದೋ ಅಥವಾ ವಕ್ಫ್ ಗೋ ಎಂದು ತೀರ್ಮಾನ ಮಾಡುವ ನ್ಯಾಯಿಕ ಅಧಿಕಾರವನ್ನು ಕೂಡ ಕಾರ್ಯಾಂಗದ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ತೀರ್ಮಾನವೇ ಅಂತಿಮ. ಅದನ್ನು ಹೈಕೋರ್ಟಿನಲ್ಲಿ ಮಾತ್ರ ಪ್ರಶ್ನಿಸಬಹುದು.
3.ವಕ್ಫ್ ತಗಾದೆಗಳನ್ನು ಇತ್ಯರ್ಥ ಮಾಡುವ ವಕ್ಫ್ ಟ್ರಿಬ್ಯುನಲಗೆ ನೇಮಕವಾಗುವ ಸರ್ಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಶರತ್ತನ್ನು ತೆಗೆದು ಹಾಕಲಾಗಿದೆ. ಮತ್ತೊಂದು ಕಡೆ ಹಿಂದೂ ಅಥವಾ ಸಿಕ್ ಮಠ ಅಥವಾ ದೇವಸ್ಥಾನಗಳ ಅಪ್ರಾಧಿಕಾರದಲ್ಲಿ ಮಾತ್ರ ಉಸ್ತುವಾರಿಗೆ ಅಥವಾ ನಿರ್ವಹಣೆಗೆ ನೇಮಕವಾಗುವ ಸರ್ಕಾರಿ ಅಧಿಕಾರಿಯೂ ಆಯಾ ಧರ್ಮೀಯರೇ ಅಗಿರಬೇಕೆಂಬ ಕಾನೂನನ್ನು ಮಾಡಲಾಗಿದೆ.
4.. ಅಲ್ಲದೆ ವಕ್ಫ್ ಬೋರ್ಡಿನಲ್ಲಿ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಿಸಲಾಗಿದೆ.
ಆದರೆ ಈ ಬಗೆಯ ಶರತ್ತು ಹಿಂದೂ ಧಾರ್ಮಿಕ ಅಥವಾ ಸಿಖ್ ಅಥವಾ ಕ್ರಿಸ್ಚಿಯನ್ ಸಂಸ್ಥೆಗಳಿಗೆ ಇಲ್ಲ. ಹೀಗಾಗಿ ಇದರ ಹಿಂದಿನ ದುರುದ್ದೇಶ ಸ್ಪಷ್ಟ. ಹೀಗಾಗಿ 2024 ರ ಆಗಸ್ಟ್ 8 ರಂದು ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಬಿಜೆಪಿಯ ಸಹಭಾಗಿ ಪಕ್ಷಗಳಾದ ಜೆಡಿಯು ಮತ್ತು ತೆಲುಗು ದೇಶಂ ಪಕ್ಷಗಳೂ ಸಹ ಅದನ್ನು ಮುಕ್ತವಾಗಿ ಬೆಂಬಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಮಸೂದೆಯನ್ನು ಇನ್ನಷ್ಟು ಪರಿಶೀಲನೆಯ ಹೆಸರಿನಲ್ಲಿ ಜಂಟಿ ಸಂಸದೀಯ ಸಮಿತಿಗೆ ವಹಿಸಲಾಯಿತು.
ಜೆಪಿಸಿ ಎಂಬ ಪ್ರಹಸನ
ಜೆಪಿಸಿಯ ರಚನೆಯೇ ಮೊದಲಿಂದಲೂ ನಾಟಕ ಮತ್ತು ದುರುದ್ದೇಶಪೂರಿತವಾಗಿತ್ತು. ರಿವಾಜಿನಂತೆ ರಚಿತವಾದ ಜೆಪಿಸಿಯಲ್ಲಿ ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸದಸ್ಯರಿದ್ದರು. ಮತ್ತು ಅದರಲ್ಲಿ ಆಳುವ ಪಕ್ಷದ ಉಗ್ರ ಹಿಂದೂತ್ವವಾದಿ ಹಿಂದೂ ಸದಸ್ಯರೇ ಹೆಚ್ಚಿದ್ದರು. ಜೆಪಿಸಿಯ ಅಧ್ಯಕ್ಷರಾಗಿದ್ದ ಬಿಜೆಪಿಯ ಜಗದಂಬಿಕಾ ಪಾಲ್ ಅತ್ಯಂತ ಏಕಪಕ್ಷೀಯವಾಗಿ ಸಮಿತಿಯ ನಡಾವಳಿಗಳನ್ನು ನಡೆಸಿದರು ಮತ್ತು ವಿರೋಧ ಪಕ್ಷಗಳ ಅಹವಾಲುಗಳಿಗೆ ಮತ್ತು ಸದಸ್ಯರ ಅಭಿಪ್ರಾಯಗಳಿಗೆ ಯಾವ ಕಿಮ್ಮತ್ತನ್ನೂ ಕೊಡಲಿಲ್ಲ ಎಂದು ಉದ್ದಕ್ಕೂ ವಿರೋಧ ಪಕ್ಷಗಳು ಆಕ್ಷೇಪಾಣೆಗಳನ್ನು ಎತ್ತುತ್ತಾ ಬಂದಿದ್ದಲ್ಲದೆ ಲೋಕಸಭಾ ಅಧ್ಯಕ್ಷರಿಗೂ ದೂರು ಕೊಟ್ಟಿದ್ದರು.
ಇದರ ನಡುವೆಯೂ ಸಮಿತಿಯು ಅನಿವಾರ್ಯವಾಗಿ ಕರ್ನಾಟಕವನ್ನೂ ಒಳಗೊಂಡಂತೆ 25 ರಾಜ್ಯಗಳ ವಕ್ಫ್ಬೋರ್ಡ್ ಗಳ ಜೊತೆ ಮತ್ತು ಅತ್ಯಂತ ಅರೆಮನಸ್ಸಿನಿಂದ ಹಲವಾರು ಪರಿಣಿತರು ಮತ್ತು ಇಸ್ಲಾಮಿಕ್ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸಿದ ನಾಟಕ ಮಾಡಿತು. ವರದಿಯೇ ಹೇಳುವಂತೆ 98 ಲಕ್ಷದಷ್ಜುಲಿಖಿತ ಮನವಿಗಳು ಸಮಿತಿಗೆ ಹರಿದು ಬಂದಿದ್ದವು. ಅದರಲ್ಲಿ ಬಹುಪಾಲು ಬಿಜೆಪಿಯ ದುರುದ್ದೇಶಪೂರಿತ ತಿದ್ದುಪಡಿಗಳನ್ನು ವಿರೋಧಿಸುವುವೇ ಆಗಿತ್ತು.
ಈ ಎಲ್ಲಾ ಪ್ರಹಸನಗಳು ಆದ ನಂತರ ಸಮಿತಿಯು ಜೆಪಿಸಿ ಅಧ್ಯಕ್ಷರಾದ ಪಾಲ್ ಅವರು 2025 ರ ಜನವರಿ 29 ರಂದು ತನ್ನ 38 ನೇ ಸಭೆಯಲ್ಲಿ ಬಹುಮತ ಓಟಿನೊಂದಿಗೆ 655 ಪುಟಗಳ ವರದಿಯನ್ನು ಅನುಮೋದಿಸಿತು,. ಅದಕ್ಕೆ ವಿರೋಧ ಪಕ್ಷಗಳು ಸಂಜೆಯೊಳಗೆ ತಮ್ಮ ಆಕ್ಶೇಪಣೆಗಳನ್ನು ದಾಖಲಿಸಬೇಕೆಂದು ಕಾಲಾವಧಿ ನಿಗದಿ ಮಾಡಿದ್ದರೆಂದು ವಿರೋಧ ಪಕ್ಷಗಳು ದೂರಿದವು. ಈ ಎಲ್ಲಾ ಕಾರಾಣಗಳಿಂದ ಅತ್ಯಂತ ಅವಿಶ್ವಾಸಪಾತ್ರವಾದ ವರದಿಯನ್ನು ಜನವರಿ 29 ಕ್ಕೆ ಲೋಕಸಭಾ ಅಧ್ಯಕ್ಷರಿಗೆ ಜೆಪಿಸಿ ಅಧ್ಯಕ್ಷರು ಸಲ್ಲಿಸಿದರು.
ಅದನ್ನು ಫ಼ೆಬ್ರವರಿ 13 ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅತ್ಯಂತ ಬೇಜವಬ್ದಾರಿಯಿಂದ ಸರ್ಕಾರವು ಮಂಡಿಸಿತು. ಮಂಡಿತವಾದ ವರದಿಯಲ್ಲಿ ವಿರೋಧ ಪಕ್ಷಗಳು ಸಲ್ಲಿಸಿದ್ದ ಭಿನಾಭಿಪ್ರಾಯಗಳ ಟಿಪ್ಪಣಿಯೇ ಇಲ್ಲವೆಂದು ಮತ್ತೆ ವಿರೋಧ ಪಕ್ಷಗಳು ಸಮಿತಿಯ ಸರ್ವಾಧಿಕಾರಿ ಪ್ರವೃತ್ತಿಯನ್ನು ಬಯಲಿಗೆಳೆದರು. ಕೊನೆಗೆ ಅನಿವಾರ್ಯವಾಗಿ ಅದನ್ನು ಒಳಗೊಂಡ ಸಮಿತಿಯ ವರದಿಯನ್ನು ಅಧಿಕೃತ ವೆಬ್ ಸೈಟಿನಲ್ಲಿ ಬಿಡುಗಡೆ ಮಾಡಲಾಯಿತು.
ಜೆಪಿಸಿ ವರದಿಯ ಪೂರ್ಣ ಪಠ್ಯವನ್ನು ಆಸಕ್ತರು ಈ ವಿಳಾಸದಲ್ಲಿ ಓದಬಹುದು: https://sansad.in/getFile/lsscommittee/Joint%20Committee%20on%20the%20Waqf%20(Amendment)%20Bill,%202024/18_Joint_Committee_on_the_Waqf_(Amendment)_Bill_2024_1.pdf?source=loksabhadocs
ಜೆಪಿಸಿಯ ಅಧ್ಯಕ್ಷರು ವಿರೋಧ ಪಕ್ಷಗಳು ಪ್ರತಿಯೊಂದು ಕಂಡಿಕೆಗಳ ಬಗ್ಗೆಯೂ ಕೊಟ್ಟಿದ್ದ ಎಲ್ಲಾ ಸಲಹೆಗಳನ್ನು ತಿರಸ್ಕರಿಸಿದ್ದಾರೆ. ಮತ್ತು ವರದಿಯು ಅಳವಡಿಸಿಕೊಂಡಿರುವ ಎಲ್ಲ ತಿದ್ದುಪಡಿಗಳು ಬಿಜೆಪಿ ಸದಸ್ಯರುಗಳು ಕೊಟ್ಟ ತಿದ್ದುಪಡಿಗಳೆ ಆಗಿವೆ. ಹೀಗಾಗಿ ಈ ವಕ್ಸ್ ಮಸೂದೆ ಸರ್ಕಾರ ಹೋದ ವರ್ಷ ಮಂಡಿಸಿದ ಮಸೂದೆಗಿಂತಲೂ ಇನ್ನು ಹೆಚ್ಚು ಕೋಮುವಾದಿಯಾಗಿ ಬದಲಾಗಿದೆ.
ವಕ್ಫ್ ತಿದ್ದುಪಡಿಯನ್ನು ಮತ್ತಷ್ಟು ಕೋಮುವಾದೀಕರಿಸಿದ ಜೆಪಿಸಿ
ಉಗ್ರ ಹಿಂದೂತ್ವವಾದಿ ಸದಸ್ಯರ್ ಹೆಚ್ಚಿದ್ದ ಸಮಿತಿಯೊಂದು ಮುಸ್ಲಿಮರ ದಾರ್ಮಿಕ ವ್ಯವಹಾರ ನಿರ್ವಹಣೆಯ ಬಗ್ಗೆ ಯಾವ ಬಗೆಯ ವಿನಾಶಕಾರಿ ತಿದ್ದುಪಡಿಗಳನ್ನು ಮಾಡಬಹುದೋ ಆ ಬಗೆಯ ಎಲ್ಲಾ ತಿದ್ದುಪಡಿಗಳನ್ನು ಈ ಸಮಿತಿ ಮಾಡಿದೆ.
ಅದರ ಕೆಲವು ಉದಾಹರಣೆಗಳು:
1.ವಕ್ಫ್ ದತ್ತಿಯನ್ನು ನೀಡಲಿರುವ ಯಾವುದೇ ವ್ಯಕ್ತಿ ಕನಿಷ್ಟ ಐದು ವರ್ಷಗಳ ಕಾಲ ತಾನು ಇಸ್ಲಾಮನ್ನು ಅನುಸರಿಸುತ್ತಿದ್ದರೆಂದು ಸಾಬೀತುಪಡಿಸಬೇಕು. ವಕ್ಫ್ ಮಾಡಲಿರುವ ಆಸ್ತಿ ಅವರ ಒಡೆತನದಲ್ಲಿದ್ದು ಯಾವುದೇ ತಗಾದೆಗಳಿಲ್ಲವೆಂದು ಸಾಬೀತು ಮಾಡಬೇಕು. (ಪುಟ 409, ಪ್ಯಾರ. 3.7.2) ಇವೆಲ್ಲವನ್ನು ಅವರು ಕೋಮುವಾದಿ ಸರ್ಕಾರದ ಅಧಿಕಾರಿಗಳ ಮುಂದೆ ಸಾಬೀತು ಮಾಡಬೇಕಾಗುವುದರಿಂದ ವಕ್ಫ್ ಅನ್ನು ಘೋಷುಸುವುದೂ ಇನ್ನು ಮುಂದೆ ಕಷ್ತಕರವಾಗಲಿದೆ.
2.ದಾಖಲೆಗಳಿಲ್ಲದ ಮೌಕಿಕ ಒಡಂಬಡಿಕೆಯ ಮೂಲಕ ವಕ್ಫ್ ಎಂದು ಘೋಷಿತವಾದ ವಕ್ಫ್ ಆಸ್ತಿಗಳು ಸರ್ಕಾರದ ಸುಫ಼ರ್ದಿನಲ್ಲಿದ್ದರೆ ಅಥವಾ ತಗಾದೆಯಲ್ಲಿದ್ದರೆ ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. (ಪುಟ 410, ಪ್ಯಾರ. 3.7.3) ಅಂದರೆ ಈ ಮೂಲಕ ಸರ್ಕಾರವು ಒತ್ತುವರಿ ಮಾಡಿಕೊಂಡಿರುವ ಎಲ್ಲಾ ವಕ್ಫ್ ಆಸ್ತಿಗಳು ಸರ್ಕಾರದ ವಶವಾಗಲಿವೆ.
3.ಎಲ್ಲಾ ವಕ್ಫ್ ಆಸ್ತಿಗಳನ್ನು ಆರು ತಿಂಗಳೊಳಗೆ ದಿಜಿಟಲ್ ದಾಖಲೆ ಮಾಡಬೇಕು. ಇಲ್ಲದಿದ್ದರೆ ಅವುಗಳ ವಕ್ಫ್ ಸ್ಥಾನಮಾನ ಇರುವುದಿಲ್ಲ. ಸಬಂಧಪಟ್ಟ ಮುತವಲಿ ಸಕಾರಣಗಳನ್ನು ಕೊಟ್ಟರೆ ಮತ್ತು ಅದು ವಕ್ಫ್ ಟ್ರಿಬ್ಯುನಲ್ ಗೆ ಸಮ್ಮತವಾದರೆ ಮಾತ್ರ ಆ ಅವಧಿಯನ್ನು ಒಂದಷ್ಟು ಕಾಲ ವಿಸ್ತರಿಸಬಹುದು.
4.ವಕ್ಫ್ ಆಸ್ತಿಯನ್ನು ಸರ್ಕಾರ ಒತ್ತುವರಿ ಮಾಡಿದ್ದರೆ ಆ ತಗಾದೆಯನ್ನು ಸರ್ಕಾರವೇ ನೇಮಿಸುವ ಜಿಲ್ಲಾಧಿಕಾರಿಗಿಂತ ಮೇಲ್ಪಟ್ಟ ನಿಯೋಜಿತ ಅಧಿಕಾರಿ ಅದರ ಬಗ್ಗೆ ವಿಚಾರಣೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು (ಪು. 412 )
ಮೊದಲು ಜಿಲ್ಲಾಧಿಕಾರಿಗೆ ಈ ಅಧಿಕಾರ ಕೊಡಲಾಗಿತ್ತು. ಜಿಲ್ಲಾಧಿಕಾರಿ ಸರ್ಕಾರದ ಅಧಿಕಾರಿಯಾಗಿದ್ದು ಸರ್ಕಾರದ ಒತ್ತುವರಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸಹಜ ನ್ಯಾಯಕ್ಕೆ ವಿರೋಧ ಎಂಬುದು ಆಕ್ಷೇಪಾಣೆಯ ಸಾರವಾಗಿತ್ತು. ಜೆಪಿಸಿಯು ಅದು ಸರ್ಕಾರವೇ “ನಿಯೋಜಿಸಿದ ಅಧಿಕಾರಿ” ಯಾಗಿರಬೇಕೆಂದು ಇನ್ನಷ್ಟು ಧೃಢವಾಗಿ ಅನ್ಯಾಯದ ಕಲಮನ್ನು ಸೇರಿಸಿದೆ.
5.ವಕ್ಫ್ ಆಸ್ತಿಗಳ ಸರ್ವೇಯನ್ನು ಸ್ವತಂತ್ರ ಸರ್ವೇ ಕಮಿಷನರ್ ಬದಲಿಗೆ ಜಿಲ್ಲಾಧಿಕಾರಿಯೇ ಮಾಡುವುದನ್ನು ಈ ಬಿಜೆಪಿ ಬಹುಸಂಖ್ಯಾತ ಸಮಿತಿ ಬಹುಮತದೊಂದಿಗೆ ಎತ್ತಿಹಿಡಿದಿದೆ.
6.ಈ ಮೊದಲಿನ ಕರಡು ಮಸೂದೆಯಲ್ಲಿ ವಕ್ಫ್ ಸೆಂಟ್ರಲ್ ಕೌನ್ಸಿಲ್ ನಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕೆಂಬ ಕೋಮುವಾದಿ ಪ್ರಸ್ತಾಪವಿತ್ತು. ಈಗ ಈ ಜೆಪಿಸಿಯು ಕೌನ್ಸಿಲ್ನ ಅಧಿಕಾರಿ ಗಣವನ್ನು ಬಿಟ್ಟು ಇಬ್ಬರು ಸದಸ್ಯರು ಮುಸ್ಲಿಮೇತರರಾಗಿರಬೇಕೆಂದು ಪ್ರಸ್ತಾಪಿಸಿದೆ. ಅಂದರೆ ಇದರ ಅರ್ಥ ಕರಡು ಮಸೂದೆಯಲ್ಲಿ ಪ್ರಸ್ತಾಪಿತವಾಗಿದ್ದ ಸಂಖ್ಯೆಗಿಂತ ಹೆಚ್ಚಿನ ಮುಸ್ಲಿಮೇತರರು ವಕ್ಫ್ ಕೌನ್ಸಿಲ್ ಸದಸ್ಯರಾಗುತ್ತಾರೆ. (ಪು.415 , ಪ್ಯಾರಾ 9.7)
7.ಇದೇ ಬಗೆಯ ತಿದ್ದುಪಡಿಗಳನ್ನು ರಾಜ್ಯ ವಕ್ಫ್ ಬೋರ್ಡುಗಳಲ್ಲೂ ಮಾಡಬೇಕೆಂದು ಜೆಪಿಸಿ ಸಲಾಹಿಸಿದೆ (ಪು.416, ಪ್ಯಾರಾ 12.7.2)
8.ವಕ್ಫ್ ವ್ಯವಹಾರದ ನಿರ್ವಹಣೆಗೆ ನೇಮಕವಾಗುವ CEO ಜವಾಬ್ದಾರಿಯ ಸರ್ಕಾರಿ ಅಧಿಕಾರಿ ಮುಸ್ಲಿಮೇತರರೂ ಆಗಿರಬಹುದೆಂಬ ತಿದ್ದುಪಡಿಯನ್ನು ಸಮಿತಿ ಪ್ರಸ್ತಾಪಿಸಿದೆ (ಪು. 417 , ಪ್ಯಾರಾ 15.7 )
9.ಸಚ್ಚಾರಿತ್ರ್ಯ ಉಳ್ಳವರು ಮಾತ್ರ ಮುತಾವಲಿಗಳಾಬೇಕೆಂಬ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ. ಇದು ಯಾವುದೇ ಇತರ ಧಾರ್ಮಿಕ ಸಂಸ್ಥೆಗಳ್ ಕಾಯಿದೆಯಲ್ಲಿಲ್ಲ. ಮೇಲಾಗಿ ಸಚ್ಚಾರಿತ್ಯ್ರ್ಯ ಎಂದರೆನು?? ಅದನ್ನು ತೀರ್ಮಾನಿಸುವರು ಈ ಸರ್ಕಾರವೇ ?(ಪು. 421 , ಪ್ಯಾರಾ 24.7 )
ಇನ್ನುಳಿದಂತೆ ಮೂಲ ಕರಡಿನಲ್ಲಿದ್ದ ವಕ್ಫ್ ನಿರ್ವಹಣೆಯಲ್ಲಿ ಸರ್ಕಾರ ಮೂಗು ತೂರಿಸುವ ಮತ್ತು ಕೋಮುವಾದೀಕರಿಸುವ ಎಲ್ಲವನ್ನು ಜೆಪಿಸಿ ಯಥಾವತ್ ಒಪ್ಪಿಕೊಂಡಿದೆ.
ಲೋಕಸಭಾ ಅಧ್ಯಕ್ಷರು ವರದಿಯನ್ನು ಸ್ವೀಕರಿಸಿದ್ದು ಮಾರ್ಚ್ 10 ರ ನಂತರ ಸೇರಲಿರುವ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ನಾಟಕ ನಡೆಯಬಹುದು. ಆದರೆ ಬಜೆಟ್ಟಿನಲ್ಲಿ ಆಂಧ್ರಕ್ಕೆ ಹಾಗೂ ಬಿಹಾರಕ್ಕೆ ಉದಾರ ಅನುದಾನ ನೀಡಿರುವುದರಿಂದ ಮತ್ತು ಬಿಹಾರದ ಚುನಾವಣೆಯಲ್ಲಿ ಜೆಡಿಯು ಗೆ ಬಿಜೆಪಿಯ ಸಹಾರ ಬೇಕಿರುವುದರಿಂದ ಲೋಕಸಭೆಯಲ್ಲಿ ಇದು ಅಂಗೀಕಾರವಾಗುವ ಸೂಚನಗಳಿವೆ. ರಾಜ್ಯಸಭೆಯಲ್ಲಿ ವಿರುದ್ಧವಿರುವ ಪಕ್ಷಗಳಿಗೆ ಅಮಿಷ ಹಾಗೂ ಭಯೋತ್ಪಾದನೆಯೊಡ್ಡಿ ಮತದ ದಿನ ಅವರ ಗೈರುಹಾಜರಿಯನ್ನು ಖಾತರಿಸಿಕೊಂಡು ಮಸೂದೆ ಪಾಸು ಮಾಡಿಸಿಕೊಳ್ಳುವುದು ಬಿಜೆಪಿ ಅನುಸರಿಸುತ್ತಾ ಬಂದಿರುವ ಮಾರ್ಗ. ಅದನ್ನೇ ಈ ಬಾರಿಯೂ ಅನುಸರಿಸಬಹುದು.
ಬೀದಿ ಸಂಸತ್ತು ಮಾತ್ರ ಕೋಮುವಾದಿ ವಕ್ಫ್ ಕಾಯಿದೆ ಸೊಲಿಸುವ ಮಾರ್ಗ
ಈವರೆಗೆ ವಕ್ಫ್ ಕಾಯಿದೆಗಳಲ್ಲಿ ತಿದ್ದುಪಡಿ ಆಗುತ್ತಿದ್ದದ್ದು ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಮತ್ತು ಒತ್ತುವರಿಯಾದ ವಕ್ಫ್ ಜಮೀನನ್ನು ಆಸ್ತಿಗಳನ್ನು ಪಡೆಯಲು. ಆದರೆ ಮೋದಿ ಸರ್ಕಾರ ತರುತ್ತಿರುವ ತಿದ್ದುಪಡಿ ವಕ್ಫ್ ಆಸ್ತಿಗಳನ್ನು ಸರ್ಕಾರ ಒತ್ತುವರಿ ಮಾಡಲು ಮತ್ತು ವಕ್ಫಿನ ಇಸ್ಲಾಮಿಕ್ ಧಾರ್ಮಿಕತೆಯನ್ನು ನಾಶಮಾಡಲು. ಹಾಗೆ ನೋಡಿದರೆ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರಿ ಹಿಡಿತದಿಂದ ವಿಮೋಚನೆ ಮಾಡಬೇಕೆಂದು ಉಗ್ರವಾಗಿ ಆಗ್ರಹಿಸುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ ಮುಸ್ಲಿಂ ವಕ್ಫ್ ವಿಷಯದಲ್ಲಿ ಸರ್ಕಾರಿ ಹಿಡಿತವನ್ನ್ ಹೆಚ್ಚಿಸುವ ಮತ್ತು ಮುಸ್ಲಿಂ ಆಸ್ತಿಗಳನ್ನು ರಾಷ್ಟ್ರೀಕರಿಸುವ ಹಿಂದೂತ್ವವಾದಿ ದುರುದ್ದೇಶವನ್ನು ಹೊಂದಿದೆ.
ಇದು ಮುಸ್ಲಿಮರ ಅಸ್ಥಿತ್ವ, ಅಸ್ಮಿತೆ, ಬದುಕು ಮತ್ತು ನಾಗರಿಕತ್ವವನ್ನೇ ನಾಶ ಮಾಡುವ ಉಗ್ರ ಹಿಂದೊತ್ವ ಯೋಜನೆಯ ಭಾಗವಾಗಿದೆ. ಅದ್ದರಿಂದಲೇ ಬಿಜೆಪಿಯ ವಕ್ಫ್ ವಿರೋಧ ಮುಸ್ಲಿಮರನ್ನು ಕಂಗಾಲು ಮಾಡುತ್ತಿದೆ. ಈ ಹಿಂದೂತ್ವ ದಾಳಿ ಸಾರದಲ್ಲಿ ಸಂವಿಧಾನದಲ್ಲಿ ನೀಡಲಾಗಿರುವ ಧಾರ್ಮಿಕ ಹಕ್ಕಿನ ಮೇಲೆ ದಾಳಿ . ಹೀಗಾಗಿ ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ಈ ದಾಳಿ ದಲಿತರ, ತಳಸಮುದಾಯಗಳ , ಮಹಿಳೆಯರ ಬದುಕು ಮತ್ತು ಸ್ವಾತಂತ್ರ್ಯುಗಳ ಮೇಲೆ ಪ್ರಜಾತಾಂತ್ರಿಕ ಹಕ್ಕುಗಳ ಮೇಲೆ ನಡೆಸುತ್ತಿರುವ ದಾಳಿಯ ಮುಂದುವರಿಕೆಯೇ ಆಗಿದೆ. ಆದ್ದರಿಂದ ಬಿಜೆಪಿಯ ಈ ಕೋಮುವಾದಿ ವಕ್ಲ್ಫ್ ಮಸೂದೆ ಕೇವಲ ಮುಸ್ಲಿಮರ ಪ್ರಶ್ನೆಯಲ್ಲ. ಅದನ್ನು ಕೋಮುವಾದಿಗಳ ಬಾಹುಳ್ಯವಿರುವ ದೆಹಲಿ ಸಂಸತ್ತಿನಲ್ಲಿ ಸೋಲಿಸಲು ಆಗುವುದಿಲ್ಲ. ಅದನ್ನು “ನಾವು ಈ ದೇಶದ ಜನ” ಬೀದಿ ಸಂಸತ್ತಿನಲ್ಲಿ ಸೋಲಿಸಬೇಕು. ಸರ್ವ ಧರ್ಮೀಯರ ಸೌಹಾರ್ದ ಹಾಗೂ ಘನತೆಯ ಬದುಕನ್ನು ಕಾಪಾಡಿಕೊಳ್ಳಬೇಕು.
- ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply