ಭಾರತವನ್ನು ಒಂದು ಆಧುನಿಕ ಸೆಕ್ಯುಲಾರ್, ಸಮಾಜವಾದಿ ಗಣರಾಜ್ಯವನ್ನಾಗಿ ಕಟ್ಟಿಕೊಳ್ಳಬೇಕೆಂಬ ಆಶಯಗಳನ್ನು ಸ್ಪಷ್ಟಪಡಿಸುವ ಸಂವಿಧಾನವಿದ್ದರೂ, ನರೇಂದ್ರ ಮೋದಿ ಪ್ರಧಾನಿಯಾಗಲು ಮತ್ತು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯವಾಯಿತು? ವರ್ಷಗಳು ಉರುಳಿತ್ತಿದ್ದಂತೆ ಈ ಸಂವಿಧಾನವನ್ನು ಮತ್ತು ಸಮಾನತೆಯನ್ನು ವಿರೋಧಿಸುವ, ಮನುವಾದಿ ಹಿಂದೂರಾಷ್ಟ್ರವನ್ನು ಕಟ್ಟಬಯಸುವ ಜನರಿಗೆ ಮೊದಲಿಗಿಂತ ಹೆಚ್ಚೆಚ್ಚು ಜನರು ಏಕೆ ಬೆಂಬಲಿಸುತ್ತಿದ್ದಾರೆ? ಇನ್ನಿತ್ಯಾದಿ ಪ್ರಶ್ನೆಗಳು ಸಂವಿಧಾನಕ್ಕೆ 75 ವರ್ಷ ತುಂಬುವ ಹೊತ್ತಿನಲ್ಲಿ ಪ್ರಜ್ನಾವಂತರನ್ನು, ನೆಮ್ಮದಿಯ ನಾಳೆಗಳನ್ನು ಕನಸಬಯಸುವರನ್ನೂ ಕಾಡಬೇಕಾಗಿದೆ..
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸೆಕ್ಯುಲಾರ್-ಸಮಾಜವಾದಿ ಧಾರೆಗೆ ಪರ್ಯಾಯವಾಗಿ ಬ್ರಿಟಿಷರು ತೆರಳಿದ ನಂತರ ಭಾರತವನ್ನು ಒಂದು ಮನುವಾದಿ ಹಿಂದೂ ಬ್ರಾಹ್ಮಣಶಾಹಿ ರಾಷ್ಟ್ರವನ್ನಾಗಿ ನಿರ್ಮಿಸಬೇಕೆಂಬ ಆಶಯವನ್ನು ಹೊಂದಿದ್ದ ಹಿಂದೂ ಮಹಾಸಭ ಮತ್ತು ಆರೆಸ್ಸೆಸ್ ನಂತ ಹಿಂದೂ ರಾಷ್ತ್ರೀಯತೆಯನ್ನು ಪ್ರತಿಪಾದಿಸುವ ಧಾರೆಗಳು ಸಕ್ರಿಯವಾಗಿದ್ದವು. ಹಾಗಿದ್ದಲ್ಲಿ ಭಾರತದ ಸಂವಿಧಾನವು ಸೆಕ್ಯುಲಾರ್-ಸಮಾಜವಾದಿ ಆಶಯವನ್ನು ಹೊಂದಿದ್ದರೂ ಸಂಪೂರ್ಣವಾಗಿ ಈ ಹಿಂದೂ ರಾಷ್ಟ್ರೀಯ ಧಾರೆಯನ್ನು ಏಕೆ ಮಣಿಸಲಾಗಲಿಲ್ಲ? ಹಿಂದೂತ್ವವಾದದ ವಿಜಯದ ಬೇರುಗಳು ನಮ್ಮ ಸಂವಿಧಾನದಲ್ಲೇ ಉಳಿದುಕೊಂಡು ಬಿಟ್ಟಿತ್ತೇ?
ಭಾರತ ರಾಷ್ಟ್ರೀಯತೆಯೊಳಗಿನ ಹಿಂದೂ ರಾಷ್ಟ್ರೀಯತೆ?
ಇತಿಹಾಸದ ನಿಷ್ಪಕ್ಷಪಾತಿ ಅಧ್ಯಯನವನ್ನು ಮಾಡಿದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನೇತೃತ್ವದ ಧಾರೆಯ ನಾಯಕರಾದ ಬಾಲಗಂಗಾಧರನಾಥ ತಿಲಕರು, ಸರ್ದಾರ್ ವಲ್ಲಭ ಭಾಯಿ ಪಟೇಲರು ರಾಜಕೀಯವಾಗಿ ಕಾಂಗ್ರೆಸ್ವಾದಿಗಳಾಗಿದ್ದರೂ ಸಾಮಾಜಿಕವಾಗಿ ಅತ್ಯಂತ ಪ್ರತಿಗಾಮಿ ಹಿಂದೂ ಬ್ರಾಹ್ಮಣಶಾಹಿ ರಾಷ್ಟ್ರೀಯತೆಯ ಮೌಲ್ಯಗಳನ್ನೂ ಹೊಂದಿದ್ದರೆಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ಸಿನ ಮತ್ತೊಬ್ಬ ಹಿರಿಯ ನಾಯಕ ಮದನ ಮೋಹನ ಮಾಳವೀಯರು ಹಿಂದೂ ಮಹಾಸಭದ ಸಂಸ್ಥಾಪಕ ನಾಯಕರೂ ಆಗಿದ್ದರು. 1924 ರ ಬೆಳಗಾವಿ ಅಧಿವೇಶನದಲ್ಲಿ ಗಾಂಧಿ ಅಧ್ಯಕ್ಷತೆ ವಹಿಸಿದ್ದರೆ, ಅದೇ ಸಮ್ಮೇಳನದ ಭಾಗವಾಗಿ ಅದೇ ಪೆಂಡಾಲಿನಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನಕ್ಕೆ ಅಧ್ಯಕ್ಷತೆ ವಹಿಸಿದ್ದವರು ಮಾಳವೀಯರು.
ಹಿಂದೂತ್ವವಾದಿ ಸಾವರ್ಕರ್ ಅವರು ತಿಲಕರ ಪಟ್ಟ ಶಿಷ್ಯ ಮಾತ್ರವಲ್ಲದೆ, ಅವರನ್ನು ಇಂಗ್ಲೆಂಡಿಗೆ ಕಳಿಸುವುದೇ ತಿಲಕರು. ಅದೇರೀತಿ ಆರೆಸ್ಸೆಸ್ನ ಸಂಸ್ಥಾಪಕ ಹೆಡ್ಗೇವಾರರು ಕೂಡ ತಿಲಕರ ಕಟ್ಟಾ ಅನುಯಾಯಿಗಳಾಗಿದ್ದರು. ಸಂವಿಧಾನ ರಚನೆಯಲ್ಲಿ ಮತ್ತು ಕಾಂಗ್ರೆಸ್ಸಿನಲ್ಲಿ ನೆಹರೂ ಅಷ್ಟೆ ಮುಖ್ಯ ಪಾತ್ರ ವಹಿಸಿದ್ದ ಸರ್ದಾರ್ ಪಟೇಲರಂತೂ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆರೆಸ್ಸೆಸ್ ಬಗ್ಗೆ ಸಹಾನುಭೂತಿ ಇಟ್ಟುಕೊಂಡಿದ್ದರು. ಗಾಂಧಿ ಹತ್ಯೆಯ ನಂತರ ಆರೆಸ್ಸೆಸ್ಸನ್ನು ನಿಶೇಧಿಸಿದರೂ ಅದು ಒಂದು ವರ್ಷದ ಒಳಗೆ ತೆರವು ಮಾಡಲು ಪ್ರಮುಖ ಪಾತ್ರವಹಿಸಿದ್ದು ಕೂಡ ಪಟೇಲರೇ.
ಅಷ್ಟು ಮಾತ್ರವಲ್ಲದೆ, ಗಾಂಧಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಸಾಮೂಹಿಕ ಸ್ವರೂಪ ನೀಡಲು ಆಯ್ದುಕೊಂಡ ಹಿಂದೂ ಧಾರ್ಮಿಕ ಅಭಿವ್ಯಕ್ತಿ ಮತ್ತು ಲಾಂಚನಗಳು ಕೂಡ ಬಹುಧರ್ಮೀಯ ಭಾರತದಲ್ಲಿ ಬ್ರಾಹ್ಮಣೀಯ ಹಿಂದೂ ಧಾರ್ಮಿಕತೆಯನ್ನು ಪ್ರಧಾನ ಮತ್ತು ಅಧಿಕೃತಗೊಳಿಸಿಬಿಟ್ಟಿತು. ಭಾರತೀಯತೆಯನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಗಾಂಧಿ ನೇತೃತ್ವದಲ್ಲಿ ವಿಸ್ತೃತವಾಗಿ ಬಳಕೆಯಾದ ಭಗವದ್ಗೀತೆ, ರಾಮಾಯಣ, ಪ್ರಾರ್ಥನಾ ಸಭೆ, ರಾಮರಾಜ್ಯ ಇನ್ನಿತ್ಯಾದಿ ಪರಿಕಲ್ಪನೆಗಳ ಬಳಕೆಗಳು ಏಕಾಕಾಲದಲ್ಲಿ ಹಿಂದೂ ಧಾರ್ಮಿಕತೆಯೇ ಭಾರತೀಯ ಧಾರ್ಮಿಕತೆ ಎಂಬ ಅಘೋಷಿತ ಅಭಿಪ್ರಾಯವನ್ನು ದೇಶದಲ್ಲಿ ಮೂಡಿಸಿತು.
ವಿಪರ್ಯಾಸವೆಂದರೆ ರಾಜಕೀಯದಲ್ಲಿ ಈ ರೀತಿ ಧರ್ಮವನ್ನು ಬೆರೆಸುವುದನ್ನು 1920 ರಲ್ಲೆ ಕಟ್ಟುನಿಟ್ಟಾಗಿ ವಿರೋಧಿಸಿದ್ದು, 1937 ರ ನಂತರ ಮುಸ್ಲಿಂ ಪ್ರತ್ಯೇಕತವಾದಿ ರಾಜಕಾರಣವನ್ನು ಪ್ರಾರಂಭಿಸಿದ, ಮುಹiದ್ ಆಲಿ ಜಿನ್ನಾ ಅವರು!
ಈ ಎಲ್ಲಾ ಕಾರಣಗಳಿಂದ ತಿಲಕ್ ಮಾದರಿ ಹಿಂದೂ ಧಾರ್ಮಿಕ ರಾಷ್ಟ್ರೀಯತೆ, ಗಾಂಧಿ ಕಾಲದ ಹಿಂದೂ ಲಾಂಚನಗಳ ಭಾರತೀಯ ರಾಷ್ಟ್ರೀಯತೆಯಾಗಿ ಬದಲಾದರೂ ಬಹುಧರ್ಮೀಯ ದೇಶದಲ್ಲಿ ಹಿಂದೂ ಧಾರ್ಮಿಕತೆಯೇ ಪ್ರಧಾನ ಹಾಗೂ ಅಧಿಕೃತ ಉಳಿದವು ಅಧೀನ ಹಾಗೂ ಪರಕೀಯ ಎಂಬ ಕಾಮನ್ ಸೆನ್ಸ್ ಬೆಳೆಸಿದವು.
ಇವತ್ತಿನ ಹಿಂದೂತ್ವವಾದಿ ಕರಾಳ ಅಭಿವ್ಯಕ್ತಿಗಳಿಗೆ ಸಮ್ಮತಿ ದೊರೆತಿರುವುದು ಸ್ವಾತಂತ್ರ್ಯ ಪೂರ್ವದಿಂದ ಉಳಿಸಿ ಬೆಳೆಸಿಕೊಂಡು ಬಂದ ಭಾರತೀಯ ರಾಷ್ಟ್ರೀಯತೆ ಎಂದರೆ ಹಿಂದೂ ಪ್ರಧಾನ ರಾಷ್ಟ್ರೀಯತೆ ಎಂಬ ಕಾಮನ್ ಸೆನ್ಸ್ ಇಂದಲೇ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇಡಿ ಕಾಂಗ್ರೆಸ್ಸಿನ ಭಾರತೀಯ ರಾಷ್ಟ್ರೀಯತೆಯ ಗ್ರಹಿಕೆ ಇದೇ ಚೌಕಟ್ಟಿಗೆ ಒಳಪಟ್ಟಿತ್ತು.
ಸಂವಿಧಾನ ಸಭೆ ಮತ್ತು ಹಿಂದೂ ರಾಷ್ಟ್ರೀಯತೆ
ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿದ್ದರೂ, ದೇಶ ವಿಭಜನೆಯ ನಂತರ ಉಳಿದುಕೊಂಡ ಸಂವಿಧಾನ ಸಭೆಯ 299 ಸದಸ್ಯರಲ್ಲಿ 208 ಸದಸ್ಯರು ಶೇ. 21ರಷ್ಟು ಭಾರತೀಯರು ಮಾತ್ರ ಓಟು ಹಾಕುವ ಅರ್ಹತೆಯಿದ್ದ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ಸಿಗರು ಹಾಗೂ 15 ಸದಸ್ಯರು ಕಾಂಗ್ರೆಸ್ಸೇತರ ಪಕ್ಷಗಳಿಂದ ಆಯ್ಕೆಯಾದವರು ಮತ್ತು ಉಳಿದವರು ರಾಜಸಂಸ್ಥಾನಗಳಿಂದ ನೇಮಕವಾದವರು. ಹೀಗಾಗಿ ಕೆಲವು ಅಪವಾದಗಳನ್ನು ಹಾಗೂ ಅಂಬೇಡ್ಕರ್ ಅವರ ಹೋರಾಟಗಳನ್ನು ಹೊರತುಪಡಿಸಿದರೆ ಬಹುಮಾಡಿ ಸಂವಿಧಾನ ಸಭೆಯಲ್ಲಿ ಭಾರತ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಹರಿದು ಬರುತ್ತಿರುವ ಹಿಂದೂ ರಾಷ್ಟ್ರೀಯತೆಯ ಅಪಾಯಕಾರಿ ತೊರೆಯ ಬಗ್ಗೆ ಗಮನಹರಿಸಿದವರು ಕಡಿಮೆ.
ಭಾರತದ ಸಂವಿಧಾನ ಸಭೆ ಹಿಂದೂತ್ವದ ಆಕ್ರಮಣಕಾರಿ ಹಾಗೂ ಬಹಿರಂಗ ಅಭಿವ್ಯಕ್ತಿಗಳನ್ನು ನಿರಾಕರಿಸಿದ್ದು ನಿಜ. ಹಾಗೆಯೇ ಸಾರದಲ್ಲಿ ಸೆಕ್ಯುಲಾರ್ ಆಗಿರುವ ಹಲವು ಮೂಲಭೂತ ಅಂಶಗಳನ್ನು ಮೂಲಭೂತ ಹಕ್ಕುಗಳನ್ನಾಗಿಸಿದ್ದೂ ನಿಜ. ಆದರೂ ಇದರ ನಡುವೆಯೇ ಕೆಲವು ಆಂತರ್ಗತ ಹಿಂದೂ ಪಕ್ಷಪಾತಿ ಹಾಗೂ ಹಿಂದೂ ಧಾರ್ಮಿಕತೆಯ ಅಭಿವ್ಯಕ್ತಿಗಳೆ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಗಳಾಗುವುದನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗಲಿಲ್ಲ ಎನ್ನುವುದೂ ನಿಜ.
ಹೀಗಾಗಿ ಭಾರತ ಪ್ರಭುತ್ವಕ್ಕೆ ಸೆಕ್ಯುಲಾರ್ ಕಿರೀಟವಿದ್ದರೂ ಅಂತರ್ಗಾಮಿನಿಯಾಗಿ ಹಿಂದೂ ಪಕ್ಷಪಾತಿಯಾಗಿಯೇ ಮುಂದುವರೆದ್ದರ ಕಾರಣದ ಕೆಲವು ಬೇರುಗಳನ್ನು ಭಾರತದ ಸಂವಿಧಾನದಲ್ಲೂ ಕಾಣಬಹುದು. ಪ್ರಧಾನವಾಗಿ ಮೇಲ್ಜಾತಿ ಮೇಲ್ವರ್ಗದವರೇ ಹೆಚ್ಚಿದ್ದ ನಮ್ಮ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಮತ್ತು ಅಂತ ಇಕ್ಕಟ್ಟಿನ ಸಂದರ್ಭದಲ್ಲೂ ಅಂಬೇಡ್ಕರ್ ಅಂತವರು ಸತತ ಹೋರಾಡಿದರೂ ಅಂತಿಮವಾಗಿ ನಾವು ಪಡೆದುಕೊಂಡ ಸಂವಿಧಾನದಲ್ಲೂ ಈ ಅಂಶಗಳು ಉಳಿದುಕೊಂಡವು ಎಂಬುದನ್ನು ಮರೆಯಲಾಗುವುದಿಲ್ಲ. ಉದಾಹರಣೆಗೆ ಸಂವಿಧಾನದ ಪ್ರಥಮ ಪುಟದಲ್ಲೇ “ಓಂ” ಎಂದು ಬರೆಯಬೇಕೆಂದು ಕೆಲವು ಸದಸ್ಯರು ಪಟ್ಟು ಹಿಡಿಯುತ್ತಾರೆ. ಆದರೆ ಕಣ್ಣಿಗೆ ರಾಚುವ ಅಂಥಾ ಹಿಂದೂವಾದಿ ಅಭಿವ್ಯಕ್ತಿಯನ್ನು ಸಂವಿಧಾನ ಸಭೆ ಒಪ್ಪಿಕೊಳ್ಳುವುದಿಲ್ಲ.
ಹಿಂದೂಸ್ಥಾನವು ಭರತವರ್ಷವಾಗಿದ್ದೇಕೆ?
ಆದರೆ ನಮ್ಮ ಸಂವಿಧಾನದಲ್ಲಿ ಪ್ರಭುತ್ವಕ್ಕೆ ಹಿಂದೂ ಪಕ್ಷಪಾತಿತನ ತಂದುಕೊಟ್ಟ ಇನ್ನೂ ಕೆಲವು ಅಂಶಗಳ ಬಗ್ಗೆ ಪ್ರೀತಂ ಸಿಂಗ್ ಎಂಬ ವಿದ್ವಾಂಸರೊಬ್ಬರು ಕೆಲವು ಅಧ್ಯಯನ ಮಾಡಿದ್ದಾರೆ.
(https://www.tandfonline.com/doi/full/10.1080/01436590500089281)
ಉದಾಹರಣೆಗೆ: ನಮ್ಮ ಸಂವಿಧಾನದ ಮುನ್ನುಡಿಯ ಪ್ರಥಮ ಸಾಲಿನಲ್ಲೇ ಸಂವಿಧಾನ ರಚನಾ ಸಭೆ ಬ್ರಾಹ್ಮಣಶಾಹಿಯೊಂದಿಗೆ ಮಾಡಿಕೊಂಡ ರಾಜಿಯತ್ತ ಅವರು ಗಮನ ಸೆಳೆಯುತ್ತಾರೆ. ಸಂವಿಧಾನದ ಮೊದಲ ವಾಕ್ಯ ಹೀಗೆ ಪ್ರಾರಂಭವಾಗುತ್ತದೆ: Article 1. Name and territory of the Union (1) India, that is Bharat, shall be a Union of States
(ಇಂಡಿಯಾ ಎಂದರೆ ಭಾರತ ಎಂಬ ಈ ಐಕ್ಯದೇಶವು ಹಲವು ರಾಜ್ಯಗಳ ಐಕ್ಯದೇಶವಾಗಿರುತ್ತದೆ.)
ಈ ಮೊದಲ ಪರಿಚ್ಚೇಧದ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಏಕೆಂದರೆ ಭಾರತ್ ಎಂಬುದು ಹಿಂದೂ ಮೇಲ್ಜಾತಿಗಳು ಭಾರತದ ಪ್ರಾಚೀನತೆಯ ಬಗ್ಗೆ ಕಟ್ಟಿಕೊಂಡು ಬಂದಿರುವ ಭರತ ವರ್ಷ ಎಂಬ ಕಲ್ಪನೆಯ ಕೂಸು. ಅದಕ್ಕಾಗಿಯೇ 1949 ರಲ್ಲಿ ಒಬ್ಬ ಹಿಂದೂ ಸನ್ಯಾಸಿನಿ ಈ ದೇಶವನ್ನು ಇಂಡಿಯಾ ಎಂದು ಕರೆಯಬಾರದೆಂದೂ ಇದನ್ನು ಭಾರತವೆಂದೇ ಕರೆಯಬೇಕೆಂದೂ ಮತ್ತು ಹಿಂದಿಯನ್ನು ಇಲ್ಲಿನ ಏಕೈಕ ರಾಷ್ಟ್ರ ಭಾಷೆ ಮಾಡಬೇಕೆಂದು ಒತ್ತಾಯಿಸುತ್ತಾ ಉಪವಾಸ ಕೂರುತ್ತಾಳೆ.
ಆ ಕಾಲದಲ್ಲಿ ಭಾರತವನ್ನು ಬ್ರಿಟಿಷರು ಭಾರತವನ್ನು ಇಂಡಿಯಾ ಎಂದೇ ಕರೆಯುತ್ತಿದರೂ ಸಾಮಾನ್ಯ ಜನ ಈ ದೇಶವನ್ನು ಹಿಂದೂಸ್ಥಾನವೆಂದೇ ಕರೆಯುತ್ತಿದ್ದರು. ಅದೇ ರೀತಿ ಉತ್ತರ ಭಾರತದಲ್ಲಿ ಹಿಂದೂಸ್ಥಾನೀ ಎಂದು ಕರೆಯಲ್ಪಡುವ ಭಾಷೆಯನ್ನೇ ಹಿಂದೂಗಳು ಮತ್ತು ಮುಸ್ಲಿಮರು ಬಳಸುತ್ತಿದ್ದರು.
ಹಿಂದೂ ಮೂಲಭೂತವಾದಿಗಳು ಮತ್ತು ಬ್ರಾಹ್ಮಣಶಾಹಿ ಒಲವುಳ್ಳವರು ಮಾತ್ರ ಸನಾತನ ಧರ್ಮ ಪರಂಪರೆಯ ಮುಂದುವರೆಕೆಯಾಗಿ ಭಾರತ ಎಂದು ಕರೆಯಬೇಕೆಂದು ಪಟ್ಟು ಹಿಡಿದಿದ್ದರು. ಅಂಥಾ ಸಾಕಷ್ಟು ಮಂದಿ ಕಾಂಗ್ರೆಸ್ಸಿನಿಂದಲೇ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿದ್ದರು. ಅಂತಿಮವಾಗಿ ಈ ಜನ ಇಂಡಿಯಾ ಹೆಸರಿನ ಜೊತೆಗೆ ಭಾರತ ಎಂಬ ಹೆಸರಿಗೆ ಒಪ್ಪಿಕೊಂಡರು. ಹೀಗಾಗಿ ಈ ಬ್ರಾಹ್ಮಣಶಾಹಿಗಳ ವಿರೋಧವಿದ್ದದ್ದು ಮುಸ್ಲಿಮರ ನೆನಪನ್ನು ತರುವ ಹಿಂದೂಸ್ಥಾನಿಯ ವಿರುದ್ಧವೇ ಹೊರತು ಬ್ರಿಟಿಷರ ನೆನಪನ್ನು ತರುವ ಇಂಡಿಯಾ ದ ಬಗೆಗಲ್ಲ. ಹೀಗೆ ಸ್ವತಂತ್ರ ಭಾರತದ ಹೆಸರಿನಲ್ಲೇ ಆರ್ಯ ಸಂಸ್ಕೃತಿಯ ದ್ಯೋತಕ ಉಳಿದುಕೊಂಡಿತು.
ಬಹುತ್ವದ ಒಕ್ಕೂಟದ ಬದಲು ಹಿಂದೂತ್ವದ ಯೂನಿಯನ್
ಭಾರತವು ದುರ್ಬಲ ಕೇಂದ್ರ ಆದರೆ ಪ್ರಬಲ ಪ್ರಾಂತ್ಯ ಸರ್ಕಾರಗಳುಳ್ಳ ಒಕ್ಕೂಟವಾಗಬೇಕೋ ಅಥವಾ ಪ್ರಬಲ ಕೇಂದ್ರ ಸರ್ಕಾರವುಳ್ಳ ಯೂನಿಯನ್ ಆಗಬೇಕೋ ಎನ್ನುವ ವಾದ ಈ ದೇಶವನ್ನು ವಿಭಜನೆಯ ಕಡೆಗೇ ಕೊಂಡೊಯ್ದಿತು. ಸ್ವತಂತ್ರ ಭಾರತದಲ್ಲಿ ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳೇ ಮೇಲುಗೈ ಇರುವುದರಿಂದ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದ ಪ್ರಾಂತ್ಯಗಳಿಗೆ ಸ್ವಾಯತ್ತ ಅಧಿಕಾರವುಳ್ಳ ಪ್ರಾಂತ್ಯಗಳ ಒಕ್ಕೂಟವಾಗಿ ಸ್ವತಂತ್ರ ಭಾರತ ರಚನೆಯಾಗಬೇಕೆಂಬುದು ಮುಸ್ಲಿಂ ಲೀಗಿನ ಮೊದಲ ಒತ್ತಾಯವಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿದ್ದ ಬಿರ್ಲಾನಂಥ ಪ್ರಮುಖ ಉದ್ದಿಮೆಪತಿಗಳು ಪ್ರಬಲ ಕೇಂದ್ರ ಸರ್ಕಾರದ ಪಕ್ಷಪಾತಿಗಳಾಗಿದ್ದರು. ಹೀಗಾಗಿಯೇ ದೇಶ ವಿಭಜನೆಯಾದರೂ ಪರವಾಗಿಲ್ಲ, ಸ್ವತಂತ್ರ ಭಾರತದಲ್ಲಿ ಪ್ರಬಲ ಕೇಂದ್ರ ಸರ್ಕಾರವುಳ್ಳ ಯೂನಿಯನ್ ರಚನೆಯಾಯಿತು. ಸಿಖ್ ಸಮುದಾಯವಂತೂ ಇದೇ ಕಾರಣಕ್ಕಾಗಿ ಸಂವಿಧಾನದ ಕರಡಿಗೆ ಸಹಿಯನ್ನು ಹಾಕಲೂ ನಿರಾಕರಿಸಿತ್ತು. ಪ್ರಬಲ ಕೇಂದ್ರ ಸರ್ಕಾರವಿದ್ದ ಮಾತ್ರಕ್ಕೆ ಅದು ಬಲಿಷ್ಟ ಕೋಮಿನ ಪಕ್ಷಪಾತಿಯಾಗಲೇ ಬೇಕೆಂದೇನೂ ಇಲ್ಲ. ಸಮಾಜದಲ್ಲಿ ಜಾತ್ಯತೀತತೆ ಬಲವಾಗಿ ಬೇರುಬಿಟ್ಟಿದ್ದರೆ ಅಂಥಾ ಸಾಧ್ಯತೆ ಇರುವುದಿಲ್ಲ. ಆದರೆ ಆಧುನಿಕ ಭಾರತ ಇನ್ನೂ ಆ ನಿಟ್ಟಿನಲ್ಲಿ ಬೆಳೆಯಬೇಕಿತ್ತು.
ಬ್ರಾಹ್ಮಣೀಯ ಹಿಂದೂ ಚೌಕಟ್ಟಿಗೆ ಅಬ್ರಾಹ್ಮಣ ಬೌದ್ಧ, ಜೈನ, ಸಿಕ್ ಸೇರಿಸಿದ್ದೇಕೆ?
ಸಂವಿಧಾನದ 25 (2) (b) ಪರಿಚ್ಚೇಧವು ಎಲ್ಲರಿಗೂ ತಮ್ಮ ತಮ್ಮ ಧಾರ್ಮಿಕ ಶ್ರದ್ಧೆಯನ್ನು ಆಚರಿಸಲು, ಪ್ರತಿಪಾದಿಸಲು ಮತ್ತು ಪ್ರಚಾರ ಮಾಡಲು ಅವಕಾಶ ಮಾಡಿಕೊಡುವುದರ ಜೊತೆಜೊತೆಗೆ ಹಿಂದೂ ಧಾರ್ಮಿಕ ಆಚರಣೆಯಲ್ಲಿ ಸುಧಾರಣೆ ತರುವ ಜವಾಬ್ದಾರಿಯನ್ನೂ ಪ್ರಭುತ್ವದ ಮೇಲೆ ಹೊರಸುತ್ತದೆ. ಮತ್ತು ಹಿಂದೂ ಧರ್ಮದ ಅಡಿಯಲ್ಲಿ ಬೌದ್ಧರನ್ನೂ, ಜೈನರನ್ನೂ ಮತ್ತು ಸಿಕ್ಕರನ್ನೂ ಸೇರಿಸುತ್ತದೆ.
ಇದರ ಬಗ್ಗೆ ಪ್ರತಾಪ್ ಮೆಹ್ತಾ, ಅನ್ವರ್ ಅಲಂ ಹಾಗೂ ಇನ್ನಿತರ ವಿದ್ವಾಂಸರು ತಮ್ಮ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಹಿಂದೂ-ಬ್ರಾಹ್ಮಣ ಧರ್ಮದ ವಿರುದ್ಧ ಬಂಡಾಯವೆದ್ದ ಧರ್ಮಗಳನ್ನು ಹಿಂದೂ ಧರ್ಮಕ್ಕೆ ಸೇರಿಸುವ ಮೂಲಕ ಸಂವಿಧಾನತ್ಮಕವಾಗಿ ಹಿಂದೂತ್ವವಾದಿಗಳ ಅಜೆಂಡಾಗೆ ಬಲ ತಂದುಕೊಟ್ಟಂತಾಯಿತು. ಅಲ್ಲದೆ ಒಂದು ಜಾತ್ಯತೀತ ಸರ್ಕಾರ ಕೇವಲ ಹಿಂದೂ ಧರ್ಮದ ಸುಧಾರಣೆಯ ಬಗ್ಗೆ ಮಾತನಾಡುವುದರ ಮೂಲಕ ಪರೋಕ್ಷವಾಗಿ ಭಾವೀ ಭಾರತದ ಪ್ರಧಾನ ಹಕ್ಕುದಾರರು ಹಿಂದೂಗಳೇ ಎಂದು ಪ್ರತಿಪಾದಿಸಿದಂತಾಯಿತು. ಇದೂ ಸಹ ಮುಂದೆ ಸದನ ಎಂಬುದೂ ಸಹ ಪ್ರಧಾನವಾಗಿ ಹಿಂದೂ ದೇವಸ್ಥಾವೇ ಹೊರತು ಇದರ ಮೇಲೆ ಇತರ ಧರ್ಮೀಯರಿಗೆ ಇಲ್ಲಿ ಎರಡನೇ ಸ್ಥಾನವೇ ಎಂಬ ಪರಿಕಲ್ಪನೆ ರೂಢಿಸಿಕೊಳ್ಳಲು ಅನುಕೂಲವಾಯಿತು.
ಗೋವಿಗೆ ವಿಶೇಷ ಸ್ಥಾನದ ರಾಜಕಾರಣ
ಸಂವಿಧಾನದ 48ನೇ ಪರಿಚ್ಚೇಧದಲ್ಲಿ ಗೋಹತ್ಯೆ ನಿಷೇಧದ ಪ್ರಸ್ತಾವ ಮಾಡಲಾಗಿದೆ.. ಇದರ ಬಗ್ಗೆ ಸಂವಿಧಾನ ರಚನಾ ಸಭೆಯಯಲ್ಲಿ ಸಾಕಷ್ಟು ಚರ್ಚೆಗಳಾಗಿದ್ದಾವೆ. ಗೋವು-ಹಿಂದಿ-ಹಿಂದೂ ಇವುಗಳೇ ಭಾರತದ ಸೂಚಕ ಮತ್ತು ಲಾಂಚನಗಳೆಂಬ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಸಂವಿಧಾನ ಸಭೆಯಲ್ಲಿ ಚರ್ಚೆಗಳಾಗಿವೆ. ಆಮೇಲೆ ಉಳುವ ಯೋಗ್ಯ ರಾಸುಗಳ ಮತು ಹಾಲು ಕೊಡುವ ಹಸುಗಳ ಹತ್ಯೆಯನ್ನು ನಿಷೇಧಿಸಬೇಕೆಂಬ ಪ್ರಸ್ತಾಪನೆ ಸೇರ್ಪಡೆಯಾಯಿತು.
ಹಿಂದಿಯಾಯಿತು ದೇವನಗಾರಿ!
ಇದಲ್ಲದೆ ಸಂವಿಧಾನದ 343 ನೇ ಕಲಮಿನಲ್ಲಿ ದೇವನಾಗರಿ ಲಿಪಿಯಲ್ಲಿರುವ ಹಿಂದಿ ಭಾಷೆಯನ್ನು ರಾಷ್ಟ್ರಭಾಶೆಯನ್ನಾಗಿ ಪರಿಗಣಿಸಬೇಕೆಂಬ ಮತ್ತು 351 ನೇ ಕಲಮಿನ ಪ್ರಕಾರ ಹಿಂದಿಯನ್ನು ಬೆಳೆಸಲು ಪ್ರಧಾನವಾಗಿ ಸಂಸ್ಕೃತವನ್ನೇ ಬಳಸಬೇಕೆಂಬ ಸಲಹೆ ರೂಪದ ಆದೇಶ ಇರುವ ಕಲಮುಗಳೂ ಸಹ ಬ್ರಾಹ್ಮಣವಾದಿ ಚಿಂತನೆಗಳಿಗೆ ಮತ್ತು ಬ್ರಾಹ್ಮಣಶಾಹಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನೇ ತಂದುಕೊಟ್ಟಿತು. ವಾಸ್ತವವಾಗಿ ಹಿಂದಿಗಿಂತ ಹಿಂದೂಸ್ಥಾನಿ ಮತ್ತು ದೇವನಾಗರಿ ಲಿಪಿಗಿಂತ ಕೈಥಿ ಲಿಪಿ ಆಗ ಹೆಚ್ಚು ಬಳಕೆಯಲ್ಲಿತ್ತು. ಆದರೆ ಬ್ರಾಹ್ಮಣವಾದಿ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಮತ್ತು ಭಾವೀ ಭಾರತದಲ್ಲಿ ಮತ್ತೆ ಬ್ರಾಹ್ಮಣವಾದಿ ಹಿಂದೂಗಳ ಪಾರಮ್ಯವನ್ನು ಉಳಿಸಿಕೊಳ್ಳುವ ಭಾಗವಾಗಿಯೇ ಇಂಥಾ ಹಲವು ಕಲಮುಗಳು ಉಳಿದುಕೊಂಡು ಬಂದಿದೆ.
ಇವೆಲ್ಲಾ ಕೆಲವು ಉದಾಹರಣೆಗಳಷ್ಟೆ. ವಾಸ್ತವವೇನೆಂದರೆ ಅಂಬೇಡ್ಕರ್ರವರು ಮುಂದಿಟ್ಟ ಆರ್ಥಿಕ-ಸಾಮಾಜಿಕ ಪ್ರಜಾತಂತ್ರದ ಸಾರರೂಪಿ ಆಶಯಗಳು ಶಾಸನ ಬಲವಿಲ್ಲದ ನಿರ್ದೇಶನಾ ತತ್ವಗಳಲ್ಲಿ ಸೇರ್ಪಡೆಯಾಗಿವೆ. ಶಾಸನ ಬಲವಿರುವ ಉಳಿದ ಸಂವಿಧಾನ ದೇಶದ ಸಾಮಾಜಿಕ ರಚನೆಯನ್ನು ಕಿಂಚಿತ್ತೂ ಬದಲಾವಣೆ ಮಾಡದೆ ಮುಂದುವರೆಯುವಂತಾಗಿದೆ.
ಹೀಗಾಗಿಯೇ ಸದನವೆಂಬುದು ದೇವಸ್ಥಾನ, ಮಾಂಸಾಹಾರ ಅಪವಿತ್ರ ಎಂಬ ಬ್ರಾಹ್ಮಣವಾದಿ ಮಾತುಗಳು ಸಂವಿಧಾನಾತ್ಮಕವಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಬಾಯಿಂದ ಬರುವುದು ಅಕಸ್ಮಿಕವಲ್ಲ. ಹೀಗಾಗಿ ಸಂವಿಧಾನಕ್ಕೆ ತೊಡಿಸಲಾಗಿರುವ ಅಗೋಚರ ಜನಿವಾರವನ್ನು ಕಳಚಿ ನಿಜಕ್ಕೂ ಸೆಕ್ಯುಲಾರ್ ಮಾಡಬೇಕಿರುವುದೂ ಸಹ ನಿಜವಾದ ಎದಪಂಥೀಯ, ಅಂಬೇಡ್ಕರ್ ವಾದಿ, ಸೆಕ್ಯುಲಾರ್, ಪ್ರಗತಿಪರರೆಲ್ಲರ ಮುಂದಿನ ಸವಾಲಾಗಿದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply