ನ್ಯೂಡೆಲ್ಲಿ : ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಎಚ್ಇಐ) ಜಾತಿ ತಾರತಮ್ಯವನ್ನು ಕೊನೆಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜಾತಿ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲಾ, ಮುಂಬೈನ ಯುವ ವೈದ್ಯೆ ಪಾಯಲ್ ತದ್ವಿ ಅವರ ತಾಯಿ ಅಬೇದಾ ಸಲೀಂ ತದ್ವಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ವಿಚಾರಣೆ ನಡೆಸಿತು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶ ಕೋಶಗಳ ಸ್ಥಾಪನೆಗೆ ಸಂಬಂಧಿಸಿದಂತೆ ದೇಶದ ಎಲ್ಲ ವಿಶ್ವವಿದ್ಯಾಲಯಗಳಿಂದ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ವಿಶ್ವವಿದ್ಯಾಲಯ ಗ್ರ್ಯಾಂಡ್ಸ್ ಆಯೋಗಕ್ಕೆ (ಯುಜಿಸಿ) ನಿರ್ದೇಶನ ನೀಡಿದೆ. ಅಲ್ಲದೇ ಜಾತಿ ತಾರತಮ್ಯಕ್ಕೆ ಸಂಬಂಧಿಸಿದಂತೆ ಈವರೆಗೆ ಬಂದಿರುವ ದೂರುಗಳ ಸಂಖ್ಯೆ ಮತ್ತು ಆ ದೂರುಗಳ ಬಗ್ಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆಯೂ ತಿಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮತ್ತು ವಕೀಲ ದಿವಾ ವಾಡೇಕರ್ ಅವರು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ಸಮಾನತೆ ಕಾಯಿದೆ-2012ರ ನಿಬಂಧನೆಗಳನ್ನು ಜಾರಿಗೊಳಿಸುವಲ್ಲಿ ಯುಜಿಸಿ ದಯನೀಯವಾಗಿ ವಿಫಲವಾಗಿದೆ ಎಂದರು. ಯುಜಿಸಿಯ ನಿರ್ಲಕ್ಷ್ಯದಿಂದಾಗಿ ಕ್ಯಾಂಪಸ್ಗಳಲ್ಲಿ ವ್ಯಾಪಕವಾದ ಜಾತಿ ಆಧಾರಿತ ತಾರತಮ್ಯಕ್ಕೆ ದಾರಿ ಮಾಡಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಯ ಆತಂಕಕಾರಿ ಅಂಕಿಅಂಶಗಳನ್ನು ಅವರು ಉಲ್ಲೇಖಿಸಿದರು.
ಐಐಟಿಯಲ್ಲಿ 2004ರಿಂದ 2024ರವರೆಗೆ 115 ಆತ್ಮಹತ್ಯೆಗಳು ನಡೆದಿವೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ದೇಶಾದ್ಯಂತ ಒಟ್ಟು 820 ವಿಶ್ವವಿದ್ಯಾಲಯಗಳಲ್ಲಿ (ಕೇಂದ್ರ/ರಾಜ್ಯ/ಡೀಮ್ಡ್) ಎಷ್ಟು ಸಮಾನ ಅವಕಾಶ ಕೋಶಗಳನ್ನು ಸ್ಥಾಪಿಸಲಾಗಿದೆ? ಸ್ಥಾಪಿತವಾದರೆ ಈ ಪ್ರಕರಣಗಳ ಸ್ಥಿತಿಗತಿಗಳೇನು? 2012 ರ ನಿಯಮಗಳ ಅನುಷ್ಠಾನದ ಬಗ್ಗೆ UGC ಯ ಮೇಲ್ವಿಚಾರಣೆ ಏನು? ಎಂದು ಪ್ರಶ್ನಿಸಿದರು.
ಯುಜಿಸಿ ವಕೀಲರು ವಾದಗಳನ್ನು ಮಂಡಿಸುತ್ತಾ.. ಕೆಲವು ತಜ್ಞರ ಸಮಿತಿಗಳ ಶಿಫಾರಸುಗಳ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ಕೆಲವು ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದರು. ಆ ನಿಯಮಗಳ ಪ್ರತಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸೂಕ್ಷ್ಮ ವಿಚಾರವನ್ನು ವ್ಯವಸ್ಥಿತವಾಗಿ ನಿಭಾಯಿಸಬೇಕು ಎಂದು ಒತ್ತಿ ಹೇಳಿದರು. ನಾಲ್ಕು ವಾರಗಳಲ್ಲಿ ಕೌಂಟರ್ ಪ್ರತಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಯಿತು.
Leave a reply