2.ಸಂವಿಧಾನ ದ್ವೇಷಿ ಸಂಘಪರಿವಾರ
ಇದ್ದಕ್ಕಿದ್ದ ಹಾಗೆ ತಾವೇ ಅಪ್ಪಟ ಸಂವಿಧಾನವಾದಿಗಳು ಎಂದು ಪ್ರತಿಪಾದಿಸುತ್ತಿರುವ ಸಂಘಪರಿವಾರ ಮತ್ತು ಬಿಜೆಪಿಗಳಿಗೆ ಸಂವಿಧಾನದ ಬಗ್ಗೆ , ಸಂವಿಧಾನದ ಲಾಂಚನಗಳಾದ ಬಾವುಟ ಇತ್ಯಾದಿಗಳ ಬಗ್ಗೆ ಇರುವ ಅಸಲಿ ಅಭಿಪ್ರಾಯವೇನು?
ಭಾರತೀಯ ಸಂವಿಧಾನ ಸ್ವೀಕರಿಸಲು ಅನರ್ಹ- ಆರೆಸ್ಸೆಸ್
1949 ರ ನವಂಬರ್ 26 ರಂದು ಸಂವಿಧಾನ ಬರಹ ಮುಗಿದು ನಾಡಿಗೆ ಅರ್ಪಣೆಯಾದ ಕೇವಲ ನಾಲ್ಕು ದಿನಗಳ ನಂತರ1949 ರ ನವಂಬರ್ 30 ರಂದು ಆರೆಸ್ಸೆಸ್ಸಿನ ಮುಕಪತ್ರಿಕೆಯಾದ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನವನ್ನು ಹೀಗೆಳೆಯುತ್ತಾ ಹೀಗೆ ಬರೆದುಕೊಳ್ಳುತ್ತಾರೆ: “ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ” ಎಂದು ಟೀಕಿಸುತ್ತಾರೆ..
“ಭಾರತದ ಸಂವಿಧಾನದಲ್ಲಿ ಸನಾತನ ಭಾರತದಲ್ಲಿ ವಿಕಸನಗೊಂಡ ಸಂವಿಧಾನದ ಉಲ್ಲೇಖವೇ ಇಲ್ಲ. ಈಗಲೂ ಜಗತ್ತಿನಾದ್ಯಂತ ಮನಸ್ಮೃತಿಯು ಅಪಾರವಾದ ಗೌರವವವನ್ನೂ ಮತ್ತು ಎಲ್ಲರ ಸ್ವಪ್ರೇರಿತ ಮನ್ನಣೆಯನ್ನೂ ಪಡೆದುಕೊಳ್ಳುತ್ತದೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದರ ಬಗ್ಗೆ ಅರಿವೇ ಇಲ್ಲ” ಎಂದು ಸಮಾನತೆಯ ಸಂವಿಧಾನದ ಬದಲಿಗೆ ತಾರತಮ್ಯದ ಮನುಸ್ಮೃತಿಯನ್ನು ಎತ್ತಿಹಿಡಿಯುತ್ತದೆ.
ಭಾರತದ ಧ್ವಜ V/S ಭಗವಾಧ್ವಜ
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರರ ಹಿಂದೂ ಮಹಾ ಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂ-ಮಾಲೀಕ ಮತ್ತು ಬಂಡವಾಳಶಹಿಗಳ ಅಧಿಪತ್ಯವನ್ನು ಮುಂದುವರೆಸಿಕೊಂಡು ಹೋಗಲು ಯತ್ನಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ರಾಷ್ಯ್ರೀಯ ಸ್ವಯಂಸೇವಕ ಸಂಘ- ಆರೆಸ್ಸೆಸ್ 1925 ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರೀಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡಗೇವಾರರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು.
ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ ಚಳವಳಿ, ಇಂಥಾ ಯಾವುದೇ ಹೋರಾಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ವ್ಯಕ್ತಿಗತ ನೆಲೆಯಲ್ಲಿ ಭಾಗವಹಿಸಬಹುದೇ ವಿನಾ ಸಂಘದ ಸದಸ್ಯರಾಗಿ ಭಾಗವಹಿಸಕೂಡದೆಂಬ ನಿರ್ದೇಶನವಿತ್ತಿದ್ದರು. 1928 ರ ಸುಮಾರಿಗೆ ಅರೆಸ್ಸೆಸ್ ಭಗವಾಧ್ವಜವನ್ನು ತನ್ನ ಲಾಂಚನವನ್ನಾಗಿ ಸ್ವೀಕರಿಸಿತು. ಕೇಸರಿ ಬಣ್ಣದ ಹಾಗೂ ತ್ರಿಕೋನಾಕೃತಿಯ ಭಗವಧ್ವಜವನ್ನೇ ಆರೆಸ್ಸೆಸ್ ಏಕೆ ತನ್ನ ಬಾವುಟವನ್ನಾಗಿ ಸ್ವೀಕರಿಸಿತು?
ಈ ಬಗ್ಗೆ ಹೆಡಗೇವಾರರ ಸಹಚರನಾಗಿದ್ದ ಎನ್. ಎಚ್. ಪಾಲ್ಕರ್ ಅವರು ತಮ್ಮ ” Saffron Flag” ಪುಸ್ತಕದಲ್ಲಿ ಏಕೆ ಮತ್ತು ಹೇಗೆ ಭಗವಧ್ವಜವು ಆರೆಸ್ಸೆಸ್ ಆಶಯದ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ ಎಂದು ವಿವರಿಸುತ್ತಾರೆ.: ಆರೆಸ್ಸೆಸ್ ಪ್ರಕಾರ ಭಗವಧ್ವಜವನ್ನು ವೇದಗಳ ಕಾಲದಲ್ಲಿ ಅರುಣಕೇತು ಎಂದು ಕರೆಯುತ್ತಿದ್ದರು. ಆದರೆ ಆ ನಂತರ ಭಗವಧ್ವಜದ ಬಳಕೆಯು ಪ್ರಧಾನವಾಗಿ ಆಗಿರುವುದು ಬುದ್ಧ ಭಾರತದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ಸಾಧಿಸಲಾದ ಬ್ರಾಹ್ಮಣ್ಯದ ಪುನರುತ್ಥಾನದಲ್ಲಿ. ಅರ್ಥಾತ್ ಭಗವಾಧ್ವಜವು ಮಹಿಳೆ, ಶೂದ್ರ ಮತ್ತು ದಲಿತರ ಮೇಲೆ ಬ್ರಾಹ್ಮಣ್ಯದ ವಿಜಯದ ಪ್ರತೀಕವಾಗಿದೆ.
ಆದರೆ ಬ್ರಾಹ್ಮಣ್ಯದ ಪುನರುತ್ಥಾನವನ್ನು ಹಿಂದೂತ್ವದ ವಿಜಯವೆಂದು ನಂಬಿಸುವ ಆರೆಸ್ಸೆಸ್ ಮತ್ತವರ ಸಿದ್ಧಾಂತಿಗಳು ಭಾರತದ ಮೇಲೆ ನಡೆದ ಎಲ್ಲಾ ಪರಕೀಯರ ದಾಳಿಗಳನ್ನು ಎದುರಿಸಲು ಹಿಂದೂ ರಾಜರು ಇದೇ ಬಾವುಟವನ್ನೇ ಬಳಸಿದ್ದರು ಎಂದು ಯಾವುದೇ ಪುರಾವೆಯಿಲ್ಲದೆ ಪ್ರತಿಪಾದಿಸುತ್ತಾರೆ. ಅದು ಸಹಜವೇ ಅಗಿದೆ. ಏಕೆಂದರೆ ಸಂಘಪರಿವಾರದ ಯಾವುದೇ ಪ್ರತಿಪಾದನೆಗಳಿಗೆ ಅವರ ನಂಬಿಕೆಯೇ ಪುರಾವೆಯೇ ಹೊರತು ಸಾಕ್ಷ್ಯಾಧರಗಳು ಇರುವುದಿಲ್ಲ.
ಆದರೆ ಪರಕೀಯರಾದ ಆರ್ಯರ ದಾಳಿ ನಡೆಸಿದಾಗ ಇಲ್ಲಿನ ಮೂಲನಿವಾಸಿ ದ್ರಾವಿಡರು ಅಥವಾ ಆರ್ಯರಿಗೆ ಮುಂಚೆಯೇ ಇಲ್ಲಿಗೆ ವಲಸೆ ಬಂದಿದ್ದ ಮೂಲ ಜನಾಂಗದವರು ಯಾವ ಬಾವುಟವನ್ನಿಟ್ಟುಕೊಂಡು ವಿರೋಧಿಸಿದರು ಎಂಬ ಪ್ರಶ್ನೆಗೂ ಅವರ ಬಳಿ ಉತ್ತರವಿರುವುದಿಲ್ಲ. ಎಲ್ಲಕ್ಕಿಂತ ಮುಕ್ಯವಾಗಿ ಮುಘಲರ ಸಾಮ್ರಾಜ್ಯದ ವಿರುದ್ಧ ನಡೆದ ಎಲ್ಲಾ ಸಾಮಂತರ ಬಂಡಾಯಗಳನ್ನು ಮುಸ್ಲಿಂ ಆಳ್ವಿಕೆಯ ವಿರುದ್ಧದ ಹಿಂದೂ ಬಂಡಾಯವೆಂದೇ ಕಥೆ ಕಟ್ಟುವ ಆರೆಸ್ಸೆಸ್ , ಇತಿಹಾಸಕ್ಕೆ ಹೋಗಿ ಆ ಎಲ್ಲಾ ರಾಜರಿಗೂ ಭಗವಧ್ವಜವನ್ನು ಕೊಟ್ಟು ಬಂದಿದೆ!
ಅವರ ಪ್ರಕಾರ ಈ ದೇಶದ ಗುಲಾಮಗಿರಿಯೆಂದರೆ ಬ್ರಿಟಿಷ್ ದಾಸ್ಯವಲ್ಲ. ಮುಸ್ಲಿಮ್ ಆಳ್ವಿಕೆ ಮತ್ತು ಮುಸ್ಲಿಮರು ಈ ದೇಶದವರಲ್ಲ. ಹಾಗೆಯೇ ಕ್ರಿಶ್ಚಿಯನ್ನರು ಕೂಡ. ಈ ದೇಶದ ಚರಿತ್ರೆಯಲ್ಲಿ ನಾವು ವೈಭವದ ಯುಗವೆಂದು ಪರಿಗಣಿಸಬೇಕಿರುವುದು ಹಾಗೂ ಪುನರ್ ಸ್ಥಾಪಿಸಬೇಕಿರುವುದು ಬುದ್ಧಧರ್ಮವನ್ನು ನಾಶ ಮಾಡಿದ ಗುಪ್ತರ ಕಾಲದ ಬ್ರಾಹ್ಮಣ್ಯವನ್ನು. ಹೀಗಾಗಿ ಭಗವಾಧ್ವಜವೇ ಅವರ ಚರಿತ್ರೆ ಹಾಗೂ ಭವಿಷ್ಯದ ಆಶಯಗಳ ಸಂಕೇತ. ಆದ್ದರಿಂದ ಅವರು ಪ್ರತಿಪಾದಿಸುತ್ತಿರುವುದು ಸನಾತನ ಭಗವಾಧ್ವಜವನ್ನೂ ಅಲ್ಲ. ಆರೆಸ್ಸೆಸ್ ಮಾರ್ಪಡಿಸಿರುವ ಭಗವಾಧ್ವಜವನ್ನು! ಹೀಗೆ ಸ್ವತಂತ್ರ ಭಾರತದ ಧ್ವಜ ಮತ್ತು ಭಗವಾಧ್ವಜಗಳು ಎರಡು ತದ್ವಿರುದ್ಧ ಆಶಯ, ಚರಿತ್ರೆ ಮತ್ತು ಭವಿಷ್ಯಗಳ ಪ್ರತೀಕಗಳೇ ಆಗಿವೆ.ಆದ್ದರಿಂದಲೇ ಸಂಘಪರಿವಾರವು ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆ ನಂತರವು ಸ್ವತಂತ್ರ ಭಾರತ ಧ್ವಜಕ್ಕೆ ನಿರಂತರ ಅವಮಾನವನ್ನೇ ಮಾಡುತ್ತಲೇ ಬಂದಿದೆ.
ಭಾರತದ ಧ್ವಜಕ್ಕೆ ಆರೆಸ್ಸೆಸ್ ಮಾಡುತಲೇ ಇರುವ ಅಪಮಾನದ ಇತಿಹಾಸ
೧೯೩೦ ರಲ್ಲಿ ಕಾಂಗ್ರೆಸ್ ಅಧಿವೇಶನವು ಅಧಿಕೃತವಾಗಿ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆಯನ್ನು ನೀಡಿ 1930 ರ ಜನವರಿ 26 ರಂದು ಸ್ವತಂತ್ರ ಭಾರತದ ಘೋಷಣೆಯ ಭಾಗವಾಗಿ ಎಲ್ಲೆಡೆ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸಲು ಕರೆ ನೀಡುತ್ತದೆ.
ಆಗ ಆರೆಸ್ಸೆಸ್ ನ ಮೊದಲ ಸರಸಂಘ ಚಾಲಕ ಹೆಡಗೇವಾರ್ ಅವರು: “ಕೊನೆಗೂ ನಮ್ಮ ಘೋಷಣೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದ್ದಕ್ಕೆ ನಾವು ಅಭಿನಂದಿಸುತ್ತೇವೆ. ಹೀಗಾಗಿ ನಮ್ಮ ಎಲ್ಲಾ ಶಾಖಾ ಕಚೇರಿಗಳಲ್ಲೂ ಭಗವಾಧ್ವಜವನ್ನು ಹಾರಿಸಬೇಕೆಂದು*” ಅದೇಶಿಸುತ್ತಾರೆ! 1947 ರ ಸೆಪ್ಟೆಂಬರ್ನಲ್ಲಿ ಬಿಜೆಪಿಯ ಪಿತಾಮಹ ಶಾಮ ಪ್ರಸಾದ್ ಮುಖರ್ಜಿಯವರು ನೆಹರೂ ಮಂತ್ರಿಮಂಡಲದ ಸದಸ್ಯರಾಗಿದ್ದರೂ ತಮ್ಮ ಅಧಿಕೃತ ನಿವಾಸದ ಮೇಲೆ ಭಾರತದ ಬಾವುಟವನ್ನು ಹರಿಸದೆ ಹಿಂದೂ ಮಹಾ ಸಭಾದ ಬಾವುಟವನ್ನು ಹಾರಿಸುತ್ತಾರೆ.
ಅದೇ ವರ್ಷ ನವಂಬರ್ನಲ್ಲಿ ಸಂಘಪರಿವಾರದ ಮುಖಪತ್ರಿಕೆ ಆರ್ಗನೈಸರ್ ನಲ್ಲಿ ಬರೆಯಲಾದ ಸಂಪಾದಕೀಯವೊಂದು: “ವಿಧಿಯಾಟದ ಭಾಗವಾಗಿ ಅಧಿಕಾರ ಪಡೆದುಕೊಂಡಿರುವ ಇಂದಿನ ಸರ್ಕಾರವು ತ್ರಿವರ್ಣ ಧ್ವಜವನ್ನು ಭಾರತದ ರಾಷ್ರಧ್ವಜವನ್ನಾಗಿ ಅಂಗೀಕರಿಸಿದೆ. ಆದರೆ ಭಾರತದ ಜನರೆಂದೂ ತ್ರಿವರಣ ಧ್ವಜವನ್ನು ತಮ್ಮ ಬಾವುಟವನ್ನಾಗಿ ಅಂಗೀಕರಿಸಲಾರರು. ಏಕೆಂದರೆ ಮೂರು ಎಂಬ ಸಂಖ್ಯೆ ಭಾರತೀಯರ ಪಾಲಿಗೆ ಕೆಟ್ಟ ಶಕುನವಾಗಿದೆ ” ಎಂದೆಲ್ಲ ಬರೆಯುತ್ತಾರೆ. ತ್ರಿಶೂಲ, ತ್ರಿಮೂರ್ತಿ ಎಂದೆಲಾ ತ್ರಿವಳಿಗಳನ್ನೇ ಆರಾಧಿಸುವ ಹಿಂದೂ ಧರ್ಮದ ವಕ್ತಾರರು ನೀಡಿದ ಹೇಳಿಕೆಯಿದು.
ಸ್ವಾತಂತ್ರ್ಯಾ ನಂತರದಲ್ಲೂ ಮುಂದುವರೆದ ದೇಶದ್ರೋಹ- ಧ್ವಜದ್ರೋಹ
ಹೀಗೆ ಭಾರತ ರಾಷ್ಟ್ರ ಮತ್ತು ರಾಷ್ಟ್ರಧ್ವಜದ ಬಗ್ಗೆ ಸಂಘಪರಿವಾರದ ತಿರಸ್ಕಾರ ಮತ್ತು ಭಾರತವನ್ನು ಹಿಂದೂರಾಷ್ಟ್ರ ಅರ್ಥಾತ್ ಬ್ರಾಹ್ಮಣ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನಗಳು 47 ರ ನಂತರವೂ ಮುಂದುವರೆಯಿತು. ಹಾಗೆ ನೋಡಿದರೆ 2002 ರ ವರೆಗೂ ಆರೆಸ್ಸೆಸ್ ಕಚೇರಿಗಳ ಮೇಲೆ ಭಾರತದ ಬಾವುಟ ಹಾರಾಡಲೇ ಇರಲಿಲ್ಲ. 2001 ರಲ್ಲಿ “ರಾಷ್ಟ್ರಪ್ರೇಮಿ ಯುವದಳ ” ಎಂಬ ಸಂಘಟನೆಯ ಕಾರ್ಯಕರ್ತರು ಆರೆಸ್ಸೆಸ್ ನ ನಾಗಪುರದ ಪ್ರಧಾನ ಕಚೇರಿಯ ಮೇಲೆ ಬಲವಂತವಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅವರನ್ನು ಹಿಡಿದು ಆರೆಸ್ಸೆಸ್ ನ ದೇಶಭಕ್ತ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು.
ಆ ನಂತರ 2002 ರಲ್ಲಿ ಮೊದಲ ಬಾರಿಗೆ ಆರೆಸ್ಸೆಸ್ ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.
ಏಕೆ ಹೀಗೆ? 2002 ರಲ್ಲಿ ವಾಜಪೇಯಿ ಸರ್ಕಾರ ರಾಷ್ಟ್ರಧ್ವಜವನ್ನು ಖಾಸಗಿಯವರು ಹಾರಿಸಬಹುದೆಂದು ಭಾರತದ ಧ್ವಜ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಖಾಸಗಿ ವ್ಯಕ್ತಿ-ಸಂಘಟನೆಗಳು ರಾಷ್ಯ್ರಧ್ವಜವನ್ನು ಹಾರಿಸುವಂತಿರಲಿಲ್ಲವಾದ್ದರಿಂದ ಆವರೆಗೆ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂಬ ಸಬೂಬನ್ನು ಆರೆಸ್ಸೆಸ್ ನೀಡುತ್ತದೆ. ಆದರೆ ಭಾರತದ 1955 ರ ಭಾರತದ ರಾಷ್ಟ್ರ ಧ್ವಜದ ನಿಯಮಗಳಾಗಲೀ, 1971 ರ ನಿಯಮಗಳಾಗಲೀ ಖಾಸಗಿ ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ಮಾತ್ರ ನಿಷೇಧಿಸುತ್ತವೆ.
ಅರ್ಥಾತ್ .. ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ ಇನ್ನಿತ್ಯಾದಿ ಆರು ದಿನಗಳಂದು ಎಲ್ಲಾ ವ್ಯಕ್ತಿಗಳೂ ಹಾಗೂ ಸಂಘಟನೆಗಳು ತಮ್ಮ ಮನೆ ಮತ್ತು ಕಚೇರಿಗಳ ಮೇಲೆ ರಾಷ್ರಧ್ವಜವನ್ನು ಹಾರಿಸಲು ಅನುಮತಿಸುತ್ತದೆ. ಆದರೂ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ರಧ್ವಜದ ಬದಲಿ ಭಗ್ವಾಧ್ವಜ ಮಾತ್ರ ಹಾರುತ್ತಿರುವುದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ. 2002 ರ ತನಕ ತಮ್ಮ ಕಚೇರಿಗಳ ಮೇಲೆ ಉದ್ದೇಶಪೂರ್ವಕವಾಗಿ ರಾಷ್ಟ್ರ ಧ್ವಜ ಹಾರಿಸದ ಈ ಸಂಘೀ ಗಳು 1994 ರಲ್ಲಿ ಹುಬ್ಬಳ್ಳಿಯಲ್ಲಿ ಅಂಜುಮಾನ್ ಮೈದಾನದ ಮೇಲೆ, ಶ್ರೀನಗರದ ಲಾಲ್ ಚೌಕಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದರು.
ಅದರ ಹಿಂದೆ ಭಾರತದ ಧ್ವಜವನ್ನು ಕೂಡಾ ಭಗವಾಧ್ವಜದ ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶವೇ ಇತ್ತು. ರಾಷ್ಟ್ರಭಕ್ತಿಯಲ್ಲ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply