ನ್ಯೂಡೆಲ್ಲಿ : ಗೌತಮ್ ಅದಾನಿ ಮತ್ತು ಆ ಗುಂಪಿನ ಇತರೆ ಆರು ಸದಸ್ಯರ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅದಾನಿ ಗುಂಪಿನ ವಿರುದ್ಧದ ಆರೋಪಗಳು ಮತ್ತು ಹಗರಣಗಳನ್ನು ಪರಿಶೀಲಿಸಬೇಕಿದೆ. ಅದಾನಿ ಗ್ರೂಪ್ನ ಚರಿತ್ರೆಯಲ್ಲವೂ ಹಗರಣಗಳ ಚರಿತ್ರೆಯೇ ಆಗಿದೆ. ಹಾಗೂ ಭ್ರಷ್ಟಾಚಾರದ ಆರೋಪಗಳಿಂದ ಕೂಡಿದೆ. ಅಲ್ಲದೇ ಪರಿಸರಕ್ಕೆ ಹಾನಿ ಮಾಡುವ ಯೋಜನೆಗಳು, ಪಿತೂರಿಗಳು ಮತ್ತು ಕುತಂತ್ರಗಳಿಂದ ತುಂಬಿದೆ. ಇತ್ತೀಚೆಗೆ ಅಮೆರಿಕದ ಹೂಡಿಕೆದಾರರನ್ನು ದಾರಿತಪ್ಪಿಸಿದ್ದಾರೆಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿರುವುದೇ ಇವುಗಳ ಪಾರಾಕಷ್ಠೆ.
ಅಮೆರಿಕ ನ್ಯಾಯಾಲಯದ ದೋಷಾರೋಪಣೆಯ ಪರಿಣಾಮವು ತಕ್ಷಣವೇ ಕಂಡುಬಂದಿದೆ. ಅದಾನಿ ಸಮೂಹದ ಕಂಪನಿಗಳ ಷೇರುಗಳು ಕೂಡಲೇ ಕುಸಿದವು. ಅದಾನಿ ಎಂಟರ್ ಪ್ರೈಸಸ್ ಶೇರುಗಳು ಶೇ.23ರಷ್ಟು ಇಳಿಕೆ ಕಂಡರೆ, ಇತರೆ ಕಂಪನಿಗಳ ಷೇರುಗಳು ಶೇ.20ರಿಂದ 90ರಷ್ಟು ಕುಸಿತ ಕಂಡಿವೆ. ಗುರುವಾರ ಬೆಳಗ್ಗೆ ನಡೆದ ವಹಿವಾಟಿನಲ್ಲಿ 2800 ಕೋಟಿ ಡಾಲರ್ ಗಳಷ್ಟು ನಷ್ಟ ಸಂಭವಿಸಿದೆ. ಆಗಸ್ಟ್ 2023 ರಲ್ಲಿ, ಅದಾನಿ ಕುಟುಂಬವು ವಿದೇಶಿ ಹಣವನ್ನು ಬಳಸುತ್ತಿದೆ ಎಂದು OCRP ವರದಿ ಆರೋಪಿಸಿತು. ಕಳೆದ ವರ್ಷ ಜನವರಿಯಲ್ಲಿ, ಅಮೆರಿಕ ಮೂಲದ ಅದಾನಿ ಗ್ರೂಪ್ ಅನ್ನು ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹಿಂಡೆನ್ಬರ್ಗ್ ಸಂಶೋಧನಾ ವರದಿ ಆರೋಪ ಮಾಡಿದೆ. ವಿದೇಶಗಳಲ್ಲಿ ತೆರಿಗೆಗಳಿಗೆ ಸ್ವರ್ಗಧಾಮಗಳಂತಿರುವ ಪ್ರದೇಶಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.
ದೊಡ್ಡ ದೊಡ್ಡ ಹಗರಣಗಳು ಮತ್ತು ಆರೋಪಗಳು..
2023 ಜನವರಿ – ಹಿಂಡೆನ್ಬರ್ಗ್ ಸಂಶೋಧನಾ ವರದಿ: ಅದಾನಿ ಗ್ರೂಪ್ ಬೃಹತ್ ಪ್ರಮಾಣದಲ್ಲಿ ಸ್ಟಾಕ್ ಹಗರಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅಮೇರಿಕನ್ ಕಂಪನಿ ಹಿಂಡೆನ್ಬರ್ಗ್ ರಿಸರ್ಚ್ ಆರೋಪ ಮಾಡಿದೆ. ದಶಕಗಳಿಂದ ಈ ಅನೀತಿ ಮತ್ತು ಭ್ರಷ್ಟಾಚಾರವನ್ನು ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದು ಸಮರ್ಥನೀಯವಲ್ಲದ ಹೆಚ್ಚಿನ ಸಾಲದ ಹೊರೆಯಿಂದ ತತ್ತರಿಸಿದೆ. ಮತ್ತು ವಿದೇಶಿ ತೆರಿಗೆ ಸ್ವರ್ಗಧಾಮಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಟೀಕಿಸಿದೆ.
2023 ಆಗಸ್ಟ್ : OCRP ವರದಿ: ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCRP) ಅದಾನಿ ಕುಟುಂಬ ಮತ್ತು ಅವರ ಸಹಚರರು ಭಾರತೀಯ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿ ಅದಾನಿ ಸಮೂಹದ ಕಂಪನಿಗಳಲ್ಲಿ ವಿದೇಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿ ವರದಿಯನ್ನು ಬಿಡುಗಡೆ ಮಾಡಿದೆ.
2024 ನವೆಂಬರ್ – ಅಮೆರಿಕ ನ್ಯಾಯಾಲಯ ದೋಷಾರೋಪ, ಸಿವಿಲ್ ಕೇಸ್: 26 ಮಿಲಿಯನ್ ಡಾಲರ್ ಗೂ ಅಧಿಕ ಆಮಿಷ ಒಡ್ಡಿ, ಭಾರತ ಉಪಖಂಡದಲ್ಲಿ ಸೌರವಿದ್ಯುತ್ ಯೋಜನೆಗಳನ್ನು ಮಾಡುತ್ತಿರುವುದನ್ನು ಮುಚ್ಚಿಟ್ಟು ಅಮೆರಿಕದ ಹೂಡಿಕೆದಾರರಿಗೆ ವಂಚಿಸಿದ್ದ ಗೌತಮ್ ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಎಂಟು ವರ್ಷಗಳಲ್ಲಿ ಅದಾನಿ ಸಮೂಹದ ಅಕ್ರಮಗಳ ಬಗ್ಗೆ ಸಾರ್ವಜನಿಕರ ಪ್ರತಿಭಟನೆ.. 2017- ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆ: ಅದಾನಿ ಎಂಟರ್ಪ್ರೈಸಸ್ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಸುಮಾರು 1100 ಕೋಟಿ ವೆಚ್ಚದಲ್ಲಿ ಕಾರ್ಮೈಕಲ್ ಕಲ್ಲಿದ್ದಲು ಗಣಿತ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಈ ಯೋಜನೆಯು ಹವಾಮಾನ ಕಾರ್ಯಕರ್ತರಿಂದ ತೀವ್ರ ವಿರೋಧವನ್ನು ಎದುರಿಸಿದೆ. ಈ ಪ್ರಾಜೆಕ್ಟ್ ನಿಂದ ಬಿಡುಗಡೆಯಾಗುವ ಇಂಗಾಲದ ಹೊರಸೂಸುವಿಕೆಯಿಂದಾಗಿ, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ಗೆ ಗಂಭೀರ ಹಾನಿಯಾಗುವ ಅಪಾಯವಿದೆ ಎಂದು ವ್ಯಾಪಕ ಪ್ರತಿಭಟನೆಗಳು ಮತ್ತು ಆಂದೋಲನಗಳು ನಡೆದಿವೆ.
2017 – ಗೊಡ್ಡಾ ಪವರ್ ಪ್ಲಾಂಟ್: ಅದಾನಿ ಸಮೂಹವು ಜಾರ್ಖಂಡ್ನ ಗೊಡ್ಡಾದಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದೆ. ಇದಕ್ಕಾಗಿ ಬಾಂಗ್ಲಾದೇಶದೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಬುಡಕಟ್ಟು ಹಕ್ಕುಗಳ ಉಲ್ಲಂಘನೆಯಿಂದಾಗಿ ಈ ಒಪ್ಪಂದವು ಬಾಂಗ್ಲಾದೇಶ ಮತ್ತು ಜಾರ್ಖಂಡ್ ಎರಡರಲ್ಲೂ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.
2021 – ಯಾಂಗೋನ್ ಬಂದರು: ಮ್ಯಾನ್ಮಾರ್ನ ಯಾಂಗೋನ್ ನಗರದಲ್ಲಿ ಕಂಟೈನರ್ ಟರ್ಮಿನಲ್ ನಿರ್ಮಿಸುವ ಅದಾನಿ ಪೋರ್ಟ್ಸ್ ಯೋಜನೆಯನ್ನು ಅಂತರರಾಷ್ಟ್ರೀಯ ಹೂಡಿಕೆದಾರರು ಪರಿಶೀಲಿಸಿದ್ದಾರೆ. ಮ್ಯಾನ್ಮಾರ್ ಮಿಲಿಟರಿಗೆ ಸೇರಿದ ಸಂಸ್ಥೆಗಳಿಂದ ಗುತ್ತಿಗೆ ಪಡೆದ ಭೂಮಿಯಲ್ಲಿ ಅದನ್ನು ನಿರ್ಮಿಸಲು ಹೊರಟಿರುವುದೇ ಇದಕ್ಕೆ ಕಾರಣ. ಆ ನಂತರ, ಮ್ಯಾನ್ಮಾರ್ನಲ್ಲಿ ಮಿಲಿಟರಿ ದಂಗೆ ನಡೆದು ನೂರಾರು ಜನರು ಮೃತಪಡುವಂತಹ ಸ್ಥತಿ ನಿರ್ಮಾಣವಾಯಿತು.
2022 – ಶ್ರೀಲಂಕಾ ವಿಂಡ್ ಪವರ್ ಪ್ರಾಜೆಕ್ಟ್: ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ನಿರ್ಮಿಸಲಿರುವ ಯೋಜನೆಗಳ ಮೂಲಕ ಶ್ರೀಲಂಕಾ ಸರ್ಕಾರಕ್ಕೆ ಪವನ ಶಕ್ತಿಯನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಅದಾನಿ ಗ್ರೀನ್ ಸಹಿ ಹಾಕಿದೆ. ಪರಿಸರ ಕಾರ್ಯಕರ್ತರು ಮತ್ತು ಸ್ಥಳೀಯರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದು ಜೀವ ವೈವಿಧ್ಯತೆ ಮತ್ತು ಸ್ಥಳೀಯರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 2023 – ಧಾರಾವಿ ಪುನರಾಭಿವೃದ್ಧಿ ಯೋಜನೆ: ಏಷ್ಯಾದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾದ ಮುಂಬೈನ ಧಾರಾವಿಯಲ್ಲಿ 259 ಹೆಕ್ಟೇರ್ ಅಭಿವೃದ್ಧಿ ಯೋಜನೆಯನ್ನು ನವೆಂಬರ್ 2022 ರಲ್ಲಿ, ಅದಾನಿ ಪ್ರಾಪರ್ಟೀಸ್ ವಹಿಸಿಕೊಂಡಿದೆ. ಇದನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.
ಈ ಯೋಜನೆಯ ಬಿಡ್ಗಳಲ್ಲಿ ಸರ್ಕಾರ ಅದಾನಿ ಗುಂಪಿಗೆ ಆದ್ಯತೆ ನೀಡುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಅದಾನಿ ನಿವಾಸದಲ್ಲಿ ಸಭೆ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.
2024 ಸೆಪ್ಟೆಂಬರ್ – ನೈರೋಬಿ ವಿಮಾನ ನಿಲ್ದಾಣ: ಅದಾನಿ ಗ್ರೂಪ್ ಜೊತೆಗೆ ಕೀನ್ಯಾ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮಾಡಿಕೊಂಡಿರುವ ಒಪ್ಪಂದವನ್ನು ನೂರಾರು ಕಾರ್ಮಿಕರು ಪ್ರತಿಭಟಿಸಿದರು. ಈ ಒಪ್ಪಂದದ ಅಡಿಯಲ್ಲಿ, ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳವರೆಗೆ ಗುತ್ತಿಗೆ ಪಡೆದು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಅದಾನಿ ಗ್ರೂಪ್ ತೆಗೆದುಕೊಳ್ಳುತ್ತದೆ. ಇದರಿಂದ ಉದ್ಯೋಗ ಕಡಿತವಾಗಲಿದೆ ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ.
Leave a reply