ಭೋಪಾಲ್ : ಮಧ್ಯಪ್ರದೇಶದ ವಿಜರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ನಂತರ ಕೆಲವು ಪುಂಡರು ದುಷ್ಕೃತ್ಯವೆಸಗಿದ್ದಾರೆ. ಹಿಂಸಾಚಾರವನ್ನು ಸೃಷ್ಟಿಸಿದ್ದಾರೆ. ಓಟು ಹಾಕಿಲ್ಲ ಎಂಬ ಕಾರಣಕ್ಕೆ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಲಾಗಿದೆ. ಶಿಯೋಪುರ ಜಿಲ್ಲೆಯ ವಿಜರುಪುರದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದಾರೆ. ಪೊಲೀಸರು ಮತ್ತು ಸ್ಥಳೀಯರ ಹೇಳಿಕೆ ಪ್ರಕಾರ.. ಉಪಚುನಾವಣೆ ಬುಧವಾರ ನಡೆಯಿತು. ನಂತರ ದಲಿತರೇ ಹೆಚ್ಚಾಗಿರುವ ಗೊಹ್ತಾ ಗ್ರಾಮದಲ್ಲಿ ಕೆಲವು ಪುಂಡರು ಸಾಕಷ್ಟು ಅವಾಂತರ ಸೃಷ್ಟಿಸಿದ್ದರು. ಬುಧವಾರ ಮಧ್ಯರಾತ್ರಿ ದಲಿತರನ್ನು ಗುರಿಯಾಗಿಸಿಕೊಂಡು ಅವರ ಮನೆಗಳಿಗೆ ಬೆಂಕಿ ಹಚ್ಚಿ. ಕಲ್ಲು ತೂರಾಟ ನಡೆಸಿದ್ದಾರೆ. ಟ್ರಾನ್ಸ್ ಫಾರ್ಮರ್ ಸುಟ್ಟು ಹಾಕಿದ್ದಾರೆ.
ಸುಮಾರು 200 ಮಂದಿ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಲ್ಲದೆ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸಹ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಉಭಯ ಪಕ್ಷಗಳ ನಡುವಿನ ವಿವಾದದ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂದು ಶಿಯೋಪುರ್ ಎಸ್ಪಿ ವೀರೇಂದ್ರ ಜೈನ್ ಹೇಳಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸುಟ್ಟು ಕರಕಲಾದ ವಸ್ತುಗಳನ್ನು ಗುರುತಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೂರು ಬಂದಿಲ್ಲ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿದೆ. ಆದರೆ, ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯನ್ನು ಅಧಿಕಾರಿಯೊಬ್ಬರು ಕ್ಷುಲ್ಲಕ ಎಂದು ತೇಲಿಸಿಬಿಡಲು ಯತ್ನಿಸಿದರು.
ಅದನ್ನು ಚುನಾವಣೆ ಸಂಬಂಧಿತ ಹಿಂಸಾಚಾರ ಎಂದು ತೋರಿಸಲು ಪ್ರಯತ್ನಿಸಿದರು. ಚುನಾವಣೆಯಲ್ಲಿ ಇಂತಹ ಗಲಭೆಗಳು ಸಹಜ, ಇದರಲ್ಲಿ ಯಾವುದೇ ಗಂಭೀರ ಅವಾಂತರ ನಡೆಯುವುದಿಲ್ಲ ಎಂದರು. ಅಧಿಕೃತ ದೂರು ಬಂದ ನಂತರವಷ್ಟೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಘಟನೆಯಲ್ಲಿ ಯಾರನ್ನೂ ಬಂಧಿಸದಿರುವುದು, ಈ ಘಟನೆ ಕುರಿತು ಪೋಲಿಸರು ವರ್ತಿಸುತ್ತಿರುವ ರೀತಿ ಹಲವಾರು ಅನುಮಾನಗಳಿಗೆ ದಾರಿಯಾಗಿದೆ ಎಂದು ದಲಿತರು, ದಲಿತ ಸಮುದಾಯಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಿವಾಸಿಗಳು ಮತ್ತು ದಲಿತರ ಮನೆಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಆರೋಪಿಸಿದ್ದಾರೆ. ಆದರೆ, ಬಿಜೆಪಿ ರಾಜ್ಯಾದ್ಯಕ್ಷ ವಿ.ಡಿ.ಶರ್ಮಾ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರು ಮತ್ತು ಆದಿವಾಸಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ದಲಿತ ಮತ್ತು ಬುಡಕಟ್ಟು ಸಮುದಾಯಗಳ ಮುಖಂಡರು ಹಾಗೂ ಸಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
Leave a reply