ಕೊಪ್ಪಳ : ದಶಕದ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಜಾತಿ ಘರ್ಷಣೆಗೆ ಸಂಬಂಧಿಸಿದಂತೆ ಗಂಗಾವತಿ ತಾಲೂಕಿನ ಮರಕುಂಬಿಯ 98 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಹಾಗೂ ಮೂರು ಜನ ಅಪರಾಧಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ, ತಲಾ ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಾದ
ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 101 ಆರೋಪಿಗಳ ಶಿಕ್ಷೆಯ ಪ್ರಕಟಣೆಯನ್ನು ಕಾಯ್ದಿರಿಸಿದ್ದ ನ್ಯಾಯಾಧೀಶರು ಗುರುವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ದಶಕಗಳ ಹಿಂದೆ ಗಂಗಾವತಿಯಲ್ಲಿ ಸಿನಿಮಾ ನೋಡಲು ಹೋಗಿದ್ದಾಗ ಟಿಕೆಟ್ ವಿಷಯದಲ್ಲಿ ಜಗಳ ನಡೆದು, ಅದು ಘರ್ಷಣೆಗೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 117 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಇದರಲ್ಲಿ 101 ಜನರ ಮೇಲಿನ ಆರೋಪ ದೃಢಪಟ್ಟಿದೆ. ಒಟ್ಟು 117 ಮಂದಿ ಅಪರಾಧಿಗಳಲ್ಲಿ 101 ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು, ಉಳಿದ 16 ಮಂದಿ ಅಪರಾಧಿಗಳಲ್ಲಿ ಕೆಲವರು ಮೃತಪಟ್ಟಿದ್ದಾರೆ. ಐದು ವರ್ಷ ಶಿಕ್ಷೆಯಾಗಿರುವ ಮೂವ್ವರು ಅಪರಾಧಿಗಳು sc/st ಆಗಿರುವುದರಿಂದ ಅವರಿಗೆ ಜಾತಿ ನಿಂದನೆ ಕಾಯ್ದೆ ಅನ್ವಯ ಆಗುವುದಿಲ್ಲ ಎನ್ನಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ ಎಸಗಿ ದಲಿತರ ನಾಲ್ಕು ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ದಲಿತರ ಬದುಕು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿತ್ತು..
ಇಲ್ಲಿಯವರೆಗೂ ವಿಚಾರಣೆ ನಡೆದು ಅಕ್ಟೋಬರ್ 21 ರಂದು 101 ಜನ ಆರೋಪಿಗಳು ಅಪರಾಧಿಗಳು ಅಂತ ನ್ಯಾಯಾಧೀಶರು ಘೋಷಣೆ ಮಾಡಿದ್ದರು. ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು. ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಶಿಕ್ಷೆಯ ಆದೇಶ ಆಗಿದೆ.
2014 ರ ಆಗಸ್ಟ್ 28 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದವರು ನಗರದಲ್ಲಿ ಪವರ್ ಸಿನಿಮಾ ನೋಡಲು ಮಂಜುನಾಥ ಮತ್ತು ಸಂಗಡಿಗರು ಹೋಗಿದ್ದರು. ಈ ಸಮಯದಲ್ಲಿ ಮಂಜುನಾಥ ಮೇಲೆ ಹಲ್ಲೆಯಾಗಿತ್ತು. ನಮ್ಮೂರಿನ ದಲಿತರೇ ಹಲ್ಲೆ ಮಾಡಿಸಿದ್ದಾರೆ ಅಂತ ಮಂಜುನಾಥ ಗ್ರಾಮದ ಜನರಿಗೆ ಹೇಳಿದ್ದನು. ಊರಿನ ಜನ ಆತನ ಮಾತು ನಂಬಿ ಮಂಜುನಾಥನ ಪರವಾಗಿ ದಲಿತರು ವಾಸಿಸುವ ಓಣಿಯ ಮೇಲೆ ಭಯಾನಕ ರೀತಿಯ ಹಲ್ಲೆ ಮಾಡಿದ್ದರು. ಅನೇಕ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಗುಡಿಸಲು ಸುಟ್ಟು ಬೂದಿಯಾಗಿದ್ದವು. ಅತ್ಯಂತ ನಿರ್ದಯವಾಗಿ ಕ್ರೌರ್ಯ ಎಸಲಾಗಿತ್ತು. ಈ ಬಗ್ಗೆ ಭೀಮೇಶ್ ಅನ್ನೋರು ದೂರು ನೀಡಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ದಲಿತರ ಮೇಲೆ ಅವ್ಯಾಹತವಾಗಿ ಹಲ್ಲೆಗಳು ನಡೆಯುತ್ತಿವೆ. ದಾಖಲಾಗಿರುವ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ದಾಖಲಾದ ಒಟ್ಟು ಪ್ರಕರಣಗಳನ್ನು ಲೆಕ್ಕ ಹಾಕಿದರೆ ಸರಾಸರಿ ವಾರಕ್ಕೊಂದು ದೌರ್ಜನ್ಯ ಪ್ರಕರಣವು ಜಿಲ್ಲೆಯಲ್ಲಿ ನಡೆಯುತ್ತಿದೆ. ಜಿಲ್ಲಾಡಳಿತ ಮೂಕ ಪ್ರೇಕ್ಷಕನಂತೆ ಸುಮ್ಮನಿದೆ. ಸುಪ್ರೀಂ ಕೋರ್ಟಿನ ಆದೇಶದನ್ವಯ ಕನಿಷ್ಠ ವರ್ಷಕ್ಕೆ ನಾಲ್ಕು ಸಭೆಗಳನ್ನು ಮಾಡಿದ ಉದಾಹರಣೆಯೂ ಇಲ್ಲವಾಗಿದೆ.
ದಲಿತರ ಮೇಲೆ ಇಷ್ಟೆಲ್ಲಾ ದೊಡ್ಡ ಸಂಖ್ಯೆಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆಯೇ ಆಗಿರುತ್ತದೆ. ಉದಾಹರಣೆಗೆ ; ಕಂಬಾಳಪಲ್ಲಿಯಲ್ಲಿ ದಲಿತರ ಮಾರಣಹೋಮ ನಡೆದು ದೇಶವನ್ನೇ ಬೆಚ್ವಿ ಬೀಳಿಸಿದ್ದರೂ ಅಪರಾಧಿಗಳಿಗೆ ಶಿಕ್ಷೆಯಾಗದೇ ಪ್ರಕರಣವೇ ಕುಲಾಸೆಗೊಂಡಿದ್ದು ದುರಂತವೇ ಸರಿ. ಅನೇಕ ಪ್ರಕರಣಗಳನ್ನು ಪೊಲೀಸ್ ಠಾಣೆಯ ಮೆಟ್ಟಿಲೇರಲು ಬಿಡುವುದೇ ಇಲ್ಲ. ಪ್ರಕರಣ ದಾಖಲಾಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಪ್ರಕರಣ ದಾಖಲಾದ ಮೇಲೆ ಒತ್ತಡ ಹೇರಿ ರಾಜಿ ಮಾಡಿಸುವ ಮತ್ತು ಪ್ರಕರಣ ಹಿಂತೆಗೆದುಕೊಳ್ಳುವಂತೆ ಮಾಡಲಾಗುತ್ತದೆ. ಅಧಿಕಾರಿಗಳು ಉಳ್ಳವರು ಹೇಳಿದಂತೆ ಕೆಲಸ ಮಾಡುವ ಕವಲೆತ್ತುಗಳಾಗಿದ್ದಾರೆ. ಇಂಥ ಸಂದರ್ಭದಲ್ಲಿ ಬಂದಿರುವ ಈ ತೀರ್ಪು ಐತಿಹಾಸಿಕವಾಗಿ ತುಂಬ ಮಹತ್ವದ್ದಾಗಿದೆ. ದೊಡ್ಡ ಸಂಖ್ಯೆಯ ಆರೋಪಿಗಳನ್ನು ಅಪರಾಧಿಗಳು ಎಂದು ಹೇಳುವ ಈ ತೀರ್ಪು ಭಾರತದ ನ್ಯಾಯಾಂಗ ಇತಿಹಾಸದ ಪುಟ ಮಗ್ಗಲು ಬದಲಿಸುವಂತೆ ಮಾಡಿದೆ. ಚರಿತ್ರೆಯೇ ಬದಲಾಗುವಂಥ ತೀರ್ಪನ್ನು ನ್ಯಾಯಾಧೀಶರು ಕೊಟ್ಟಿದ್ದಾರೆ.
Leave a reply