ಕೊಪ್ಪ : ಕರ್ನಾಟಕ ರಾಜ್ಯವು 65 ಮಿಲಿಯನ್ ಗೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. 2000 ವರ್ಷಗಳಿಗೂ ಹೆಚ್ಚಿನ ಇತಿಹಾಸ, ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯೂ ಇಂಡಿಯಾ ಒಕ್ಕೂಟದ ಸಂವಿಧಾನಿಕ ಮಾನ್ಯತೆಯನ್ನು ಪಡೆದಿದೆ. ಫೆಡರಲ್ ರಿಪಬ್ಲಿಕ್ ಆಫ್ ಇಂಡಿಯಾದ ಅಧಿಕೃತ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದೆಂದು ಪರಿಗಣಿಸಲಾಗಿದೆ. ಹೀಗಿರುವಾಗ, ಕನ್ನಡ ಭಾಷೆಯ ಮೇಲೆ, ಕನ್ನಡ ನಾಡು, ನುಡಿ, ಸಂಸ್ಕೃತಿ, ಆರ್ಥಿಕತೆಯ ಮೇಲೆ ಕೇಂದ್ರದ ಏಕಾಧಿಪತ್ಯವನ್ನು ಹೇರುವುದರ ಭಾಗವಾಗಿ ಕನ್ನಡ ಭಾಷೆಯ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ ಎಂದು ಕೊಪ್ಪ ಕನ್ನಡಪರ ಸಂಘಟನೆಗಳು, ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.
‘ಹಿಂದಿ ದಿವಸ್’ ಅಭಿಯಾನವನ್ನು ಕನ್ನಡದ ನೆಲದಲ್ಲೂ ಸೆಪ್ಟೆಂಬರ್, 14ರಂದು ಆಚರಿಸುತ್ತಿರುವುನ್ನು ಖಂಡಿಸಿವೆ. ಇದು ಕನ್ನಡ ನಾಡಿನ ಜನರ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆಗೆ ಧಕ್ಕೆ ತರುವ ವಿಚಾರವಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ನಾಡಿನ ಸ್ವಾಭಿಮಾನಕ್ಕೆ ಮಾರಕವಾಗಿರುವ ‘ಹಿಂದಿ ದಿವಸ್’ ಆಚರಣೆಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿದೆ.
ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶದೊಳಗೆ ಬ್ಯಾಂಕ್ /ಅಂಚೆ/ವಿಮಾ ಕಚೇರಿಗಳಲ್ಲಿ ವ್ಯವಹಾರ ವಹಿವಾಟುಗಳನ್ನು ನಡೆಸುವಾಗ ಕನ್ನಡ ಭಾಷಾ ಬಳಕೆಗೆ ಮೊದಲ ಆದ್ಯತೆ ನೀಡದೆ ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತಿದೆ . ಇದಲ್ಲದೆ ಹಿಂದಿ ಭಾಷೆಯನ್ನು ಬ್ಯಾಂಕ್, ಅಂಚೆ ಕಚೇರಿ, ಜೀವವಿಮಾ ವ್ಯವಹಾರಗಳಲ್ಲಿ ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರಲಾಗುತ್ತಿದೆ. ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಹಿಂದಿ ಭಾಷೆಯನ್ನು ಹೇರುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಬೆಳೆಯುತ್ತಿದೆ ಎಂದು ಆರೋಪಿಸಿವೆ.
ಕರ್ನಾಟಕವು ಫೆಡರಲ್ ರಿಪಬ್ಲಿಕ್ ಆಫ್ ಇಂಡಿಯಾ ಒಕ್ಕೂಟದ ಸದಸ್ಯ ರಾಜ್ಯವಾಗಿದ್ದು ತನ್ನದೇ ಆದ ಭಾಷೆ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದೆ. ಇಂಡಿಯಾ ಒಕ್ಕೂಟದ ಸಂವಿಧಾನವು ನಮ್ಮ ಭಾಷೆಯ ರಕ್ಷಣೆ ಹಾಗೂ ಬೆಳವಣಿಗೆಯನ್ನು ಖಾತ್ರಿಪಡಿಸಿದೆ. ಹೀಗಿದ್ದಾಗಲೂ ಸಾರ್ವಜನಿಕ ಸಂಸ್ಥೆಯಲ್ಲಿ ಕನ್ನಡ ಬಳಸದೆ ವ್ಯವಸ್ಥಿತವಾಗಿ ನಿರ್ಲಕ್ಷಿಸುವ ಮೂಲಕ ಕರ್ನಾಟಕದ ಕೋಟ್ಯಾಂತರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ.
ಕನ್ನಡಿಗರ ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳಿಗೆ ಹಾಗೂ ಗ್ರಾಹಕರ ಹಕ್ಕುಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಹಿಂದಿ ಹೇರಿಕೆಯ ವಿಚಾರವು ಕನ್ನಡಿಗರ ಅಸಮಧಾನಕ್ಕೆ ಕಾರಣವಾಗಿದೆ. ಹಿಂದಿ ಭಾಷೆಯು ಕನ್ನಡದ ಅಥವಾ ಕರ್ನಾಟಕಕ್ಕೆ ಯಜಮಾನ ಭಾಷೆಯಲ್ಲ ಎಂಬುದನ್ನು ಘೋಷಿಸುತ್ತಾ ಈ ಕೆಳಕಂಡ ವಿಚಾರಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಕ್ರಮ ವಹಿಸಬೇಕೆಂದು ಆಗ್ರಹಿಸಿವೆ.
1) ಕರ್ನಾಟಕದಲ್ಲಿ ಸಾರ್ವಜನಿಕರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರಗಳು, ಅರ್ಜಿ ಫಾರಂಗಳು, ಚಲನ್ ಗಳು, ಡಿಜಿಟಲ್ ಬೋರ್ಡ್ ಗಳು, ನಾಮಫಲಕಗಳು, ಎಟಿಎಂ ಮೆಷಿನ್ ಗಳು, ಘೋಷಣೆಗಳು, ಎಸ್ ಎಂ ಎಸ್ ಸಂದೇಶಗಳು, ಸಾರ್ವಜನಿಕ ಪ್ರಕಟಣೆಗಳಲ್ಲಿ ಹಿಂದಿ ಭಾಷೆಯನ್ನು ಬಳಸಕೂಡದು. ಈ ಎಲ್ಲ ವಿಭಾಗಗಳಲ್ಲೂ ಕಡ್ಡಾಯವಾಗಿ ಕನ್ನಡ ಬಳಸಬೇಕು.
2). ಕನ್ನಡ ಭಾಷೆ ತಿಳಿಯದವರಿಗೆ ಕರ್ನಾಟಕದ ಶಾಖೆಗಳಲ್ಲಿ ಕೆಲಸ ಮಾಡಲು ಅವಕಾಶವಿರಕೂಡದು.
3)ಹಿಂದಿ ದಿವಸ್ ಆಚರಣೆ, ಹಿಂದಿ ಕಲಿಕೆಗೆ ಪ್ರೋತ್ಸಾಹ ಮುಂತಾದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಮಾರಕವಾಗುವ ಚಟುವಟಿಕೆಗಳನ್ನು ಕರ್ನಾಟಕದಲ್ಲಿ ಮುಂದುವರೆಸಕೂಡದು.
4)ಕರ್ನಾಟಕ ಭೌಗೋಳಿಕ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಭರ್ತಿ ಮಾಡಲು ಪ್ರತ್ಯೇಕ ನೇಮಕಾತಿ ನಿಯಮ ರೂಪಿಸಿ, ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಮೂಲಕ ನೇಮಕಾತಿ ಮಾಡಬೇಕು.
5) ಕರ್ನಾಟಕ ಜನತೆಯು ಶ್ರಮದಿಂದ ಕಟ್ಟಿ ಬೆಳೆಸಿರುವ ಬ್ಯಾಂಕ್ ಗಳನ್ನು ಉತ್ತರ ಭಾರತದ ಬ್ಯಾಂಕುಗಳ ಜೊತೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು.
6) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಗಳ ವಿಲೀನ ರದ್ದುಪಡಿಸಿ ಅವುಗಳನ್ನು ಕನ್ನಡಿಗರಿಗೆ ಹಿಂದಿರುಗಿಸಬೇಕು.
– ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯವಹರಿಸುವುದಾಗಿ ಹಾಗೂ ಹಿಂದಿ ಹೇರಿಕೆ ಮಾಡದಿರುವ ಬಗ್ಗೆ ಇಲ್ಲಿನ ನಾಗರಿಕರಿಗೆ ಖಚಿತಪಡಿಸಲು ಬ್ಯಾಂಕ್/ಅಂಚೆ/ವಿಮಾ ಸಂಸ್ಥೆಗಳು ಒಂದು ಬಹಿರಂಗ ಪ್ರಕಟಣೆ ನೀಡಬೇಕು. ಈ ವಿಚಾರಗಳ ಜಾರಿಗಾಗಿ ಕೊಪ್ಪದಲ್ಲಿರುವ ಬ್ಯಾಂಕ್, ಅಂಚೆ, ವಿಮಾ ಕಚೇರಿಗಳ ಮುಖ್ಯಸ್ಥರು, ಕನ್ನಡಪರ ಸಂಘಟನೆಗಳು, ಜನಪರ ಹೋರಾಟಗಾರರ ಒಂದು ಜಂಟಿ ಸಭೆ ಕರೆದು ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕೆಂದು, ಆದೇಶಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿವೆ.
ಈ ಕುರಿತು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ತಾಲ್ಲೂಕು ಕಛೇರಿ ಬಳಿ ಹಿಂದಿ ದಿವಾಸ್ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಆಗ್ರಹ ಪತ್ರ ನೀಡಿದರು. ಪ್ರತಿಭಟನಾ ಸಭೆಯಲ್ಲಿ ಪ್ರಾನ್ಸಿಸ್ ಕಾರ್ಡೊಜ, ಚಂದ್ರಕಲಾ, ಚಾವಲ್ಮನೆ ಸುರೇಶ್ ನಾಯ್ಕ, ನೀಲಗುಳಿ ಪದ್ಮನಾಭ ಮತ್ತಿತರರು ಮಾತನಾಡಿದರು. ಈ ಪ್ರತಿಭಟನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಸಿರಿಗನ್ನಡ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ, ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ, ನುಡಿಕನ್ನಡ ಪುಸ್ತಕ ಮನೆ, ವಿದ್ಯಾಧರ ಕನ್ನಡ ಪ್ರತಿಷ್ಟಾನ, ಕನ್ನಡ ಜಾನಪದ ಪರಿಷತ್ತು ಮತ್ತು ಬಡವರ ಬಂಧು ಸಾಂಸ್ಕೃತಿಕ ವೇದಿಕೆ ಪಾಲ್ಗೊಂಡಿದ್ದವು.
–
Leave a reply