ಬೆಂಗಳೂರು : ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಬಿ.ಜೆ.ಪಿ ಸಂಸದರಾದ ಗೋವಿಂದ ಕಾರಜೋಳ ಮಾತನಾಡುತ್ತಾ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಚಗೊಳಿಸುತ್ತಿರುವ ವೀಡಿಯೋಗಳನ್ನು ನಾನು ನೋಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಪೊರಕೆ ನೀಡುವುದು ಅಪರಾಧ ಎಂಬಂತೆ ಕಾಣುತ್ತಿದ್ದು, ಇದರಿಂದ ಸ್ವಚ್ಚತೆಯ ಕೆಲಸ ಕೀಳು ಎಂಬ ಭಾವನೆ ಮೂಡಿದೆ. ಜಪಾನ್ ನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಚಗೊಳಿಸುತ್ತಾರೆ ಎಂಬುದಾಗಿ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಜನಪ್ರತಿನಿಧಿಯಾಗಿರುವ ಗೋವಿಂದ ಕಾರಜೋಳರ ಈ ಹೇಳಿಕೆಯನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಖಂಡಿಸಿದೆ.
ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿದೆ. ಇದರಿಂದಾಗಿ ದಲಿತ, ಬಡ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಜವಬ್ದಾರಿಯುತ ಜನಪ್ರತಿನಿಧಿಗಳು ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಬೇಕಾಗುವ ಕ್ರಮಗಳ ಬಗ್ಗೆ ಮಾತನಾಡುವ ಬದಲು ಶೌಚಾಲಯ ಸ್ವಚ್ಚಮಾಡಲು ವಿದ್ಯಾರ್ಥಿಗಳನ್ನು ತೊಡಗಿಸುವಂತೆ ಹೇಳಿಕೆ ನೀಡುವದರಿಂದ ದಲಿತ ಬಡ ವಿದ್ಯಾರ್ಥಿಗಳೇ ಇದರಿಂದ ತೊಂದರೆಗೆ ಒಳಾಗಾಗಿ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸುವುದನ್ನು ಈಗಾಗಲೇ ನಿಷೇಧಿಸಿ ಆದೇಶ ಮಾಡಲಾಗಿದೆ. ಹಾಗೂ ಮಕ್ಕಳನ್ನು ಇಂತಹ ಕೆಲಸಗಳಲ್ಲಿ ತೊಡಗಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 17ರ ಉಲ್ಲಂಘನೆಯಾಗುತ್ತದೆ. ಗೋವಿಂದ ಕಾರಜೋಳರ ಈ ಹೇಳಿಕೆ ಅವರು ಮತ್ತು ಅವರ ಪಕ್ಷ ಯಾವ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಬಿ.ಜೆ.ಪಿ ಸರಕಾರದ ಅವಧಿಯಲ್ಲಿ NEP (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಗೆ ತಂದಿದ್ದು ಇದರಲ್ಲಿ ಜಾತಿ ಮತ್ತು ವೃತ್ತಿ ಆಧಾರಿತ ಕುಲ ಕಸುಬನ್ನು ಸಮರ್ಥಿಸಿದ್ದು, ಪೋಷಕರು ಒಂದು ವೃತ್ತಿಯನ್ನು ಮಾಡುತ್ತಿದ್ದರೆ ಅವರ ಮಕ್ಕಳು ಕೂಡಾ ಅದೇ ವೃತ್ತಿಯನ್ನು ಮಾಡಬೇಕು ಎನ್ನುವ ನೀತಿ ಇದೆ. ಈ ರೀತಿಯಲ್ಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಮೂಲಕ ಮನುವಾದಿ ಆಳ್ವಿಕೆಗೆ ಪೂರಕವಾಗುವ ಹೇಳಿಕೆ ಇದಾಗಿದ್ದು, ಸಾಂವಿಧಾನಿಕ ವ್ಯವಸ್ಥೆಯ ಅಡಿಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ವ್ಯಕ್ತಿಯು ಇಂತಹ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಕೂಡಲೇ ಸಂಸದ ಗೋವಿಂದ ಕಾರಜೋಳ ರವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
Leave a reply