ಎಂಥ ಸಂಸ್ಕಾರಿಗಳು
ನಮ್ಮ ಪ್ರಧಾನಿಗಳು…
ಬಿದ್ದುಹೋದ ಪ್ರತಿಮೆಗೆ
ಘಾಸಿಗೊಂಡ ಭಾವನೆಗೆ
ಕ್ಷಮೆ ಕೋರುವಷ್ಟು ಸಂಸ್ಕಾರವಂತರು…
ಹಾಗೆಂದು
ಬಿದ್ದಿದ್ದಕ್ಕೆ ಬೀಳಿಸಿದ್ದಕ್ಕೆ
ಭೋಗಿಸಿದ್ದಕ್ಕೆ
ಕೆಡವಿದ್ದಕ್ಕೆಲ್ಲ ಕ್ಷಮೆ ಕೋರಬೇಕೆಂದೇನೂ
ಕಾನೂನಿಲ್ಲವಲ್ಲ…
ಕೆಲವು ಕ್ಷಮಾ ಸಂಸ್ಕಾರ
ಹಲವು ಸಂಭ್ರಮ ಸಂಸ್ಕಾರ
ಕಾಲಕ್ಕೆ ತಕ್ಕಂತೆ
ಚುನಾವಣ ಸಂಸ್ಕಾರ…
ಹೀಗಾಗಿ
ಕ್ಷಮಾ ಸಂಸ್ಕಾರದ
ನಮ್ಮ ಪ್ರಧಾನಿ…
ಬೀಳಿಸಿದ ಮಸೀದಿಯನ್ನು
ಬೀದಿಗಳಲ್ಲಿ ನಡೆಸಿದ
ನರಮೇಧವನ್ನು ಕೂಡ
ಸಂಭ್ರಮಿಸುವಷ್ಟು
ಸಂಸ್ಕಾರವಂತರು…
ಮಾತೆ ಬಿಲ್ಕಿಸರನ್ನು,
ಕೂಸು ಆಸಿಫಾರನ್ನು
ಸೋದರಿ ಮನಿಷಾರನ್ನು
ಭೋಗಿಸಿ ಕೊಂದ ಕೀಚಕರನ್ನು
ಸನ್ಮಾನಿಸುವಷ್ಟು
ಸಂಸ್ಕಾರವಂತರು….
ದಶಕಗಳಿಂದ ಕಟ್ಟಿದ
ದೇಶವನ್ನು
ದಶದಿಕ್ಕುಗಳಿಂದಲೂ
ಕೆಡುವುದನ್ನು
ಸಂಸ್ಕೃತಿ ಎನ್ನುವಷ್ಟು
ಸಂಸ್ಕಾರವಂತರು..
ಆಹಾ,
ಎಂಥಾ ಭಾಗ್ಯವಂತರು
ಭಾರತೀಯರು
ಎಂಥ ಸಂಸ್ಕಾರವಂತರು
ನಮ್ಮ ಪ್ರಧಾನಿಗಳು….
ಅಂದಹಾಗೆ….
ಪಾಪ ಪುಣ್ಯಗಳ
ತಪ್ಪು ಸರಿಗಳ
ನೀತಿ ನಿಯತ್ತುಗಳ
ಸಂವಿಧಾನ ನೈತಿಕತೆಗಳ
ಯಾವ ಲೆಕ್ಕಕ್ಕೂ ಸಿಗದ
ಇಂಥ ಸಂಸ್ಕಾರಗಳ
ನಿಜಾರ್ಥವೇನು?
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply