ಪರಿಶಿಷ್ಟರೊಳಗೆ ಒಳಮೀಸಲಾತಿಯ ಅಗತ್ಯದ ಬಗ್ಗೆ ಸುಪ್ರೀಂ ತೀರ್ಪು ಬಂದ ನಂತರ ಇದ್ದ ಗೊಂದಲಗಳು ಬಗೆಹರಿಯುವ ಬದಲು ಹೆಚ್ಚಾದಂತೆ ಕಾಣುತ್ತಿದೆ. ಇವುಗಳಲ್ಲಿ ಬಹಳಷ್ಟು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ತಮ್ಮ ನಿಶ್ಕ್ರಿಯತೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಹುಟ್ಟಿಸಿರುವ ಗೊಂದಲಗಳು. ಉದಾಹರಣೆಗೆ ’ಕೆನೆ ಪದರ’ದ ಬಗ್ಗೆ ಪೀಠದಲ್ಲಿದ್ದ ಕೆಲವು ನ್ಯಾಯಾಧೀಶರು ಅನಗತ್ಯವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ರಾಜಕೀಯ ಪಕ್ಷಗಳು ಅಗತ್ಯಕ್ಕಿಂತ ಹೆಚ್ಚಾಗಿ ಚರ್ಚೆ ತಂದಿರುವುದು ಮತ್ತು ಆ ಮೂಲಕ ಅದು ಆದೇಶದ ಭಾಗವೇನೋ ಎಂಬ ಕಳವಳಕ್ಕೆ ಇನ್ನಷ್ಟು ಬೆಂಕಿ ಹಾಕಿ ಇಡೀ ಒಳಮೀಸಲಾತಿ ಪರ ಆದೇಶದ ಬಗ್ಗೆಯೇ ನಕಾರಾತ್ಮಕ ಅಭಿಪಾಯ ಸೃಷ್ಟಿಸಿರುವುದು. ಆದರೂ ಈ ವಿದ್ವಾಂಸರ ಗ್ರಹಿಕೆಯಲ್ಲೂ ಮತ್ತು ಆಗಸ್ಟ್ 21 ರ ಒಳಮೀಸಲಾತಿ ವಿರೋಧಿ ಪ್ರತಿರೋಧ ನಡೆಸಿದ ದಲಿತ ಸಂಘಟನೆಗಳು ಎತ್ತಿರುವ ಪ್ರಶ್ನೆಗಳಲ್ಲೂ ಕೆಲವು ತಪ್ಪು ಮಾಹಿತಿ, ಪೂರ್ವಗ್ರಹ ಹಾಗೂ ತಪ್ಪು ರಾಜಕೀಯ-ಸೈದ್ಧಾಂತಿಕ ನಿಲುವುಗಳು ಕಾಣುತ್ತವೆ.
ಪ್ರಶ್ನಿಸುತ್ತಿರುವ ಮಿತ್ರರ ಪ್ರಶ್ನೆ-ಪೂರ್ವಗ್ರಹಗಳನ್ನು ಹೀಗೆ ಪಟ್ಟಿ ಮಾಡಬಹುದು:
1.ಪರಿಶಿಷ್ಟ ವರ್ಗೀಕರಣವಾಗಿರುವುದೇ ಅಸ್ಪೃಶ್ಯತೆ ಮತ್ತು ಅತ್ಯಂತ ಹಿಂದುಳಿದಿರುವಿಕೆಯ ಆಧಾರದಲ್ಲಿ. ಹೀಗಾಗಿ ಪರಿಶಿಷ್ಟ ಜಾತಿಗಳನ್ನು ಏಕರೂಪಿ ಸಮುದಾಯ ಎಂದು ಪರಿಗಣಿಸಬೇಕೇ ವಿನಾ ಅವುಗಳಲ್ಲಿ ಇರುವ ಭಿನ್ನತೆಯನ್ನು ಮುಂದು ಮಾಡಿ ಒಡೆಯಬಾರದು. 2.ಒಳಮೀಸಲಾತಿಯು ಐಕ್ಯತೆಯನ್ನು ಮುರಿಯುವ ಐಡೆಂಟಿಟಿ ರಾಜಕಾರಣದ ಮುಂದುವರೆಕೆ. 3.ಒಳಮೀಸಲಾತಿಯು ಮೀಸಲಾತಿಯನ್ನೇ ರದ್ದು ಮಾಡುವ ಬಿಜೆಪಿ ರಾಜಕಾರಣದ ಮುಂದುವರೆಕೆ. ಏಕೆಂದರೆ ಒಳ ಮೀಸಲಾತಿಯನ್ನು ಯಾರೂ ಕೇಳಿರಲಿಲ್ಲ. 4.ಒಳಮೀಸಲಾತಿಯಿಂದ ದಲಿತರಲ್ಲಿ ಒಡಕಾಗುತ್ತದೆ. ಐಕ್ಯ ಹೋರಾಟಕ್ಕೆ ಅಡ್ಡಿಯಾಗುತ್ತದೆ. ಈ ಪ್ರಶ್ನೆಗಳು ಕೊಡುವ ಎಚ್ಚರವನ್ನು ಮತ್ತು ಕಾಳಜಿಯನ್ನು ಒಪ್ಪಿಕೊಳ್ಳುತ್ತಲೇ, ಈ ಪ್ರಶ್ನೆಗಳು ಗಮನಿಸದ ಕೆಲವು ಐತಿಹಾಸಿಕ ಮತ್ತು ರಾಜಕೀಯ ವಿಷಯಗಳನ್ನು ಗಮನಿಸೋಣ.
ಮೇಲಿನ ಎಲ್ಲಾ ಪ್ರಶ್ನೆಗಳ ಮೂಲ ಈ ದೇಶದ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆಯ ವಿಸ್ತಾರ ಮತ್ತು ಆಳವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿದೆ. ಜಾತಿ ಎಂಬುದು ಮೇಲು-ಕೀಳೆಂಬ ಶ್ರೇಣೀಕರಣವಿರದೆ ಅಸ್ಥಿತ್ವದಲ್ಲಿ ಇರಲು ಸಾಧ್ಯವಿಲ್ಲ. ಅದಕ್ಕೆ ಅಂಬೇಡ್ಕರ್ ಅದನ್ನು ” *ಹಂತಹಂತಗಳ ಅಸಮಾನತೆ”* ಎಂದೂ ಬಣ್ಣಿಸುತ್ತಾರೆ. ಮತ್ತು ” *ಮೇಲಿರುವವರು ಎಂದೂ ಕೆಳಗಿಳಿಯದ, ಕೆಳಗಿರುವವರು ಎಂದೂ ಮೇಲಕ್ಕೆ ಹತ್ತಲಾಗದ ಏಣಿಯಿಲ್ಲದ ಮಹಡಿ”* ಎಂದು ವಿವರಿಸುತ್ತಾರೆ. ಪರಿಶಿಷ್ಟ ಜಾತಿಗಳು ಎಂದು ಒಟ್ಟು ಸೇರಿಸಲ್ಪಟ್ಟ ಜಾತಿಗಳ ನಡುವೆಯೂ ಈ ಬಗೆಯ ಶ್ರೇಣೀಕರಣವು ಇಲ್ಲವೇ?
ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲ್ಪಡಲು ಅಸ್ಪೃಷ್ಯತೆ ಒಂದು ಪ್ರಧಾನ ಮಾನದಂಡವೆಂದು ಪರಿಗಣಿಸಲಾಗುತ್ತದೆ ಮತ್ತು ಅಸ್ಪೃಷ್ಯತೆಯನ್ನು ಒಳಗೆ ಭಿನ್ನರೂಪತೆಯಿಲ್ಲದ ಅತ್ಯಂತಿಕ ತಾರತಮ್ಯ ಎಂದು ಪರಿಗಣಿಸಲಾಗುತ್ತದೆ. 2004 ರಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದಲ್ಲಿ ಒಳಮೀಸಲಾತಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವೂ ಇದೇ ವಾದವನ್ನು ಮುಂದಿಟ್ಟಿತ್ತು. ಆದರೆ ಈ ಗ್ರಹಿಕೆ ತಪ್ಪೆಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಪೀಠ, ಅದಕ್ಕೆ ಹಲವಾರು ಐತಿಹಾಸಿಕ ಹಾಗೂ ಸಮಕಾಲೀನ ಪುರಾವೆಗಳನ್ನು ಒದಗಿಸುತ್ತದೆ.
ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳನ್ನು ಘೋಷಿಸುವ ಆರ್ಟಿಕಲ್ 341 ಆಗಲೀ, ಆರ್ಟಿಕಲ್ 366 (24) ಆಗಲೀ ಯಾರು ಪರಿಶಿಷ್ಟ ಜಾತಿಗಳು ಎಂಬ ಬಗ್ಗೆ ಖಚಿತವಾದ ಮಾನದಂಡಗಳನ್ನು ಒದಗಿಸುವುದಿಲ್ಲ. ಸಂವಿಧಾನವು ಜಾರಿಯಾದ ಮೇಲೆ ರಾಷ್ಟ್ರಪತಿಗಳು ಆರ್ಟಿಕಲ್ 341 ರಂತೆ 1950 ರಲ್ಲಿ ಘೋಷಿಸಿದ ಪರಿಶಿಷ್ಟರ ಪಟ್ಟಿ ಬ್ರಿಟಿಶರು 1935 ರ ಗವರ್ನ್ಮೆಂಟ್ ಆಫ಼್ ಇಂಡಿಯಾ ಆಕ್ಟ್ – 1935 ರಲ್ಲಿ ಸೂಚಿತವಾದ ವಿಧಿಗಳಂತೆ 1936 ರಲ್ಲಿ ಘೋಷಿಸಿದ ” *ಗವರನ್ಮೆಂಟ್ ಆಫ್ ಇಂಡಿಯಾ (ಶೆಡ್ಯೂಲ್ಡ್ ಕಾಸ್ಟ್ಸ್) ಆರ್ಡರ್- 1936* ಅನ್ನೇ ಆಧರಿಸಿತ್ತು.
1936 ರಲ್ಲಿ ಬ್ರಿಟಿಷರು ರೂಪಿಸಿಕೊಂಡ ಪರಿಶಿಷ್ಟ ಮಾನದಂಡಗಳಿಗೆ ಒಂದು ಇತಿಹಾಸವಿದೆ.
ಬ್ರಿಟಿಷ್ ಭಾರತದ ಪ್ರಾಂತ್ಯಗಳಲ್ಲಿ ಮೀಸಲಾತಿಯ ಚರ್ಚೆ 1916 ರಿಂದ ಪ್ರಾರಂಭವಾದರೂ ಕೊಲ್ಲಾಪುರದಲ್ಲಿ ಶಾಹು ಮಹಾರಾಜ್ ಮತ್ತು ಒಡೆಯರ್ ಅವರು ಮೈಸೂರು ಪ್ರಾಂತ್ಯದಲ್ಲಿ ಶೋಷಿತ ಜಾತಿಗಳನ್ನು ಗುರುತಿಸಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒದಗಿಸುವ ಪ್ರಯತ್ನ ಪ್ರಾರಂಭಿಸಿದ್ದರು. ಅವುಗಳ ಒತ್ತು ಪ್ರಧಾನವಾಗಿ ಇತರ ಅಬ್ರಾಹ್ಮಣ ಸವರ್ಣೀಯ ಜಾತಿಗಳಿಗೆ ಮೀಸಲಾತಿ ಒದಗಿಸುವುದೇ ಆಗಿದ್ದರೂ ಆಗ ಹಿಂದೂ ಸವರ್ಣೀಯ ಚೌಕಟ್ಟಿನೊಳಗೆ ಬಾರದ ಪ್ರಧಾನವಾಗಿ ಅಸ್ಪೃಷ್ಯ ಜಾತಿಗಳಿಗೂ ಮೀಸಲಾತಿಯನ್ನು ಕೊಡುವ ಪ್ರಾಥಮಿಕ ಪ್ರಯತ್ನಗಳಿದ್ದವು. ಆಗ ಅಸ್ಪೃಷ್ಯ ಜಾತಿಗಳನ್ನು ಡಿಪ್ರೆಸ್ಡ್ ಕ್ಲಾಸ್ – Depressed Classes ಎಂದು (ವಂಚಿತ ವರ್ಗಗಳು) ಕರೆಯಲಾಗುತ್ತಿತ್ತು.
1916 ರಲ್ಲಿ ಬ್ರಿಟಿಷ್ ಭಾರತೀಯ ಪ್ರಾಂತ್ಯಗಳಲ್ಲಿ ಮೊದಲ ಬಾರಿಗೆ ಡಿಪ್ರೆಶ್ಡ್ ಕ್ಲಾಸ್ ಎಂದು ಯಾರನ್ನು ಕರೆಯಬೇಕೆಂಬ ಚರ್ಚೆ ಶುರುವಾಗುತ್ತದೆ. ಆದಿವಾಸಿಗಳು, ಅಲೆಮಾರಿ-ಅಪರಾಧಿ ಬುಡಕಟ್ಟುಗಳು ಮತ್ತು ಅಸ್ಪೃಷ್ಯರನ್ನು ದಿಪ್ರೆಸ್ಡ್ ಕ್ಲಾಸ್ ಎಂದು ಪರಿಗಣಿಸಬೇಕೆಂಬ ಅಭಿಮತ ರೂಪುಗೊಳ್ಳುತ್ತದೆ. ಈ ಚರ್ಚೆಯ ಮುಂದುವರೆಕಯಾಗಿ ಅಗಿನ ಬ್ರಿಟಿಷ್ ಶೈಕ್ಷಣಿಕ ಕಮಿಷನರ್ ಹೆನ್ರಿ ಶಾರ್ಪ್ ಡಿಪ್ರೆಶ್ದ್ ಕ್ಲಾಸ್ ಎಂಬ ವರ್ಗೀಕರಣದಲ್ಲಿ ಸವರ್ಣೀಯ ಜಾತಿ ಚೌಕಟ್ಟಿನಿಂದ ಸಂಪೂರ್ಣ ಹೊರಗಿರದ ಆದರೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಆದಿವಾಸಿ, ಬುಡಕಟ್ಟು ಮತ್ತು ಕ್ರಿಮಿನಲ್ ಬುಡಕಟ್ಟುಗಳ ಯಾದಿಯನ್ನು ಸೇರಿಸುತ್ತಾರೆ. 1919 ರಲ್ಲಿ ಸೌತ್ಬರೋ ಅಯೋಗ ಡಿಪ್ರೆಶ್ದ್ ಕ್ಲಾಸ್ ಎನ್ನಲು ಅಸ್ಪೃಷ್ಯತೆಯನ್ನು ಮಾನದಂಡವಾಗಿ ಬಳಸುತ್ತದೆ.
1931 ರಲ್ಲಿ ಸೆನ್ಸಸ್ ಕಮಿಷನರ್ ಹಟ್ಟನ್, ಯಾರ ಮುಟ್ಟುವಿಕೆಯಿಂದ ಸವರ್ಣೀಯ ಸಮಾಜದವರು ಮಲಿನಗೊಂಡವೆಂದು ಭಾವಿಸಿ ಪರಿಶುದ್ದಿಕರಣಗೊಳ್ಳಬೇಕೆಂದು ಭಾವಿಸುತ್ತಾರೋ ಅವರೇ ಅಸ್ಪೃಶ್ಯರೆಂಬ ಮಾನದಂಡವನ್ನು ರೂಪಿಸುತ್ತದೆ. ಅದರ ನಿಗದಿಗಾಗಿ ಒಂಭತ್ತು ಸಾಮಾಜಿಕ ಅಭ್ಯಾಸಗಳನ್ನು ಅದು ಪರಿಗಣಿಸಬೇಕೆಂದು ಸೂಚಿಸುತ್ತದೆ. ಉದಾಹರಣೆಗೆ, ಆ ಸಮುದಾಯವು ಕೊಡುವ ನೀರನ್ನು ಸವರ್ಣೀಯ ಸಮಾಜ ಬಳಸುತ್ತದೆಯೇ, ಬ್ರಾಹ್ಮಣರು ಆ ಸಮುದಾಯಕ್ಕೆ ಧಾರ್ಮಿಕ ಸೇವೆಗಳನ್ನು ಕೊಡುತ್ತರೆಯೇ? ಸಮಾಜದ ಕ್ಶೌರಿಕ, ಮಡಿವಾಳ ಇತರ ಸಮುದಾಯಗಳು ಆ ಸಮುದಾಯಕ್ಕೆ ಸೇವೆಯನ್ನು ಮಾಡುತ್ತರೆಯೇ ಇಲ್ಲವೆ ಎಂಬ ಮಾನದಂಡಗಳ ಜೊತೆ ಅಸ್ಪೃಶ್ಯತೆಯ ಮೂಲದಿಂದಲ್ಲದಿದ್ದರೂ, ಅವರು ಮಾಡುವ ವೃತ್ತಿ ಇನ್ನಿತ್ಯಾದಿ ಕಾರಣಗಳಿಗಾಗಿ ಮಾತ್ರ ಮುಟ್ಟಿಸಿಕೊಳ್ಳದ ವರ್ಗಗಳನ್ನು ಕೂಡ ಅಸ್ಪೃಶ್ಯರೆಂದು ವರ್ಗೀಕರಿಸಬಹುದೆಂದು ಅದು ಘೋಷಿಸುತ್ತದೆ.
ಆಗಿನ ಅವಿಭಜಿತ ಅಸ್ಸಾಮ್ ಕಮಿಷನರ್ ಕೊಟ್ಟ ವರದಿಯಲ್ಲಿ ಅಸ್ಪೃಷ್ಯ ಎಂದು ಪರಿಗಣಿಸಲ್ಪಟ್ಟ ಜಲ್-ಚಲ್ ಜಾತಿಗಳು ಅನುಭವಿಸುವ ಅಸ್ಪೃಷ್ಯತೆಗೂ ಮಹರ್ ರಿಗೂ ವ್ಯತ್ಯಾಸವಿರುವುದನ್ನು ದಾಖಲಿಸುತ್ತದೆ. ಅದೇ ರೀತಿ ಬಿಹಾರ ಒರಿಸ್ಸಾ, ಗಳೂ ಕೊಡ ತಮ್ಮ ಪ್ರಾಂತ್ಯಗಳಲ್ಲಿನ ಅಸ್ಪೃಷ್ಯತೆಯೂ ಮದ್ರಾಸ್ ಪ್ರಾಂತ್ಯದಲ್ಲಿರುವ ಅಥವಾ ಇಡಿ ದಕ್ಷಿಣ ಭಾರತದಲ್ಲಿರುವ ಅಸ್ಪೃಷ್ಯತೆಯಷ್ಟು ತೀವ್ರವಾಗಿಲ್ಲ ಎಂದು ದಾಖಲಿಸುತ್ತಾರೆ.
ಫ್ರಾಂಚೈಸಿ ಸಮಿತಿಯ ಸದಸ್ಯರಾದ ರಾಂಬೆ, ಚಿಂತಾಮಣಿ ಮತ್ತು ಬಖಾಲೆಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸ್ಪೃಷ್ಯತೆಯು ಮದ್ರಾಸ್, ಮುಂಬೈ ಮತ್ತು ಸೆಂಟ್ರಲ್ ಪ್ರಾಂತ್ಯಗಳಲ್ಲಿ ಮಾತ್ರ ಅಸ್ಥಿತ್ವದಲ್ಲಿದೆಯೆಂದೂ, ಉಳಿದ ಕಡೆ ಇರುವ ಅಸ್ಪೃಷ್ಯತೆಯು ಹುಟ್ಟಿನ ಕಾರಣದಿಂದಲ್ಲದೇ, ವೃತ್ತಿಯ ಕಾರಣದಿಂದ ಮಾತ್ರ ಅಸ್ಥಿತ್ವದಲ್ಲಿದೆಯೆಂದೂ ವಾದಿಸುತ್ತಾರೆ. ಆದ್ದರಿಂದ ಅವರನ್ನು ಅಸ್ಪೃಷ್ಯರೆಂದು ಪರಿಗಣಿಸಬಾರದೆಂದು ಪ್ರತಿಪಾದಿಸುತ್ತಾರೆ.
ಆಗ ಈ ವಾದದಲ್ಲಿ ಮಧ್ಯಪ್ರವೇಶ ಮಾಡುವ ಡಾ. ಅಂಬೇಡ್ಕರ್ ಅವರು ಅಸ್ಪೃಷ್ಯತೆಯ ಬಗ್ಗೆ ಸಮಾನ ಮಾನದಂಡಗಳನ್ನು ಹೇರುವುದು ತಪ್ಪೆಂದೂ, ಕಠಿಣ ಅಸ್ಪೃಷ್ಯತೆ ಅನುಭವಿಸುವವರು ಮಾತ್ರ ಅಸ್ಪೃಶ್ಯರೆಂದು ಪರಿಗಣಿಸುವುದು ತಪ್ಪು. ಏಕೆಂದರೆ ಅವರೆಲ್ಲರೂ ಮುಟ್ಟಿಸಿಕೊಳ್ಳುವುದು ಪಾಪ ಎಂಬ ಸಮಾನ ಬ್ರಾಹ್ಮಣವಾದಿ ಗ್ರಹಿಕೆಯ ಬಾಧಿತರೇ ಆಗಿರುತ್ತರೆಂದು ಸ್ಪಷ್ಟಪಡಿಸುತ್ತಾರೆ.
ಅಷ್ಟು ಮಾತ್ರವಲ್ಲ. 1950 ರಲ್ಲಿ ಪರಿಶಿಷ್ಟ ಪಟ್ಟಿಯನ್ನು ಮೊಟ್ಟ ಮೊದಲಿಗೆ ರಾಷ್ಟ್ರಪತಿಗಳು ಘೋಷಿಸಿದಾಗ (ಇಂದಿನ) ಮಧ್ಯಪ್ರದೇಶದಲ್ಲಿ 25 ಜಾತಿಗಳನ್ನು ಪರಿಶಿಷ್ಟರೆಂದು ವರ್ಗೀಕರಿಸಿದ್ದರೂ ಅದರಲ್ಲಿ ಒಂಭತ್ತು ಜಾತಿಗಳು ಮಾತ್ರ ರಾಜ್ಯಾದ್ಯಂತ ಎಸ್ಸಿ ಎಂದು ವರ್ಗೀಕರಿಸಲ್ಪಡುತ್ತವೆ. ಹೀಗಾಗಿ ಅಸ್ಪೃಷ್ಯತೆಯೇ ಎಸ್ಸಿ ವರ್ಗೀಕರಣಕ್ಕೆ ಮಾನದಂಡವಾದರೂ, ಅಸ್ಪೃಶ್ಯತೆಯ ತೀವ್ರತೆಯಲ್ಲಿ ಮತ್ತು ಅದರ ಬಾಧೆಯಲ್ಲಿ ಭಿನ್ನತೆ ಇರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಹೀಗಾಗಿ ಎಸ್ಸಿ ಒಳಗಿನ ಜಾತಿಗಳನ್ನು ಏಕರೂಪಿಯಾದ ಬಾಧಿತರೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಆದೇಶ ಸ್ಪಷ್ಟಪಡಿಸುತ್ತದೆ.
ಮೀಸಲಾತಿಯ ಮಿತಿಗಳೇನೇ ಇದ್ದರೂ ಪರಿಶಿಷ್ಟ ಜಾತಿಗಳೊಳಗಿನ ಕೆಲವು ಜಾತಿಗಳು ಹಲವು ಐತಿಹಾಸಿಕ ಕಾರಣಗಳಿಗಾಗಿಯೇ ಉಳಿದ ಪರಿಶಿಷ್ಟ ಸೋದರರಿಗಿಂತ ಹೆಚ್ಚಿನ ಅಸ್ಪೃಶ್ಯತೆ ಮತ್ತು ಹಿಂದುಳಿದಿರುವಿಕೆಯನ್ನು ಅನುಭವಿಸುತ್ತಾ ಬಂದಿರುವುದು ಸ್ಪಷ್ಟ. ಮತ್ತು ವಾಸ್ತವ. ಹೀಗಾಗಿಯೇ 1990 ರ ದಶಕದಿಂದಲೂ ದಕ್ಷಿಣ ಭಾರತದ ಆವಿಭಜಿತ ಆಂಧ್ರ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಸಮುದಾಯಗಳು, ಆರುಂಧತಿಯಾರ್ ಸಮುದಯಗಳು ಒಳಮೀಸಲಾತಿಗಾಗಿ ದಶಕಗಳಿಂದ ಬೀದಿಗಳಲ್ಲಿ ಹೋರಾಡುತ್ತಾ ಬಂದಿವೆ.
ಹೀಗಾಗಿ ಒಳಮೀಸಲಾತಿ ಎಂಬುದು ಶೋಶಿತರಲ್ಲಿ ಶೋಷಿತರ ಸಂಘಟಿತಾ ಆಗ್ರಹವಾಗಿದೆ. ಉತ್ತರ ಭಾರತದ ದಲಿತ ಬಂಧುಗಳಲ್ಲಿ ಈ ಹೋರಾಟಗಳ ಬಗ್ಗೆ ಮಾಹಿತಿಯ ಕೊರತೆ ಅವರು ಕೊಡುತ್ತಿರುವ ಹೇಳಿಕೆಗಳಲ್ಲಿ ಸ್ಪಷ್ಟವಾಗುತ್ತಿದೆ. ಆದ್ದರಿಂದ ಒಳಮೀಸಲಾತಿ ಶೋಷಿತರ ಹೋರಾಟದ ಬೇಡಿಕೆ. ದಲಿತರನ್ನು ಒಡೆಯಲು ಆಳುವವರ್ಗ ತನ್ನಂತೆ ತಾನೇ ಕೊಡುತ್ತಿರುವ ಭಿಕ್ಷೆಯಲ್ಲ. ಆದರೂ ಇದರಲ್ಲಿ ದಲಿತರನ್ನು ಒಡೆದಾಳುವ ಕುತಂತ್ರ ಇಲ್ಲ ಎಂದೇನೂ ಅಲ್ಲ. ಅದನ್ನು ಬಿಜೆಪಿ ಒಂದು ರೀತಿಯಲ್ಲಿ ಕಾಂಗ್ರೆಸ್ ಮತ್ತೊಂದು ರೀತಿಯಲ್ಲಿ ಮಾಡಿಕೊಳ್ಳುತ್ತಲೇ ಬಂದಿದೆ. ಅದರ ನಡುವೆಯೂ ಶೊಷಿತರಿಗೆ ಈ ಜಯ ಸಿಕ್ಕಿದೆ.
*ಐಡೆಂಟಿಟಿ ರಾಜಕಾರಣದ ಅಪಾಯ ಮತ್ತು ಅವಕಾಶ*
ಆದರೂ ಒಳಮೀಸಲಾತಿಯು ದಲಿತ ಎಂಬ ಕಷ್ಟಪಟ್ಟು ಕಟ್ಟಿಕೊಂಡ ಶೋಷಿತರ ಐಡೆಂಟಿಯನ್ನು ಉಪಜಾತಿಗಳಾಗಿ ಒಡೆಯುವುದಿಲ್ಲವೇ? ಆಳುವ ವರ್ಗಗಳು ಶೋಷಿತ ವರ್ಗಗಳ ರಾಜಕಾರಣವನ್ನು ಮುರಿಯಲೆಂದೇ ಐಡೆಂಟಿಟಿ ರಾಜಕಾರಣವನ್ನು ಹುಟ್ಟಿಹಾಕಿದ್ದಲವೇ ಎಂಬ ಆತಂಕದ ಕಾಳಜಿಯನ್ನು ಕೆಲವು ದಲಿತ ಮಿತ್ರರು ಮುಂದಿಡುತ್ತಿದ್ದಾರೆ. ಆದರೆ ಅವರ ವಾದಗಳಲ್ಲಿ ಏಕಮುಖತೆ ಇದೆ.
ಇದನ್ನು ಅಂಬೇಡ್ಕರ್ ಅವರು ಮುಂಬೈ ಗಿರಣಿ ಕಾರ್ಮಿಕ ಐಕ್ಯತೆಯ ವಿಷಯ ಬಂದಾಗ 1939 ರ ಭಾಷಣದಲ್ಲಿ ತುಂಬಾಸ್ಪಷ್ಟವಾಗಿ ವಿವರಿಸುತ್ತಾರೆ. ಮುಂಬೈ ಗಿರಣಿ ಕಾರ್ಮಿಕರೆಲ್ಲರ ಬಾಧೆ ಒಂದೇ ಆಗಿದ್ದರೂ. ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಲು ದಲಿತ ಕಾರ್ಮಿಕರಿಗೆ ನಿರ್ಬಂಧವಿತ್ತು. ನೂಲಿಗೆ ಎಂಜಲು ಹಚ್ಚಿ ಯಂತ್ರಕ್ಕೆ ಸಿಗಿಸುವಂತ ಕೆಲಸಗಳು. ದಲಿತರಿಗೆ ಈ ಕೆಲಸಕ್ಕೆ ಅವಕಾಶ ಮಾಡಿಕೊಡಲು ಉಳಿದ ಸವರ್ಣೀಯ ಕಾರ್ಮಿಕರಿಗೂ ಇಷ್ಟವಿರಲಿಲ್ಲ. ಆಗ ಗಿರಣಿ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಕಮ್ಯುನಿಸ್ಟ್ ಕಾರ್ಮಿಕ ನಾಯಕರು ಕಾರ್ಮಿಕರ ಐಕ್ಯತೆಯನ್ನು ಉಳಿಸಿಕೊಳ್ಳಲು ಈ ಪ್ರಶ್ನೆಯನ್ನು ತಳ್ಳಿಹಾಕಲು ಪ್ರಯತ್ನಿಸುತ್ತಾರೆ. ಎಲ್ಲಿಯತನಕ ಕಾರ್ಮಿಕರೊಳಗೂ ಇರುವ ಈ ಜಾತಿವಾದಿ ಬ್ರಾಹ್ಮಣ್ಯದಿಂದ ಆಗುತ್ತಿರುವ ಅನ್ಯಾಯದೊಳಗಿನ ಒಳ ಅನ್ಯಾಯದ ನಿವಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಕಾರ್ಮಿಕ ಐಕ್ಯತೆ ಸಾಧ್ಯವಾಗುವುದಿಲ್ಲ ಎಂದು ಅಂಬೇಡ್ಕರ್ ಎಚ್ಚರಿಸುತ್ತಾರೆ.
ಸ್ವಾತಂತ್ರ್ಯೋತ್ತರ ಭಾರತದಲ್ಲೂ ಅಸ್ಥಿತ್ವದಲ್ಲಿರುವ ವ್ಯವಸ್ಥೆಯೊಳಗಿರುವ ಜಾತಿಯಾಧಾರಿತ ತಾರತಮ್ಯವನ್ನು ನಿರ್ಲಕ್ಷಿಸಿ, ಅಥವಾ ಕುರುಡಾಗಿ ರಾಷ್ಟ್ರ ಕಟ್ಟುವ, ವರ್ಗ ಆಧಾರಿತ ಐಕ್ಯ ಹೋರಾಟಗಳನ್ನು ಕಟ್ಟುವ ಪ್ರಯತ್ನಗಳು ಮುಂದುವರೆದವು. ಆದರೆ ಜಾತಿ ಎಂಬ ಐಡೆಂಟಿಟಿ ಆಧಾರಿತ ತಾರತಮ್ಯ ವಾಸ್ತವವಾಗಿದ್ದರಿಂದ ಜಾತಿ ಆಧಾರಿತ ಶೋಶಣೆಯ ವಿರುದ್ಧ ಶೋಷಿತ ಜಾತಿ ಉದ್ದೇಶಿತ ಹೋರಾಟಗಳು ಹುಟ್ಟಿಕೊಂಡವು. ಇದು ಶೋಷಿತ ಪ್ರಜ್ನೆಯ ಪ್ರಜಾತಂತ್ರೀಕರಣವೇ ವಿನಾ ಒಡೆದಾಳುವ ಶೋಷಕ ವರ್ಗಗಳ ಐಡೆಂಟಿಟಿ ರಾಜಕಾರಣದ ಹುನ್ನಾರವಲ್ಲ. ಹಾಗೆಯೇ ಪರಿಶಿಷ್ಟ ವರ್ಗದೊಳಗಿನ ಒಳಮೀಸಲಾತಿಗಾಗಿ ಅತಿ ಶೊಷಿತ ಜಾತಿಗಳ ಕೂಗು. ಅದು ಹುಟ್ಟಿರುವುದು ಪರಿಶಿಷ್ಟ ಜಾತಿಗೊಳಗೆ ಸಾಪೇಕ್ಷ ತಾರತಮ್ಯ ಇರುವ ವಾಸ್ತವದಿಂದ.
ಹಾಗೆ ನೋಡಿದರೆ ದಲಿತ ಸಮುದಾಯಗಳೊಳಗೆ ಇರುವ ದಲಿತ ಅಲೆಮಾರಿ ಜಾತಿಗಳು ಉಳಿದೆಲ್ಲಾ ದಲಿತ ಜಾತಿಗಳಿಗಿಂತ ಅತ್ಯಂತ ಅನಾಥರಾಗಿ ಅತ್ಯಂತ ಹಿಂದುಳಿದವರಾಗಿದ್ದಾರೆ. ಈ ತಾರತಮ್ಯವನ್ನು ಸಾಪೇಕ್ಷವಾಗಿ ಮುಂದುವರೆದ ಜಾತಿಗಳು ಮುಂದಾಗಿಯೇ ಗ್ರಹಿಸಿ ಪಾಲನ್ನು ಹಂಚಿಕೊಂಡು ತಿನ್ನಲು ಮುಂದಾಗಿದ್ದರೆ ಆಯಾ ಜಾತಿಗಳು ದಲಿತ ಎನ್ನುವ ಐಡೆಂಟಿಟಿಯಿಂದ ಲಾಭವಿಲ್ಲವೆಂದು ಪ್ರತ್ಯೇಕವಾಗಿ ತಮ್ಮ ಜಾತಿ ಹೆಸರುಗಳಲ್ಲಿ ಸಂಘಟಿತರಾಗಿ ಪಾಲು ಕೇಳಲು ಮುಂದಾಗುತ್ತಿರಲಿಲ್ಲ. ಈ ಬೆಳವಣಿಗೆಯನ್ನು ಬಳಸಿಕೊಂಡು ಬಿಜೆಪಿಯಂಥ ಪಕ್ಷಗಳು ದಲಿತ ಐಡೆಂಟಿಟಿಯನ್ನೇ ಒಡೆಯಲು ಅವಕಾಶವೂ ಇರುತ್ತಿರಲಿಲ್ಲ. ಪಾಠವಿಷ್ಟೆ.
*ಶೋಷಣೆಯು ವಾಸ್ತವವಾಗಿದ್ದಾಗ ಅದರ ನಿರಾಕರಣೆಯಿಂದ ಐಕ್ಯತೆ ಸಾಧ್ಯವಾಗುವುದಿಲ್ಲ.* *ಎಲ್ಲ ಬಗೆಯ ಶೋಷಣೆ ಮತ್ತು ಒಳಶೋಷಣೆಯ ನಿವಾರಣೆಯಿಂದ ಮಾತ್ರ ಐಕ್ಯತೆ ಸಾಧ್ಯವಾಗುತ್ತದೆ.* ಶೊಷಿತರ ಐಡೆಂಟಿಟಿ ಹೋರಾಟಗಳಲ್ಲಿ ನ್ಯಾಯಯುತ ಪಾಲು ಕೇಳುವ ಪ್ರಜಾತಾಂತ್ರಿಕ ಆಶಯವಿರುತ್ತದೆ. ಮತ್ತು ಅದು ಅಸ್ಥಿತ್ವದಲ್ಲಿರುವ ಐಡೆಂಟಿಟಿಗಳು ತಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದಾಗ ಹುಟ್ಟಿಕೊಳ್ಳುತ್ತವೆ. ಪರಿವರ್ತನೆಯ ಹೋರಾಟಗಳು ಶೋಷಿತರ ಐಡೆಂಟಿಯನ್ನು ಸಮಾನವಾಗಿ ಒಳಗೊಂಡು ವಿಸ್ತಾರಗೊಂಡಾಗ ಮಾತ್ರ ಸಾಮಾಜಿಕ ನ್ಯಾಯ ಸಾಧನೆಯಾಗುತ್ತದೆ. ಒಡೆದಾಳುವ ಅಳುವವರ್ಗದ ಕುತಂತ್ರ ವಿಫ಼ಲವಾಗುತ್ತದೆ.
*ಮೀಸಲಾತಿ ಮತ್ತು ಒಳಮೀಸಲಾತಿಗಳ ಇತಿಮಿತಿ*
ಇದೆಲ್ಲದರಾಚೆಗೆ ಮೀಸಲಾತಿಗೂ ಮತ್ತು ಒಳ ಮೀಸಲಾತಿಗೂ ಒಂದು ಇತಿಮಿತಿದ್ದೇ ಇದೆ. ಮೀಸಲಾತಿ ಶೋಷಿತ ಸಮುದಾಯಗಳ ಒಂದು ಸ್ತರಕ್ಕೆ ಮಾತ್ರ ಆರ್ಥಿಕ ಮತ್ತು ಶೈಕ್ಷಣಿಕ ಮೇಲ್ಚಲನೆಯನ್ನು ತಂದುಕೊಡೂತ್ತದೆ. ಅದೂ ಕೂಡ ಇಲ್ಲದ ಕಡೆ ಇಷ್ಟಾದರೂ ಆಗುವುದು ಬೇಕೇಬೇಕು. ಆದರೆ ಸಂವಿಧಾನದ ಆಶಯವಾಗಿರುವ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯಗಳು ಕೇವಲ ಒಂದು ಸ್ಥರದ ವಿಮೋಚನೆಯನ್ನು ಉದ್ದೇಶಿಸಿಲ್ಲ. ಇಡಿ ಶೋಷಿತ ಸಮುದಾಯಗಳ ವಿಮೋಚನೆ ಮತು ಸರ್ವ ಸಮಾನತೆಯನ್ನು ಆಶಿಸುತ್ತದೆ. ಹೀಗಾಗಿ ಮೀಸಲಾತಿಗಳು ಪ್ರಾತಿನಿಧ್ಯದ ಮೂಲಕ ಪ್ರಭುತ್ವದ ಪ್ರಜಾತಂತ್ರೀಕರಣಕ್ಕೆ ಸಾಧನವಾದರೂ ಅದು ಇಡಿ ಸಮುದಾಯಕ್ಕೆ ವಿಮೋಚನೆಯನ್ನು ತಂದುಕೊಂಡುವುದಿಲ್ಲ.
ಅದರಲ್ಲೂ ಖಾಸಗೀಕರಣ-ಜಾಗತೀಕರಣದ ಈ ಹೊತ್ತಿನಲ್ಲಿ ಪ್ರಭುತ್ವವೇ ಕಿರಿದಾಗುತ್ತಿರುವಾಗ, ಶೇ. 50 ರ ಅವೈಜ್ನಾನಿಕ ಬ್ರಾಹ್ಮಣಶಾಹಿ ಮೇಲ್ಮಿತಿ, ಬ್ಯಾಕ್ ಲಾಗ್ ಏರಿಕೆಗಳನ್ನು ಪ್ರಶ್ನಿಸದೆ- ಬದಲಿಸದೆ ಒಳಮೀಸಲಾತಿ ಹೆಚ್ಚು ಪರಿಣಾಮಕಾರಿಯಾಗದು. ಇಂದಿನ ಆರ್ಥಿಕತೆಯಲ್ಲಿ ಶೇ.1 ರಷ್ಟು ಭಾರತೀಯ ಕುಬೇರರು ಶೇ.32 ರಷ್ಟು ಸಂಪತ್ತನ್ನು ಹಾಗೂ ಶೇ. 50 ರಷ್ಟು ಶೋಷಿತ ಸಮುದಾಯ ಕೇವಲ ಶೇ. 3 ರಷ್ಟು ಸಂಪತ್ತನ್ನು ಹೊಂದಿರುವಂತ ಅಸಮಾನತೆ ಮುಗಿಲು ಮುಟ್ಟಿತ್ತಿರುವಾಗ ಈ ಅಸಮಾನ ವ್ಯವಸ್ಥೆ ಬದಲಾಗದೆ ಶೋಷಿತರ ವಿಮೋಚನೆ ಸಾಧ್ಯವಾಗದು. ವ್ಯವಸ್ಥೆ ಬದಲಾಗಬೇಕೆಂದರೆ ಶೋಶಿತರಲ್ಲಿ ಮೀಸಲಾತಿ-ಒಳಮೀಸಲಾತಿಯ ಅಗತ್ಯ ಹಾಗೂ ಮಿತಿಗಳ ಬಗ್ಗೆ ಅರಿವು ಹಾಗೂ ಬಂಡೆಯಂಥ ಐಕ್ಯತೆ ಹಾಗೂ ಐಕ್ಯ ಹೋರಾಟ ಅತ್ಯಗತ್ಯ. ಆದ್ದರಿಂದ ಆ ರಾಜಕೀಯ ಎಚ್ಚರವನ್ನು ಸಮಾನತೆಯ ಸಂಘರ್ಷ ಕಾಪಿಟ್ಟುಕೊಳ್ಳುವುದೂ ಅತ್ಯಗತ್ಯ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು..
Leave a reply