ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿರುವ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ಮಹಿಳಾ ಡಾಕ್ಟರ್ ಮೇಲೆ ನಡೆದ ಅತ್ಯಂತ ಪೈಶಾಚಿಕವಾದ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು ವಿರೋಧಿಸಿ ಕಳೆದ ಎಂಟು ದಿನಗಳಿಂದ ವೈದ್ಯರು ದೊಡ್ಡ ಮಟ್ಟದ ಮುಷ್ಕರ ನಡೆಸುತ್ತಿದ್ದಾರೆ. ಸಂತ್ರಸ್ತ ವೈದ್ಯಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ತವ್ಯ ಬಹಿಷ್ಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಘಟನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ವೈದ್ಯರು ಇಂದು 24 ಗಂಟೆಗಳ ಕಾಲ ಮುಷ್ಕರ ನಡೆಸುತ್ತಿದ್ದಾರೆ. ಆದ್ದರಿಂದ ದೇಶಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮುಷ್ಕರವನ್ನು ಕೈಬಿಡುವಂತೆ ವೈದ್ಯರಿಗೆ ಮನವಿ ಮಾಡಿದೆ. ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ಸಮಿತಿ ರಚಿಸುವುದಾಗಿ ಭರವಸೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ.
ವೈದ್ಯ ವೃತ್ತಿಯಲ್ಲಿರುವವರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿಗೆ ಸಲಹೆ, ಸೂಚನೆಗಳನ್ನು ನೀಡಬಹುದು ಎಂದು ಹೇಳಿದೆ. ಪ್ರಸ್ತುತ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಷ್ಕರವನ್ನು ಕೈ ಬಿಟ್ಟು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದೆ.
Leave a reply