ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ನಿರಂಕುಶ ಆಡಳಿತದ ವಿರುದ್ಧದ ಜನರ ಆಕ್ರೋಶವು ಸರ್ಕಾರದ ಪತನದೊಂದಿಗೆ ನಾಟಕೀಯ ಪರಿಣಾಮಗಳಿಗೆ ಕಾರಣವಾಯಿತು. ಅವರು ದೇಶದಿಂದ ಪಲಾಯನ ಮಾಡಬೇಕಾಯಿತು. ಆಗಸ್ಟ್ 5 ರಂದು ವಿದ್ಯಾರ್ಥಿಗಳು ಕರೆದಿದ್ದ ‘ಚಲೋ ಢಾಕಾ’ ಕಾರ್ಯಕ್ರಮದೊಂದಿಗೆ ಸಾವಿರಾರು ಜನರು ರಾಜಧಾನಿಯನ್ನು ತಲುಪಿದರು. ಪ್ರಧಾನಿ ನಿವಾಸದೆಡೆ ಮೆರವಣಿಗೆ ನಡೆಸಿದರು. “ತನ್ನ ಸೇನೆಯು ನಾಗರಿಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವುದಿಲ್ಲ” ಎಂದು ಸೇನಾ ಮುಖ್ಯಸ್ಥ ಹಸೀನಾಗೆ ಹೇಳಿದಾಗ ಈಗಾಗಲೇ ಅಲುಗಾಡುತ್ತಿರುವ ಆಡಳಿತಕ್ಕೆ ಅಂತಿಮ ಹೊಡೆತ ಬಿದ್ದಂತಾಯಿತು.
30 ರಷ್ಟು ಸರ್ಕಾರಿ ಉದ್ಯೋಗಗಳನ್ನು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಮೀಸಲಿಡುವ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದವು. ಹಸೀನಾ ಅವರ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಬದಲು ಬಲಪ್ರಯೋಗದ ಜೊತೆಗೆ ದಮನಕಾರಿ ನೀತಿಗಳನ್ನು ಅನುಸರಿಸಿತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಕೋಟಾವನ್ನು ಕೇವಲ ಶೇಕಡಾ ಐದಕ್ಕೆ ಇಳಿಸಿತು. ಆದರೆ ಈಗಾಗಲೇ 200 ಮಂದಿ ವಿದ್ಯಾರ್ಥಿಗಳು ಮತ್ತು ನಾಗರಿಕರು ಪೊಲೀಸ್ ಫೈರಿಂಗ್ ಮತ್ತು ಆಡಳಿತ ಪಕ್ಷದ ಗೂಂಡಾಗಳ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆಂದೋಲನವು ಸ್ವಲ್ಪಮಟ್ಟಿಗೆ ತಣ್ಣಗಾದಂತೆ ತೋರುತ್ತಿದೆ. ಆದರೆ ಗುಂಡಿನ ದಾಳಿಯಲ್ಲಿ ನಡೆಸ ಮಾರಣಹೋಮಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೊಂದಿಗೆ ಅದು ಪುನಃ ಜ್ವಾಲೆಯಾಗಿ ಸ್ಫೋಟಿಸಿತು. ಬಂಧಿತರೆಲ್ಲರನ್ನು ಬಿಡುಗಡೆ ಮಾಡಬೇಕು. ಈ ಅಹಿತಕರ ಘಟನೆಗಳಿಗೆ ಯಾರು ಹೊಣೆ ಎಂದು ನಿರ್ಧರಿಸಬೇಕೆಂಬ ಡಿಮಾಂಡ್ ಗಳು ಮುನ್ನೆಲೆಗೆ ಬಂದವು. ಇದು ಶೀಘ್ರವಾಗಿ ಪ್ರಧಾನಿ ಹಸೀನಾ ಅವರ ರಾಜೀನಾಮೆಯ ಬೇಡಿಕೆಯಾಗಿ ಮಾರ್ಪಟ್ಟಿತು.
ಭ್ರಷ್ಟಾಚಾರ ಮತ್ತು ನಿರಂಕುಶ ಆಡಳಿತ..
2009 ರ ಸಂಸತ್ತಿನ ಚುನಾವಣೆಯಲ್ಲಿ ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಹಸೀನಾ ಅವರ 15 ವರ್ಷಗಳ ಆಡಳಿತವು ನಿರಂಕುಶಾಧಿಕಾರದತ್ತ ಸಾಗಿದೆ. ಜನವರಿ 2004 ರ ಚುನಾವಣೆಗಳು ಸೇರಿದಂತೆ ಮೂರು ಸಂಸತ್ತಿನ ಚುನಾವಣೆಗಳು ಅವಾಮಿ ಲೀಗ್ ಪರವಾಗಿ ಏಕಪಕ್ಷೀಯವಾಗಿ ಗೆದ್ದವು. ವಿರೋಧ ಪಕ್ಷಗಳ ದಮನ ಬೃಹತ್ ಪ್ರಮಾಣದಲ್ಲಿ ನಡೆಯಿತು. ರಾಜ್ಯಾಂಗ ವ್ಯವಸ್ಥೆ ಬಹಿರಂಗವಾಗಿಯೇ ಆಡಳಿತ ಪಕ್ಷದ ಕೈಗೊಂಬೆಯಾಯಿತು. ಒಟ್ಟಿನಲ್ಲಿ ಕಬ್ಬಿಣದ ಕವಚದಂತಹ ನಿರಂಕುಶ ಸರಕಾರ ರೂಪುಗೊಂಡಿತು. ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ಎಲ್ಲಾ ರೀತಿಯ ಅಸಮಾಧಾನದ ಧ್ವನಿಗಳು ದಮನವನ್ನು ಎದುರಿಸಬೇಕಾಯಿತು. ಬಂಧನಗಳು ಮತ್ತು ಜೈಲು ಪಾಲಾಗುವುದು ಸಂಭವಿಸಿದವು.
ಬಾಂಗ್ಲಾದೇಶ ತನ್ನ 15 ವರ್ಷಗಳ ಆಳ್ವಿಕೆಯ ಮೊದಲ ದಶಕದಲ್ಲಿ ಸ್ವಲ್ಪ ಪ್ರಗತಿ ಸಾಧಿಸಿದೆ ನಿಜ. ಜವಳಿ ರಫ್ತು ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ಈ ಅಭಿವೃದ್ಧಿಯ ಫಸಲನ್ನು ಕೆಲವೇ ಮಂದಿಯೊಂದಿಗೆ ಕೂಡಿದ ವರ್ಗ ಮಾತ್ರವೇ ಕೊಯ್ಲು ಮಾಡಿತು. ಅವರಲ್ಲಿ ಹಲವರು ಅವಾಮಿ ಲೀಗ್ ಚೌಕಟ್ಟಿನ ಭಾಗವಾದರು. ಹಸೀನಾ ಆಪ್ತ ಒಳ ಗುಂಪಿನ ಸದಸ್ಯೆಯಾದಳು. ಮುಂದಿನ ಐದು ವರ್ಷಗಳಲ್ಲಿ ಬಾಂಗ್ಲಾದೇಶವು ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ಕುಬೇರರ ದೇಶವಾಗಲಿದೆ ಎಂದು 2019ರಲ್ಲಿ ಅಂದಾಜಿಸಬೇಕಾದ ಪರಿಸ್ಥಿತಿ ಬಂದಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಪ್ರಸ್ತುತ ಕೋಟಿ 80 ಲಕ್ಷ ಯುವಕರು ನಿರುದ್ಯೋಗಿಗಳಿದ್ದಾರೆ. ಉದ್ಯೋಗಾವಕಾಶಗಳಿಲ್ಲದೆ ಕರಾಳ ಪರಿಸ್ಥಿತಿಯಲ್ಲಿದ್ದಾರೆ.
ಭ್ರಷ್ಟಾಚಾರ ಉತ್ತುಂಗಕ್ಕೇರಿದೆ. ಭ್ರಷ್ಟ ವ್ಯಾಪಾರಿ ಗ್ಯಾಂಗ್ಗಳೊಂದಿಗೆ ಆಡಳಿತಾರೂಢ ರಾಜಕೀಯ ಪಕ್ಷದ ನಾಯಕರ ಒಳಸಂಚು ಮಧ್ಯಮ ವರ್ಗವನ್ನು ಬುದ್ಧಿಜೀವಿಗಳಬ್ನು ದೂರವಿಟ್ಟಿತು, ಆರಂಭದಲ್ಲಿ ಉದ್ಯೋಗ ಕೋಟಾಗಳು ಆಡಳಿತ ಪಕ್ಷಕ್ಕೆ ಲಾಭದಾಯಕವಾಗಿದೆ ಎಂಬ ಧೋರಣೆಯಿಂದ ವಿರುದ್ಧ ವಿದ್ಯಾರ್ಥಿ ಚಳುವಳಿಯಾಗಿ ಪ್ರಾರಂಭವಾಯಿತು. ಆದರೆ ಸರ್ಕಾರ ದಮನಕ್ಕೆ ಮುಂದಾಗಿದ್ದರಿಂದ, ಸರ್ಕಾರವನ್ನು ಉರುಳಿಸಲು ಇದು ವಿಶಾಲವಾದ ಜನಾಂದೋಲನವಾಗಿ ಮಾರ್ಪಟ್ಟಿತು.
ಕೋಮುವಾದಿ ಶಕ್ತಿಗಳ ದಾಳಿ..
ಅಂತಹ ಚಳುವಳಿಯ ಸ್ವರೂಪವನ್ನು ಆಧರಿಸಿ, ಜಮಾತ್-ಎ-ಇಸ್ಲಾಮಿಯಂತಹ ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ವಿದ್ಯಾರ್ಥಿ ಘಟಕವು ಪ್ರತಿಭಟನೆಯಲ್ಲಿ ಸೇರಿದವು. ಹಸೀನಾ ಅವರ ಹಠಾತ್ ನಿರ್ಗಮನದ ನಂತರ, ಸರ್ಕಾರಿ ಯಂತ್ರವು ತಕ್ಷಣವೇ ಕುಸಿಯಿತು. ಅರಾಜಕತೆ ಉಂಟಾಯಿತು. ಈಗಾಗಲೇ ಹತ್ಯೆ, ಹಲ್ಲೆಗಳಿಂದ ತಿರಸ್ಕಾರಕ್ಕೆ ಒಳಗಾಗಿರುವ ಪೊಲೀಸರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಮುಚ್ಚಲಾಗಿದೆ. ಪಕ್ಷದ ಕಚೇರಿಗಳು, ಅವರ ವ್ಯಾಪಾರ ಸಂಸ್ಥೆಗಳು ಮತ್ತು ಮನೆಗಳ ಮೇಲೆ ವ್ಯಾಪಕ ದಾಳಿಗಳು ನಡೆದಿವೆ. ಕೆಲವರು ಕೊಲ್ಲಲ್ಪಟ್ಟರು.
ಸರ್ಕಾರ ಪತನವಾದ ಎರಡು ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ನಡೆಯಿತು. ಅಲ್ಪಸಂಖ್ಯಾತ ಸಮುದಾಯಗಳ ಮೇಲೂ ದಾಳಿಗಳು ನಡೆದಿವೆ. ಅವಾಮಿ ಲೀಗ್ ನಾಯಕರು ಮತ್ತು ಉದ್ಯಮಿಗಳು ಈ ದಾಳಿಯನ್ನು ಎದುರಿಸಬೇಕಾಯಿತು. ಆದರೆ, ಇಸ್ಲಾಂ ಕೋಮುವಾದಿಗಳ ಗುಂಪುಗಳು ಬಿಕ್ಕಟ್ಟಿನ್ನು ಬಳಸಿಕೊಂಡು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆಸಿದವು. ಆದರೆ, ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಕಾಪಾಡಿಕೊಂಡು, ಅವರಿಗೆ ರಕ್ಷಣೆ ನೀಡಬೇಕೆಂದು, ವಿದ್ಯಾರ್ಥಿ ನಾಯಕತ್ವ, ನಾಗರಿಕ ಸಮಾಜ ಹಾಗೂ ಕೆಲ ರಾಜಕೀಯ ಪಕ್ಷಗಳು ಮುಂದಾಗಿರುವುದು ಸಂತಸದ ಸಂಗತಿ. ವಿದ್ಯಾರ್ಥಿ ಸಮನ್ವಯ ಸಮಿತಿಯ ಕರೆಯ ಮೇರೆಗೆ ಮುಸಲ್ಮಾನರು ಹಿಂದೂಗಳ ಜೊತೆ ಸೇರಿ ಪಡೆಗಳನ್ನು ರಚಿಸಿ ಹಲವೆಡೆ ದೇವಾಲಯಗಳಿಗೆ ರಕ್ಷಣೆ ಕಲ್ಪಿಸುತ್ತಿದ್ದಾರೆ.
ತಾತ್ಕಾಲಿಕ ಸರ್ಕಾರ ..
ಕೂಡಲೇ ಮಧ್ಯಂತರ ಸರ್ಕಾರ ರಚನೆಯಾಗಬೇಕು. ಯಾವುದೋ ಒಂದು ರೀತಿಯ ಆಡಳಿತವಿದ್ದರೆ ಮಾತ್ರ ಶಾಂತಿ ಮತ್ತು ಭದ್ರತೆಯನ್ನು ಪುನಃಸ್ಥಾಪಿಸಲು ಸಾಧ್ಯ. ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರನಾಗಲು ಒಪ್ಪಿಕೊಂಡರು. ಈ ಸರಕಾರದಲ್ಲಿರುವ ಇತರೆ ಸಲಹೆಗಾರರನ್ನೂ ತಡಮಾಡದೆ ನೇಮಿಸಬೇಕು. ನಾಗರಿಕ ಸಮಾಜ ಸಂಘಟನೆಗಳು ಮತ್ತು ಎಡಪಂಥೀಯ ರಾಜಕೀಯ ವ್ಯಕ್ತಿಗಳು ಸೇರಿದಂತೆ ವಿದ್ಯಾರ್ಥಿ ನಾಯಕತ್ವವು ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಪರಿವರ್ತನೆಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ಜಮಾತೆ ಇಸ್ಲಾಮಿ ಮತ್ತು ಇತರೆ ಮೂಲಭೂತವಾದಿ ಶಕ್ತಿಗಳು ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿರುವುದರಿಂದ ಇದು ಹೆಚ್ಚು ಅವಶ್ಯಕವಾಗಿದೆ. ಬಲಪಂಥೀಯ ಉಗ್ರಗಾಮಿ ಶಕ್ತಿಗಳು ಅಧಿಕಾರವನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳ ವಿಶಾಲ ಐಕ್ಯತೆ ಅತ್ಯಗತ್ಯ.
ಪ್ರಸ್ತುತ ಸಂದರ್ಭದಲ್ಲಿ ಅಮೆರಿಕದ ಪಾತ್ರವೇನು ಎಂಬುದನ್ನು ಬಾಂಗ್ಲಾದೇಶದ ಎಡ ಪ್ರಗತಿಪರ ಶಕ್ತಿಗಳು ಸೂಕ್ಷ್ಮವಾಗಿ ಗಮನಿಸಬೇಕಿದೆ. ಹಸೀನಾ ನಂತರದ ಕಾರ್ಯಸೂಚಿಯನ್ನು ಪ್ರಭಾವಿಸಲು ಅಮೆರಿಕಾ ಹಸ್ತಕ್ಷೇಪ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಅಮೇರಿಕಾ ತನ್ನ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕೆ ಅನುಗುಣವಾಗಿ ಬಾಂಗ್ಲಾದೇಶವನ್ನು ರೂಪಿಸಲು ಪ್ರಯತ್ನಿಸುತ್ತದೆ. ಭಾರತದಲ್ಲಿ, ಆರ್ಎಸ್ಎಸ್-ಬಿಜೆಪಿ ಮೈತ್ರಿ ಮತ್ತು ಕಾರ್ಪೊರೇಟ್ ಮಾಧ್ಯಮಗಳು ಬಾಂಗ್ಲಾದೇಶದ ಬೆಳವಣಿಗೆಗಳ ಬಗ್ಗೆ ಪಿತೂರಿ ಸಿದ್ಧಾಂತಗಳನ್ನು ಹೆಣೆಯಲು ಪ್ರಾರಂಭಿಸಿವೆ.
ಅವುಗಳಲ್ಲಿ ಅತ್ಯಂತ ಪ್ರಚಾರದಲ್ಲಿರುವುದು ಗೋಧಿ ಮೀಡಿಯಾ ಮತ್ತೆ ಮತ್ತೆ ಕೇಳಿಸುತ್ವತಿರುವುದು ಒಂದನ್ನೆ. ಹಸೀನಾಳನ್ನು ಕೆಳಗಿಳಿಸಲು ಐಎಸ್ಐ ಮತ್ತು ಚೀನಾ ಸಂಚು ರೂಪಿಸಿದ್ದವು. ಇದಕ್ಕೆ ಸಾಕಷ್ಟು ಪುರಾವೆಗಳಿವೆ ಎಂಬಂತೆ ಬಿಂಬಿಸುತ್ತಿವೆ. ಭಾರತದ ಆಡಳಿತ ಗಣ್ಯರು ಮತ್ತು ಅವರ ಮಾಧ್ಯಮಗಳಿಗೆ, ವಿಸ್ತೃತ ಸಾಮಾಜಿಕ ಚಳುವಳಿಗಳು ಬೆಳೆದು ಬಾಂಗ್ಲಾದೇಶದಲ್ಲಿ ಗಣ ಘೋರ ಭ್ರಷ್ಟ ಸರ್ಕಾರವನ್ನು ಉರುಳಿಸುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಾಗದ ವಿಷಯವಾಗಿದೆ. ಶೇಖ್ ಹಸೀನಾ ಭಾರತದ ಆತ್ಮೀಯ ಸ್ನೇಹಿತೆಯಾಗಿರುವುದರಿಂದ ಭೌಗೋಳಿಕ ರಾಜಕೀಯ ಪಿತೂರಿಗಳಿವೆ ಎಂದು ಹೇಳುವುದು ಅವರಿಗೆ ದೊಡ್ಡ ವಿಷಯವಲ್ಲ. ಇಂತಹ ವರ್ತನೆಗಳು ಬಾಂಗ್ಲಾದೇಶದ ಜನರ ಬುದ್ಧಿವಂತಿಕೆ ಮತ್ತು ಸ್ವಾತಂತ್ರ ಸಂಕಲ್ಪಗಳ ಮೇಲೆ ಕೆಸರೆರಚಿದಂತೆ.
ಬಿಜೆಪಿಯ ಶೈಲಿ, ಸರ್ಕಾರದ ಜವಾಬ್ದಾರಿ
ಭಾರತ ಸರ್ಕಾರದ ಸ್ವಭಾವವನ್ನು ಗಮನಿಸಿದರೆ, ಬಾಂಗ್ಲಾದೇಶದ ಬೆಳವಣಿಗೆಗಳನ್ನು ಹಿಂದುತ್ವ ಕನ್ನಡಕದ ಮೂಲಕ ನೋಡುವುದು ಅನಿವಾರ್ಯವಾಗಿದೆ. ಬಿಜೆಪಿ ನಾಯಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುಬೇಂದು ಅಧಿಕಾರಿ ಅವರು ಬಾಂಗ್ಲಾದೇಶದಿಂದ ಒಂದು ಕೋಟಿ ಹಿಂದೂಗಳು ಆಶ್ರಯಕ್ಕಾಗಿ ಭಾರತಕ್ಕೆ ಬರಲಿದ್ದಾರೆ ಎಂದು ಘೋಷಿಸಿದ್ದಾರೆ. ಅವರಿಗೆ ಭಾರತೀಯ ಪೌರತ್ವ ನೀಡಲು ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವಂತೆ ಪ್ರಚೋದನಕಾರಿ ಹೇಳಿಕೆಯನ್ನೂ ನೀಡಿದ್ದಾರೆ.
ಬಾಂಗ್ಲಾದೇಶೀಯರನ್ನು ಒಳನುಗ್ಗುವವರು ಎಂದು ಕ್ರಮೇಣ ಬಣ್ಣಿಸುತ್ತಿರುವುದು ಬಾಂಗ್ಲಾದೇಶದ ಜನರು ಮತ್ತು ರಾಜಕೀಯ ವಲಯಗಳಲ್ಲಿ ಭಾರತದ ಬಗ್ಗೆ ದ್ವೇಷದ ಹೆಚ್ಚಳಕ್ಕೆ ಒಂದು ಕಾರಣವಾಗಿದೆ. ಗೃಹ ಸಚಿವ ಅಮಿತ್ ಶಾ ಅವರನ್ನು ಕೀಟಗಳು ಎಂದು ಕರೆದಿರುವುದನ್ನು ನಾವು ಮರೆಯುವಂತಿಲ್ಲ. ಮಾಧ್ಯಮಗಳು ಮತ್ತು ಹಿಂದುತ್ವ ಪ್ರತಿನಿಧಿಗಳು ಬಾಂಗ್ಲಾದೇಶದ ಜನರ ಆಕ್ರೋಶವನ್ನು (ಚಳುವಳಿ) ಅಪಖ್ಯಾತಿ ಮತ್ತು ಪ್ರಚೋದನಕಾರಿ ರೀತಿಯಲ್ಲಿ ನಕಾರಾತ್ಮಕ ರೀತಿಯಲ್ಲಿ ಚಿತ್ರಿಸುತ್ತಿರುವುದು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳನ್ನು ಹೆಚ್ಚಿಸಲು ಮತ್ತು ಉತ್ತೇಜಿಸಲು ಕಾರಣವಾಗಿದೆ. ಯಾವುದೇ, ಹೇಳಿಕೆಗಳಿಗೆ, ಕ್ರಮಗಳಿಗೆ ಮುಂದಾಗದಿರುವುದೇ ಮೋದಿ ಸರ್ಕಾರದ ಮುಂದಿರುವ ಉತ್ತಮ ಮಾರ್ಗವಾಗಿದೆ. ಭಾರತದ ಮೋದಿ ಸರ್ಕಾರವು ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳ ಬಗ್ಗೆ ತಾತ್ಕಾಲಿಕ (ಉಸ್ತುವಾರಿ) ಸರ್ಕಾರದೊಂದಿಗೆ ತಾಳ್ಮೆಯಿಂದ ಕೆಲಸ ಮಾಡಬೇಕು. ಶಾಂತಿ ಮತ್ತು ಸಹಜಸ್ಥಿತಿಗಾಗಿ ಕೈಗೊಳ್ಳುವ ಎಲ್ಲಾ ಕ್ರಮಗಳನ್ನು ಬೆಂಬಲಿಸಬೇಕು. ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
(ಆಗಸ್ಟ್ 7 ರ ‘ಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯ)
Leave a reply