ವಯನಾಡ್ : ಪ್ರಕೃತಿ ವಿಕೋಪಕ್ಕೆ ಕೇರಳ ತತ್ತರಿಸಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ವಯನಾಡು ಜಿಲ್ಲೆ ತತ್ತರಿಸಿದೆ. ಪ್ರವಾಹದ ಭೀತಿಯಿಂದ ಜನರು ಭೀತಿಗೊಳಗಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜಿಲ್ಲೆಯ ಮೇಲ್ಪಾಡಿ ಬಳಿ ಭಾರಿ ಭೂಕುಸಿತ ಉಂಟಾಗಿದೆ. ಕೇವಲ ನಾಲ್ಕು ಗಂಟೆಗಳಲ್ಲಿಯೇ ನಾಲ್ಕು ಬಾರಿ ಭೂಕುಸಿತ ಉಂಟಾಗಿದೆ.
ಈ ಘಟನೆಯಲ್ಲಿ 107 ಜನರು ಸಾವನ್ನಪ್ಪಿ, 116 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಬಹಿರಂಗಪಡಿಸಿದೆ. ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಮುಂಡಕ್ಕೈ, ಚೂರಲ್ಮರ್, ಅಟ್ಟಮಾಳ ಮತ್ತು ನೂಲಪೂಜೆ ಗ್ರಾಮಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಚುರಲ್ ಮಾಲಾ ಪಟ್ಟಣದ ಅರ್ಧ ಭಾಗ ನಾಶವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿನ ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗಿದೆ.
ಚುರಲ್ ಮಾಳದಲ್ಲಿ ಸೇತುವೆ ಕುಸಿದು ಸುಮಾರು 400 ಕುಟುಂಬಗಳು ಅಲ್ಲಿ ಸಿಲುಕಿಕೊಂಡಿವೆ. ಕೇರಳ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಸೇನೆಯು ಚುರಲ್ ಮಾಲಾದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮತ್ತೊಂದೆಡೆ, ಭೂಕುಸಿತ ಸಂಭವಿಸಿದ ವಯನಾಡಿನ ಚುರಲ್ ಮಾಲಾ ಪ್ರದೇಶದಲ್ಲಿ ಐಎಎಫ್ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರನ್ನು ಗುರುತಿಸುವ ಪ್ರಯತ್ನ ನಡೆಸಲಾಗುತ್ತಿದೆ.
Leave a reply