ಕೊಪ್ಪ : ಪೊಕ್ಸೋ ಪ್ರಕರಣದ ಆರೋಪ ಎದುರಿಸಿದ್ದ ಶಿಕ್ಷಕರೊಬ್ಬರನ್ನು ತಾಲ್ಲೂಕಿನ ತಮ್ಮಡವಳ್ಳಿ ಶಾಲೆಗೆ ನಿಯೋಜನೆ ಮಾಡಿರುವುದನ್ನು ಖಂಡಿಸಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಎರಡು ದಿನಗಳಿಂದ ಮಕ್ಕಳು ಶಾಲೆಗೆ ಬಾರದೇ ಮನೆಯಲ್ಲೇ ಉಳಿದಿದ್ದಾರೆ.
ತಾಲ್ಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 23 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಯಾರೊಬ್ಬರೂ ಸೋಮವಾರದಿಂದ ಶಾಲೆಗೆ ಬಂದಿಲ್ಲ. ‘ಈ ಹಿಂದೆ ಬೇರೊಂದು ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಶಿಕ್ಷಕ ಪೊಕ್ಸೋ ಪ್ರಕರಣದ ಗಂಭೀರ ಆರೋಪ ಹೊತ್ತಿದ್ದರು. ಬಳಿಕ ಈ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕರಿಗೆ ಮನವಿ ಮಾಡಿದರೂ ವರ್ಗಾವಣೆ ಮಾಡಿಲ್ಲ’ ಎಂದು ಪೋಷಕರು ಆರೋಪಿಸಿದ್ದಾರೆ.
ಆರೋಪ ಎದುರಿಸುತ್ತಿರುವ ಶಿಕ್ಷಕರಿಂದ ನಮ್ಮ ಮಕ್ಕಳು ಪಾಠ ಕಲಿಯುವುದು ಇಷ್ಟವಿಲ್ಲ. ಅವರನ್ನು ವರ್ಗಾವಣೆ ಮಾಡುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಪೋಷಕರು ಆಗ್ರಹಿಸಿದ್ದಾರೆ.
‘ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿರುವ ಶಾಲೆ ಎಂಬ ಕಾರಣಕ್ಕೆ ಆರೋಪಿತ ಶಿಕ್ಷಕರನ್ನು ನಿಯೋಜಿಸಲಾಗಿದೆ. ಬೇರೆಡೆಗೆ ವರ್ಗಾಯಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ತಿಳಿಸಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ಧ್ವನಿ) ಕಾರ್ಯಾಧ್ಯಕ್ಷ ರಾಜಶಂಕರ್ ಹೇಳಿದ್ದಾರೆ.
Leave a reply