ನ್ಯೂಡೆಲ್ಲಿ : ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬಜೆಟ್ ಅನ್ನು ರೂಪಿಸುವ ಸಂದರ್ಭದಲ್ಲಿ ಪರಿಗಣಿಸಲೇಬೇಕಾದ ಕೆಲವು ಅಂಶಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲು.. ಕೇಂದ್ರೀಯ ಕಾರ್ಮಿಕ ಸಂಘಟನೆಗಳಾದ INTUC, AITUC, HMS, CITU, AIUTUC, TUCC, SEWA, AICCTU, LPF, UTUC, ಕ್ಷೇತ್ರವಾರು ಫೆಡರೇಶನ್ಗಳು ಮತ್ತು ಅಸೋಸಿಯೇಷನ್ ಗಳು ಜಂಟಿಯಾಗಿ ಪತ್ರ ಬರೆದಿವೆ.
ಸಂಪತ್ತನ್ನು ಸೃಷ್ಟಿಸುವವರ ಪ್ರತಿನಿಧಿಗಳಾಗಿ ಈ ದೇಶದ ಕಾರ್ಮಿಕ ಜಗತ್ತು ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಗೌರವ ಮತ್ತು ನಂಬಿಕೆಯನ್ನಿಟ್ಟು ಬಜೆಟ್ ಪೂರ್ವ ಮಾತುಕತೆಗಳಲ್ಲಿ ಭಾಗವಹಿಸುತ್ತಿರುವ ಕಾರ್ಮಿಕ ಸಂಘಟನೆಗಳು ನೀಡುವ ಯಾವುದೇ ಒಂದು ಸಲಹೆಯನ್ನೂ ಕೂಡ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಈ ಪತ್ರವನ್ನು ಬರೆಯಬೇಕಾಗಿ ಬಂತು ಎಂದು ಒಕ್ಕೂಟಗಳ ಪ್ರತಿನಿಧಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಅತ್ಯುನ್ನತ ತ್ರಿಪಕ್ಷೀಯ ವೇದಿಕೆಯಾದ ಇಂಡಿಯನ್ ಲೇಬರ್ ಕಾನ್ಫರೆನ್ಸ್ (ಐಎಲ್ಸಿ) ಸಭೆ ಏರ್ಪಡಿಸಿ ಸುಮಾರು ಒಂದು ದಶಕ ಕಳೆದಿದೆ. ಹಿಂದಿನ ಐಎಲ್ಸಿಗಳ ಶಿಫಾರಸುಗಳನ್ನು ಜಾರಿಗೆ ತರಲು ಕೋರಲಾಗಿದೆ. ಆದರೆ ಅವುಗಳನ್ನು ಇಲ್ಲಿಯವರೆಗೆ ಗಮನಿಸಲಾಗಿಲ್ಲ ಎಂದರು. ಕೇಂದ್ರ ಕಾರ್ಮಿಕ ಸಂಘಟನೆಗಳ ಎಲ್ಲಾ ಸೂಚನೆಗಳು, ಶಿಫಾರಸುಗಳು ಮತ್ತು ಬೇಡಿಕೆಗಳನ್ನು ನಿರ್ಲಕ್ಷಿಸಿದ್ದು ಮಾತ್ರವಲ್ಲದೆ ಎಲ್ಲಾ ತ್ರಿಪಕ್ಷೀಯ ಮತ್ತು ದ್ವಿಪಕ್ಷೀಯ ಪ್ರಜಾಪ್ರಭುತ್ವ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳನ್ನು ಕೂಡ ನಿರ್ಲಕ್ಷ್ಯಿಸಿ, ಬದಿಗಿಟ್ಟು ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಿಸಿರುವ ಅಧಿಸೂಚನೆಯೇ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಇಪಿಎಫ್ ಪಾವತಿಸದ ಮಾಲಿಕರಿಗೆ ದಂಡದ ದರಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇಪಿಎಫ್ಒ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ ಗಮನಕ್ಕೆ ತರದೇ ಮಾಡಲಾಗಿದೆ. ಈ ಕುರಿತು ಯೂನಿಯನ್ ಗಳ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಇಂತಹ ನೀತಿಗಳಿಂದ ಕೆಲವೇ ಕಾರ್ಪೊರೇಟ್ಗಳು ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ಗುರುತಿಸಬೇಕೆಂದು ಹೊಸ ಎನ್ಡಿಎ ಸರ್ಕಾರವನ್ನು ಆ ಸಂಘಟನೆಗಳು ಪತ್ರದಲ್ಲಿ ಕೋರಿವೆ.
ಜನರ ವಿಶಾಲ ಹಿತಾಸಕ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡು ದೇಶದ ಆರ್ಥಿಕತೆ ಎದುರಿಸುತ್ತಿರುವ ಶೋಚನೀಯ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಜನರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮಕೈಗೊಳ್ಳುವ ಭರವಸೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಸ್ವಾಮಿನಾಥನ್ ವರದಿಯ ಶಿಫಾರಸ್ಸಿನಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೂ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಸೂಚಿಸಿದೆ. ಎಲ್ಲಾ ಕಾರ್ಮಿಕರಿಗೆ ಇಪಿಎಫ್ ಮತ್ತು ಇಎಸ್ಐ ಸೇವೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ವಿನಂತಿಸಲಾಗಿದೆ.
ವೇತನದಾರರ ವೇತನ ಮತ್ತು ಗ್ರಾಚ್ಯುಟಿಗಳ ಮೇಲಿನ ಆದಾಯ ತೆರಿಗೆ ಕಡಿತದ ಸೀಲಿಂಗ್ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದೆ. ಹಾಗೆಯೇ ತಿಂಗಳಿಗೆ ಕನಿಷ್ಠ 9 ಸಾವಿರ ಪಿಂಚಣಿ, ಇತರ ವೈದ್ಯಕೀಯ ಮತ್ತು ಶೈಕ್ಷಣಿಕ ಸವಲತ್ತುಗಳನ್ನು ಒದಗಿಸುವುದು ಸೇರಿದಂತೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸಲು ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ನಿಧಿಯನ್ನು ಸ್ಥಾಪಿಸಲು ಸಲಹೆ ನೀಡಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಇ-ಉದ್ಯೋಗ ಪೋರ್ಟಲ್ಗೆ ಸೇರಿಸಬೇಕು. ಮತ್ತು ಈ ಯೋಜನೆಗಳನ್ನು ಅವರಿಗೂ ಅನ್ವಯಿಸಬೇಕು ಎಂದು ಸೂಚಿಸಿದೆ.
ಕೇಂದ್ರ ಸರ್ಕಾರದ ಇಲಾಖೆಗಳು, ವಿಭಾಗಗಳು ಮತ್ತು ಪಿಎಸ್ಯುಗಳಲ್ಲಿ ಈಗಿರುವ ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಎಂದು ಸೂಚಿಸಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆಯನ್ನು ತಕ್ಷಣವೇ ನಿಲ್ಲಿಸಬೇಕು. ಮತ್ತು ನಿಯಮಿತ ಉದ್ಯೋಗವನ್ನು ಖಾತರಿಪಡಿಸಬೇಕು ಎಂದು ಒತ್ತಾಯಿಸಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸೂಚಿಸಿದ್ದು, ಅಗ್ನಿವೀರ್, ಆಯುದ್ವೀರ್, ಕೊಯಲವೀರ್ ನಂತಹ ನಿಗದಿತ ಅವಧಿಯ ಹುದ್ದೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಆಯಾ ಕ್ಷೇತ್ರಗಳಲ್ಲಿ ನಿಯಮಿತ ಉದ್ಯೋಗ ನೀಡುವಂತೆ ಕೋರಲಾಗಿದೆ.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮೀಸಲನ್ನು ಹೆಚ್ಚಿಸುತ್ತಾ.. ಕನಿಷ್ಠ 200 ದಿನಗಳ ಕೆಲಸ ಇರುವಂತೆ, ಶಾಸನಬದ್ಧ ಕನಿಷ್ಠ ವೇತನವನ್ನು ನಿಗದಿಪಡಿಸಲು ಸೂಚಿಸಲಾಗಿದೆ. ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಸೂಚಿಸಿದೆ. 8ನೇ ವೇತನ ಆಯೋಗವನ್ನು ಕೂಡಲೇ ಸ್ಥಾಪಿಸಬೇಕು. 29 ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸುವ ಮೂಲಕ ತಂದಂತಹ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಕಾರ್ಮಿಕ ಸಂಘಟನೆಗಳು ಸೂಚಿಸಿವೆ. ಪಿಎಸ್ಯುಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಸರ್ಕಾರದ ಬೊಕ್ಕಸದ ಲೂಟಿ ಮತ್ತು ದುರುಪಯೋಗವನ್ನು ನಿಲ್ಲಿಸಬೇಕು. LIC ಮತ್ತು GIC ಗಳು ಖಾಸಗೀಕರಣ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.
ಪೌಷ್ಠಿಕತೆ, ಆರೋಗ್ಯ ಮತ್ತು ಶಿಕ್ಷಣದಂತಹ ಸಾಮಾಜಿಕ ಸೇವಾ ಕ್ಷೇತ್ರಗಳ ಖಾಸಗೀಕರಣವನ್ನು ನಿಲ್ಲಿಸುವಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಒಕ್ಕೂಟಗಳು ಸೂಚಿಸಿವೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮೂಲಭೂತ ಸೇವೆಗಳಿಗೆ ಹಂಚಿಕೆಗಳನ್ನು ಹೆಚ್ಚಿಸಲು ಕೋರಿವೆ. ಶುದ್ಧ ಕುಡಿಯುವ ನೀರು, ನೈರ್ಮಲ್ಯ ಮತ್ತು ಗೃಹ ನಿರ್ಮಾಣಗಳಿಗೆ ಸಮರ್ಪಕವಾಗಿ ಹಣ ಮೀಸಲಿಡುವಂತೆ ಮನವಿ ಮಾಡಲಾಗಿದೆ. ಎಸ್ ಸಿ, ಎಸ್ ಟಿ, ಉಪ ಪ್ರಣಾಳಿಕೆಗೆ, ಮಹಿಳೆಯರಿಗೆ ಬಜೆಟ್ ನಲ್ಲಿ ಮೀಸಲಿಡಲಿಡಬೇಕೆಂದು ಸೂಚಿಸಲಾಗಿದೆ.
ಪೆಟ್ರೋಲಿಯಂ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಮತ್ತು ಇತರೆ ಸೇವೆಗಳ ಬೆಲೆ ಏರಿಕೆಯಾಗಲಿದೆ ಆದ್ದರಿಂದ ಪೆಟ್ರೋ ಉತ್ಪನ್ನಗಳ ಬೆಲೆ ಏರಿಕೆ ಮಾಡಬಾರದು ಎಂದು ಸೂಚಿಸಿದೆ. ಅಂಗನವಾಡಿ, ಮಧ್ಯಾಹ್ನದ ಊಟ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸ್ಕೀಮ್ ಕಾರ್ಯಕರ್ತೆಯರನ್ನು ಕಾಯಂಗೊಳಿಸುವಂತೆ ಹಾಗೂ ಐಎಸ್ಸಿ ಶಿಫಾರಸ್ಸಿನಂತೆ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದೆ.
Leave a reply