ಕಥೆಯ ಮೂಲಕ ವಿಷಯವನ್ನು ಹೇಳಿದರೆ ಕೇಳುಗರ ಮೇಲೆ ಉಂಟಾಗುವ ಪ್ರಭಾವ ಅನನ್ಯ. ಕಥಾಸರಿತ್ಸಾಗರ, ಪಂಚತಂತ್ರ, ಈಸೋಪನ ಕಥೆಗಳು ಇವೆಲ್ಲವೂ ಕಥಾಪ್ರಪಂಚದ ವಿಸ್ತಾರವನ್ನೂ, ಅಗಾಧತೆಯನ್ನೂ ಹೇಳುತ್ತವೆ. ಎಲ್ಲ ಕಾವ್ಯ ನಾಟಕ ಆಖ್ಯಾನ ಉಪಾಖ್ಯಾನಗಳು ಕಥೆಗಳ ಗಣಿಗಳೇ. ಅಷ್ಟೇಕೆ, ಬಾಲ್ಯದ ಮೊದಮೊದಲ ಅಚ್ಚರಿಗಣ್ಣುಗಳು ಅರಳುವುದು ಅಜ್ಜಿಯರ ನವರಸಭರಿತ ಕಥೆಗಳಿಂದಲೇ ಅಲ್ಲವೆ! ಮಾತುಕತೆ, ದೈನಂದಿನ ವ್ಯವಹಾರಗಳು, ಪುಟ್ಟ ಪುಟ್ಟ ಸಂಭಾಷಣೆಗಳು, ಸಣ್ಣಸಣ್ಣ ಚಿಟ್ಟೆಕಥೆಗಳು ಇವೆಲ್ಲವೂ ಕಥೆಗಳು ಅಥವಾ ಕಥಾಭಾಗಗಳು ತಾನೆ? ಆದರೆ, ಇಂಥ ಕಥಾಮಾಲಿಕೆಯಿಂದ ವ್ಯಕ್ತಿಗಳು ಏನು ಅನುಭವ ಪಡೆದುಕೊಳ್ಳುತ್ತಾರೆ ಎಂಬುದು ಅವರವರ ಪ್ರಜ್ಞಾವಲಯಕ್ಕೆ ಸೇರಿದ ವಿಷಯ.