ವಿಶ್ವಾದ್ಯಂತ ಮಹಿಳೆಯರು ಮಾರ್ಚ್ 8ನ್ನು ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಕ್ರಾಂತಿಕಾರಿ ನಾಯಕಿ ಕ್ಲಾರಾ ಜೆಟ್ಕಿನ್ ಅವರ ನಾಯಕತ್ವದಲ್ಲಿ 1910 international socialist women’s conference (ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ) ನಡೆಯಿತು. ಶಾಂತಿ, ಪ್ರಜಾಪ್ರಭುತ್ವ, ಸೋಷಲಿಜಂಗಾಗಿ ಹೋರಾಟ ನಡೆಸುತ್ತಿರುವ ವಿಶ್ವವ್ಯಾಪಿ ಕ್ರಾಂತಿಕಾರಿ ಮಹಿಳೆಯರಿಗೆ ಬೆಂಬಲ ಸೂಚಿಸಲು ಒಂದು ಸಂದರ್ಭ ಇರಬೇಕೆಂಬ ಈ ಸಮ್ಮೇಳನ ತೆಗೆದುಕೊಂಡ ನಿರ್ಧಾರ ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ.
ಕ್ಲಾರಾ ಜೆಟ್ಕಿನ್ ಈ ಮುಂದೊಡುಗು ತೋರಿಸಲು ಕಾರಣ, ಅಂದಿನ ಸಮಾಜದ ಮಹಿಳೆಯರು ಪೋಷಿಸಿದ ಕ್ರಾಂತಿಕಾರಿ ಪಾತ್ರವನ್ನು ಅವರು ಗಮನಿಸಿದರು. ಕೇವಲ ಗಮನಿಸಿದ್ದು ಮಾತ್ರವಲ್ಲ ಕ್ರಾಂತಿಯಲ್ಲಿ ಮಹಿಳೆಯರು ತೋರಿಸಬಲ್ಲ ಹೋರಾಟದ ಸ್ಫೂರ್ತಿಯನ್ನು ಅವರು ಅಂದಾಜು ಮಾಡಲು ಸಾಧ್ಯವಾಯಿತು. ಮಾರ್ಚ್ 8, 1857 ರಂದು, ಅಮೆರಿಕಾದಲ್ಲಿ ಜವಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಮಹಿಳೆಯರು ಮಿಲಿಟೆಂಟ್ ಮುಷ್ಕರ ನಡೆಸಿದರು. ಮತ್ತು ತಮ್ಮ ಕಾರ್ಖಾನೆಗಳಲ್ಲಿ 16 ಗಂಟೆಗಳ ಕೆಲಸದ ಸಮಯವನ್ನು 10 ಗಂಟೆಗಳ ಕೆಲಸದ ಸಮಯಕ್ಕೆ ಇಳಿಸಿದರು.
ಮಾರ್ಚ್ 8, 1908 ರಂದು, ಮಹಿಳೆಯರು ಮತದಾನದ ಹಕ್ಕಿಗಾಗಿ ಪ್ರತಿಭಟಿಸಲು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರಷ್ಯಾದಲ್ಲಿ ಮಾರ್ಚ್ 8, 1917 ರಂದು, ಕ್ರಾಂತಿಕಾರಿ ರಷ್ಯಾದ ಮಹಿಳೆಯರು ಪ್ರತಿಭಟನೆ ನಡೆಸಿ ರೊಟ್ಟಿ ಮತ್ತು ಶಾಂತಿ ಬೇಕೆಂದು ಒತ್ತಾಯಿಸಿದರು. ಈ ಹೋರಾಟದ ನಂತರ, ರಷ್ಯಾದ ಸರ್ವಾಧಿಕಾರಿ, ತ್ಸಾರ್ ಚಕ್ರವರ್ತಿ ಪತನಗೊಂಡನು . ಈ ಘಟನೆಗಳು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನವನ್ನು ಆಚರಿಸಲು ಕಾರಣವಾಯಿತು. ವಾಸ್ತವವಾಗಿ, ಈ ಘಟನೆಗಳು ಅಂತರಾಷ್ಟ್ರೀಯ ದುಡಿಯುವ ಮಹಿಳಾ ದಿನದ ನಿಜವಾದ ಸ್ಫೂರ್ತಿಯನ್ನು ಸಾರುತ್ತದೆ.
ಈ ಕ್ರಾಂತಿಕಾರಿ ಪರಂಪರೆಯ ಬಗ್ಗೆ ಇಂದಿನ ಮಹಿಳೆಯರು ವಿವರವಾಗಿ ತಿಳಿದುಕೊಳ್ಳದೆ ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನವನ್ನು ಆಚರಿಸಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಿ 114 ವರ್ಷಗಳನ್ನು ಪೂರೈಸಿದ್ದೇವೆ. ಈ ಅವಧಿಯಲ್ಲಿ, ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಹೋರಾಟಗಳ ಮೂಲಕ ಅನೇಕ ಸವಾಲುಗಳನ್ನು ಎದುರಿಸಿ ಹೆಜ್ಜೆಗಳನ್ನು ಇಟ್ಟಿದ್ದಾರೆ. ರಷ್ಯಾದಲ್ಲಿ ಬೊಲ್ಶೆವಿಕ್ ಕ್ರಾಂತಿಯ ಯಶಸ್ಸಿನ ನಂತರ, ಬ್ರಿಟನ್, ಅಮೆರಿಕ, ಜರ್ಮನಿ ಮತ್ತು ಇತರ ಹಲವು ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು. ಆದರೆ ಮಹಿಳಾ ವಿಮುಕ್ತಿ ಹೋರಾಟದಲ್ಲಿ ಪ್ರಮುಖ ಹೋರಾಟ ಇನ್ನೂ ಉಳಿದಿದೆ. ಪ್ರಸ್ತುತ ಬಂಡವಾಳಶಾಹಿ ವ್ಯವಸ್ಥೆಯನ್ನು ನಾಶಪಡಿಸಿ, ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸುವ ಹೋರಾಟದೊಂದಿಗೆ ಮಹಿಳಾ ವಿಮುಕ್ತಿ ಹೋರಾಟವು ಹೆಣೆದುಕೊಂಡಿದೆ ಎಂಬ ಕಟು ಸತ್ಯವನ್ನು ಮಹಿಳೆಯರು ಇನ್ನೂ ಸ್ಪಷ್ಟವಾಗಿ ಗುರುತಿಸಬೇಕಾಗಿದೆ.
ಬಂಡವಾಳಶಾಹಿ ಸಮಾಜದಲ್ಲಿ ಮಹಿಳೆಯರು ಒಳಗೆ ಮತ್ತು ಹೊರಗೆ ಶೋಷಣೆಗೆ ಒಳಗಾಗುತ್ತಿದ್ದಾರೆ.
ಬಂಡವಾಳಶಾಹಿಗಳಿಗೆ ಅಗ್ಗದ ಕೂಲಿಯನ್ನು ಒದಗಿಸುವುದು ಮತ್ತು ಬಂಡವಾಳಶಾಹಿ ವರ್ಗಕ್ಕೆ ಅಗತ್ಯವಿರುವ ಕಾರ್ಮಿಕ ವರ್ಗವನ್ನು ನಿರಂತರವಾಗಿ ಪುನರುತ್ಪಾದಿಸುವುದು ಇಂದು ಮಹಿಳೆಯರು ಹೊತ್ತಿರುವ ಹೊರೆಗಳಾಗಿವೆ. ಈ ಲಾಭ-ಕೇಂದ್ರಿತ ಶೋಷಕ ವ್ಯವಸ್ಥೆಯ ವಿರುದ್ಧ ಎಲ್ಲಾ ದುಡಿಯುವ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಹೋರಾಡದ ಹೊರತು ಮಹಿಳೆಯರ ಸಮಸ್ಯೆಗಳಿಗೆ ನಿಜವಾದ ಪರಿಹಾರ ಅಸಾಧ್ಯ.
ಮಹಿಳಾ ವಿಮೋಚನೆಯ ಹೋರಾಟವನ್ನು ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆಯುವ ಹೋರಾಟದೊಂದಿಗೆ ಹೆಣೆಯುವ ಅಗತ್ಯವಿದೆ ಎಂಬುದನ್ನು ಇಂದಿನ ಮಹಿಳೆಯರು ಗುರುತಿಸಬೇಕು. ಹೀಗೆ ಆಗುವವರೆಗೆ ಅಂತರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆಯು ನಿಜವಾದ ಸ್ಪೂರ್ತಿಯನ್ನು ಕಳೆದುಕೊಳ್ಳುತ್ತದೆ. ವಿಶ್ವ ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನದ ಪರಂಪರೆಯ ನಿಜವಾದ ಸಾರ ಮತ್ತು ಸ್ಫೂರ್ತಿಯನ್ನು ಮರೆಮಾಚಲು ಬೃಹತ್ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿವಿಧ ಕಾರ್ಪೊರೇಟ್ ಕಂಪನಿಗಳು ಅಂತರಾಷ್ಟ್ರೀಯ ದುಡಿಯುವ ಮಹಿಳಾ ದಿನವನ್ನು ಕೂಡ ಸರಕಾಗಿಸಲು ಪ್ರಯತ್ನಿಸಿವೆ ಮತ್ತು ಕೆಲವು ಯಶಸ್ಸನ್ನು ಸಾಧಿಸಿವೆ.
ಇಂದಿನ ಮಹಿಳೆಯರು ಈ ಪಿತೂರಿಗಳನ್ನು ಗುರುತಿಸಬೇಕಾಗಿದೆ. ಸ್ತ್ರೀವಾದದ ಹೆಸರಿನಲ್ಲಿ ಮಹಿಳೆಯರನ್ನು ಪ್ರಚೋದಿಸಿ ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನದ ನಿಜವಾದ ಸಾರವನ್ನು ಅರಿಯದಂತೆ ಮಾಡಲು ಫ್ಯಾಷನ್ ಉದ್ಯಮದ ಕಾರ್ಪೊರೇಟ್ ಕಂಪನಿಗಳು ಪಿತೂರಿ ನಡೆಸುತ್ತಿವೆ. ಇಂದಿನ ಮಹಿಳೆಯರಿಗೆ ಏಕೆ ಕೆಲಸಕ್ಕೆಬಾರದ ಸುಧಾರಣಾವಾದದ ಪಾಠವನ್ನು ಕಲಿಸಲು ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಎನ್ಜಿಒ ಚೌಕಟ್ಟಿನಲ್ಲಿ ಮಹಿಳೆಯರನ್ನು ಸೇರಿಸಲು ಪ್ರಯತ್ನಿಸಲಾಗುತ್ತಿದೆ. ಇಂದಿನ ಮಹಿಳೆಯರು ಈ ಪಿತೂರಿಗಳನ್ನು ಎದುರಿಸಲು ಸಂಕಲ್ಪ ಮಾಡಬೇಕು ಮತ್ತು ಮಹಿಳಾ ವಿಮೋಚನೆ, ಪ್ರಸ್ತುತ ಬಂಡವಾಳಶಾಹಿ ವ್ಯವಸ್ಥೆಯ ನಾಶ ಮತ್ತು ಸಮಾಜವಾದಿ ವ್ಯವಸ್ಥೆಯ ಸ್ಥಾಪನೆಯ ಹೋರಾಟದ ಭಾಗವಾಗಬೇಕು. ಈ ಹೋರಾಟದ ಮೂಲಕ ಮಾತ್ರ ನಾವು ಅಂತರಾಷ್ಟ್ರೀಯ ದುಡಿಯುವ ಮಹಿಳಾ ದಿನದ ನಿಜವಾದ ಸಾರವನ್ನು ಮತ್ತು ಅದರ ಕ್ರಾಂತಿಕಾರಿ ಪರಂಪರೆಯನ್ನು ಮುಂದುವರಿಸಬಹುದಾಗಿದೆ.
“ಕಾರ್ಮಿಕ ವರ್ಗದ ಮಹಿಳೆ ತನ್ನ ವರ್ಗದ ಪುರುಷರೊಂದಿಗೆ ಕೈಜೋಡಿಸಿ ಬಂಡವಾಳಶಾಹಿ ಸಮಾಜದ ವಿರುದ್ಧ ಹೋರಾಡುತ್ತಾಳೆ. ಅವರನ್ನು ಬಂಧಿಸಿರುವ ಸಂಕೋಲೆಗಳನ್ನು ಜಂಟಿ ಪ್ರಯತ್ನದ ಮೂಲಕ ಮುರಿಯಲು ಸಾಧ್ಯ ಎಂಬುದನ್ನು ಅರಿತ್ತಿದ್ದಾರೆ.
- ಕ್ಲಾರ ಜೆಟ್ಕಿನ್ ಅವರು1896 ರಲ್ಲಿ ಗೋಥಾದಲ್ಲಿ ನಡೆದ ಜರ್ಮನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಕಾಂಗ್ರೆಸ್ನಲ್ಲಿ ಮಾಡಿದ ಭಾಷಣವಿದು..
Leave a reply