ಪ್ಯಾಶಿಸಂ ಎಂದರೆ
ಸಂಘಿಗಳ ಅಂಗಳದಲ್ಲಿ
ಉಳಿದವರ ಹಿತ್ತಲಲ್ಲಿ
ಬೇರು ಬಿಟ್ಟಿರುವ
ಸನಾತನ ಬಿಳಲು..
ಫ್ಯಾಶಿಸಂ ಎಂದರೆ
ಅಮಾಯಕರ ಹತ್ಯೆಗಳ ಬಗ್ಗೆ
‘ನಾಗರಿಕರ’ ನಿಗೂಢ ಮೌನ..
ಫ್ಯಾಶಿಸಂ ಎಂದರೆ
ಅತ್ಯಾಚಾರಗಳೇ
ರಾಷ್ಟ್ರರಕ್ಷಣೆಯ
ಸಾಧನವಾಗುವ ಬಗೆ
ಫ್ಯಾಶಿಸಂ ಎಂದರೆ
ಬಡತನ ಮಾತ್ರವಲ್ಲ,
ದಾರುಣ ನರಕಕ್ಕೂ
ಹೆಚ್ಚಾಗುವ ನೂಕುನುಗ್ಗಲು…
ಫ್ಯಾಶಿಸಂ ಎಂದರೆ
ಧೂಳಾದ ಕನಸುಗಳು
ಮಾತ್ರವಲ್ಲ,
ವೆಲ್ಲಿವಾಡಾಗಳ ಅಧಿಕೃತ ಮರಣಶಾಸನ…
ಫ್ಯಾಶಿಸಂ ಎಂದರೆ
ನಿರುದ್ಯೋಗ ಮಾತ್ರವಲ್ಲ,
ಕೂತ ಕೊಂಬೆಯ ಕಡಿಯಲು ನಿರಂತರ ನೇಮಕಾತಿ…
ಫ್ಯಾಶಿಸಂ ಎಂದರೆ
ಉತ್ತರವಿಲ್ಲದ ಪ್ರಶ್ನೆಗಳು ಮಾತ್ರವಲ್ಲ…
ಉಸಿರುತೆಗೆದ ಉತ್ತರಗಳು…
ಉತ್ತರಕ್ಕೆ ತಕ್ಕಂತೆ ಮಾರ್ಪಾಡಾದ ಪ್ರಶ್ನೆಗಳು…
ಫ್ಯಾಶಿಸಂ ಎಂದರೆ
ಗುಡಿಸಲುಗಳ ನಡುವೆ ಮೆರೆಯುವ
ಅಂಟಿಲಿಯಾ ಅರಮನೆ…
ಫ್ಯಾಶಿಸಂ ಎಂದರೆ
ಸನಾತನದ ಸವಾಲು…
ಜಾಗತಿಕ ದೈತ್ಯನ ಬಿಳಲು..
ಫ್ಯಾಶಿಸಂ ಎಂದರೆ
ಕಾರ್ಪೊರೇಟುಗಳಿಗೂ
ಸ’ಕುಲ’ ಪಕ್ಷಗಳಿಗೂ ಇರುವ
ಬಿಡಿಸಲಾಗದ ‘ಬಾಂಡ’ವ್ಯ
ಫ್ಯಾಶಿಸಂ ಎಂದರೆ
ತ್ರಾಣವಿಲ್ಲದ ಪ್ರಜಾತಂತ್ರ ಮಾತ್ರವಲ್ಲ,
ಸಂವಿಧಾನದ ಸಂದಿಯಿಂದಲೇ
ಹುಟ್ಟುವ ಸರ್ವಾಧಿಕಾರ…
ಫ್ಯಾಶಿಸಂ ಎಂದರೆ
ಓಟಿನಿಂದ ಸೋಲುವ ಪಕ್ಷವಲ್ಲ..
ಮೆರವಣಿಗೆಗೆ ಬಗ್ಗುವ ಸರ್ಕಾರವಲ್ಲ…
ತದ್ರೂಪಿಗಳು ಗೆಲ್ಲಬಲ್ಲ ಸಮರವಲ್ಲ…
ಫ್ಯಾಶಿಸಂ ಎಂದರೆ
ಮಹಾಮೈತ್ರಿ ಮಾಡಬೇಕಿರುವ ಮಹಾಸಮರ…
ನೊಂದವರ ಸೇನೆ ಮಾತ್ರ
ಗೆಲ್ಲಬಲ್ಲ
ಮಹಾಯುದ್ದ…
ಮಾನವತೆಯ ಮರುಪ್ರಸ್ಥಾನ
ಮರಳಿ ಸಾಧಿಸಬೇಕಿರುವ
ನಾಗರಿಕತೆಯ ಪುನರುತ್ಥಾನ…
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply