ಜನವರಿ 23-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಧರ್ಮಾತೀತ-ಸಮಾಜವಾದಿ ಆಶಯಗಳ ನಾಯಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಹುಟ್ಟಿದ ದಿನ. ಆದರೆ ಈ ದಿನವನ್ನು ಬ್ರಿಟಿಷರ ಗುಲಾಮಿ ಮಾಡಿದ ರಾಜಕೀಯ ಸಂತಾನದ ಮುಂದುವರೆಕೆಯಾದ ಬಿಜೆಪಿ ಸರ್ಕಾರ “ಪರಾಕ್ರಮ ದಿನ” ವೆಂದು ಆಚರಿಸುತ್ತಾ ನೈಜ ಸುಭಾಷರನ್ನು ಅಪಹರಿಸಲು ಪ್ರಯತ್ನಿಸುತ್ತಿದೆ. ಪರಾಕ್ರಮಕ್ಕೆ ಶೌರ್ಯ ಎಂಬ ಅರ್ಥವಿದ್ದರೂ ಸಂಘ ಪರಿವಾರದ ಹಯಾಮಿನಲ್ಲಿ ಅದಕ್ಕೆ ಪರರ ಮೇಲೆ ಆಕ್ರಮಣ ಅರ್ಥಾತ್ ದುರ್ಬಲ ಮತ್ತು ಅಸಹಾಯಕರ ಮೇಲೆ ಆಕ್ರಮಣ ಮಾಡುವುದು ಎಂಬ ಅರ್ಥವೂ ಬಂದುಬಿಟ್ಟಿದೆ.
ಸುಭಾಷರು ಸಂಘಿಗಳ ಅರ್ಥದ ಪರಾಕ್ರಮಿ ಎಂದೂ ಆಗಿರಲಿಲ್ಲ. ಅವರು ಬಲಿಷ್ಟ ಬ್ರಿಟಿಷರ ವಿರುದ್ಧ ದುರ್ಬಲ ಹಾಗೂ ಶೋಷಿತ ಜನರನ್ನು ಒಟ್ಟುಗೂಡಿಸಿ ಪ್ರಾಣದ ಹಂಗು ತೊರೆದು ಹೋರಾಡಿದ ನಿಜವಾದ ಅರ್ಥದ ವೀರರಾಗಿದ್ದರು. ಇಂದು ನೇತಾಜಿಯ ಪರಂಪರೆಗೆ ತಾವೇ ವಾರಸುದಾರರೆಂದು ಹೇಳಿಕೊಳ್ಳುತ್ತಿರುವ ಸಂಘಿಗಳು ಅಂದು ಸುಭಾಷರನ್ನು ಸೋಲಿಸುವ ಬ್ರಿಟಿಷರ ಸೇನಾ ಪ್ರಯತ್ನಗಳಿಗೆ ನಿಷ್ಟವಂತ ಸೇವೆ ಸಲ್ಲಿಸುತ್ತಿದ್ದರು. ಅಗ ಎರಡನೇ ಮಹಾಯುದ್ಧದಲ್ಲಿ ಸುಭಾಷರು ಬ್ರಿಟಿಷರ ವಿರುದ್ಧ ಸೇನಾತ್ಮಕ ದಾಳಿಗೆ ಜಗತ್ತಿನ ವಿವಿದೆಡೆ ಸೈನಿಕರನ್ನು ನೊಂದಾಯಿಸಿಕೊಳ್ಳುತ್ತಿದ್ದರೆ, ಸಾವರ್ಕರ್ ನೇತೃತ್ವದಲ್ಲಿ ಈ ಹಿಂದೂತ್ವವಾದಿಗಳು ಹಿಂದೂಗಳನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸುವ ದಲ್ಲಾಳಿ ಕೆಲಸಗಳಲ್ಲಿ ತೊಡಗಿದ್ದರು. ಹಾಗಿದ್ದರೂ ಅವರೇ ಈಗ ನೇತಾಜಿಯನ್ನು ಹಾಡಿಹೊಗಳುತ್ತಿರುವುದರ ಹಿಂದೆ ಸ್ಪಷ್ಟ ದುರುದ್ದೇಶವಿದೆ.
ಮೊದಲನೆಯದು- ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪರಂಪರೆಯೇ ಇಲ್ಲದ ಸಂಘಿಗಳು ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಸಹಜವಾಗಿ ಇದ್ದ ಎಲ್ಲಾ ಕಾಂಗ್ರೆಸ್ಸೇತರ ಭಿನ್ನ ಧಾರೆಗಳ ನಾಯಕರನ್ನು ಹೈಜಾಕ್ ಮಾಡಿ ತಾವೇ ಆ ಧಾರೆಗಳ ವಾರಸುದಾರರು ಎಂದು ಬಿಂಬಿಸಿಕೊಳ್ಳುವುದು. ಎರಡನೆಯದು- ಸ್ವಾತಂತ್ರ್ಯ ಹೋರಟದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಧಾರೆಗಳಿಗೂ, ಹಾಗೂ ಕಾಂಗ್ರೆಸ್ಸಿನೊಳಗೆ ಗಾಂಧಿ-ನೆಹರೂಗಳಿಗೂ ಮತ್ತು ಇತರರಿಗೂ ಇದ್ದ ಸಹಜ ಮತ್ತು ಆರೋಗ್ಯಪೂರ್ಣ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬಳಸಿಕೊಳ್ಳುವುದು. ಮತ್ತು ಅದರ ಸುತ್ತಾ ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಗಾಂಧಿ-ನೆಹರೂ ಜೊತೆ ಭಿನ್ನಾಭಿಪ್ರಾಯಗಳಿದ್ದವರೆಲ್ಲಾ ತಮ್ಮ ರೀತಿ ಹಿಂದೂತ್ವವಾದಿ ಹಿಂದೂ ರಾಷ್ಟ್ರವಾದಿಗಳೆ ಎಂದು ಅಪಪ್ರಚಾರ ಮಾಡುತ್ತಾ ತಮ್ಮ ಇಂದಿನ ಹಿಂದೂ ರಾಷ್ಟ್ರ ಅಜೆಂಡಗೆ ಬಳಸಿಕೊಳ್ಳುವುದು. ಇದೆ ಸಂಘಪರಿವಾರದ ನೈಜ ಉದ್ಡೇಶವಾಗಿದೆ.
ಈ ದುರುದ್ದೇಶದಿಂದಲೇ ಅವರು ಸುಭಾಶ್ ಚಂದ್ರ ಬೋಸರ ವಿರುದ್ಧ ಗಾಂಧಿ-ನೆಹರೂ ಸಂಚು ಮಾಡಿದರು ಮತ್ತು ಸಾವರ್ಕರ್ ಅಂತ ಹಿಂದೂತ್ವವಾದಿಗಳು ಅವರ ಪರವಾಗಿ ನಿಂತರು ಎಂಬ ಸುಳ್ಳು-ಪೊಳುಗಳಿಂದ ಕೂಡಿದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆ ಮೂಲಕ ಸುಭಾಶರಿಗೆ ಅತ್ಯಂತ ದೊಡ್ದ ಅಪಮಾನ ಮಾಡುತ್ತಿದ್ದಾರೆ. ತಮ್ಮ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ಅವರು ಸುಭಾಷರಿಗೆ ತಮ್ಮ ರಾಜಕೀಯ, ಸಿದ್ಧಾಂತ, ಭಿನ್ನಭಿಪ್ರಾಯಗಳ ನಡುವೆಯೂ ಗಾಂಧಿ ನೆಹರೂಗಳ ಬಗ್ಗೆ ಇದ್ದ ಸದಭಿಪ್ರಾಯಗಳನ್ನು, ಹಾಗೂ ಸೆಕ್ಯುಲರ್ ದೃಷ್ಟಿಕೋನಗಳನ್ನು ಮುಚ್ಚಿಡುತ್ತಿದ್ದಾರೆ. ಅದೇ ಸಮಯದಲ್ಲಿ ಸಾವರ್ಕರ, ಹಿಂದೂ ಮಹಸಭ, ಮುಸ್ಲಿಂ ಲೀಗ್ ಗಳಂಥ ಕೋಮುವಾದಿಗಳ ಬಗ್ಗೆ ಸುಭಾಶರು ಬಹಿರಂಗವಾಗಿ ವ್ಯಕ್ತಪಡಿಸಿದ್ದ ತಿರಸ್ಕಾರಗಳನ್ನು ಬಚ್ಚಿಡುತ್ತಿದ್ದಾರೆ.
ಈ ಲೇಖನದಲ್ಲಿ ಪ್ರಮುಖವಾಗಿ ಸೆಕ್ಯುಲಾರಿಸಂ, ಹಿಂದೂ-ಮುಸ್ಲಿಂ ಐಕ್ಯತೆ, ಸಾವರ್ಕರ್ ರಂಥವರ ಬಗ್ಗೆ ಸುಭಾಶರಿಗೆ ಇದ್ದ ಅಭಿಪ್ರಾಯಗಳನ್ನು ಮಾತ್ರ ವಿವರಿಸುವ ಪ್ರಯತ್ನವನ್ನು ಪಡಲಾಗಿದೆ. ಇದಕ್ಕೆ ಪ್ರಮುಖವಾಗಿ ಸುಭಾಶರೇ ಬರೆದಿರುವ An Indian Piligrim ಮತ್ತು Indian Struggle ಎಂಬ ಸುದೀರ್ಘ ಗ್ರಂಥಗಳನ್ನು ಹಾಗೂ ಸುಭಾಷರ ಮೊಮ್ಮಗ ಹಾಗೂ ವಿದ್ವಾಂಸ ಸುಗತ ಬೋಸ್ ಅವರು ಸುಭಾಶರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ಬರೆದಿರುವ His Majesty’s Opponent ಪುಸ್ತಕವನ್ನು ಹಾಗೂ ಸಿಸಿರ್ ಕುಮಾರ್ ಬೋಸ್ ಅವರು ಸಂಪಾದಿಸಿರುವ Collected Works Of Subasha Chandra Bose ಪುಸ್ತಕಗಳನ್ನು ಆಧರಿಸಲಾಗಿದೆ. ಈ ಎಲ್ಲಾ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ನೇರವಾಗಿ ಅವುಗಳನ್ನು ಓದುವ ಮೂಲಕ ಸಂಘಪರಿವಾರದ ರಾಜಕೀಯ-ಐತಿಹಾಸಿಕ ಕುಕೃರ್ತ್ಯಗಳನ್ನು ಅರ್ಥಮಾಡಿಕೊಳ್ಳಬಹುದು.
ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕರಾಗಿದ್ದು ಮಾತ್ರವಲ್ಲದೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಮ್ಮನ್ನಾಳುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಲು ಆಜಾದ್ ಹಿಂದ್ ಫ಼ೌಜನ್ನು ಕಟ್ಟಿ , ಆ ಪ್ರಯತ್ನದಲ್ಲೇ ಹುತಾತ್ಮರಾದವರು. ಇತಿಹಾಸ ಪಠ್ಯಗಳು ಬಂಗಾಳಿಯೇತರ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೆಚ್ಚು ತಿಳಿಸಿಲ್ಲ. ಆದರೆ ಸುಭಾಷರು ಕೋಮು ಸಾಮರಸ್ಯ ಮತ್ತು ಹಿಂದು-ಮುಸ್ಲಿಂ ಏಕತೆಯ ಅಪ್ರತಿಮ ಪ್ರತಿಪಾದಕರಾಗಿದ್ದರು. ಅತ್ಯುನ್ನತ ದರ್ಜೆಯ ರಾಷ್ಟ್ರವಾದಿಯಾಗಿದ್ದ ಸುಭಾಷರು ಭವಿಷ್ಯದ ಭಾರತವನ್ನು ಸಮಾಜವಾದಿ ಆದರ್ಶಗಳಲ್ಲಿ ಕಟ್ಟಬೇಕೆಂದು ಕನಸು ಕಟ್ಟಿಕೊಂಡಿದ್ದರು. ಇದು ಭಾರತದ ಇತಿಹಾಸದ ಬಗ್ಗೆ ಅವರಿಗಿದ್ದ ದೃಷ್ಟಿಕೋನಗಳಲ್ಲಿ, ಆಜಾದ್ ಹಿಂದ್ ಫ಼ೌಜನ್ನು ಅವರು ಕಟ್ಟಿದ ಬಗೆಯಲ್ಲಿ ಮತ್ತು ಸಾವರ್ಕರ್ ಅಂಥವರ ಬಗ್ಗೆ ಇದ್ದ ಸ್ಪಷ್ಟ ತಿರಸ್ಕಾರಗಳಲ್ಲಿ ವ್ಯಕ್ತವಾಗುತ್ತದೆ.
ಟಿಪುವಿನ ಹುಲಿಯೇ ಆಜಾದ್ ಹಿಂದ್ ಫ಼ೌಜ್ನ ಬಾವುಟವಾಗಿತ್ತು!
ಭಾರತದ ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ ಟಿಪು-ಹೈದರರನ್ನು ಮತಾಂಧ ರಾಕ್ಷಸರನ್ನಾಗಿ ಚಿತ್ರಿಸಲು ಸಂಘಿಗಳು ಹಗಲಿರುಳು ಪ್ರಯತ್ನಿಸುತ್ತಿದ್ದಾರಷ್ಟೆ. ಆದರೆ ಟಿಪ್ಪು-ಹೈದರ್ ಬಗ್ಗೆ ಸುಭಾಶ ಚಂದ್ರ ಬೋಸರಿಗೆ ಮತ್ತು ಆಜಾದ್ ಹಿಂದ್ ಫ಼ೌಜ್ ಗೆ ಇದ್ದ ಗೌರವವನ್ನು ನೋಡಿದರೆ ಈ ಸಂಘಿಗಳು ನಾಲಿಗೆ ಕತ್ತರಿಸಿಕೊಳ್ಳಬೇಕಾಗುತ್ತದೆ. ಸುಭಾಶರು ಆಜಾದ್ ಹಿಂದ್ ಫ಼ೌಜಿನ ಮೊದಲ ಬಾವುಟದಲ್ಲಿ ಟಿಪ್ಪುವಿನ ಹಾರುವ ಹುಲಿಯನ್ನು ಬ್ರಿಟಿಷ್ ವಿರೋಧಿ ಸಮರದ ಸಂಕೇತವನ್ನಾಗಿ ಬಳಸಿಕೊಂಡಿದ್ದರು. ಬಾವುಟವನ್ನು ಬಿಡುಗಡೆ ಮಾಡುತ್ತಾ ಸುಭಾಶರು ಈ ಹಾರುವ ಹುಲಿ ಟಿಪ್ಪು ಸುಲ್ತಾನನ ಬ್ರಿಟಿಶ್ ವಿರೋಧಿ ಪರಾಕ್ರಮದ ಸಂಕೇತ ಎಂದು ಫ಼ೌಜಿನ ಸನಿಕರಿಗೆ ವಿವರಿಸಿದ್ದನ್ನು ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲ. 1943 ರ ಅಕ್ಟೋಬರ್ 21 ರಂದು ಆಜಾದ್ ಹಿಂದ್ ಫ಼ೌಜ್ ಭಾರತದ ತಾತ್ಕಾಲಿಕ ಸ್ವತಂತ್ರ ಸರ್ಕಾರವನ್ನು ಘೋಷಣೆ ಮಾಡಿತು. ಆ ಘೋಷಣೆಯನ್ನು ಮಾಡುತ್ತಾ ಆಜಾದ್ ಹಿಂದ್ ಫ಼ೌಜ್ ಮತ್ತು ನೇತಾಜಿ ಜಗತ್ತಿಗೆ ನೀಡಿದ ಘೋಶಣ ಪತ್ರದ ಮೊದಲ ಪ್ಯಾರಾದಲ್ಲೂ ಆಜಾದ್ ಹಿಂದ್ ಫ಼ೌಜ್ ದೇಶದ ಹಲವಾರು ನೈಜ ನಾಯಕರ ಜೊತೆಜೊತೆಗೆ ಟಿಪ್ಪು ಮತ್ತು ಹೈದರ್ ಅವರನ್ನೂ ಕೂಡ ಕೃತಜ್ನತೆಯಿಂದ ನೆನೆಯುತ್ತದೆ. ಇದನ್ನು ಓದಿದರೆ ಸಾಕು, ಸುಭಾಶರನ್ನು ಆರೆಸ್ಸೆಸ್ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ.
Proclamation Of The Provisonal Government Of Azad Hind ನ ಘೋಷಣ ಪತ್ರ ಹೀಗೆ ಶುರುವಾಗುತ್ತದೆ: “ಬಂಗಾಳದಲ್ಲಿ 1757 ರಲ್ಲಿ ಬ್ರಿಟಿಷರ ಕೈಯಲ್ಲಿ ಮೊಟ್ಟ ಮೊದಲ ಪರಾಜಯವನ್ನು ಅನುಭವಿಸಿದ ನಂತರ ಭಾರತದ ಜನರು ನೂರು ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ನಿರಂತರ ಸಮರ ನಡೆಸುತ್ತಲೇ ಬಂದಿದ್ದಾರೆ. ಈ ಅವಧಿಯು ಭಾರತದ ಜನರು ತೋರಿದ ಅಪ್ರತಿಮ ಸಾಹಸ, ನಿಸ್ವಾರ್ಥ ತ್ಯಾಗಗಳಿಂದ ತುಂಬಿದೆ. ಮತ್ತು ಈ ಆವಧಿಯ ಭಾರತದ ಇತಿಹಾಸದಲ್ಲಿ ಬಂಗಳದ ಸಿರಾಜುದ್ಧೌಲ ಮತ್ತು ಮೋಹನ್ ಲಾಲ್, ದಕ್ಷಿಣ ಭಾರತದ ಹೈದರ್ ಆಲಿ, ಟಿಪ್ಪು ಸುಲ್ತಾನ್, ವೇಲು ಥಂಪು….ಇನ್ನಿತರರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೊರೆದಿಡಲಾಗಿದೆ..”. ಆಸಕ್ತರು ಸುಭಾಶರು ಮಾಡಿದ ಆ ಘೋಷಣೆಯ ಪೂರ್ಣ ಪಠ್ಯ ಹಾಗೂ ಚಿತ್ರವನ್ನು ಏ ವೆಬ್ ವಿಳಾಸದಲ್ಲಿ ಓದಬಹುದು:
https://www.roots.gov.sg/Collection-Landing/listing/1278996
ಹಿಂದು-ಮುಸ್ಲಿಂ ಐಕ್ಯತೆ- ಆಜಾದ್ ಹಿಂದ್ ಫ಼ೌಜಿನ ಅಡಿಪಾಯ
ದೇಶದ ಏಕಮಾತ್ರ ಭಾಷೆಯನ್ನಾಗಿ ಬ್ರಾಹ್ಮಣೀಯ ಹಿಂದಿಯನ್ನು ಮೋದಿ ಸರ್ಕಾರ ಹೇರಲು ಹೊರಟಿದೆಯಷ್ಟೆ. ಅದಕ್ಕೆ ತದ್ವಿರುದ್ಧವಾಗಿ ಸುಭಾಶರ ಆಜಾದ್ ಹಿಂದ್ ಫ಼ೌಜಿನ ಅಧಿಕೃತ ಭಾಷೆ ಉತ್ತರ ಭಾರತದ ಜನಸಾಮಾನ್ಯರು ಬಳಸುತ್ತಿದ್ದ ಉರ್ದು-ಹಿಂದೂಸ್ಥಾನಿಯಾಗಿತ್ತು. ಹಾಗೂ ದಕ್ಷಿಣ ಭಾರತದ ಸೈನಿಕರಿಗೆ ಅರ್ಥವಾಗಲೆಂದು ಇಂಗ್ಲೀಶ್ ಬಳಸಲಾಗುತ್ತಿತ್ತು. ಫ಼ೌಜಿನ ಘೋಷವಾಕ್ಯವೇ ಉರ್ದುವಿನಲ್ಲಿ ಹೇಗೆ ಬರೆಯಲ್ಪಟ್ಟಿತ್ತು:
ಇತ್ಮದ್ (ವಿಶ್ವಾಸ), ಇತ್ತೆಫ಼ಾಕ್ (ಐಕ್ಯತೆ) ಮತ್ತು ಖುರ್ಬಾನಿ (ತ್ಯಾಗ). 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊನೆಯ ಮೊಘಲ್ ಚಕ್ರವರ್ತಿ ಬಹಾದ್ದೂರ್ ಶಾ ಜಾಫ಼ರ್ ಅವರ ನೇತೃತ್ವದಲ್ಲಿ ಭಾರತದ ಪಡೆಗಳು ದೆಹಲಿ ಚಲೋಗೆ ಕರೆ ಕೊಟ್ಟಿತ್ತಷ್ಟೆ. 1943ರ ಸೆಪ್ಟೆಂಬರ್ನಲ್ಲಿ ಕೂಡ ಸುಭಾಷರ ಆಜಾದ್ ಹಿಂದ್ ಫ಼ೌಜ್ ಬ್ರಿಟಿರನ್ನು ಭಾರತದಿಂದ ಓಡಿಸಲು ಬರ್ಮದ (ಈಗಿನ ಮಯನ್ಮಾರ್) ರಂಗೂನ್ ಇಂದ ಹೊರಟಿತು. 1857ರ ಪ್ರಥಮ ಬಂಡಾಯದ ನೆನಪಿನಲ್ಲಿ ಸುಭಾಶರು ಈ ಮಹಾ ಪ್ರಸ್ಥಾನಕ್ಕೆ ದೆಹಲಿ ಚಲೋ ಎಂದು ಕರೆ ಕೊಟ್ಟರು. ಅಷ್ಟು ಮಾತ್ರವಲ್ಲ. 1943 ರ ಸೆಪ್ತೆಂಬರ್ 26 ರಂದು ಬಹದ್ದೂರ್ ಶ ಜಾಫ಼ರ್ ಅವರ ಸಮಾಧಿಯ ಬಳಿ ಆಜಾದ್ ಹಿಂದ್ ಫ಼ೌಜಿನ ವಿಶೇಶ ಪ್ರಾರ್ಥನಾ ಸಭೆಯನ್ನು ಏರ್ಪಡಿಸಲಾಗಿತ್ತು.
ಸುಭಾಶರ ಮೊಮ್ಮಗ ಸುಗತ ಬೋಸ್ ತಮ್ಮ ವಿದ್ವತ್ಪೂರ್ಣ ಕೃತಿಯಲ್ಲಿ ವಿವರಿಸಿರುವಂತೆ ಆಜಾದ್ ಫ಼ೌಜಿನಲ್ಲಿ ಮುಸ್ಲಿಮ್ ಸೈನಿಕರ ಪ್ರಮಾಣ ಇತರರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಇತ್ತು. ಸುಭಾಶರ ಅತ್ಯಂತ ಸಮೀಪವರ್ತಿಗಳಲ್ಲೂ ಮುಸ್ಲಿಮರು ಹೆಚ್ಚಾಗಿದ್ದರು. 1943ರಲ್ಲಿ ಸುಭಾಶರು ಕೈಗೊಳ್ಳಬೇಕಾಗಿ ಬಂದ ರಹಸ್ಯ ಸಬ್ ಮೆರೀನ್ ಸಾಹಸ ಪ್ರಯಾಣದಲ್ಲಿ ಅವರ ಜೊತೆಗೆ ಪ್ರಯಾಣ ಮಾಡಿದ ಏಕೈಕ ಸಹವರ್ತಿ ದಕ್ಷಿಣದ ಹೈದರಾಬಾದಿನ ಅಬಿದ್ ಹಸನ್. ಇಡೀ ಯೂರೋಪ್ ಮತ್ತು ಏಶಿಯ ಪ್ರವಾಸದುದ್ದಕ್ಕೂ ಅವರೇ ಸುಭಾಶರ ನಿಕಟ ಸಹಾಯಕರಾಗಿದ್ದರು. ಅಜಾದ್ ಹಿಂದ್ ಫ಼ೌಜಿನ ಮೊದಲ ಡಿವಿಜನ್ನಿನ ಕಮಾಂಡರ್ ಆಗಿದ್ದವರು ಮೊಹಮ್ಮದ್ ಜಮಾನ್ ಕಮಾನಿ. ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟ ಮೊದಲು ಮಣಿಪುರದ ಇಂಫ಼ಾಲದಲ್ಲಿ ಹಾರಿಸಿದ್ದು ಫ಼ೌಜಿನ ಅಧಿಕಾರಿ ಶೌಕತ್ ಮಲ್ಲಿಕ್. ದುರಂತಕ್ಕೀಡಾದ ಅವರ ಕೊನೆಯ ಪಯಣದಲ್ಲಿ ಜೊತೆಗೆ ಹುತಾತ್ಮರಾದವರು ಹಬಿಬುರ್ ರಹಮಾನ್.
ಆದರೆ ಈ ಬಂಡಾಯವು ವಿಫಲವಾಗಿ ಫ಼ೌಜಿನ ಸೈನಿಕರನ್ನು ಬ್ರಿಟಿಷರು ಸೆರೆ ಹಿಡಿದರು. ಅವರ ಮೇಲೆ ಬ್ರಿಟಿಷರು ರಾಜದ್ರೋಹಾದ ಆಪಾದನೆ ಹೊರಿಸಿ ವಿಚಾರಣೆ ನಡೆಸಿದರು. ಆಗ ಸಾಂಕೇತಿಕವಾಗಿ ಕೆಂಪುಕೋಟೆಯಲ್ಲಿ ವಿಚಾರಣೆಗೊಳಪಟ್ಟ ಮೂವರು ಆಜಾದ್ ಹಿಂದ್ ಫ಼ೌಜಿನ ಸೈನಿಕರ ಹೆಸರು: ಪ್ರೇಮ್ ಸೆಹಗಲ್ ಎಂಬ ಹಿಂದೂ, ಶಾ ನವಾಜ್ ಖಾನ್ ಎಂಬ ಮುಸ್ಲಿಮ್ ಮತ್ತು ಗುರುಭಕ್ಶ್ ಸಿಂಗ್ ಧಿಲ್ಲೋನ್ ಎಂಬ ಸಿಖ್. ಇದೂ ಕೂಡ ಸಂಕೇತಿಕವಾಗಿ ಸುಭಾಶರ ಫ಼ೌಜಿನಲ್ಲಿ ಪಾಲಿಸುತ್ತಿದ್ದ ಧರ್ಮಾತೀತ ದೇಶಪ್ರೇಮಕ್ಕೆ ಸಂಕೇತವಾಗಿತ್ತು.
(His Majesty’s Opponent, p. 4)
ಭಾರತದ ಇತಿಹಾಸದ ಹಿಂದೂ-ಮುಸ್ಲಿಂ ವಿಭಜನೆ ತಿರಸ್ಕರಿಸಿದ್ದ ನೇತಾಜಿ
ಹಿಂದೂತ್ವವಾದಿ ಸಂಘಿಗಳು ಭಾರತದ ಇತಿಹಾಸವನ್ನು 1200 ವರ್ಷಗಳ ಆಕ್ರಾಮಕ್ಕೆ ಸಿಲುಕಿದ್ದ ಇತಿಹಾಸವೆಂದು ತಮ್ಮ ಕೋಮು ಧ್ರುವೀಕರಣದ ದುರುದ್ದೆಶಕ್ಕೆ ತಕ್ಕನಾಗಿ ಬಣ್ಣಿಸುತ್ತಾರೆ. ಹೀಗಾಗಿ ಬ್ರಿಟಿಷ್ ಪೂರ್ವದ ಮೊಘಲ್ ಆಳ್ವಿಕೆ ಹಾಗೂ ಆ ಹಿಂದಿನ ಮುಸ್ಲಿಂ ದೊರೆಗಳು ಆಳಿದ ಇಡೀ ಕಾಲಘಟ್ಟವನ್ನು ಮುಸ್ಲಿಂ ದಾಳಿಕೋರರ ಕೆಳಗೆ ಹಿಂದೂಗಳು ನಲುಗಿದ ಇತಿಹಾಸವೆಂದು ಬಣ್ಣಿಸುತ್ತಾರೆ. ಆದರೆ ಸುಭಾಶರು ಈ ರೀತಿ ಭಾರತದ ಇತಿಹಾಸವನ್ನು ಕೋಮುವಾದೀಕರಿಸಿ ನೋಡುವ ನೋಟ ಕೊಟ್ಟಿದ್ದೇ ಬ್ರಿಟಿಷರು,. ಅದು ಭಾರತವನ್ನು ಹಿಂದೂ-ಮುಸ್ಲಿಂ ಎಂದು ಒಡೆದಾಳುವ ತಂತ್ರದ ಭಾಗವಾಗಿ ಎಂದು ತಿರಸ್ಕರಿಸುತ್ತಾರೆ.
ಹಾಗೂ:
“ಬ್ರಿಟಿಷರು ಭಾರತಕ್ಕೆ ಬರುವ ಮುಂಚಿನ ಭಾರತದ ರಾಜಕೀಯವನ್ನು ಮುಸ್ಲಿಂ ಆಳ್ವಿಕೆ ಯೆಂದು ಕರೆಯುವುದು ಒಂದು ವಿರೋಧಾಭಾಸವೇ ಸರಿ. ನಾವು ದೆಹಲಿಯ ಮೊಘಲ್ ದೊರೆಗಳ ಬಗ್ಗೆ ಅಥವಾ ಬಂಗಾಳದ ಮುಸ್ಲಿಂ ದೊರೆಗಳ ಬಗ್ಗೆ ಮಾತನಾಡುವಾಗ ಎರಡು ಕಡೆ ಹಿಂದೂ-ಮುಸ್ಲಿಮರಿಬ್ಬರೂ ಜೊತೆಗೂಡಿ ಆಡಳಿತವನ್ನು ನಡೆಸುತ್ತಿದ್ದುದನ್ನು ಕಾಣುತ್ತೇವೆ. ಮುಸ್ಲಿಂ ದೊರೆಗಳ ಆಡಳಿತದಲ್ಲಿ ಹಲವಾರು ಸೇನಾಧಿಕಾರಿಗಳು ಮತ್ತು ಪ್ರಮುಖ ಮಂತ್ರಿಗಳು ಹಿಂದೂಗಳೇ ಆಗಿರುತ್ತಿದರು. ಹಿಂದೂ ದಂಡನಾಯಕರ ಸಹಾಯದಿಂದಲೇ ಮೊಘಲ್ ಆಡಳಿತ ಧೃಢಗೊಂಡಿತು. 1757ರ ಪ್ಲಾಸಿ ಕದನದಲ್ಲಿ ಬ್ರಿಟಿಷರು ಸೋಲಿಸಿದ ಸಿರಾಜುಧೌಲನ ದಂಡನಾಯಕ ಹಿಂದೂ ಆಗಿದ್ದ. ಮತ್ತು 1857ರಲ್ಲಿ ಹಿಂದೂ-ಮುಸ್ಲಿಮರು ಜೊತೆಗೂಡಿ ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದ್ದು ಮುಸ್ಲಿಂ ದೊರೆ ಬಹದ್ದೂರ್ ಶಾ ನ ಬಾವುಟದಡಿಯಲ್ಲಿ” (An Indian Piligrim , p. 13 )
ಕೋಮುವಾದಿ ಹಿಂದೂಸಭ ಮತ್ತು ಮುಸ್ಲಿಂಲೀಗ್ಗಳ ಬಗ್ಗೆ ಸುಭಾಶರ ಆಕ್ರೋಶ
ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದ ಹಾಗೂ ಜನರಲ್ಲಿ ಒಡಕುಂಟು ಮಾಡುತ್ತಿದ್ದ ಹಿಂದೂಮಹಾಸಭ ಮತ್ತು ಮುಸ್ಲಿಂ ಲೀಗ್ ಗಳ ಬಗ್ಗೆ ಸುಭಾಶರಿಗೆ ಅಪಾರ ತಿರಸ್ಕಾರವಿತ್ತು. ಅವರು 1938 ರಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದಾಗ ಈ ವಿಷಯದ ಬಗ್ಗೆ ವಿಶೇಷ ಒತ್ತುಕೊಟ್ಟು ಮಾತಾಡಿದ್ದರು: “ನಾವು ಹಿಂದೂ ರಾಜ್ ಎಂಬ ಮಾತುಗಳನ್ನು ಅಗಾಗ ಕೇಳುತ್ತಿರುತ್ತೇವೆ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಭಾರತದ ಕಾರ್ಮಿಕ ವರ್ಗವು ಎದುರಿಸುತ್ತಿರುವ ಸಮಸ್ಯೆಗಳನ್ನು ಈ ಕೋಮುವಾದಿ ಸಂಘಟನೆಗಳು ಬಗೆಹರಿಸಬಲ್ಲವೇ? ಇಂಥಾ ಯಾವುದೇ ಸಂಘಟನೆಗಳ ಬಳಿ ನಿರುದ್ಯೋಗ ಮತ್ತು ಬಡತನದ ಸಮಸ್ಯೆಗಳ ಬಗ್ಗೆ ಉತ್ತರವಿದೆಯೇ?” ಎಂದು ಸುಭಾಷರು ಆಕ್ರೋಶದಿಂದ ಕೇಳಿದ್ದರು. ಅಷ್ಟು ಮಾತ್ರವಲ್ಲ ಹಿಂದೂ ಮಹಾ ಸಭ ಮತ್ತು ಮುಸ್ಲಿಂ ಲೀಗಿನ ಸದಸ್ಯರಿಗೆ ಕಾಂಗ್ರೆಸ್ಸಿನ ಸದಸ್ಯತ್ವವನ್ನು ನಿಶೇಧಿಸಿದ್ದರು. ಏಕೆಂದರೆ:
” ಜಿನ್ನಾ ಅವರಿಗೆ ಇರುವ ಆಲೋಚನೆ ಎಂದರೆ ಬ್ರಿಟಿಷರ ಸಹಾಯದೊಂದಿಗೆ ತನ್ನ ಕನಸಾದ ಪಾಕಿಸ್ತಾನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದೊಂದೇ. ಕಾಂಗ್ರೆಸ್ಸಿನ ಜೊತೆ ಸೇರಿ ಭಾರತದ ಬಿಡುಗಡೆಗೆ ಜಂಟಿ ಹೋರಾಟ ಮಾಡುವ ಯೋಚನೆಯೇ ಅವರಿಗಿಲ್ಲ.”
“ಮತ್ತೊಂದು ಕಡೆ ಸಾವರ್ಕರ್ಗೆ ಬ್ರಿಟಿಷರ ಜೊತೆ ಕೈಗೂಡಿಸಿ ಬ್ರಿಟಿಷ ಸೈನ್ಯಕ್ಕೆ ಸೇರಿಕೊಂಡು ಹಿಂದೂಗಳಿಗೆ ಸೈನಿಕ ತರಬೇತಿ ಪಡೆದುಕೊಳ್ಳುವುದೊಂದೇ ಉದ್ದೇಶವಾಗಿದೆ. ಇವರಿಬ್ಬರನ್ನು ಭೇಟಿಯದ ನಂತರ ಭಾರತ ಸ್ವಾತಂತ್ರ್ಯಕ್ಕಾಗಿ ಇವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ” ಎಂದು ಘೋಷಿಸಿದ್ದರು.
( The Indian Sruggle.p. 344)
ಹೀಗೆ ಸುಭಾಶ್ ಚಂದ್ರ ಬೋಸರ ಬರಹಗಳನ್ನು ಮತ್ತು ಅವರ ಬಗ್ಗೆ ಬರೆದಿರುವ ವಿದ್ವತ್ಪೂರ್ಣ ಕೃತಿಗಳನ್ನು ಓದಿದರೂ ಈ ಸಂಘಿ ಫ಼್ಯಾಸಿಸ್ಟರು ಸುಭಾಶ್ ಚಂದ್ರ ಬೋಸರ ಬಗ್ಗೆ ಕೊಡುತ್ತಿರುವ ಚಿತ್ರಣ ಎಷ್ಟು ದುರುದ್ದೇಶಪೂರಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ಬ್ರಿಟಿಷರ ಗುಲಾಮಗಿರಿ, ಕಾರ್ಪೊರೇಟ್ ಬಂಡವಾಳಿಗರ ಸೇವೆ ಮತ್ತು ಕೋಮುದ್ವೇಷದ ವಿಚ್ಹಿದ್ರಕಾರಿ ಚರಿತ್ರೆ ಬಿಟ್ಟರೆ ದೇಶ ಕಟ್ಟಿದ ಮತ್ತು ದೇಶಕ್ಕಾಗಿ ಹೋರಾಡಿದ ಚರಿತ್ರೆಯಿಲ್ಲದ ಈ ಫ಼್ಯಾಸಿಸ್ಟರು ಈಗ ಕಾಂಗ್ರೆಸ್ಸೇತರ ಮತ್ತು ಗಾಂಧಿ-ನೆಹರು ಗಳ ಜೊತೆ ಭಿನ್ನಭಿಪ್ರಾಯವಿದ್ದ ನಾಯಕರನ್ನೆಲ್ಲಾ ಹೈಜಾಕ್ ಮಾಡುತ್ತಿದ್ದಾರೆ. ಹಾಗೂ ಅವರೂ ಕೂಡ ತಮ್ಮಂತೆ ಹಿಂದೂತ್ವವಾದಿಗಳೆ ಎಂಬ ಅಭಿಪ್ರಾಯ ಬರುವ ಚಿತ್ರಣ ನೀಡುತ್ತಾ ಆ ನಾಯಕರಿಗೆ, ಈ ದೇಶಕ್ಕೆ , ಈ ದೇಶದ ಇತಿಹಾಸಕ್ಕೆ ಅವಮಾನಮಾಡುತ್ತಿದ್ದಾರೆ.
ಸುಭಾಶ್ ಚಂದ್ರ ಬೋಸ್ ರಂಥ ಅಪ್ಪಟ ಧರ್ಮಾತೀತ, ಕೋಮುವಾದ ವಿರೋಧಿ , ಸಮಾಜವಾದಿ ರಾಷ್ಟ್ರವಾದಿಯನ್ನು ಆರೆಸ್ಸೆಸ್ ಎಂದಿಗೂ ದಕ್ಕಿಸಿಕೊಳ್ಳಲಾಗದು. ದಕ್ಕಿಸಿಕೊಳ್ಳಲು ಬಿಡಬಾರದು.ಅದಕ್ಕಿರುವ ಒಂದು ರಾಜಮಾರ್ಗ ಅವರ ಸುಳ್ಳು ಇತಿಹಾಸವನ್ನು ನೈಜ ಇತಿಹಾಸದ ಮೂಲಕ ಜನರೆದುರು ಬಯಲು ಮಾಡುವುದು. ಇದೂ ಕೂಡ ಒಂದು ಅಂದೋಲನವೇ ಆಗಬೇಕು.
ಅಲ್ಲವೇ?
- ಶಿವಸುಂದರ್
ಜನಪರ ಚಿಂತಕರು ಲೇಖಕರು…
Leave a reply