ಕರ್ನಾಟಕದ ಹೆಮ್ಮೆಯ ಸೌಹಾರ್ದ ತಾಣವಾದ ಬಾಬಾಬುಡನ್ ದರ್ಗಾವನ್ನು ಕೇಸರೀಕರಿಸುವಲ್ಲಿ ಸಂಘಪರಿವಾರದವರು ಈಗಾಗಲೇ ಬಹುಪಾಲು ಯಶಸ್ವಿಯಾಗಿದ್ದಾರೆ. ಅವರ ಈ ಯಶಸ್ಸಿನಲ್ಲಿ ಸಂಘಪರಿವಾರದ ಸುಳ್ಳುಗಳ ಸತತ ಪ್ರಚಾರ, ಬಿಜೆಪಿ ಸರ್ಕಾರಗಳ ಅಧಿಕಾರ ದುರುಪಯೋಗ, ಕೇಸರೀಕರಣಗೊಂಡ ಕೋರ್ಟುಗಳ ಪಾಲುದಾರಿಕೆಗಳು ಪ್ರಧಾನ ಪಾತ್ರವಹಿಸಿವೆ. ಇದರ ಜೊತೆಗೆ ವಿರೋಧ ಪಕ್ಷದಲ್ಲಿದ್ದಾಗ ನಿರ್ಣಾಯಕ ಹೋರಾಟ ಮಾಡದ ಮತ್ತು ಅಧಿಕಾರದಲ್ಲಿದ್ದಾದ ಗಟ್ಟಿ ನಿಲುವು ತೆಗೆದುಕೊಳ್ಳದ ಕಾಂಗ್ರೆಸ್ ನಂತ ಸೆಕ್ಯುಲಾರ್ ಪಕ್ಷಗಳ ಪಾತ್ರವೂ ಇದೆ. ಇವೆಲ್ಲದರ ಪರಿಣಾಮವಾಗಿ ಬಾಧಿತ ಸಮುದಾಯಗಳು ಅಸಹಾಯಕಗೊಂಡಿವೆ ಮತ್ತು ಬಲವಂತದ ನಿರಾಸಕ್ತಿ ಬೆಳೆಸಿಕೊಂಡಿವೆ. ಪರಿಣಾಮವಾಗಿ ಸೌಹಾರ್ದ ಚಳವಳಿಗಳು ನಿತ್ರಾಣಗೊಂಡಿವೆ. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದ ಭಾಗವಾಗಿ ದರ್ಗಾದಲ್ಲಿ ನಡೆಯಬೇಕಾದ ಪೂಜಾ ವಿಧಾನಗಳ ಬಗ್ಗೆ ಕರ್ನಾಟಕ ಸರ್ಕಾರ ತನ್ನ ಅಭಿಪ್ರಾಯವನ್ನು ಮಾರ್ಚ್ ಒಳಗೆ ತಿಳಿಸಬೇಕೆಂದು ಆದೇಶ ನೀಡಿದೆ. ಅದರಂತೆ ಕರ್ನಾಟಕ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಗೃಹಮಂತ್ರಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ಆ ಸಮಿತಿಯು ಜನವರಿ ೧೭ ರಂದು ಸಂಬಂಧಪಟ್ಟವರೆಲ್ಲರ ಸಭೆಯೊಂದನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿದೆ.
2018ರ ತನ್ನದೇ ಆದೇಶಕ್ಕೆ ಬದ್ಧವಾಗಲಿ ಕಾಂಗ್ರೆಸ್ ಸರ್ಕಾರ
ಆದರೆ ಇದೆ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದಿನ ಕಾಂಗ್ರೆಸ್ ಸರ್ಕಾರ 2017 ರಲ್ಲಿ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಂಶೋಧಕರಾದ ಷ. ಶೆಟ್ಟರ್ ಮತ್ತು ಪ್ರೊ. ರಹಾಕತ್ ತರೀಕೆರೆ ಅವರನ್ನೂ ಒಳಗೊಂಡ ಒಂದು ಹೈ ಪವರ್ ಸಮಿತಿಯನ್ನು ನೇಮಿಸಿತ್ತು. ಅದು ಸಂಬಂಧಪಟ್ಟವರ ಎಲ್ಲರಿಂದಲೂ ಅಹವಾಲು ಮತ್ತು ದಾಖಲೆಗಳನ್ನು ಸಂಗ್ರಹಿಸಿತ್ತು. ಮತ್ತು ಎಲ್ಲಾ ಆಯಾಮಗಳಿಂದಲೂ ಪ್ರಕರಣವನ್ನು ವಿಶ್ಲೇಷಿಸಿತ್ತು. ನ್ಯಾ.ದಾಸ್ ಸಮಿತಿಯು ತನ್ನ ವರದಿಯಲ್ಲಿ: ಪ್ರಾರಂಭದಿಂದಲೂ ಸದರಿ ಸಂಸ್ಥೆ ದರ್ಗಾ ಆಗಿದೆ ಎಂಬುದಕ್ಕೆ ದಾಖಲೆ ಇದೆಯೇ ವಿನಾ , ದತ್ತ ಪೀಠವಾಗಿತ್ತೆಂಬುದಕ್ಕೆ ಯಾವುದೇ ದಾಖಲೆಯಿಲ್ಲವೆಂದೂ, ದರ್ಗಾ ದಲ್ಲಿ ಅರ್ಚಕರ ನೇಮಕಾತಿ ಮಾಡಿದರೆ ಮತ್ತು ಆಗಮ ಪೂಜಾ ಪದ್ಧತಿಯನ್ನು ಜಾರಿ ಮಾಡಿದರೆ ದರ್ಗಾದ ಧಾರ್ಮಿಕ ಸ್ವರೂಪವೇ ಬದಲಾಗುತ್ತದೆ. ಮತ್ತು ಅಂಥಾ ಕ್ರಮವು ೧೯೯೧ರ ಧಾರ್ಮಿಕ ಸ್ಥಳ ಗಳ ಕಾಯಿದೆಯೆ ಉಲ್ಲಂಘನೆಯಾಗುತ್ತದೆ. ಆದ್ದರಿಂದ ದರ್ಗಾದಲ್ಲಿ ೧೯೮೯ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಆದೇಶಿಸಿದಂತೆ ದರ್ಗಾ ಸ್ವರೂಪದ ಪೂಜಾ ವಿಧಾನಗಳನ್ನು ಮಾತ್ರ ಮುಂದುವರೆಸಿಕೊಂಡು ಹೋಗತಕ್ಕದ್ದು ಎಂದು ಶಿಫ಼ಾರಸ್ಸು ಮಾಡಿತ್ತು.
ಆ ಶಿಫ಼ಾರಸ್ಸಿನನ್ವಯ ಕರ್ನಾಟಕ ಸರ್ಕಾರವು 2018 ರ ಮಾರ್ಚ್ ನಲ್ಲಿ ಒಂದು ಆದೇಶವನ್ನು ಮಾಡಿ ದರ್ಗಾದಲ್ಲಿ 1975 ರ ಪೂರ್ವದ ಹಾಗೂ 1989 ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ಆದೇಶಿಸಿದ ಪೂಜಾ ಪದ್ಧತಿಯೇ ಇರತಕ್ಕದ್ದು ಎಂದು ಆದೇಶಿಸಿತ್ತು. ಆದರೆ ಆ ಆದೇಶವನ್ನು ಸಂಘಪರಿವಾರದ ಸಂಸ್ಥೆಗಳು ಹೈಕೋರ್ಟಿನಲ್ಲಿ ಪ್ರಶ್ನಿಸಿ ತಡೆಯಾಜ್ನೆ ಪಡೆದುಕೊಂಡರು. 2019 ರ ನಂತರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ, ಹೈಕೋರ್ಟಿನಲ್ಲಿ ಸಂಘಪರಿವಾರದ ಜೊತೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಹಕರಿಸಿತು. ಹೀಗಾಗಿ 2021 ರ ಸೆಪ್ಟೆಂಬರ್ ನಲ್ಲಿ ಕರ್ನಾಟಕ ಹೈಕೋರ್ಟು 2018 ರ ಆದೇಶ ರದ್ದು ಮಾಡಿ ಮತ್ತೊಮ್ಮೆ ಎರಡೂ ಕಡೆಯವರ ವಾದ ಆಲಿಸಿ ನಿರ್ಧಾರ ತೆಗೆದುಕೊಳುವಂತೆ ಸೂಚಿಸಿತು. ಮಾಧುಸ್ವಾಮಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ಸಮಿತಿ ದರ್ಗಾ ಬಗ್ಗೆ ಕೊಟ್ಟ ಸಾವಿರಾರು ಪುಟಗಳ ಐತಿಹಾಸಿಕ, ಆಡಳಿತಾತ್ಮಕ, ಕಂದಾಯ, ಇತರ ಯಾವುದೇ ದಾಖಲೆಗಳಾನ್ನು ಗಮನಕ್ಕೇ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ದರ್ಗಾದಲ್ಲಿ ಹಿಂದೂ ಅರ್ಚಕರ ನೇಮಕಾತಿ ಮತ್ತು ಆಗಮ ಪದ್ಧತಿಯ ಪೂಜ ವಿಧಾನಗಳನ್ನು ಜಾರಿ ಮಾಡಿಬಿಟ್ಟಿತು.
ಇದರ ವಿರುದ್ಧ ಶಾಖಾದ್ರಿ ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿಸಿದರು. 2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈವರೆಗೆ ದರ್ಗಾದಲ್ಲಿ ಆಗಿರುವ ಅನ್ಯಾಯವನ್ನು ಸರಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರಕ್ಕೆ ಸತ್ಯದ ಪರವಾಗಿ ನಿಲ್ಲುವ ಅವಕಾಶ ಒದಗಿ ಬಂದಿದೆ. ಸಂಘಿಗಳ ಸುಳ್ಳುಗಳಿಗೆ ಬಲಿಯಾಗದೆ, ಅಥವಾ ರಾಜಿ-ಖಾಜಿ ಮರೆಮೋಸಗಳನ್ನು ಮಾಡದೆ ತನ್ನದೇ 2018 ರ ಆದೇಶಕ್ಕೆ ಬದ್ದರಾಗಿ ಸುಪ್ರೀಂಗೆ ವರದಿ ನೀಡಬೇಕಿದೆ. ಇದೊಂದು ಕೊನೆ ಅವಕಾಶ. ಸರ್ಕಾರ ಹಾಗೆ ಮಾಡಲು ನಾಡಿನ ಜನರು ಒತ್ತಾಯ ಮಾಡಬೇಕಿದೆ. ಈ ಮಧ್ಯೆ ದರ್ಗಾ ಅಲ್ಲ ದತ್ತಪೀಠ ಎಂಬ ಸಂಘಿಗಳ ಅಪಪ್ರಚಾರ ಮುಂದುವರೆದಿದೆ. ಮೊನ್ನೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲೂ ಸಿಟಿ ರವಿ ನೇತೃತ್ವದ ಸಂಘಿ ತಂಡ ಅದೇ ಸುಳ್ಳುಗಳನ್ನು ಪುನರುಚ್ಚರಿಸಿದೆ.
ಬಾಬಾಬುಡನ್ ದರ್ಗಾ: ಸಂಘಿ ಸುಳ್ಳುಗಳು- ಐತಿಹಾಸಿಕ ಸತ್ಯಗಳು
ಬಾಬಾಬುಡನ್ ದರ್ಗಾ ಬಗ್ಗೆ ಸಂಘಿಗಳ ಆ ದುಷ್ಟ ಪ್ರತಿಪಾದನೆಗಳು ಎಷ್ಟು ಹಸಿಹಸಿ ಸುಳ್ಳುಗಳೆಂಬುದು ಮತ್ತೊಮ್ಮೆ ಸರ್ಕಾರದ ಮತ್ತು ನಾಡಿನ ಜನತೆಯ ಗಮನಕ್ಕೆ:
ಸುಳ್ಳು-1- ಬಾಬಾಬುಡನ್ ದರ್ಗಾ ಇರುವುದು ನಾಗೇನಹಳ್ಳಿಯಲ್ಲಿ-ದತ್ತಾತ್ರೇಯ ಪೀಠದಲ್ಲಲ್ಲ!
ಸತ್ಯ: ವಾಸ್ತವವಾಗಿ ಇಂಥಾ ವಾದವನ್ನು ತೀರಾ ಇತ್ತೀಚಿನವರೆಗೆ ಸಂಘಪರಿವಾರದವರೇ ಮುಂದಿಟ್ಟಿರಲಿಲ್ಲ. ಹಾಗೆ ನೋಡಿದರೆ, 1975ರಲ್ಲಿ ಹಿಂದೂ ಭಕ್ತಾದಿಗಳು ಹೂಡಿದ ಮೂಲ ದಾವೆಯಾದ OS. 25/78 ನಲ್ಲಾಗಲೀ, ಅಥವಾ 1986-89ರ ನಡುವೆ ಜಿಲ್ಲಾ ಮುಜರಾಯಿ ಅಧಿಕಾರಿ ಹಾಗೂ ರಾಜ್ಯ ಮುಜರಾಯಿ ಕಮಿಷನರ್ ಮುಂದಿಟ್ಟ ವಿವಿಧ ಪ್ರಕರಣಗಳಲ್ಲಿ ಕೂಡ ಆಗ್ರಹವಿದ್ದದ್ದು ಹಿಂದೂ ಭಕ್ತಾದಿಗಳಿಗೂ ಕೂಡ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ಉಳಿಸಿಕೊಳ್ಳಬೇಕು ಎಂಬುದೇ ವಿನಾ ಈ ಸಂಸ್ಥೆಯು ದರ್ಗಾ ಅಲ್ಲ ಎಂಬುದಲ್ಲ ಅಥವಾ ಹಿಂದೂ ಅರ್ಚಕರ ನೇಮಕಾತಿಯನ್ನೂ ಅಲ್ಲ. ಹಿಂದೂ ಆಗಮ ಪದ್ಧತಿಯ ಪೂಜೆಗಳನ್ನೂ ಅಲ್ಲ.
1992ರಲ್ಲಿ ಬಾಬ್ರಿ ಮಸೀದಿ ನಾಶದ ನಂತರದಲ್ಲಿ ದರ್ಗಾ ಅಲ್ಲ- ದೇವಸ್ಥಾನ ಎಂಬ ದುರುದ್ದೇಶಿತ ವಾದವನ್ನು ಯಾವುದೇ ಪುರಾವೆಯಿಲ್ಲದೆ ಸಂಘಿಗಳು ಮುಂದಿಡತೊಡಗಿದರು. ಅದಕ್ಕೆ ಪೂರಕವಾಗಿ ಅವರು ಪ್ರಾರಂಭಿಸಿದ ದತ್ತ ಜಯಂತಿ ಹಾಗೂ ದತ್ತಾಮಾಲಾಗಳಂಥ ಹೊಸ ಆಚರಣೆಗಳಿಗೆ ಆಗ ಅಧಿಕಾರದಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಸರ್ಕಾರಗಳು ಅವಕಾಶ ಮಾಡಿಕೊಡುತ್ತಾ ಸಂಘಿಗಳ ಸುಳ್ಳುಗಳಿಗೆ ಆಡಳಿತಾತ್ಮಕ ಮಾನ್ಯತೆ ತಂದುಕೊಟ್ಟುಬಿಟ್ಟರು. ಅದರಿಂದ ಮತ್ತಷ್ಟು ಉತ್ತೇಜಿತರಾದ ಈ ಸುಳ್ಳಿಗರು 2003ರ ನಂತರ ದರ್ಗಾ ಇರುವುದು ಚಿಕ್ಕಮಗಳೂರಿನ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿ ಹಾಗಿ ಸರ್ವೇ ನಂಬರ್ 195 ರಲ್ಲಿರುವುದು ದತ್ತಾತ್ರೇಯ ದೇವರ ದೇವಸ್ಥಾನ ಎಂಬ ಅಪಪ್ರಚಾರ ಪ್ರಾರಂಭಿಸಿದರು. ಇದಕ್ಕೆ ಪೂರಕವಾಗಿ ರೆವೆನ್ಯೂ ದಾಖಲೆಗಳ ತಪ್ಪು ವ್ಯಾಖ್ಯಾನವನ್ನು ಪ್ರಚಾರಮಾಡಲಾರಂಭಿಸಿದರು.
ಆದರೆ ವಾಸ್ತವವೆಂದರೆ ನಾಗೇನಹಳ್ಳಿ, ಸುರಗುಪ್ಪೆ ಮತ್ತು ಇನಾಂ ದತ್ತಾತ್ರೇಯ ಪೀಠ ಎಂಬ ಮೂರು ಗ್ರಾಮಗಳನ್ನು ಬಾಬಾಬುಡನ್ ದರ್ಗಾದ ನಿರ್ವಹಣೆಗೆ ಇನಾಂ ಅರ್ಥಾತ್ ಉಂಬಳಿಯಾಗಿ ನೀಡಿರುವುದು 1890 ರಿಂದ ಲಭ್ಯವಿರುವ ಮುಜರಾಯಿ ಮ್ಯಾನುಯಲ್ ಗಳು, ಮೈಸೂರು ಸಂಸ್ಥಾನಕ್ಕೆ ಸಂಬಂಧಪಟ್ಟ ವಿವಿಧ ಗೆಜಟೆಯರುಗಳು, ಮೈಸೂರು ಪುರಾತತ್ವ ಇಲಾಖೆಯ ದಾಖಲೆಗಳು, ಬ್ರಿಟಿಷರ ಕಾಲದ ಜಿಲ್ಲಾ ಮತ್ತು ಮುಜರಾಯಿ ಇಲಾಖಾ ವರದಿಗಳು, ಮೈಸೂರು ಆಡಳಿತದ ವರದಿಗಳು ಹಾಗೂ ಇನ್ನಿತರ ಎಲ್ಲಾ ದಾಖಲೆಗಳೂ ಸ್ಪಷ್ಟಪಡಿಸುತ್ತವೆ. (ಆಸಕ್ತರು ರಾಜ್ಯ ಪತ್ರಾಗಾರದಲ್ಲಿರುವ 1901ರ Proceedings Of Government Of Mysore, No. 683- P.F. 32-01, Ist October 1901, Proceedings Of Government Of Mysore, Petition Dated 16th August 1902 , ..ಇತ್ಯಾದಿಗಳನ್ನು ಪರಿಶೀಲಿಸಬಹುದು)
ಹಾಗೆಯೇ 1955ರಲ್ಲಿ ಇನಾಂ ರದ್ಧತಿಯಾದ ನಂತರ ಧಾರ್ಮಿಕ ಕೇಂದ್ರಗಳ ನಿರ್ವಹಣೆಗೆ ತಸ್ದೀಕ್ ಅನ್ನು ನಿಗದಿ ಮಾಡಲಾಯಿತು. ಅದರ ಮೊತ್ತವನ್ನು ಆ ಸಂಸ್ಥೆಗಳಿಗೆ ಒಟ್ಟಾರೆ ದೊರಕುತ್ತಿದ್ದ ಇನಾಂತಿ ಆದಾಯವನ್ನು ಆಧರಿಸಿ ನಿರ್ಧರಿಸಲಾಗುತ್ತಿತ್ತು. ದರ್ಗಾಗೆ ನಿಗದಿಯಾದ ತಸ್ದೀಕ್ ಸಹ ನಾಗೇನಹಳ್ಳಿ, ಸುರಗುಪ್ಪೆ, ಮತ್ತು ಇನಾಂದತ್ತಾತ್ರೆಯ ಪೀಠ ಗ್ರಾಮದ ಆದಾಯಗಳನ್ನು ಆಧರಿಸಿಯೇ ತೀರ್ಮಾನಿಸಲಾಯಿತು. ಹೀಗಾಗಿ ಸರ್ವೇ ನಂಬರ್ 57ರಲ್ಲಿರುವ ನಾಗೇನಹಳ್ಳಿಯು ಸರ್ವೇ ನಂಬರ್ 195ರಲ್ಲಿರುವ ಬಾಬಾಬುಡನ್ ದರ್ಗಾಗೆ ನೀಡಲ್ಪಟ್ಟ ಇನಾಮೇ ಹೊರತೂ ದರ್ಗಾ ಇರುವುದೇ ನಾಗೇನಹಳ್ಳಿಯಲ್ಲಲ್ಲ. ಈಗಲೂ ಸರ್ವೇ ನಂಬರ್ 195ರಲ್ಲಿರುವ ಈ ಧಾರ್ಮಿಕ ಸಂಸ್ಥೆಯ ಅಧಿಕೃತ ಹೆಸರು, ಎಲ್ಲಾ ಐತಿಹಾಸಿಕ ಹಾಗೂ ಸ್ವಾತಂತ್ರ್ಯೋತ್ತರ ರೆವೆನ್ಯೂ ದಾಖಲೆಗಳಲ್ಲಿರುವ ಹೆಸರು ” ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ” ಎಂದೇ ಹೊರತು ದತ್ತಾತ್ರೇಯ ದೇವಸ್ಥಾನ ಎಂದಲ್ಲ.
ಆದರೂ 1997ರಲ್ಲಿ ಹಾಗೂ 2012ರಲ್ಲಿ ಮುಜರಾಯಿ ಇಲಾಖೆಯು ತಸ್ದೀಕ್ ಫಲಾನುಭವಿಯನ್ನು ದತ್ತಾತ್ರೇಯ ದೇವರು ಎಂದು ಬದಲಾಯಿಸಿ ಸಂಸ್ಥೆಯನ್ನು ದತ್ತಾತ್ರೇಯ ದೇವಸ್ಥಾನ ಎಂದು ಬದಲಿಸಿತ್ತು. ಆದರೆ ಹಿಂದೂ ದೇವಸ್ಥಾನಗಳ ಪಟ್ಟೀಕರಣದ ಪ್ರಕ್ರಿಯೆಯನ್ನೇ ಬೇರೊಂದು ಕಾರಣಕ್ಕೆ ಕೋರ್ಟು ರದ್ದು ಪಡಿಸಿದ್ದರಿಂದ ಈ ಸಂಸ್ಥೆಯನ್ನು ದೇವಸ್ಥಾನ ಎಂದು ವರ್ಗೀಕರಿಸಿದ್ದ ಪಟ್ಟಿಯೂ ರದ್ದಾಯಿತು. ಇದಲ್ಲದೆ ಯಾವುದೇ ಕಾನೂನು ಅಥವಾ ಸರ್ಕಾರದ ಸುತ್ತೋಲೆಯಿಲ್ಲದೆ ಕಳೆದ ಹತ್ತು-ಹದಿನೈದು ವರ್ಷಗಳಿಂದ ಪ್ರವಾಸೋದ್ಯಮ ಜಾಹೀರಾತು ಮತ್ತು ಮೈಲಿಗಲ್ಲುಗಳ ಮೇಲೆ ಇದ್ದ ಬಾಬಾಬುಡನ್ ದರ್ಗಾ ಎಂಬ ಹೆಸರನ್ನು ಬದಲಾಯಿಸಿ ದತ್ತಪೀಠ ಎಂದು ಬರೆಸಲಾಗಿದೆ. ವಿಪರ್ಯಾಸವೆಂದರೆ ಸಂಘಪರಿವಾರದ ಇತಿಹಾಸ ತಜ್ನರು ಸದರಿ ಧಾರ್ಮಿಕ ಸಂಸ್ಥೆ ದರ್ಗಾ ಅಲ್ಲ ಎಂಬುದಕ್ಕೆ ಈ ಮೈಲಿಗಲ್ಲುಗಳನ್ನೂ ಸಹ ಒಂದು ಐತಿಹಾಸಿಕ ದಾಖಲೆಯಾಗಿ ಒದಗಿಸುತ್ತಿದ್ದಾರೆ.!
ಸುಳ್ಳು-2- 1818ರ ಖೇತುವಾರು ದಾಖಲೆಯಲ್ಲೂ ಸಂಸ್ಥೆಯ ಹೆಸರು ದತ್ತಾತ್ರೇಯ ದೇವಸ್ಥಾನ ಎಂದಿದೆ
ಸತ್ಯ: ಬ್ರಿಟಿಷರು ಭಾರತವನ್ನು ಸಂಪೂರ್ಣವಾಗಿ ತಮ್ಮ ಕಬ್ಜಗೆ ತೆಗೆದುಕೊಂಡ ಮೇಲೆ ತಮ್ಮ ಆಡಳಿತದಡಿಯಿದ್ದ ಪ್ರದೇಶಗಳ Survey ಮತ್ತು Settlement ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಅದರ ಅರ್ಥ ಯಾವ್ಯಾವ ಭೂಮಿಯಲ್ಲಿ ಏನೇನು ಬೆಳೆಯಲಾಗುತ್ತಿದೆ ಎಂಬ ಸರ್ವೇಕ್ಷಣೆ ಮತ್ತು ಅದನ್ನು ಆಧರಿಸಿ ಅದಕ್ಕೆ ಭೂ ಕಂದಾಯ ನಿಗದಿ ಮಾಡುವ ವ್ಯವಸ್ಥೆ. ಹಾಗೆ ಮಾಡುವಾಗ ಈ ಹಿಂದಿನ ರಾಜರುಗಳು ನೀಡಿದ ದೇವಾದಾಯ ಇನಾಮು ಜಮೀನುಗಳಿಗೆ ಕಂದಾಯ ವಿನಾಯಿತಿ ನೀಡಿದರು. ಅಂಥಾ ಜಮೀನುಗಳನ್ನು ಪ್ರತ್ಯೇಕವಾಗಿ Quit Rent Register ನಲ್ಲಿ ನಮೂದಿಸಿದರು. ಹಾಗೂ ಹೀಗೆ ಕಂದಾಯ ವಿನಾಯ್ತಿ ಪಡೆದ ಜಮೀನುಗಳ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಮೈಸೂರು ಸಂಸ್ಥಾನದಲ್ಲಿ Suarvey ಮತ್ತು Settlement ಪ್ರಕ್ರಿಯೆ 1863ರಲ್ಲಿ ಆರಂಭವಾಗಿ 1890ರಲ್ಲಿ ಮುಕ್ತಾಯವಾಯಿತು. ಅದನ್ನು ಆಧರಿಸಿ ಆಕಾರ್ಬಂದ್ ದಾಖಲೆಗಳನ್ನೂ ಹಾಗೂ ಅದನ್ನು ಅಧರಿಸಿ ಖೇತುವಾರು ದಾಖಲೆಗಳನ್ನು ತಯಾರಿಸಲಾಯಿತು.
ಹೀಗಾಗಿ ಮೈಸೂರು ಸಂಸ್ಥಾನದಲ್ಲಿ ಮೊದಲ ಖೇತುವಾರು ದಾಖಲೆ ತಯಾರಾದದ್ದೇ 1886ರಲ್ಲಿ! ಅದ್ದರಿಂದ 1818 ರಲ್ಲಿ ಖೇತುವಾರು ದಾಖಲೆಯಿತ್ತೆಂಬುದಾಗಲೀ, ಅದರಲ್ಲಿ ದತ್ತಾತ್ರೇಯ ದೇವಸ್ಥಾನ ಎಂದು ಎಂದು ದಾಖಲಿಸಲಾಗಿದೆಯೆಂಬುದಾಗಲೀ ಹಸಿ ಸುಳ್ಳು. ಮೈಸೂರು ಸಂಸ್ಥಾನಕ್ಕೆ ಸಂಬಂಧಪಟ್ಟಂತೆ 1886-87, 1903-04, 1922-23, 1934-35ಗಳಲ್ಲಿ ತಯಾರಿಸಲಾದ ನಾಲ್ಕು ಖೇತುವಾರು ದಾಖಲೆಗಳಿವೆ . ಅದ್ಯಾವುದರಲ್ಲೂ ಸಂಸ್ಥೆಯ ಹೆಸರು ದತ್ತಾತ್ರೇಯ ದೇವಸ್ಥಾನ ಎಂದಿಲ್ಲ. ದರ್ಗಾ ಎಂದೇ ಇದೆ. ಖೇತುವಾರು ದಾಖಲೆಗಳನ್ನು ಆಧರಿಸಿಯೇ ನಂತರದಲ್ಲಿ Record Of Rights (RR) ಮತ್ತು ಪಹಣಿಗಳನ್ನು ಸಿದ್ಧಪಡಿಸಲಾಯಿತು. ಅವಕ್ಕೆ ಮೂಲತಾಯಿ ಖೇತುವಾರು. ಅದರಲ್ಲಿ ಇಲ್ಲದ ದತ್ತಾತ್ರೇಯ ದೇವರು ಪಹಣಿಯಲ್ಲಿ ಪ್ರತ್ಯಕ್ಷವಾಗಬಹುದೇ?
ಸುಳ್ಳು-3: ಖಲಂದರ್-ಇ-ಬರ್ಹಾಕ್ ಎಂಬ ಶಾಖಾದ್ರಿ ಪ್ರಕಟಿತ ಪುಸ್ತಕದಲ್ಲಿ ಇದು ದೇವಸ್ಥಾನವಾಗಿತ್ತು ಎಂಬ ಹೇಳಿಕೆಗಳಿವೆ
ಸತ್ಯ: ಈ ಸಂಸ್ಥೆಯು ದೇವಸ್ಥಾನವಾಗಿತ್ತೆಂಬ ಬಗ್ಗೆ ಹಾಗೂ ಇಲ್ಲಿ ಹಿಂದೂ ಅಗಮ ಪದ್ಧತಿಯ ರೀತಿಯಲ್ಲಿ ಪೂಜೆ ನಡೆಯುತ್ತಿತ್ತೆಂಬ ಬಗ್ಗೆ ಒಂದೇ ಒಂದು ಅಧಿಕೃತ ಪುರಾವೆಯನ್ನೂ ನೀಡಲಾಗದ ಸಂಘಪರಿವಾರ, ಬದಲಿಗೆ ಜಬ್ಬಾರ್ ಎಂಬುವರು ಬರೆದಿರುವ ಖಲಂದರ್ -ಎ-ಬರ್ಹಾಕ್ ಎಂಬ ಸ್ಥಳಪುರಾಣವನ್ನು ಒಂದು ಐತಿಹಾಸಿಕ ದಾಖಲೆಯನ್ನಾಗಿ ನೀಡಿದ್ದಾರೆ. ಅದರಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಅವರು ಈ ಗುಹೆಗೆ ಬರುವ ಮುನ್ನ ಜಂಗಮ-ಬ್ರಾಹ್ಮಣರು ಅರ್ಚನೆ ಮಾಡಲು ಬರುತ್ತಿದ್ದರು ಎಂಬ ವಾಕ್ಯವಿದೆ. ಅದಕ್ಕೆ ಯಾವುದೇ ಪೂರಕ ಪುರಾವೆಗಳು ಇಲ್ಲದಿದ್ದರೂ ಈ ವಾಕ್ಯಗಳನ್ನೇ ದಾದಾ ಹಯಾತ್ ಅವರ ಆಗಮನಕ್ಕೆ ಮುನ್ನ ಇದು ಒಂದು ಹಿಂದೂ ಕೇಂದ್ರವಾಗಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆಯೆಂಬಂತೆ ಅಹವಾಲುದಾರರು ಮುಂದಿಡುತ್ತಾರೆ.
ಆದರೆ ಸಂಘಿಗಳೆ ಒದಗಿಸುವ ಮತ್ತೊಂದು ಐತಿಹಾಸಿಕ ಪುರಾವೆ ಯಾದ ಸೂರ್ಯನಥ್ ಕಾಮತ್ ರು ಪತ್ರಿಕೆಯೊಂದರ ವಿಜಯ ದಶಮಿ ಸಂಚಿಕೆಗೆ ಬರೆದ ಲೇಖನದಲ್ಲಿ ಕರ್ನಾಟಕದಲ್ಲಿ ದತ್ತಾತ್ರೇಯ ಪಂಥವು 14 ನೇ ಶತಮಾನದಲ್ಲಿ ಪ್ರವೇಶಿಸಿತೆಂದು ಹೇಳುತ್ತಾರೆ. ಆದರೆ ಖಲಂದರ್ ಪುಸ್ತಕದಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಒಂದು ಸಾವಿರ ವರ್ಷದ ಹಿಂದೆ ಬಂದರೆಂದು ಬರೆಯಲಾಗಿದೆ. ಆ ಪುಸ್ತಕದಲ್ಲಿರುವ ಎಲ್ಲವನ್ನೂ ಒಪ್ಪಿಕೊಳ್ಳುವುದಾದರೆ ಇದನ್ನು ಕೂಡ ಇತಿಹಾಸವೆಂದೇ ಒಪ್ಪಿಕೊಳ್ಳಬೇಕಾಗುತ್ತದೆ. ಆಗ ದತ್ತಪಂಥವು ಕರ್ನಾಟಕಕ್ಕೆ ಬರುವ ಮುಂಚೆ ಮುಂಚೆ ದಾದಾ ಹಯಾತ್ ಇಲ್ಲಿ ನೆಲೆಸಿದ್ದರು ಎಂದಾಗುವುದಿಲ್ಲವೇ? ಒಂದು ಪುಸ್ತಕದಲ್ಲಿ ತನಗೆ ಬೇಕಿದ್ದನ್ನು ಮಾತ್ರ ಆಯ್ದು ತೆಗೆದುಕೊಳ್ಳುವುದನ್ನು ಅದನ್ನು ತನ್ನ ವಾದಕ್ಕೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳುವುದು ಮತ್ತದನ್ನು ಕೋರ್ಟು ಪುರಾವೆ ಎಂಬಂತೆ ಓಪ್ಪಿಕೊಳ್ಳುವುದು ಹೇಗೆ ಸಾಧ್ಯ? ಸ್ಥಳಪುರಾಣಗಳು ಉತ್ಪ್ರೇಕ್ಷಿತ ಭಾವನೆಗಳೇ ವಿನಾ ಐತಿಹಾಸಿಕ ಪುರಾವೆಗಳಲ್ಲ.
ಸುಳ್ಳು-4: ಮೆಕೆಂಜಿ ದಾಖಲೆಗಳಲ್ಲೂ ಇದು ದೇವಸ್ಥಾನವಾಗಿತ್ತೆಂಬ ಉಲ್ಲೇಖಗಳಿವೆ
ಸತ್ಯ: ಕರ್ನಲ್ ಮೆಕೆಂಜಿ ಎಂಬ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ 1782 ಕ್ಕೆ ಭಾರತಕ್ಕೆ ಬಂದು 1818ರ ತನಕ ಇಡೀ ದಕ್ಷಿಣ ಭಾರತವನ್ನು ಸುತ್ತಾಡಿ ತಾನು ಕಂಡ ಭಾರತದ ಸಾಮಾಜಿಕ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿವರಗಳನ್ನು ದಾಖಲಿಸುತ್ತಾನೆ. 1821ರಲ್ಲಿ ಮೆಕೆಂಜಿ ನಿಧನನಾದ ನಂತರ ಆತನು ಸಂಗ್ರಹಿಸಿದ ದಾಖಲೆಗಳನ್ನು ಈಸ್ಟ್ ಇಂಡಿಯಾ ಕಂಪನಿಯು ಮೂರು ಹಡಗುಗಳಲ್ಲಿ ಬ್ರಿಟನ್ನಿಗೆ ಸಾಗಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ದಾಖಲಾಗಿದ್ದ ಒಂದಷ್ಟನ್ನು ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡಲಾಗಿದೆ. ಹೀಗೆ ಲಭವಿರುವ ಸಂಗ್ರಹವನ್ನು ಆಧರಿಸಿ ಟಿವಿ ಮಾಹಾಲಿಂಗಂ ಎನ್ನುವರು “ Summary Of The Historical Manuscripts in the Mackenzie Collections” ಎಂಬ ಶೀರ್ಷಿಕೆಯಲ್ಲಿ ಎರಡು ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಆ ನಂತರದಲ್ಲಿ ಅದರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ” ಕರ್ನಾಟಕದ ಕೈಫ಼ಿಯತ್ತುಗಳು” ಎಂಬ ಶೀರ್ಷಿಕೆಯಲ್ಲಿ ಪ್ರೊ. ಎಂಎಂ ಕಲ್ಬುರ್ಗಿಯವರು ಒಂದು ಸಮಗ್ರ ಸಂಪುಟವನ್ನು ಸಂಪಾದಿಸಿದ್ದಾರೆ.
ಈಗ ಮೆಕೆನ್ಜಿಯವರು ತಮ್ಮ ದಾಖಲೆಗಳಲ್ಲಿ ಹೈದರ್ ಆಲಿಯ ಕಾಲದ ನಂತರವೇ ಈ ಸಂಸ್ಥೆಯು ಮುಸ್ಲಿಮರ ಒಡತೆನಕ್ಕೆ ಬಂದಿತೆಂದು ದಾಖಲಿಸಿದ್ದಾರೆ ಎಂಬುದು ಸಂಘಪರಿವಾರದ ವಾದವಾಗಿದೆ. ಇದನ್ನೇ 2010 ರಲ್ಲಿ ಮುಜರಾಯಿ ಕಮಿಷನರ್ ಅವರು ಒಂದು ಪುರಾವೆಯಾಗಿ ಒಪ್ಪಿಕೊಂಡಿದ್ದಾರೆ. ಹಾಗೂ ದುರದೃಷ್ಟವಶಾತ್ ಕರ್ನಾಟಕ ಹೈಕೋರ್ಟು ಕೂಡ ತನ್ನ ನಿಲುವಿಗೆ ಇದನ್ನು ಒಂದು ಪುರಾವೆಯಾಗಿ ಒಪ್ಪಿಕೊಂಡಿದೆ. ಆದರೆ ವಾಸ್ತವವೇನೆಂದರೆ ಕಲ್ಬುರ್ಗಿಯವರ ಸಂಪುಟದಲ್ಲಾಗಲೀ, ಮಹಾಲಿಂಗಂ ಅವರ ಸಂಪುಟಗಳಲ್ಲಾಗಲೀ ಎಲ್ಲೂ ಕೂಡ ಬಾಬಾಬುಡನ್ ದರ್ಗಾದ ಬಗ್ಗೆಯಾಗಲೀ, ದತ್ತಪೀಠದ ಬಗ್ಗೆಯಾಗಲೀ ಪ್ರಸ್ತಾಪವೇ ಇಲ್ಲ! ಅಷ್ಟು ಮಾತ್ರವಲ್ಲ, ಮುಜರಾಯಿ ಕಮಿಷನರ್ ಅವರ ವರದಿಯನ್ನು ಉಲ್ಲೇಖಿಸಿ ಈ ಸಂಬಂಧ ಮುಜರಾಯಿ ಕಚೇರಿಯಲ್ಲಿರುವ ಮೆಕೆಂಜಿ ದಾಖಲೆಯನ್ನು ಒದಗಿಸಬೇಕೆಂಬ ಆರ್ಟಿಐ ಅರ್ಜಿಗೆ ಇಲಾಖೆಯಲ್ಲಿ ಅಂಥ ಯಾವುದೇ ದಾಖಲೆಯೂ ಇಲ್ಲ ವೆಂದು 2015ರ ಅಕ್ಟೊಬರ್ 15ರಂದು ಉತ್ತರಿಸಿದ್ದಾರೆ..!!
ಸುಳ್ಳು-6- 1991 ರ ಕಾಯಿದೆ ಈ ಸಂಸ್ಥೆಗೆ ಅನ್ವಯವಾಗುವುದಿಲ್ಲ.
ಸತ್ಯ: ಬಾಬ್ರಿ ಮಸೀದಿ-ರಾಮಮಂದಿರ ವಿವಾದ ತಾರಕದಲ್ಲಿದ್ದಾಗ ಭಾರತದ ಪಾರ್ಲಿಮೆಂಟು “Places Of Worship (Special Provisons) Act-1991 ಎಂಬ ಕಾಯಿದೆಯನ್ನು ಜಾರಿ ಮಾಡಿದೆ. ಅದರ ಪ್ರಕಾರ ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದವೊಂದನ್ನು ಹೊರತುಪಡಿಸಿ ಹಾಲಿ ಕೋರ್ಟುಗಳಲ್ಲಿರುವ ಹಾಗೂ ಮುಂದೆ ಬರಬಹುದಾದ ಧಾರ್ಮಿಕ ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪಕ್ಕೆ ಸಂಬಂಧಪಟ್ಟ ವಿವಾದಗಳನ್ನು ಈ ಕಾಯಿದೆಯಂತೆ ಬಗೆಹರಿಸಬೇಕು. ಈ ಕಾಯಿದೆಯು 1947ರ ಆಗಸ್ಟ್ 15 ರಂದು ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪ ಯಾವ ರೀತಿಯಿತ್ತೋ ಅದೇ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕೆಂದು ವಿಧಿಸುತ್ತದೆ. ಹಾಗೂ ಈಬಗ್ಗೆ 1991ರ ನಂತರದಲ್ಲಿ ಧಾಖಲಾಗುವ ಯಾವುದೇ ವಿವಾದಗಳನ್ನು ಅಥವಾ ಹಾಲಿ ಕೋರ್ಟಿನಲ್ಲಿರುವ ವಿವಾದಗಳನ್ನು ಈ ಕಾಯಿದೆಗೆ ತಕ್ಕಂತೆ ತೀರ್ಮನಿಸಬೇಕೆಂದು ವಿಧಿಸುತ್ತದೆ.
ಅಲ್ಲದೆ ಅಂಥಾ ಉಪಾಸನಾ ಸ್ಥಳಗಳನ್ನು ಒಂದು ಧಾರ್ಮಿಕ ಸ್ವರೂಪದಿಂದ ಮತ್ತೊಂದು ಧಾರ್ಮಿಕ ಸ್ವರೂಪಕೆ ಅಥವಾ ಒಂದೇ ಧರ್ಮದ ಒಂದು ಪಂಥದಿಂದ ಮತ್ತೊಂದು ಪಂಥಕ್ಕೆ ಧಾರ್ಮಿಕ ರೂಪಾಂತರಗೊಳಿಸುವುದು ಶಿಕ್ಷಾರ್ಹ ಅಪರಾಧ. ಸಂಘಿಗಳು ಮುಂದಿಡುತ್ತಿರುವ ವಾದದ ಸತ್ಯಾಸತ್ಯತೆಗಳೇನೇ ಇದ್ದರೂ, ಅವರೂ ಕೂಡಾ 1947ರ ಆಗಸ್ಟ್ 15 ರಂದು ಸದರಿ ಧಾರ್ಮಿಕ ಕೇಂದ್ರವು ಒಂದು ದರ್ಗಾ ಆಗಿತ್ತೆಂಬುದನ್ನು ಒಪ್ಪಿಕೊಳ್ಳುತ್ತಾರೆ! ದರ್ಗಾ ಎಂದರೆ ಹಿಂದೂ-ಮುಸ್ಲಿಮರಿಬ್ಬರು ಶ್ರದ್ಧೆಯಿಂದ ನಡೆದುಕೊಳ್ಳುವ, ಶಾಖಾದ್ರಿ ಆಡಳಿತಾತ್ಮಕ ಮುಖ್ಯಸ್ಥನಾಗಿಯೂ, ಮುಜಾವರ್ ಅವರಿಂದ ನೇಮಕವಾಗುವ ಧಾರ್ಮಿಕ ವಿಧಾನಗಳನ್ನು ನಡೆಸಿಕೊಡುವ ವ್ಯವಸ್ಥೆ ಇರುವ, ಸೌಹಾರ್ದ ಕೇಂದ್ರವಾಗಿರುತ್ತದೆ.
ಬಾಬಾಬುಡನ್ ದರ್ಗಾದಲ್ಲಿಯೂ ಅದೇ ಪದ್ಧತಿಗಳಿತ್ತೆಂಬುದನ್ನು ಬ್ರಿಟಿಷ ದಾಖಲೆಗಳೂ, ಮೈಸೂರು ಸಂಸ್ಥಾನದ ಆಡಳಿತಾತ್ಮಕ ನಡಾವಳಿಗಳು, ಸಂಸ್ಥೆಯಲ್ಲಿ ಲಭ್ಯವಿರುವ ಐತಿಹಾಸಿಕ ಹಾಗೂ ಶಾಸನಾತ್ಮಕ ದಾಖಲೆಗಳೂ, ಸ್ಪಷ್ಟಪಡಿಸುತ್ತವೆ. ಹೀಗಾಗಿ ಅಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡುವುದು ಮತ್ತು ಹಿಂದೂ ಆಗಮ ಪದ್ಧತಿಯಲ್ಲಿ ಪ್ರತಿಷ್ಟಾಪನೆ, ಧೂಪ, ದೀಪ, ಅರ್ಘ್ಯ, ನೈವೇದ್ಯಗಳಂಥ ವಿಧಾನಗಳಿಗೆ ಅವಕಾಶ ಮಾಡಿಕೊಡುವುದು 1991ರ ಕಾಯಿದೆಯ ಉಲ್ಲಂಘನೆಯಾಗುತ್ತದೆ. ಈ ಪ್ರಕರಣಕ್ಕೆ 1991ರ ಕಾಯಿದೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ಕೋರ್ಟಿನ ಮುಂದೆ ಅಹವಾಲುದಾರರು ಮಂಡಿಸಿರುವ ವಾದವೇನೆಂದರೆ ಇದಕ್ಕೆ ಸಂಭಂಧಪಟ್ಟ ವಿವಾದವು 1978ರಲ್ಲೇ ಇತ್ಯರ್ಥವಾಗಿತ್ತು ಎಂಬುದು.
ಅದರೆ 1978ರ ವಿವಾದವಿದ್ದದ್ದು ಸಂಸ್ಥೆಯನ್ನು ವಕ್ಫ್ ಬೋರ್ಡಿಗೆ ಸೇರಿಸುವ ಬಗ್ಗೆ. ಮತ್ತು ಆ ವಿವಾದದಲ್ಲಿ ಈ ಸಂಸ್ಥೆಯ ಧಾರ್ಮಿಕ ಸ್ವರೂಪವು ದರ್ಗಾ ಎಂದೇ ಇತ್ಯರ್ಥವಾಗಿತ್ತು. ಅಲ್ಲದೆ ಇದು ದರ್ಗಾ ಅಲ್ಲ ದೇವಸ್ಥಾನ ಎಂಬ ವಿವಾದ ಕೋರ್ಟಿನ ಮೆಟ್ಟಿಲು ಹತ್ತಿದ್ದು 2003ರಲ್ಲಿ. ಆ ಪ್ರಕರಣದಲ್ಲೇ ಹೈಕೋರ್ಟು ಇದು ದರ್ಗಾ ಎಂದು ತೀರ್ಮಾನಿಸಿದ್ದ 1989ರ ಮುಜರಾಯಿ ಕಮಿಷನಿರ ತೀರ್ಪನ್ನು ರದ್ದು ಮಾಡಿ ಹೊಸದಾಗಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿತ್ತು. ಹೀಗಾಗಿ ಇದು 1991ರ ಕಾಯಿದೆ ಜಾರಿಯಾದ ನಂತರ 2003ರಲ್ಲಿ ಹುಟ್ಟಿಕೊಂಡ ಹೊಸ ಪ್ರಕರಣವಾಗಿದ್ದು 1991ರ ಕಾಯಿದೆಯ ಪ್ರಕಾರ 1947ರ ಆಗಸ್ಟ್ 15 ರಂದು ಯಾವ ದರ್ಗಾ ಸ್ವರೂಪದಲ್ಲಿ ಬಾಬಾಬುಡನ್ ದರ್ಗಾ ಇತ್ತೋ, ಯಾವ್ಯಾವ ಧಾರ್ಮಿಕ ವಿಧಾನಗಳು ನಡೆಯುತ್ತಿದ್ದವೋ ಅದೇ ಸ್ವರೂಪವನ್ನು ಉಳಿಸಿಕೊಳ್ಳಬೇಕಿರುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಅದರ ಬದಲಿಗೆ ಅಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಿ, ಹಿಂದೂ ಆಗಮ ಪದ್ಧತಿಯ ಮೂಲಕ ಪೂಜೆಗಳನ್ನು ನಡೆಸುವುದು ಸಂಸ್ಥೆಯ ಧಾರ್ಮಿಕ ಸ್ವರೂಪವನ್ನೇ ಬದಲಿಸಿದಂತಾಗುತ್ತದೆ. ಮತ್ತದು 1991ರ ಕಾಯಿದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು..
Leave a reply