ಸ್ವಾತಂತ್ರ್ಯದ ತೋಟದಲ್ಲಿ
ಹೂಗಳೇಕೆ ಅರಳಲೇ ಇಲ್ಲ?ಎಂದರೆ..
ನೆಲದ ಗುಣ
ಮೊಳಕೆಯೊಡೆಯುವುದು ನಿಧಾನ…ಎಂದಿರಿ!
ಇರುಳಿನ ಹಂಗು ಕಳೆದು
ಜಾವಗಳೇ ಉರುಳಿದರೂ
ಸೂರ್ಯೋದಯ ಆಗಲಿಲ್ಲವೇಕೆ? ಎಂದರೆ..
ಸೂರ್ಯನ ತೇರು
ನಡಿಗೆ ನಿಧಾನ ಎಂದಿರಿ!
ಮೌನದ ಬಸಿರು
ತುಂಬಿ ಬಂದರೂ
ಮಾತನ್ನು ಹಡೆಯಲಿಲ್ಲವೇಕೆ? ಎಂದರೆ…
ಮಾತಿನ ಹೆರಿಗೆ ಬಲು ಕಷ್ಟ,
ಕಾಯಿರಿ…ಎಂದಿರಿ
ಕಾನನದಲ್ಲಿ ಹಕ್ಕಿಗಳ
ಚಿಲಿಪಿಲಿ ಏಕಿಲ್ಲ? ಎಂದರೆ..
ಬಿರುಗಾಳಿಯ ಬಿರುಸು ತಗ್ಗಲಿ
ವಸಂತಗಾನ ಕೇಳುವಿರಿ ಎಂದಿರಿ!
ಕಾದುಕಾದು ಸೋತ ಜನ..
ಭೂಮಿಗಿಳಿದು ನೋಡಿದರೆ
ಬೀಜಗಳ ಸುತ್ತ
ಬಿಗಿ ಪಹರೆ ಇದೆ..
ಬಾನಿಗೇರಿ ಹಗಲಿನ
ದಾರಿ ನೋಡಿದರೆ
ಉರಿವ ಸೂರ್ಯನನ್ನು ಸೆರೆಗೆ ದೂಡಲಾಗಿದೆ..
ಮೌನದ ಬಸಿರೊಳಗೆ
ಇಣುಕಿ ನೋಡಿದರೆ
ಮಾತಿನ ಭ್ರೂಣವನ್ನೇ ಅಪಹರಿಸಲಾಗಿದೆ..
ಹಕ್ಕಿಯ ಗೂಡೊಳಗೆ ಹೊಕ್ಕಿ ನೋಡಿದರೆ
ಪಶ್ಚಿಮದ ರಣಹದ್ದು
ತತ್ತಿಗಳನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದೆ…
ಈಗ ಹೇಳಿ ಪಂಡಿತರೇ…
ಕಾಯುವುದೋ? ಕಾದುವುದೋ?
ಸಾವು ಬದುಕಿನ ಸಮರ ನಡೆದಿದೆ..
ಸಾವು ಸಾಯದೆ
ಬದುಕಿಗೆ ಉಳಿವಿಲ್ಲ..
ಭೂಮಿಯನ್ನು ಸೀಳದೆ
ಮೊಳಕೆ ಚಿಗುರುವುದಿಲ್ಲ…
ಕತ್ತಲನ್ನು ಸೋಲಿಸದೆ
ಸೂರ್ಯನಿಗೆ ಮುಕ್ತಿ ಇಲ್ಲ..
ಮೌನ ಮುರಿಯದೆ
ಮಾತಿಗೆ ತಾವಿಲ್ಲ..
ರಣಹದ್ದುಗಳಿರುವ ತನಕ
ತತ್ತಿಗಳ ಭಿತ್ತಿ ಹರಿಯುವುದಿಲ್ಲ..
ಹಿಂಸೆಯನ್ನುಸೋಲಿಸದೆ
ಅಹಿಂಸೆ ಜನಿಸುವುದಿಲ್ಲ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply