ಪಶ್ಚಿಮಘಟ್ಟದ ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ 6 ಮಂದಿ ಕರ್ನಾಟಕ ಸರ್ಕಾರದ
ಎದುರು ಶರಣಾದರು. ಅವರನ್ನು ಜೈಲಿಗೆ ಹಾಕುವ ಪ್ರಕ್ರಿಯೆಗಳು ನಡೆದವು. ಈ ಶರಣಾಗತಿ ಮೂಲಕ ಮಲೆನಾಡಿನ ಕಾಡುಗಳಲ್ಲಿ ನೆಲೆಗೊಂಡಿದ್ದ ಮೂರು ದಶಕಗಳ ಚಳುವಳಿ ಸ್ಥಬ್ಧಗೊಂಡಿದೆ. 2003ರಲ್ಲಿ ನಡೆದ ಪಾರ್ವತಿ, ಹಾಜಿಮಾರ ಮೊದಲ ʻಏನಕೌಂಟರ್ʼ ನಿಂದ ಹಿಡಿದು ಮಹಾ ಮೇದಾವಿ, ಅಪ್ರತಿಮ ಕ್ರಾಂತಿಕಾರಿ ಸಾಕೇತ್ ರಾಜನ್ ಸೇರಿದಂತೆ ವಿಕ್ರಮ್ ಗೌಡ್ಲು ಹತ್ಯೆವರೆಗೂ ಸುಮಾರು 14 ಮಂದಿ ಬಂಡಾಯಗಾರರು ಜನರ ಬದುಕು ಹಸನು ಮಾಡುವುದಕ್ಕಾಗಿ ಚಳವಳಿ ನಿರ್ಮಾಣದಲ್ಲಿ ತೊಡಗಿಸಿಕೊಂಡು, ಪ್ರಾಣ ತೆತ್ತು ಚರಿತ್ರೆಯ ಪುಟಗಳನ್ನು ಸೇರಿದ್ದಾರೆ.
2005ರಲ್ಲಿ ಚಳುವಳಿಯ ಪ್ರಮುಖ ಆಧಾರ ಸ್ಥಂಬವಾಗಿದ್ದ ಸಾಕೇತ್ ಮೆಣಸಿನಹಾಡ್ಯ
ʻಏನ್ಕೌಂಟರ್ʼ ನಲ್ಲಿ ಹತರಾದ ನಂತರ ಚಳವಳಿಯ ಜಂಘಾ ಬಲ ಕುಸಿಯಿತು. ಮಲೆನಾಡಿನಲ್ಲಿ
ಕ್ರಾಂತಿಕಾರಿ ಚಳವಳಿ ಮುಂದುವರಿಸುವುದು ಬೇಡವೆಂದು ವಾದಿಸುತ್ತಾ ಬಿನ್ನಾಭಿಪ್ರಾಯ
ಹೊಂದಿದ್ದ ಒಂದು ಗುಂಪು 2007ರಲ್ಲಿ ಪಕ್ಷ ಸಂಘಟನೆ ತೊರೆದು ಹೊರಹೋಯಿತು. ಇದು
ಅಲ್ಲಿಯವರೆಗೆ ಕರ್ನಾಟಕದಲ್ಲಿ ಎರಡು ದಶಕಗಳ ಕಾಲ ಇಡಿಯಾಗಿದ್ದ ಚಳವಳಿ ಇಬ್ಭಾಗವಾಗಿ
ಚಟುವಟಿಕೆಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿತು.
ಹೊರಗೆ ಹೋದ ಗುಂಪು ʻಪ್ರಜಾತಂತ್ರದʼ ಹೆಸರಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಚಳವಳಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತು. ಇದು ರಾಜ್ಯದ ಜನರ ಮನಸ್ಸಿನಲ್ಲಿ ಮಲೆನಾಡಿನ ಚಟುವಟಿಕೆ ಕುರಿತು ನಕಾರಾತ್ಮಕ ಅಭಿಪ್ರಾಯ ಮೂಡಲು ಕಾರಣವಾಯಿತು. ಅಲ್ಲದೇ ಸರ್ಕಾರಗಳು ಅಲ್ಲಿನ ನಾಯಕರ ಮೇಲೆ ಮುಗಿಬೀಳಲು ಅನುಕೂಲ ಮಾಡಿಕೊಟ್ಟಂತಾಯಿತು. ಅಷ್ಟರಲ್ಲೇ ಮಲೆನಾಡಿನ ಸಂಘಟನೆಯ ಭಾಗವಾಗಿದ್ದ ನಾಲ್ಕೈದು ಮಂದಿ ರಾಜ್ಯ ನಾಯಕರನ್ನು ಪೊಲೀಸರು ಬಂಧಿಸಿ, ಜೈಲಿಗೆ
ಕಳುಹಿಸಿದರು. ಪೊಲೀಸ್ ವ್ಯವಸ್ಥೆ ಅವರು 8-10 ವರ್ಷ ಜೈಲಿನಿಂದ ಹೊರಗೆ ಬರದಂತೆ
ನೋಡಿಕೊಂಡಿತು.
ಪಕ್ಷ ಸಂಘಟನೆಯಿಂದ ಹೊರಗೋಗಿ ತೆರೆಮರೆಯಲ್ಲಿ ನಗರ ಪ್ರದೇಶದ ಚಟುವಟಿಕೆಯಲ್ಲಿ
ತೊಡಗಿಸಿಕೊಂಡಿದ್ದ ನಾಯಕರನ್ನು ಶರಣಾಗತಿ ಮಾಡಿಸಲು ಅವರದೇ ಸ್ನೇಹಿತರು ಆಗಿನ
ಕಾಂಗ್ರೆಸ್ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಸೃಷ್ಟಿಸಿದ ʻಶಾಂತಿಗಾಗಿ ನಾಗರಿಕ ವೇದಿಕೆʼ ಸೃಷ್ಟಿಸಿದರು. ಈ ನಾಯಕರು, ಶರಣಾಗಲು ತಯಾರಿದ್ದ ಇನ್ನೂ ಕೆಲವರನ್ನು ಜೊತೆ ಸೇರಿಸಿಕೊಂಡು 2014ರಲ್ಲಿ ಅದ್ದೂರಿಯಾಗಿ ಚಿಕ್ಕಮಗಳೂರಿನಲ್ಲಿ ಶರಣಾಗಿ ನಗರದಿಂದ ʻಮುಖ್ಯವಾಹಿನಿʼ ಗೆ ಬಂದರು.
ಮಲೆನಾಡು ಕರಾವಳಿ ಭಾಗದ ಪೊಲೀಸ್ ಠಾಣೆಗಳಲ್ಲಿ ನಕ್ಸಲ್ ಸಂಬಂಧಿತ ಕೇಸು ಇಲ್ಲದವರು ಪಿಟ್ಟಿ ಕೇಸಿಗೆ ಜಾಮೀನು ಪಡೆದು ಜೈಲಿನಲ್ಲಿ ವಾರ, ತಿಂಗಳು ಕಳೆದು ಹೊರಬಂದರು. ಹತ್ತಾರು ವರ್ಷ ಅಲ್ಲಿನ ಚಳವಳಿ ಭಾಗವಾಗಿದ್ದು, ಕಾಡು ಮೇಡು ಅಲೆದು ಕೈಕಾಲು
ಕಳೆದುಕೊಂಡವರ ಮೇಲೆ ʻಶರಣಾಗತಿ ಪ್ಯಾಕೇಜ್ʼ ಪಕ್ಕಕ್ಕಿಟ್ಟು ಪೊಲೀಸರು ಹಾಕಿದ ಡಜನ್ಗಟ್ಟಲೆ ಕೇಸುಗಳಿಂದಾಗಿ ಜೈಲಿನಲ್ಲಿದ್ದಾರೆ ಇಲ್ಲವೇ ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ಕಣ್ಣೆದುರು ಇರುವಾಗಲೇ, ನಾನಾ ಕಾರಣಗಳ ಹಿನ್ನೆಲೆಯಲ್ಲಿ ಅನಿವಾರ್ಯ ಎಂಬಂತೆ ಮತ್ತೊಂದು ಶರಣಾಗತಿ ಪ್ರಹಸನ ನಡೆದಿದೆ.
ಇದು ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಆರಂಭವಾದಾಗಿನಿಂದ ಅದರ ಭಾಗವಾಗಿ ನಡೆದ ಮೂರನೇ ಶರಣಾಗತಿ. 2004ರಲ್ಲಿ ಮೊದಲ ಸಲ ನಾಲ್ಕು ಜನ ಶರಣಾದರು. ಅವರಿಗೆ ಎಕರೆಗಟ್ಟಲೆ ಜಮೀನು, ಸರ್ಕಾರಿ ನೌಕರಿ, ಹಲವು ಲಕ್ಷಗಳ ಶರಣಾಗತಿ ಪ್ಯಾಕೇಜ್ ಘೋಷಿಸಲಾಗಿತ್ತು. ಆದರೆ,
ಒಬ್ಬರಿಗೆ ಸಣ್ಣ ನೌಕರಿ ಕೊಟ್ಟಿದ್ದು ಬಿಟ್ಟರೆ, ಉಳಿದ ಮೂರು ಮಂದಿ ಆದಿವಾಸಿಗಳು ತಮಗೆ
ಸಾಗುವಳಿ ಜಮೀನು, ಸರ್ಕಾರದ ಲಕ್ಷಗಳು ಸಿಕ್ಕಿಲ್ಲವೆಂದು ಮಾಧ್ಯಮಗಳ ಮುಂದೆ ಅಳಲು
ತೋಡಿಕೊಂಡಿದ್ದರು. ಇನ್ನು ಎರಡನೇ ಶರಣಾಗತಿಯಲ್ಲಿ ಕೆಲವರು, ʻ ನಮಗೆ ಸರ್ಕಾರದ
ಕ್ಷಮಾದಾನ ಸಾಕುʼ, ʻಪ್ಯಾಕೇಜ್ ತೆಗದುಕೊಳ್ಳುವಷ್ಟು ಬಡತನ ನಮಗಿಲ್ಲʼ ಎಂದು ಹೇಳಿದ್ದರು. ತಾತ್ವಿಕ ಕಾರಣಗಳಿಗಾಗಿ ಪ್ಯಾಕೇಜ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಅದರಲ್ಲೂ ʻಕ್ರಾಂತಿಕಾರಿತನʼ ಪ್ರದರ್ಶಿಸಿದರು. ಆದರೆ, ಸರಣಿ ಕೇಸುಗಳನ್ನು
ಹಾಕಿಸಿಕೊಂಡು ವಾರಕ್ಕೆ ಮೂರು ದಿನ ಕೋರ್ಟ್ಗಳಿಗೆ ಸುತ್ತುವವರಿಗೆ, ಇಂದಿಗೂ ಜೈಲಿನ
ಕಂಬಿಯಡಿ ಕಣ್ಣಿರಿಡುವ ಮಹಿಳೆಗೆ ಪ್ಯಾಕೇಜ್ ಹಣದ ಆಗತ್ಯವಿತ್ತು. ಈ ಬಗ್ಗೆ ಸಮಿತಿಯ ಯಾರೂ ಗಮನಹರಿಸಲಿಲ್ಲ. 8- 10 ವರ್ಷ ಕಳೆದರೂ ಅವರ ಮೇಲಿನ ಅರ್ಧದಷ್ಟು ಕೇಸುಗಳು ಇನ್ನೂ
ಮುಗಿದಿಲ್ಲ. ಶರಣಾಗುವವರಿಗೆ ಸರ್ಕಾರ, ಪೊಲೀಸ್, ಸಮಿತಿ ನೀಡಿದ್ದ ಭರವಸೆಗಳು
ಹುಸಿಯಾಗಿರುವುದು ಎಲ್ಲರ ಕಣ್ಣ ಮುಂದಿದೆ.
ವಿಕ್ರಮ್ ಗೌಡ್ಲು ಹತ್ಯೆ ನಂತರ ಈ ಶರಣಾಗತಿ ನಡೆದಿದೆ. ಈ ಸರ್ಕಾರ ವರ್ಷದ ಹಿಂದೆ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಿಸಿತ್ತು. ಕಾಡಲ್ಲಿರುವ ವಿಕ್ರಮ್ ಗೌಡ್ಲುಗೆ ಈ ಸುದ್ದಿ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಪೊಲೀಸರಿಗೆ ಗೊತ್ತಿತ್ತು. ಕಳೆದ
ಒಂದು ದಶಕದಿಂದ ಕರ್ನಾಟಕದಲ್ಲಿ ಚಳವಳಿ ಇರಲಿಲ್ಲ. ಯಾವುದೇ ಹಿಂಸಾತ್ಮಕ ಘಟನೆಗಳೂ
ನಡೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿಕ್ರಮ್ ಅವರನ್ನು ಕೊಲ್ಲಲಾಯಿತು. ಇದು ನ್ಯಾಯಾನಾ? ಸರ್ಕಾರದ ಆದೇಶವಿಲ್ಲದೇ ಪೊಲೀಸರು ಎನ್ಕೌಂಟರ್ ಮಾಡಲು ಹೇಗೆ ಸಾಧ್ಯ?
ಅನಾರೋಗ್ಯ, ವಯಸ್ಸಾಗಿರುವುದು ಇತರೆ ಅನಿವಾರ್ಯ ಕಾರಣಗಳಿಂದಾಗಿ ಇಂದು ಶರಣಾಗಿರುವವರ ಮೇಲಿನ ಕಾಳಜಿ ವಿಕ್ರಮ್ ವಿಷಯದಲ್ಲಿ ಯಾಕೆ ತೋರಿಸಲಿಲ್ಲ ? ವಿಕ್ರಮ್ನನ್ನು ಪೊಲೀಸರು ಹತ್ಯೆಗೈದಿದ್ದನ್ನು ಸರ್ಕಾರ ಬಹಿರಂಗವಾಗಿಯೇ ಸಮರ್ಥಿಸಿಕೊಂಡಿತ್ತು. ಈಗ ಇದೇ ಸರ್ಕಾರ ಘಟನೆಯ ತನಿಖೆಯನ್ನು ಎಸ್ಐಟಿಗೆ ವಹಿಸಿದೆ. ಇವೆಲ್ಲಾ ಬೆಳವಣಿಗೆಗಳು ನಿಗೂಢವಾಗಿವೆ.
ʻಇತರರಂತೆ ನಮ್ಮ ಅಣ್ಣನಿಗೂ ಜೀವದಾನ ಕೊಡಬಹುದಿತ್ತು. ಅದನ್ನು ಸರ್ಕಾರ ಮಾಡಲಿಲ್ಲ.
ನಾವು ತೊಂದರೆಯಲ್ಲಿದ್ದೇವೆ. ಅಣ್ಣನನ್ನು ಹತ್ಯೆ ಮಾಡಿ ಪೊಲೀಸರು ತಪ್ಪು ಮಾಡಿದ್ದಾರೆ. ಶರಣಾಗಿರುವವರಿಗೆ ಪ್ಯಾಕೇಜ್ ನೀಡಿರುವಂತೆ ಸರ್ಕಾರವು ನಮಗೂ ಪರಿಹಾರ ನೀಡಬೇಕುʼ ಎಂದು ವಿಕ್ರಮ್ ತಂಗಿ ಸುಗುಣ ಸರ್ಕಾರದ ಮುಂದೆ ಬೇಡಿಕೆ ಇಟ್ಟಿರುವುದು ನ್ಯಾಯಯುತವಾಗಿದೆ. ಸರ್ಕಾರ ಆ ಬೇಡಿಕೆಯನ್ನು ಪರಿಗಣಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ.
ʻಶರಣಾಗತಿʼ ಮಾಡಿಸಲು ಪೈಪೋಟಿ !
ಚಳವಳಿ ಬಲಹೀನಗೊಂಡಿರುವ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಶರಣಾಗತಿ ನಡೆಯಿತು. ಅದು
ತಪ್ಪೋ ಸರಿಯೋ ಅದು ಚರ್ಚೆಯ ವಿಷಯ. ಅದಿರಲಿ, ಹೋರಾಟಗಾರರನ್ನು ಶರಣಾಗತಿ ಮಾಡಿಸಲು ಪ್ರಗತಿಪರರು ಹಾಗೂ ಮಾಜಿ ನಕ್ಸಲರ ನಡುವೆ ನಡೆದ ಪ್ರಹಸನ ಮಾತ್ರ ಕೆಟ್ಟದಾಗಿತ್ತು.
ಸರ್ಕಾರ ರಚಿಸಿದ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ, ʻಶರಣಾಗತಿ ಮಾಡಲು ಸರ್ಕಾರ
ಅಧಿಕೃತವಾಗಿ ಮೂವರನ್ನು ಒಳಗೊಂಡ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ನಾವು ಮೂರು
ಜನರಿದ್ದು, ಶರಣಾಗಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಶರಣಾಗತಿಗೆ ಯಾವುದೇ
ಪ್ರಯತ್ನ ನಡೆಸದೇ, ಕೇರಳ ಮೂಲದ ಒಬ್ಬರು ಸದಸ್ಯರು ಒಳಗೊಂಡಂತೆ ಮಾಜಿ ನಕ್ಸಲರು
ಇದರೊಳಗೆ ನುಗ್ಗಿ ಸಮಿತಿಯನ್ನು ಹೈಜಾಕ್ ಮಾಡಿ, ತಾವೇ ಇದನ್ನೆಲ್ಲಾ ಮಾಡಿದ್ದು ಎಂಬುದಾಗಿ ಸರ್ಕಾರದ ಎದುರು ಬಿಂಬಿಸಲು ಯತ್ನಿಸುತ್ತಿದ್ದಾರೆʼ ಎಂದು ಆರೋಪಿಸಿದರು.
ಆದರೆ, ಸಮಿತಿಯಿಂದ ಹೊರಗಿದ್ದ ಮಾಜಿ ನಕ್ಸಲರ ಬಣ ಸಾಮಾಜಿಕ ಜಾಲತಾಣಗಳು, ಸುದ್ದಿವಾಹಿನಿಗಳಲ್ಲಿ ತಮ್ಮ ನಿಲುವಿನ ಪರವಾಗಿರುವವರ ಮೂಲಕ ಪರ-ವಿರೋಧ ಅಭಿಪ್ರಾಯ ಬರೆಯಿಸುವ ಕೆಲಸ ಮಾಡಿತು. ಭಾರತದ ಕ್ರಾಂತಿಕಾರಿ ಚಳವಳಿ ಚರಿತ್ರೆಯಲ್ಲಿ ಇಂತಹದೊಂದು
ಕೆಟ್ಟ ಪ್ರಸಂಗ ನಡೆದಿಲ್ಲ. ಈ ಪೈಪೋಟಿಗಿಳಿದವರೆಲ್ಲರೂ ಒಂದು ಕಾಲಕ್ಕೆ ಇದೇ
ಪ್ರಗತಿಪರ-ಕ್ರಾಂತಿಕಾರಿ ಚಳವಳಿಯ ಭಾಗವಾಗಿದ್ದವರು. ಅಂತಹವರಿಂದಲೇ ಇಂತಹುದೊಂದು ನಗೆಪಾಟಿಲಿನ ಪ್ರಹಸನ ನಡೆದಿದ್ದು ಚಳವಳಿ ಬಗ್ಗೆ ಒಲವು ಇದ್ದವರಲ್ಲಿ ಬೇಸರ ತರಿಸಿದೆ.
ಕಾಡಿನಲ್ಲಿದ್ದ ಸಂಗಾತಿಗಳ ಬಗೆಗಿನ ಕಾಳಜಿಯ ಹೊರತಾಗಿ ಬೇರೆನಾದರೂ ಇದೆಯೇ ಎಂಬ
ಅನುಮಾನ, ಪ್ರಶ್ನೆ ಚಳವಳಿಯ ಒಳಹೊರಗು ತಿಳಿದವರನ್ನು ಕಾಡುತ್ತಿದೆ.
ನಿಜ ಸಂಗತಿಯೇನೆಂದರೆ, ಎರಡೂ ಬಣಗಳು ಸರ್ಕಾರದ ಒಡ್ಡೋಲಗದಲ್ಲಿರುವವರೆಂಬುದು
ಸೂರ್ಯನಷ್ಟೇ ಸತ್ಯ. ನಕ್ಸಲರ ಶರಣಾಗತಿ ವಿಷಯದಲ್ಲಿ ಪರಸ್ಪರರ ನಡುವಿನ ಪೈಪೋಟಿ
ನೋಡಿದರೆ ಸರ್ಕಾರದ ಮಟ್ಟದಲ್ಲಿ ಹೆಸರು, ಶಹಬ್ಬಾಸ್ಗಿರಿ, ಮೈಲೇಜ್ ಪಡೆಯುವ
ಮಟ್ಟಕ್ಕೆ ಮಾತ್ರ ಇದೆಯೇ? ಅಥವಾ ಕಾಳಜಿಯ ಆಚೆಗೆ ಆರ್ಥಿಕ ಹಿತಾಶಕ್ತಿ ಇದರ ಹಿಂದೆ
ಇದೆಯೇ ? ಗೊತ್ತಿಲ್ಲ. ಅದು ಇದ್ದದ್ದೇ ಆಗಿದ್ದಲ್ಲಿ ತ್ಯಾಗಬಲಿದಾನದ ಚಳವಳಿಯೊಂದನ್ನು
ಮಾರಾಟಕ್ಕೆ ಇಟ್ಟಂತಾಗುತ್ತದೆ. ಇದನ್ನು ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಲಿ
ಎನ್ನುವ ವಿನಂತಿ ನನ್ನದು.
ಈ ಮೂರು ದಶಕದಲ್ಲಿ ಮಲೆನಾಡು ಕರಾವಳಿ ಭಾಗದಲ್ಲಿ ಕ್ರಾಂತಿಕಾರಿ ಚಳವಳಿ ನಾಯಕತ್ವದಲ್ಲಿ
ಜನರನ್ನು ಸಂಘಟಿಸಿ ಹತ್ತಾರು ಹೋರಾಟಗಳನ್ನು ಸಡೆಸಲಾಗಿತ್ತು. ಅಲ್ಲಿನ ಹೋರಾಟಗಳಿಂದ
ಜನರಿಗೆ ತಕ್ಕಮಟ್ಟಿನ ಚೈತನ್ಯ ನೀಡಿತ್ತು. ಕುದುರೆಮುಖ ಗಣಗಾರಿಕೆ ವಿರುದ್ಧ ತುಂಗಭದ್ರಾ ನದಿ ಮೂಲ ಉಳಿಸುವ ಐತಿಹಾಸಿಕ ಚಳವಳಿ ಯಶಸ್ಸು ಕಂಡಿದ್ದರಿಂದ ತುಂಗೆ ಮತ್ತು ಭದ್ರೆಯರು ನಿರಾಳವಾಗಿ ಹರಿಯುತ್ತಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯೂ ಸೇರಿದಂತೆ ವಿವಿಧ ಆರಣ್ಯ ಯೋಜನೆಗಳಿಂದ ಮಲೆನಾಡಿಗರನ್ನು ಒಕ್ಕಲೆಬ್ಬಿಸಲು
ಸಾಧ್ಯವಾಗಲಿಲ್ಲ. ಆದರೆ, ಜನರ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಇಂದಿಗೂ ಸಿಕ್ಕಿಲ್ಲ. ಅರಣ್ಯ ಭೂಮಿಗೆ ಹಕ್ಕುಪತ್ರ ಸಿಗದಿರುವುದು, ಒತ್ತುವರಿ ತೆರವು, ಇತರೆ ಯೋಜನೆಗಳಿಂದ ಇಂದಿಗೂ ಆ ಭಾಗದ ಜನರು ಒಕ್ಕಲೇಳುವ ಭೀತಿಯಲ್ಲಿದ್ದಾರೆ. ಅಲ್ಲಿಯ ಜನರು ಸಂಘಟನೆಗಳ ನೇತೃತ್ವದಲ್ಲಿ ಇಟ್ಟ ಬೇಡಿಕೆಗಳನ್ನು ಯಾವ ಸರ್ಕಾರಗಳೂ ಈಡೇರಿಸಲಿಲ್ಲ. ಬದಲಾಗಿ, ಪ್ಲಾಂಟರ್ಗಳಿಗೆ ಭೂಮಿ ಗುತ್ತಿಗೆ ನೀಡುವುದು, ಪ್ರವಾಸೋದ್ಯಮದ ಹೆಸರಲ್ಲಿ ಸರ್ಕಾರಿ
ಭೂಮಿ ಪರಭಾರೆಗೆ ಮುಂದಾಗಿದೆ. ಇದುವರೆಗಿನ ಹಿನ್ನೋಟದಲ್ಲಿ ಸರ್ಕಾರಗಳು ಜನರ
ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಹೋರಾಟ ಮಾಡಿದವರನ್ನು ಏನ್ಕೌಂಟರ್,
ಸುಳ್ಳು ಕೇಸುಗಳಡಿ ಬಂಧಿಸಿ ಜೈಲಿಗೆ ಹಾಕುವ ಕೆಲಸ ಮಾಡಿದವು. ಬಹಳಷ್ಟು ಎನ್ಕೌಂಟರ್ಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವುದು ವಾಸ್ತವವಾಗಿದೆ. ಇದರ ಜೊತೆಯಲ್ಲಿ ಆಯಾ ಕಾಲದಲ್ಲಿ ನಡೆದ ಶರಣಾಗತಿಗಳು ಪಶ್ಚಿಮಘಟ್ಟದ ಚಳವಳಿಯ ಹಿನ್ನಡೆಗೆ ಕಾರಣವಾಗಿದ್ದು, ಇಂದು ಸ್ಥಬ್ಭಗೊಂಡಿದೆ.
- ದೇವು.ಟಿ ವಡ್ಡಿಗೆರೆ
Leave a reply