ಕಳೆದ ವಾರ ಬೆಂಗಳೂರಿನಲ್ಲಿ ಜಾಗೃತ ಕರ್ನಾಟಕ ಸಂಘಟನೆಯು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೆನಪಿನಲ್ಲಿ “ಮನಮೋಹನ್ ಸಿಂಗ್ ನೀತಿಗಳು- ಭಾರತದ ವರ್ತಮಾನ ಮತ್ತು ಭವಿಷ್ಯ” ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದು ಮಾಮೂಲಿನ ಲೋಕಾರೂಢಿಯ ಕಾರ್ಯಕ್ರಮವಾಗದೆ ಮನಮೋಹನ್ ಸಿಂಗ್ ಅವರ ನೀತಿಗಳ ಬಗೆಗಿನ ವಿಮರ್ಶಾತ್ಮಕ ಸಭೆಯೂ ಅಗಬೇಕೆಂಬುದು ಸಂಘಟಕರ ಘೋಶಿತ ಉದ್ದೇಶವಾಗಿತ್ತು. ಅದಕ್ಕಾಗಿ ದೇಶದ ಖ್ಯಾತ ಚಿಂತಕ ಮತ್ತು ರಾಜಕೀಯ ಕಾರ್ಯಕರ್ತ ಪ್ರೊ. ಯೋಗೇಂದ್ರ ಯಾದವ್ ಮತ್ತು ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರ ಜೊತೆ ಹಲವಾರು ವರ್ಷ ಕೆಲಸ ಮಾಡಿದ್ದ ಮತ್ತು ಈಗ ಕರ್ನಾಟಕದ ಮುಖ್ಯಮಂತ್ರಿಗಳ ಮತ್ತು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅತೀಕ್ ಅಹ್ಮದ್ ಅವರನ್ನು ಆಹ್ವಾನಿಸಲಾಗಿತ್ತು. ಇದಲ್ಲದೆ ಚರ್ಚೆಯನ್ನು ಯೋಜಿತವಾಗಿ ನಡೆಸಲುವಿವಿಧ ಸಾಮಾಜಿಕ ಹಾಗೂ ಅಕೆಡೆಮಿಕ್ ಹಿನೆಲೆಯುಳ್ಳವರ ಪ್ರಶ್ನಾರ್ಥಿಗಳ ಒಂದು ಪ್ಯಾನೆಲ್ ಅನ್ನು ರೂಪಿಸಲಾಗಿತ್ತು.
ಆದರೆ ಪ್ರಧಾನ ಭಾಷಣಕಾರರು ಅದರಲ್ಲೂ ಮುಖ್ಯವಾಗಿ ಸಮಾಜವಾದಿ ಯೋಗೇಂದ್ರ ಯಾದವರ ಭಾಷಣವು ಮನಮೋಹನ್ ಸಿಂಗರ ನೀತಿಗಳನ್ನು ನಿಷಪಕ್ಷಪಾತ ವಿಶ್ಲೇಶಣೆಗೆ ಒಡ್ಡುವ ಬದಲು ಮನಮೋಹನ್ ಸಿಂಗರ ನೀತಿಗಳ ವಿಮರ್ಶಕರನ್ನೇ ಹೆಚ್ಚು ವಿಮರ್ಶೆ ಮಾಡಿತು. ಅವರ ಕೆಲವು ಸಮರ್ಥನೆಗಳಂತೂ ಸಭಿಕರಲ್ಲಿ ಅಪಾರ ಆಶ್ಚರ್ಯ ಹಾಗೂ ಬೇಸರವನ್ನು ಹುಟ್ಟಿಸಿರಲೂ ಸಾಕು. ಕೆಲವು ಅನಿವಾರ್ಯ ಕಾರಣಗಳಿಂದ ನಾನು ಆ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಅವರ ಭಾಷಣದ ವಿಡಿಯೋವನ್ನು ಒಂದಲ್ಲ ಎಂದು ಎರಡು ಸಾರಿ ಕೇಳಿ ಈ ಲೇಖನವನ್ನು ಬರೆಯುತ್ತಿದ್ದೇನೆ.
ಆಸಕ್ತರು ಅವರ ಭಾಷಣವನ್ನು ಈ ವೆಬ್ ವಿಳಾಸದಲ್ಲಿ ಕೇಳಿಸಿಕೊಳ್ಳಬಹುದು : https://www.youtube.com/watch?v=kW_GB3TTeA0
ಮನಮೋಹನ್ ಸಿಂಗ್ ಎಂಬುದು ಈಗ ಕೇವಲ ಒಂದು ವ್ಯಕ್ತಿಯ ಹೆಸರಲ್ಲ. ಅದು ಭಾರತದ ಆರ್ಥಿಕ-ಸಾಮಾಜಿಕ-ರಾಜಕೀಯ ನಡಿಗೆಯ ದಿಕ್ಕನ್ನು ಬದಲಿಸಿದ ವಿದ್ಯಮಾನ. ಅದು ಕೇವಲ ಒಬ್ಬ ವ್ಯಕ್ತಿಯ ನೀತಿಗಳೂ ಅಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಆ ಕಾಲಘಟ್ಟದ ಆಳುವ ವರ್ಗ ಮತ್ತು ಪಕ್ಷಗಳು ಹೆಚ್ಚೂ ಕಡಿಮೆ ಸರ್ವ ಸಮ್ಮತಿಯಿಂದ ಆಯ್ಕೆ ಮಾಡಿದ ಮಾರ್ಗ. ದುರದೃಷ್ಟವಶಾತ್ ಯೋಗೇಂದ್ರ ಯಾದವರ ಭಾಷಣ There Was No Alternative ಎಂಬಂತೆ ಮಾತ್ರವಲ್ಲದೆ There Is No Alternative ಎಂಬಂತೆಯೂ ಇತ್ತು. ಹೀಗಾಗಿ ಯೋಗೇಂದ್ರ ಯಾದವ್ ಅವರ ಮತ್ತು ಅವರ ಮಾದರಿಯಲ್ಲಿ ಮನಮೋಹನ್ ಸಿಂಗರ ನೀತಿಗಳ ಬಗ್ಗೆ ಮತ್ತು ವ್ಯಕ್ತಿಯ ಬಗೆಗಿನ ವಿಶ್ಲೇಷಣೆಗಳು ಎತ್ತದ ಕೆಲವು ಪ್ರಶ್ನೆಗಳನ್ನು ಇಲ್ಲಿ ಅರ್ಥಪೂರ್ಣ ಚರ್ಚೆಗಾಗಿ ಮುಂದಿಡಲಾಗಿದೆ.
ಮೊದಲಿಗೆ ಯೋಗೇಂದ್ರ ಯಾದವರ ಭಾಷಣದಲ್ಲಿ ಒಪ್ಪಿಕೊಳ್ಳಬಹುದಾದ ಕೆಲವು ಅಂಶಗಳು: ಮನಮೋಹನ್ ಸಿಂಗರನ್ನು ಮೆಚ್ಚಿಕೊಳ್ಳಲು ಅವರು ಭಾರತದ ಪ್ರಧಾನಿಗಳಲ್ಲೇ ಅತ್ಯಂತ ವಿದ್ವಾಂಸರು ಎನ್ನುವುದು ಕಾರಣವಾಗಬಾರದು. ಏಕೆಂದರೆ ಪ್ರಧಾನಿಯಾಗಲು ವಿದ್ವತ್ತಿಗಿಂತ ವಿವೇಕ ಹಾಗೂ ಜನಪರತೆ ಮುಖ್ಯ. ಹಾಗೆಯೇ ಮನಮೋಹನ್ ಸಿಂಗರು ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಇತರರ ಸಲಹೆ ಕೇಳುತ್ತಿದ್ದರು ಎನ್ನುವುದು ಅವರ ಅವಗುಣವಲ್ಲ. ಸಮಾಲೋಚನೆಯೆಂಬುದು ಒಂದು ಪ್ರಜಾತಂತ್ರದಲ್ಲಿ ಅತ್ಯಗತ್ಯ ಪ್ರಜಾತಾಂತ್ರಿಕ ಸಂಸ್ಕೃತಿ. ಅದನ್ನು ಅನುಸರಿಸದೇ ಇದ್ದರಿಂದಲೇ ನೋಟು ನಿಷೇಧ ಇನ್ನಿತ್ಯಾದಿ ಅವಘಡಗಳು ಸಂಭವಿಸಿದವು ಎನ್ನುವ ಯೋಗೇಂದ್ರರ ಅಭಿಪ್ರಾಯ ಅತ್ಯಂತ ಸಮಂಜಸವಾದವು.
ಉದಾಹರಣೆಗೆ ದೇಶದ ಮತ್ತೊಬ್ಬ ಆರ್ಥಿಕ ಮುತ್ಸದ್ಧಿ ಪ್ರೊ. ಅರುಣ್ ಕುಮಾರ್ ಅವರು “ದ ವೈರ್” ಪತ್ರಿಕೆಗೆ ಇತ್ತೀಚೆಗೆ ಬರೆದ ಲೇಖನ ಒಂದರಲ್ಲಿ ಯುಪಿಎ-೧ ರ ಅವಧಿಯಲ್ಲಿ ಜಾರಿಯಾದ ಹಲವು ಜನಪರ ಯೋಜನೆಗಳ ಬಗ್ಗೆ ಮನಮೋಹನ್ ಸಿಂಗರಿಗೆ ಒಪ್ಪಿಗೆಯಿರಲಿಲ್ಲ.ಎಂದು ದಾಖಲಿಸಿದ್ದಾರೆ.
(https://thewire.in/macro/manmohan-singh-more-firm-right-may-not-have-been-as-dominant)
ಅದೇ ರೀತಿ ಮನಮೋಹನ್ ಸಿಂಗ ಅವರ ಜೊತೆ ಸೌತ್ ಕಮಿಶನ್ ನ ಸದಸ್ಯರಾಗಿ ಕೆಲಸ ಮಾಡಿದ್ದ ಗಾಂಧಿವಾದಿ ಚಿಂತಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ದೇವಕಿ ಜೈನ್ ಅವರ ಪ್ರಕಾರ ಮನಮೋಹನ್ ಸಿಂಗ್ ಅವರು ಆರ್ಥಿಕ ವಿಷಯಗಳಲ್ಲಿ ಜನ ಚಳವಳಿಗಳ ವಿವೇಕವನ್ನು ಅರಿಯಲು ಉತ್ಸುಕರಿರಲಿಲ್ಲ ಮತ್ತು ಒಮ್ಮೆ ಈ ಜನ ಚಳವಳಿಗಳು ಎಂದರೇನೇಂದೆ ತನಗೆ ಅರ್ಥವಾಗದು ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದರು.
(https://www.epw.in/journal/2016/9/perspectives/looking-back-south-commission.html-0)
ಇದೆಲ್ಲದರಾಚೆಗೆ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜಾರಿಯಾದ ನವ ಉದಾರವಾದಿ, ಮಾರುಕಟ್ಟೆ ಪರ ಆರ್ಥಿಕ ಸುಧಾರಣಾ ನೀತಿಗಳ ಪರವಾಗಿ ಆ ಭಾಷಣದಲ್ಲಿ ಯೋಗೇಂದ್ರ ಅವರು ಮಾಡಿದ ಕೆಲವು ಬೀಸು ಹೇಳಿಕೆಗಳು ಕೆಳಗಿನ ಪ್ರಶ್ನೆಗಳನ್ನು ಹುಟ್ಟಿಸುತ್ತದೆ:
*ಯೋಗೇಂದ್ರ ಯಾದವರಿಗೆ ಕೆಲವು ಪ್ರಶ್ನೆಗಳು:*
ಪ್ರೀತಿಯ ಯೋಗೇಂದ್ರ ಯಾದವ್ ಜಿ,
1.. ಮನಮೋಹನ್ ಸಿಂಗರು ಜಾರಿಗೆ ತಂದ ನೀತಿಗಳು ಮಾತ್ರ ಬಂಡವಾಳಶಾಹಿಯಾಗಿರಲಿಲ್ಲ. ಅದಕ್ಕೆ ಮುಂಚೆಯೂ ದೇಶದಲ್ಲಿ ಸಮಾಜವಾದ ಇರಲಿಲ್ಲ ಎಂಬ ನಿಮ್ಮ ವಿಶ್ಲೇಷಣೆ ಸರಿಯಾದದ್ದು. ಆದರೆ ಈ ವಿಶ್ಲೇಷಣೆ ಮೋದಿ ಸರ್ಕಾರವನ್ನು ನೋಡಿದ ನಂತರ ಬಂದ ಅರಿವಾಗಿರಬೇಕಿರಲಿಲ್ಲ ಅಲ್ಲವೇ? ಏಕೆಂದರೆ ಹಲವಾರು ಮಾರ್ಕ್ಸ್ ವಾದಿಗಳು ಭಾರತವು ಆರಂಭದಿಂದಲೂ ಬಂಡವಾಳಶಾಹಿ ಪ್ರಭುತ್ವವೇ ಆಗಿತ್ತು ಎಂದು ಹೇಳುತ್ತಲೇ ಬಂದಿದ್ದರಲ್ಲವೇ? ಆದರೆ ಆ ಅವಧಿಯನ್ನು ತೀರಾ ಇತ್ತೀಚಿನವರೆಗೆ ನೆಹ್ರುವಿಯನ್ ಸಮಾಜವಾದದ ಕಾಲ ಎಂದು ಬಣ್ಣಿಸುತ್ತಾ ಭಾರತವು ಆಶಯದಲ್ಲಿ ಸಮಾಜವಾದಿಯಾಗಿದ್ದರೂ ಆಚರಣೆಯಲ್ಲಿ ಬಂಡವಾಳಶಾಹಿಯೇ ಎಂದವರನ್ನು ಹೀಗೆಳೆಯುತ್ತಾ ಬಂದಿರೇಕೆ?
ಇರಲಿ. ಭಾರತದ ಇಡೀ 75 ವರ್ಷದ ಅಭಿವೃದ್ಧಿ ಮಾದರಿಯು ಬಂಡವಾಳಶಾಹಿಯೇ ಆಗಿತ್ತು ಎನ್ನುವುದಾದರೆ ಅದರ ಪ್ರಧಾನ ನಿರ್ದೇಶಕ ಮತ್ತು ಫಲಾನುಭವಿ ಗಳು ಬಂಡವಾಳಶಾಹಿ ವರ್ಗಗಳೇ ಎಂದಾಯಿತಲ್ಲವೇ? ಯಾವುದೇ ಅವಧಿಯಲ್ಲಿ ಈ ಅಭಿವೃದ್ಧಿ ಮಾದರಿಯಲ್ಲಿ ಉಳಿದ ಜನವರ್ಗಗಳಿಗಾಗಿರಬಹುದಾದ ಉಪಯೋಗಗಳು ಉದ್ಧೇಶಪೂರ್ವಕವಲ್ಲ ಬದಲಿಗೆ ಬಂಡವಾಅಳಶಾಹಿ ಮಾದರಿಯ ಬೈ ಪ್ರಾಡಕ್ತ್ ಎಂದಾಗಲಿಲ್ಲವೇ?
ಹಾಗೆಯೇ 1991 ರ ಪೂರ್ವ ಬಂಡವಾಳಶಾಹಿ ಮಾದರಿ, 1991 ರ ನಂತರದ ಬಂಡವಾಳಶಾಹಿ ಮಾದರಿ ಹಾಗೂ 2014 ರ ನಂತರದ ಬಂಡವಾಳಶಾಹಿ ಮಾದರಿಯಲ್ಲಿ ಸಾಮ್ಯತೆ ಮತ್ತು ನಿರಂತರತೆಗಳಿಲ್ಲವೇ? ಆಯಾ ಕಾಲಘಟ್ಟದ ಬಂಡವಾಳಶಾಹಿ ಸಿದ್ಧತೆಗೆ ತಕ್ಕಂತೆ ಯಾವುದೇ ಸರ್ಕಾರ ಆಧಿಕಾರದಲ್ಲಿದ್ದರೂ ದೇಶದ ಆರ್ಥಿಕತೆ ಆ ವರ್ಗಕ್ಕೆ ಸೇವೆ ಸಲ್ಲಿಸುತ್ತಿದೆಯಲ್ಲವೇ? ಅದರಲ್ಲಿ ಆಗಾಗ ಜನಪರ ಯೋಜನೆಗಳು ಭಾಗವಾಗಿದ್ದರೆ ಅದನ್ನು ಮಾನವೀಯ ಬಂಡವಾಳಶಾಹಿ ಮತ್ತು ಮೃಗೀಯ ಬಂಡವಾಳಶಾಹಿ ಎಂದು ಬೇರ್ಪಡಿಸಿ ನೋಡಹುದೇ?
1945 ರ ಎರಡನೇ ಮಹಾಯುದ್ಧದ ನಂತರ ಇಡೀ ಯುರೋಪ್ ಅಳವಡಿಸಿಕೊಂಡ ಕೀನಿಷಿಯನ್ ಮಾದರಿ ವ್ಯವಸ್ಥೆ ಬಂಡವಾಳಶಾಹಿಗಳ ಲಾಭದ ದರ ಕಡಿಮೆ ಮಾಡಿದರೂ ಕಮ್ಯುನಿಸಮ್ಮಿನ ಆಕರ್ಶಣೆಯಿಂದ ಯೂರೋಪನ್ನು ಬಚಾವು ಮಾಡಲು ಉದ್ಯೋಗ, ಆದಾಯ ಸೃಷ್ಟಿ , ಉಚಿತ ಆರೋಗ್ಯ-ಶಿಕ್ಷಣದಂತ ಕಲ್ಯಾಣ ನೀತಿಗಳಾನ್ನು ಜಾರಿಗೆ ತಂದಿದ್ದಲ್ಲವೇ? 1991 ರಲ್ಲಿ ಸೋವಿಯತ್ ರಷ್ಯಾ ಕುಸಿದು ಬಿದ್ದಂತೆ ಬಂಡವಾಳಶಾಹಿ ಸಿದ್ಧಾಂತ, ರಾಜಕೀಯ, ವ್ಯವಸ್ಥೆಗೆ ಎದುರಾಳಿಯೇ ಇಲ್ಲದಿರುವಾಗ ಇಡೀ ಯೂರೋಪ್ ಕಲ್ಯಾಣ ಕಾರ್ಯಕ್ರಮಗಳನ್ನು ಒಂದೊಂದಾಗಿ ಹಿಂತೆಗೆದುಕೊಂಡು ನವ ಉದಾರವಾದಿ (ನಿಯೋ ಲಿಬರಲ್) ಬಂಡವಾಳಶಾಹಿ ವ್ಯವಸ್ಥೆ ರೂಪುಗೊಂಡಿದ್ದಲ್ಲವೇ? ಅದರ ಭಾಗವಾಗಿಯೇ ಮೂರನೇ ವಿಶ್ವದ ಮಾರುಕಟೆಯನ್ನು ವಶಪಡಿಸಿಕೊಳ್ಳಲು ಐಎಂಎಫ಼್ ನ ಶರತ್ತು ಬದ್ದ ಸಾಲ ನೀತಿಗಳು, ವಿಶ್ವಬ್ಯಾಂಕಿನ ಕ್ಶೇತ್ರವಾರು ಮಾರುಕಟ್ಟೆ ತಿದ್ದುಪಡಿಗಳು ಮತ್ತು ವಿಶ್ವವಾಣಿಜ್ಯ ಸಂಸ್ಥೆಯ ಕಡ್ಡಾಯ ಗಳು ಜಾರಿಯಾಗಿದ್ದಲ್ಲವೇ? ರಾವ್-ಮನಮೋಹನ್ ಸಿಂಗರು ಇತರ 81 ದೇಶಗಳ ರೀತಿ ಜಾರಿಗೆ ತಂದ ಆರ್ಥಿಕ ನೀತಿಗಳು ಈ ಜಾಗತಿಕ ಮತ್ತು ದೇಶೀಯ ಬಂಡವಾಳಶಾಹಿಗಳ ಅಗತ್ಯ ಮತ್ತು ಒತ್ತಡಗಳ ಪರಿಣಾಮವಲ್ಲವೇ?
ಹೀಗಾಗಿ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ನೀತಿಗಳು ದೇಶವನ್ನು ಉಳಿಸುವ ನೀತಿಗಳಲ್ಲ್ಲ ಬದಲಿಗೆ ಜಾಗತಿಕ ಹಾಗೂ ದೇಶೀಯ ಬಂಡವಾಳಶಾಹಿಗಳ ಬದಲಾದ ಅಗತ್ಯಗಳನ್ನು ಪೂರೈಸಲು ರೂಪಿಸಿದ ಅರ್ಥಿಕ ನೀತಿಗಳು ಮತ್ತು ಇವತ್ತಿಗೂ ಅದೇ ನೀತಿಗಳೆ ಮುಂದುವರೆಯುತ್ತಿವೆ ಎಂಬ ವಿಶ್ಲೇಷಣೆಯಿಲ್ಲದಿದ್ದರೆ ನಾವು ಕಲಿವುದೇನು?
2.ಅದರ ಬದಲಿಗೆ ನೀವು ಮನಮೋಹನ ಸಿಂಗರನ್ನು ಹೊಗಳುವ ಭರದಲ್ಲಿ ಸಿಂಗರು, ಸ್ವಾತಂತ್ರ್ಯ ಬಂದಾಗಿಂದಲೂ ಮುಕ್ತ ಮಾರುಕಟ್ಟೆ ಇರಬೇಕು ಎಂದು ಪ್ರತಿಪಾದಿಸಿರಲಿಲ್ಲ. ಬದಲಿಗೆ 1991 ರ ನಂತರವಷ್ಟೆ ಅದನ್ನು ಪ್ರತಿಪಾದಿಸಿದರು ಎಂದು ಬಣ್ಣಿಸಿದಿರಿ. ಆದರೆ ಸಮಾಜವಾದಿಗಳಾದ ನಿಮಗೆ ಆರ್ಥಿಕ ಸುಧಾರಣೆಗಳಿಗೆ ಭಾರತದ ಬಂಡವಾಳಶಾಹಿಗಳು ಸಿದ್ಧವಾಗಿದ್ದರೆ ವಿನಾ ರೈತ-ಕಾರ್ಮಿಕರು ಮತ್ತು ಬಡ-ಮಧ್ಯಮವರ್ಗ ಸಿದ್ಧವಾಗಿತ್ತೇ, ಕೃಷಿ, ಸಣ್ಣ ಉದ್ಯಮ ವಲಯ ಸಿದ್ಧವಾಗಿತ್ತೇ ಎಂಬ ಪ್ರಶ್ನೆ ಏಕೆ ಹುಟ್ಟುತ್ತಿಲ್ಲ? ಉದಾರೀಕರಣವು ಖಾಸಗಿ ಬಂಡವಾಳಿಗರ ಮೇಲಿದ್ದ ಅತ್ಯಗತ್ಯವಾಗಿದ್ದ ಸರ್ಕಾರಿ ಸಂಕೋಲೆಗಳನ್ನು ಕಿತ್ತೆಸೆಯಿತು. ಆದರೆ ಅದೇ ಸಮಯದಲ್ಲಿ ಬಡ ರೈತಾಪಿ, ಸಣ್ಣ ಉದ್ಯಮಿ ಇನ್ನಿತರ ದುರ್ಬಲ ವರ್ಗಗಳಿಗೆ ಸಿಗುತ್ತಿದ್ದ ಪ್ರಭುತ್ವ ರಕ್ಷಣೆಯನ್ನು ಕಿತ್ತೆಸೆದು ಆ ವರ್ಗಗಳನ್ನು ಮಾರುಕಟ್ಟೆ ಶಕ್ತಿಗಳ ಸುಲಭ ಬೇಟೆಗೆ ಒಡ್ಡಲಿಲ್ಲವೇ? ಇದನ್ನು ಏಕೆ ನಿಮ್ಮ ವಿಶ್ಲೇಷಣೆ ಒಳಗೊಳ್ಳಲಿಲ್ಲ ?
3. ಅದೇ ಭರದಲ್ಲಿ ರೈತ್ಯರ ಆತ್ಮಹತ್ಯೆಗಳಿಗೂ ಮನಮೋಹನ್ ಸಿಂಗರ ಆರ್ಥಿಕ ನೀತಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಬಿಟ್ಟಿರಿ! ಮತ್ತು 1996 ರ ನಂತರ ಆತ್ಮಹತ್ಯೆಯ ಚರ್ಚೆ ಹೆಚ್ಚಾಗಲು ಕಾರಣ ರೈತ ಚಳವಳಿಗಳು ಅದನ್ನು ಇಷ್ಯೂ ಮಾಡಿದ್ದು ಎಂದು ಕೂಡ ಘೋಶಿಸಿಬಿಟ್ಟಿರಿ!
ಯೋಗೇಂದ್ರರೇ ಇಷ್ಟು ಬೀಸು ಹೇಳಿಕೆಯನ್ನು ಒಬ್ಬ ಜವಾಬ್ದಾರಿಯುತ ಜನಪರ ಚಿಂತಕ ಕೊಡಬಹುದೇ?
1991 ರ ಪೂರ್ವದ ಬಂಡವಾಳಶಾಹಿ ಪ್ರಭುತ್ವದ ಆರ್ಥಿಕ ನೀತಿಗಳು ರೈತ ಮತ್ತು ಕೃಷಿ ಪರವಾಗಿರಲಿಲ್ಲ ಎನ್ನುವುದು ನಿಜ. ಆದರೆ ಈ ಕಾರಣಕ್ಕೆ ಆಗಲೇ ಬಸವಳಿದಿದ್ದ ರೈತಾಪಿಗೆ 1991 ರ ನೀತಿಗಳಿಂದಾಗಿ ಒಂದು ಕಡೆ ಸರ್ಕಾರಿ ಬೆಂಬಲ ಕಡಿಮೆಯಾಗಿ ಮತ್ತೊಂದೆಡೆ ಕೃಷಿ ಮಾರುಕಟ್ಟೆಗೆ ವಿದೇಶಿ ಸರಕಿನ ಕಡ್ಡಾಯ ಆಮದು ನೀತಿಗಳಿಂದಾಗಿ ಬೆಲೆ ಕುಸಿದದ್ದು, ಸಾಲ ಹೆಚ್ಚಾದದ್ದು, ಹೆಚ್ಚಾದ ರೈತ ಆತ್ಮಹತ್ಯೆಗೆ ಕಾರಣವಲ್ಲವೇ? ಇವೆಲ್ಲಕ್ಕೂ 1991 ರ ನೀತಿಗಳು ಕಾರಣವಲ್ಲವೇ? ನಾನು ಈಗ ಹೇಳುತ್ತಿರುವುದು ಆ ಕಾಲದಲ್ಲಿ ನೀವು, ನಿಮ್ಮಂಥವರು ಹೇಳಿದ ಮಾತುಗಳನ್ನೇ. ಎಲ್ಲವನ್ನು Re-Visit ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಆ ಪ್ರಕ್ರಿಯೆಯಲ್ಲಿ 1991 ರಿಂದ ಮುಂದುವರೆದೇ ಇರುವ, ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟಿನ ಬಗ್ಗೆ ಜಾಣ ಮರೆವು ಉಂಟಾಗಬಾರದಲ್ಲವೇ?
ಹಾಗಿದ್ದಲ್ಲಿ ಆ ಅವಧಿಯನ್ನು ನೀವುಗಳು “ಉದ್ಯೋಗ ರಹಿತ” ಅಭಿವೃದ್ಧಿ ಎಂದು ಕರೆದ ಕಾರಣ ವೇನು? ಅದೇ ಅವಾಧಿಯಲ್ಲಿ ಕೃಷಿ ಬಿಕ್ಕಟ್ಟು ಹೆಚ್ಚಾಗಿ ಲಕ್ಷ ಲಕ್ಷ ರೈತ ಕುಟುಂಬಗಳು ಕೃಷಿ ತೊರೆಯುವಂತಾಯಿತು ಎಂದು ನೀವು ಮತ್ತು ನಿಮ್ಮಂಥ ಸಮಾಜವಾದಿಗಳೆ ಆತಂಕ ವ್ಯಕ್ತಪಡಿಸಿದ್ದಿರಲವೇ? ಆದಾಯವೂ ಇಲ್ಲದೆ , ಉದ್ಯೋಗವೂ ಇಲ್ಲದೇ ಬಡತನ ನಿವಾರಣೆ ಆಯಿತು ಎಂಬುದಾಗಿದ್ದರೆ ಮೋದಿ ಕಾಲದಲ್ಲಿ ಇನ್ನು ಹೆಚ್ಚು ಬಡವರು ಮೇಲೆ ಬಂದಿದ್ದಾರೆ ಎಂದಾಗಲಿಲ್ಲವೇ?
ದೇಶದ ಜಿಡಿಪಿಯಲ್ಲಿ ಮೇಲಿನ ಶೇ.10 ಜನರನ್ನು ಹೊರಗಿಟ್ಟರೆ ಈಗಲೂ ನಮ್ಮ ದೇಶದ ತಲಾ ಜಿಡಿಪಿ ಆಫ಼್ರಿಕಾದ ಬಡರಾಷ್ಟ್ರಗಳಿಗಿಂತ ಕಡಿಮೆ. ವಯಸ್ಸಿಗೆ ತಕ್ಕನಾದ ಎತ್ತರವಿಲ್ಲದಿರುವುದ ಇಪ್ಪತ್ತು ಮೂವತ್ತು ವರ್ಷಾಗಳ ಸುದೀರ್ಘ ಪೋಷಣೆ ಕೊರತೆಯ ಫಲ ಎಂದಾದರೆ, ನಮ್ಮ ದೇಶದಲ್ಲಿ ಎಸ್ಸಿ, ಎಸ್ಟಿ ಮತ್ತು ತಳ ಹಂತದ ಒಬಿಸಿ ಸಮುದಾಯಗಳಲ್ಲಿರುವ ಕುಬ್ಜತೆ ಆಫ಼ಿಕಾದ ಬಡರಾಷ್ಟ್ರಗಳಿಗಿಂತ ಹೆಚ್ಚು. ಆದರೂ ಮನಮೋಹನ್ ಸಿಂಗ್ ಅವರ ಆರ್ಥಿಕನೀತಿಗಳು ಶೇ. 20 ರಷ್ಟು ಜನರನ್ನು ಬಡತನಕ್ಕಿಂತ ಮೇಲಕ್ಕೆ ಎತ್ತರಿಸಿತು ಎನ್ನುವ ವಾದವು ಸರಿಯಾದರೆ ಸಿಂಗರಂತೆ ಮೋದಿಯೂ ಆಪದ್ಭಾಂಧವನೇ ಸರಿ. ಅದೇ ರೀತಿ 1991 ರ ನಂತರದ ಅವಧಿಯಲ್ಲಿ ಅಸಮಾನತೆ ಹೆಚ್ಚಿರಬಹುದು ಆದರೆ ಬಡತನ ಹೆಚ್ಚಾಗಿಲ್ಲ ಎನ್ನುವ ಕುತರ್ಕ.
ಬಡತನವು ಎಲ್ಲಾ ಸಂದರ್ಭದಲ್ಲೂ ಸಾಪೇಕ್ಷವಾದುದೇ. 1947 ರಲ್ಲಿ ಭಾರತದಲ್ಲಿದ ಬಡತನವನ್ನು 500 ವರ್ಷಗಳ ಕೆಳಗಿನ ಸಂಪನ್ಮೂಲ ಕೊರತೆಯ ಅವಧಿಗೆ ಹೋಲಿಸಿದರೆ ಸ್ವಾತಂತ್ರ್ಯಾ ನಂತರದಿಂದಲೇ ನಮ್ಮ ದೇಶದಲ್ಲಿ ಬಡತನವಿರಲಿಲ್ಲ. ಬ್ರಿಟಿಷರು ಬಡತನವನ್ನು ಓಡಿಸಿದ್ದರು ಎಂದು ಕೂಡ ವಾದಿಸಬಹುದು. ಇಂದು ಬಡತನವನ್ನು ವಿಶ್ವ ಸಂಸ್ಥೆಯು ಬಹುಅಂಶೀಯ ಬಡತನದ ಮಾನದಂಡಗಳಿಂದ ವಿಶ್ಲೇಶಿಸುತ್ತದೆ. ಈ ಮಾನದಂಡಗಳಲ್ಲಿ 1991 ರ ನಂತರದ 35 ವರ್ಷಗಳ ನಂತರವೂ ಭಾರತದ ಬಡತನ ಕಡಿಮೆಯಾಗಿಲ್ಲ. ಬದಲಿಗೆ ತಮ್ಮ ಅಧ್ಯಕ್ಶೀಯ ಭಾಷಣದಲ್ಲಿ ಪ್ರೊ. ಎ. ನಾರಾಯಣ ಅವರು ಸೂಚ್ಸಿದಂತೆ ಬಡತನದ ದಾರುಣತೆ ಹೆಚ್ಚಾಗಿದೆ.
6. ವ್ಯಕ್ತಿಯಾಗಿ ಮನಮೋಹನ್ ಸಿಂಗ್ ಭ್ರಷ್ಟರಲ್ಲ ಎಂದಿರಿ. ಅದು ನಿಜವೂ ಇರಬಹುದು. ಆದರೆ 2009-14 ರ ಅವಧಿಯಲ್ಲಿ ಗ್ರೋಥ್ ಹೆಚ್ಚಾದದ್ದೇ ಈ ದೇಶದ ದೊಡ್ಡ ದೊಡ್ಡ ಲಂಪಟ ಕಾರ್ಪೊರೇಟ್ ಉದ್ದಿಮೆಪತಿಗಳಿಗೆ ಲಕ್ಷ ಲಕ್ಷ ಕೋಟಿ ಸಾಲ ಕೊಟ್ಟಿದ್ದಕ್ಕಲ್ಲವೇ? ಒಂದೆದೆ MNREGA ಯೋಜನೆ ಆದ ಆದ ಸಂಪಾನ್ಮೂಲ ವರ್ಗಾವಣೆಗಿಂತ ಸಿಂಗ್ ಅವಧಿಯಲ್ಲಿ ಕಾರ್ಪೊರೇಟ್ ಶಕ್ತಿಗಳಿಗೆ ಆದ ಸಂಪನ್ಮೋಲ ವರ್ಗಾವಣೆ ಹತ್ತಾರು ಪಟ್ತು ಹೆಚ್ಚಲ್ಲವೇ? ಇದು ಸ್ಥಾಂಸ್ಥಿಕ ಭ್ರಷ್ಟಾಚಾರವಲ್ಲವೇ? ಅದನ್ನೇ ಈಗ ಮೋದಿ ಮುಂದುವರೆಸಿದ್ದಲ್ಲವೇ?
7. 1991 ರ ಹಿಂದಿನ ಲೈಸೆನ್ಸ್ ರಾಜ್ ವ್ಯವಸ್ಥೆ ಹೇಗೆ ಸರಿಯಲ್ಲ ಎಂದು ಹೇಳುತ್ತಾ ಶಿಕ್ಷಣ ಮತ್ತು ಆರೋಗ್ಯವನ್ನು ಹೊರತುಪಡಿಸಿ ಮಿಕ್ಕ ಕ್ಶೇತ್ರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದೆಂಬ ನವ ಮನಮೋಹನ್ ಸಿಂಗ್ ವಾದವನ್ನು ಮುಂದಿಟ್ಟಿರಿ. ಖಾಸಗಿ ಉದ್ಯಮಗಳಿಗೆ ಹೋಲಿಸಿದಲ್ಲಿ ಈಗಲೂ ಬಹುಪಾಲು ಸರ್ಕಾರಿ ಉದ್ದಿಮೆಗಳು ಖಾಸಗಿಗಿಂತ ಹೆಚ್ಚಿನ ಲಾಭವನ್ನು, ಹೆಚ್ಚಿನ ಸಂಘಟಿತ ಉದ್ಯೋಗಗಳನ್ನು ಮತ್ತು ಉದ್ಯೋಗಗಳಲ್ಲಿ ಸಮಾಜಿಕ ನ್ಯಾಯವನ್ನು ಒದಗಿಸುತ್ತಿರುವಾಗ ನಿಮ್ಮ ವಾದಕ್ಕೆ ಸಮರ್ಥನೆಯೇನು?
8. 1991 ರ ನಂತರದ ಆರ್ಥಿಕ ಸುಧಾರಣೆ ನೀತಿಗಳೆಂದರೇ ಇಂದಿನ ಮೋದಿ ಮಾದರಿ-ಜನವಿರೋಧಿ ಬಂಡವಾಳಶಾಹಿ ಆಗಿರಬೇಕಿಲ್ಲ. ಮನಮೋಹನ್ ಸಿಂಗ ಮಾದರಿ ಜನಸ್ನೇಹಿ ಬಂಡವಾಳಶಾಹಿ ಮಾದರಿಯೂ ಸಾಧ್ಯ ಎಂದು ಇಂಗಿತ ವ್ಯಕ್ತಪಡಿಸಿದಿರಿ. ಬಂಡವಾಳಶಾಹಿಯಲ್ಲಿರುವ ಭಿನ್ನ ಮಾದರಿಯನ್ನು ಮತ್ತು ಅದು ಸಾಧ್ಯಗೊಳಿಸಬಹುದಾದ ರಾಜಕೀಯವನ್ನು ನೋಡಬೇಕೇ ವಿನ ಬೈನರಿಯಲ್ಲಿ ನೋಡಬಾರದು ಎಂದಿರಿ. ಆದರೆ -ಶಿಕ್ಷಣ, ಆರೋಗ್ಯ ಖಾಸಗೀಕರಣ, ಸರ್ಕಾರವು ಕಲ್ಯಾಣ ಕಾರ್ಯಾಕ್ರಮಗಳಿಂದ ಹಿನ್ನೆಡೆಯುವುದು, ಇತರ ಎಲ್ಲ ಜನವಿರೋಧಿ ನೀತಿಗಳ ಮೊದಿಯಾನಾಮಿಕ್ಸ್ನ ಬೇರುಗಳು ಮನಮೋಹನಾಮಿಕ್ಸ್ ನಲ್ಲೇ ಇಲ್ಲವೇ? ಆವು ಆಯಾ ಕಾಲದ ಬಂಡವಾಳಶಾಹಿ ಅಗತ್ಯಗಳಲ್ಲವೇ? ಆದ್ದರಿಂದಲೇ ಕಾಂಗ್ರೆಸ್ಸನ್ನು ಒಳಗೊಂಡಂತೆ ಅಧಿಕಾರದಲ್ಲಿರುವ ಎಲ್ಲಾ ವಿರೋಧ ಪಕ್ಷಗಳ ಅರ್ಥಿಕ ನೀತಿಗಳು ಸಿಂಗ್ ನೀತಿಯ ಮುಂದುವರೆಕಯಾಗಿಯೂ, ಮೋದಿ ಮಾದರಿಯ ನಕಲಾಗಿಯೂ ಇರುವುದಲ್ಲವೇ?
9. ಆರ್ಥಿಕ ಸುಧಾರಣೆಗಳಿಗೂ ಕೋಮುವಾದಿ ಫ಼್ಯಾಶಿಸಂ ನ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ಘೋಷಿಸಿಬಿಟ್ಟಿರಿ. ಆದರೆ 1925 ರಲ್ಲಿ ಆರೆಸ್ಸೆಸ್ ಹುಟ್ಟಿದರೂ ಅದರ ಸಿದ್ಧಾಂತ ಸಾಮಾಜಿಕ ಬೇರುಗಳನ್ನು ಹೆಚ್ಚಿಸಿಕೊಂಡಿದ್ದು 1991ರ ಆರ್ಥಿಕ ಸುಧಾರಣೆಗಳು ಸಮಾಜದಲ್ಲಿ ಹುಟ್ಟುಹಾಕಿದ ಅತಂತ್ರ ಮತ್ತು ಅಭದ್ರತೆಗಳ ಕಾಲಘಟ್ಟದಲ್ಲೇ ಅಲ್ಲವೇ? ಕಳೆದ ಇಪ್ಪತ್ತು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಸಾಮಾಜಿಕ ಸಂಕ್ಷೋಭೆ ಎದುರಿಸುತ್ತಾ ಬಲಪಂಥೀಯತೆಯ ಕಡೆಗೆ ಜಾರುತ್ತಿರುವ ಅಮೇರಿಕ, ಯುರೋಪ್ ಗೆ ಸೇರಿದ ಪ್ರಜಾತಂತ್ರಗಳಲ್ಲಿ ಅತ್ಯಂತ ಪ್ರತಿಗಾಮಿ ಸಿದ್ಧಾಂತ ಮತ್ತು ಸಂಘಟನೆಗಳು ಬಲಗೊಳ್ಳುತ್ತಿರುವುದು ಮತ್ತು ಅಧಿಕಾರಕ್ಕೆ ಬರುತ್ತಿರುವುದು ಕಾಕತಾಳೀಯವೇ?
10. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮತ್ತೆ ಈಗ ವರ್ಗ ಪ್ರಶ್ನೆ ಮುಂದಾಗಿದೆ. ಎಡ ಅಜೆಂಡಾಗಾಳಿಗೆ ಈಗ ಹಿಂದಿಗಿಂತಲೂ ಕಾಲ ಪಕ್ವವಾಗಿದೆ ಎಂದಿರಿ. ಅದೇ ಸಂದರ್ಭದಲ್ಲಿ ಸಮಾಜವಾದಿಗಳು ಕೇವಲ Expenditure Ministers ಆಗಿ ಯೋಚಿಸುತ್ತಾರೆಯೇ ವಿನಾ ಸಂಪನ್ಮೂಲ ಸಂಗ್ರಹಣೆ ಬಗ್ಗೆ ಯೋಚಿಸಲ್ಲ ಎಂದೂ ಹೀಗೆಳೆದಿರಿ! Demand Side Economics ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಡ ಅಜೆಂಡಾ ನೈಜ ಸಮಾಜವಾದ ಎನ್ನುವುದಾದರೆ ಅದಕ್ಕೆ ಮನಮೋಹನ್ ಸಿಂಗ್ ಆಗಲೀ, ಅವರ ಹಿಂದಿನ ಕಾಲವಾಗಲೀ ಹೇಗೆ ಮಾದರಿಯಾಗುತ್ತದೆ? ಖಂಡಿತಾ ಇಂದು ಜಗದಲ್ಲಿ ಯಾವುದೇ ನೈಜ ಸಮಾಜವಾದಿ ರಾಷ್ಟ್ರಗಳಿಲ್ಲ. ಭಾರತದಲ್ಲೂ ಯಾರ ಅವಧಿಯಲ್ಲೂ ಸಮಾಜವಾದಿ ಮಾದರಿ ಇರಲಿಲ್ಲ. ಆದರೆ ಅದು ದುಷ್ಟರಲ್ಲಿ ಕಡಿಮೆ ದುಷ್ಟರನ್ನು ಅತ್ಯುತ್ತಮ ಎಂದುಬಿಡುವ ಆತ್ಮವಂಚನೆಗೆ ದೂಡಬೇಕೋ? ನೈಜ ಸಮಾಜವಾದದ ಅನ್ವೇಷಣೆಗೆ ದೂಡಬೇಕೋ?.. ಇಷ್ಟು ಕೇಳಬೇಕೆನ್ನಿಸಿತು. ಇವೆಲ್ಲದರ ಬಗ್ಗೆ ಪೂರ್ವಗ್ರಹವಿಲ್ಲದ, ಜನಹಿತದ ಪಕ್ಷಪಾತವಿರುವ ಸಮಗ್ರ ಚರ್ಚೆಯಾಗಬೇಕು. ಅಲ್ಲವೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply