ಕೊಡುಗು : ಆದಿವಾಸಿ ಯುವಕ ಪಣಿಯೆರವರ ಪೊನ್ನಣ್ಣ ಅವರ ಹತ್ಯೆಯನ್ನು ಖಂಡಿಸಿ, ಕೊಲೆಗಡುಕ ಭೂಮಾಲಿಕ ಚಿನ್ನಪ್ಪ ಎಂಬವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ, ಹಾಗೂ ಹತ್ಯೆಯಾದ ಪೊನ್ನಣ್ಣ ಕುಟುಂಬಕ್ಕೆ ರಕ್ಷಣೆ ಹಾಗೂ ಸೂಕ್ತ ಪರಿಹಾರ ಒದಗಿಸಲು ಕೋರಿ ಸಿ.ಪಿ.ಐ.ಎಂ.ಎಲ್. ಲಿಬರೇಶನ್ ಹಾಗೂ ಆದಿವಾಸಿ ಸಂಘರ್ಷ ಮೋರ್ಚ ಒತ್ತಾಯಸಿ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಈ ಸಂದರ್ಭದಲ್ಲಿ ಹತ್ಯೆಯಾದ ಪೊನ್ನಣ್ಣ ಕುಟುಂಬಸ್ಥರನ್ನು ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಹಾಗೂ ಆದಿವಾಸಿ ಸಂಘರ್ಷ ಮೋರ್ಚ ನಿಯೋಗ ಬೇಟಿಯಾಗಿದೆ.

ದಿನಾಂಕ 27.12.2024ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು ಗ್ರಾಮದಲ್ಲಿ ಶ್ರೀ ಪಣಿಯರವರ ಪೊನ್ನಣ್ಣರವರನ್ನು ಕಾಫಿ ತೋಟದ ಮಾಲೀಕ ಚಿನ್ನಪ್ಪ ಎಂಬವರು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಎರವ ಸಮುದಾಯಕ್ಕೆ (ಪರಿಶಿಷ್ಠ ಪಂಗಡ) ಸೇರಿದ ಸಾವಿರಾರು ಜನರಂತೆ ಪೊನ್ನಣ್ಣ ಮತ್ತು ಅವರ ಪತ್ನಿ ಗೀತಾ ಅವರು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ, ಪೋರುಕೊಂಡ ಬನ್ಸಿ ಪೂಣಚ್ಚ ಅವರ ತೋಟದಲ್ಲೇ ಇರುವ “ಲೈನ್ ಮನೆ”ಯಲ್ಲಿ ವಾಸವಾಗಿದ್ದರು.

ದಿನಾಂಕ 27.12.2024ರ ಸಂಜೆ ಪೊರುಕೊಂಡ ಬನ್ಸಿ ಪೂಣಚ್ಚ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಲೈನ್ ಮನೆಯಲ್ಲಿ ವಾಸವಾಗಿದ್ದ ಪಣಿಯೆರವರ ಪೊನ್ನಣ್ಣ ಅವರನ್ನು ಪಕ್ಕದ ಮನೆಯವರಾದ ಮತ್ತು ಪೊರುಕೊಂಡ ಬನ್ಸಿ ಪೂಣಚ್ಚರವರ ಚಿಕ್ಕಪ್ಪನಾದ ಪೊರುಕೊಂಡ ಚಿನ್ನಪ್ಪ ಅವರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿದೆ. ಕೆಲಸ ಮುಗಿಸಿದ ನಂತರ ಪಣಿಯೆರವರ ಪೊನ್ನಣ್ಣ ಮತ್ತು ಅವರ ಪತ್ನಿ ಶ್ರೀಮತಿ । ಗೀತಾ ಅವರು ತೋಟದಲ್ಲಿರುವ ಹಲಸಿನ ಮರದ ಮಿಡಿ ಕಾಯಿನಿಂದ ಸಾರು ಮಾಡಿ ತಿನ್ನುವ ಆಸೆಯಿಂದ ಪೊನ್ನಣ್ಣ ಮರವನ್ನು ಹತ್ತಿದ್ದಾಗ, ಪೊರುಕೊಂಡ ಚಿನ್ನಪ್ಪರವರು ತನ್ನ ಕೋವಿಯಿಂದ ಗುಂಡು ಹಾರಿಸಿ ಕೊಂದುಹಾಕಿದ್ದಾರೆ ಎನ್ನಲಾಗಿದೆ. ಮರ ಹತ್ತಿದ್ದ ಪೊನ್ನಣ್ಣರವರನ್ನು ಕಂಡು ಮಾಲೀಕ ಚಿನ್ನಪ್ಪರವರು, “ಏ ಪೊಣ್ಣು, ಎರವ ಬೋಳಿ ಮಗನೇ, ನನ್ನ ತೋಟಕ್ಕೆ ಬಂದು ಹಲಸಿನಕಾಯಿ ಕುಯ್ಯುತ್ತಿದೀಯಾ, ನಿನ್ನನ್ನ ಸಾಯಿಸುತ್ತೇನೆ,”ಎಂದು ಒಮ್ಮೆಲೇ ಗುಂಡು ಹಾರಿಸಿ ಕೊಂದುಹಾಕಿರುವುದಲ್ಲದೆ, ಅಲ್ಲೇ ಇದ್ದ ಪತ್ನಿ ಶ್ರೀಮತಿ ಗೀತಾ ಅವರು ಚೀರುತ್ತಾ ಚಿನ್ನಪ್ಪರವರನ್ನು ಕರೆಯುತ್ತಿದ್ದರೂ, ಹಿಂತಿರುಗಿ ನೋಡದೇ ಹಾಗೆಯೇ ಸ್ಥಳದಿಂದ ಹೊರಟು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಪ್ರಕರಣ ಕುರಿತು ವಿರಾಜಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 0133/2024 ರಲ್ಲಿ ಬಿ.ಎನ್.ಎಸ್ 2023ರ ಕಲಂ 103(1), ಪರಿಶಿಷ್ಠ ಜಾತಿ ಹಾಗು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, 1989 ಯಡಿ ಕಲಂ 3(2)(v), ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, 1959 ಕಲಂ 3 ಹಾಗೂ 25ರಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಭೂಮಾಲೀಕ ಪೊರುಕೊಂಡ ಚಿನ್ನಪ್ಪರವರು ಜಾತಿ ಹೆಸರಿನಲ್ಲಿ ಪಣಿಯೆರವರ ಪೊನ್ನಣ್ಣನವರನ್ನು ನಿಂದಿಸಿದ್ದರಿಂದ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿ
ಯಲ್ಲಿ ಸೂಕ್ತ ಕಲಂ ಸೇರಿಸತಕ್ಕದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆದಿವಾಸಿ ಒಬ್ಬರ ಬರ್ಬರ ಹತ್ಯೆ ಸಂಭವಿಸುವುದು ಆಘಾತಕಾರಿಯಾಗಿರುವುದಲ್ಲದೆ ಖಂಡನೀಯವೂ ಹೌದು. ಕಾನೂನನ್ನು ಗಾಳಿಗೆ ತೂರಿ ಸಂವಿಧಾನದ ರಕ್ಷಣೆಗಳನ್ನು ಇಲ್ಲವಾಗಿಸಿ. ಒಂದು ಹಲಸಿನಕಾಯಿಗಾಗಿ ಜೀವ ತೆಗೆದುಕೊಳ್ಳಲು ಸಿದ್ಧವಿರುವ ಪ್ರಬಲ ಸಮುದಾಯದವರು ದಮನಿತ ಸಮುದಾಯದವರನ್ನು ಹೇಗೆ ಬದುಕಲು ಬಿಡುತ್ತಾರೆ? ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.
ಇದು ಎರವ ಸಮುದಾಯ ಎದುರಿಸುತ್ತಿರುವ ದಿನನಿತ್ಯದ ದೌರ್ಜನ್ಯವನ್ನು ಎತ್ತಿತೋರಿಸುತ್ತಿದೆ ಎಂದು ಕಿಡಿಕಾರಿದೆ.

ಪೊನ್ನಣ್ಣನ ಹತ್ಯೆಯು ಎರವ ಸಮುದಾಯದ ಕಠೋರ ಸಾಮಾಜಿಕ ವಾಸ್ತವತೆಯನ್ನು ಮುನ್ನೆಲೆಗೆ ತಂದಿದೆ. ಅವರಿಗೆ ಶಿಕ್ಷಣ, ಅರೋಗ್ಯ, ವಸತಿ, ಉದ್ಯೋಗ, ಯಾವುದೇ ರೀತಿಯ ಭದ್ರತೆ, ಅಭಿವೃದ್ಧಿಯನ್ನು ಕಂಡಿರುವುದಿಲ್ಲ. ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಾಗಿದ್ದು, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತಾ, ತೋಟಗಳಲ್ಲಿ ಕುಟುಂಬ ಸಮೇತ ದುಡಿಯುತ್ತಾ, ಅವರ ಇಡೀ ಜೀವನ ಕಳೆದುಹೋಗುತ್ತದೆ. ಎರವ ಸಮುದಾಯದ ಅತಿಹೆಚ್ಚು ಕುಟುಂಬದವರಿಗೆ ಯಾವುದೇ ಭೂಮಿ – ವಸತಿಗಾಗಿ ಅಥವಾ ಸಾಗುವಳಿಗಾಗಿ – ಇರುವುದಿಲ್ಲ. ಈ ಸಮುದಾಯ ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿದ್ದಾರೆ. ಸರ್ಕಾರದ ಯೋಜನೆಗಳು ಇವರಿಗೆ ತಲುಪುವುದಿಲ್ಲ. ಈ ಸಮುದಾಯದ ಅಭಿವೃದ್ಧಿಗಾಗಿ ಅವರಿಗೆ ಯಾವುದೇ ಸವಲತ್ತುಗಳು ಇರುವುದಿಲ್ಲ. ಊಳಲು ಭೂಮಿ ಇಲ್ಲ, ಕಾಲಿಡಲು ತಮ್ಮದೇ ಆದ ಮನೆ ಇರುವುದಿಲ್ಲ. ಎರವರ ಸಾಮಾಜಿಕ ಸ್ಥಿತಿಯು ಪ್ರಬಲ ಸಮುದಾಯಗಳ ನೆರಳಿನಲ್ಲಿದೆ. ಇವರು ದಿನನಿತ್ಯ ದೌರ್ಜನ್ಯ, ನಿಂದನೆ, ತಾರತಮ್ಯವನ್ನು ಅನುಭವಿಸುತ್ತಾರೆ. ಈ ಸಮುದಾಯದ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಗಂಭೀರ ಕ್ರಮಗಳನ್ನು ವಹಿಸುವುದು ಅತ್ಯಗತ್ಯವಾಗಿದೆ ಎಂದು ಆಗ್ರಹಿಸಿದೆ.

ಈ ಘಟನೆಯ ಕುರಿತು CPIML ಲಿಬರೇಶನ್ ರಾಜ್ಯ ಸಮಿತಿ ಮುಖಂಡರು ಹಾಗೂ ಆದಿವಾಸಿ ಸಂಘರ್ಷ ಮೋರ್ಚಾ ಮುಖಂಡರುಗಳು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸುತ್ತಾ, ಕೊಡಗು ಜಿಲ್ಲಾಧಿಕಾರಿ ಶ್ರೀ. ವೆಂಕಟರಾಜು, ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀ. ಶೇಖರ್ ಮತ್ತು ಕೊಡಗು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀ. ಹೊನ್ನೆ ಗೌಡ ಅವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಬೇಡಿಕೆಗಳು ಹೀಗಿವೆ…
- ಈ ಪ್ರಕರಣದಲ್ಲಿ ತನಿಖೆ ಮತ್ತು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಮತ್ತು ತಪ್ಪಿತಸ್ಥ ಶ್ರೀ । ಚಿನ್ನಪ್ಪನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
- ದಿವಂಗತ ಶ್ರೀ । ಪೊನ್ನಣ್ಣ ನವರ ಪತ್ನಿಯಾದ ಶ್ರೀಮತಿ । ಗೀತಾ, ತಂದೆಯಾದ ಶ್ರೀ । ತಿಮ್ಮ ಮತ್ತು ತಾಯಿ ಶ್ರೀಮತಿ । ಸುಮ್ಮಿ ಅವರಿಗೆ ಕೂಡಲೇ ರೂ. 20 ಲಕ್ಷ ಪರಿಹಾರ ಧನ ನೀಡಬೇಕು.
- ಶ್ರೀಮತಿ ಗೀತಾ ಅವರಿಗೆ ಸರ್ಕಾರಿ ನೌಕರಿ ಒದಗಿಸಬೇಕು. ಆಕೆಗೆ ಹಾಗೂ ದಿವಂಗತ ಶ್ರೀ । ಪೊನ್ನಣ್ಣ ಅವರ ಪೋಷಕರಿಗೆ ಮನೆ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆ ಅವರು ದಿವಂಗತ ಶ್ರೀ । ಪೊನ್ನಣ್ಣ ಅವರ ತಮ್ಮನಾದ ಮಾಸ್ಟರ್ ಪೂವಣ್ಣ ಅವರ ಶಿಕ್ಷಣಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು.
- ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿರುವ ರಕ್ಷಣೆಗಳು ಮತ್ತು ಸವಲತ್ತುಗಳನ್ನು ಕಟ್ಟುನಿಟ್ಟಾಗಿ ಒದಗಿಸಬೇಕು.
- ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಮತ್ತು ಸಾಕ್ಷಿಗಳಿಗೆ ಬೆದರಿಕೆ ವಿರುದ್ಧ ಎಲ್ಲಾ ರೀತಿಯ ಸೂಕ್ತ ರಕ್ಷಣೆ ನೀಡಬೇಕು.
- ರಾಜ್ಯ ಸರ್ಕಾರವು ಎರವ ಸಮುದಾಯದ ಕ್ರೂರ ಸಾಮಾಜಿಕ ವಾಸ್ತವತೆಯನ್ನು ನಿರ್ಲಕ್ಷಿಸಬಾರದು, ಅವರಿಗೆ ವಸತಿ ಮತ್ತು ಸಾಗುವಳಿಗಾಗಿ ಭೂಮಿಯನ್ನು ಒದಗಿಸಬೇಕು. ಎರವರನ್ನು ತೋಟಗಳಲ್ಲಿನ “ಲೈನ್ ಹೌಸಿಂಗ್” ಪದ್ಧತಿಯನ್ನು ಮುಕ್ತಗೊಳಿಸಬೇಕು.
- ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶಗಳನ್ನು ಕಲ್ಪಿಸಲು ವಿಶೇಷ ಕಾಳಜಿ ವಹಿಸಬೇಕು.
ಎಂಬುದಾಗಿದೆ.

Leave a reply