ನ್ಯೂಡೆಲ್ಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಗುರುವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಆರ್ಥಿಕ ಸುಧಾರಣೆಗಳ ಮಾಸ್ಟರ್ ಮೈಂಡ್ ಆಗಿದ್ದ ಅವರು 2004-14ರ ನಡುವೆ ಯುಪಿಎ ಮೈತ್ರಿಕೂಟದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.1991 ರಲ್ಲಿ, ಮನಮೋಹನ್ ಸಿಂಗ್ ಅವರು ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರ ಕುಟುಂಬ ಸದಸ್ಯರು ಗುರುವಾರ ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ದರು. ತೀವ್ರ ಅಸ್ವಸ್ಥರಾಗಿದ್ದ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಚಿಕಿತ್ಸೆ ನೀಡಿದರು.
ಡಾ.ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿತಿ ತಿಳಿದ ತಕ್ಷಣ ಅವರ ಕುಟುಂಬ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಏಮ್ಸ್ ಆಸ್ಪತ್ರೆಗೆ ಧಾವಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸೆಲೆಬ್ರಿಟಿಗಳು ಏಮ್ಸ್ ಆಸ್ಪತ್ರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಕರ್ನಾಟಕದ ಬೆಳಗಾವಿ ಪ್ರವಾಸದಲ್ಲಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ತರಾತುರಿಯಲ್ಲಿ ದೆಹಲಿಗೆ ತೆರಳಿದ್ದಾರೆ.
Leave a reply