ಹವಾನಾ : ಕ್ಯೂಬಾ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂಬ ಅಮೆರಿಕದ ಆರೋಪವನ್ನು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್ ಕ್ಯಾನೆಲ್ ಬಲವಾಗಿ ಅಲ್ಲಗಳೆದಿದ್ದಾರೆ. ಇವೆಲ್ಲವೂ ಅನೈತಿಕ ಮತ್ತು ಸುಳ್ಳು ಆರೋಪಗಳು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಕ್ಯೂಬಾದ ಜೋಸ್ ಮಾರ್ಟಿ ಸಾಮ್ರಾಜ್ಯಶಾಹಿ ವಿರೋಧಿ ವೇದಿಕೆಯಲ್ಲಿ ಸಾವಿರಾರು ಕ್ಯೂಬನ್ನರು ಶುಕ್ರವಾರ ಬೃಹತ್ ಪ್ರತಿಭಟನೆ, ಪ್ರದರ್ಶನವನ್ನು ನಡೆಸಿ, ಕ್ಯೂಬಾ ಮೇಲಿನ ಅಮೆರಿಕದ ಕರಾಳ ನೀತಿಯನ್ನು ಬಲವಾಗಿ ವಿರೋಧಿಸಿದರು.
ಅಮೆರಿಕಾ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಕ್ಯೂಬಾ ಸರ್ಕಾರವು ಈ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿತ್ತು. ಭಯೋತ್ಪಾದನೆಗೆ ಉತ್ತೇಜನ ನೀಡುವ ದೇಶಗಳ ಪಟ್ಟಿಯಿಂದ ಕ್ಯೂಬಾವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಕ್ಯೂಬಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅರೆಸೈನಿಕ ಪಡೆಗಳಿಗೆ ತರಬೇತಿ ನೀಡುವ ದೇಶ ಎಂಬಂತಹ ಆರೋಪಗಳು ಅತ್ಯಂತ ಅನೈತಿಕ ಎಂದು ಕ್ಯೂಬಾದ ಅಧ್ಯಕ್ಷರು ತೀವ್ರವಾಗಿ ಖಂಡಿಸಿದರು.
ಈ ಪಟ್ಟಿಯಲ್ಲಿ ಕ್ಯೂಬಾವನ್ನು ಮುಂದುವರಿಸುವುದು ಸಮಂಜಸವಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಸೇರಿದಂತೆ ಅಮೆರಿಕದ ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಒಪ್ಪಿಕೊಂಡಿದ್ದಾರೆ ಎಂದು ಕ್ಯೂಬಾದ ಅಧ್ಯಕ್ಷರು ತಿಳಿಸಿದ್ದಾರೆ. ಆ ಪಟ್ಟಿಯಲ್ಲಿ ಕ್ಯೂಬಾವನ್ನು ಮುಂದುವರೆಸುವುದು ಮತ್ತು ನಿರ್ದಾಕ್ಷಿಣ್ಯವಾಗಿ ನಿರ್ಬಂಧಗಳನ್ನು ಹೇರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು. ತಮ್ಮ ಹಕ್ಕುಗಳು ಮತ್ತು ಸಾರ್ವಭೌಮತ್ವದಲ್ಲಿ ಎಲ್ಲಾ ಕ್ಯೂಬನ್ನರು ಒಂದಾಗಿದ್ದಾರೆ ಎಂದು ಈ ಪ್ರದರ್ಶನ ಮತ್ತೊಮ್ಮೆ ಸ್ಪಷ್ಟಪಡಿಸಿತು.
Leave a reply