ಸಂವಿಧಾನ ಸಭೆಗೆ ಅಂಬೇಡ್ಕರ್- ಹಿಂದೂ ಮಹಾಸಭದ ದಲಿತ ದ್ರೋಹಿ, ಅಂಬೇಡ್ಕರ್ ವಿರೋಧಿ ಕುತಂತ್ರಗಳು
ಈ ಸಂವಿಧಾನ ಅವಮಾನ ಅಭಿಯಾನದಲ್ಲಿ ಸಂಘಪರಿವಾರವು ಜನರ ಮುಂದಿಡುತ್ತಿರುವ ಮತ್ತೊಂದು ಅರ್ಧ ಸತ್ಯಗಳ ಕುತಂತ್ರ ಕಥನ ಅಂಬೇಡ್ಕರ್ ಸಂವಿಧಾನ ಸಭೆಗೆ ಆಯ್ಕೆಯಾಗಿದ್ದು ಮತ್ತು ನಂತರ ರಾಜೀನಾಮೆ ಕೊಡಬೇಕಾದ ಸಂದರ್ಭದ ಹಿಂದಿದ್ದ ಕಾಂಗ್ರೆಸ್ಸಿನ ಪಾತ್ರದ ಬಗ್ಗೆ.
ಈಗಾಗಲೇ ಪ್ರಸ್ತಾಪಿಸಿದಂತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದಲಿತರ ವಿಮೋಚನೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ಸಿನ ಪಾತ್ರ ವಂಚಕವಾಗಿತ್ತು. ಮತ್ತು ದ್ರೋಹಪೂರಿತವಾಗಿತ್ತು. ಇತಿಹಾಸದ ಹಲವು ಕಾಲಘಟ್ಟಗಳಲ್ಲಿ ಸ್ವಾತಂತ್ಯ್ರ್ಯದ ಜೊತೆಗೆ ದಲಿತರ ವಿಮೋಚನೆಯೂ ಅಗುವಂತೆ ಪ್ರಸ್ತಾಪಗಳನ್ನು ಅಂಬೇಡ್ಕರ್ ಇಟ್ಟಾಗ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅದನ್ನು ದೇಶ ಹಾಗೂ ಹಿಂದೂ ಧರ್ಮದ ಐಕ್ಯತೆಯ ಹೆಸರಿನಲ್ಲಿ ನಿರಾಕರಿಸಿ, ಅಪಮಾನಿಸಿ ದಲಿತ ವಿಮೋಚನೆಗೆ ಮತ್ತು ದಲಿತ ಅಸ್ಮಿತೆಯ ಸ್ವಾಯತ್ತತೆಗೆ ದ್ರೋಹ ಬಗೆಯಿತು. ಇದರಿಂದ ಅಂಬೇಡ್ಕರ್ ಅವರು ಗಾಂಧಿಯ ನೇತೃತ್ವದ ಬಗ್ಗೆ ಹಾಗೂ ಕಾಂಗ್ರೆಸ್ ಹೋರಾಟದ ಬಗ್ಗೆ ಸಕಾರಣವಾಗಿ ಅತ್ಯಂತ ಅಕ್ರೋಶಿತರಾಗಿದ್ದರು. ಹಾಗೂ ಕಾಂಗ್ರೆಸ್ಸಿಗೆ ವಿರೋಧವಾಗಿ ಮತ್ತು ಪರ್ಯಾಯವಾಗಿ ಈ ದೇಶದ ದಲಿತ ದಮನಿತರ ವಿಮೋಚನೆಯನ್ನು ಖಾತರಿ ಪಡಿಸುವ ದಾರಿಯ ಅನ್ವೇಷಣೆಯನ್ನು ಮಾಡುತ್ತಿದ್ದರು.
ಹೀಗಾಗಿ ಕಾಂಗ್ರೆಸ್ ಮತ್ತು ಅಂಬೇಡ್ಕರ್ ಗಳ ನಡುವಿನ ಸಮಸ್ಯಾತ್ಮಕ ಸಂಬಂಧಗಳ ಹಿಂದೆ ಒಂದು ಜಾತಿ-ವರ್ಗಗ್ರಸ್ಥ ಸಮಾಜದಲ್ಲಿ ರಾಜ್ಯಾಧಿಕಾರವು ಪ್ರಬಲ ಜಾತಿ-ವರ್ಗಗಳಿಗೆ ಹಸ್ತಾಂತರವಾಗುವ ಆತಂಕ ಹುಟ್ಟುಹಾಕುವ ಸಾಮಾಜಿಕ-ರಾಜಕೀಯ ಪ್ರಶ್ನೆಗಳಿದ್ದವು. ಆ ಪ್ರಶ್ನೆಗಳನ್ನು ಸ್ವಾತಂತ್ರ್ಯ ಹೋರಾಟವೂ ಬಗೆಹರಿಸಲಿಲ್ಲ. ಸ್ವಾತಂತ್ರ್ಯವೂ ಬಗೆಹರಿಸಿಲ್ಲ. ಸಂವಿಧಾನವೂ ಬಗೆಹರಿಸಿಲ್ಲ. ಆದರೆ ಈ ವಿಷಯದಲ್ಲಿ ಹಿಂದೂತ್ವವಾದಿಗಳೂ ಸಹ ಕಾಂಗ್ರೆಸ್ಸಿನಷ್ಟೆ ಅಥವಾ ಕಾಂಗ್ರೆಸ್ಸಿಗಿಂತ ಹೆಚ್ಚು ದಲಿತ ದ್ರೋಹಿಗಳು ಮತ್ತು ಅಂಬೇಡ್ಕರ್ ವಿರೋದಿಗಳೇ ಆಗಿದ್ದರು. ಅದನ್ನು ಸಂಘಿಗಳು ಈ ಅಭಿಯಾನದಲ್ಲಿ ಮುಚ್ಚಿಡುತ್ತಿದ್ದಾರೆ.
ಸ್ವಾತಂತ್ರ್ಯ ಪೂರ್ವ ರಾಜಕಾರಣದಲ್ಲಿ ಉಗ್ರ ಹಿಂದೂತ್ವದ ಪ್ರಧಾನ ಪ್ರತಿಪಾದಕ ಸಾವರ್ಕರ್ ಅವರ ಹಿಂದೂ ಮಹಾಸಭ. ಅಂದಿನ ಆರೆಸ್ಸೆಸ್ ರಾಷ್ಟ್ರ ರಾಜಕಾರಣದ ಕ್ಶೇತ್ರದಲ್ಲಿ ಅದರಲ್ಲೂ 1945-48ರ ಅವಧಿಯಲ್ಲಿ ವಿಶೇಷವಾಗಿ ಹಿಂದೂ ಮಹಾಸಭದ ಬೆನ್ನಿಗೆ ನಿಂತು ಕೆಲಸ ಮಾಡುತ್ತಿತ್ತು. ಬಹಳಷ್ಟು ಬಾರಿ ಹಿಂದೂಮಹಾಸಭದ ಸದಸ್ಯರೇ ಆರೆಸ್ಸೆಸಿನ ಸದಸ್ಯರೂ ಆಗಿರುತ್ತಿದ್ದರು. ಗಾಂಧಿಯನ್ನು ಕೊಂದ ಭಾರತದ ಪ್ರಥಮ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಇದಕ್ಕೊಂದು ಉದಾಹರಣೆ. ಎಲ್ಲಕ್ಕಿಂತ ಹೆಚ್ಚಾಗಿ ಆಗಲೂ, ಈಗಲೂ ಆರೆಸ್ಸೆಸ್ ಮತ್ತು ಅದರ ಪರಿವಾರ ಸಾವರ್ಕರ್ ಅವರನ್ನೇ ತಮ್ಮ ಸೈದ್ಧಾಂತಿಕ ನಾಯಕನ್ನಾಗಿ, ಪಿತಾಮಹನನ್ನಾಗಿ ಪರಿಗಣಿಸುತ್ತದೆ. ಮತ್ತು 1951 ರಲ್ಲಿ ಭಾರತೀಯ ಜನ ಸಂಘ ಎಂಬ ಪಕ್ಷ ವನ್ನು ತಾನೇ ಹುಟ್ಟುಹಾಕುವವರೆಗೆ ಹಿಂದೂ ಮಹಾಸಭವನ್ನೇ ತನ್ನ ರಾಜಕೀಯ ಪಕ್ಷವೆಂದು ಭಾವಿಸಿತ್ತು.
1951 ರಲ್ಲಿ ಆರೆಸ್ಸೆಸ್ಸೇ ಭಾರತೀಯ ಜನಸಂಘವನ್ನು ಹುಟ್ಟುಹಾಕಿದಾಗ ಅದರ ಪ್ರಥಮ ಅಧ್ಯಕ್ಷರಾದದ್ದು ಹಿಂದೂ ಮಹಾಸಭಾದ ಸಂಸದರಾಗಿದ್ದ ಶಾಮ ಪ್ರಸಾದ ಮುಖರ್ಜಿ. ಹೀಗಾಗಿ ಇಲ್ಲಿ ಹಿಂದೂ ಮಹಾಸಭ ಎಂದು ಪ್ರಸ್ತಾಪವಾಗುವುದೆಲ್ಲಾ ಆರೆಸ್ಸೆಸ್ಸಿಗೆ ಅನ್ವಯವಾಗುತ್ತದೆ. ಅವೆರಡು ಒಂದೇ ಆತ್ಮದ ಎರಡು ಬೇರೆ ದೇಹಗಳಾಗಿದ್ದವು ಅಷ್ಟೆ.
ಈಗಾಗಲೇ ಚರ್ಚಿಸಿದಂತೆ ದಲಿತರಿಗೆ ದ್ರೋಹ ಬಗೆದ ಕಾಂಗ್ರೆಸ್ ನೇತೃತ್ವದ ಪೂನ ಒಪ್ಪಂದಕ್ಕೆ ಸಹಿಹಾಕಿದವರಲ್ಲಿ ಹಿಂದೂ ಮಹ ಸಭಾ ಕೂಡ ಇತ್ತು. ಹಿಂದೂತ್ವವಾದಿಗಳ ಬಳಿ ದಲಿತ ದಮನಿತರನ್ನು ಜಾತಿ-ವರ್ಗ-ಲಿಂಗಾಧಿಪತ್ಯಗಳಿಗೆ ಇನ್ನಷ್ಟು ಉಗ್ರವಾಗಿ ಕಟ್ಟಿಹಾಕುವ ಹಿಂದೂತ್ವದ ಕಾರಾಗೃಹಗಳನ್ನು ಬಿಟ್ಟರೆ ಬೇರೇ ಪರಿಹಾರಗಳೇನೂ ಇರಲಿಲ್ಲ. ಆದರೂ ಅಂಬೇಡ್ಕರ್ ಮತ್ತು ಕಾಂಗ್ರೆಸ್ ನಡುವೆ ಇದ್ದಂತ ವೈರುಧ್ಯಗಳನ್ನು ಬಳಸಿಕೊಂಡು ಹಿಂದೂ ಮಹಸಭ ಸಭಾ ತಾನು ದಲಿತ ಪರ ಎಂದೆಲಾ ಸೋಗು ಹಾಕಿದ್ದು ನಿಜ. ಆದರೆ ಅಂಬೇಡ್ಕರ್ ಅವರು ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದರೂ ಎಂದಿಗೂ ಹಿಂದೂತ್ವವನ್ನು ಒಂದು ಪರಿಹಾರದ ಸಾಧನವೆಂದು ಪರಿಗಣಿಸಲಿಲ್ಲ. ಅದಕ್ಕೆ 1940 ರಲ್ಲು ಕೂಡ ಅವರು ಅತ್ಯಂತ ಸ್ಪಷ್ಟವಾಗಿ ಹಿಂದೂ ರಾಷ್ತ್ರವೆಂಬುದು ಪ್ರಜಾತಂತ್ರದ ವಿಪತ್ತು ಎಂದು ತಿರಸ್ಕರಿಸಿದ್ದೇ ಸಾಕ್ಷಿ.
ಅವಲ್ಲವನ್ನು ಈಗ ಮರೆಮಾಚುತ್ತಿರುವ ಸಂಘಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಮತ್ತು ಕಾಂಗ್ರೆಸ್ಸಿನ ನಡುವೆ ಇದ್ದ ಬಿರುಕುಗಳು ಮತ್ತು ಕಾಂಗ್ರೆಸ್ ಮಾಡಿದ ದ್ರೋಹಗಳನ್ನು ಮುಂದುಮಾಡುತ್ತಾ ತನ್ನ ಮಹಾದ್ರೋಹ ಹಾಗೊ ಮಹಾವಂಚನೆಗಳನ್ನು ಮರೆಮಾಚುತ್ತಿದೆ. ಅದರ ಭಾಗವಾಗಿಯೇ ಈ ಅಭಿಯಾನದಲ್ಲಿ ಅವರು ಸಂವಿಧಾನ ಸಭೆಗೆ ಅಂಬೆಡ್ಕರ್ ಆಯ್ಕೆ ಮತ್ತು ರಾಜೀನಾಮೆಗಳಲ್ಲಿ ಕಾಂಗ್ರೆಸ್ ಪಾತ್ರದ ಸುತ್ತ ಹಲವು ಅರ್ಧ ಸತ್ಯಗಳನ್ನು ಬಿತ್ತುತ್ತಿದ್ದಾರೆ ಮತ್ತು ತಮ್ಮ ಕುತಂತ್ರದ ಬಗ್ಗೆ ಮೌನವನ್ನೂ ತೋರಿದ್ದಾರೆ.
ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ- ಸ್ವಾಯತ್ತ ದಲಿತ ಅಸ್ಮಿತೆಯ ಹಂತಕರು..
ಅಂಬೇಡ್ಕರ್ ಅವರು ಏಕೆ 1946 ರಲ್ಲಿ ನಡೆದ ಪ್ರಾಂತೀಯ ಶಾಸನಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು? ಏಕೆ ಸಂವಿಧಾನ ಸಭೆಗೆ ಆಯ್ಕೆಯಾಗಲು ಮುಂಬೈನಿಂದ ಬಂಗಾಳಕ್ಕೆ ಹೋಗಬೇಕಾಯಿತು? ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರೇ ಚುನಾವಣೆಯಲ್ಲಿ ಏಕೆ ಸೋಲಬೇಕಾಯಿತು? ಇದು ಅರ್ಥವಾಗಬೇಕೆಂದರೆ ಸ್ವಾಯತ್ತ ದಲಿತ ರಾಜಕಾರಣ ಮತ್ತು ಸ್ವತಂತ್ರ ದಲಿತ ನಾಯಕರು ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ಯೋಜಿತವಾಗಿ ರಚಿಸಲಾದ ರಾಜಕೀಯ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಗಮನಿಸಬೇಕು. ಅದು ಅರ್ಥವಾಗದೆ ಸ್ವಾತಂತ್ರ್ಯ ಹೋರಾಟದಲ್ಲೂ ಮತ್ತು ಈಗಲೂ ದಲಿತರ ರಾಜಕೀಯ ವಿಮೋಚನೆಗೆ ಅಗುತ್ತಿರುವ ಅನ್ಯಾಯ ಅರ್ಥವಾಗದು. ಆದ್ದರಿಂದ ಸಂವಿಧಾನ ಸಭೆಗೆ ಅಂಬೇಡ್ಕರ್ ಆಯ್ಕೆಯನ್ನು ತಡೆಗಟ್ಟುತ್ತಿದ್ದ ಕಾಂಗ್ರೆಸ್ ಹಾಗೂ ಹಿಂದೂ ಮಹಾಸಭಗಳ ಸವರ್ಣೀಯ ಹಿಂದೂ ರಾಜಕರಣವನ್ನು ಸ್ವಲ್ಪ ಕೂಲಂಕಷವಾಗಿಯೇ ನೋಡಬೇಕಿದೆ.
ಭಾರತಕ್ಕೆ ಜವಾಬುದಾರಿ ಸರ್ಕಾರವನ್ನು ಒದಗಿಸುವ ಮತ್ತು ಸ್ಥಳೀಯ ಪ್ರಾತಿನಿಧ್ಯವನ್ನು ಹಂತಹಂತವಾಗಿ ಹೆಚ್ಚಿಸುವ ಪ್ರಕ್ತಿಯೆ 1909 ರ ಮಾರ್ಲೆ-ಮಿಂಟೊ ಸುಧಾರಣೆಯಿಂದ ಪ್ರಾರಂಭವಾಯಿತು. ಆದರೆ ಸ್ಥಳೀಯರ ಪ್ರಾತಿನಿಧ್ಯದ ವಿಷಯದಲ್ಲಿ ವಸಾಹತುಶಾಹಿ ಬ್ರಿಟಿಷರು ತಮ್ಮ ಒಡೆದಾಳುವ ನೀತಿಯ ಭಾಗವಾಗಿ ಕೋಮುವಾರು ಪ್ರಾತಿನಿಧ್ಯದ ಮಾರ್ಗವನ್ನು ಅನುಸರಿಸಿದರು. ಸೈಮನ್ ಕಮಿಷನ್ ನಂತರ ಭಾರತಕ್ಕೆ ಹೆಚ್ಚಿನ ಜವಾಬುದಾರಿ ಸರ್ಕಾರ ಒದಗಿಸುವ ಹೆಸರಿನಲ್ಲಿ ಯಾವ ಯಾವ ಕೋಮುಗಳಿಗೆ ಎಷ್ಟೆಷ್ಟು ಪ್ರಾತಿನಿಧ್ಯ ಎಂದು ನಿಗದಿಪಡಿಸಲು ದುಂಡು ಮೇಜಿನ ಪರಿಷತ್ ಸಭೆಗಳು ನಡೆದವು. ಇದರಲ್ಲಿ ಅಂಬೇಡ್ಕರ್ ಅವರು ಅಸ್ಪೃಶ್ಯರು ಹಿಂದೂಗಳಲ್ಲಾ ಮತ್ತು ಕಾಂಗ್ರೆಸ್ ಸವರ್ಣೀಯ ಹಿಂದೂಗಳ ಪ್ರತಿನಿಧಿಯೇ ಹೊರತು ಅಸ್ಪೃಷ್ಯರದ್ದಲ್ಲ ಎಂದು ಯಶಸ್ವಿಯಾಗಿ ಪ್ರತಿಪಾದಿಸಿದರು. ಮತ್ತು ಹಿಂದೂ, ಮುಸ್ಲಿಂ, ಸಿಖ್ರಂತೆ ದಲಿತರಿಗೂ ಪ್ರತ್ಯೇಕ ಮತದಾನ ಮತ್ತು ಮತಕ್ಷೇತ್ರಗಳನ್ನು ದಕ್ಕಿಸಿಕೊಂಡರು.
ಅಂದರೆ ಸವರ್ಣೀಯರ ಹಂಗಿಲ್ಲದೆ ದಲಿತರೇ ದಲಿತರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುವ ಸವರ್ಣೀಯ ಹಂಗಿನಿಂದ ಮುಕ್ತವಾದ ಸ್ವಾಯತ್ತ ದಲಿತ ಅಸ್ಮಿತೆಯ ಹಕ್ಕನ್ನು ಪಡೆದುಕೊಂಡರು. ಆದರೆ ಸವರ್ಣೀಯ ಹಿಂದೂಗಳಿಂದ ದಲಿತರು ಪಡೆದ ಈ ರಾಜಕೀಯ ವಿಮೋಚನೆಯನ್ನು ಕಾಂಗ್ರೆಸ್ ಮಾತ್ರವಲ್ಲದೆ ಹಿಂದೂ ಮಹಾಸಭಾ ಕೂಡ ದೇಶಾದ್ಯಂತ ಉಗ್ರವಾಗಿ ವಿರೋಧಿಸಿತು. ಯರವಾಡ ಜೈಲಿನಲ್ಲಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹದ ಭಯೋತ್ಪಾದನೆಗಿಳಿದರು. ದಲಿತರಿಗೆ ಮತ್ತು ಅಂಬೇಡ್ಕರಿಗೆ ಮಾರಣಾಂತಿಕ ಎಚ್ಚರಿಕೆಯನ್ನು ನೀಡಿದರು. ಇವೆಲ್ಲದರ ಭಾಗವಾಗಿ ಪೂನ ಒಪ್ಪಂದವಾಯಿತು. ಈಗಾಗಲೇ ಗಮನಿಸಿದಂತೆ ಕಾಂಗ್ರೆಸ್ ಮತ್ತು ಸವರ್ಣೀಯ ಹಿಂದೂಗಳ ಪಕ್ಷದಿಂದ ಈ ದಲಿತ ದ್ರೋಹಿ ಒಪ್ಪಂದಕ್ಕೆ ಸಹಿ ಹಾಕಿದರಲ್ಲಿ ಹಿಂದೂ ಮಹಾಸಭಾದ ಪ್ರಮುಖ ನಾಯಕ ಮೂಂಜೆ ಸಹ ಒಬ್ಬರು. ಇದರಿಂದ ದುಂಡು ಮೇಜಿನ ಪರಿಷತ್ತಿನಲ್ಲಿ ಅಂಬೇಡ್ಕರ್ ದಲಿತರ ರಾಜಕೀಯ ವಿಮೋಚನೆಗೆ ಗಳಿಸಿದ್ದ ಹಕ್ಕು ನಷ್ಟವಾಯಿತು.
ದಲಿತರ ಅಸ್ಮಿತೆ ಮತ್ತೊಮ್ಮೆ ಹಿಂದೂ ಅಸ್ಮಿತೆಗೆ ಅಧೀನವಾಯಿತು. ದಲಿತರಿಗೆ ಹೆಚ್ಚು ಸೀಟುಗಳು ಸಿಕ್ಕರೂ ಅಂತಿಮವಾಗಿ ಜಂಟಿ ಮತದಾನದ ಮೂಲಕವೇ ದಲಿತ ಪ್ರತಿನಿಧಿ ಆಯ್ಕೆಯಾಗಬೇಕಿತ್ತು. ಇದರಿಂದ ದಲಿತರು ಮಾತ್ರ ಆಯ್ಕೆ ಮಾಡುತ್ತಿದ್ದ ಮೊದಲ ಸುತ್ತಿನಲ್ಲಿ ಆಯ್ಕೆಯಾದ ನೈಜ ದಲಿತ ಪ್ರತಿನಿಧಿಗಳು ಅಂತಿಮ ಸುತ್ತಿನಲ್ಲಿ ಆಯ್ಕೆಯಾಗುತ್ತಿರಲಿಲ್ಲ. ಏಕೆಂದರೆ ಅಂತಿಮವಾಗಿ ಜಂಟಿ ಮತದಾನವಾದಾಗ ಯಾವ ದಲಿತ ಪ್ರತಿನಿಧಿ ಹಿಂದೂಬಹುಸಂಖ್ಯಾತ ಸವರ್ಣೀಯ ಮತದಾರರ ಅಧೀನತೆಗೆ ಒಳಪಡುತ್ತಿದ್ದರೋ ಅಂತ ದಲಿತ ಪ್ರತಿನಿಧಿಗಳು ಮಾತ್ರ ಆಯ್ಕೆಯಾಗುತ್ತಿದ್ದರು. ನೈಜ ದಲಿತ ಪ್ರತಿನಿಧಿಗಳು ಆಯ್ಕೆಯಾಗುತ್ತಲೇ ಇರಲಿಲ್ಲ.
ಅಂಬೇಡ್ಕರ್ ಅವರು ಪೂನಾ ಒಪ್ಪಂದದಿಂದ ಆದ ಈ ದ್ರೋಹವನ್ನು 1937 ರಲ್ಲಿ ನಡೆದ ಚುನಾವಣೆಯ ಫಲಿತಾಂಶಗಳ ವಿಶ್ಲೇಷಣೆಯಲ್ಲಿ ಸ್ಪಷ್ಟವಾಗಿ ತೋರಿಸಿದರು. ಅದೇ ಪರಿಸ್ಥಿತಿಯೇ ಈಗಲೂ ಮುಂದುವರೆದಿದೆ. ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾಗಳ ಕುಮ್ಮಕ್ಕಿನೊಂದಿಗೆ ಭಯೋತ್ಪಾದನೆಯ ಮೂಲಕ ಜಾರಿಯಾದ ಈ ಚುನಾವಣಾ ವ್ಯವಸ್ಥೆಯೇ 1946 ರ ಪ್ರಾಂತೀಯ ಸಭ ಚುನಾವಣೆಯಲ್ಲಿ ಮತ್ತು ಆ ನಂತರ ಸಂವಿಧಾನ ಸಭೆಗೆ ಅಂಬೇಡ್ಕರ್ ಆಯ್ಕೆಯಾಗದಂತ ಪರಿಸ್ಥಿತಿಯನ್ನು ಸೃಷ್ಟಿಸಿತು. ಇದರ ಜೊತೆಗೆ ಕಾಂಗ್ರೆಸ್ ರಾಜಕಾರಣದಾಚೆಗೆ ಮತ್ತು ಹಿಂದೂ ಧಾರ್ಮಿಕ ಚೌಕಟ್ಟಿನಾಚೆ ಸ್ವಾಯತ್ತ ಸ್ವಾಭಿಮಾನಿ ದಲಿತ ರಾಜಕಾರಣದ ನಾಯಕರಾಗಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಮತ್ತು ಹಿಂದೂ ಮಹಾಸಭ ಇಬ್ಬರು ದ್ವೇಷಿಸುತ್ತಿದ್ದದ್ದೊ ಕೂಡ ಅಂಬೇಡ್ಕರ್ ಹಾದಿಯನ್ನು ದುರ್ಗಮಗೊಳಿಸಿತ್ತು.
1946 ರ ಪ್ರಾಂತೀಯ ಚುನಾವಣೆ ಮತ್ತು ದಲಿತ ಅಸ್ಮಿತೆಯನ್ನು ನುಂಗಿದ ಕೋಮುವಾದ
ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ಪ್ರಕ್ರಿಯೆಗಳನ್ನು ನಿಗದಿ ಮಾಡಲು 1945 ರಲ್ಲಿ ಭಾರತಕ್ಕೆ ಬಂದ ಬ್ರಿಟನ್ನಿನ ಕ್ಯಾಬಿನೆಟ್ ಮಿಶನ್ ಸ್ವತಂತ್ರ ಭಾರತದ ಸಂವಿಧಾನವನ್ನು ರಚಿಸಿಕೊಳ್ಳಲು ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಕೊಂಡಿತು. ಮತ್ತು ಅದರ ಸದಸ್ಯರನ್ನು ಪ್ರಾಂತೀಯ ಶಾಸನ ಸಭೆಗಳು ಆಯ್ಕೆ ಮಾಡಬೇಕೆಂದು ನಿಗದಿ ಪಡಿಸಿತು. ಅದರ ಭಾಗವಾಗಿ 1946 ರಲ್ಲಿ ಪ್ರಾಂತೀಯ ಶಾಸನಾ ಸಭೆಗಳಿಗೆ ಚುನಾವಣೆ ನಡೆಸಲಾಯಿತು. ಆದರೆ ಈ ಪ್ರಾಂತೀಯ ಶಾಸನಾ ಸಭಾ ಚುನಾವಣೆಗಳಿಂದಲೇ ಸಂವಿಧಾನ ಸಭೆಯ ಸದಸ್ಯರೂ ಅಯ್ಕೆಯಾಗಬೇಕಿದ್ದರಿಂದ ಅಂಬೇಡ್ಕರ್ ಅವರನ್ನು ಹೇಗಾದರೂ ಸೋಲಿಸಲೇ ಬೇಕೆಂದು ಪಣತೊಟ್ಟಿದ್ದು ಕಾಂಗ್ರೆಸ್ ಮಾತ್ರವಲ್ಲ ಹಿಂದೂ ಮಹಾಸಭಾ ಕೂಡ. ಅದು ಹೇಗೆಂದು ಮುಂದೆ ನೋಡೊಣ.
ಆ ವೇಳೆಗಾಗಲೇ ಸಂಘಿಗಳ ಪಿತಾಮಹ ಸಾವರ್ಕರ್ ಪ್ರತಿಪಾದಿಸುತ್ತಾ ಬಂದಿದ್ದ ದ್ವಿರಾಷ್ಟ್ರ ಸಿದ್ಧಾಂತ ಭಾರತದ ಭಾವೈಕ್ಯತೆಯನ್ನು ಭಗ್ನಗೊಳಿಸಿ ಭಾರತವನ್ನು ಎರಡು ರಾಷ್ಟ್ರವಾಗಿ ಧ್ರುವೀಕರಿಸಲು ಪ್ರಾರಂಭಿಸಿತ್ತು. ವಿಭಜನೆಯತ್ತ ವೇಗವಾಗಿ ದೂಡುತ್ತಿತ್ತು. ಇದರೊಂದಿಗೆ ಸವರ್ಣಿಯ ಹಿಂದೂ ಪ್ರಾತಿನಿಧ್ಯದ ಅಧಿಪತ್ಯವನ್ನು ಸಾಬೀತು ಪಡಿಸಿದ್ದ 1937 ರ ಚುನಾವಣಾ ಫಲಿತಾಂಗಳು ಮುಸ್ಲಿಮರಲ್ಲಿ ಮತ್ತು ಸ್ವಾಭಿಮಾನಿ ದಲಿತರಲ್ಲಿ ಹಿಂದೂ ಮೇಲಾಧಿಪತ್ಯದ ಬಗ್ಗೆ ಆತಂಕ ಹಾಗೂ ಅಸಮಧಾನ ಮೂಡಿಸಿತ್ತು.
ಹೀಗಾಗಿ ಮುಸ್ಲಿಂ ಲೀಗಿನ ಜಿನ್ನಾರವರು ಪ್ರತಿಪಾದಿಸಿದ ” ಅವಿಭಜಿತ ಭಾರತದೊಳಗೆ ಸ್ವಾಯತ್ತ ಮುಸ್ಲಿಂ ಪ್ರಾಂತ್ಯಗಳು ಅಥವಾ ದೇಶ ವಿಭಜನೆ” ಎಂಬ ಪ್ರಸ್ತಾಪವು ತೀವ್ರವಾಗಿ ಪರಿಗಣಿಸಲ್ಪಡುತ್ತಿತ್ತು. ಮತ್ತೊಂದು ಕಡೆ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಿಗೆ ವಿಶೇಷ ಸ್ವಾಯತ್ತತೆ ಕೊಡುವುದನ್ನು ಖಡಾಖಂಡಿತವಾಗಿ ನಿರಾಕರಿಸಿದ ಪಟೀಲ್-ನೆಹರೂ ನೇತೃತ್ವದ ಕಾಂಗ್ರೆಸ್ ಕೂಡ ದೇಶ ವಿಭಜನೆಯನ್ನು ಅನಿವಾರ್ಯ ಆಯ್ಕೆಯಾಗುವತ್ತ ತಳ್ಳುತ್ತಿತ್ತು.
ಹಿಂದೂ ಮಹಾಸಭ ಮತ್ತು ಆರೆಸ್ಸೆಸ್ ಈ ರಾಜಕೀಯ ಸಂದರ್ಭವನ್ನು ಅತ್ಯಂತ ಅಮಾನುಷವಾಗಿ ಬಳಸಿಕೊಂಡಿತು. ಮುಸ್ಲಿಮ್ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳ ಆತಂಕವನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಮ್ ವಿರೋಧಿ ದಂಗೆಗಳನ್ನು ಹುಟ್ಟುಹಾಕಿತು ಮತ್ತು ಆರೆಸ್ಸೆಸ್ ಕೂಡ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಹಿಂಸಾಚಾರದಲ್ಲಿ ತೊಡಗಿಕೊಂಡಿತು. ಬಂಗಾಳ ಪ್ರಾಂತ್ತ್ಯದಲ್ಲಂತೂ ದೇಶ ವಿಭಜನೆಯ ವಿರುದ್ಧ ಧ್ವನಿ ಎತ್ತುತ್ತಿದ್ದ ಮುಸ್ಲಿಮೇತರರ ಮೇಲೆ ಅಪಪ್ರಚಾರ ಮಾಡಲು ಪ್ರಾರಂಭಿಸಿತು. ಆ ಅಪಪ್ರಚಾರಕ್ಕೆ ಬಲಿಯಾದವರಲ್ಲಿ ಅಂಬೇಡ್ಕರ್ವಾದಿ ಜೋಗೇಂದ್ರ ನಾಥ್ ಮಂಡಲ್ ಕೂಡ ಒಬ್ಬರು. ಈ ಆತಂಕ ಮತ್ತು ಅನಿಶ್ಚತೆಯ ಹಿನ್ನೆಲೆಯಲ್ಲಿ ಸಂವಿಧಾನ ಸಭೆಯ ಸದಸ್ಯರನ್ನು ಆಯ್ಕೆ ಮಾಡಬೇಕಾದ ಪ್ರಾಂತೀಯ ಶಾಸನಸಭೆಗಳಿಗೆ ಚುನಾವಣೆಗಳು ನಡೆದವು.
ಅಂಬೇಡ್ಕರ್ ದ್ವೇಷಿ ಸರ್ದಾರ್ ಪಟೇಲ್
1946 ರ ಪ್ರಾಂತೀಯ ಶಾಸನ ಸಭಾ ಚುನಾವಣೆಗಳಿಗೆ ಅಂಬೇಡ್ಕರ್ ಅವರು ತಮ್ಮ ಆಲ್ ಇಂಡಿಯಾ ಶೆಡ್ಯುಲ್ ಕ್ಯಾಸ್ಟ್ ಫ಼ೆಡರೇಶನ್ ಪ್ರತಿನಿಧಿಯಾಗಿ ಮುಂಬೈ ಪ್ರಾಂತ್ರ್ಯದಿಂದ ಸ್ಪರ್ಧಿಸಿದ್ದರು. ವಿವಿಧ ಪ್ರಾಂತೀಯ ಶಾಸನಸಭೆಗಲ್ಲಿ ಒಟ್ಟಾರೆ 151 ಮೀಸಲು ಕ್ಶೇತ್ರಗಳು ಪರಿಶಿಷ್ಟರಿಗೆ ನಿಗದಿಯಾಗಿದ್ದವು. ಆದರೆ ಮೇಲೆ ವಿವರಿಸಿದ ಕಾರಣಗಳಿಂದಾಗಿ ಅಂಬೇಡ್ಕರ್ ಅವರನ್ನು ಮತ್ತು ಅವರ ಶೆಡ್ಯೂಲ್ಡ್ ಕಾಸ್ಟ್ ಫ಼ೆಡರೇಶನ್ ಅನ್ನು ಯಾವ ಕಾರಣಕ್ಕೂ ಗೆಲ್ಲಲು ಬಿಡಬಾರದೆಂಬುದು ಕಾಂಗ್ರೆಸ್ಸಿನ ಅದ್ಶಿಕೃತ ನಿಲುವಾಗಿತ್ತು. ಅದಕ್ಕೆ ಪ್ರತಿಯಾಗಿ ತನ್ನದೇ ಆದ ಕಾರಣಗಳಿಗಾಗಿ ಅಂಬೇಡ್ಕರ್ ಮತ್ತು ಫ಼ೆಡರೇಶನ್ಗೆ ನೈತಿಕ ಬೆಂಬಲ ತೋರಿದ್ದು ಮುಸ್ಲಿಂ ಲೀಗ್ ಮಾತ್ರ. ಇದು ವಾಸ್ತವ..
ಆದರೆ ಇದರಲ್ಲಿ ಸಂಘಿಗಳು ಮುಚ್ಚಿಡುತ್ತಿರುವ ಸತ್ಯವೇನೆಂದರೆ ಕಾಂಗ್ರೆಸ್ ಕಡೆಯಿಂದ ಯಾವ ಕಾರಣಕ್ಕು ಅಂಬೇಡ್ಕರ್ ಗೆಲ್ಲಬಾರದೆಂದು ಹಠ ತೊಟ್ಟು ನಿಂತಿದ್ದು ಸಂಘಿಗಳು ಆರಾಧಿಸುವ ಕಾಂಗ್ರೆಸ್ ನಾಯಕ ಸರ್ದಾರ್ ಪಟೇಲ್ ಅವರು.
ವಾಸ್ತವದಲ್ಲಿ ಪಟೇಲರು:
ಅಷ್ಟು ಮಾತ್ರವಲ್ಲ. ಸ್ವಾತಂತ್ರ್ಯಾ ಮತ್ತು ದೇಶ ವಿಭಜನೆಗಳು ಹುಟ್ಟು ಹಾಕಿದ ಅನಿವಾರ್ಯ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಅಂಬೇಡ್ಕರ್ ರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಿದ್ದಲ್ಲದೇ, ಅಂಬೇಡ್ಕರರ ಅಪಾರ ಪ್ರತಿಭೆ ಮತ್ತು ವಿದ್ವತ್ತಿನ ಕಾರಣಕ್ಕೆ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಕೂಡ ಮಾಡಬೇಕಾಯಿತು. ಆದರೆ ಇದು ಪಟೇಲರಿಗೆ ಅಂಬೇಡ್ಕರ್ ಬಗ್ಗೆ ಇದ್ದ ಅಸಹನೆಯನ್ನೇನೂ ಕಡಿಮೆ ಮಾಡಲಿಲ್ಲ.
ಉದಾಹರಣೆಗೆ ಸಂವಿಧಾನ ಸಭೆಯಾ “ಅಲ್ಪಸಂಖ್ಯಾತರ ಹಕ್ಕುಗಳ ಬಗೆಗಿನ ಉಪಸಮಿತಿಯಲ್ಲಿ” ಅಂಬೇಡ್ಕರ್ ಮತ್ತು ಅಂಬೇಡ್ಕರ್ ವಾದಿ ನಾಗಪ್ಪರಂತ ಸದಸ್ಯರು ಚುನಾವಣೆಗಳಲ್ಲಿ ಪರಿಶಿಶ್ತೇತರ ಸದಸ್ಯರ ಆಯ್ಕೆಯನ್ನು ಘೋಶಿಸುವ ಮುಂಚೆ ಆ ಅಭರ್ಥಿ ಪರಿಶಿಷ್ಟರನ್ನು ಒಳಗೊಂಡು ಅಲ್ಪಸಂಖ್ಯಾತ ಸಮುದಾಯದ ನಿರ್ದಿಷ್ಟ ಪ್ರಮಾಣದ ಮತಗಳನ್ನು ಗಳಿಸುವುದು ಕಡ್ಡಾಯ ಮಾಡಬೇಕೆಂದು ಪ್ರಸ್ತಾಪಿಸುತ್ತಾರೆ. ಆ ಪ್ರಸಾಪವನ್ನು ಪಟೇಲರು ಸಾರ ಸಗಟಾಗಿ ಖಂಡಿಸಿ 28-3 ಅಂತರದಲ್ಲಿ ಸೋಲುವಂತೆ ಮಾಡುತ್ತಾರೆ.
ಹಾಗೆಯೆ ಕನಿಷ್ಟ ಪಕ್ಷ ಮೀಸಲು ಕ್ಶೇತ್ರಗಳಲ್ಲಿ ಆಯ್ಕೆಯಾಗಲು ಕನಿಷ್ಟ ಶೇ. 50ರಷ್ಟು ಪರಿಶಿಷ್ಟರ ಮತಗಳನ್ನು ಪಡೆಯುವುದು ಕಡ್ಡಾಯವಾಗಬೇಕೆಂಬ ಪ್ರಸ್ತಾಪವನ್ನು ಅಂಬೇಡ್ಕರ್ ವಾದಿ ನಾಗಪ್ಪ ಮುಂದಿಡುತ್ತಾರೆ. ಇದನ್ನು ಪಟೇಲರು ಮತಕ್ಕೆ ಕೂಡ ಹಾಕದೆ ತಿರಸ್ಕರಿಸುವಂತೆ ಮಾಡುತ್ತಾರೆ. ಆ ನಂತರ ಪರಿಶಿಷ್ಟರನ್ನು ಉದ್ದೇಶಿಸಿ ಈ ಬೆದರಿಕೆಯ ಮಾತುಗಳನಾಡುತ್ತಾರೆ:
“ಪರಿಶಿಷ್ಟ ಬಂಧುಗಳೇ, ಅಂಬೇಡ್ಕರ್ ಮತ್ತವರ ಗುಂಪು ಈ ಹಿಂದೆ ಮಾಡಿದ ಅನಾಹುತವನ್ನು ನೆನೆಪಿನಲ್ಲಿಡೋಣ. ಮತ್ತು ಅದು ಮರುಕಳಿಸದಂತೆ ತಡೆಯಬೇಕಿರುವುದರಿಂದ ಅಂತಾ ಆಗ್ರಹಗಳನ್ನು ಮರೆತುಬಿಡೋಣ. ಅಂಬೇಡ್ಕರ್ ಮತ್ತವರ ಅನುಯಾಯಿಗಳ ದೆಸೆಯಿಂದ ಭಾರತ ಮತ್ತೊಂದು ವಿಭಜನೆಯಾಗುವುದರಲ್ಲಿತ್ತು. ಅದು ಸ್ವಲ್ಪದರಲ್ಲಿ ತಪ್ಪಿದೆ. ಈ ವಿಭಜನೆಯ ವಿಷ ಬೀಜವು ನಿಮ್ಮ ಸಮುದಾಯದ ಮಹಾ ರಕ್ಷಕರಾಗಿದ್ದ ಗಾಂಧಿಯನ್ನು ಬಲಿ ತೆಗೆದುಕೊಂಡಿದೆ. ವಿಶಾಲ ಹಿಂದೂ ಸಮಾಜ ನಿಮ್ಮ ಒಳಿತನ್ನು ಕೋರುತ್ತದೆ. ಅವರಿಲ್ಲದೆ ನೀವು ಉಳಿಯಲು ಸಾಧ್ಯವೇ? ಆದ್ದರಿಂದ ಇವೆಲ್ಲವನ್ನೂ ಬಿಟ್ಟು ವಿಶಾಲ ಹಿಂದೂ ಸಮಾಜದ ವಿಶ್ವಾಸವನ್ನು ಗೆದ್ದುಕೊಳ್ಳಿ (ಪುಟ 252, Politics and Ethics Of Indian Constitution ಸಂಪಾದಿತ ಬರಹಗಳ ಪುಸ್ತಕದಲ್ಲಿ ಕ್ರಿಸ್ತೋಫ಼ೋ ಜಾಫ಼ರ್ಲೆ ಅವರ “containing the lower castes: The constituent assembly and the reservation “ಲೇಖನದಿಂದ) ಹೀಗಾಗಿ ಅಂಬೇಡ್ಕರ್ ಮೇಲೆ ಮತ್ತು ಸ್ವಾಯತ್ತ ದಲಿತ ಅಸ್ಮಿತೆಯ ಮೇಲೆ ಕಾಂಗ್ರೆಸ್ ನಡೆಸಿದ ದಾಳಿಯ ಮಹಾದಂಡನಾಯಕ ಸಂಘಿಗಳು ಆರಾಧಿಸುವ ಸರ್ದಾರ್ ಪಟೇಲರೇ ಆಗಿದ್ದರೆಂಬುದನ್ನು ಸಂಘಿಗಳು ಏಕೆ ಅಭಿಯಾನದಲ್ಲಿ ಮರೆಮಾಚುತ್ತಿದ್ದಾರೆ? ಅಂಬೇಡ್ಕರ್ ಬಗ್ಗೆ ಪಟೇಲರ ನಿಲುವನ್ನು ಸಂಘಿಗಳು ಈಗ ಖಂಡಿಸಲು ಸಿದ್ಧರಿದ್ದಾರೆಯೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು..
Leave a reply