ನ್ಯೂಡೆಲ್ಲಿ : ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಅಲಿಗಢ ಪೊಲೀಸರು ಬುಧವಾರ ಬಂಧಿಸಿದ್ದಾರೆ. ರೈತ ಮುಖಂಡರ ಸಭೆಯಲ್ಲಿ ಭಾಗವಹಿಸಲು ಗ್ರೇಟರ್ ನೋಯ್ಡಾಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಕೇಶ್ ಟಿಕಾಯತ್ ತನ್ನ ಸಹಚರರೊಂದಿಗೆ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಹೋಗದಂತೆ ಪೊಲೀಸರು ತಡೆದರು. ನಂತರ ಬಸ್ನಲ್ಲಿ ತಪ್ಪಲ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದರು.
ರಾಕೇಶ್ ಟಿಕಾಯತ್ ಅವರನ್ನು ಬಂಧಿಸಲಾಗಿಲ್ಲ. ಆದರೆ, ಅವರಿಗೆ ನಿರ್ಬಂಧ ಹೇರಲಾಗಿದೆ ಎಂದು ಅಲಿಗಢ ಪೊಲೀಸ್ ಅಧಿಕೃತ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ನೋಯ್ಡಾಕ್ಕೆ ಹೋಗದಂತೆ ರೈತರನ್ನು ಅವರ ಮನೆಗಳಲ್ಲಿಯೇ ಪೊಲೀಸರು ನಿರ್ಬಂಧಿಸುತ್ತಿದ್ದಾರೆ ಎಂದು ಟಿಕಾಯತ್ ಹೇಳಿದ್ದಾರೆ. “ನೀವು ನಮ್ಮನ್ನು ಎಷ್ಟು ದಿನ ಬಂಧಿಸುತ್ತೀರಾ? “ನೀವು ನಮ್ಮನ್ನು ಎಳೆದೊಯ್ದರೆ, ಯಾರೊಂದಿಗೆ ಮಾತನಾಡುತ್ತೀರಿ?” ಎಂದು ಪ್ರಶ್ನಿಸಿದರು.
ಅಧಿಕಾರಿಗಳ ವರ್ತನೆ ಹೀಗೆಯೇ ಮುಂದುವರಿದರೆ ರೈತರ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಮುಜಾಫರ್ ನಗರದ ಸಿಸೌಲಿ ಗ್ರಾಮದ ಕಿಸಾನ್ ಭವನದಲ್ಲಿ ಮಂಗಳವಾರ ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ನೇತೃತ್ವದಲ್ಲಿ ತುರ್ತು ಸಭೆ ಆಯೋಜಿಸಲಾಗಿತ್ತು. ಭೂ ಪರಿಹಾರ ಮತ್ತು ಇತರೆ ಬೇಡಿಕೆಗಳಿಗಾಗಿ ನೋಯ್ಡಾದಲ್ಲಿ ಧರಣಿ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಲು ನಿರ್ಧರಿಸಿದೆ.
Leave a reply