ಸೆಕ್ಯುಲಾರಿಸಂ (ಧರ್ಮ ನಿರಪೇಕ್ಷತೆ) ಮತ್ತು ಸೋಷಿಯಲಿಸಂ (ಸಮಾಜವಾದ) ಈ ದೇಶದ ತಳಸಮುದಾಯದ ಅಸ್ಮಿತೆ, ಆಶಯ ಮತ್ತು ಕನಸು. ಆದರೆ ಈ ದೇಶದ ಎಲ್ಲಾ ಪಕ್ಷಗಳಲ್ಲಿರುವ ಬ್ರಾಹ್ಮಣವಾದಿಗಳು ಮತ್ತು ಬಂಡವಾಳಶಾಹಿಗಳು ಹಾಗೂ ಅದರ ಉಗ್ರ ಅಭಿವ್ಯಕ್ತಿಯಾಗಿರುವ ಸಂಘಪರಿವಾರ ಈ ಎರಡೂ ಪದಗಳ ಮೇಲೆ ಮತ್ತು ಅದರ ಅರ್ಥದ ಮೇಲೆ ನಿರಂತರವಾಗಿ ಸಮರ ಸಾರುತ್ತಲೇ ಬಂದಿವೆ. ಇತ್ತೀಚೆಗೆ ಪರಮ ಸಂಘಿ ಬ್ರಾಹ್ಮಣವಾದಿ ಪೇಜಾವರ ಮಠಾಧೀಶರು ವಿಶ್ವ ಹಿಂದೂ ಪರಿಷತ್ತಿನ ಸಮಾರಂಭದಲ್ಲಿ ಮಾತನಾಡುತ್ತಾ “ಸ್ವಾತಂತ್ರ್ಯಕ್ಕೆ ಮುಂಚೆ ನಮ್ಮ ದೇಶ ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಸೆಕ್ಯುಲಾರ್ ಆಯಿತು” ಎಂದು ಹೇಳುತ್ತಾ “ಈ ಸಂವಿಧಾನ ಹೋಗಿ ನಮ್ಮನ್ನು ಗೌರವಿಸುವ ಸಂವಿಧಾನ ಬgಬೇಕು” ಎಂದು ಕರೆ ಕೊಟ್ಟಿರುವುದು ಆ ದಾಳಿಯ ಮುಂದುವರೆದ ಭಾಗ.
ಇದರ ಜೊತೆಗೆ ಇಂದಿರಾ ಗಂಧಿಯವರು ದೇಶದ ಮೇಲೆ ತುರ್ತುಸ್ಥಿತಿ ಹೇರಿದ ಅವಧಿಯಲ್ಲಿ 1976ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಂವಿಧಾನದ ಮುನ್ನುಡಿಗೆ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಎಂಬ ಪದಗಳನ್ನು ಸೇರಿಸಿದ್ದರು. ಅವುಗಳ ಅರ್ಥವಿರಲಿ ಪದಗಳ ಬಗ್ಗೆಯೂ ದ್ವೇಷ ಬಿತ್ತುತ್ತಿರುವ ಸಂಘಪರಿವಾರ ಮುನ್ನುಡಿಯಲ್ಲಿ ಆ ಎರಡು ಪದಗಳನ್ನು ತೆಗೆದುಹಾಕಬೇಕೆಂದು ನಿರಂತರವಾಗಿ ಹಲವು ದಶಕಗಳಿಂದ ಪ್ರಚಾರ ಮಾಡುತ್ತಾ ಬಂದಿವೆ. ಅದರ ಭಾಗವಾಗಿಯೇ ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ, ಬಿಜೆಪಿ ಕೀಲುಗೊಂಬೆ ವಕೀಲ ಅಶ್ವಿನಿ ಉಪಾಧ್ಯ ಇನ್ನಿತರರು ಇಂದಿರಾ ಗಾಂಧಿ ಮಾಡಿರುವ ತಿದ್ದುಪಡಿ ರದ್ದು ಮಾಡಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿದ್ದರು.
ಆ ಅರ್ಜಿಗಳನ್ನು ನವಂಬರ್ 25 ರಂದು, ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠ ತಿರಸ್ಕರಿಸಿದೆ. ಅಷ್ಟರಮಟ್ಟಿಗೆ ಭಾರತದ ಸುಪ್ರೀಂ ಕೋರ್ಟು ಸಂವಿಧಾನದಲ್ಲಿ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಎಂಬ ಪದಗಳನ್ನು ಉಳಿಸಿಕೊಂಡಿದೆ. ಅಷ್ತರ ಮಟ್ಟಿಗೆ ಸಮಾಧಾನಕರ ಬೆಳವಣಿಗೆ. ನಿಜ. ಆದರೆ ಸುಪ್ರೀಂ ಕೋರ್ಟು ಸಂಘಿಗಳ ದಾಳಿಯಿಂದ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಎಂಬ ಪದಗಳನ್ನು ಉಳಿಸಿದೆಯಾದರೂ ಅದರ ಅರ್ಥವನ್ನು ರಕ್ಷಿಸಿತೇ? ಈ ಎರಡು ಪದಗಳನ್ನು ಸೇರ್ಪಡೆ ಮಾಡಿದ ಅಂದಿನ ಇಂದಿರಾಗಾಂಧಿಯವರಾಗಲೀ, ಅಥವಾ ಇಂದಿನ ವಿರೋಧ ಪಕ್ಷಗಳಾಗಲೀ ನಿಜಕ್ಕೂ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ನ ಅರ್ಥಗಳಿಗೆ ಬಗ್ಗೆ ಬದ್ಧವಾಗಿವೆಯೇ? ತೀರ್ಪಿನ ಬಗ್ಗೆ ಸೆಕ್ಯುಲಾರ್ ಸೋಷಿಯಲಿಸ್ಟರು ಹೆಚ್ಚು ಸಂಭ್ರಮ ಪಡಲು ಕಾರಣವಿಲ್ಲ ಎಂಬುದು ಈ ಪದಗಳ ಸೇರ್ಪಡೆಯ ಹಿಂದಿನ- ಮುಂದಿನ ಇತಿಹಾಸಗಳನ್ನು , ತೀರ್ಪಿನ ವಿವರಗಳನ್ನು ಗಮನಿಸಿದರೆ ಅರ್ಥವಾಗುತ್ತದೆ.
42ನೇ ತಿದ್ದುಪಡಿ-ಬಂಡವಾಳಶಾಹಿ ಸಾರ- ಸಮಾಜವಾದಿ ಮಾತು..
1950 ರ ಜನವರಿ 26 ರಂದು ಭಾರತದ ಜನರು ತಮಗೇ ತಾವೇ ಅರ್ಪಿಸಿಕೊಂಡ ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲಾರ್ ಮತ್ತು ಸೋಷಿಯಲಿಸ್ಟ್ ಪದಗಳಿರಲಿಲ್ಲ. ಅದನ್ನು ದೇಶದ ಮೇಲೆ ತುರ್ತುಸ್ಥಿತಿ ಹೇರಿದ ಸಂದರ್ಭದಲ್ಲಿ ಇಂದಿರಾಗಾಂಧಿ ಸರ್ಕಾರ ಜಾರಿ ಮಾಡಿದ 42 ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾಗಿತ್ತು. ತುರ್ತುಸ್ಥಿತಿಯು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಹಾಗೂ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಇಂದಿರಾ ಕಾಂಗ್ರೆಸ್ ದೇಶದ ಪ್ರಜಾತಂತ್ರದ ಮೇಲೆ ಮಾಡಿದ ಘೋರ ಹಲ್ಲೆ. ಆದರೆ ಅದಕ್ಕೆ ಮುಂಚೆ ಇಂದಿರಾ ಗಾಂಧಿ ಮೂಲ ಕಾಂಗ್ರೆಸ್ಸಿನಿಂದ ಹೊರಬಂದು ತನ್ನದೇ ಕಾಂಗ್ರೆಸ್ ಸ್ಥಾಪಿಸಿದ ಮೇಲೆ ಬ್ಯಾಂಕ್ ರಾಷ್ಟ್ರೀಕರಣ, ಉಳುವನಿಗೆ ಭೂಮಿ, ಇಪ್ಪತ್ತು ಅಂಶದ ಕಾರ್ಯಕ್ರಮಗಳ ಘೋಷಣೆಯ ಮೂಲಕ ಈ ದೇಶದ ತಳಸಮುದಾಯಗಳಲ್ಲಿ ಮತ್ತು ಎಡಪಂಥೀಯರ ಒಂದು ವಿಭಾಗದಲ್ಲಿ ಇಂದಿರಾ ಕಾಂಗ್ರೆಸ್ ಸಮಾಜವಾದಿ ಎಂಬ ಅಭಿಪ್ರಾಯ ಮೂಡಿಸಿತ್ತು.
ಆದರೆ ವಾಸ್ತವದಲ್ಲಿ ನೋಡಿದರೆ ಎಡಪಂಥೀಯ ಚಳವಳಿಗಳು ತೀವ್ರವಾಗಿದ್ದ ರಾಜ್ಯಗಳಲ್ಲಿ ಮತ್ತು ಅದರ ಪ್ರಭಾವ ಇದ್ದ ಪ್ರದೇಶಗಳಲ್ಲಿ ಮಾತ್ರ ಭೂ ಸುಧಾರಣೆ ಜಾರಿಗೆ ಬಂತೇ ವಿನಾ ಉಳಿದಂತೆ ಈ ದೇಶದ ಫ಼್ಯೂಡಾಲ್ ಶಕ್ತಿಗಳ ಕೂದಲನ್ನು ಅದು ಕೊಂಕಿಸಲಿಲ್ಲ. ಇದಲ್ಲದೆ 1972 ರಲ್ಲಿ ಜೆಆರ್ಡಿ ಟಾಟಾರವರು ಈ ದೇಶದ ಬಂಡವಾಳಶಾಹಿಗಳ ಮುನ್ನೆಡೆಗೆ ಸರ್ಕಾರ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಒಂದು ಮೆಮೋರಾಂಡಮ್ ಅನ್ನು ಸಲ್ಲಿಸಿದರು.
ತುರ್ತುಸ್ಥಿತಿಯಲ್ಲಿ ಮತ್ತು 1980 ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗ ಇಂದಿರಾ ಕಾಂಗ್ರೆಸ್ ಜಾರಿ ಮಾಡಿದ್ದು ಈ ಟಾಟಾ ಮೆಮೊರಾಂಡಮ್ಮನೇ ವಿನಾ ಸಮಾಜವಾದವನ್ನಲ್ಲ. ವಾಸ್ತವವಾಗಿ ಒಂದು ಅಧ್ಯಯನದ ಪ್ರಕಾರ ತುರ್ತುಸ್ಥಿತಿಯ ಅವಧಿಯಲ್ಲಿ ಟಾಟಾ, ಬಿರ್ಲಾರಂಥ ದೊಡ್ಡ ಬಂಡವಾಳಶಾಹಿಗಳ ಆದಾಯ ಶೇ. 60 ರಷ್ಟು ಹೆಚ್ಚಿತು. ಮತ್ತೊಂದು ಕಡೆ ಸಂಜಯ್ ಗಾಂಧಿಯವರು ಆರೆಸ್ಸೆಸ್ ಬೆಂಬಲದೊಂದಿಗೆ ಜನಸಂಖ್ಯಾ ನಿಯಾಂತ್ರಣ ಯೋಜನೆಯ ಮುಸುಕಿನಲ್ಲಿ ಮುಸ್ಲಿಮರ ನಡೆಸಿದ ಬಲವಂತದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳು, ದೆಹಲಿಯ ತುರ್ಕ್ಮೆನ್ ಗೇಟ್ ಬಳಿ ಮುಸ್ಲಿಮರ ಮೇಲೆ ನಡೆಸಿದ ಭೀಕರ ದಮನಗಳು ಇಂದಿರಾ ಸರ್ಕಾರ ಸೆಕ್ಯುಲಾರೂ ಆಗಿರಲಿಲ್ಲ. ಸಮಾಜವಾದಿಯೂ ಅಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಇವೆಲ್ಲವನ್ನು ಮರೆಸುವ ಉದ್ದೇಶದಿಂದ ಮತ್ತು ಇವನ್ನು ಕಾಣದ ಮತ್ತು ಕಾಣಲೊಲ್ಲದ ಜನರನ್ನು ಒಲಿಸುವ ಉದ್ದೇಶವನ್ನೂ ಒಳಗೊಂಡು 42 ನೇ ತಿದ್ದುಪಡಿಯ ಮೂಲಕ ಮುನ್ನುಡಿಯಲ್ಲಿ ಸಮಾಜವಾದಿ ಮತ್ತು ಸೆಕ್ಯುಲಾರ್ ಪದಗಳನ್ನು ಸೇರಿಸಲಾಯಿತು. ಆದರೆ ಅದೇ ತಿದ್ದುಪಡಿಯ ಮೂಲಕ ಶಿಕ್ಷಣ, ಅರಣ್ಯ ಇನ್ನಿತ್ಯಾದಿ ರಾಜ್ಯಗಳ ಪಟ್ಟಿಯಲ್ಲಿದ್ದ ಅಂಶಗಳನ್ನೂ ಕೇಂದ್ರದ ಹಸ್ತಕ್ಶೇಪಕ್ಕೂ ಅವಕಾಶವಿರುವ ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಯಿತು ಎಂಬುದನ್ನು ಕೂಡ ಮರೆಯಬಾರದು. ಆದರೆ ಕಾಂಗ್ರೆಸ್ಸಿಗಿಂತಲೂ ಉಗ್ರ ಬಂಡವಾಳವಾದಿ ಮತ್ತು ಬ್ರಾಹ್ಮಣವಾದಿಗಳಾದ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಂವಿಧಾನಕ್ಕೆ ನಡೆದ ಈ ಅವಕಾಶವಾದಿ, ಹಾಗೂ ಸಾರವಿಲ್ಲದ ಪದಗಳ ಸೇರ್ಪಡೆಗಳೂ ಕೂಡ ಸಮ್ಮತವಿರಲಿಲ್ಲ.
ಈಗಂತೂ ಮೋದಿ ಸರ್ಕಾರ ಇಂದಿರಾ ಕಾಲಕ್ಕಿಂತಲೂ ಅತಂಕಕಾರಿಯಾದ ರೀತಿಯಲ್ಲಿ ವಿರೋಧ ಪಕ್ಷಗಳನ್ನು ಮತ್ತು ಸಂಸತ್ತನ್ನು ಗಣನೆಗೇ ತೆಗೆದುಕೊಳ್ಳದಂತೆ ತನಗಿಷ್ಟಬಂದಂತೆ ತಿದ್ದುಪಡಿ ಮಾಡುತ್ತಾ ಸಂವಿಧಾನವನ್ನು ಬದಲಿಸುತ್ತಿದೆ. ಒಳಗಿಂದಲೇ ಸಂವಿಧಾನದ ಎಲ್ಲಾ ಮೂಲ ಆಶಯಗಳನ್ನು ಅಪ್ರಸ್ತುತಗೊಳಿಸುತ್ತಿದೆ. ಇದು ತುರ್ತುಸ್ಥಿತಿಯಲ್ಲಿ ಇಂದಿರಾ ಸರ್ಕಾರ ಸಂವಿಧಾನಕ್ಕೆ ಮಾಡಿದ ಅಪಮಾನಕ್ಕಿಂತ ಘನಘೋರವಾದ ಅಪಮಾನವಾಗಿದೆ. ಮುನ್ನುಡಿಯಲ್ಲಿ ಸೆಕ್ಯುಲಾರ್-ಸೋಷಿಯಲ್ ಪದಗಳ ಸೇರ್ಪಡೆಯ ಬಗ್ಗೆ ಅವರ ಪ್ರತಿರೋಧಗಳೂ ಅಷ್ಟೆ ವಿಕೃತವಾಗಿದೆ.
ಸೆಕ್ಯುಲಾರ್-ಸಮಾಜವಾದಿ ಸೇರ್ಪಡೆಯನ್ನು ಅಂಬೇಡ್ಕರ್ ವಿರೋಧಿಸಿದ್ದರೇ?
ಸಂವಿಧಾನ ಕರ್ತ್ರು ಅಂಬೇಡ್ಕರ್ ಅವರೇ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಗೆ ಮತ್ತು ಸಂವಿಧಾನದಲ್ಲಿ ಆ ಅಂಶಗಳ ಸೇರ್ಪಡೆಯ ಬಗ್ಗೆ ವಿರೋಧವಿದ್ದರು ಎಂಬುದು ಸಂಘಿಗಳ ಇನ್ನೊಂದು ವಿಕೃತವಾದ,. ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಮುನ್ನುಡಿಯ ಬಗೆಗಿನ ಚರ್ಚೆಯನ್ನು ಅತ್ಯಂತ ಕೊನೆಗೆ ಕೈಗೆತ್ತಿಕೊಳ್ಳಲಾಗಿತ್ತು.ಈ ಬಗ್ಗೆ ಹಲವಾರು ಚರ್ಚೆಗಳು ನಡೆದು 17-10-1949 ರಂದು ಸಂವಿಧಾನದ ಮುನ್ನುಡಿಯನ್ನು ಅಂಗೀಕರಿಸಲಾಗಿತ್ತು.
ಚರ್ಚೆಯ ಭಾಗವಾಗಿ ಸಂವಿಧಾನದ ಮುನ್ನುಡಿಯಲ್ಲಿ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸೇರಿಸಲು ಕೆಲವು ಸದಸ್ಯರು ಆಗ್ರಹಪಡಿಸಿದ್ದರು. ಅದಕ್ಕೆ ಅಂಬೇಡ್ಕರ್ ಅವರು: “ಅ ಎರಡೂ ಆಶಯಗಳು ನಮ್ಮ ಸಂವಿಧಾನದಲ್ಲಿ ಅಂತರ್ಧಾರೆಯಾಗಿ ಹರಿದಿರುವುದರಿಂದ ಅದನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ” ಎಂದು ಉತ್ತರಿಸಿದ್ದರೇ ವಿನಾ ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ. ಉದಾಹರಣೆಗೆ ಕೆ.ಟಿ. ಶಾ ಎಂಬ ಸಂವಿಧಾನ ಸಭೆಯ ಮಾನ್ಯ ಸದಸ್ಯರು ಮುನ್ನುಡಿಯಲ್ಲಿ ಸಮಾಜವಾದ ಎಂಬ ಪದವನ್ನು ಸ್ಪಷ್ಟವಾಗಿ ಸೇರಿಸಬೇಕೆಂಬ ತಿದ್ದುಪಡಿಯನ್ನು ಸೂಚಿಸಿದಾಗ ಅಂಬೇಡ್ಕರ್ ಕೊಟ್ಟ ಉತ್ತರ ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.
ಈ ಬಗ್ಗೆ15-10-1948ರಂದು ಕೆಟಿ ಶಾ ಅವರ ಪ್ರಸ್ತಾಪನೆಗೆ ದೀರ್ಘವಾಗಿ ಉತ್ತರಿಸುತ್ತಾ ಅಂಬೇಡ್ಕರ್ ಅವರು: “ಇಂದು ಶೋಷಕ ಬಂಡವಾಳಶಾಹಿ ಸಮಾಜಕ್ಕಿಂತ ಸಮಾಜವಾದಿ ಸಮಾಜ ಉತ್ತಮವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಸಮಾಜವಾದಕ್ಕಿಂತ ಉತ್ತಮವಾದ ಮತ್ತೊಂದು ವ್ಯವಸ್ಥೆಯನ್ನು ಹುಡುಕಬಹುದು” ಮುಂದುವರೆದು ..” …. ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಈಗ ಅಡಕಗೊಳಿಸಲಾಗಿರುವ ಪರಿಚ್ಚೇದ 4 ರ ಪ್ರಭುತ್ವ ನಿರ್ದೇಶನಾ ತತ್ವಗಳೆಲ್ಲಾ ಸಮಾಜವಾದಿ ಆಶಯಗಳನ್ನು ಪಾಲಿಸುವಂತೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ” ಎಂದು ಹೇಳುತ್ತಾರೆ.
ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನವು ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಭುತ್ವವು ಪಕ್ಕಾ ಸೆಕ್ಯುಲಾರ್ ಹಾಗೂ ಸಮಾಜವಾದಿಯಾಗಿಯಾಗಿಯೇ ಇರಬೇಕೆಂದು ನಿರೀಕ್ಷಿಸಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಅ ಪದಗಳಿರಬೇಕೆ ಬೇಡವೇ ಎಂಬ ಬಗ್ಗೆ ಅವರ ಅಭಿಪ್ರಾಯ ತಾಂತ್ರಿಕ ಸ್ವರೂಪದ್ದೇ ವಿನಾ ತಾತ್ವಿಕ ರೂಪದ್ದಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.
((https://eparlib.nic.in/bitstream/123456789/763023/1/cad_15-11-1948.pdf)
ವಾಸ್ತವವಾಗಿ ಸಂವಿಧಾನವನ್ನು ಗಮನವಿಟ್ಟು ಓದಿದರೆ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಮ್ ಆಶಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ಕಲಮುಗಳು ಮೂಲ ಸಂವಿಧಾನದ ಮುನ್ನುಡಿಯಲ್ಲೂ ಮತ್ತು ನಂತರದ ಭಾಗಗಳಲ್ಲೂ ಸ್ಪಷ್ಟವಾಗಿ ಉಲ್ಲೇಕಗೊಂಡಿರುವುದು ಕುರುಡರಿಗೂ ಕಂಡೀತು..
ಮೂಲ ಸಂವಿಧಾನ’ ಮತ್ತು ಸೆಕ್ಯುಲಾರಿಸಂ
ಸೆಕ್ಯುಲಾರಿಸಂ ಎಂಬುದಕ್ಕೆ ಜಗತ್ತಿನಲ್ಲಿ ಹಲವಾರು ರೀತಿಯ ಕ್ರಾಂತಿಕಾರಿ ಮತ್ತು ಮಧ್ಯಮಮಾರ್ಗಿ ವ್ಯಾಖ್ಯಾನಗಳಿವೆ. ಅವೆಲ್ಲವೂ ಸಂವಿಧಾನ ರಚನಾ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿವೆ. ಅಷ್ಟೆಲ್ಲಾ ಚರ್ಚೆ ಮತ್ತು ವಾದ ಮತ್ತು ಪ್ರತಿವಾದಗಳ ನಂತರ ಭಾರತದ ಸಂವಿಧಾನ ಸಭೆ ಒಪ್ಪಿಕೊಂಡ ಸೆಕ್ಯುಲಾರಿಸಂ ನ ವ್ಯಾಖ್ಯಾನದ ಅಂಶಗಳೆಂದರೆ:
- ಭಾರತದ ಪ್ರಭುತ್ವ ಯಾವ ಒಂದು ಮತಧರ್ಮವನ್ನೂ ಪಾಲಿಸುವುದಿಲ್ಲ.
- ಭಾರತದ ಪ್ರಭುತ್ವ ದೇಶದಲ್ಲಿ ಎಲ್ಲಾ ಮತಧರ್ಮಗಳಿಂದಲೂ ಸಮಾನ ಸಾಮೀಪ್ಯವನ್ನು ಕಾಪಾಡಿಕೊಳ್ಳುತ್ತದೆ.
- ಭಾರತದ ಪ್ರಭುತ್ವ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತಾನೂ ಒಪ್ಪುವ ಮತಧರ್ಮವನ್ನು ಅನುಸರಿಸುವ ಅಥವಾ ಅನುಸರಿಸದಿರುವ ಸ್ವಾತಂತ್ರ್ಯವನ್ನು ನೀಡುತ್ತದೆ.
- ಭಾರತದ ಪ್ರಭುತ್ವ ವ್ಯಕ್ತಿಯ ಮತಧರ್ಮವನ್ನು ಆಧರಿಸಿ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ.
ಇದನ್ನೇ ಭಾರತದ ಸಂವಿಧಾನದ ಆರ್ಟಿಕಲ್ 14,15,25 ,26 ಮತ್ತು 27 ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಸ್ಪಷ್ಟ ಪಡಿಸುತ್ತದೆ. ಉದಾಹರಣೆಗೆ ಆರ್ಟಿಕಲ್ 25 ಹೀಗೆ ಹೇಳುತ್ತದೆ : “25. Freedom of conscience and free profession, practice and propagation of religion. (1) Subject to public order, morality and health and to the other provisions of this Part, all persons are equally entitled to freedom of conscience and the right freely to profess, practise and propagate religion (ಅಂದರೆ , ಭಾರತದ ಪ್ರಭುತ್ವವು ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಸಾಕ್ಷಿಯ ಸ್ವಾತಂತ್ರ್ಯ ಹಾಗೂ ತಾನು ಒಪ್ಪುವ ಮತಧರ್ಮದ ಪ್ರತಿಪಾದನೆ , ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯವನ್ನು ಖಾತರಿ ಮಾಡುತ್ತದೆ)
ಇದನ್ನೇ ಅತ್ಯಂತ ಸ್ಪಷ್ಟವಾಗಿ ಮೂಲ ಸಂವಿಧಾನದ ಮುನ್ನುಡಿ ಯಲ್ಲಿ ಹೀಗೆ ಹೇಳಲಾಗಿದೆ: “… ಭಾರತದ ಎಲ್ಲಾ ಪ್ರಜೆಗಳಿಗೆ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ರಕಿಸುವುದಕ್ಕಾಗಿ “ ಸಂವಿಧಾನವನ್ನು ರೂಪಿಸಲಾಗಿದೆ ಎಂದು ಸಂವಿಧಾನದ ಮುನ್ನುಡಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಘೋಷಿಸುತ್ತದೆ. ಈ ಮೇಲಿನ ವಿವರಗಳನ್ನೇ ಸೆಕ್ಯುಲರಿಸಂ ಎಂದು ಒಂದೇ ಪದದಲ್ಲಿ ಹೇಳಲಾಗುತ್ತದೆ..
ಹಾಗಿದ್ದಲ್ಲಿ ಮೂಲ ಸಂವಿಧಾನದಲ್ಲಾಗಲೀ, ಮುನ್ನುಡಿಯಲ್ಲಾಗಲೀ ಸೆಕ್ಯುಲಾರಿಸಂ ಇರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ವಿವರಗಳನ್ನು ಉಳಿಸಿಕೊಂಡು ಅದರ ಶೀರ್ಷಿಕೆಯನ್ನು ಕಿತ್ತುಹಾಕುವುದರ ಹಿಂದಿನ ಹುನ್ನಾರವೇನಿರಬಹುದು?
ಸೆಕ್ಯುಲಾರಿಸಂ- ಸಂವಿಧಾನದ Basic Structure
ಅಷ್ಟು ಮಾತ್ರವಲ್ಲ. ಸಂವಿಧಾನದ ಮುನ್ನುಡಿಯು ಸಂವಿಧಾನದ ಮೂಲ ರಚನೆಯಿದ್ದಂತೆ ಮತ್ತದನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟಿನ 13 ಜನರ ನ್ಯಾಯಪೀಠವು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸೆಕ್ಯುಲಾರಿಸಂ ಅನ್ನು ಭಾರತದ ಸಂವಿಧಾನದ ಮೂಲ ರಚನೆ ಎಂದು ಘೋಷಿಸಿತ್ತು. ಇದಾದ ಎರಡು ವರ್ಷಗಳ ನಂತರವೇ ಸೆಕ್ಯುಲಾರಿಸಂ ಅನ್ನು ಇಂದಿರಾ ಸರ್ಕಾರ ಮುನ್ನುಡಿಗೆ ಸೇರಿಸಿತು.
ಹೀಗಾಗಿ ಸೆಕ್ಯುಲರಿಸಂ ಸಂವಿಧಾನದ ಮೂಲ ರಚನೆಯ ಭಾಗ ಎಂದು ಹೇಳಿದ ಭಾರತದ ಸುಪ್ರೀಂಕೋರ್ಟೇ 42 ನೇ ತಿದ್ದುಪಡಿಗಿಂತ ಮುಂಚಿತವೇ ಮುನ್ನುಡಿಯ ಸ್ಥಾನಮಾನ ನೀಡಿತು ಎಂದು ಹೇಳಬಹುದು.
ಅದೇ ರೀತಿ ಎಸ್. ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ಒಂಭತ್ತು ಜನರ ಪೀಠ 1994 ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ: “.. 42ನೇ ತಿದ್ದುಪಡಿಯ ಮೂಲಕ ಮುನ್ನುಡಿಗೆ ಸೇರಿಸಲ್ಪಟ್ಟಿರುವ ಸೆಕ್ಯುಲಾರಿಸಂ ಭಾರತದ ಸಂವಿಧಾನದ ಮೂಲ ರಚನೆಯಾಗಿದೆ” ಹೀಗೆ ಭಾರತದ ಮೂಲ ಸಂವಿಧಾನ , ಹಾಗೂ ಅದನ್ನು ವ್ಯಾಖ್ಯಾನ ಮಾಡುವ ಸುಪ್ರೀಂ ಕೋರ್ಟಿನ ಪೀಠಗಳು ನಿರಂತರವಾಗಿ ಸೆಕ್ಯುಲರಿಸಂ ಎಂಬುದು ಭಾರತದ ಸಂವಿಧಾನದ ಮೂಲ ರಚನೆಯ ಭಾಗ ಎಂದು ಸ್ಪಷ್ಟಪಡಿಸಿವೆ.
ಮೂಲ ಸಂವಿಧಾನ ಮತ್ತು ಸೋಷಿಯಲಿಸಂ
ಮೂಲ ಸಂವಿಧಾನದ ಮುನ್ನುಡಿಯಲ್ಲಿ ಸೋಷಿಯಲಿಸಂ ಎನ್ನುವ ಪದವಿರಲಿಲ್ಲ ಎನ್ನುವುದು ಮತ್ತು ಅದನ್ನು ಮುನ್ನುಡಿಯಲ್ಲಿ 42ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು ಎನ್ನುವುದೂ ಕೂಡ ಅರ್ಧ ಸತ್ಯವೇ. ಅಸಲು ಸಮಾಜವಾದ ಎಂದರೇನು? ಜಗತ್ತಿನಲ್ಲಿ ಸಮಾಜವಾದದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು ಇವೆ. ಅವುಗಳೆಲ್ಲದರ ಸಾರ ಸರ್ವರಿಗೂ ಸಮ ಪಾಲು- ಸಮಬಾಳು ಎಂಬುದಷ್ಟೇ ಆಗಿದೆ. ಈಗ ಈ ಆಶಯಗಳು ನಮ್ಮ ಸಂವಿಧಾನದಲ್ಲಿ ಇರಲಿಲ್ಲವೇ?
ಸಂವಿಧಾನದ ಮುನ್ನುಡಿಯನ್ನು ನೋಡೊಣ. ಅದು ಹೀಗೆ ಹೇಳುತ್ತದೆ: “…ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಲು…ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಲು”… ಈ ಸಂವಿಧಾನವನ್ನು ರೂಪಿಸಿರುವುದಾಗಿ ಮುನ್ನುಡಿ ಹೇಳುತ್ತದೆ. ಹಾಗೆಯೇ ನಮ್ಮ ಸಂವಿಧಾನದ 4 ನೇ ಪರಿಚ್ಚೇಧದ ಪ್ರಭುತ್ವ ನಿರ್ದೇಶನಾ ತತ್ವಗಳಲ್ಲಿ :
ಅರ್ಟಿಕಲ್ 38 (1)- ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಈ ದೇಶದ ಎಲ್ಲಾ ಜನರಿಗೆ ಆರ್ಥಿಕ ನ್ಯಾಯವನ್ನು ಒದಗಿಸುವಂತೆ ಅದೇಶಿಸಲಾಗುವುದು..
38 (2)- ಪ್ರಭುತ್ವವು ಆದಾಯಗಳಲ್ಲಿನ ಅಸಮಾನತೆಯನ್ನು ಮತ್ತು ಸ್ಥಾನಮಾನ, ಸೌಲಭ್ಯ ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ನಿವಾರಿಸಲು ಶ್ರಮಿಸುವುದು
ಆರ್ಟೀಕಲ್ 39 (a)- ದೇಶದ ಎಲ್ಲಾ ವ್ಯಕ್ತಿಗಳಿಗೂ ಅತ್ಯಗತ್ಯ ಜೀವನೋಪಾಯಗಳನ್ನು ಸಮಾನವಾಗಿ ಪಡೆದುಕೊಳ್ಳುವ ಹಕ್ಕನ್ನು ಖಾತರಿ ಪಡಿಸಲಾಗುವುದು
39 (b)- ಸಮುದಾಯದ ಸಂಪತ್ತಿನ ಮೇಲೆ ಒಡೆತನವನ್ನು ಸಮುದಾಯವಾದ ಸರ್ವತ್ರಿಕ ಒಳಿತಿಗಾಗಿ ಬಳಸುವಂತೆ ನಿಯೋಜಿಸಲಾಗುವುದು
39 (c)- ಆರ್ಥಿಕ ನೀತಿಗಳು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ರೂಪಿಸಲಾಗುವುದು
39 (d) – ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನ ಕೆಲಸಕ್ಕೆ ಸಮಾನ ವೇತನ. ಆರ್ಟಿಕಲ್ 41 – ಎಲ್ಲರಿಗೂ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ.
ಇವೆಲ್ಲವೂ ನಮ್ಮ ಮೂಲ ಸಂವಿಧಾನದಲ್ಲೇ ಇದೆ. ಈ ಎಲ್ಲಾ ನೀತಿಗಳನ್ನೇ ಒಂದೇ ಪದದಲ್ಲಿ “ಸಮಾಜವಾದ” ಎಂದು ಕರೆಯುತ್ತಾರೆ. ಅದನ್ನೇ ಒಂದು ಪದವಾಗಿ ಮುನ್ನುಡಿಯಲ್ಲಿ ಸೇರಿಸಲಾಗಿದೆ. ಹಾಗಿದ್ದಲ್ಲಿ ಮೋದಿ ಸರ್ಕಾರ ಸಮಾಜವಾದದ ಪದದ ಜೊತೆಗೆ ಮೇಲಿನ ಎಲ್ಲಾ ಕಲಮುಗಳನ್ನು ರದ್ದು ಮಡುವುದೇ? ಹಾಗೇ ನೋಡಿದರೆ 1977 ರಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ಮಣಿಸಿ ಇವತ್ತಿನ ಬಿಜೆಪಿಯ ಅಂದಿನ ಅವತಾರವಾಗಿದ್ದ ಭಾರತೀಯ ಜನ ಸಂಘ ಹಾಗೂ ಇನ್ನಿತರ ಪಕ್ಷಗಳು ಒಟ್ಟುಗೂಡಿ ರಚಿಸಿಕೊಂಡ ಜನತಾ ಪಕ್ಷ ಅಧಿಕಾರಕ್ಕೆ ಬಂತು.
ಅವರು ಸಂವಿಧಾನಕ್ಕೆ 44ನೇ ತಿದ್ದುಪಡಿಯನ್ನು ತಂದು ಇಂದಿರಾ ಗಾಂಧಿ 42 ನೇ ತಿದ್ದುಪಡಿಯ ಮೂಲಕ ಜಾರಿ ಮಾಡಿದ್ದ ಇತರ ತಿದ್ದುಪಡಿಗಳನ್ನು ರದ್ದುಗೊಳಿಸಿತೇ ವಿನಾ ಅದೇ 42 ನೇ ತಿದ್ದುಪಡಿಯ ಪ್ರಮುಕ ಅಂಶವಾದ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಸೇರ್ಪಡಗಳನ್ನಲ್ಲ! ಆ ನಂತರ ಈವರೆಗೆ ಸಂವಿಧಾನಕ್ಕೆ 80 ಕ್ಕೂ ಹೆಚ್ಚು ತಿದ್ದುಪಡಿಗಳಾಗಿದ್ದರೂ ಬಿಜೆಪಿಯನ್ನು ಒಳಗೊಂಡಂತೆ ಹಲವು ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಗೆ ತಿದ್ದುಪಡಿ ಮಾಡಿರಲಿಲ್ಲ. ಹೀಗಾಗಿ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಗಳು ಸಂವಿಧಾನದ ಭಾಗವಲ್ಲ ಎಂಬ ಸಂಘಿಗಳ ವಾದದಲ್ಲಿ ಹುರುಳಿಲ್ಲ. ಅದು ಅವರು ಮನುಸ್ಮೃತಿಯನ್ನೇ ಭಾರತದ ಸಂವಿಧಾನ ಮಾಡಾಬೇಕೆಂಬ ಯೋಜನೆಯ ಭಾಗವಾಗಿ ಹುಟ್ಟಿಸಿರುವ ಹುಯಿಲು.
ಸೆಕ್ಯುಲಾರ್-ಸೋಷಿಯಲಿಸಮ್ಮಿನ ನೈಜ ಸಾರವನ್ನು ಸುಪ್ರೀಂ ಏಕೆ ರಕ್ಷಿಸಲಿಲ್ಲ?
ದುರಂತವೆಂದರೆ ಸೊಷಿಯಲಿಸಂ ಆಶಯಗಳು ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಅದು ಮೂಲಭೂತ ಹಕ್ಕುಗಳಲ್ಲ. ಅದನ್ನು ಸರ್ಕಾರ ಜಾರಿ ಮಾಡದಿದ್ದರೂ ನ್ಯಾಯಾಲಯದಲ್ಲಿ ಪ್ರಸ್ನಿಸಲಾಗುವುದಿಲ್ಲ. ಹೀಗಾಗಿಯೇ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡದೆಯೇ ಸೆಕ್ಯುಲಾರಿಸಂ ವಿರೋಧಿ, ಸೊಷಿಯಲಿಸಂ ವಿರೋಧಿ ನೀತಿಗಳನ್ನೇ ಅನುಸರಿಸುತ್ತಾ ಬಂದಿವೆ. 1991ರ ನಂತರ ಈ ಅನಧಿಕೃತ ಸರ್ವಪಕ್ಷ ಸಮ್ಮತ ಸಂವಿಧಾನ ಉಲ್ಲಂಘನೆ ಇನ್ನೂ ವೇಗ ಪಡೆಯಿತು. ಅದರಿಂದ ಪುಷ್ಟಿ ಪಡೆದುಕೊಂಡ ಸಂಘಪರಿವಾರದ ಹಿಂದೂತ್ವವಾದಿಗಳು ಮೋದಿ ನೇತೃತ್ವದಲ್ಲಿ ಅಧಿಕಾರಕ್ಕ್ಕೆ ಬಂದಮೇಲೆ ಈಗ ಬಹಿರಂಗವಾಗಿ ಹಾಗೂ ಅಧಿಕೃತವಾಗಿಯೇ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಮೇಲೆ ಸಮರ ಸಾರಿವೆ. ವಾಸ್ತವವಾಗಿ ಅಂಬೇಡ್ಕರ್ ಅವರು ತಮ್ಮ States and Minorities ಕೃತಿಯಲ್ಲಿ ಸ್ಪಷ್ಟಪಡಿಸುವಂತೆ ಸಾಮಾಜಿಕ ಪ್ರಜಾತಂತ್ರ ಹಾಗೂ ಆರ್ಥಿಕ ಪ್ರಜಾತಂತ್ರವಿಲ್ಲದೆ ಕೇವಲ ರಾಜಕೀಯ ಪ್ರಜಾತಂತ್ರದಿಂದ ತಳಸಮುದಾಯಗಳಿಗೆ ಯಾವ ಪ್ರಯೋಜನವೂ ಇಲ್ಲ. ಹೀಗಾಗಿ ಆರ್ಥಿಕ ಸಮಾನತೆಯು ಮೂಲಭೂತಹಕ್ಕುಗಳಾಗಬೇಕೆಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಅದಕ್ಕಾಗಿ ದೇಶದ ಆಸ್ತಿಯನ್ನು ರಾಷ್ಟ್ರೀಕರಿಸಬೇಕೆಂಬುದು ಅವರು ಉದ್ದಕ್ಕೂ ಪ್ರತಿಪಾದಿಸಿದರು.
1952ರಲ್ಲಿ ಸಂಸತ್ತಿನಲ್ಲೂ ಸಹ ಗೇಣಿ ರದ್ಧತಿ, ಭೂ ಸುಧಾರಣೆಯಂತ ಕಾರ್ಯಕ್ರಮಗಳಿಂದ ಈ ದೇಶದ ದಲಿತ ದಮನಿತರಿಗೆ ಯಾವ ಪ್ರಯೋಜವೂ ಇಲ್ಲ. ಬದಲಿಗೆ ರಷ್ಯಾ ದಲ್ಲಿ ನಡೆದಂತೆ ಭೂಮಿ ಮತ್ತು ಇತರ ಸಂಪತ್ತುಗಳು ರಾಷ್ಟ್ರೀಯ ಅಥವಾ ಇಡಿ ಸಮಾಜದ ಆಸ್ತಿಯಾಗಬೇಕೆಂದೇ ಪ್ರತಿಪಾದಿಸಿದ್ದರು. ಆದರೆ ಸಂವಿಧಾನದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಸಂಪತ್ತು ಹಂಚುವ ಸಮಾಜವಾದಿ ಆಶಯಗಳಿರಲಿ ಎಲ್ಲರಿಗೂ ಘನತೆಯ ಬದುಕನ್ನು ಖಾತರಿಗೊಳಿಸುವ ಕಲ್ಯಾಣ ರಾಜ್ಯದ ಆಶಯಗಳೂ ಸಹ ಮೂಲಭೂತ ಹಕ್ಕುಗಳಾಗಲಿಲ್ಲ. ಬದಲಿಗೆ ಅವು ಕೇವಲ ಉಪಾದೇಶಾತ್ಮಕ ನಿರ್ದೇಶನಾ ತತ್ವಗಳ ಪಟ್ಟಿಯಲ್ಲಿ ಸೇರಿಕೊಂಡವು.
ಹೀಗಾಗಿಯೇ ಕಲ್ಯಾಣ ರಾಜ್ಯದ ಹೆಸರಿದ್ದರೂ ಸ್ವಾತಂತ್ರ್ಯ ಬಂದಾಗಿನಿಂದಲೂ ಬಂಡವಾಳ ರಾಜ್ಯವೇ ಅಧಿಪತ್ಯ ನಡೆಸುತ್ತಿದೆ. ಮಿಶ್ರ ಆರ್ಥಿಕತೆ ಯ ಹೆಸರಿನಲ್ಲಿ ಆದದ್ದೇಲ್ಲಾ Bark Of Socialism-Bite Of Capitalism- ಬೊಗಳಿದಾಗ ಮಾತ್ರ ಸಮಾಜವಾದ- ಕಚ್ಚಿದಾಗ ಬಂಡವಾಳವಾದವೇ -ಆಗುತ್ತಾ ಬಂದಿದೆ. 1991 ರ ನಂತರ ಇದರ ವೇಗ ಇನ್ನಷ್ಟು ಹೆಚ್ಚಾಗಿ ಮೋದಿ ಕಾಲದಲ್ಲಿ ಉಗ್ರ ಹಾಗೂ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸಾರದಲ್ಲಿ ಬಂಡವಾಳಶಾಹಿಯು, ಹಿಂದೂತ್ವವಾದಿಯೂ ಆಗಿರುವ ಈ ಪ್ರತಿಕ್ರಾಂತಿಗೆ ಕಲ್ಯಾಣ ರಾಜ್ಯ ವನ್ನು ಕಾಪಾಡಬೇಕಿದ್ದ ಸುಪ್ರೀಂಕೋರ್ಟುಗಳು ಸಹಾಯ ಮಾಡುತ್ತಲೇ ಬಂದಿವೆ. ಅದರಲ್ಲೂ 1991 ರ ನಂತರ ಸುಪ್ರೀಂನ ಸಂವಿಧಾನಿಕ ಪೀಠಗಳ ಅಯೋಧ್ಯಾ, ಕಾಶ್ಮೀರ, ಬೀದಿ ವ್ಯಾಪಾರ ವಿರೋಧಿ, ಬೃಹತ್ ಖಾಸಗೀಕರಣ ಪರ ತೀರ್ಪುಗಳು ನ್ಯಾಯಿಕ ಸಮರ್ಥನೆ ಒದಗಿಸುತ್ತಾ ಬಂದಿವೆ.ಹೀಗಾಗಿಯೇ ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಸಮರ್ಥಿಸಿಕೊಂಡ ಸುಪ್ರೀಂ ಪೀಠ ಅವುಗಳ ಸಾರವನ್ನೇ ವಿಕೃತವಾಗಿ ವ್ಯಾಖ್ಯಾನಿಸಿ ಉಳಿಸಿಕೊಂಡಿದೆ.
ಮುಖ್ಯ ನ್ಯಾಯಾಧೀಶ ಖನ್ನಾ ಅವರ ಪ್ರಕಾರ ಸೋಷಿಯಲಿಸಂ ಮತ್ತು ಸೆಕ್ಯುಲಾರಿಸಂ ಒಂದು ನಿರ್ದಿಷ್ಟ ತತ್ವ ವ್ಯಾಖ್ಯಾನವೇ ಆಲ್ಲ. ಸೋಷಿಯಲಿಸಂ ಎಂದರೆ ಭಾರತದಲ್ಲಿ ಕಲ್ಯಾಣ ರಾಜ್ಯ್ ಎಂದು ಮಾತ್ರ ಅರ್ಥ. ಹಾಗೂ ಸೆಕ್ಯುಲಾರಿಸಂ ಎಂದರೆ ಸರ್ವ ಧರ್ಮ ಸಮಭಾವ ಎಂದರ್ಥ ಎಂದೆಲ್ಲಾ ತಮಗೆ ತೋಚಿದ ವ್ಯಖ್ಯಾನ ಕೊಟ್ಟಿದ್ದಾರೆ. ಪ್ರಭುತ್ವವು ಎಲ್ಲಾ ಮತಧರ್ಮಗಳಿಂದ ಸಮದೂರವನ್ನು ಕಾಪಾಡಿಕೊಳ್ಳಬೇಕೆಂಬ ಹಾಗೂ ದೇಶದ ಸಂಪತ್ತಿನ ಮೇಲೆ ಸಮುದಾಯಗಳ ಒಡೆತನವನ್ನು ಎತಿಹಿಡಿಯುವ ಅಂಬೇಡ್ಕರ್ ಅವರ ವ್ಯಾಖ್ಯಾನವನ್ನೂ ಕೂಡ ಅವರು ಪರಿಗಣಿಸಿಲ್ಲ. ಚಂದ್ರಚೂಡ್ ಅವರೂ ಕೂಡ ತಮ್ಮ ಕೊನೇ ತೀರ್ಪಿನಲ್ಲಿ ಸಮಾಜವಾದದ ಬಗ್ಗೆ ಸುಪ್ರೀಂ ತಿರಸ್ಕಾರವನ್ನು ಸೂಚಿಸಿದ್ದರು.
ಸೆಕ್ಯುಲಾರಿಸಂ ಮತ್ತು ಸೋಷಿಯಲಿಸಂ ಪದಗಳನ್ನು ಮಾತ್ರ ಸುಪ್ರೀಂ ಉಳಿಸಿ ಅವುಗಳ ನೈಜ ಅರ್ಥದ ಮೇಲೆ ತಾನೂ ಕೂಡ ದಾಳಿ ಮಾಡಿದೆ. ಇದಕ್ಕೆ ಕಾರಣ ಸ್ವಾತಂತ್ರ್ಯಾ ನಂತರವೂ ರಾಜ್ಯಾಧಿಕಾರ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಗಳ ಬಳಿಯೇ ಉಳಿಸಿರುವುದು. ಮತ್ತು ಪ್ರಜಾತಂತ್ರವೂ ಸಾರದಲ್ಲಿ ಬಂಡವಾಳ ತಂತ್ರವೇ ಆಗಿರುವುದು. ಹೀಗಾಗಿ ಸೆಕ್ಯುಲಾರ್ ಸೋಷಿಯಲಿಸ್ಟ್ ಎಂಬ ಪದಗಳು ಉಳಿದ ಸಮಾಧಾನದ ಆಚೆಗೆ ಅವುಗಳ ಅರ್ಥವನ್ನೂ ಉಳಿಸಿಕೊಳ್ಳುವ ಅಸಲೀ ಪ್ರಜಾತಂತ್ರದ ಹೋರಾಟಕ್ಕೆ.. “ನಾವು ಈ ದೇಶದ ಜನತೆಯೇ” ಮುಂದಾಗಬೇಕಿದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply