ಇತ್ತೀಚಿಗೆ ಕರ್ನಾಟಕ ಪೊಲೀಸ್ ನಡೆಸಿದ ವಿಕ್ರಮ್ ಗೌಡರ ಎನ್ಕೌಂಟರ್ ಅನ್ನು ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಯಾವುದೇ ಆಶ್ಚರ್ಯವಿಲ್ಲದೆ ಈ ಎನ್ಕೌಂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮರ್ಥಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ಈ ಕೃತ್ಯ ಸಂವಿಧಾನಿಕ ತತ್ವಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ರಾಜ್ಯವು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ತೊಡೆದು ಹಾಕುತ್ತೇವೆ. ಸಂವಿಧಾನವನ್ನು ಅನುಸರಿಸಿ ಮಾನವ ಹಕ್ಕುಗಳನ್ನು ಹೇಗೆ ಕಾಪಾಡುವುದು ಎಂಬುವುದನ್ನು ಅರಿತುಕೊಳ್ಳಬೇಕಾದ ಅವಶ್ಯಕೆ ಇದೆ.
ಈ ರಾಜಕೀಯ ವಿರೋಧವನ್ನು ಕೇವಲ ಅಪರಾಧ ಚಟುವಟಿಕೆ ಎಂದು ಗುರುತಿಸಿ ಅದನ್ನು ಬಂದೂಕಿನಿಂದ ನಾಶಪಡಿಸಲು ಪ್ರಯತ್ನಿಸುವುದನ್ನು ಕೈ ಬಿಟ್ಟು, ಸರ್ಕಾರಗಳು ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಮುಂತಾದ ಸಮಸ್ಯೆಗಳನ್ನು ಪರಿಹರಿಸಬೇಕು. ಹೋರಾಟಗಳನ್ನು ಅಪರಾಧಗೊಳಿಸುವ ಬದಲು, ರಾಜ್ಯವು ಸಮರ್ಥವಾಗಿ ಜನರ ಸಮಸ್ಯೆಗಳ ಕುರಿತು ಸೂಕ್ತ ಪರಿಹಾರಗಳನ್ನು ನೀಡಬೇಕು ಮತು ಸಂವಿಧಾನವನ್ನು ಪಾಲಿಸಬೇಕು ಎಂದು ಸರ್ಕಾರವನ್ನು ಎಚ್ಚರಿಸಿದೆ.
ರಾಜ್ಯ ಸರ್ಕಾರವು ವಿಕ್ರಮ್ ಗೌಡನ ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರಂತದ ವಿಚಾರ. ಬದಲಿಗೆ ಸರ್ಕಾರ ಸುಪ್ರೀಂ ಕೋರ್ಟಿನ 2014 ತೀರ್ಪನ್ನು ರಾಷ್ಟ್ರೀಯ ಮಾನವ ಹಕ್ಕು ನಿರ್ಬಂಧನೆಗಳನ್ನು ಪಾಲಿಸಿ, ಎನ್ಕೌಂಟರ್ನಲ್ಲಿ ಭಾಗಿಯಾದವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಬೇಕು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ವಿಕ್ರಂ ಎನ್ ಕೌಂಟರ್ ಪ್ರಕರಣ ಸಮಗ್ರ ಸ್ವತಂತ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ಎನ್ಕೌಂಟರ್ ಹತ್ಯೆಗಳು ನಮ್ಮ ಸಂವಿಧಾನದ ಮೂಲಭೂತ ತತ್ವಗಳ ವಿರುದ್ಧವಾಗಿದೆ. ಪ್ರತಿಯೊಬ್ಬ ನಾಗರಿಕನು ಶಿಕ್ಷೆಗೆ ಒಳಗಾಗುವ ಮೊದಲು ನ್ಯಾಯಯುತ ವಿಚಾರಣೆ ಮತ್ತು ವಿಚಾರಣೆಗೆ ಅರ್ಹನಾಗಿರುತ್ತಾನೆ.
ಎನ್ಕೌಂಟರ್ ಹತ್ಯೆಗಳು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಭುತ್ವದ ಸಂಸ್ಕೃತಿಯಾಗಿ ರೂಪುಗೊಳ್ಳುತ್ತಿರುವುದು ಈ ದೇಶಕ್ಕೆ ಅಪಾಯಕಾರಿಯಾಗಿದೆ. ಸಿಪಿಐ (ಎಂಎಲ್) ಲಿಬರೇಶನ್ ಪಕ್ಷವು ನ್ಯಾಯಯುತ ಮತ್ತು ಘನತೆಗಾಗಿ ಹೋರಾಡುತ್ತಿರುವ ಎಲ್ಲಾ ಚಳುವಳಿಗಳೊಂದಿಗೂ ನಿಲ್ಲುತ್ತದೆ. ಮತ್ತು ಸರ್ಕಾರ ನಡೆಸುವ ಯಾವುದೇ ರೀತಿಯ ಹಿಂಸಾಚಾರ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೋ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
Leave a reply