ಚಾರ್ಲ್ಸ್ ಡಾರ್ವಿನ್ ತನ್ನ ಜೈವಿಕ ವಿಕಾಸದ ಸಿದ್ಧಾಂತವನ್ನು ನವೆಂಬರ್ 24, 1859 ರಂದು ಘೋಷಿಸಿದರು. ಈ ಆಧುನಿಕ ವೈಜ್ಞಾನಿಕ ಯುಗಕ್ಕೆ ಆ ಸಿದ್ಧಾಂತವು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ವಿಜ್ಞಾನಿಗಳಿಗೆ ಗೌರವವನ್ನು ಸಲ್ಲಿಸಲು ವಿಶ್ವದ ಎಲ್ಲಾ ದೇಶಗಳು ನವೆಂಬರ್ 24 ಅನ್ನು ‘ಜೈವಿಕ ವಿಕಸನ ದಿನ’ ಎಂದು ಆಚರಿಸುತ್ತಿವೆ. ನಮ್ಮ ದೇಶದಲ್ಲಿಯೂ ಇದನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದು ಅತ್ಯಂತ ಅವಶ್ಯಕವಾಗಿದೆ. ಯಾಕೆಂದರೆ ದೇಶದಲ್ಲಿ ವೈಜ್ಞಾನಿಕ ದೃಷ್ಟಿಕೋನ ಗಟ್ಟಿಯಾಗಬೇಕು ಎಂದು ಹೇಳಿದ ಭಾರತದ ಮೊದಲ ಪ್ರಧಾನಿ ನೆಹರೂ ಅವರ ಸ್ಥಾಯಿಯನ್ನು ತಗ್ಗಿಸಲು ಈಗಿನ ಕೇಂದ್ರ ಸರ್ಕಾರ ಯತ್ನಿಸುತ್ತಿದ್ದು, ಜನಸಾಮಾನ್ಯರು ಪ್ರಜ್ಞಾವಂತರಾಗಿ ಇಂತಹ ವೈಜ್ಞಾನಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ! ಜೀವ ವಿಕಸನದ ಸಿದ್ಧಾಂತ (ಥಿಯರಿ ಆಫ್ ಎವ್ಯೂಲೂಷನ್)ವನ್ನು ಸರ್ಕಾರವು ನಿಷ್ಪ್ರಯೋಜಕ ಎಂದು ಪಠ್ಯಕ್ರಮದಿಂದ ತೆಗೆದುಹಾಕುತ್ತಿದೆ. ಭಾರತದ ಸಂವಿಧಾನದ ಸ್ಥಾನದಲ್ಲಿ ಮನುಸ್ಮೃತಿಯನ್ನು ತರುತ್ತಿದೆ. ಇಂತಹವುಗಳನ್ನು ತಡೆಗಟ್ಟಲು ಎಲ್ಲಾ ಪ್ರಗತಿಪರ ಮನೋಭಾವವುಳ್ಳವರು ವೈಜ್ಞಾನಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಬೇಕಿದೆ.
ಈ ವಿಷಯಗಳಲ್ಲಿ ನಮ್ಮ ದೇಶದ ಪರಿಸ್ಥಿತಿಗಳು ತುಂಬಾ ಕಳಪೆಯಾಗಿದೆ. ಧಾರ್ಮಿಕ ಹಬ್ಬಗಳಿಗೆ ಶಾಲಾ-ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ರಜೆ ನೀಡುವ ಮೂಲಕ ಸರ್ಕಾರಗಳು ಅರ್ಥಹೀನ ಹಬ್ಬಗಳನ್ನು ಪ್ರಮೋಟ್ ಮಾಡುತ್ತಿವೆ. ದೇವರ ಮೆರವಣಿಗೆ ಹೆಸರಿನಲ್ಲಿ ಸಮಾಜೇತರ ಚಟುವಟಿಕೆಗಳಿಗೆ ಅವಕಾಶ ಲಭ್ಯವಿದೆ. ಶೈಕ್ಷಣಿಕ ಸಂಸ್ಥೆಗಳು, ನಾಗರಿಕ ಸಮಾಜಗಳು ಅಥವಾ ಕುಟುಂಬಗಳಲ್ಲಿ ಸಂವೇದನಾಶೀಲ ಮತ್ತು ಅರ್ಥಪೂರ್ಣ ವೈಜ್ಞಾನಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆಯೇ? ಇಲ್ಲ ಅಲ್ಲವೇ? ಆದ್ದರಿಂದ ಶಿಕ್ಷಕರು, ಉಪನ್ಯಾಸಕರು, ಸೈನ್ಸ್ ಕಾರ್ಯಕರ್ತರು, ಜವಾಬ್ದಾರಿಯುತ ನಾಗರಿಕರು, ವಿವೇಚನೆಯುಳ್ಳ ಅಧಿಕಾರಿಗಳು ಮತ್ತು ಬಹಳ ಮುಖ್ಯವಾಗಿ ಮಹಿಳೆಯರು ದೇಶದಲ್ಲಿ ನಡೆಯುತ್ತಿರುವ ವಿಷಪೂರಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು. ಎಲ್ಲೆಡೆ ವೈಜ್ಞಾನಿಕ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಬರೀ ಚಿಂತನೆಗಳಿಂದ ಯಾವ ಕೆಲಸವೂ ಆಗುವುದಿಲ್ಲ. ಅವುಗಳನ್ನು ಆಚರಣೆಗೆ ತರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ವಿದ್ಯಾರ್ಥಿಗಳಿಗೆ ಜೈವಿಕ ವಿಕಸನದ ಬಗ್ಗೆ, ಡಾರ್ವಿನ್ ಬಗ್ಗೆ ಮತ್ತು ಇತರೆ ಹಲವು ವೈಜ್ಞಾನಿಕ ವಿಷಯಗಳ ಕುರಿತು ಪ್ರಬಂಧ ರಚನೆ/ಉಪನ್ಯಾಸ ಸ್ಪರ್ಧೆಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನಡೆಸುತ್ತಾ, ಅವರಲ್ಲಿ ವೈಜ್ಞಾನಿಕ ಕುತೂಹಲವನ್ನು ಬೆಳೆಸಬೇಕು. ಅವರು ತರ್ಕಬದ್ಧವಾಗಿ ಯೋಚಿಸುವಂತೆ ಮಾಡಬೇಕು. ಅವರನ್ನು ಮಾನವತಾವಾದಿಗಳಾಗಿ ತರಬೇತುಗೊಳಿಸಬೇಕು.
ಯಾರ ವೈಯಕ್ತಿಕ ನಂಬಿಕೆಗಳಿಗೂ ಧಕ್ಕೆ ತರುವ ಉದ್ದೇಶ ನಮಗಿಲ್ಲ. ಅವು ತನ್ನದೇ ಮಿತಿಯಲ್ಲಿದ್ದರೆ ನಾವು ಸಂತೋಷಪಡೋಣ – ಅಷ್ಟೇ! ಧಾರ್ಮಿಕ ನಂಬಿಕೆ ಯಾವಾಗಲೂ ವೈಯಕ್ತಿಕ ಮಟ್ಟದಲ್ಲಿರಬೇಕು. ಮೇಲಾಗಿ ಸಮಾಜದ ರೂಪುರೇಷೆ ಬದಲಿಸುವಷ್ಟು ದುಷ್ಟತನ ಮಾಡಬಾರದು. ಆದರೆ ಧಾರ್ಮಿಕ ನಂಬಿಕೆಗಳೊಂದಿಗೆ ಜಗತ್ತು ಪ್ರಗತಿ ಸಾಧಿಸಿಲ್ಲ ಎಂಬುದನ್ನು ಖಚಿತವಾಗಿ ಹೇಳಬಹುದು!
ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಚಂದ್ರಯಾನ-3 ಯಶಸ್ಸನ್ನು ಆನ್ಲೈನ್ನಲ್ಲಿ ದೇಶದ ಜನತೆಗೆ ಅನವಶ್ಯಕವಾಗಿ ಅನುಚಿತವಾಗಿ ತೋರಿಸಿಕೊಟ್ಟ ಇಂದಿನ ಪ್ರಧಾನಿ ಮೋದಿಯವರ ನಡವಳಿಕೆಯನ್ನು ಈ ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಇಸ್ರೋ ವಿಜ್ಞಾನಿಗಳ ಸಂಬಳದಲ್ಲಿ ಕಡಿತ – ಇಸ್ರೋಗೆ ಕಚ್ಚಾ ಸಾಮಗ್ರಿಗಳನ್ನು ಒದಗಿಸಿದ ಸಾವಿರಾರು ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಸಂಬಳ ನೀಡದಿರುವುದು ಈ ದೇಶದ ಜನರಿಗೆ ತಿಳಿದಿರಬೇಕು. ರಸ್ತೆಗಳಲ್ಲಿ ಟೀ, ಟಿಫಿನ್ ಮಾರುವುದು, ಹೊರಗೆ ಮೆಕ್ಯಾನಿಕ್ ಗಳಾಗಿ, ಡ್ರೈವರ್ ಗಳಾಗಿ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವುದನ್ನು ಈ ದೇಶದ ಜನರು ತಿಳಿದುಕೊಳ್ಳಬೇಕು. ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಶ್ಲಾಘಿಸದೇ ಅದನ್ನು ಚುನಾವಣಾ ಅಜೆಂಡಾದಲ್ಲಿ ಸೇರಿಸಿರುವುದನ್ನು ಈ ದೇಶದ ಜನತೆ ತಿಳಿದುಕೊಳ್ಳಬೇಕು. ಮೇಲಾಗಿ, ಪ್ರಾಚೀನ ಭಾರತೀಯ ವಾಯುಯಾನ ವಿಜ್ಞಾನದಲ್ಲಿ ಇದೆಲ್ಲವನ್ನೂ ಬರೆಯಲಾಗಿದೆ ಎಂಬ ಸುಳ್ಳಿನ ಬಗ್ಗೆ ಈ ದೇಶದ ಜನರು ತಿಳಿದಿರಬೇಕು. ಈ ಅಪಾಯಕಾರಿ ಪರಿಸ್ಥಿತಿಯಿಂದ ಹೊರಬರಲು ನಾವು ಮಾರ್ಗಗಳನ್ನು ಹುಡುಕಬೇಕಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾವಂತರ ಅದರಲ್ಲೂ ವಿಜ್ಞಾನದ ದಾಹ ಇರುವವರೊಂದಿಗೆ ಸರ್ಕಾರಗಳು ರಚನೆಯಾಗುವಂತೆ ನೋಡಿಕೊಳ್ಳಬೇಕಿದೆ.
‘ನಿನ್ನನ್ನು ನೀನು ತಿಳಿದುಕೋ’ ಎಂದು ಇಲ್ಲದ ದೇವರನ್ನು ಧ್ಯಾನಿಸುತ್ತಾ ಕಣ್ಣು ಮುಚ್ಚಿಕೊಳ್ಳುವುದಲ್ಲ. ನೀವು ಯಾರು? ಎಷ್ಟೋ ಘಟನೆಗಳು ನಡೆದು ನೀವು ಹೀಗೆ ಬದಲಾಗಿದ್ದೀರಾ.. ಎಂಬುದನ್ನು ಅರಿತುಕೊಂಡರೆ ನಿಮ್ಮ ಕಣ್ಣು ತೆರೆಯುತ್ತದೆ! ಎಷ್ಟೆಷ್ಟು ಮಾನವ ರಾಷ್ಟ್ರೀಯತೆಗಳು ವಿಕಸನಗೊಂಡಿವೆ. ಮತ್ತು ಅಳಿದುಹೋಗಿವೆ? ಎಷ್ಟೋ ವಲಸೆಗಳ ನಂತರ ನಿಮ್ಮ ರಾಷ್ಟ್ರೀಯತೆ ನೀವಿರುವ ಪ್ರಾಂತ್ಯವನ್ನು ತಲುಪಿದೆ ಎಂಬಂತಹ ವಿಷಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ನೀವು ಜೀವ ವಿಕಾಸದ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರಬೇಕು. ನಿಮ್ಮ ಜನ್ಮವು ಭಗವಂತನ ಸೃಷ್ಟಿಯ ಭಾಗ ಎಂದು ನೀವು ಇನ್ನೂ ಭಾವಿಸಿದರೆ, ನಿಮ್ಮ ಮೆದುಳಿನಲ್ಲಿರುವ ಕತ್ತಲೆ ಹೋಗಿಲ್ಲ ಎಂದು ಅರ್ಥ. ಕತ್ತಲೆಯಲ್ಲೇ ಜೀವನ ಉತ್ತಮವಾಗಿದೆ ಎಂದು ಭಾವಿಸುವವರ ಬಗ್ಗೆ ನಮಗೆ ಸಹಾನುಭೂತಿ ಇಲ್ಲ. ಜೀವನದಲ್ಲಿ ಬೆಳಕನ್ನು ಕಾಣಲು ಬಯಸುವವರು ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಲೇಬೇಕು. ಜೀವ ವಿಕಾಸದ ಬಗ್ಗೆ ತಿಳಿಯಲೇಬೇಕಿದೆ. ಧಾರ್ಮಿಕ ಅಜ್ಞಾನ, ಮೂಢನಂಬಿಕೆಗಳಿಗೆ ಮರಣಪೆಟ್ಟು ನೀಡಿದ ಡಾರ್ವಿನ್ನನ ಜೀವ ವಿಕಾಸ ಸಿದ್ಧಾಂತವು ಹೊರಬಂದ ದಿನವನ್ನು ಸ್ಮರಿಸಬೇಕು. ಪ್ರತಿ ವರ್ಷ ‘ಜೀವ ವಿಕಾಸ ದಿನ’ ವನ್ನು ಆಚರಿಸಬೇಕು.
ಹಾಡಿದ್ದೇ ಹಾಡುಗಳನ್ನು ಹಾಡುವುದು. ಅಧಿಕಾರಕ್ಕಾಗಿ ಹುಲ್ಲು ಕಡಿಯುವುದನ್ನು ರಾಜಕಾರಣಿಗಳು ರೂಢಿಸಿಕೊಂಡಿದ್ದಾರೆ. ವಿಜ್ಞಾನಿಗಳು ಹಾಗೆ ಮಾಡುವುದಿಲ್ಲ. ಬದ್ಧತೆ, ಸತ್ಯತೆಯೊಂದಿಗೆ, ಸತ್ಯವನ್ನು ಮಾತ್ರವೇ ಬಹಿರಂಗಗೊಳ್ಳಿಸುತ್ತಾರೆ. ಅಂತವರಲ್ಲಿ ಮಹಾನ್ ವ್ಯಕ್ತಿ ಚಾರ್ಲ್ಸ್ ಡಾರ್ವಿನ್! ಅವರು ಧರ್ಮಗಳನ್ನು ಅಪಮೌಲ್ಯಗೊಳಿಸಲು ಬಯಸಲಿಲ್ಲ. ಮೂಢನಂಬಿಕೆಗಳನ್ನು ಹೋಗಲಾಡಿಸಬಹುದೆಂದು ಭಾವಿಸಿಲ್ಲ. ಅವರು ಪ್ರಸ್ತಾಪಿಸಿದ ಸಿದ್ಧಾಂತವು ಕಾಲಾನಂತರದಲ್ಲಿ ಆ ಕೆಲಸಗಳನ್ನು ಮಾಡುತ್ತಿದೆ. ಆದ್ದರಿಂದಲೇ ಸಂಪ್ರದಾಯವಾದಿಗಳು ಡಾರ್ವಿನ್ ರನ್ನಾಗಲಿ, ಡಾರ್ವಿನ್ ಸಿದ್ಧಾಂತವನ್ನಾಗಲಿ ಇಷ್ಟಪಡುವುದಿಲ್ಲ. ಅವರಿಗೆ ಸೃಷ್ಟಿ/ದೈವಿಕ ಸಿದ್ಧಾಂತ ಬೇಕು. ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ನೀತಿಯೂ ಅದೇ! ‘ಎವಲ್ಯೂಷನ್’ ಪಾಠ್ಯವನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗುತ್ತಿದೆ ಎಂದು ತಿಳಿದಾಗ, ಜೆವಿವಿ ಹೈದರಾಬಾದ್ನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ‘ಎವಲ್ಯೂಷನ್’ ಕುರಿತು ನನ್ನ ಉಪನ್ಯಾಸಗಳನ್ನು ಆಯೋಜಿಸಿತು. ನಾನೂ ಹೋಗಿ ಎವಲ್ಯೂಷನ್ ಕುರಿತು ಉಪನ್ಯಾಸ ನೀಡಿ ಖುಷಿಯಿಂದ ವಾಪಸ್ ಬಂದೆ. ಒಮ್ಮೆ ಪಠ್ಯಕ್ರಮದಿಂದ ಎವಲ್ಯೂಷನ್ ಪಠ್ಯವನ್ನು ತೆಗೆದು ಹಾಕಿದರೆ ಮಕ್ಕಳು ಇನ್ನು ಕಲಿಯಲಾರರು – ಎಂಬ ಭ್ರಮೆಯಲ್ಲಿ ಸರಕಾರ ಇದ್ದರೆ ಇರಲಿಬಿಡಿ. ಜವಾಬ್ದಾರಿಯುತ ನಾಗರಿಕರಾದ ನಮಗೆ ನಮ್ಮ ಮಕ್ಕಳಿಗೆ ಏನನ್ನು ಕಲಿಸಬೇಕೆಂದು ಗೊತ್ತಿದೆ ಅಲ್ಲವೇ? ಸರ್ಕಾರಗಳು ತಾತ್ಕಾಲಿಕ – ವೈಜ್ಞಾನಿಕ ಪ್ರಜ್ಞೆ ಶಾಶ್ವತ! ಆದ್ದರಿಂದ, ನಾವು ಎಲ್ಲಾ ಹಂತಗಳಲ್ಲಿ ಸಾಧ್ಯವಾದಷ್ಟು ವೈಜ್ಞಾನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ಮುಂದುವರಿಸಬೇಕಿದೆ.
- ಡಾ. ದೇವರಾಜು ಮಹಾರಾಜು
ಲೇಖಕರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಜೀವಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ) (ಮೆಲ್ಬೋರ್ನ್ನಿಂದ)
ಅನುವಾದ : ರೇಣುಕಾ ಭಾರತಿ
Leave a reply