ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ನಿವೃತ್ತಿಯ ಸಂದರ್ಭದಲ್ಲಿ, ಅನೇಕ ವಿಮರ್ಶಾತ್ಮಕ ಮೌಲ್ಯಮಾಪನಗಳು ಮತ್ತು ಹೇಳಿಕೆಗಳು ಹೊರಹೊಮ್ಮಿವೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಭಾವಶಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಕೂಡ ಒಬ್ಬರು ಎಂದು ಪರಿಗಣಿಸಲ್ಪಟ್ಟಿರುವುದರಿಂದ ಇದು ಸಹಜವೇ ಆಗಿದೆ. ಕಳೆದ ಎರಡು ದಶಕಗಳಲ್ಲಿ ಯಾವುದೇ ಸಿಜೆಐ ನಿರ್ವಹಿಸದಂತಹ ರೀತಿಯಲ್ಲಿ ಅವರು ಎರಡು ವರ್ಷಗಳ ಕಾಲ ಜವಾಬ್ದಾರಿಯನ್ನು ನಿರ್ವಹಿಸಿದರು. ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯುತ ನ್ಯಾಯಾಂಗದ ಮುಖ್ಯಸ್ಥರಾಗಿ ಅವರು ನಿರ್ವಹಿಸಿದ ಪಾತ್ರವನ್ನು ಸರಿಯಾಗಿ ಅಂದಾಜಿಸಬೇಕೆಂದರೆ, ಅವರು ಮಾಡಿದ ಎಲ್ಲಾ ಪ್ರಯತ್ನಗಳನ್ನು ಪರಿಶೀಲಿಸಬೇಕಿದೆ. ಕಾರ್ಯನಿರ್ವಹಿಸುವ ಸಂದರ್ಭದಲ್ಲಿ, ಸಿಜೆಐ ಚಂದ್ರಚೂಡ್ ಯಾವ ಹಿನ್ನೆಲೆಯಲ್ಲಿ ತಮ್ಮ ನ್ಯಾಯಾಂಗ ಜವಾಬ್ದಾರಿಯನ್ನು ನಿರ್ವಹಿಸಿದರು ಎಂಬುದನ್ನು ಕೂಡ ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ.
ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ತನ್ನ ಹಿಂದುತ್ವದ ಅಜೆಂಡಾವನ್ನು ಮುಂದಿಡಲು ಆಕ್ರಮಣಕಾರಿಯಾಗಿ ಪ್ರಯತ್ನಿಸುತ್ತಿರುವ ಸಮಯ ಇದು. ಇದು ಸಂವಿಧಾನ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುವ ಕಾರ್ಯಸೂಚಿಯಾಗಿದೆ. ಸಾಂವಿಧಾನಿಕ ವಿಷಯಗಳು ಮತ್ತು ಬಹುಸಂಖ್ಯಾತ ಧರ್ಮದ ದಾಳಿಯ ಕುರಿತು ನ್ಯಾಯಮೂರ್ತಿ ಚಂದ್ರಚೂಡ್ ಅವರ ತೀರ್ಪುಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಿದೆ.
ಎರಡು ತೀರ್ಪುಗಳು… ಈ ದೃಷ್ಟಿಕೋನದಲ್ಲಿ, ಎರಡು ತೀರ್ಪುಗಳು ಒಂದೇ ಆದರೂ ನ್ಯಾಯಾಧೀಶರಾಗಿ ಮತ್ತು CJI ಆಗಿ ಅವರು ನೀಡಿದ ತೀರ್ಪುಗಳು ನಿರ್ಣಾಯಕ ಪರೀಕ್ಷೆಗೆ ಬರುತ್ತವೆ. ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಐವರು ಸದಸ್ಯರ ಪೀಠದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಸದಸ್ಯರಾಗಿದ್ದರು. ಅವರು ರಚಿಸಿದ ತೀರ್ಪು ಬಾಬರಿ ಮಸೀದಿ ಇದ್ದ ವಿವಾದಾತ್ಮಕ ಭೂಮಿಯನ್ನು ಸಂಪೂರ್ಣವಾಗಿ ರಾಮಮಂದಿರ ನಿರ್ಮಾಣಕ್ಕಾಗಿ ಹಿಂದೂಗಳಿಗೆ ಹಸ್ತಾಂತರಿಸಿತು. ಪುರಾವೆಗಳು ಮತ್ತು ಕ್ಷೇತ್ರ ಮಟ್ಟದ ಸತ್ಯಗಳಿಗಿಂತ ಹೆಚ್ಚಾಗಿ ಧಾರ್ಮಿಕ ವಿಚಾರಗಳು ಮತ್ತು ನಂಬಿಕೆಗಳ ಆಧಾರದ ಮೇಲೆ ಆ ತೀರ್ಪು ರೂಪುಗೊಂಡಿತು. ಬಾಬರಿ ಮಸೀದಿ ಧ್ವಂಸ ಸಂವಿಧಾನ ಬಾಹಿರ ಮತ್ತು ಆಘಾತಕಾರಿ ಕೃತ್ಯ ಎಂದು ಒಪ್ಪಿಕೊಳ್ಳುತ್ತಾ ಆ ತೀರ್ಪು ಹಾಗೇ ರೂಪುಗೊಂಡಿತು. ಇದು ಆರ್ಎಸ್ಎಸ್-ಬಿಜೆಪಿ-ವಿಶ್ವ ಹಿಂದೂ ಪರಿಷತ್ನ ವಾದವನ್ನು ಕಾನೂನುಬದ್ಧಗೊಳಿಸುತ್ತಾ ಆ ಮೂಲಕ ಬಿಜೆಪಿಯ ಮೂಲ ಅಜೆಂಡಾದಲ್ಲಿನ ಒಂದನ್ನು ಈಡೇರಿಸಿದ ನ್ಯಾಯಾಂಗ ವ್ಯವಸ್ಥೆಯ ಒಂದು ತೀರ್ಪು ಅದು. ನಂತರ, ಸಿಜೆಐ ಚಂದ್ರಚೂಡ್ ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣವನ್ನು ಸ್ಥಳಾಂತರಿಸಲು ಅವಕಾಶ ಮಾಡಿಕೊಟ್ಟರು. ಆದ್ದರಿಂದ ಈ ತೀರ್ಪು ಒಂದು ಬಾರಿಯ ವಿಷಯವಲ್ಲ ಎಂಬುದು ಸ್ಪಷ್ಟವಾಯಿತು. 1991 ಪ್ರಾರ್ಥನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯಂತಹ ಪ್ರಕರಣಗಳನ್ನು ಪುನಃ ಪ್ರಾರಂಭಿಸುವುದನ್ನು ನಿಷೇಧಿಸಿದರೂ, ಸಿಜೆಐ ಚಂದ್ರಚೂಡ್ ಅವರು ಹಿಂದೂಗಳು ಜ್ಞಾನವಾಪಿ ಮಸೀದಿಯ ಸ್ವರೂಪವನ್ನು ಬದಲಾಯಿಸಲು ಬಯಸುತ್ತಿಲ್ಲ, ಆದರೆ ಅದರ ಧಾರ್ಮಿಕ ಮೂಲವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಂಶಯಾಸ್ಪದ ವಾದದ ಮೇಲೆ ಪ್ರಕರಣಗಳನ್ನು ಅನುಮತಿಸಿದರು. ಅದರಿಂದ ವಾರಣಾಸಿ ಮತ್ತು ಮಥುರಾ ವಿವಾದಗಳನ್ನು ಮತ್ತೆ ಹುಟ್ಟು ಹಾಕಲು ಹಿಂದುತ್ವ ಶಕ್ತಿಗಳಿಗೆ ಪರವಾನಿಗೆ ಸಿಕ್ಕಂತಾಯಿತು.
ಸಿಜೆಐ ಚಂದ್ರಚೂಡ್ ಅವರು ನೀಡಿದ ಮತ್ತೊಂದು ಪ್ರಮುಖ ತೀರ್ಪು ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಆ ರಾಜ್ಯವನ್ನು ವಿಛಿದ್ರಗೊಳಿಸುವುದಕ್ಕೆ ಸಂಬಂಧಿಸಿದ್ದು. ಜಮ್ಮು ಮತ್ತು ಕಾಶ್ಮೀರ ರಾಜ್ಯಾಂಗ ಪರಿಷತ್ತು ಇನ್ನು ಅಸ್ತಿತ್ವದಲ್ಲಿರದ ಕಾರಣ, ಕಾರ್ಯಾಂಗವು ಏಕಪಕ್ಷೀಯವಾಗಿ 370 ನೇ ವಿಧಿಗೆ ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿದೆ ಎಂದು ಆ ತೀರ್ಪನ್ನು ಎತ್ತಿಹಿಡಿಯಿತು. ಸಂವಿಧಾನದ ಮೂರನೇ ವಿಧಿಯ ಪ್ರಕ್ರಿಯೆಯನ್ನು ಉಲ್ಲಂಘಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರಾಂತ್ಯಕ್ಕೆ ಇಳಿಸುವ ಕುರಿತು ತೀರ್ಪು ನೀಡುತ್ತಾ ಭವಿಷ್ಯದಲ್ಲಿ ಒಂದು ದಿನ ರಾಜ್ಯದ ಪ್ರತಿನಿಧಿತ್ವವನ್ನು ಮರುಸ್ಥಾಪಿಸುವ ಭರವಸೆಯನ್ನು ಅನುಮೋದಿಸಿತು. 370 ನೇ ವಿಧಿಯನ್ನು ರದ್ದುಪಡಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಹೇಗಾದರೂ ಅನುಮೋದಿಸುವ ಉದ್ದೇಶವನ್ನು ಈ ತೀರ್ಪು ಹೊಂದಿದೆಯೇ ಹೊರತು ಬೇರೆ ರೀತಿಯಲ್ಲಿ ಅದನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾಗಳಲ್ಲಿ ಮತ್ತೊಂದು ಈಡೇರಿದೆ ಎಂಬುದನ್ನು ಇಲ್ಲಿ ಗುರುತಿಸಬೇಕಿದೆ.
ಕೊಲಿಜಿಯಂ ಮತ್ತು ನ್ಯಾಯಪೀಠಗಳ ಕಾರ್ಯಶೈಲಿ..
ಸಿಜೆಐ ಚಂದ್ರಚೂಡ್ ಅವರ ಅವಧಿಯಲ್ಲಿ ನ್ಯಾಯಾಧಿಕರಣಗಳಿಗೆ (ಮಾಸ್ಟರ್ ಆಫ್ ದಿ ರೋಸ್ಟರ್) ನ್ಯಾಯಾಧೀಶರನ್ನು ನೇಮಿಸುವ ಜವಾಬ್ದಾರಿ ಮತ್ತು ಕೊಲಿಜಿಯಂ ವ್ಯವಸ್ಥೆಯ ಕಾರ್ಯನಿರ್ವಹಣೆಯ ಶೈಲಿಯಲ್ಲಿ ಇನ್ನಿತರೆ ಸಮಸ್ಯೆಗಳಿವೆ. ಈ ವಿಷಯದಲ್ಲೂ ಯೋಜನೆಯ ಪ್ರಕಾರ ಸ್ಪಷ್ಟ ವಿಧಾನವನ್ನು ಅನುಸರಿಸಿರುವುದು ಸ್ಪಷ್ಟವಾಗಿದೆ. ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಒಳಗೊಂಡಿರುವ ಪ್ರಕರಣಗಳು, ದೀರ್ಘ ವಿಳಂಬವಾದ ಭೀಮಾ ಕೋರೆಗಾಂವ್ ಮತ್ತು ಈಶಾನ್ಯ ದೆಹಲಿಯ ಕೋಮು ಗಲಭೆಗಳಂತಹ ಪ್ರಕರಣಗಳನ್ನು ಒಂದು ಯೋಜನೆಯ ಪ್ರಕಾರ ನಿರ್ದಿಷ್ಟ ಪೀಠಕ್ಕೆ ಕಳುಹಿಸಿದಂತೆ ಕಾಣುತ್ತದೆ. ನಾಗರಿಕ ಹಕ್ಕುಗಳ ಪ್ರಕರಣದಲ್ಲಿ ಬೆಯಿಲ್ ಮಂಜೂರು ಮಾಡುವಂತಹ ವಿಷಯಗಳ ಬಗ್ಗೆ ಭಿನ್ನ ಧೋರಣೆಯನ್ನು ಹೊಂದಿರುವ ನ್ಯಾಯಾಧೀಶರ ಪೀಠಕ್ಕೆ ಅವುಗಳನ್ನು ಕಳುಹಿಸಲಾಯಿತು. ಕೊಲಿಜಿಯಂನ ಕಾರ್ಯಶೈಲಿಗೆ ಬಂದರೆ, ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ನೇಮಕಾತಿಯ ನಿಯಂತ್ರಣವನ್ನು ಸರ್ಕಾರಕ್ಕೆ ಬಿಡುವುದು ಅದರ ಮುಖ್ಯ ಲಕ್ಷಣವಾಗಿ ಕಾಣುತ್ತದೆ.
ಆದರೆ ಇದೆಲ್ಲದರ ಹೊರತಾಗಿ ಇನ್ನೊಂದು ವಿಷಯವೂ ತಿಳಿದಂತಾಯಿತು. ಈ ಜ್ಞಾನಿಯಾದ ನ್ಯಾಯಾಧೀಶರು ವೈಯಕ್ತಿಕ ಸ್ವಾತಂತ್ರ್ಯಗಳ ಸಾಂವಿಧಾನಿಕ ತತ್ವಗಳನ್ನು ಬಲವಾಗಿ ಎತ್ತಿಹಿಡಿಯುತ್ತಾರೆ ಎಂಬ ಭಾವನೆ ಇದ್ದರೂ, ಅವರು ಅಂತಿಮವಾಗಿ ಸಂವಿಧಾನ ಮತ್ತು ಅದರ ಮೌಲ್ಯಗಳಿಗೆ ನಿಷ್ಠೆ ತೋರಿಸುವುದಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ನಂಬಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಚಂದ್ರಚೂಡ್ ತಮ್ಮ ನಿವೃತ್ತಿಯ ಮುನ್ನ ಕೊನೆಯ ಹಂತದಲ್ಲಿ, ಅಯೋಧ್ಯೆ ಪ್ರಕರಣದ ಇತ್ಯರ್ಥಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳುವ ಮೂಲಕ ಅನೇಕರನ್ನು ಆಘಾತಗೊಳಿಸಿದರು. ತೀರ್ಪನ್ನು ಬರೆದವರು ಸಾಂವಿಧಾನಿಕ ಕಾನೂನಿನ ಪ್ರಕಾರಕ್ಕಿಂತ ಹೆಚ್ಚಾಗಿ ದೈವಿಕ ಪ್ರೇರಣೆಯಿಂದ ಬರೆದಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದಂತಾಯಿತು. ಮತ್ತೊಂದು ಸಂದರ್ಭದಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಗುಜರಾತ್ನ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಅಲ್ಲಿನ ವಕೀಲರ ಗುಂಪಿನೊಂದಿಗೆ ಮಾತನಾಡುತ್ತಾ, ದೇವಾಲಯದ ಗೋಪುರದ ಮೇಲಿರುವ ಕೇಸರಿ ಧ್ವಜವು ನ್ಯಾಯ ಪತಾಕೆಯಾಗಿ ಹೊರಹೊಮ್ಮುತ್ತದೆ ಎಂದು ಭವಿಷ್ಯ ನುಡಿದರು.
ಆರ್ ಎಸ್ ಎಸ್ ಧೋರಣೆಗಳ ನುಸುಳುವಿಕೆ…
ಇವೆಲ್ಲವೂ ಒಂದೇ ವಿಷಯವನ್ನು ಬಹಿರಂಗಪಡಿಸುತ್ತವೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಒಬ್ಬರು ಮಾತ್ರವಲ್ಲದೇ ಇಡೀ ಉನ್ನತ ನ್ಯಾಯಾಂಗ ವ್ಯವಸ್ಥೆಯೇ ಧಾರ್ಮಿಕ ಭಾವನೆಗಳನ್ನು ಬೆಳೆಸುತ್ತಿರುವುದು ಸತ್ಯ. ಮೋದಿಯವರ ದಶಕದ ಆಡಳಿತದ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ, ಹಿಂದುತ್ವದ ಭಾವನೆಗಳು ಉನ್ನತ ನ್ಯಾಯಾಂಗ ಮತ್ತು ಕಾನೂನು ವಲಯಗಳಲ್ಲಿ ಬಹಿರಂಗವಾಗಿ ವಿಸ್ತರಿಸಿದೆ. ಕಲ್ಕತ್ತಾ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ತಮ್ಮ ನಿವೃತ್ತಿಯ ನಂತರ ಆರ್ಎಸ್ಎಸ್ನೊಂದಿಗೆ ತಮ್ಮ ಜೀವಿತಾವಧಿಯ ಒಡನಾಟವನ್ನು ಮತ್ತು ಸಂಘಟನೆಗೆ ಚಿರ ಋಣಿಯಾಗಿರುವುದಾಗಿ ಘೋಷಿಸಿದರು. ಮತ್ತೊಬ್ಬ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಚುನಾವಣೆಗೆ ಕೆಲವು ವಾರಗಳ ಮುನ್ನ ರಾಜೀನಾಮೆ ನೀಡಿ ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ಕೆಲವು ಮಂದಿ ನ್ಯಾಯಾಧೀಶರ ವಿಶ್ವ ದೃಷ್ಟಿಕೋನ ಹಿಂದುತ್ವದಿಂದ ರೂಪುಗೊಳ್ಳುತ್ತಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ನ ದ್ವಿಸದಸ್ಯ ಪೀಠದ ಇತ್ತೀಚಿನ ವ್ಯಾಖ್ಯಾನಗಳು ಬಹಿರಂಗಪಡಿಸಿದೆ. ರಕ್ಷಣಾ ಸಿಬ್ಬಂದಿ ಆರ್ಎಸ್ಎಸ್ಗೆ ಸೇರ್ಪಡೆಗೊಳ್ಳುವ ಕುರಿತು ನಿವೃತ್ತ ಸರ್ಕಾರಿ ನೌಕರ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ರೀತಿಯ ಆದೇಶ ನೀಡಿದೆ. ಆರ್ಎಸ್ಎಸ್ ಮೇಲಿನ ನಿಷೇಧವನ್ನು ಕೇಂದ್ರವು ಹಿಂತೆಗೆದುಕೊಂಡ ನಂತರ ಹೊರಡಿಸಿದ ಆದೇಶದಲ್ಲಿ, ದೇಶದ ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿ ಆರ್ಎಸ್ಎಸ್ನಂತಹ ಗೌರವಾನ್ವಿತ ಸಂಘಟನೆಯನ್ನು ತಪ್ಪಾಗಿ ಸೇರಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ‘ಕೇಂದ್ರ ಸರ್ಕಾರ ಮಾಡಿದ ತಪ್ಪಿನಿಂದಾಗಿ ಐದು ದಶಕಗಳ ಕಾಲ ದೇಶ ಸೇವೆ ಮಾಡಬೇಕೆನ್ನುವ ಕೇಂದ್ರ ಸರ್ಕಾರಿ ನೌಕರರ ಆಕಾಂಕ್ಷೆ ಹಲವು ರೀತಿಯಲ್ಲಿ ಕ್ಷೀಣಿಸಿದೆ’ ಎಂದು ಹೇಳಿದೆ. ಅಂದರೆ, ಈ ಜ್ಞಾನಿಗಳಾದ ನ್ಯಾಯಾಧೀಶರ ಪ್ರಕಾರ, ದೇಶಕ್ಕೆ ಸೇವೆ ಸಲ್ಲಿಸಬೇಕಾದರೆ, RSS ಗೆ ಸೇರಬೇಕು ಎಂಬುದು.
ಆರ್ಎಸ್ಎಸ್ನ ಕಾನೂನು ವಿಭಾಗವು ಉನ್ನತ ನ್ಯಾಯಾಂಗದ ಮೇಲೆ ತನ್ನ ಹಿಡಿತವನ್ನು ಹೇಗೆ ಹೆಚ್ಚಿಸುತ್ತಿದೆ ಎಂಬುದರ ಕುರಿತು ಕಾರವಾನ್ ಪತ್ರಿಕೆ ತನ್ನ ಅಕ್ಟೋಬರ್ 2024 ರ ಸಂಚಿಕೆಯಲ್ಲಿ ಕಣ್ಣು ತೆರೆಸುವ ಲೇಖನವನ್ನು ಪ್ರಕಟಿಸಿದೆ. ಅಖಿಲ ಭಾರತೀಯ ಅಧ್ಯವಕ್ತ ಪರಿಷತ್ತು ಆರೆಸ್ಸೆಸ್ ನ್ಯಾಯವಾದಿಗಳ ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಹೆಚ್ಚು ಹೆಚ್ಚು ಕಾನೂನು ಅಧಿಕಾರಿಗಳು, ಅಡ್ವೊಕೇಟ್ ಜನರಲ್ಗಳು ಮತ್ತು ನ್ಯಾಯಾಧೀಶರನ್ನು ಅದರ ಶ್ರೇಣಿಯಿಂದ ನೇಮಿಸಲಾಗುತ್ತಿದೆ. 33 ಮಂದಿ ಹಾಲಿ ನ್ಯಾಯಾಧೀಶರಲ್ಲಿ ಕನಿಷ್ಠ ಒಂಬತ್ತು ಮಂದಿ ಪರಿಷತ್ತಿನ ಕಲಾಪಕ್ಕೆ ಬಹುಸಂಖ್ಯೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಎಂದು ಕಾರವಾನ್ನಲ್ಲಿ ಹೊರಬಂದ ಈ ಲೇಖನ ಹೇಳುತ್ತದೆ. ಅತ್ಯುನ್ನತ ಸ್ಥಾಯಿಯಲ್ಲಿ ಹೊರಬರುವ ಬಹುಪಾಲು ನ್ಯಾಯಾಂಗ ನಿರ್ಧಾರಗಳು ಧಾರ್ಮಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಎಂಬುದಕ್ಕೆ ಸಿಜೆಐ ಚಂದ್ರ ಚೌಡ್ ಅವರ ಅಧಿಕಾರಾವಧಿಯ ಅನುಭವವು ಒಂದು ಮುನ್ನೆಚ್ಚರಿಕೆಯಂತಿದೆ. ಒಟ್ಟಾರೆ ಉನ್ನತ ನ್ಯಾಯಾಂಗದಲ್ಲಿ ಆರ್ಎಸ್ಎಸ್ನ ಒಳನುಸುಳುವಿಕೆಗೆ ಮೋದಿ ಸರ್ಕಾರ ಹೇಗೆ ಸಹಾಯ ಮಾಡಿದೆ ಎಂದು ಹೇಳುವ ಎಚ್ಚರಿಕೆ ಇದು.
(ನವೆಂಬರ್ 13ರ ‘ಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯ)
ಅನುವಾದ : ರೇಣುಕಾ ಭಾರತಿ
Leave a reply