ಕರ್ನಾಟಕದಲ್ಲಿ ಉಪಚುನಾವಣೆಗಳು ಘೋಷಣೆಯಾದಾಗಿನಿಂದಲೂ ನಾಡಿಗೆ ಬೆಂಕಿ ಹಚ್ಚಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ವಿಷಯವೊಂದಕ್ಕೆ ಹುಡುಕಾಡುತ್ತಿದ್ದ ಬಿಜೆಪಿ ಕಳೆದ ಒಂದು ತಿಂಗಳಿಂದ ವಕ್ಫ್ ಬೋರ್ಡ್ ವಿಷಯವನ್ನು ಕೋಮುವಾದೀಕರಿಸಲು ಸತತ ಪ್ರಯತ್ನ ಪಡುತ್ತಿದೆ. ಬಿಜೆಪಿಯ ಪ್ರಖ್ಯಾತ ಸುಳ್ಳುಬುರುಕ ಸಂಸದ ತೇಜಸ್ವಿ ಸೂರ್ಯ ತನ್ನ ಟ್ವೀಟ್ ಮೂಲಕ ವಿಜಯಪುರದ ಹೊನವಾಡದಲ್ಲಿ ಹಿಂದೂ ರೈತರಿಗೆ ಸೇರಿದ 1500 ಎಕರೆ ಜಮೀನನ್ನು ವಕ್ಫ್ ಬೋರ್ಡ್ ನೋಟಿಸ್ ಕೊಟ್ಟು ಕಬಳಿಸುತ್ತಿದೆ ಎಂದು ಮಾಡಿದ ಸುಳ್ಳು ಆಪಾದನೆಯಿಂದ ಆರಂಭವಾದ ಬಿಜೆಪಿಯ ಕೋಮುವಾದಿ ಅಭಿಯಾನವನ್ನು ಹಂತಹಂತವಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರಾಷ್ಟ್ರವ್ಯಾಪಿಗೊಳಿಸಿದ್ದಾರೆ.
ಅದರ ಜೊತೆಗೆ ಬಜೆಟ್ ಅಧಿವೇಶನದಲ್ಲಿ ಮೋದಿ ಸರ್ಕಾರ ದಿಢೀರ್ ಮಂಡಿಸಿದ ವಕ್ಫ್ ವಿನಾಶಕ ಮಸೂದೆಯ ಬಗ್ಗೆ ತಿದ್ದುಪಡಿಗಳನ್ನು ಸೂಚಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾದ ಬಿಜೆಪಿಯ ಜಗದಂಬಿಕಾ ಪಾಲ್ ಕೂಡ ಬಿಜಾಪುರಕ್ಕೆ ಏಕಪಕ್ಷೀಯವಾಗಿ ಭೇಟಿ ಕೊಟ್ಟು ವಕ್ಫ್ ಮಸೂದೆಯು ಹಿಂದೂಗಳ ಪರವಾಗಿರುತ್ತದೆ ಎಂದು ನೀತಿ-ನಿಯಮಗಳನ್ನು ಮೀರಿ ಭರವಸೆ ಕೊಟ್ಟು ಹೋಗಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ಬಿಜೆಪಿ ಹಚ್ಚುತ್ತಿರುವ ಬೆಂಕಿಯ ಹಿಂದೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಬೇಕಾದ ಉದ್ರಿಕ್ತ ಪರಿಸ್ಥಿತಿಯನ್ನು ಸೃಷ್ಟಿಸುವ ಶದ್ಯಂತ್ರವೂ ಇದ್ದಿರಬಹುದಾದ ಅನುಮಾನ ದಟ್ಟವಾಗುತ್ತಿದೆ.
ಆದ್ದರಿಂದಲೇ ಬಿಜೆಪಿಗಳು ಮತ್ತು ಇತರ ಸಂಘಪರಿವಾರದವರು ವಕ್ಫ್ ಅನ್ನು ಹಿಂದೂ ಮತ್ತು ಹಿಂದೂ ರೈತ ವಿರೋಧಿ ಮಸಲತ್ತಿನ ಸಂಸ್ಥೆ ಹಾಗೂ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಪಕ್ಷಪಾತಿ ಎಂಬ ನರೆಟಿವ್ ಹುಟ್ಟುಹಾಕುತ್ತಿದೆ. ಈ ಪ್ರಚಾರ ದಾಳಿಯಿಂದ ತಬ್ಬಿಬ್ಬಾಗಿರುವ ಕಾಂಗ್ರೆಸ್ ಸರ್ಕಾರ, ಬಿಜೆಪಿಯು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಕಾನೂನು ಸಹಜ ಕ್ರಮಗಳನ್ನೇ ತಾನೂ ತೆಗೆದುಕೊಳ್ಳುತ್ತಿದ್ದೇನೆ ಎಂದು ಕೂಡ ರಾಜಕೀಯವಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಬದಲಿಗೆ ಬಿಜೆಪಿಯ ಕಾರ್ಯಸೂಚಿಗೆ ಪೂರಕವಾಗುವಂತೆ ತನ್ನ ಸಹಜ ಆಡಳಿತಾತ್ಮಕ ಕ್ರಮಗಳನ್ನೂ ನಿಲ್ಲಿಸಿದೆ. ಇದರ ನಡುವೆ ವಕ್ಫ್ ಬಗ್ಗೆ ಬಿಜೆಪಿ ಮಾಡುತ್ತಿರುವ ದುರುದ್ದೆಶಪೂರಿತ ಅಪಪ್ರಚಾರಗಳು ರೈತರಲ್ಲೂ ಆತಂಕವನ್ನು ಸಹಜವಾಗಿಯೇ ಹುಟ್ಟುಹಾಕಿದೆ.
ಈವರೆಗೆ ಸರ್ಕಾರದ ರೆವೆನ್ಯು ಅಧಿಕಾರಿಗಳೆ ಪತ್ರಕರ್ತರೊಡನೆ ಹಂಚಿಕೊಂಡಿರುವ ವಿವರಗಳ ಪ್ರಕಾರ ಐದು ಜಿಲ್ಲೆಗಳ 463 ಒತ್ತುವರಿ ಪ್ರಕರಣಗಳಲ್ಲಿ ಮಾತ್ರ ನೋಟಿಸನ್ನು ಕೊಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಮತ್ತು ಇಂಡಿಯಲ್ಲಿ ಮಾತ್ರ ನೋಟಿಸು-ವಿಚಾರಣೆ ಮಾಡದೆ ಕೆಲವು ರೈತರ ಆರ್ಟಿಸಿ ಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊನವಾಡದಲ್ಲಂತೂ ರೈತರ ಯಾವ ಜಮೀನಿಗೂ ನೋಟಿಸು ಕೊಡಲಾಗಿಲ್ಲ. ಅಲ್ಲಿ ವಕ್ಫ್ ಬೋರ್ಡಿಗೆ ಇರುವುದೇ ಕೇವಲ 14 ಎಕರೆ ಜಮೀನು. ಉಳಿದಂತೆ ಸರ್ಕಾರ ವಕ್ಫ್ ಜಮೀನಿಗೆ ಸಂಬಂಧಪಟ್ಟಂತೆ ಎಲ್ಲಾ ಕ್ರಮಗಳನ್ನು ನಿಲ್ಲಿಸಿದೆ. ಆದರೆ ಬಿಜೆಪಿ-ಸಂಘಪರಿವಾರ ಮಾತ್ರ ರಾಜ್ಯಾದ್ಯಂತ ಎಲ್ಲಾ ರೈತರಲ್ಲೂ ಅಪಾರವಾದ ಆತಂಕವನ್ನು ಹುಟ್ಟುಹಾಕುವ ರೀತಿಯಲ್ಲಿ ಪ್ರಚಾರ ಕೈಗೊಂಡಿದೆ.
” ಒಮ್ಮೆ ವಕ್ಫ್ ನೋಟಿಸು ಕೊಟ್ಟರೆ ಯಾವ ಕೋರ್ಟುಗಳೂ ಕೂಡ ಅದನ್ನು ನಿಲ್ಲಿಸಲಾಗುವುದಿಲ್ಲ, ಯಾವುದೇ ರೈತನ ಜಮೀನಿಗೆ ಬಂದು ವಕ್ಫ್ ಬೋರ್ಡ್ ಇದು ತನ್ನ ಜಮೀನು ಎಂದರೆ ಅದು ಅವರದ್ದೇ ಆಗಿಬಿಡುತ್ತದೆ, ಆದ್ದರಿಂದ ರೈತರು ಕೂಡಲೇ ತಹಶೀಲ್ದಾರ್ ಕಚೇರಿಗೆ ಹೋಗಿ ತಮ್ಮ ಜಮೀನು ತಮ್ಮ ಹೆಸರಲ್ಲೇ ಇದೆಯೇ ಇಲ್ಲವೇ ಪರಿಶೀಲಿಸಿಕೊಳ್ಳಿ” ಎಂದೆಲ್ಲಾ ಅಪಪ್ರಚಾರ ಮಾಡುತ್ತಾ ರೈತರಲ್ಲಿ ಹುಸಿ ಆತಂಕವನ್ನು ಮೂಡಿಸಿ ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ. ವಕ್ಫ್ ವಿಷಯದದ ಬಗ್ಗೆ ಹೆಚ್ಚು ಅರಿವಿಲ್ಲದ ಕಾರಣ ಈಗಾಗಲೇ ಕೃಷಿ ಬಿಕ್ಕಟ್ಟು, ಸಾಲ-ಸೋಲಗಳಿಂದ ಕಂಗೆಟ್ಟಿರುವ ರೈತ ಸಮುದಾಯ ಬಿಜೆಪಿಯ ಅಪಪ್ರಚಾರಕ್ಕೆ ಬಲಿ ಬಿದ್ದು ಆತಂಕಕ್ಕೆ ಒಳಗಾಗಿದೆ.
ಮತ್ತೊಂದು ಕಡೆ ಇದೇ ಸಂಘಪರಿವಾರದಿಂದ ತಮ್ಮ ಅಸ್ಥಿತ್ವ, ಅಸ್ಮಿತೆ, ನಂಬಿಕೆ, ಶ್ರದ್ಧೆ, ಆಹಾರ, ಆಚಾರ, ಹಾಗೂ ನಾಗರಿಕತ್ವಗಳ ಮೇಲೂ ನಿರಂತರ ದಾಳಿ ಎದುರಿಸುತ್ತಿರುವ ಮುಸ್ಲಿಂ ಸಮುದಾಯ ಸಹ ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಬದುಕಿನ ಭಾಗವಾಗಿರುವ ವಕ್ಫ್ ಮೇಲೆ ಸಂಘಿಗಳು ನಡೆಸುತ್ತಿರುವ ಅಪಪ್ರಚಾರ ಹಾಗೂ ಕೇಂದ್ರದಲ್ಲಿ ವಕ್ಫ್ ಅನ್ನೇ ನಾಶ ಮಾಡಲು ತರುತ್ತಿರುವ ತಿದ್ದುಪಡಿಗಳಿಂದ ಕಂಗಾಲಾಗಿದ್ದಾರೆ. ಮುಸ್ಲಿಮರ ಮತ್ತು ರೈತರ ಸಹಜ ಆತಂಕಗಳನ್ನು ನಿವಾರಿಸಿ, ಸಂಘಿಗಳ ದಾಳಿಯಿಂದ ಕಾಪಾಡಬೇಕಾದ ಕಾಂಗ್ರೆಸ್ ಸರ್ಕಾರ ತತ್ ಕ್ಷಣದ ರಾಜಕೀಯ ಲಾಭಗಳನ್ನು ಗಮನದಲ್ಲಿಟ್ಟಿಕೊಂಡು ಬಿಜೆಪಿಯ ಅಜೆಂಡಾಗಳಿಗೆ ಪರೋಕ್ಷವಾಗಿ ಪೂರಕವಾಗಿ ನಡೆದುಕೊಳ್ಳುತ್ತಿದೆ.
ಆದ್ದರಿಂದ ವಕ್ಫ್ ನ ಪರಿಕಲ್ಪನೆ, ಅದರ ನಿರ್ವಹಣೆ, ರೈತ ಜಮೀನಿಗೂ ಅದಕ್ಕೂ ಇರುವ ಸಂಬಂಧದ ಬಗ್ಗೆ ಈವರೆಗೂ ಇದ್ದ ಕಾನೂನು, ಬಿಜೆಪಿಯ ಕೋಮುವಾದಿ ರಾಜಕಾರಣ ಹಾಗೂ ಮುಸ್ಲಿಮರ ಮತ್ತು ರೈತರ ಆತಂಕಗಳೆರಡನ್ನು ನಿವಾರಿಸಿಕೊಳ್ಳಲು ಇರುವ ಮಾರ್ಗಗಳ ಬಗ್ಗೆ ನಾಗರಿಕ ಸಮಾಜ ಕ್ರಿಯಾಶೀಲವಾಗುವ ಅಗತ್ಯವಿದೆ. ಇಲ್ಲದಿದ್ದರೆ ಸಂಘಿಗಳು ಕರ್ನಾಟಕವನ್ನು ಅವಿಶ್ವಾಸ, ಅಭದ್ರತೆ, ಕೋಮುದಳ್ಳುರಿಗಳ ನರಕವನ್ನಾಗಿಸಿ ಹಿಂದೂ ರೈತರನ್ನು ಮುಸ್ಲಿಮರನ್ನು ಇಬ್ಬರನ್ನು ಬಲಿ ತೆಗೆದುಕೊಳ್ಳುತ್ತಾರೆ. ಅದ್ದರಿಂದ ಈ ವಿಷಯದ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
ವಕ್ಫ್ ಎಂದರೇನು?
ವಕ್ಫ್ ಎಂಬುದು ಒಂದು ಅರಬ್ಬಿ ಪದ. ಇದರ ಅರ್ಥ ದೇವರ ಹೆಸರಿನಲ್ಲಿ ಕೊಟ್ಟ ದತ್ತಿ ಎಂತಲೂ ಮತ್ತು ಈ ದತ್ತಿ ಮತ್ತೆ ಬೇರೆಯವರಿಗೆ ಪರಭಾರೆ ಆಗದ ಶಾಶ್ವತ ಹಾಗೂ ಅಂತಿಮ ಕೊಡುಗೆ ಎಂದು ಆಗುತ್ತದೆ. . ಇಸ್ಲಾಮಿನಲ್ಲಿ ನೈಜ ಅನುಯಾಯಿಗಳಾದವರು ಪರ್ತಿವರ್ಷ ತಮ್ಮ ಆದಾಯದ ಶೇ. 2.5 ರಷ್ಟನ್ನು ಸಮಾಜಕ್ಕೆ ಕಡ್ಡಾಯವಾಗಿ ವಿನಿಯೋಗಿಸಬೇಕು. ಇದನ್ನು ಝಕಾತ್ ಎಂದು ಕರೆಯುತ್ತಾರೆ. ಇದಲ್ಲದೆ ಝದಾಕ ಹಾಗೊ ಇನ್ನಿತರ ಕೊಡುಗೆಗಳು ಕಡ್ಡಾಯವಲ್ಲ. ಸ್ವಪ್ರೇರಿತ. ಅದರ ಪ್ರಕಾರ ಇಸ್ಲಾಮ್ ಅನುಯಾಯಿಗಳು ತಮಗೆ ಜೀವನ ನಡೆಸಲು ನ್ಯಾಯಯುತವಾಗಿ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಸ್ವಪ್ರೇರಿತರಾಗಿ ಅದನ್ನು ಸಮುದಾಯದ ಧಾರ್ಮಿಕ, ಪವಿತ್ರ, ಹಾಗೂ ಸಾಮಾಜಿಕ ಕೆಲಸಗಳಿಗೆ ಬಳಸಲು ದತ್ತಿದಾನವಾಗಿ ಕೊಡಬಹುದು. ಈ ರೀತಿ ಪ್ರಧಾನವಾಗಿ ಮುಸ್ಲಿಮರು, ಕೆಲವೊಮ್ಮೆ ಮುಸ್ಲಿಮೇತರರು ಕೂಡ ತಮ್ಮ ಸ್ಥಿರ ಜಾಗೂ ಚರಾಸ್ತಿಗಳನ್ನು ಸಮುದಾಯದ ಒಳಿತಿಗೆ ಕೊಡುವ ದತ್ತಿಯನ್ನು ವಕ್ಫ್ ಎಂದು ಕರೆಯುತ್ತಾರೆ.
ಇದು ಮುಸ್ಲಿಮ್ ಧಾರ್ಮಿಕ ಜೀವನದ ಭಾಗವೂ ಆಗಿದೆ. ಈ ವಕ್ಫ್ ಅನ್ನು ದೇವರ ಒಡೆತನದ ಹೆಸರಲ್ಲಿ ನೀಡಲಾಗಿರುತ್ತಾದ್ದರಿಂದ ಅದನ್ನು ಬಳಸಬಹುದೇ ವಿನಾ ಅದರ ಮೇಲೆ ಯಾರ ಒಡತನವೂ ಇರುವುದಿಲ್ಲ. ಒಡೆತನದ ವರ್ಗಾವಣೆಯೂ ಸಾಧ್ಯವಿಲ್ಲ. ವಕ್ಫ್ ಆಸ್ತಿಪಾಸ್ತಿಗಳನ್ನು ಪ್ರಧಾನವಾಗಿ ಮುಸ್ಲಿಮ್ ಸಮುದಾಯದ ಬಲ್ಲಿದರೇ ನೀಡಿರುತ್ತಾರೆ. ಅದರ ಜೊತೆಗೆ ಮುಸ್ಲಿಮ್ ಮತ್ತು ಹಿಂದೂ ದೊರೆಗಳೂ ಕೂಡ ಇತಿಹಾಸದಲ್ಲಿ ದೇವಸ್ಥಾನಗಳಿಗೆ , ಗುರುದ್ವಾರಗಳಿಗೆ ಜಮೀನು ಕೊಟ್ಟಂತೆ ಮಸೀದಿ ಮತ್ತು ದರ್ಗಾದ ಹೆಸರಿನಲ್ಲೂ ವಕ್ಫ್ ಜಮೀನುಗಳನ್ನು ಕೊಟ್ಟಿದ್ದಾರೆ.
ಸಾಮಾನ್ಯವಾಗಿ ವಕ್ಫ್ ಇಂದ ಸಮುದಾಯದ ಅಶಕ್ತರಿಗೆ ಸಹಾಯ, ಸಹಕಾರ, ಮಸೀದಿ , ದರ್ಗಾ ನಿರ್ವಹಣೆ, ಖಬರ್ಸ್ಥಾನ್, ಮದ್ರಸಾಗಳ ನಿರ್ಮಾಣ, ನಿರ್ವಹಣೆ, ಅನಾಥರ, ವಿಧವೆಯರ, ಅಶಕ್ತರ ಬದುಕಿಗೆ ನೆರವು, ಶಿಕ್ಷಣ ಸಂಸ್ಥೆಗಳ ನಿರ್ಮಾಣ-ನಿರ್ವಹಣೆ ಇತ್ಯಾದಿಗಳನ್ನು ಮಾಡುತ್ತಾರೆ. ಇದರ ಪ್ರಧಾನ ಫಲಾನುಭವಿಗಳು ಮುಸ್ಲಿಮರೇ ಆಗಿದ್ದರೂ ಶಿಕ್ಷಣ, ರಸ್ತೆ, ಸಹಾಯ ಧನ, ಇನ್ನಿತರ ಸಾರ್ವಜನಿಕ ಉಪಯೋಗಿ ರೂಪದ ವಕ್ಫ್ಗಳ ಫಲಾನುಭವಿಗಳು ಹಿಂದೂಗಳು ಮತ್ತು ಇತರ ಮುಸ್ಲಿಮೇತರರೂ ಕೂಡ ಆಗಿರುತ್ತಾರೆ.
ವಕ್ಫ್ ಬೋರ್ಡ್ ಎಂದರೇನು? ಅದು ರೂಪುಗೊಂಡಿದ್ದು ಯಾವಾಗ?
ಮುಸ್ಲಿಂ ಸಮುದಾಯದ ಹಾಗೂ ಸಮಾಜದ ಒಟ್ಟಾರೆ ಒಳಿತಿಗಾಗಿ ಈ ರೀತಿ ವಕ್ಫ್ ಸ್ಥಿರ ಹಾಗೂ ಚರಾಸ್ತಿಗಳು ಸಂಗ್ರಹವಾಗತೊಡಗಿದಾಗ ಅದರ ಪರಿಣಾಮಕಾರಿ ನಿರ್ವಹಣೆಗಾಗಿ ಸಮುದಾಯವೇ ವಕ್ಫ್ ಉಸ್ತುವಾರಿ ಸಮಿತಿಗಳನ್ನು ರಚಿಸಿಕೊಂಡಿತ್ತು. ಬ್ರಿಟಿಷರ ಕಾಲದಲ್ಲಿ 1857 ರ ಸ್ವಾತಂತ್ರ್ಯ ಸಂಗ್ರಾಮವಾದ ಮೇಲೆ ಭಾರತೀಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ಮಧ್ಯಪ್ರವೆಶ ಮಾಡಬಾರದೆಂದು ಬ್ರಿಟಿಷರು ತೀರ್ಮಾನಿಸಿದ್ದರೂ, 19 ನೇ ಶತಮಾನದ ಅಂತ್ಯದ ಹೊತ್ತಿಗೆ ತಮಿಳುನಾಡಿನ ಎರಡು ಬ್ರಾಹ್ಮಣ ದೇವಸ್ಥಾನಗಳ ಸಂಪತ್ತಿನ ಒಡೆತನಗಳ ಬಗ್ಗೆ ಭುಗಿಲೆದ್ದ ವಿವಾದವನ್ನು ಬಗೆಹರಿಸಲು ದೇವಸ್ಥಾನ ಮಂಡಳಿಯೇ ಬ್ರಿಟಿಷರನ್ನು ಕೋರಿಕೊಂಡಿತು. ಅದರ ಭಾಗವಾಗಿ 20 ನೇ ಶತಮಾನದ ಪ್ರಾರಂಭದಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳ ಸ್ವತ್ತು ನಿರ್ವಹಣೆಯನ್ನು ನಿಯಂತ್ರಣ ಮಾಡಲು ಬ್ರಿಟಿಷರು ಕಾನೂನುಗಳನ್ನು ಮಾಡಿದರು. ಅದರ ಭಾಗವಾಗಿಯೇ ಹಿಂದೂಗಳ ಧಾರ್ಮಿಕ ದತ್ತಿ ಕಾಯಿದೆಯೂ, 1913 ರಲ್ಲಿ ವಕ್ಫ್ ಕಾಯಿದೆಯೂ ರೂಪುಗೊಂಡಿತು. ಅದರ ಭಾಗವಾಗಿ ಮುಸ್ಲಿಮರ ದತ್ತಿಗಳನ್ನು ನಿರ್ವಹಿಸಲು ವಕ್ಫ್ ಬೋರ್ಡ್ ಕೂಡ ರೂಪುಗೊಂಡಿತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಕ್ಫ್ ಮತ್ತು ಇತರ ಧರ್ಮೀಯರ ಧಾರ್ಮಿಕ ದತ್ತಿಗಳು
ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಭಾರತವನ್ನು ಒಂದು ಸರ್ವ ಧರ್ಮ ಸಮಭಾವೀ ಹಾಗೂ ಎಲ್ಲರಿಗೂ ಇತರ ಸ್ವಾತಂತ್ರ್ಯಗಳ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನೂ ಖಾತರಿ ಮಾಡುವ ಸಂವಿಧಾನವು 1950 ರ ಜನವರಿ 26 ರಂದು ಜಾರಿಗೆ ಬಂತು. ಸಂವಿಧಾನದಲ್ಲಿ ಈ ದೇಶದ ಜನರಿಗೆ ಹಲವು ಮೂಲಭೂತ ಹಕ್ಕುಗಳನ್ನು ಕೊಡಲಾಗಿದೆ. ಅದರಲ್ಲಿ ಆರ್ಟಿಕಲ್ 25, 26, 27 ಮತ್ತು 28 ಈ ದೇಶದ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಖಾತರಿ ಮಾಡುತ್ತದೆ. ಈ ದೇಶದ ಎಲ್ಲಾ ಜನರಿಗೆ ಅವರು ಬಯಸುವ ಧರ್ಮವನ್ನು ಆಚರಿಸುವ ಹಾಗೂ ಅಚರಿಸದೇ ಇರುವ ಹಕ್ಕುಗಳನ್ನು ಕೊಡುತ್ತದೆ. ಹಾಗೂ ಆರ್ಟಿಕಲ್ 26 ರ ಎ,ಬಿ,ಸಿ,ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಮತ್ತು ಅವನ್ನು ಕಾನೂನು ರೀತ್ಯ ನಿರ್ವಹಣೆ ಮಾಡುವ ಹಕ್ಕನ್ನು ಕೊಡುತ್ತದೆ.
ಇದರಂತೆ ಹಿಂದೂಗಳು, ಸಿಕ್ಕರು , ಕ್ರಿಸ್ಚಿಯನ್ನರು , ಮುಸ್ಲಿಮರು ಇತರ ಎಲ್ಲಾ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುವುದನ್ನು ಮುಂದುವರೆಸಿದರು. ಈ ಕಾಯಿದೆಯು ಸರ್ಕಾರಕ್ಕೆ ಕಾನೂನಿನ ಪ್ರಕಾರ ಆಸ್ತಿ ನಿರ್ವಹಣೆಯ ವಿಷಯದಲ್ಲಿ ಕಾನೂನು ಪಾಲಿಸಲಾಗುತ್ತಿದೆಯೇ ಇಲ್ಲವೇ ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಸೆಕ್ಯುಲಾರ್ ಅಂಶಗಳಲ್ಲಿ ಮಾತ್ರ ಮದ್ಯಪ್ರವೇಶವನ್ನು ಸೀಮಿತಗೊಳಿಸುತ್ತದೆ.
ಈ ನಿಯಮದ ಭಾಗವಾಗಿಯೇ ಮುಸ್ಲಿಮ್ ಸಮುದಾಯವು ತನ್ನ ಧಾರ್ಮಿಕ, ಪವಿತ್ರ ಹಾಗೂ ದತ್ತಿ ದಾನಗಳ ಸಾಮಾಜಿಕ ಆಚಾರಗಳನ್ನು ಮುನ್ನಡೆಸಲು ಅವಕಾಶ ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ೧೯೫೫ರಲ್ಲಿ ವಕ್ಫ್ ಬೋರ್ಡ್ ಕಾಯಿದೆಯನ್ನು ಜಾರಿ ಮಾಡಿತು. ಇದಕ್ಕೆ 1995 ರಲ್ಲಿ ಹಾಗೂ 2013 ರಲ್ಲಿ ದೊಡ್ಡ ತಿದ್ದುಪಡಿಗಳನ್ನು ಮಾಡಲಾಯಿತು. ಈ ಎರಡೂ ತಿದ್ದುಪಡಿಗಳನ್ನು ಮಾಡುವಾಗ ಸಂಬಧಪಟ್ಟವರ ಜೊತೆಗೆ ವಿಸ್ತ್ರುತವಾದ ಸಮಾಲೋಚನೆಗಳನ್ನು ಅಂದಿನ ಸರ್ಕಾರಗಳು ನಡೆಸಿದ್ದವು. ಇದೀಗ 2024 ರಲ್ಲಿ ಯಾರ ಜೊತೆಯೂ ಸಮಾಲೋಚನೆಯನ್ನೇ ನಡೆಸದೆ ಮೋದಿ ಸರ್ಕಾರ ವಕ್ಫ್ ಕಾಯಿದೆಗೆ ಬೃಹತ್ ತಿದ್ದುಪಡಿಯನ್ನು ತರಲು ಹೊರಟಿದೆ. ಅವುಗಳ ಸ್ವರೂಪವನ್ನು ಮುಂದೆ ಚರ್ಚಿಸೋಣ.
ವಕ್ಫ್ ಬೋರ್ಡ್ ನಿರ್ವಹಣೆ ಹೇಗೆ?
ವಕ್ಫ್ ಕಾಯಿದೆಯ ಭಾಗವಾಗಿ ಪ್ರತಿಯೊಂದು ರಾಜ್ಯವು ಯಾವ ಯಾವ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಗುರುತಿಸಲು ಒಬ್ಬರು ಸರ್ವೇ ಕಮಿಷನರ್ ಅವರನ್ನು ಸರ್ಕಾರ ನೇಮಿಸಬೇಕು. ಕಮಿಷನರ್ ಅವರು ದಾಖಲೆಗಳನ್ನು ಪರಿಶೀಲಿಸಿ ವಕ್ಫ್ ಆಸ್ತಿಯೆಂದು ಗುರುತಿಸಿದ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರ ಅದನ್ನು ಪರಿಶೀಲನೆಗೆ ವಕ್ಫ್ ಬೋರ್ಡಿಗೆ ಕಳಿಸುತ್ತದೆ. ರಾಜ್ಯ ವಕ್ಫ್ ಬೋರ್ಡನ್ನು ಆಡಳಿತ ರೂಢ ಸರ್ಕಾರವೇ ನೇಮಿಸುತ್ತದೆ. ಸಂಬಂಧಪಟ್ಟ ಮಂತ್ರಿಗಳು ಅದರ ಮುಖ್ಯಸ್ಥರಾಗಿರುವುದಲ್ಲದೇ ಮುಸ್ಲಿಮ್ ಶಾಸಕರು, ಸಂಸದರು ಅದರ ಸದಸ್ಯರಾಗಿರುತ್ತಾರೆ. ಹಾಗೂ ಸರ್ಕಾರವು ನೇಮಿಸುವ ಇಸ್ಲಾಮಿಕ್ ಪರಿಣಿತರು ಸಹ ಸದಸ್ಯರಾಗಿರುತ್ತಾರೆ. ಅದೇ ಮಾದರಿಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಗಳು ಅಸ್ಥಿತ್ವದಲ್ಲಿರುತ್ತದೆ.
ಇದಲ್ಲದೆ ಒಂದು ವಕ್ಫ್ ಟ್ರಿಬ್ಯುನಲ್ ಅನ್ನೂ ಕೂಡ ಈ ಕಾಯಿದೆಯ ಪ್ರಕಾರ ಸರ್ಕಾರ ಸ್ಥಾಪಿಸಬೇಕು. ಇದು ವಕ್ಫ್ ಆಸ್ತಿಯ ಘೋಣೆಯ ಬಗ್ಗೆ ತಗಾದೆ ಹುಟ್ಟಿದಾಗ ನ್ಯಾಯ ಪಂಚಾಯತಿಯನ್ನು ಮಾಡುತ್ತದೆ. ವಕ್ಫ್ ಟ್ರಿಬ್ಯುನಲ್ ಅನ್ನೂ ಕೂಡ ಸರ್ಕಾರವೇ ನೇಮಿಸುತ್ತದೆ. ಅದರ ಮುಖ್ಯಸ್ಥರು ಸೆಷನ್ ಮತ್ತು ಜಿಲಾ ನ್ಯಾಯಾಧೀಶರ ಸ್ಥಾಯಿಯ ನ್ಯಾಯಂಗದ ಅಧಿಕಾರಿ, ಹಾಗೂ ಸಹಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಮತ್ತು ಇಸ್ಲಂ ಪರಿಣಿತರು ಸದಸ್ಯರಾಗಿರುತ್ತಾರೆ.
ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ವಕ್ಫ್ ಬೋರ್ಡ್ ಮತ್ತು ವಕ್ಫ್ ಟ್ರಿಬ್ಯುನಲ್ ಎರಡನ್ನು ಸರ್ಕಾರ ನೇಮಿಸುತ್ತದೆ. ಎರಡನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಇದು ಮುಸ್ಲಿಂ ಸಮುದಾಯದ ಸ್ವತಂತ್ರ ನಿರ್ವಹಣೆಯಲ್ಲಿರುವ ಸಂಸ್ಥೆಗಳಲ್ಲ. ಇವು ಬಿಜೆಪಿ ಸರ್ಕಾರವಿದ್ದಾಗ ಬಿಜೆಪಿ ನೇಮಿಸಿರುತ್ತದೆ. ಕಾಂಗ್ರೆಸ್ ಇದ್ದಾಗ ಕಾಂಗ್ರೆಸ್. ಹಾಗೇ ನೋಡಿದರೆ ಮುಸ್ಲಿಂ ಧಾರ್ಮಿಕ ದತ್ತಿ ಸಂಸ್ಥೆಗಳಿಗಿಂತ ಹಿಂದೂ ಹಾಗೂ ಸಿಖ್ ಮಠಗಳ ಮತ್ತು ದೇವಸ್ಥಾನಗಳ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ಸರ್ಕಾರದ ಇಷ್ಟೊಂದು ವ್ಯವಸ್ಥಿತ ಮಧ್ಯಪ್ರವೇಶವಿಲ್ಲ.
ವಕ್ಫ್ ಎಂದ ತಕ್ಷಣ ವಕ್ಫ್ ಆಗುತ್ತದೆಯೇ? ವಕ್ಫ್ ಬೋರ್ಡ್ ತೀರ್ಮಾನಕ್ಕೆ ಅಪೀಲಿಲ್ಲವೇ?
ಇದು ವಕ್ಫ್ ನ ಅರ್ಥ ಮತ್ತು ಅದರ ನಿರ್ವಹಣೆಯ ಸ್ವರೂಪ. ಈಗ ಬಿಜೆಪಿ ಇದರ ಬಗ್ಗೆ ಮಾಡುತ್ತಿರುವ ಅಪಪ್ರಚಾರವನ್ನು ಗಮನಿಸೋಣ. ಅದರಲ್ಲಿ ರೈತರನ್ನು ಕಂಗೆಡಿಸಿರುವುದು ಒಮ್ಮೆ ವಕ್ಫ್ ಎಂದಾದರೆ ಜಮೀನನ್ನು ಕಿತ್ತುಕೊಳ್ಳುತ್ತಾರೆ ಎಂಬ ಪುಕಾರು. ಈಗಾಗಲೇ ಗಮನಿಸಿದಂತೆ ಯಾವುದೇ ಆಸ್ತಿಯನ್ನು ವಕ್ಫ್ ಎಂದು ಗುರುತಿಸುವುದು ಸರ್ಕಾರ ನೇಮಿಸಿದ ಸರ್ವೇ ಕಮಿಷನರ್. ಹಾಗೆ ಘೋಷಣೆ ಆಗುವ ಮುನ್ನ ದಾಖಲೆಗಳನ್ನು ಪರಿಶೀಲಿಸಿರಬೇಕು. ಇದು ಮೊದಲನೇ ಹಂತ. ಆ ನಂತರ ಅದು ವಕ್ಫ್ ಆಸ್ತಿ ಎಂದು ವಕ್ಫ್ ಬೋರ್ಡ್ ಘೋಷಿಸಿದ ನಂತರವೂ ವಕ್ಫ್ ಟ್ರಿಬ್ಯುನಲ್ ಮುಂದೆ ತಗಾದೆ ಹೂಡಬಹುದು. ಜಿಲ್ಲಾ ಹಂತದಲ್ಲೂ. ರಾಜ್ಯ ಮಟ್ಟದಲ್ಲೂ. ಬಿಜೆಪಿ ಹುಟ್ಟಿಸಿರುವ ಮತ್ತೊಂದು ಸುಳ್ಳು ಸುದ್ದಿ ವಕ್ಫ್ ಟ್ರಿಬ್ಯುನಲ್ ತೀರ್ಮಾನಕ್ಕೆ ಕೋರ್ಟಿನಲ್ಲಿ ಅಪೀಲು ಹಾಕಲು ಸಾಧ್ಯವಿಲ್ಲ ಎಂಬುದು. ಇದು ಹಸಿ ಸುಳ್ಳು.
ವಕ್ಫ್ ಟ್ರಿಬ್ಯುನಲ್ಗಳನ್ನು 1995 ರ ವಕ್ಫ್ ಕಾಯಿದೆಯಡಿ ರಚಿಸಲಾಗುತ್ತದೆ. ಆ ಕಾಯಿದೆಯ ಸೆಕ್ಷನ್ 83 (9) ತುಂಬಾ ಸ್ಪಷ್ಟವಾಗಿ ಹೇಳುವಂತೆ ವಕ್ಫ್ನ ತೀರ್ಮಾನವನ್ನು ಮತ್ತು ಅದರ ಹಿಂದಿನ ದಾಖಲೆಗಳ ಸತ್ಯಾಸತ್ಯತೆಗಳನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬಹುದು. ಆಸಕ್ತರು ಸೆಕ್ಷನ್ 83 ರ ಸಂಪೂರ್ಣ ವಿವರಗಳನ್ನು ಈವೆಬ್ ಲಿಂಕಿನಲ್ಲಿ ಪರಿಶೀಲಿಸಬಹುದು: https://indiankanoon.org/doc/84071258/
ರಾಜ್ಯ ವಕ್ಫ್ ಬೋರ್ಡಿನ ಪ್ರಕಾರ ಒಟ್ಟಾರೆ ರಾಜ್ಯದಲ್ಲಿ 26000 ವಕ್ಫ್ ಆಸ್ತಿಗಳಿದ್ದು 10 ಸಾವಿರ ಆಸ್ತಿಗಳು ಮಾತ್ರ ದಾಖಲಾತಿಯಾಗಿದೆ. ಒಂದು ಅಂದಾಜಿನ ಪ್ರಕಾರ ವಕ್ಫ್ ಆಸ್ತಿಯ ಘೋಷಣೆಯನು ಪ್ರಶ್ನಿಸಿ ಜಿಲಾ ಟ್ರಿಬ್ಯುನಲ್ ಹಾಗೂ ರಾಜ್ಯ ಟ್ರಿಬುನಲ್ ಗಳ ಮುಂದೆ 3500 ಕೂ ಹೆಚ್ಚು ತಗಾದೆಗಳಿವೆ. ಹಾಗೂ ಹೈಕೋರ್ಟಿನಲ್ಲೇ 800ಕ್ಕೂ ಹೆಚ್ಚು ತಗಾದೆಗಳು ಬಾಕಿ ಇವೆ. ಹೀಗಾಗಿ ವಕ್ಫ್ ಆದೆಶಕ್ಕೆ ಅಪೀಲಿಲ್ಲ ಎನ್ನುವ ಬಿಜೆಪಿಯ ವಾದ ಹಸಿ ಸುಳ್ಳು. ಕೇವಲ ರೈತರಿಗೆ ಆತಂಕ ಹುಟ್ಟಿಸುವುದು ಮಾತ್ರ ಅದರ ಉದ್ದೇಶ.
ಅಷ್ಟು ಮಾತ್ರವಲ್ಲ. 2024 ರ ಆಗಸ್ಟ್ ನಲ್ಲಿ ಕರ್ನಾಟಕದ ಹೈಕೋರ್ಟು ಸರಿಯಾದ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಅನುಸರಿಸದೆ ಮತ್ತು ನೋಟಿಸು ನೀಡದೆ ದಾಖಲೆಗಳಲ್ಲಿ ವಕ್ಫ್ ಒಡೆತನ ಎಂದು ನಮೂದಿಸಿದ ಮಾತ್ರಕ್ಕೆ ಅದು ವಕ್ಫ್ ಆಸ್ತಿಯಾಗದು ಎಂದು ಸ್ಪಷ್ಟವಾದ ತೀರ್ಪು ನೀಡಿದೆ. ((https://www.livelaw.in/high-court/karnataka-high-court/karnataka-high-court-ruling-waqf-property-status-and-name-changes-revenue-records-267250) ಹೀಗಾಗಿ ರೈತರ ಆತಂಕಕ್ಕೆ ಯಾವ ಕಾರಣವೂ ಇಲ್ಲ. ಬಿಜೆಪಿಯು ರೈತರ ಆತಂಕವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
ದೇಶಾದ್ಯಂತ ವಕ್ಫ್ ಬೋರ್ಡಿಗೆ ಇರುವ ಜಮೀನೆಷ್ಟು? ದೇವಸ್ಥಾನಗಳಿಗೆಷ್ಟು?
ದೇಶದಲ್ಲಿ ರಕ್ಷಣಾ ಇಲಾಖೆಗೆ 35 ಲಕ್ಷ ಎಕರೆ, ರೈಲ್ವೆಗೆ 16 ಲಕ್ಷ ಎಕರೆ ಬಿಟ್ಟರೆ ಅತಿ ಹೆಚ್ಚು ಜಮೀನಿರುವುದು ವಕ್ಫ್ ಬೋರ್ಡಿಗೆ -9 ಲಕ್ಷ ಎಕರೆ- ಎಂಬಾ ಅರ್ಧ ಸತ್ಯವನ್ನು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ವಾಸ್ತವದಲ್ಲಿ ರಕ್ಷಣಾ ಇಲಾಖೆಯಷ್ಟೆ ಅಥವಾ ಆದಕ್ಕಿಂತ ಸ್ವಲ್ಪ ಕಡಿಮೆ ಭೂಮಿಯ ಒಡೆತನವನ್ನು ಹೊಂದಿರುವುದು ದೇಶದಲಿ ಹಿಂದೂ ದೇವಸ್ಥಾನಗಳು ಮತ್ತು ಮಠಗಳು. ಉದಾಹರಣೆಗೆ ಹಾಲಿ ಆಂಧ್ರಪ್ರದೇಶ ರಾಜ್ಯ ಒಂದರಲ್ಲೇ ದೇವಸ್ಥಾನಗಳು ಮತ್ತು ಮಠಗಳಿಗೆ 4.2 ಲಕ್ಷ ಅಕರೆ ಜಮೀನಿದೆ. ತಮಿಳುನಾಡಿನಲ್ಲಿ 5ಲಕ್ಷ ಎಕರೆ ಜಮೀನಿದೆ. ಹೀಗೆ ಎರಡು ರಾಜ್ಯಗಳಲ್ಲೇ ಹಿಂದೂ ದೇವಸ್ಥಾನ ಮತ್ತು ಮಠಗಳಿಗೆ 9 ಲಕ್ಷಕ್ಕೂ ಹೆಚ್ಚು ಎಕರೆ ಜಮೀನಿದೆ. ಅದರಲ್ಲಿ ಉಳುತ್ತಿರುವ ಹಿಂದೂ ರೈತರಿಗೆ ಸರ್ಕಾರಗಳು ಎತ್ತಂಗಡಿ ನೋಟಿಸು ಕೊಡುತ್ತಿವೆ.
ವಾಸ್ತವವಾಗಿ ರಾಜ್ಯ ವಕ್ಫ್ ಬೋರ್ಡಿನ ಪ್ರಕಾರ ವಕ್ಫ್ ಬೋರ್ಡಿಗೆ 1.08 ಲಕ್ಷ ಎಕರೆ ಆಸ್ತಿಯಿದ್ದು 85000 ಎಕರೆ ಒತ್ತುವರಿಯಾಗಿದೆ. ಅವುಗಳಲ್ಲಿ ಬಹುಪಾಲು ಇನಾಮ್ತಿ ರದ್ಧತಿ ಮತ್ತು ಭೂ ಸುಧಾರಣೆ ಕಾಯಿದೆ ಹಾಗೂ ಸರ್ಕಾರಗಳ ವಶದ ಮೂಲಕ ಹಾಗೂ ಒತ್ತುವರಿಗಳ ಮೂಲಕ ಕಳೆದುಕೊಳ್ಳಲಾಗಿದೆ. ಇಂದು ಕರ್ನಾಟಕದಲ್ಲಿ 113 ಲಕ್ಷ ಎಕರೆ ಜಮೀನುಗಳನ್ನು ಸಾಗುವಳಿ ಮಾಡಲಾಗುತ್ತಿದೆ. ಅದರಲ್ಲಿ ವಕ್ಫ್ ನ ಮೂಲ ಒಡೆತನದಲ್ಲಿ ಇದ್ದದ್ದೇ ಕೇವಲ ಒಂದು ಲಕ್ಷ ಎಕರೆ. ಅದರಲ್ಲಿ ಈಗ ಅದರ ಬಳಿ ಇರುವುದು ಕೇವಲ 20 ಸಾವಿರ ಎಕರೆ. ಅಂದರೆ ಅದು ಕರ್ನಾಟಕದ ರೈತರ ಹಿಡುವಳಿಯ ಶೇ. 0.01ರಷ್ಟು ಅಲ್ಲ. ಆದರೆ ಅದನ್ನು ಬಿಜೆಪಿ ಇಡಿ ರಾಜ್ಯದ ಸಮಸ್ಯೆಯನ್ನಾಗಿ ಮಾಡುತ್ತಿದೆ.
ಬಿಜೆಪಿಯ ವಕ್ಫ್ ವಿರೋಧಕ್ಕೆ ರೈತಪರತೆ ಕಾರಣವೇ?
ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲೂ ವಿಜಾಪುರ ಹಾಗೂ ಇನ್ನಿತರ ಕಡೆಗಳಲ್ಲಿ ರೈತರಿಗೆ ಬಿಜೆಪಿ ನೇಮಿಸಿದ ವಕ್ಫ್ ಬೋರ್ಡೇ ನೋಟಿಸು ಕೊಟ್ಟಿತ್ತು. ಮುಖ್ಯಮಂತ್ರಿ ಬೊಮ್ಮಾಯಿಯವರೇ ಒತ್ತುವರಿಯಾದ ವಕ್ಫ್ ಜಮೀನನ್ನು ವಾಪಸ್ ಪಡೆದುಕೊಳ್ಳದಿದ್ದರೆ ಭಗವಂತನು ಮುಸ್ಲಿಂನಾಯಕರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದರು. ಬಿಜೆಪಿಯ ಪ್ರಣಾಳಿಕೆಯಲ್ಲೂ ಒತ್ತುವರಿಯಾದ ವಕ್ಫ್ ಜಮೀನನ್ನು ಮರಳಿ ಪಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಲಾಗಿತ್ತು. ಹೀಗಾಗಿ ಬಿಜೆಪಿ ಕಾಂಗ್ರೆಸ್ ಕೊಟ್ಟಿರುವ ನೋಟಿಸಿಗೆ ವಿರೋಧ ಮಾಡುತ್ತಿರುವುದರಲ್ಲಿ ಕ್ಷುಲ್ಲಕ ರಾಜಕೀಯ ಬಿಟ್ಟರೆ ಆದರಲ್ಲಿ ರೈತಪರತೆ ಇಲ್ಲ.
ಈಗಾಗಲೇ ಗಮನಿಸಿದಂತೆ ವಕ್ಫ್ ಬೋರ್ಡುಗಳಿಗಿಂತ ದೇವಸ್ಥಾನ ಮತ್ತ್ ಮಠಗಳ ಬಳಿ ಅತಿ ಹೆಚ್ಚು ಜಮೀನುಗಳಿವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಂಧ್ರದಲ್ಲಿ ಅಧಿಕಾರಕ್ಕೆ ಬಂದ ಟಿಡಿಪಿ-ಬಿಜೆಪಿ ಸರ್ಕಾರ ಅದರಲ್ಲಿ 87000 ಎಕರೆಯನು ರೈತರು ಒತ್ತುವರಿ ಮಾಡಿದ್ದಾರೆಂದು ಗುರುತಿಸಿ ಅವರನ್ನು ಎತ್ತಂಗಡಿ ಮಾಡಲು ನೋಟಿಸು ಕೊಡುವುದಾಗಿ ಘೋಷಿಸಿದೆ. ಹಾಗೆಯೇ ಒರಿಸ್ಸಾದ ಬಿಜೆಪಿ ಸರ್ಕಾರವೂ ದೇವಸ್ಥಾನಗಳ ಜಮೀನಿಂದ ಹಿಂದೂ ರೈತರನ್ನು ಎತ್ತಂಗಡಿ ಮಾಡುವ ಸಿದ್ಧತೆಯಲ್ಲಿದೆ. ದೇವಸ್ಥಾನ ಮತ್ತು ಮಠಗಳ ಜಮೀನಿನ ತಗಾದೆಯ ವಿಷಯದಲ್ಲಿ ವಕ್ಫ್ ಟ್ರಿಬುನಲ್ ರೀತಿಯ ವ್ಯವಸ್ಥೆಯೂ ಇಲ್ಲ. ಅದನ್ನು ನೇರವಾಗಿ ಇತರ ಕೋರ್ಟುಗಳಲ್ಲೇ ಪ್ರಶ್ನಿಸಬೇಕು. ಇದು ಬಿಜೆಪಿಯ ಸೋಗಲಾಡಿತನ..
ಅಷ್ಟು ಮಾತ್ರವಲ್ಲ, ತಾನು ಅಧಿಕಾರದಲ್ಲಿ ಇದ್ದ ಕಡೆಗಳೆಲ್ಲಾ ರೈತರನ್ನು ಒಕ್ಕಲೆಬ್ಬಿಸಿ ರೈತರ ಜಮೀನನ್ನು ಕಾರ್ಪೊರೇಟ್ ಗಳಿಗೆ ಪರಭಾರೆ ಮಾಡುತ್ತಿರುವುದು, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಭೂ ಸುಧಾರಣೆಯ ಕಾಯಿದೆಯ ಸೆಕ್ಷನ್ 79 ಎ, ಬಿ., ಸಿಗಳಿಗೆ, 80 ಮತ್ತು 106 ಕ್ಕೆ ತಿದ್ದುಪಡಿ ತಂದು ಉಳುವವನ ಕೈಯಿಂದ ಉಳ್ಳವರ ಕೈಗೆ ಭೂಮಿ ಜಾರುವಂತೆ ಮಾಡಿದ್ದೂ ಕೂಡ ಇದೇ ಬಿಜೆಪಿ ಸರ್ಕಾರ. ಕೇಂದ್ರದಲ್ಲಿ ಮೂರು ರೈತ ವಿರೋಧಿ ಕಾಯಿದೆ ತಂದು ಅದರ ವಿರುದ್ಧ ಹೋರಡುತ್ತಿದ್ದ ರೈತರಲ್ಲಿ 700 ರೈತರನ್ನು ಸಾಯಿಸುದ್ದು ಕೂಡ ಇದೇ ಬಿಜೆಪಿ. ಹೀಗಾಗಿ ಬಿಜೆಪಿಯ ಧೂರ್ತತೆಯನ್ನು ರೈತರು ಅರ್ಥಮಾಡಿಕೊಳ್ಳಬೇಕಿದೆ.
ಮೋದಿ ತರುತ್ತಿರುವ ವಕ್ಫ್ ವಿನಾಶ ಕಾಯಿದೆ
ಈಗಾಗಲೇ ಚರ್ಚಿಸಿದಂತೆ ಬಿಜೆಪಿ ಈ ವಿವಾದವನ್ನು ಹುಟ್ಟಿಹಾಕಿರುವುದೇ ತಾನು ಕೇಂದ್ರದಲ್ಲಿ ಜಾರಿ ಮಾಡಲು ಉದ್ದೇಶಿಸಿರುವ: United Wakf -Management, Empowerment, Efficiency, Development-Act- UMEED- ಮಸೂದೆಯನ್ನು ಜಾರಿಗೆ ತರಲು ಬೇಕಿರುವ ಉದ್ವಿಘ್ನ ಸಮ್ಮತಿಯನ್ನು ರೂಢಿಸಿಕೊಳ್ಳಲು. ವಾಸ್ತವದಲ್ಲಿ ಉರ್ದುವಿನಲ್ಲಿ ಉಮೀದ್ ಎಂದರೆ ನಿರೀಕ್ಷೆ ಭರವಸೆ ಎಂದು. ಆದರೆ ಇದು ಅವೆಲ್ಲವನ್ನು ನಾಶ ಮಾಡುವ ಕಾಯಿದೆಯಾಗಿದೆ.
ಮೊದಲನೆಯದಾಗಿ 1995 ಮತ್ತು 2013ರಲ್ಲಿ ಅಂದಿನ ಸರ್ಕಾರಗಳು ಮಾಡಿದಂತೆ ಮೋದಿ ಸರ್ಕಾರ ತಾನು ಜಾರಿ ಮಾಡಲು ಹೊರಟಿರುವ ವಕ್ಫ್ ಮಸೂದೆಯ ಬಗ್ಗೆ ಯಾರ ಜೊತೆಗೂ ಸಮಾಲೋಚನೆ ಮಾಡಿಲ್ಲ. ಅದು ಪ್ರಸ್ತಾಪಿಸಿರುವ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಆರು ತಿಂಗಳೊಳಗೆ ಕಾಗದ ಪತ್ರ ತೋರಿಸಿ ದಾಖಲಾಗದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಶೇ. 60 ಕ್ಕೂ ಹೆಚ್ಚು ವಕ್ಫ್ ಆಸ್ತಿಗಳು ಮೌಖಿಕ ಒಪ್ಪಂದಗಳ ಮೇಲೆ ಏರ್ಪಟ್ಟವು. ಅಷ್ಟು ಮಾತ್ರವಲ್ಲ ಇನ್ನು ಮುಂದೆ ಜಿಲಾ ವಕ್ಫ್ ತ್ರಿಬ್ಯುನಲ್ ಮತ್ತು ಸರ್ವೇ ಕಮಿಷನರ್ಗೆ ಇದ್ದ್ದ ಎಲ್ಲಾ ಜವಾಬ್ದಾರಿಗಳನ್ನು ಒಬ್ಬ ಜಿಲಾಧಿಕಾರಿಗೆ ನೀಡಲಾಗಿದೆ. ಅದರಲ್ಲೊ ಒಂದು ಆಸ್ತಿ ಸರ್ಕಾರಕ್ಕೆ ಸೇರಿದ್ದೋ ಅಥವಾ ವಕ್ಫ್ ಗೋ ಎಂದು ತೀರ್ಮಾನ ಮಾಡುವ ನ್ಯಾಯಿಕ ಅಧಿಕಾರವನ್ನು ಕೂಡ ಕಾರ್ಯಾಂಗದ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ತೀರ್ಮಾನವೇ ಅಂತಿಮ. ಅದನ್ನು ಹೈಕೋರ್ಟಿನಲ್ಲೇ ಪ್ರಶ್ನಿಸಬೇಕು. ಅಷ್ಟು ಮಾತ್ರವಲ್ಲದೆ ಕೇಂದ್ರೀಯ ವಕ್ಫ್ ಕೌನ್ಸಿಲ್ ಅನ್ನು ರದ್ದು ಮಾಡಲಾಗಿದೆ. ಹಿಂದೆ ಇದ್ದಂತೆ ಸರ್ವೇ ಕಮಿಷನರ್, ವಕ್ಫ್ ಬೋರ್ಡ್ ಮತ್ತು ವಕ್ಫ್ ಟ್ರಿಬ್ಯುನಲಗೆ ನೇಮಕವಾಗುವ ಸರ್ಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಶರತ್ತನ್ನು ತೆಗೆದು ಹಾಕಲಾಗಿದೆ. ಅಲ್ಲದೆ ವಕ್ಫ್ ಬೋರ್ಡಿನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಿಸಲಾಗಿದೆ. ಆದರೆ ಈಬಗೆಯ ಶರತ್ತು ಹಿಂದೂ ಧಾರ್ಮಿಕ ಅಥವಾ ಸಿಖ್ ಅಥವಾ ಕ್ರಿಸ್ಚಿಯನ್ ಸಂಸ್ಥೆಗಳಿಗೆ ಇಲ್ಲ. ಹೀಗಾಗಿ ಇದರ ಹಿಂದಿನ ದುರುದ್ದೇಶ ಸ್ಪಷ್ಟ.
ಈವರೆಗೆ ವಕ್ಫ್ ಕಾಯಿದೆಗಳಲ್ಲಿ ತಿದ್ದುಪಡಿ ಆಗುತ್ತಿದ್ದದ್ದು ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಮತ್ತು ಒತ್ತುವರಿಯಾದ ವಕ್ಫ್ ಜಮೀನನ್ನು ಆಸ್ತಿಗಳನ್ನು ಪಡೆಯಲು. ಆದರೆ ಮೋದಿ ಸರ್ಕಾರ ತರುತ್ತಿರುವ ತಿದ್ದುಪಡಿ ವಕ್ಫ್ ಆಸ್ತಿಗಳನ್ನು ಸರ್ಕಾರ ಒತ್ತುವರಿ ಮಾಡಲು ಮತ್ತು ವಕ್ಫಿನ ಇಸ್ಲಾಮಿಕ್ ಧಾರ್ಮಿಕತೆಯನ್ನು ನಾಶಮಾಡಲು. ಹಾಗೆ ನೋಡಿದರೆ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರಿ ಹಿಡಿತದಿಂದ ವಿಮೋಚನೆ ಮಾಡಬೇಕೆಂದು ಉಗ್ರವಾಗಿ ಆಗ್ರಹಿಸುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ .. ಮುಸ್ಲಿಂ ವಕ್ಫ್ ವಿಷಯದಲ್ಲಿ ಸರ್ಕಾರಿ ಹಿಡಿತವನ್ನ್ ಹೆಚ್ಚಿಸುವ ಮತ್ತು ಮುಸ್ಲಿಂ ಆಸ್ತಿಗಳನ್ನು ರಾಷ್ಟ್ರೀಕರಿಸುವ ಹಿಂದೂತ್ವವಾದಿ ದುರುದ್ದೇಶವನ್ನು ಹೊಂದಿದೆ. ಇದು ಮುಸ್ಲಿಮರ ಅಸ್ಥಿತ್ವ, ಅಸ್ಮಿತೆ, ಬದುಕು ಮತ್ತು ನಾಗರಿಕತ್ವವನ್ನೇ ನಾಶ ಮಾಡುವ ಉಗ್ರ ಹಿಂದೊತ್ವ ಯೋಜನೆಯ ಭಾಗವಾಗಿದೆ. ಅದ್ದರಿಂದಲೇ ಬಿಜೆಪಿಯ ವಕ್ಫ್ ವಿರೋಧ ಮುಸ್ಲಿಮರನ್ನು ಕಂಗಾಲು ಮಾಡುತ್ತಿದೆ.
ಮುಸ್ಲಿಮ್ ಆತಂಕ-ರೈತರ ಅತಂಕ ಬಗೆಹರಿಸುವ ಮಾರ್ಗ
ಮತ್ತೊಂದು ಕಡೆ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಜಮೀನು ನಿಮ್ಮದಲ್ಲ ಎಂಬ ನೋಟಿಸು ಬಂದರೆ ಸಹಜವಾಗಿಯೇ ಈಗಾಗಲೇ ಜರ್ಝರಿತವಾಗಿರುವ ರೈತರು ಮತ್ತಷ್ಟು ಕಂಗಾಲಾಗುತ್ತಾರೆ . . ಆದರೆ 1998 ಜನವರಿ 28 ರಂದು ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಕೊಟ್ಟ ತೀರ್ಪಿನ ಪ್ರಕಾರವೂ ಒಮ್ಮೆ ಒಂದು ಆಸ್ತಿಯ ಸ್ವರೂಪ ವಕ್ಫ್ ಸ್ವರೂಪದ್ದಾಗಿದ್ದಲ್ಲಿ ಅದು ಶಾಶ್ವತವಾಗಿ ವಕ್ಫ್ ಸ್ವರೂಪದ್ದೇ ಆಗಿರುತ್ತೆ. ಅದರ ಒಡೆತನವನ್ನು ವರ್ಗಾವಣೆ ಮಾಡಲು ಬರುವುದಿಲ್ಲ. ಆ ಆದೇಶದ ಮುಂದುವರೆಕೆಯಾಗಿಯೇ ಈಗ ಒತ್ತುವರಿಯಾಗಿರಬಹುದಾದ ಆಸ್ತಿಗಳಿಗೆ ವಕ್ಫ್ ನೋಟಿಸು ಕೊಡುತ್ತಿದೆ. ಆ ಪ್ರಕ್ರಿಯೆಯನ್ನು ನಿಲ್ಲಿಸುವುದು ನ್ಯಾಯಂಗ ನಿಂದನೆಯೇ ಆಗುತ್ತದೆ.
ಹಾಗಿದ್ದರೆ ಪರಿಹಾರವೇನು?
ವಾಸ್ತವದಲ್ಲಿ ವಕ್ಫ್ ಆಸ್ತಿಗಳ ಅತಿ ಹೆಚ್ಚು ದುರ್ಬಳಕೆಯಾಗಿರುವುದು ಮುಸ್ಲಿಂ ಸಮಾಜದ ಶ್ರೀಮಂತರು ಮತ್ತು ರಾಜಕಾರಣಗಳಿಂದಲೇ. ವಕ್ಫ್ ಆಸ್ತಿಗಳ ಒಡೆತನವನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ ಅದರ ಗುತ್ತಿಗೆ ಮತ್ತು ಉಪಗುತ್ತಿಗೆಯನ್ನು ಆ ಆಸ್ತಿಯ ಉಸ್ತುವಾರಿ ನೋಡಿಕೊಳ್ಳುವ ಮುತವಲ್ಲಿ ಮಾಡಬಹುದು ಈ ಅವಕಾಶವನ್ನು ಬಳಸಿಕೊಂಡು ಕೋಟ್ಯಂತರ ರುಪಾಯಿ ಗುತ್ತಿಗೆ ಆದಾಯ ತರಬಹುದಾದ ಆಸ್ತಿಗಳನ್ನು ವಿಂಡ್ಸರ್ ಮ್ಯಾನರ್ ನಂತ ಪಂಚತಾರಾ ಹೋಟೆಲಗಳಿಗೆ ಅಥವಾ ಅಂಬಾನಿಯ ಅರಮನೆಗೆ ಕೆಲವು ಸಾವಿರ ಅಥವಾ ಲಕ್ಷ ರೂಪಾಯಿಗಳಿಗೆ ಗುತ್ತಿಗೆ ಕೊಟ್ಟು ವಾಸ್ತವದ ಹಣವನ್ನು ಅದರ ಉಸ್ತುವಾರಿಗಳು ಮತ್ತು ಅವರ ಹಿಂದಿರುವ ರಾಜಕಾರಣಿಗಳು ಮತ್ತು ಬಲಾಢ್ಯರು ಭ್ರಷ್ಟಾಚಾರ ಮಾಡ್ತ್ತಿದ್ದಾರೆ. ವಕ್ಫ್ ಬೋರ್ಡಿಗೆ ಅತಿ ದೊಡ್ಡ ನಷ್ಟವಾಗುತ್ತಿರುವುದು ನಗರದ ವಕ್ಫ್ ಆಸ್ತಿಗಳ ದುರ್ಬಳಕೆ ಮತ್ತು ಒತ್ತುವರಿಗಳಿಂದ. ನಿಗ್ರಹಿಸಬೇಕಿರುವುದ್ ಅದನ್ನು.
ಗ್ರಾಮಿಣ ಪ್ರದೇಶದಲ್ಲಿ ರೈತರು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ಅಕಸ್ಮಾತ್ ವಕ್ಫ್ ಭೂಮಿಯೇ ಆಗಿದ್ದರೂ ಅದನು ಅವರಿಂದ ಕಿತ್ತುಕೊಳ್ಳುವ್ದರಿಂದ ವಕ್ಫ್ ಗೆ ಯಾವ ಹೊಸ ಆದಾಯವೂ ಬರುವುದಿಲ. ಏಕೆಂದರೆ ಅದು ಉಳುಮೆ ಮಾಡುವ ಭೂಮಿಯೇ ಅಗಿರುತ್ತದೆ. ಆದ್ದರಿಂದ ಅದು ವಕ್ಫ್ ಭೂಮಿಯೆಂದು ಸ್ಥಾಪಿತವಾದರೂ ಅದನ್ನು ರೈತರಿಗೆ ಉಳುಮೆಗೆ ಬಿಟ್ಟುಕೊಡುವುದರ ಮೂಲಕ ಮಾತ್ರ ವಕ್ಫ್ ಗೆ , ಮುಸ್ಲಿಂ ಸಮುದಾಯಕ್ಕೆ ಮತ್ತು ಒಟ್ಟಾರೆ ಸಮಾಜಕ್ಕೆ ಸಾಮಾಜಿಕ ಆರ್ಥಿಕ ಲಾಭ ಹಾಗೂ ನಿಜವಾದ ಪರಿಹಾರ ಸಿಗುತ್ತದೆ.
ಹೀಗಾಗಿ ಈ ಸಮಸ್ಯೆಯನ್ನು ರೈತರು, ವಕ್ಫ್ ಬೋರ್ಡ್, ಮುಸ್ಲಿಂ ಸಮುದಾಯ ಮತ್ತು ಸರ್ಕಾರ ಸೌಹಾರ್ದ ಭಾವದಿಂದ ಒಬ್ಬರ ಆತಂಕವನ್ನು ಮತ್ತೊಬ್ಬರು, ಅರ್ಥಮಾಡಿಕೊಳ್ಳುವ ಭ್ರಾತೃತ್ವದ ಮೂಲಕ ಮಾತ್ರ ಬಗೆಹರಿಸಲು ಸಾಧ್ಯ. ಅದು ಸಾಧ್ಯವಾಗಬೇಕೆಂದರೆ ಸಹೋದರರ ನಡುವೆ ಬೆಂಕಿ ಹಚ್ಚುವ ಬಿಜೆಪಿ ಮತ್ತು ಸಂಘಪರಿವಾರವನ್ನು ರೈತರು ಮತ್ತು ಸಮಾಜ ದೂರವಿಡಬೇಕದ್ದು ಮೊದಲ ಹೆಜ್ಜೆ. ಅಲ್ಲವೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply