ಕಿಟ್ಟು ತುಂಟ ಬಹಳ ಜಾಣ
ನೆಹರು ಎಂದರವಗೆ ಪ್ರಾಣ/
ಚಾಚಾ ರಂತ ಕೋಟಿಗಾಗಿ
ಹಠವ ಮಾಡಿ ತಳೆದ ಮೌನ//
ಅಪ್ಪತೊಟ್ಟ ಕೋಟು ನೋಡಿ
ದಿಟ್ಟಿಸುತಲೆ ಆಸೆ ಪಡುವ/
ಊಟ ಬಿಟ್ಟು ತಟ್ಟೆ ಮುಂದೆ
ಸೊಟ್ಟ ಮೂತಿ ಮಾಡಿ ಅಳುವ//
ಕೆಂಪು,ಕಪ್ಪು,ಕಂದು ಬಣ್ಣ
ಸೆಳೆದು ಕೋಟು ಕಿಟ್ಟು ಕಣ್ಣ/
ನುಣುಪು ಕೋಟ ಜೇಬಿನಲ್ಲಿ
ಅರಳಿದುವ್ವ ಸೊಗಸೆ ಚೆನ್ನ//
ಕಿಟ್ಟು ಆಸೆ ಅರಿತ ಅಪ್ಪ
ಪುಟ್ಟದೊಂದು ಕೋಟು ತರಲು/
ಕಿಟ್ಟು ಹರುಷಕಿಲ್ಲ ಪಾರ..!
ಗೆಳೆಯರಿಗೆ ತೋರಿ ನಗಲು//
ಅಮ್ಮ ಮುದದಿ ಕೂಟು ತೊಡಿಸಿ
ಗುಮ್ಮನಾಟ ಆಡುತಿರಲು/
ಚಾಚಾ ನೆಹರ ಆಸೆಯಂತೆ
ಗುಲಾಬಿ ಜೇಬಿಗಿರಿಸಲು//
ಮಕ್ಕಳ ದಿನ ಸೂಟು,ಕೋಟು
ಟೋಪಿ ತಲೆಯಲಿಟ್ಟನು/
ನೆಹರುರವರ ತತ್ವಗಳನು
ದಿಟ್ಟತನದಿ ನುಡಿದನು//
ಚಾಚಾ ಎನುತ ಮಕ್ಕಳೆಲ್ಲ
ಕಿಟ್ಟು ಸುತ್ತ ನೆರೆದರು/
ಪುಟ್ಟ ಪುಟ್ಟ ಕೈಗಳಲ್ಲಿ
ಕೋಟು ಮುಟ್ಟಿ ನಲಿದರು.//
ಸೌಭಾಗ್ಯ ಮಹಾಂತೇಶ್ ಚಿಕ್ಕಮಗಳೂರು.
Leave a reply