ಹಿಮಾಚಲ ಪ್ರದೇಶದ ರಾಜಕೀಯದಲ್ಲಿ ಸಮೋಸಾಗಳು ಪ್ರಸ್ತುತ ಬಿಸಿ ಬಿಸಿ ಚರ್ಚೆಯಾಗಿದೆ. ರಾಜ್ಯ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಅವರು ಸಭೆಯೊಂದರಲ್ಲಿ ಸವಿಯಬೇಕಿದ್ದ ಸಮೋಸಾಗಳು ಅವರಿಗೆ ತಲುಪದೆ ಕಣ್ಮರೆಯಾಯಿತು. ಇದು ಅಧಿಕಾರಿಗಳನ್ನು ಕೆರಳಿಸಿತು. ಸಿಎಂಗೂ ಕೂಡ ತನ್ನ ಸಮೋಸ ಕಳುವಾಗಿರುವುದು ತಿಳಿದು ಸಿಟ್ಟಿಗೆದ್ದು ಏಕಾಏಕಿ ಸಿಐಡಿ ತನಿಖೆಗೆ ಆದೇಶಿಸಿ ಸಮೋಸ ಕಳ್ಳರನ್ನು ಹಿಡಿಯಲು ಆದೇಶಿಸಿದರು.
ಕೂಡಲೇ ಅಧಿಕಾರಿಗಳು ತನಿಖೆಯನ್ನು ಆರಂಭಿಸಿಯೇ ಬಿಟ್ಟರು. ಈ ವಿಷಯ ತಿಳಿದ ಬಿಜೆಪಿ ಮುಖಂಡರು ಸಿಎಂ ಅವರನ್ನು ಟಾರ್ಗೆಟ್ ಮಾಡಲು ಆರಂಭಿಸಿದರು. ‘ಜನರ ಸಂಕಷ್ಟ, ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸದೇ ಸಮೋಸಾ ಮಾಯವಾಗಿದೆ ಎಂದು ಸಿಐಡಿ ತನಿಖೆ ನಡೆಸುತ್ತೀರಾ?’ ಎಂದು ಟ್ರೋಲ್ ಮಾಡಲು ಆರಂಭಿಸಿದರು. ಈ ವಿಷಯ ಸಾಮಾಜಿಕ ಜಾಲತಾಣಗಳಿಗೆ ತಲುಪುತ್ತಿದ್ದಂತೆ ಅಲ್ಲಿಯೂ ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಸಿಎಂ ಸುಖ್ವಿಂದರ್ ಸಿಂಗ್ ಅವರನ್ನು ನೆಟ್ಟಿಗರು ವಿಪರೀತವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಈ ಕುರಿತು ಮಾಧ್ಯಮದವರು ಸಿಎಂ ಅವರನ್ನು ಪ್ರಶ್ನಿಸಿದಾಗ ಉತ್ತರ ನೀಡದೆ ಅಲ್ಲಿಂದ ಹೊರಟು ಹೋದರು. ಇದರೊಂದಿಗೆ ಈ ಬಗ್ಗೆ ತನಿಖೆ ಆರಂಭವಾಗಿದೆ. ಐವರು ಪೊಲೀಸರಿಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ. ಕಠಿಣ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಮೇರೆಗೆ ತನಿಖೆ ನಡೆಯುತ್ತಿದ್ದು, ಅಕ್ಟೋಬರ್ 21ರಂದು ಸಿಎಂ ಸುಖ್ವಿಂದರ್ ಸಿಂಗ್ ಅವರು ಸುಖ್ ರಾಜ್ಯ ಸಿಐಡಿ ಕೇಂದ್ರ ಕಚೇರಿಗೆ ತೆರಳಿದ್ದರು. ಅಲ್ಲಿ ಸೈಬರ್ ವಿಂಗ್ ಸ್ಟೇಷನ್ ಅನ್ನು ಪ್ರಾರಂಭಿಸಿದರು. ಆ ಕಾರ್ಯಕ್ರಮದಲ್ಲಿ ಸಿಎಂಗೆ ಬಡಿಸಲು ವಿಶೇಷವಾದ ಬಿಸಿ ಸಮೋಸವನ್ನು ತರಲಾಗಿತ್ತು. ಪ್ರತ್ಯೇಕ ಬಾಕ್ಸುಗಳಲ್ಲಿ ತರಿಸಲಾಗಿತ್ತು. ಆದರೆ ಮುಖ್ಯಮಂತ್ರಿಗೆ ಕೊಡುವ ಮುನ್ನವೇ ಅದನ್ನು ಅವರು ಎಲ್ಲಾ ಸಿಬ್ಬಂದಿಗಳಿಗೂ ಹಂಚಿದ್ದರು. ಈ ಸಮೋಸಗಳನ್ನು ಸಿಎಂಗೆ ಮಾತ್ರ ನೀಡಬೇಕೆಂಬ ವಿಷಯ ಒಬ್ಬ ಎಸ್ಐಗೆ ಮಾತ್ರವೇ ಗೊತ್ತಿತ್ತೆಂದು ವಿಚಾರಣೆಯಲ್ಲಿ ಸಾಬೀತಾಗಿದೆ.
Leave a reply