‘ಬಾಲ್ಯವೊಂದು ಸಿಹಿಯಾದ ನೆನಪು. ‘ ಅದು ಬಾಲ್ಯಾವಸ್ಥೆಯಲ್ಲ, ಸುಂದರ ಹಸಿರು ವನ ಇದ್ದಂತೆ.’ ಎನ್ನುತ್ತಾನೆ ಕವಿಯೊಬ್ಬ. ಆದರೆ ಅನೇಕ ಹೆಣ್ಣು ಮಕ್ಕಳು ಆ ಸಿಹಿ ನೆನಪುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದಿಗೂ ಕೆಲವು ಹೆತ್ತವರು ಹೆಣ್ಣುಮಕ್ಕಳ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸರಿಯಾದ ವಯಸ್ಸಿಗೆ ಬರುವ ಮುನ್ನವೇ ಮದುವೆ ಮಾಡಬೇಕು ಎಂದು ನಿರ್ಧರಿಸುತ್ತಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್ಸಿಪಿಸಿಆರ್) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಈ ವಿಷಯಗಳನ್ನು ಬಹಿರಂಗಪಡಿಸಿದೆ.
ಬಾಲ್ಯ ವಿವಾಹ ಕಾನೂನು ರೀತ್ಯಾ ಅಪರಾಧ. ಆದರೆ ಅದು ರಾಜಾರೋಷವಾಗಿ ಮುಂದುವರಿಯುತ್ತಲೇ ಇದೆ. ಚಿಕ್ಕಂದಿನಲ್ಲೇ ಹೆಣ್ಣು ಮಕ್ಕಳ ಹೆಗಲ ಮೇಲೆ ಕುಟುಂಬದ ಹೊರೆಯನ್ನು ಹೇರಲಾಗುತ್ತಿದೆ. ಕೆಲವು ಹೆಣ್ಣು ಮಕ್ಕಳು ವರದಕ್ಷಿಣೆಯ ದಾಹಕ್ಕೆ ಬಲಿಯಾಗುತ್ತಿದ್ದಾರೆ. ದೇಶಾದ್ಯಂತ ಪ್ರತಿ ವರ್ಷ ಹದಿನೈದು ಲಕ್ಷ ಮಂದಿ ಬಾಲಕಿಯರಿಗೆ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಇದರಿಂದ ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಆರ್ಥಿಕ ಸ್ವಾವಲಂಬನೆಯ ಕೊರತೆಯಿಂದ ಬಡತನದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದೆ. ಒಂದೆಡೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ‘ಹೆಣ್ಣು ಮಕ್ಕಳ ರಕ್ಷಣೆಯೇ ನಮ್ಮ ಧ್ಯೇಯ’ ಎಂದು ಭಾಷಣಗಳಲ್ಲಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬಾಲ್ಯವಿವಾಹಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದು ಮೋದಿಯವರ ‘ಬೇಟಿ ಬಚಾವೋ-ಬೇಟಿ ಪಡಾವೋ’ ಘೋಷಣೆಯ ಪ್ರತಿಫಲವೇ?
NCPCR ಈ ವರ್ಷ ಏಪ್ರಿಲ್ 1 ರಿಂದ 23 ರವರೆಗೆ ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಜಿಲ್ಲಾ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ ಬಾಲ್ಯ ವಿವಾಹ ತಡೆ ಕಾಯ್ದೆಯ ನಿಬಂಧನೆಗಳ ಪ್ರಕಾರ ವಿವರಗಳನ್ನು ಸಂಗ್ರಹಿಸಿದೆ. ಅದು ಅವುಗಳನ್ನು ಒಟ್ಟುಗೂಡಿಸಿ ಇತ್ತೀಚೆಗೆ ತನ್ನ ವರದಿಯನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಿದೆ. ಸಾಮಾಜಿಕ ಅನ್ಯಾಯ, ಅನಕ್ಷರತೆ, ಹೆಣ್ಣು ಮಕ್ಕಳ ತಾರತಮ್ಯ, ಪೋಷಕರ ಆರ್ಥಿಕ ಸ್ಥಿತಿಗತಿ, ಬಾಲ್ಯವಿವಾಹದಿಂದ ಉಂಟಾಗುವ ನಷ್ಟ ಮತ್ತು ಸಮಸ್ಯೆಗಳು ಮತ್ತು ಕಾನೂನಿನ ಅರಿವಿನ ಕೊರತೆ ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. ಬಾಲ್ಯವಿವಾಹದಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೆ ನಿಂತು ಹೋಗುತ್ತಿದೆ. ಮನೆಗೆಲಸಕ್ಕೆ ಸೀಮಿತವಾಗಿ, ಆರ್ಥಿಕ ಸ್ವಾವಲಂಬನೆಯಿಂದ ದೂರವಾಗುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಅವರ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲ ದೇಶದ ಆರ್ಥಿಕ ಬೆಳವಣಿಗೆಗೂ ಅಡ್ಡಿಯಾಗಿದೆ ಎಂಬುದು ಅಲ್ಲಗಳೆಯಲಾಗದ ಸತ್ಯ.
ಹೆಣ್ಣು ಮಕ್ಕಳು ಓದುವ ವಯಸ್ಸಿನಲ್ಲಿ ಕುಟುಂಬದ ಹೊರೆ ಹೊರಬೇಕಾದ ದುಸ್ಥಿತಿಗೆ ದೂಡಲ್ಪಡುತ್ತಿದ್ದಾರೆ. ಇದಲ್ಲದೆ, ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳವೂ ಹೆಚ್ಚುತ್ತಿದೆ. ಅವರ ಆರೋಗ್ಯ ಸಂರಕ್ಷಣೆಯು ಇಲ್ಲದೇ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸಿ, ಅಕಾಲಿಕ ಶಿಶುಗಳಿಗೆ ಜನ್ಮ ನೀಡುತ್ತಾರೆ. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪ್ರಸ್ತುತ 15-19 ವಯಸ್ಸಿನೊಳಗಿನ ಶೇ.16ರಷ್ಟು ಹೆಣ್ಣು ಮಕ್ಕಳಿಗೆ ಈಗಾಗಲೇ ಮದುವೆಯಾಗಿರುವುದಾಗಿ ಅಂಕಿಅಂಶಗಳು ಬಹಿರಂಗಪಡಿಸಿದೆ. ಅಪಾಯದ ಅಂಚಿನಲ್ಲಿರುವ ಹದಿಹರೆಯದ ಬಾಲಕಿಯರು ಹೆಚ್ಚಾಗಿರುವ ರಾಜ್ಯಗಳು ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಿವೆ.
ಈ ಎಲ್ಲ ಅಂಕಿಅಂಶಗಳನ್ನು ನೋಡಿದರೆ ದೇಶದಲ್ಲಿ ಬಾಲ್ಯವಿವಾಹದಿಂದ ಹೆಣ್ಣುಮಕ್ಕಳು ಎಷ್ಟು ತೀವ್ರತರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅದರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೇಸರಿ ಪಡೆಗಳು ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಮನೆಗೆ ಸೀಮಿತಗೊಳಿಸುವ ನೀತಿಗಳನ್ನು ರೂಪಿಸುತ್ತಿದೆ. ಮನುವಾದ ಮತ್ತು ಸನಾತನ ಧರ್ಮವನ್ನು ಉತ್ತೇಜಿಸುವ ಮೂಲಕ ಮಹಿಳೆಯರ, ಹೆಣ್ಣುಮಕ್ಕಳ ಪರಿಸ್ಥಿತಿ ಅತ್ಯಂತ ತೀವ್ರವಾಗಿ ಹದಗೆಡುತ್ತಿದೆ. ಇವರ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳ ಅಭಿವೃದ್ಧಿಯನ್ನು ಬಯಸುವುದೆಂದರೆ ಮರುಭೂಮಿಯಲ್ಲಿ ನೀರಿನ ಚಿಲುಮೆಯನ್ನು ಹುಡುಕುವಂತಿದೆ. ಈಗಲಾದರೂ ಆಯಾ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹೆಣ್ಣು ಮಗು ಹೊರೆಯಲ್ಲ, ಭವಿಷ್ಯದ ಶಕ್ತಿ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ನಿರಂತರವಾಗಿ ಅರಿವು ಮೂಡಿಸಬೇಕು. ಹೆಣ್ಣು ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸಬೇಕಿದೆ.
Leave a reply