ನ್ಯೂಡೆಲ್ಲಿ : ಖಾಸಗಿ ಒಡೆತನದಲ್ಲಿರುವ ಆಸ್ತಿಯನ್ನು ಸಾರ್ವಜನಿಕ ಒಳಿತಿಗಾಗಿ ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಖಾಸಗಿ ಆಸ್ತಿಯನ್ನು ಸಾರ್ವಜನಿಕ ಸಂಪನ್ಮೂಲವಾಗಿ ಸರ್ಕಾರ ವಶಕ್ಕೆ ಪಡೆಯಬಹುದೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ ಖಾಸಗಿ ಒಡೆತನದ ಆಸ್ತಿಗಳನ್ನು ಸಾರ್ವಜನಿಕ ಪ್ರಯೋಜನಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲು ರಾಜ್ಯಗಳಿಗೆ ಸಾಂವಿಧಾನಿಕವಾಗಿ ಅಧಿಕಾರವಿಲ್ಲ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.
ಸಿಜೆಐ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಒಂಬತ್ತು ಸದಸ್ಯರ ಪೀಠವು 7: 2 ರ ಬಹುಮತದೊಂದಿಗೆ ತೀರ್ಪು ನೀಡಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಸಿಜೆಐ ತೀರ್ಪನ್ನು ಭಾಗಶಃ ಭಿನ್ನಾಭಿಪ್ರಾಯ ಹೊಂದಿದ್ದಾರೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಒಪ್ಪಲಿಲ್ಲ. ಆದರೆ, ಕೆಲವು ಖಾಸಗಿ ಆಸ್ತಿಗಳ ಪ್ರಕರಣದಲ್ಲಿ ರಾಜ್ಯಗಳು ಮೊಕದ್ದಮೆ ಹೂಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನದ 39 (ಬಿ) ವಿಧಿಯ ಅಡಿಯಲ್ಲಿ, ರಾಜ್ಯ ಸರ್ಕಾರಗಳು ಎಲ್ಲಾ ಖಾಸಗಿ ಒಡೆತನದ ಸಂಪನ್ಮೂಲಗಳನ್ನು ವಿತರಣೆಗಾಗಿ ವಶಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಹಿಂದಿನ ತೀರ್ಪನ್ನು ನ್ಯಾಯ ಪೀಠ ತಳ್ಳಿಹಾಕಿತು.
‘ಯಾವುದೇ ಖಾಸಗಿ ಸ್ವತ್ತು ಸಮುದಾಯ ಸಂಪನ್ಮೂಲವಲ್ಲ.. ಎಲ್ಲಾ ಖಾಸಗಿ ಸ್ವತ್ತುಗಳು ಸಮುದಾಯದ ಸಂಪನ್ಮೂಲವಾಗಿದೆ.. ಈ ಎರಡು ವಿಧಾನಗಳು ಪರಸ್ಪರ ಪ್ರತ್ಯೇಕವಾಗಿರುತ್ತವೆ. ಖಾಸಗೀಕರಣ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳ ಬಗ್ಗೆ ಸಮಕಾಲೀನ ವಿಮರ್ಶೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. “1950ರ ದಶಕದ ಭಾರತವನ್ನು ಗಮನದಲ್ಲಿಟ್ಟುಕೊಂಡು ಈಗ ವ್ಯಾಖ್ಯಾನ ಮಾಡಬಾರದು. ಅಂದು ರಾಷ್ಟ್ರೀಕರಣ ನಡೆಯುತ್ತಿತ್ತು. ಇಂದು ಬಂಡವಾಳ ಹೂಡಿಕೆ ಹಿಂಪಡೆಯುವಿಕೆ ನಡೆಯುತ್ತಿದೆ. ಖಾಸಗಿ ಬಂಡವಾಳ ಹೂಡಿಕೆಗಳಿವೆ. ಇದು ರೂಪಾಂತರವಾಗಿದೆ. ಹಾಗಾಗಿ ನ್ಯಾಯಾಲಯದ ವ್ಯಾಖ್ಯಾನ ಹೊಸದಾಗಿರಬೇಕು. ಅದನ್ನು ಪ್ರಸ್ತುತ ಭಾರತಕ್ಕೆ ಅಳವಡಿಸಿಕೊಳ್ಳಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ. ಇತ್ತೀಚೆಗಿನ ವ್ಯಾಖ್ಯಾನಗಳನ್ನು ಪುನರುಚ್ಚರಿಸುತ್ತಾ, ಇದರ ಮೇಲೆ ತೀರ್ಪು ನೀಡಲಾಗಿದೆ.
Leave a reply