ದೀಪಾವಳಿ ಎಂದರೆ ದೀಪಗಳ ಸಾಲು. ಸುತ್ತಮುತ್ತಲಿನ ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ಮೂಡಿಸುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ಜಯ ಎಂಬುದಾಗಿಯೂ ಹೇಳಲಾಗುತ್ತಾರೆ. ಆದರೆ, ಅದರ ಸುತ್ತ ಅನೇಕ ಪೌರಾಣಿಕ ಕಥೆಗಳನ್ನು ಹೆಣೆಯಲಾಗಿದೆ. ಶ್ರೀಕೃಷ್ಣನು ನರಕಾಸುರನೊಡನೆ ಯುದ್ಧ ಮಾಡುವಾಗ ಸೋತನೆಂದು ಅವನ ಪಕ್ಕದಲ್ಲಿ ನಿಂತಿದ್ದ ಸತ್ಯಭಾಮೆಯು ಕೋಪಗೊಂಡು ಬಾಣಗಳ ಸುರಿಮಳೆಗೈದು ನರಕಾಸುರನನ್ನು ಸಂಹರಿಸಿದಳು ಎಂಬ ಪೌರಾಣಿಕ ಕಥೆಯಿದೆ. ಮಹಾಕಾಳಿ ರಾಕ್ಷಸನನ್ನು ವಧಿಸಿದ್ದಕ್ಕಾಗಿ ದೇವಿಯ ನವರಾತ್ರಿಯನ್ನು ಆಚರಿಸುತ್ತಾರೆ ಎಂಬ ಇನ್ನೊಂದು ಕಥೆಯು ಇದೆ. ಅಲ್ಲದೆ, ದಶಹರಾ (ದಸರಾ)ಗೂ ದೀಪಾವಳಿಗೂ ನಿಕಟ ಸಂಬಂಧವಿದೆ. ಆ ಎರಡು ಹಬ್ಬಗಳು ಒಂದರ ನಂತರ ಮತ್ತೊಂದು ಬರುತ್ತವೆ.
ರಾಮನು ಲಂಕಾದ ಹತ್ತು ತಲೆಯ ರಾವಣನನ್ನು ಕೊಂದ ಆದ್ದರಿಂದ ದಸರಾ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ದಶಹರ ಎಂದರೆ ಹತ್ತು ತಲೆಗಳ ಶಿರಚ್ಛೇದ ಎಂದರ್ಥ. ರಾವಣನ ಹತ್ತು ತಲೆಗಳನ್ನು ಕತ್ತರಿಸಿ, ಕೊಂದ ನಂತರ ರಾಮನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುವ ಸಂದರ್ಭವನ್ನು ದೀಪಾವಳಿಯಾಗಿ ಆಚರಿಸಲಾಗುತ್ತಿದೆ ಎಂದು ಕತೆ ಹೇಳುತ್ತಾರೆ. ಪೌರಾಣಿಕ ಕಥೆಗಳು ಚೆನ್ನಾಗಿವೆ, ಆದರೆ ಪೌರಾಣಿಕ ಪಾತ್ರಗಳು ಕೊಂದರೆ ಮೃತಪಟ್ಟರೆ, ಯಶಸ್ಸು ಸಾಧಿಸಿದರೆ ಹಬ್ಬಗಳನ್ನು ಆಚರಿಸುವುದರಲ್ಲಿ ಅರ್ಥವೇನಿದೆ? ಇದರಲ್ಲಿ ನಿಜವಾದ ಧರ್ಮ ಯಾವುದು? ವಿಷಯವನ್ನು ತಿಳಿದುಕೊಳ್ಳುವ ಕುತೂಹಲ, ಹಿಂದಿನದನ್ನು ಪರಿಶೀಲಿಸುವ ಸಾಮರ್ಥ್ಯ ಮತ್ತು ತಾಳ್ಮೆ ಸತ್ಯವನ್ನು ಬಹಿರಂಗಪಡಿಸುತ್ತದೆ. ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆಂದು, ಆಚರಿಸುವುದು ನಮ್ಮ ಸಂಸ್ಕೃತಿಯಂದೋ.. ಕಟ್ಟುಕಥೆಗಳನ್ನಾಧರಿಸಿ, ಆಲೋಚಿಸದೇ ಆಚರಿಸಿ ಸಂಭ್ರಮಿಸುವುದಾದರೆ ಸಂಭ್ರಮಿಸಬಹುದು. ಆದರೆ, ವಾಸ್ತವ ಬೇರೆಯೇ ಇದೆ.
ಸಾಹಿತ್ಯ ಕೃತಿಗಳಲ್ಲಿ ಪಾತ್ರಗಳ ನಡುವೆ ಯುದ್ಧಗಳು ಸಂಭವಿಸಬಹುದು. ಜಗಳಗಳು ಸಂಭವಿಸಬಹುದು. ಒಂದು ಪಾತ್ರ ಯಶಸ್ವಿಯಾಗಬಹುದು. ಇನ್ನೊಂದು ಪಾತ್ರ ಸೋಲಬಹುದು. ಆದ್ದರಿಂದ ಜನರು ತಬ್ಬಿಬ್ಬಾಗಿ ಏಕೆ ಹಬ್ಬವನ್ನು ಆಚರಿಸಬೇಕು? ಪೌರಾಣಿಕ ಪಾತ್ರಗಳು ಸತ್ತಾಗ ಹಬ್ಬಗಳು ಮತ್ತು ಆಚರಣೆಗಳನ್ನು ಏಕೆ ಆಚರಿಸುತ್ತಾರೆ? ಒಂದು ವೇಳೆ ಇಡೀ ಜಗತ್ತಿಗೆ ಸಂಬಂಧಿಸಿದ ವಿಚಾರವಾಗಿದ್ದರೆ, ಪ್ರಪಂಚದ ಎಲ್ಲಾ ದೇಶಗಳು ಒಟ್ಟಾಗಿ ಆಚರಿಸುತ್ತಿದ್ದವು. ಆದರೆ ಭಾರತದಲ್ಲಿ ಬಹುತೇಕ ಎಲ್ಲಾ ಹಬ್ಬಗಳನ್ನು ಪೌರಾಣಿಕ ರಾಕ್ಷಸರ ಸಾವನ್ನು ಸಂಭ್ರಮಿಸಿಯೇ ಏಕೆ ಆಚರಿಸಲಾಗುತ್ತದೆ? ಯೋಚಿಸಬೇಕಲ್ಲವೇ? ರಾಮನು ಆರ್ಯನು. ಹೊರಗಿನಿಂದ ಬಂದ ಆರ್ಯರಿಗೂ ಮತ್ತು ಇಲ್ಲಿನ ಮೂಲನಿವಾಸಿಗಳಾದ ದ್ರಾವಿಡರಿಗೂ ನಡುವಿನ ಸಂಘರ್ಷಗಳನ್ನು ಪುರಾಣಗಳಾಗಿ ಬರೆಯಲಾಗಿದೆ ಎಂದು ಪೆರಿಯಾರ್ ಹೇಳುತ್ತಾರೆ.
ಇಲ್ಲಿನ ಮೂಲನಿವಾಸಿಗಳನ್ನು ಕೋತಿಗಳು (ಮಂಗಗಳು), ರಾಕ್ಷಸರು ಎಂದು ಚಿತ್ರಿಸುವ ಮೂಲಕ ಆರ್ಯರು ಅವಮಾನಿಸಿದ್ದಾರೆ ಎಂದು ಕೂಡ ಅವರು ಹೇಳಿದರು. ಉತ್ತರ ಭಾರತದಲ್ಲಿ ಈ ಹಬ್ಬವನ್ನು ‘ತೌಹರ್’ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ತುಹರಾ ಎಂದರೆ “ನೀವು ಸೋಲಿಸಲ್ಪಟ್ಟಿದ್ದೀರಿ”! ರಾವಣ, ನರಕಾಸುರ ಮೊದಲಾದವರು ಯಾರೇ ಸೋತರೂ ವಿಜಯೋತ್ಸವ ಆಚರಿಸುತ್ತಾರೆ. ಎದುರಾಳಿಯ (ಶತ್ರು) ಸೋಲನ್ನು ಅಥವಾ ಮರಣವನ್ನು ಹಬ್ಬ ಅಥವಾ ಉತ್ಸವವಾಗಿ ಆಚರಿಸುವುದೇ ತೌಹರ್. ಪುರಾಣಗಳೆಲ್ಲವೂ ಬುದ್ಧನ ನಂತರ ಬರೆದದ್ದೇ ಆದ್ದರಿಂದ ಬೌದ್ಧ ಧಮ್ಮವನ್ನು ನಾಶಮಾಡುವ ಕ್ರಮದಲ್ಲಿ ಪುರಾಣಗಳನ್ನು ಬರೆಯಲಾಗಿದೆ ಎಂಬುದು ಅಕ್ಷರಶಃ ಸಾಬೀತಾಗಿದೆ. ಪುಷ್ಯಮಿತ್ರ ಶೃಂಗನನ್ನು ಗಮನದಲ್ಲಿಟ್ಟುಕೊಂಡು ರಾಮನ ಪಾತ್ರವನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿದೆ.
ಇಲ್ಲಿ ಈ ದೀಪಾವಳಿಗೆ ನಿಜವಾದ ಕಾರಣವೇನು? ಇದನ್ನು ಮೊದಲು ಏನೆಂದು ಕರೆಯಲಾಗುತ್ತಿತ್ತು? ಅದು ಜನರ ಬದುಕಿನೊಳಗೆ ಬಂದದ್ದಾದರೂ ಹೇಗೆ? ನಿಜವಾದ ಕಾರಣವನ್ನು ತಿಳಿಯಲು ನಾವು ಗೌತಮ ಬುದ್ಧ ಅಥವಾ ಅವನ ಮಾರ್ಗವನ್ನು ಅಳವಡಿಸಿಕೊಂಡ ಚಕ್ರವರ್ತಿ ಅಶೋಕನ ಬಗ್ಗೆ ಮಾತನಾಡಬೇಕು. ಸಿದ್ಧಾರ್ಥನು ಬುದ್ಧನಾದ ನಂತರ, ಅವನು ತನ್ನ ನಗರವಾದ ಕಪಿಲವಸ್ತು ಪುರಂಗೆ ಹೋಗಲಿಲ್ಲ. ತಂದೆ ಶುದ್ಧೋಧನ ಬುದ್ಧನನ್ನು ಮನವೊಲಿಸಿ ಕರೆತರಲು ಕೆಲವರನ್ನು ಕಳುಹಿಸಿದರು.
ಅವರು ಬುದ್ಧನನ್ನು ಹುಡುಕಿಕೊಂಡು ಹೋದರು. ಆದರೆ, ಅವನ ಪ್ರಭಾವಕ್ಕೊಳಗಾಗಿ ಅವರು ಅವನೊಂದಿಗೆ ಉಳಿದುಬಿಟ್ಟರು. ತಂದೆ ಶುದ್ಧೋಧನ ಜನರನ್ನು ಕಳುಹಿಸುತ್ತಲೇ ಇದ್ದರು. ಆದರೆ, ಹುಡುಕಿಕೊಂಡು ಹೋದವರು ಬುದ್ಧನೊಂದಿಗೆ ಬೌದ್ಧ ಭಿಕ್ಕುಗಳಾಗಿ ಉಳಿದುಕೊಂಡರು. ಹೀಗೆ ಹದಿನೇಳು ವರ್ಷಗಳು ಕಳೆದವು. ಕೊನೆಗೆ ಹೇಗೋ ಬುದ್ಧ ತನ್ನ ನಗರಕ್ಕೆ ಹೊರಟನು. ಬುದ್ದ ಬರುತ್ತಿದ್ದಾನೆಂದು ತಿಳಿದ ನಗರದ ಜನತೆ ಅವರನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಮಳೆಗಾಲ ಮುಗಿದಿದೆ. ಪ್ರವಾಹದಿಂದ ಕೊಚ್ಚಿಹೋಗಿರುವ ಕಸದಿಂದ ರಸ್ತೆಗಳು ತುಂಬಿವೆ. ಮಳೆಯ ರಭಸಕ್ಕೆ ಮನೆಗಳು ಕೊಚ್ಚಿ ಹೋಗಿವೆ. ಜನರು ಬೀದಿಗಳನ್ನು ಮತ್ತು ಮನೆಗಳನ್ನು ಸ್ವಚ್ಛಗೊಳಿಸಿದರು. ಗೋಡೆಗಳನ್ನು ಹೂಮಾಲೆಗಳಿಂದ ಅಲಂಕರಿಸಿದರು ಮತ್ತು ಮನೆ ಬಾಗಿಲಿಗೆ ಹೂಮಾಲೆಗಳನ್ನು ನೇತುಹಾಕಿದರು. ಅಂದು ಅಮಾವಾಸ್ಯೆಯ ದಿನವಾದ್ದರಿಂದ ಇಡೀ ಊರಿಗೆ ದೀಪಾಲಂಕಾರ ಮಾಡಲಾಗಿತ್ತು. ಉಳ್ಳವರು ಇಲ್ಲದವರಿಗೆ ಚೆನ್ನಾಗಿ ಉಣಬಡಿಸುತ್ತಿದ್ದರು. ದೀಪಗಳನ್ನು ದಾನವಾಗಿ ನೀಡಿದರು. ಅದೇ ದೀಪ ದಾನೋತ್ಸವವಾಗಿ ಸ್ಥಿರವಾಯಿತು.
ದೀಪವು ಜ್ಞಾನದ ಸಂಕೇತವಾಗಿದೆ. ಜೀವನದ ಸಂಕೇತ. ಜಗತ್ತಿಗೆ ಜ್ಞಾನವನ್ನು ಪಸರಿಸಿದ ಬುದ್ಧನ ಆಗಮನದ ಸಂಕೇತವೇ ದೀಪ ದಾನೋತ್ಸವ. ಈ ದೀಪಗಳನ್ನು ಬೆಳಗಿಸುವುದರಿಂದ ಬುದ್ಧನು ತನ್ನ ಜ್ಞಾನವನ್ನು ಜಗತ್ತಿಗೆ ನೀಡಿದನೆಂದು ಸಂಕೇತಿಸುತ್ತದೆ. ಇದು ಇತಿಹಾಸದ ವಿಷಯವಾಗಿರುವುದರಿಂದ ಪುರಾವೆಗಳು ಅಸ್ತಿತ್ವದಲ್ಲಿವೆ. ಪೌರಾಣಿಕ ಘಟನೆಗಳಿಗೆ ಯಾವುದೇ ಚಾರಿತ್ರಿಕ ಆಧಾರವಿಲ್ಲ. ಆದ್ದರಿಂದಲೇ ಲಕ್ಷ್ಮಿ ಗಣೇಶನ ಪೂಜೆ ಮತ್ತು ನರಕಾಸುರನ ವಧೆಗೆ ಯಾವುದೇ ಪುರಾವೆಗಳಿಲ್ಲ. ದೀಪ ದಾನೋತ್ಸವವನ್ನು ಜ್ಞಾನದಾನ ಎಂದು ತಿಳಿಯಬೇಕು. ಯೋಚಿಸಿದರೆ, ಅದು ಅರ್ಥಪೂರ್ಣವಾಗುತ್ತದೆ.
ವೈದಿಕ ಧರ್ಮ ಪ್ರಚಾರಕರು ಪ್ರಚಾರ ಮಾಡಿದ ಎಲ್ಲವೂ ಕಟ್ಟುಕಥೆ ಎಂಬುದು ತಿಳಿದಿದೆ. ಶ್ರೀಕೃಷ್ಣ, ನರಕಾಸುರ, ಸತ್ಯಭಾಮ, ಲಕ್ಷ್ಮೀ ಗಣೇಶ ಇವೆಲ್ಲವೂ ಕಾಲ್ಪನಿಕ ಪಾತ್ರಗಳು. ಅವರು ನಿಜವಾಗಿ ಈ ದೇಶದಲ್ಲಿ ಹುಟ್ಟಿ ಬೆಳೆದವರಲ್ಲ. ಕಪಿಲವಸ್ತುವಿಗೆ ಬುದ್ಧನ ಹಿಂದಿರುಗುವಿಕೆಯನ್ನು ರಾಮನು ಅಯೋಧ್ಯೆಗೆ ಹಿಂದಿರುಗಿದನೆಂದು ಬರೆಯಲಾಗಿದೆ. ಭ್ರಮೆಗಳನ್ನು ನಂಬುವವರೊಂದಿಗೆ ನಮಗೆ ಯಾವುದೇ ತಕರಾರು ಇಲ್ಲ. ಅವರ ಭ್ರಮೆಗಳನ್ನು ನಂಬಬೇಕು ಎನ್ನುವವರೊಂದಿಗೆ ನಮ್ಮ ತಕರಾರು ಇದೆ. ಅದು ನಡೆಯುವ ಕೆಲಸವಲ್ಲ. “ದೀಪ ದಾನೋತ್ಸವ” ಎಂದರೆ ನಮ್ಮ ಮನೆಯ ಬೆಳಕನ್ನು ಇತರರಿಗೆ ಹಂಚುವುದು. ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ಸಂಕೇತವಾಗಿ ತೆಗೆದುಕೊಳ್ಳಬೇಕು.
ಹದಿನೇಳು ವರ್ಷಗಳ ನಂತರ ಮರಳಿ ಬಂದಿರುವ ಶಾಕ್ಯ ಮುನಿ ತದಾಗತನನ್ನು ಆನಂದವಾಗಿ ಸ್ವಾಗತಿಸಿದ್ದೆ ದೀಪ ದಾನೋತ್ಸವವಾಯಿತು. ಅದು ಸಾಮಾನ್ಯ ಶಕಕ್ಕಿಂತಲೂ (BCE) ಮೊದಲು ನಡೆದ ಘಟನೆಯದು. ಇದರಲ್ಲಿ ಯಾವುದೇ ಭ್ರಮೆಗಳು ಅಥವಾ ಕಲ್ಪನೆಗಳಿಲ್ಲ. ಬುದ್ಧ ನಿಜವಾಗಿಯೂ ಈ ಭೂಮಿಯ ಮೇಲೆ ತಿರುಗಿದ. ಬುದ್ಧನ ಕರುಣೆ ಮತ್ತು ದಯಾ ಗುಣವನ್ನು ಸ್ಮರಿಸಲು ಪ್ರಪಂಚದಾದ್ಯಂತದ ಬೌದ್ಧರು ಇಂದಿಗೂ ಹಬ್ಬವನ್ನು ಆಚರಿಸುತ್ತಿದ್ದಾರೆ.
ಬುದ್ಧನ ನಂತರ ಬಹಳ ಸಮಯ ಕಳೆದಹೋದ ಮೇಲೆ ಮೌರ್ಯ ಚಕ್ರವರ್ತಿ ಅಶೋಕನ (ಕ್ರಿಸ್ತಶಕ 304-232) ಅವಧಿ ಬಂದಿತು. ಅವರು ಈ ದೇಶದ ಮೂಲನಿವಾಸಿಯಾಗಿದ್ದರು. ಬಹುಜನರು. ಮೌರ್ಯ ಎಂಬುದು ಮೋರ್ ಒಂದು ನವಿಲು. ಅವರ ಅಧಿಕೃತ ಪಕ್ಷಿಯಿಂದ ಬಂದಿದೆ. ಅವರು ಕಳಿಂಗ ಯುದ್ಧದಲ್ಲಿ ಗೆದ್ದರು. ಅದರಿಂದ ಅಪಾರ ಪ್ರಾಣಹಾನಿ ಮತ್ತು ಲಕ್ಷಗಟ್ಟಲೆ ನಿರಾಶ್ರಿತರು ಆಗಿದ್ದರಿಂದ ಅವರು ವಿಜಯವನ್ನು ಹೆಮ್ಮೆಯಿಂದ ಆಚರಿಸಲಿಲ್ಲ. ತನ್ನನ್ನು ತಾನೇ ವಿಮರ್ಶೆಗೊಳಪಡಿಸಿಕೊಂಡರು. ಅವರು ವಿಷಾದದಿಂದ ದುಃಖಿಸಿದರು. ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಅಹಿಂಸೆಯನ್ನು ಆಹ್ವಾನಿಸಿದರು.
ಪ್ರಪಂಚದ ಚರಿತ್ರೆಯಲ್ಲೇ ತಮ್ಮ ವಿಜಯಗಳನ್ನು ಹಿಂಸೆಯಿಂದ ಆಚರಿಸಿದ ಚಕ್ರವರ್ತಿಗಳು ಇದ್ದಾರೆ. ಆದರೆ, ವಿಜಯದಿಂದ ವಿನಮ್ರರಾಗಿ, ಯುದ್ಧವನ್ನು ತ್ಯಜಿಸಿ ಶಾಂತಿಯನ್ನು ಆಹ್ವಾನಿಸಿದ ಏಕೈಕ ಮಹಾನ್ ವ್ಯಕ್ತಿ ಚಕ್ರವರ್ತಿ ಅಶೋಕ. ಅವರ ಮನಃ ಪರಿವರ್ತನೆಯಾಗಿ ಮಾಡಿದ ರಕ್ತಪಾತದ ಬಗ್ಗೆ ಪಶ್ಚಾತ್ತಾಪಪಟ್ಟರು. ಮತ್ತು ಬೌದ್ಧ ಮಾರ್ಗವನ್ನು ಸ್ವೀಕರಿಸಿದರು. ಅಂತಹ ಸಂದರ್ಭದಲ್ಲಿ ದುಃಖದಿಂದ ಭಾರವಾದ ಹೃದಯದೊಂದಿಗೆ ಸಂತಾಪದ ದಿನಗಳನ್ನು ಘೋಷಿಸಬೇಕು. ಆದರೆ ಅವರು ಹಾಗೆ ಮಾಡಲಿಲ್ಲ. ಕತ್ತಲೆಯನ್ನು ಹೋಗಲಾಡಿಸುವ ದೀಪಗಳನ್ನು ಬೆಳಗಿಸುವಂತೆ ಮನವಿ ಮಾಡಿದರು. ಶಾಂತಿ, ಅಹಿಂಸೆ, ಸತ್ಯ, ಪ್ರಾಮಾಣಿಕತೆ, ಬದ್ಧತೆ, ನೈತಿಕತೆಗಳು ಸಹಸ್ರಾರು ದೀಪಗಳಿಂದ ಜನಜೀವನ ಬೆಳಗಲಿ ಎಂದು ಹಾರೈಸಿದರು.
ದೀಪ ದಾನೋತ್ಸವದ ಎಲ್ಲಾ ವಿವರಗಳು ಪಾಲಿ ಭಾಷೆಯಲ್ಲಿ ಬರೆಯಲಾದ ಶ್ರೀಲಂಕಾದ ಬೌದ್ಧ ಗ್ರಂಥಗಳಲ್ಲಿ ಕಂಡುಬರುತ್ತವೆ. ನಮ್ಮ ಭಾರತದ ಡಾ.ವಾಲ್ಮೀಕಿ ಪ್ರಸಾದ್ ಅವರು “ದೀಪ್ ವಂಶ” ಎಂಬ ಹೆಸರಿನೊಂದಿಗೆ ಹಿಂದಿಗೆ ಅನುವಾದಿಸಿದ್ದಾರೆ. ಇದಲ್ಲದೆ, ಇರಾನಿನ ಬುದ್ಧಿಜೀವಿ, ಪ್ರವಾಸಿ, ಮಾನವಶಾಸ್ತ್ರಜ್ಞ ಮತ್ತು ಸಂಶೋಧಕ ಅಬು ರೇಹಾನ್ ಅಲ್ಬಿರುನಿ (973-1048 CE) ತನ್ನ ಪುಸ್ತಕ “ಅಲ್ಬಿರುನಿ ಕಾ ಭಾರತ್” ನಲ್ಲಿ ದೀಪ ದಾನದ ವಿವರಗಳನ್ನು ದಾಖಲಿಸಿದ್ದಾರೆ. ಆತ ವಿದೇಶದವರು. ಆದರೂ ಅವರು ಗಮನಿಸಿದ ವಿಷಯಗಳನ್ನು ದಾಖಲಿಸುತ್ತಿದ್ದಾರೆ. ಆ ಪುಸ್ತಕವನ್ನು ಬರೆಯುವ ಸಮಯದಲ್ಲಿ, ನಮ್ಮ ದೇಶದಲ್ಲಿ ಜನಪ್ರಿಯವಾಗಿರುವ ಯಾವುದೇ ಪೌರಾಣಿಕ ಕಥೆಗಳು ಇರಲಿಲ್ಲ. ಅದಕ್ಕಾಗಿಯೇ ಅವರು ಬರೆಯಲಿಲ್ಲ. ಆ ದಿನಗಳಲ್ಲಿ ದೀಪ ದಾನೋತ್ಸವವನ್ನು ದೀಪ ದಾನೋತ್ಸವ ಎಂದೇ ಕರೆಯಲಾಗುತ್ತಿತ್ತು. ಬೌದ್ಧ ಧರ್ಮವನ್ನು ಅನುಸರಿಸುವವರಿಗೆ ಇದು ಒಂದು ಸುದಿನ! ಪುಸ್ತಕವನ್ನು ವಿಶ್ವದ ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ. ಅಂಬೇಡ್ಕರ್ ಅವರ ಸ್ನೇಹಿತ ಸತ್ರಾಮ್ ಬೀನ್ ಇದನ್ನು ಹಿಂದಿಗೆ ಅನುವಾದಿಸಿದ್ದಾರೆ. ಆ ಪುಸ್ತಕದ ಪುಟ 530ರಲ್ಲಿ ದೀಪ ದಾನೋತ್ಸವ ಎಂದು ವಿವರವಾಗಿ ಬರೆಯಲಾಗಿದೆ. ಇದರ ಜೊತೆಗೆ ನಮ್ಮ ಬಳಿ ಇನ್ನೊಂದು ಪುರಾವೆ ಇದೆ. ನಾಲ್ಕು ವೇದಗಳಿಗೆ ತಮ್ಮ ಭಾಷ್ಯವನ್ನು ಸೇರಿಸಿ ಘೋಷಿಸಿದ ಗಂಗಾಸರಣ್ ಶರ್ಮರು ಒಂದು ಮಾತು ಹೇಳಿದರು. ವೈಕಲ್ಪಿಕ ಪ್ರಕಾಶವೇದಗಳಲ್ಲಿ ಎಲ್ಲಿಯೂ ಇಲ್ಲ” ಎಂದು ಅವರು ವ್ಯಾಖ್ಯಾನಿಸಿದರು. ವೈಕಲ್ಪಿಕ ಎಂದರೆ ಸೃಷ್ಟಿಸಿದ ಪ್ರಕಾಶ ಎಂದರೆ ಬೆಳಕು. ಅದು ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಬಳಸಿ ವಿನ್ಯಾಸಗೊಳಿಸಿದ ಯಾವುದೇ ರೀತಿಯ ಮೇಣದಬತ್ತಿ, ಲ್ಯಾಂಟರ್ನ್, ದೀಪ, ವಿದ್ಯುತ್ ಬಲ್ಬ್ ಆಗಿರಬಹುದು. ಸೂರ್ಯ ಮತ್ತು ಚಂದ್ರರು ಪ್ರಕೃತಿ ಸಿದ್ಧ ಬೆಳಕು. ಮನುಷ್ಯನು ತನ್ನ ಜ್ಞಾನದಿಂದ ಬೆಳಗಿದ ದೀಪಗಳ ಬಗ್ಗೆ ವೇದಗಳಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಶರ್ಮಾ ಹೇಳುತ್ತಾರೆ.
ಆದ್ದರಿಂದ ದೀಪವು ಬೌದ್ಧ ಸಾಹಿತ್ಯದಿಂದ ಬಂದಿದೆ. ಬುದ್ಧನೇ “ಅಪ್ಪೋ ದೀಪೋಭವ” ಎಂದಿದ್ದಾನೆ. ಇದರರ್ಥ ‘ನೀನೇ ದೀಪವಾಗು’!
- ಡಾ.ದೇವರಾಜು ಮಹಾರಾಜು
(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ಜೀವಶಾಸ್ತ್ರಜ್ಞ)
ಅನುವಾದ : ರೇಣುಕಾ ಭಾರತಿ
Leave a reply