ಹೆಸರಾದ ಹಬ್ಬದಲ್ಲಿ
ಕಸುವಿಲ್ಲದವರ ನಿಟ್ಟುಸಿರೂ
ಕೇಳುವಂತಾಗಲಿ..
ದೆಹಲಿಯು ದೂರವಾಗಲಿ
ಬೆಂಗಳೂರು ಮತ್ತೊಂದು
ದೆಹಲಿಯಾಗದಿರಲಿ..
ಉತ್ತರ ಕರ್ನಾಟಕಕೆ
ಉತ್ತರವಾಗದ
ದಕ್ಷಿಣದ ಹುಸಿ ಅರಿವಾಗಲಿ
ಉತ್ತರ ದಕ್ಷಿಣ ಒಂದಾಗಿ
ಕುಬೇರರ ವಿರುದ್ಧ
ಸಮರ ಸಾರಲಿ
ಮುರಕಂಬಿಯ ವಿಜಯ
ಸಮಾಧಾನದ ಜೊತೆಗೆ
ಸೋದರತ್ವ ಮೂಡಿಸಲಿ
ಸಂವಾದಗಳು
ದೀಪದಿಂದ ದೀಪ
ಪಡೆವ ಬೆಳಕಾಗಲಿ
ಹೊಸ ವಿಷಯಗಳು
ಹೊಸ ದೇವರುಗಳನ್ನು
ಹೊಸ ಭಕ್ತರನ್ನು ಸೃಷ್ಟಿಸದಿರಲಿ..
ಗಂಗರನ್ನು
ರಾಷ್ಟ್ರಕೂಟರನ್ನು
ನೆನೆಯುವಾಗ
ಹಿರಿಮೆ ತಂದ
ಹೈದರ-ಟಿಪ್ಪುಗಳು
ಮರೆತು ಹೋಗದಿರಲಿ ..
ಸರ್ವಜನಾಂಗದ
ತೋಟಕ್ಕೆ ನುಗ್ಗಿರುವ
ಪುಂಡು ಆರ್ಯರ ಹಿಂಡು…
ಗಡಿಯಾಚೆಗೆ ತೊಲಗಲಿ …
ಉಳ್ಳೇರಹಳ್ಳಿಯ ದುಷ್ಟರು..
ಕಂಬಾಲಪಲ್ಲಿಗಳ ಹಂತಕರು..
ದಾನಮ್ಮರ ಕೀಚಕರು..
ಹಿಜಾಬು ಕಿತ್ತವರು..
ಕಲ್ಲಂಗಡಿಯ ಕೆಡವಿದವರು ..
ಮೊಟ್ಟೆ ಕಸಿದವರು..
ಹೊಟ್ಟೆಗೆ ಹೊಡೆದವರು ..
ನಾಡಗೀತೆಯಲ್ಲಿ
ಪಾಲು ಪಡೆಯದಂತಾಗಲಿ..
ಭೂತಗಳೆಲ್ಲ
ಮತ್ತೊಮ್ಮೆ ಬಂಡೆದ್ದು
ಪರಶುರಾಮನ ಕೊಡಲಿ ಕಸಿಯಲಿ ..
ವಾಮನ ಕುಲದ
ಕುತಂತ್ರಗಳು
ಬಲಿಂದ್ರನಿಗೆ ಬಲಿಯಾಗಲಿ .. ..
‘ಭಾರ’ತವು
ಬಲವಂತವಾಗದಿರಲಿ..
ಕರುನಾಡು ರಾಮರಾಜ್ಯದ
ವಸಾಹತುವಾಗದಿರಲಿ…
ನಾಡೆಂಬುದು
ಮನೆಯ ಗೋಡೆಯಾಗಲಿ..
ಹೊರಗಿನ ಗಾಳಿಯು ಸೋಕದ
ಕೋಟೆಯಾಗದಿರಲಿ..
ಸಮತೆಯಾಗಲಿ ಕರ್ನಾಟಕ
ಮಮತೆಯಾಗಲಿ ಕರ್ನಾಟಕ
ಸಮೃದ್ಧಿಯಾಗಲಿ ಕರ್ನಾಟಕ
ಸ್ವಾಭಿಮಾನಿಯಾಗಲಿ ಕರ್ನಾಟಕ
ಸಾರ್ವಭೌಮಿಯಾಗಲಿ ಕರ್ನಾಟಕ
- ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply