ಬೆಂಗಳೂರು : ನಗರದ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದ್ದು ಇಂದು ಬೆಳಗ್ಗೆ ಗುತ್ತಿಗೆದಾರ ಏಳುಮಲೈ ಶವವನ್ನು ಹೊರ ತೆಗೆಯಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡವರಿಗಾಗಿ ನಾಲ್ಕು ದಿನಗಳಿಂದಲೂ 30ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, 13 ಮಂದಿಯನ್ನು ಇದುವರೆಗೂ ರಕ್ಷಿಸಲಾಗಿದೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಬೆಳೆಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭಿಸಿದಾಗ ಏಳುಮಲೈ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಕಟ್ಟಡ ಮಾಲೀಕ ಹಾಗೂ ಅವರ ಪುತ್ರ ಸೇರಿದಂತೆ ಮೂವರ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಘಟನಾಸ್ಥಳಕ್ಕೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ಅಕ್ರಮ ಕಟ್ಟಡಗಳ ತೆರವಿಗೆ ಸ್ಥಳದಲ್ಲೇ ಸೂಚಿಸಿದರು.
ಮೃತರ ಕುಟುಂಬಸ್ಥರು ಸಿಎಂ ಅವರ ಬಳಿ ತಮವರನ್ನು ಕಳೆದು ಕೊಂಡು ಅಳಲು ತೋಡಿಕೊಂಡಾಗಮುಖ್ಯಮಂತ್ರಿಗಳು ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಮಂಗಳವಾರ ಸಂಜೆ ಭಾರೀ ಮಳೆ ಸುರಿಯುತ್ತಿತ್ತು. ಈ ನಡುವೆಯೇ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ 60-40 ಸೈಟ್ನಲ್ಲಿ ನಿರ್ಮಾಣವಾಗುತ್ತಿದ್ದ ಆರು ಅಂತಸ್ತಿನ ಕಟ್ಟಡ ನೋಡನೋಡುತ್ತಿದ್ದಂತೆಯೇ ಕುಸಿದು ಬಿದಿದ್ದೆ.
ಈ ಕಟ್ಟಡದಲ್ಲಿ ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ 21 ಕ್ಕೂ ಹೆಚ್ಚಿನ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿ 13 ಮಂದಿಯನ್ನು ರಕ್ಷಿಸಿದ್ದು, ನಿನ್ನೆ ಸಂಜೆವರೆಗೂ ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಗುತ್ತಿಗೆದಾರ ಏಳುಮಲೈ ಅವರ ಮೊಬೈಲ್ ರಿಂಗ್ ಆಗುತ್ತಿತ್ತು. ಇದೇ ಲೊಕೇಶನ್ ಸಹ ಇದೇ ಸ್ಥಳ ತೋರಿಸುತ್ತಿದ್ದುದ್ದರಿಂದ ಕಾರ್ಯಾಚರಣೆ ಮುಂದುವರೆಸಿದಾಗ ಇಂದು ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದ್ದು, ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ಇವರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಕಟ್ಟಡದ ಅವಶೇಷಗಳಡಿ ಇನ್ಯಾರಾದರೂ ಸಿಲುಕಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಹ್ಯಾಮರ್ ಮತ್ತು ಮೂರು ಜೆಸಿಬಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದು ವರೆದಿದೆ. ಈ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನೆಲಮಹಡಿಯಲ್ಲಿ ಪಾರ್ಕಿಂಗ್ ಬಿಟ್ಟು ಏಳು ಅಂತಸ್ತಿನ ನಿರ್ಮಾಣದ ಆರೋಪ ಕೇಳಿಬಂದಿದೆ.
Leave a reply