ಕೇಂದ್ರದ ಮೋದಿ ಸರ್ಕಾರವು ಕರ್ನಾಟಕದ ಬಗ್ಗೆ ತೋರುತ್ತಿರುವ ತಾರತಮ್ಯವು ಮತ್ತೊಮ್ಮೆ ಮೊನ್ನೆ ಕೇಂದ್ರವು ಮಾಡಿದ ರಾಜ್ಯಗಳ ಪಾಲಿನ ತೆರಿಗೆ ಹಂಚಿಕೆಯಲ್ಲೂ ಮರುಕಳಿಸಿದೆ. ಅಕ್ಟೊಬರ್ ನಲ್ಲಿ 28 ರಾಜ್ಯಗಳಿಗೆ ಹಂಚಿದ 1,28,000 ಕೋಟಿಗಳಲ್ಲಿ ಕರ್ನಾಟಕಕ್ಕೆ ದಕ್ಕಿರುವುದು ಕೇವಲ 6498 ಕೋಟಿ ರೂ. ಮಾತ್ರ. ಸಹಜವಾಗಿಯೇ ಮತ್ತೊಮ್ಮೆ ಇದು ಕರ್ನಾಟಕ ಜನರನ್ನು ಕೆರಳಿಸಿದೆ. ಕರ್ನಾಟಕದ ಜನರ ಆಕ್ರೋಶಕ್ಕೆ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರವೇ ನೇತೃತ್ವ ವಹಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಈ ಸಂದರ್ಭವನ್ನು ಬಳಸಿಕೊಂಡು ರಾಜ್ಯ ಸರ್ಕಾರವು ಕೇಂದ್ರವು ಹೇಗೆ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಿಗೆ ಮಾತ್ರ ತಾರತಮ್ಯ ಮಾಡುತ್ತಿದೆ ಎಂದು ಅಂಕಿಅಂಶಗಳ ಸಮೇತ ನಾಡಿನ ಮುಂದಿಡುತ್ತಿದ್ದಾರೆ.
ಉದಾಹರಣೆಗೆ ಈ ಬಾರಿಯ ಹಂಚಿಕೆಯಲ್ಲೇ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶಕ್ಕೆ 31,692 ಕೋಟಿ, ಬಿಹಾರಕ್ಕೆ17,921 ಕೋಟಿ, ಮಧ್ಯ ಪ್ರದೇಶಕ್ಕೆ 13,987, ಮತ್ತು ರಾಜಾಸ್ಥಾನಕ್ಕೆ 10,737 ಕೋಟಿ ಕೊಟ್ಟು ಕರ್ನಾಟಕಕ್ಕೆ ಮಾತ್ರ ಕೇವಲ 6498 ಕೋಟಿ ಕೊಟ್ಟಿರುವುದನ್ನು ಸಿದ್ಧರಾಮಯ್ಯನವರು ಎಲ್ಲಾ ಸಭಗಳಲ್ಲೂ ಪ್ರಸ್ತಾಪಿಸುತ್ತಿದ್ದಾರೆ. ಮತ್ತು ಈ ತಾರತಮ್ಯದ ವಿರುದ್ಧ ಕರ್ನಾಟಕ ಜನತೆ ಕೇಂದ್ರದ ವಿರುದ್ಧ ಸಿಡಿದೇಳಬೇಕೆಂದೂ ಕರೆ ನೀಡುತ್ತಿದ್ದಾರೆ.
ಈ ತಾರತಮ್ಯಕ್ಕೆ ಬಿಜೆಪಿಯ ದಕ್ಷಿಣ ವಿರೋಧಿ, ಉತ್ತರ ಪಕ್ಷಪಾತ ಕಾರಣ ಎಂಬ ರಾಜಕೀಯವನ್ನು ಪ್ರತಿಪಾದಿಸುತ್ತಿದ್ದಾರೆ. ಆದ್ದರಿಂದಲೇ ಅತ್ಯಂತ ದುರಾಡಾಳಿತವಿರುವ ಉತ್ತರದ ರಾಜ್ಯಗಳಿಗೆ ರಾಜಕೀಯ ಪಕ್ಷಪಾತ ತೋರುತ್ತಾ ಅಭಿವೃದ್ಧಿಶೀಲ ರಾಜ್ಯವಾಗಿರುವ ಕರ್ನಾಟಕಮತ್ತು ಇತರ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ನೀಡುತ್ತಿದ್ದಾರೆ ಎಂಬ ಆರೋಪವನ್ನು ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್ ಮಾಡುತ್ತಿದೆ. ಈ ರಾಜಕೀಯವು ಕೇಂದ್ರದ ತಾರತಮ್ಯದ ಬಗ್ಗೆ ಆಕ್ರೋಶಗೊಂಡಿರುವ ಕರ್ನಾಟಕ ನೆಲ-ಜಲ- ಭಾಷೆಗಾಗಿ ಹೋರಾಡುತ್ತಿರುವ ಪ್ರಾಮಾಣಿಕ ಪ್ರಜಾತಾಂತ್ರಿಕ ಶಕ್ತಿಗಳಲ್ಲೂ ಸಹಜವಾಗಿ ನೆಲೆ ಕಂಡುಕೊಳ್ಳುತ್ತಿದೆ.
ಮೋದಿ ಸರ್ಕಾರದ ತಾರತಮ್ಯಕ್ಕೆ ಉತ್ತರ ಪಕ್ಷಪಾತಿತನ ಕಾರಣವೇ?
ಮೋದಿ ನೇತೃತ್ವದ ಬಿಜೆಪಿ ಅವಧಿಯಲ್ಲಿ ಈ ಕೇಂದ್ರೀಕರಣ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅತಿರೇಕ ಅತಿಕ್ರಮದ ಹಿಂದೂತ್ವವಾದಿ ಸ್ವರೂಪವನ್ನು ಪಡೆದಿದೆ. ಇದು ಭಾರತದ ಅಸ್ಥಿತ್ವಕ್ಕೆ ಅಪಾಯಕಾರಿ. ಆದರೆ ಭಾರತದ ರಾಜ್ಯಗಳ ಯೂನಿಯನ್ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಕೇಂದ್ರೀಕರಣವು ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಹಾಗೂ ಇತರ ಪಕ್ಷಗಳ ಅವಧಿಯಲ್ಲೂ ಅಬಾಧಿತವಾಗಿ ಮುಂದುವರೆಯುತ್ತಾ ಬಂದಿವೆ ಎಂಬುದನ್ನು ಮರೆಯಬಾರದು.
ಅದರಲ್ಲೂ 1951 ರಿಂದಲೇ ಪ್ರಾರಂಭವಾದ ಆಡಳಿತಾತ್ಮಕ ಕೇಂದ್ರೀಕರಣ, 1970-90ರ ರಾಜಕೀಯ ಕೇಂದ್ರೀಕರಣ, 1991 ರ ನಂತರ ಕಾರ್ಪೊರೇಟ್ ಬಂಡವಾಳಶಾಹಿಗಳ ಒತ್ತಾಸೆಯಲ್ಲಿ ತೀವ್ರಗೊಂಡ ಆರ್ಥಿಕ-ರಾಜಕೀಯ ಕೇಂದ್ರೀಕರಣಗಳೆಲ್ಲವೂ 2000 ದ ನಂತರ ಭಾರತೀಯ ವ್ಯವಸ್ಥೆಯಲ್ಲಿ ಮೋದಿ ನೇತೃತ್ವದಲ್ಲಿ ತೀವ್ರಗೊಂಡಿರುವ ಫ಼್ಯಾಸಿಸ್ಟ್ ಕೇಂದ್ರೀಕರಣಕ್ಕೆ ಬೇಕಿರುವ ಭೂಮಿಕೆಯನ್ನು ಒದಗಿಸಿದವು ಎಂಬುದನ್ನು ಮರೆಯಬಾರದು.
ಹೀಗಾಗಿ ಮೋದಿ ಕಾಲದ ಸಮಸ್ಯೆಗಳನ್ನು ಬಿಜೆಪಿಯೇತರ ಪಕ್ಷಗಳು ಮೇಲ್ಪದರಲ್ಲಿ ಮಾತ್ರ ಗುರುತಿಸುತ್ತವೆ ಅಥವಾ ಅರ್ಧ ಸತ್ಯಗಳನ್ನು ಹೇಳುತ್ತವೆ ಮತ್ತು ಇಲ್ಲದ ಮತ್ತು ಸಲ್ಲದ ಪರಿಹಾರಗಳನ್ನು ಸೂಚಿಸುತ್ತವೆ.
ಆದ್ದರಿಂದ ನಾಡಿನ ಬಗ್ಗೆ ಕಾಳಜಿಯಿರುವ ಶಕ್ತಿಗಳು ಸಮಸ್ಯೆಯನ್ನು ಕಾಂಗ್ರೆಸ್ ಕಣ್ಣಿನಿಂದ ನೋಡದೆ ದಮನಿತ ನಾಡಿಗರ ಕಣ್ಣಿಂದ ನೋಡಿದಾಗ ಮಾತ್ರ ನೈಜ ಪರಿಹಾರಗಳೂ ಗೋಚರಿಸುತ್ತವೆ.
ಉದಾಹರಣೆಗೆ ಕರ್ನಾಟಕಕ್ಕೆ ಹಾಗೂ ದಕ್ಷಿಣಕ್ಕೆ ಮೋದಿ ಸರ್ಕಾರ ಮಾಡುತ್ತಿರುವ ತಾರತಮ್ಯಕ್ಕೆ ಮೋದಿಯ ದಕ್ಶಿಣ ವಿರೋಧಿ ಉತ್ತರ ಪಕ್ಷಪಾತಿತನ ಕಾರಣವಲ್ಲ. ಬದಲಿಗೆ ಭಾರತದ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿತನ ಕಾರಣ ಎಂದು ಇದೇ ವಿಷಯದ ಬಗ್ಗೆ ಬರೆದ ಹಿಂದಿನ ಲೇಖನದಲ್ಲಿ ಚರ್ಚಿಸಲಾಗಿತ್ತು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸಹ ಇದೇ ಧೋರಣೆಯನ್ನು ಅನುಸರಿಸಿತ್ತು. ಹೀಗಾಗಿ ಮೋದಿ ಕಾಲದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯದ ಬಗ್ಗೆ ಕಾಂಗ್ರೆಸ್ ಮಾತನಾಡಿದರೂ, ಅದಕ್ಕೆ ಕಾರಣ ಮೋದಿ ಸರ್ಕಾರದ ದೊಡ್ಡ ಬಂಡವಾಳಶಾಹಿ ಪರ ಮತ್ತು ಬಂಡವಾಳಶಾಹಿ ಅಭಿವೃದ್ಧಿ ಪರ ಆಕ್ರಮಣಶೀಲ ಉತ್ಸಾಹ ಕಾರಣವನ್ನೆದೆ ಉತ್ತರದ ಬಗೆಗಿನ ಪಕ್ಷಪಾತಿತನ ಎಂಬ ವಿಶ್ಲೇಷಣೆಯನ್ನು ಮುಂದಿಡುತ್ತದೆ.
ಇದು ಆಕ್ರಮಣಶೀಲ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಚೂಪುಗೊಳ್ಳಬೇಕಿರುವ ಕರ್ನಾಟಕದ ಪ್ರತಿರೋಧವನ್ನು ಉತ್ತರದಿಂದ ಆಗುತ್ತಿರುವ ವಲಸೆ ಮತ್ತು ಉತ್ತರದ ಜನರ ವಿರುದ್ಧ ಮಾತ್ರ ತಿರುಗಿಸುತ್ತದೆ. ಆದರೆ ಈ ಹಿಂದಿನ ಲೇಖನದಲ್ಲಿ ವಿವರಸಿದಂತೆ ದಕ್ಷಿಣದ ಅಭಿವೃದ್ಧಿಯಾಗಿರುವುದು ಕೇವಲ ದಕ್ಷಿಣದ ಅಭಿವೃದ್ಧಿ ಶೀಲ ಸರ್ಕಾರಗಳಿಂದಲ್ಲ. ಅದಕ್ಕೆ ಬ್ರಿಟಿಷ ವಸಾಹತುಶಾಹಿ ಕಾಲದ ಅಭಿವೃದ್ಧಿ ಮಾದರಿ ಮತ್ತು ಸ್ವಾತಂತ್ರ್ಯ ನಂತರವೂ ದೇಶದ ಅಭಿವೃದ್ಧಿ ಹೆಸರಿನಲ್ಲಿ ಮುಂದುವರೆದ ಸಂಪದ್ಭರಿತ ಉತ್ತರದ ರಾಜ್ಯಗಳ ಲೂಟಿಗಳೂ ಕಾರಣ.
ಕ್ರೆಡಿಟ್-ಡಿಪಾಸಿಟ್ ರೇಷಿಯೋ ಹೇಳುವ ಅಸಲಿ ಆರ್ಥಿಕ ಕಥನ
ಅದೇರೀತಿ ಪ್ರಸ್ತುತ ಸಂದರ್ಭದಲ್ಲೂ ಬಂಡವಾಳ ಸಂಪನ್ಮೂಲಗಳು ವಾಸ್ತವದಲ್ಲಿ ಉತ್ತರದಿಂದ ದಕ್ಷಿಣದ ಕುಬೇರರಿಗೆ ವರ್ಗಾವಣೆಯಾಗುತ್ತಿದೆ ಎನ್ನುವ ಸತ್ಯವನ್ನು ಇತ್ತೀಚೆಗೆ RBI ಬಿಡುಗಡೆ ಮಾಡಿರುವ 2023-24 ರ ಬ್ಯಾಂಕುಗಳ Credit/Debit Ratio ವಿವರಗಳು ಬಯಲು ಪಡಿಸುತ್ತವೆ. ಬ್ಯಾಂಕುಗಳು ಜನರ ಉಳಿತಾಯ ಹಣವನ್ನು ಸಂಗ್ರಹಿಸಿ ಹೆಚ್ಚಿನ ಬಡ್ಡಿಗೆ ಸರ್ಕಾರಕ್ಕೂ ಮತ್ತು ಖಾಸಗಿಯವರಿಗೂ ಸಾಲವನ್ನು ಕೊಡುತ್ತವೆ. ಬ್ಯಾಂಕುಗಳು ಕೊಟ್ಟ ಸಾಲಕ್ಕೂ ಮತ್ತು ಸಂಗ್ರಹಿಸಿದ ಡಿಪಾಸಿಟ್ಟಿಗೂ ಇರುವ ಅನುಪಾತವನ್ನು ಕ್ರೆಡಿಟ್-ಡೆಬಿಟ್ ರೀಷಿಯೋ ಎನ್ನುತ್ತಾರೆ.
ಭಾರತದ ಬಾಂಕುಗಳ ರಾಷ್ಟ್ರೀಕರಣವಾದಾಗ ಅದನ್ನು ಬಳಸಿಕೊಂಡು ಸರ್ಕಾರಗಳು ಜನಕಲ್ಯಾಣ ಯೋಜನೆಗಳನ್ನು ತ್ವರಿತಗೊಳಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು 1969-91 ರ ನಡುವೆ ಒಂದಷ್ಟು ನಡೆದರೂ, 1991 ರ ನಂತರವಂತೂ ಅದರ ಅಪಾರ ಲಾಭ ಪಡೆದುಕೊಳ್ಳುತ್ತಿರುವುದು ಈ ದೇಶದ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳೇ. 2003 ರ ನಂತರ ಈ ಸಾಲದ ಪ್ರಧಾನ ಪಾಲು ಖಾಸಗಿಯವರಿಗೆ ಸಂದಾಯವಾಗಬೇಕು ಮತ್ತು ಸರ್ಕಾರ ಸಾಲವನ್ನು ಕಡಿಮೆ ಮಾಡಬೇಕು ಎಂಬುದು FRBM (Fiscal Responsibility and Budget Management ) Act ಮೂಲಕ ಶಿಲಾ ಶಾಸನವಾಯಿತು.
ಹೀಗಾಗಿ ಜನರ ಉಳಿತಾಯದ ಅತಿ ದೊಡ್ಡ ಸುಲಿಗೆ ಮತ್ತು ಲಾಭವನ್ನು ಮಾಡಿಕೊಳುತ್ತಿರುವುದು ದೊಡ್ಡ ಬಂಡವಾಳಶಾಹಿಗಳೆ. ಹಾಗಿದ್ದಲ್ಲಿ ಈ ಬ್ಯಾಂಕ್ ಬಂಡವಾಳ ದೊಡ್ಡ ದೊಡ್ಡ ಉದ್ಯಮಿಗಳಿಗೆ ದೇಶದ ಯಾವ್ಯಾವ ಭಾಗಗಳಿಂದ ಎಶ್ಟೆಷ್ಟು ದಕ್ಕುತ್ತಿದೆ ಎಂಬ ವಿವರಗಳನ್ನು ನೋಡೊಣ. ಆರ್ಬಿಐ ವರದಿಯ ಪ್ರಕಾರ 2023-24 ರ ಸಾಲಿನಲ್ಲಿ ಭಾರತದ ಬ್ಯಾಂಕುಗಳು 212 ಲಕ್ಷ ಕೋಟಿ ರೂ. ಡಿಪಾಸಿಟ್ ಸಂಗ್ರಹಿಸಿವೆ. ಮತ್ತು ಅದರಲ್ಲಿ 169 ಲಕ್ಷ ಕೋಟಿ ರೂ.ಗಳನ್ನು ಸಾಲ ನೀಡಿದೆ. ಅಂದರೆ ಭಾರತದ ಕ್ರೆಡಿಟ್/ಡಿಪಾಸಿಟ್ ಅನುಪಾತ ಶೇ.78 ಆಗುತ್ತದೆ. ಉಳಿದದ್ದನ್ನು ಅಂತರ ರಾಷ್ಟ್ರೀಯ ಒಪ್ಪಂದಗಳ ಭಾಗವಾಗಿ ಆಪತ್ಕಾಲೀನ ನಿಧಿಯಾಗಿ ಮೀಸಲಾಗಿರಿಸಿಕೊಳ್ಳಲಾಗುತ್ತದೆ.
ಆದರೆ ಎಲ್ಲಾ ರಾಜ್ಯಗಳಲ್ಲೂ ಈ ಅನುಪಾತ ಶೇ. 78 ರಷ್ಟೇ ಇಲ್ಲ. ಅಷ್ಟು ಮಾತ್ರ ಅಲ್ಲ ಕೆಲವು ರಾಜ್ಯಗಳ ಅನುಪಾತ ಶೇ. 100 ಕ್ಕಿಂತ ಜಾಸ್ತಿ ಇದೆ. ಎಂದರೆ ಆ ರಾಜ್ಯಗಳಲ್ಲಿ ಬ್ಯಾಂಕುಗಳು ಸಂಗ್ರಹಿಸಿದ ಡಿಪಾಸಿಟ್ಟುಗಳಿಗಿಂತ ಹೆಚ್ಚಿನ ಸಾಲವನ್ನು ನೀಡಿದೆ ಎಂದರ್ಥ. ಕೆಲವು ರಾಜ್ಯಗಳಲ್ಲಿ ಈ ಅನುಪಾತ ಶೇ. 50 ನ್ನು ದಾಟಿಲ್ಲ. ಅಂದರೆ ಆ ರಾಜ್ಯಗಳಲ್ಲಿ ಸಂಗ್ರಹಿಸಿದ ಡಿಪಾಸಿಟ್ಟುಗಳಲ್ಲಿ ಅರ್ಧಕ್ಕಿಂತ ಕಡಿಮೆ ಮಾತ್ರ ಆ ರಾಜ್ಯಗಳಲ್ಲಿ ಸಾಲ ನೀಡಲಾಗಿದೆ. ಉಳಿದದ್ದು ಬಂಡವಾಳದ ರೂಪದಲ್ಲಿ ಬೇರೆ ರಾಜ್ಯಗಳಿಗೆ ಅಂದರೆ ಯಾವ ರಾಜ್ಯಗಳಲ್ಲಿ ಶೇ. 100 ಕ್ಕಿಂತ ಹೆಚ್ಚು ಕ್ರೆಡಿಟ್ ರೇಷಿಯೋ ಇದೆಯೋ ಆ ರಾಜ್ಯಗಳಿಗೆ ಹರಿದು ಹೋಗಿದೆ ಎಂದರ್ಥ .
ಹಾಗಿದ್ದಲ್ಲಿ ಈಗ ಯಾವ ರಾಜ್ಯಗಳ ಡಿಪಾಸಿಟ್ಟು ಯಾವ ರಾಜ್ಯಗಳಿಗೆ ಹರಿದು ಹೋಗಿದೆ ಎಂದು ನೋಡೊಣ. ಆರ್ಬಿಐ ಈ ವಿಷಯವನ್ನು ವಿಶ್ಲೇಷಣೆ ಮಾಡಲು ಭಾರತವನ್ನು ದಕ್ಷಿಣ, ಪಶ್ಚಿಮ, ಪೂರ್ವ, ಮಧ್ಯ, ಉತ್ತರ ಮತ್ತು ಈಶಾನ್ಯ ವಲಯಗಳೆಂದು ಗುಂಪುಗೂಡಿಸಿ ವಿಶ್ಲೇಶಿಸುತ್ತದೆ. ದಕ್ಷಿಣ ಹಾಗೂ ಪಶ್ಚಿಮದ ರಾಜ್ಯಗಳು ಉತ್ತರ ಮತ್ತು ಪೂರ್ವ ಹಾಗೂ ಈಶಾನ್ಯ ರಾಜ್ಯಗಳಿಗಿಂತ ಮುಂದುವರೆದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ದಕ್ಷಿಣದ ತೆರಿಗೆ ದುಡ್ಡು ಉತ್ತರಕ್ಕೆ ಹರಿದು ಹೋಗುತ್ತಿದೆ ಎನ್ನುವ ವಾಸ್ತವದ ಹಿನ್ನೆಲೆಯಲ್ಲಿ, ದಕ್ಷಿಣ ಮತ್ತು ಪಶ್ಚಿಮದ ಅಭಿವೃದ್ಧಿಗೆ ಒಂದು ಕಾರಣವಾದ ಬಂಡವಾಳಶಾಹಿ ಉದ್ಯಮಗಳಿಗೆ ಮತ್ತು ಸರ್ಕಾರಗಳಿಗೆ ಬ್ಯಾಂಕುಗಳ ಬಂಡವಾಳ ಸಾಲವು ಎಲ್ಲಿಂದ ಬಂದಿದೆ ಎಂದು ನೋಡೋಣ.
ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿದೆ ಬ್ಯಾಂಕು ಬಂಡವಾಳ
ಹರ್ಯಾಣ, ಹಿಮಾಚಲ ಪ್ರದೇಶ, ದೆಹಲಿ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳನ್ನು ಒಳಗೊಂಡ ಉತ್ತರ ವಲಯದಲ್ಲಿ ಬ್ಯಾಂಕುಗಳು 2024 ರ ಸಾಲಿನಲ್ಲಿ ಒಟ್ಟು 43 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹಿಸಿದ್ದವು. ಆದರೆ 2024 ರಲ್ಲಿ ಆ ವಲಯ ಪಡೆದ ಬ್ಯಾಂಕ್ ಸಾಲ 33 ಲಕ್ಷ ಕೋಟಿ ಮಾತ್ರ. ಅರುಣಾಚಲ ಪ್ರದೇಶ, ಅಸಾಂ, ತ್ರಿಪುರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಒಳಗೊಂಡ ಈಶಾನ್ಯ ವಲಯದಲ್ಲಿ 2024 ರಲ್ಲಿ 36 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹವಾದರೂ ಅದೇ ಸಾಲಿನಲ್ಲಿ ಕೊಟ್ಟಿರುವ ಸಾಲ ಕೇವಲ 19 ಲಕ್ಷ ಕೋಟಿ. ಬಿಹಾರ, ಜಾರ್ಖಂಡ್, ಒಡಿಶಾ, ಪ. ಬಂಗಾಳ, ಅಂಡಮಾನ್-ನಿಕೋಬಾರ್ ಮತ್ತು ಸಿಕ್ಕಿಂಗಳನ್ನು ಒಳಗೊಂಡ ಪೂರ್ವ ವಲಯದಿಂದ 25 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹಿಸಲಾಗಿದ್ದರೆ ಅದೇ ವಲಯಕ್ಕೆ ಕೊಟ್ಟಿರುವ ಸಾಲ ಕೇವಲ 12 ಲಕ್ಷ ಕೋಟಿ ಮಾತ್ರ. ಅರ್ಧಕ್ಕಿಂತ ಕಡಿಮೆ!
ಚತ್ತೀಸ್ಘಡ್, ಮಧ್ಯಪ್ರದೇಶ, ಉತ್ತರ ಪ್ರದೆಶ ಮತ್ತು ಉತ್ತರ್ ಖಂಡ್ಗಳನ್ನು ಒಳಗೊಂಡ ಮಧ್ಯ ವಲಯದಿಂದ 2024 ರಲ್ಲಿ 28 ಲಕ್ಷ ಕೋಟಿ ಡಿಪಾಸಿಟ್ಟುಗಳು ಸಂಗ್ರಹವಾದರೂ ಆ ವಲಯಕ್ಕೆ ದಕ್ಕಿದ ಸಾಲ ಕೇವಲ 16 ಲಕ್ಷ ಕೋಟಿ. ಗೋವಾ, ಗುಜರಾತ್, ಮಹಾರಾಷ್ಟ್ರ, ಡಿಯು ಮತ್ತ ದಾಮನ್, ಹಾಗೂ ದಾದ್ರ ಮತ್ತು ನಗರ ಹವೇಲಿಗಳನ್ನೊಳಗೊಂಡ ಪಶ್ಚಿಮ ವಲಯದಿಂದ 59 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹವಾದರೆ 56 ಲಕ್ಷ ಕೋಟಿ ಸಾಲವನ್ನು ನೀಡಲಾಗಿದೆ. ಅದರಲ್ಲಿ ಮಾಹಾರಾಷ್ಟ್ರ ರಾಜ್ಯವನ್ನು ಮಾತ್ರ ನೋಡಿದರೆ ಆ ರಾಜ್ಯದಿಂದ 2024 ರ ಸಾಲಿನಲ್ಲಿ ಒಟ್ಟು 46 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹವಾಗಿದ್ದರೆ 47 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ.
ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಲಕ್ಷ ದ್ವೀಪಗಳನ್ನೊಳಗೊಂಡ ದಕ್ಷಿಣ ವಲಯದಿಂದ 51 ಲಕ್ಷ ಕೋಟಿ ಸಂಗ್ರಹವಾಗಿ 48 ಲಕ್ಷ ಕೋಟಿ ಸಾಲ ವಿತರಿಸಲಾಗಿದೆ. ಆದರೆ ಇದರಲ್ಲಿ ಆಂಧ್ರ 4.8 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹಿಸಿ, 7 ಲಕ್ಷ ಕೋಟಿ ಸಾಲ ವಿತರಿಸಿದ್ದರೆ, ತಮಿಳುನಾಡು 13 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹಿಸಿ 15 ಲಕ್ಷ ಕೋಟಿ ಸಾಲ ವಿತರಿಸಿದೆ. ತೆಲಂಗಾಣ 7.8 ಲಕ್ಷ ಕೋಟಿ ಸಂಗ್ರಹಿಸಿ 8.7 ಲಕ್ಷ ಕೋಟಿ ಸಾಲ ವಿತರಿಸಿದೆ.
ಕರ್ನಾಟಕ 16 ಲಕ್ಷ ಕೋಟಿ ಡಿಪಾಸಿಟ್ ಸಂಗ್ರಹಿಸಿ 11 ಲಕ್ಷ ಕೋಟಿ ವಿತರಿಸಿದೆ.
ಈ ಎಲ್ಲಾ ವಿವರಗಳನ್ನು ಆಸಕ್ತರು ಇನ್ನಷ್ಟು ವಿಷದವಾಗಿ ಈ ವೆಬ್ ಕೊಂಡಿಯನ್ನು ಬಳಸಿ ಪಡೆದುಕೊಳ್ಳಬಹುದು :
https://www.indiabudget.gov.in/economicsurvey/doc/stat/tab33.pdf ಒಟ್ಟಾರೆಯಾಗಿ ನೋಡಿದರೆ 2019-24 ರ ಅವಧಿಯಲ್ಲಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಕ್ರೆಡಿಟ್ ಡಿಪಾಸಿಟ್ ರೇಷಿಯೋ ಶೇ. 90-150 ೦ರ ಆಸುಪಾಸಿನಲ್ಲಿದೆ. ಅಂದರೆ ಆಯಾ ರಾಜ್ಯಗಳಲ್ಲಿ ಸಂಗ್ರಹಿಸಿದ ಡಿಪಾಸಿಟ್ಟುಗಳಿಗಿಂತ ಕೊಟ್ಟ ಸಾಲ ಹೆಚ್ಚು ಎನ್ನುವುದು ಅದರ ತಾತ್ಪರ್ಯ. ಆದರೆ ಆ ಹೆಚ್ಚುವರಿ ಸಾಲಕ್ಕೆ ಬೇಕಾದ ಹಣ ಜಮೆಯಾದದ್ದು ಎಲ್ಲಿಂದ? ಯಾವ ರಾಜ್ಯಗಳಲ್ಲಿ ಡಿಪಾಸಿಟ್ ಸಂಗ್ರಹ ಹೆಚ್ಚಾಗಿ ಸಾಲ ನೀಡಿರುವ ಪ್ರಮಾಣ ದೇಶದ ಸರಾಸರಿಗಿಂತ ಕಡಿಮೆಯಾಗಿದೆಯೋ ಆ ರಾಜ್ಯಗಳ ಸಂಗ್ರಹ ಈ ರಾಜ್ಯಗಳಿಗೆ ಹರಿದಿದೆ ಎಂದರ್ಥ.
ದಕ್ಷಿಣದ ಅಭಿವೃದ್ಧಿಯಲ್ಲಿ ಉತ್ತರದ ಪಾಲು
ಇದೇ ವರದಿಯ ಪ್ರಕಾರ ದೇಶದ 27 ರಾಜ್ಯಗಳ ಕ್ರೆಡಿಟ್ ಡಿಪಾಸಿಟ್ ರೇಷಿಯೋ ದೇಶದ ಸರಾಸರಿಯಾದ ಶೇ. 78 ಕ್ಕಿಂತ ತುಂಬಾ ಕಡಿಮೆ. ಕರ್ನಾಟಕದ ರೇಷಿಯೋ ದೇಶದ ಸರಾಸರಿಗೆ ಸಮೀಪದಲ್ಲಿದೆ. ಆದರೆ ಬಿಹಾರ, ಉ,ಪ್ರದೇಶ, ಜಾರ್ಖಂಡ್, ಹಾಗೂ ಈಶಾನ್ಯ ಪ್ರದೇಶದ ರಾಜ್ಯಗಳ ಸರಾಸರಿ ಶೇ. 35-40 ರ ಆಸುಪಾಸಿನಲ್ಲಿದೆ. ಇದರ ರಾಜಕೀಯ ಮತ್ತು ಆರ್ಥಿಕ ತಾತ್ಪರ್ಯವಿಷ್ಟೆ. ಯಾವ ಮುಂದುವರೆದ ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳಿಂದ ಉತ್ತರಕ್ಕೆ ತೆರಿಗೆ ಹಣ ಹರಿದು ಹೋಗುತ್ತಿದೆ ಎಂಬ ಆಕ್ಶೇಪಣೆಯಿದೆಯೋ ಅದೇ ರಾಜ್ಯಗಳಿಂದ ದಕ್ಷಿಣದ ರಾಜ್ಯಗಳಿಗೆ ಆ ರಾಜ್ಯಗಳ ಉಳಿತಾಯ ಹಣ ಬ್ಯಾಂಕ್ ಬಂಡವಾಳದ ರೊಪದಲ್ಲಿ ಹರಿದು ಬಂದಿದೆ. ಹೀಗಾಗಿ ಈ ವಾಸ್ತವಗಳನ್ನು ಗಮನಿಸಿದಾಗ ಉತ್ತರ ವರ್ಸಸ್ ದಕ್ಷಿಣವೆಂಬ ಬೈನರಿ ಎಂಬುದು ಎಷ್ಟು ಹುಸಿಯೆಂಬುದು ಅರ್ಥವಾಗುತ್ತದೆ.
ಆದರೆ ಉತ್ತರದಿಂದ ಹರಿದು ಬಂದ ಈ ಹೆಚ್ಚುವರಿ ಬ್ಯಾಂಕ್ ಬಂಡವಾಳದ ಲಾಭವನ್ನು ಪಡೆದದ್ದು ಯಾರು?ಇದರಲ್ಲಿ ಬ್ಯಾಂಕುಗಳು ಕೃಷಿ ಹಾಗೂ ಇತರ ಸಣ್ಣ ಪುಟ್ಟ ಉದ್ಯಮಗಳಿಗೆ ಕೊಡುವ ಸಾಲ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಹಾಗಿದ್ದರೂ ಉತ್ತರಕ್ಕೆ ಹೋಲಿಸಿದರೆ ಅದರ ಫ಼ಲಾನುಭವಿಗಳು ದಕ್ಷಿಣದಲ್ಲೇ ಜಾಸ್ತಿ. ಹೀಗಾಗಿ ದಕ್ಷಿಣದ ಅಭಿವೃದ್ಧಿಯಲ್ಲಿ ಉತ್ತರದ ಹಿಂದುಳಿದ ರಾಜ್ಯಗಳ ಬಂಡವಾಳವೂ ಇದೆ ಎಂಬ ಸೂಕ್ಷ್ಮ ಮರೆಯಬಾರದು.
ಅದೇನೇ ಇದ್ದರೂ ಬ್ಯಾಂಕುಗಳು ಕಾರ್ಪೊರೇಟ್ ಗಳಿಗೆ ಕೊಡುತ್ತಿರುವ ಸಾಲ ಉಳಿದೆಲ್ಲಾ ವಲಯಗಳಿಗಿಂತ ಶೇ. 20 ರ ದರದಲ್ಲಿ ಹೆಚ್ಚುತ್ತಾ ಹೋಗುತ್ತಿದೆ. ಸಾಕಷ್ಟು ವರದಿಗಳು ಸಾಬೀತು ಪಡಿಸಿರುವಂತೆ ಅದರಲ್ಲಿ ಕಳೆದ ಹತ್ತು ವರ್ಷಗಳಲ್ಲಿ 13 ಲಕ್ಷ ಕೋಟಿಯಷ್ಟು ಸಾಲಗಳು ದಿವಾಳಿಯೂ ಅಗಿವೆ.
ಸಾರಾಂಶದಲ್ಲಿ ಬ್ಯಾಂಕು ಬಂಡವಾಳದ ಕಥೆಯೂ ಹೇಳುವುದಿಷ್ಟೆ. ದಕ್ಷಿಣದ ಅಭಿವೃದ್ಧಿಯಲ್ಲಿ ಉತ್ತರದ ಪಾಲಿದೆ. ಮತ್ತು ಬ್ಯಾಂಕು ಬಂಡವಾಳವು ಅಯಾ ಪ್ರದೇಶಗಳ ಅಭಿವೃದ್ಧಿಗಿಂತ ಕಾರ್ಪೊರೇಟ್ ಬಂಡವಾಳಶಾಹಿಗಳ ಪಾಲಾಗುತ್ತಿರುವುದೇ ಈ ದೇಶದ ಅಸಮಾನ ಅಭಿವೃದ್ಧಿ ಕಥನದ ಪ್ರಧಾನ ಕಾರಣ.
ಕಾರ್ಪೊರೇಟ್ ಕಂಪನಿಗಳು- ಕಚೇರಿ ರಾಜ್ಯದ್ದು, ಸುಲಿಗೆ ದೇಶದ್ದು
ಅದರೊಂದಿಗೆ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಕರ್ನಾಟಕಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯವನ್ನು ವಿರೋಧಿಸುವ ಹೆಸರಿನಲ್ಲಿ ಕರ್ನಾಟಕವನ್ನು ಒಳಗೊಂಡಂತೆ ಭಾರತದ ಎಲ್ಲಾ ರಾಜ್ಯಗಳನ್ನು ಸುಲಿದು ಬಲಿಯುವ ಬಂಡವಾಳಶಾಹಿ ಆದಾಯ ಮೂಲವನ್ನು ಮರೆಸಿಬಿಡುವ ಮತ್ತೊಂದು ತಪ್ಪು ತರ್ಕವನ್ನು ಮುಂದಿಡುತ್ತಾರೆ.
ಅದು ಕೇಂದ್ರದ ಒಟ್ಟಾರೆ ತೆರಿಗೆ ಆದಾಯಕ್ಕೆ ಕರ್ನಾಟಕ ಮೂಲದಿಂದ ಕೊಡುತ್ತಿರುವ ಕೊಡುಗೆಯನ್ನು ವಿವರಿಸಲು ಬಳಸುವ ತಪ್ಪು ಲೆಕ್ಕಾಚಾರ. ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದ ಪ್ರಕಾರ ಜಿಎಸ್ಟಿ ಮತ್ತು ಕಾರ್ಪೊರೇಟ್ ಹಾಗೂ ವೈಯಕ್ತಿಕ ಆದಾಯ ತೆರಿಗೆಯೆಲ್ಲಾ ಸೇರಿ ಕರ್ನಾಟಕದಿಂದ ಕೇಂದ್ರಕ್ಕೆ ಒಟ್ಟು 4 ಲಕ್ಷ ಕೋಟಿ ತೆರಿಗೆ ಸಲ್ಲುತ್ತದೆ. ಆದರೆ ಅಲ್ಲಿಂದ ನಮಗೆ ಬರುವುದು ರುಪಾಯಿಯಲ್ಲಿ ಹದಿನೈದು ಪೈಸ ಮಾತ್ರ ಎಂಬ ಲೆಕ್ಕಾಚಾರ.
ಆದರೆ ಕರ್ನಾಟಕದಿಂದ ಹೋಗುವ ನೇರೆ ತೆರಿಗೆ ಕರ್ನಾಟಕದಲ್ಲಿ ಕೇಂದ್ರ ಕಚೇರಿ ಇರುವ ಕಾರ್ಪೊರೇಟ್ ಸಂಸ್ಥೆಗಳು ಕಟ್ಟುವ ಕಾರ್ಪೊರೇಟ್ ತೆರಿಗೆಗಳು ಸೇರಿಕೊಳ್ಳುತ್ತವೆ. ಆದರೆ ಈ ಕಾರ್ಪೊರೇಟ್ ಗಳು ಈ ತೆರಿಗೆಯನ್ನು ಒಟ್ಟಾರೆ ತಮ್ಮ ಆದಾಯದ ಮೇಲಿನ ಲೆಕ್ಕಾಚಾರವನ್ನು ಆಧರಿಸಿ ಕಟ್ಟುತ್ತವೆ. ಅಂದರೆ ಅವುಗಳ ಆದಾಯ ಕೇವಲ ಕರ್ನಾಟಕದಲ್ಲಿ ನಡೆಸಿದ ವಹಿವಾಟನ್ನು ಮಾತ್ರ ಆಧರಿಸಿರುವುದಿಲ್ಲ. ಬದಲಿಗೆ ಇಡೀ ದೇಶಾದ್ಯಂತ ಅವರು ನಡೆಸಿರುವ ಬಂಡವಾಳಶಾಹಿ ವಹಿವಾಟು ಮತ್ತು ಲಾಭ ಲೂಟಿಯನ್ನು ಆಧರಿಸಿ ತೆರಿಗೆಯನ್ನು ಕಟ್ಟುತ್ತಾರೆ. ಆದರೆ ಅವರ ಕೇಂದ್ರ ಕಚೇರಿಗಳು ಕರ್ನಾಟಕದಲ್ಲಿ ಇರುವದುದರಿಂದ ಅದು ತಾಂತ್ರಿಕವಾಗಿ ಕರ್ನಾಟಕದಿಂದ ಹೋದ ತೆರಿಗೆಯಾಗಿ ಲೆಕ್ಕವಾಗುತ್ತದೆ.
ಆದರೆ ಅಸಲು ಎಲ್ಲಾ ಕಾರ್ಪೊರೇಟ್ ಆದಾಯ ತೆರಿಗೆಗಳು ಆಯಾ ಕಾರ್ಪೊರೇಟ್ ಸಂಸ್ಥೆಗಳು ಆಯಾ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ನಡೆಸಿದ ವಹಿವಾಟಿನಿಂದ ಪದೆದ ಬಂಡವಾಳಶಾಹಿ ಆದಾಯದ ಭಾಗವಾಗಿರುತ್ತದೆ. ಆದ್ದರಿಂದ ಅದನ್ನು ಕರ್ನಾಟಕಕ್ಕೆ ಸೀಮಿತಗೊಳಿಸಿ ಲೆಕ್ಕ ಹಾಕುವುದು ತಾಂತ್ರಿಕವಾಗಿಯೂ ತಪ್ಪು.
ಆ ತರ್ಕ ಬಂಡವಾಳಶಾಹಿ ಕಾರ್ಪೊರೇಟ್ ಉದ್ಯಮಗಳ ಲಾಭ ಲೂಟಿ ಮತ್ತು ತೆರಿಗೆ ಪಾವತಿಯ ರಾಷ್ಟ್ರೀಯ ಸ್ವರೂಪವನ್ನು ಮರೆಮಾಚುತ್ತದೆ. ಸಮಾನವಾಗಿ ಸುಲಿಗೆಗೆ ಒಳಗಾಗಿರುವ ಭಿನ್ನಭಿನ್ನ ರಾಜ್ಯಗಳ ಜನರ ನಡುವೆ ಇರುವ ಸಾಮ್ಯತೆಯನ್ನು ಮತು ಅದರಿಂದ ಮೂಡಬಹುದಾದ ಐಕ್ಯತೆಯನ್ನು ಹಿಂದಕ್ಕೆ ಸರಿಸಿ ಆಯಾ ರಾಜ್ಯಗಳ ಜನರು ತಮ್ಮ ಸುಲಿಗೆಕೋರ ಬಂಡವಾಳಶಾಹಿಗಳೊಂದಿಗೆ ಒಂದಾಗುವ ಜನವಿರೋಧಿ ಸಂಕುಚಿತ ರಾಷ್ಟ್ರವಾದಕ್ಕೆ ನೀರೆಯುತ್ತದೆ.
ಜಿಎಸ್ಟಿಯಲ್ಲಿ ಪಾಲು ಮತ್ತು ಜಿಎಸ್ಟಿಯ ಜನವಿರೋಧಿತನ
ಇದರೊಂದಿಗೆ ಈ ದೇಶದ ಬಂಡವಾಳಶಾಹಿ ಅಭಿವೃದ್ಧಿ ಕಥನದ ಮತ್ತೊಂದು ಆಯಾಮವನ್ನು ಇತ್ತೀಚಿಗೆ OXFAM ವರದಿ ಬಿಚ್ಚಿಟ್ಟಿದೆ. ಆ ವರದಿಯ ಪ್ರಕಾರ ಈ ದೇಶದಲ್ಲಿ ಜಿಎಸ್ಟಿ ತೆರಿಗೆ ವ್ಯವಸ್ಥೆ ಜಾರಿಗೆಬಂದ ಮೇಲೆ ಅದರ ಪ್ರಧಾನ ಹೊರೆ ಹೊರುತ್ತಿರುವರು ಈ ದೇಶದ ಬಡವರಾದರೆ ಅದರ ಲಾಭ ಪಡೆಯುತ್ತಿರುವರು ಈ ದೇಶದ ಶ್ರೀಮಂತ ವರ್ಗ.
ಆ ವರದಿ ಹೇಳುವಂತೆ ಈ ದೇಶದ ಜಿಎಸ್ಟಿ ಸಂಗ್ರಹದ ಶೇ. 64 ರಷ್ಟು ಭಾಗದಷ್ಟು ತೆರಿಗೆಯನು ತೆರುವರು ಈ ದೇಶದ ಅತ್ಯಂತ ತಳಸ್ಥರದ ಶೇ. 50 ರಷ್ಟು ಜನರು. ಇನ್ನುಳಿದ ಶೇ. 33 ರಷ್ಟು ತೆರಿಗೆಯನ್ನು ಕಟ್ಟುವರು ಮಧ್ಯಮವರ್ಗ. ಈ ದೇಶದ ಶೇ.10 ರಷ್ಟು ಶ್ರೀಮಂತ ವರ್ಗ ಕಟ್ಟುವುದು ಕೇವಲ ಶೇ.3 ರಷ್ಟು ಜಿಎಸ್ಟಿ ಮಾತ್ರ. ಹೀಗಾಗಿ ಜಿಎಸ್ಟಿ ಸಂಗ್ರಹ ಏರಿಕೆ ಎಂಬ ಸಂಭ್ರಮದ ವರದಿಗಳ ನಿಜವಾದ ಆರ್ಥ ಬಡವರ ಸುಲಿಗೆ ಹೆಚ್ಚಾಗಿ ಮತ್ತು ಯಶಸ್ವಿಯಾಗಿ ಆಗುತ್ತಿದೆ ಎಂದು.
ಆದ್ದರಿಂದ ಕರ್ನಾಟಕದ ಜಿಎಸ್ಟಿ ಪಾಲಿನಲ್ಲಿ ಅನ್ಯಾಯ ಆಗುತ್ತಿರುವ ಬಗ್ಗೆ ಧ್ವನಿ ಎತ್ತುವಾಗ ಜಿಎಸ್ಟಿ ವ್ಯವಸ್ಥೆಯೇ ಬಡ-ಮಧ್ಯಮ ವರ್ಗ ವಿರೋಧಿ ಎನ್ನುವ ತಿಳವಳಿಕೆ ಜನಪರ ಕರ್ನಾಟಕತ್ವಕ್ಕೆ ಅತ್ಯಗತ್ಯ.
ಆದರೆ ಕ್ರೂರ ವಾಸ್ತವವೆಂದರೆ ಈ ಜಿಎಸ್ಟಿ ವ್ಯವಸ್ಥೆ ಮೂಲದಲ್ಲಿ ಕಾಂಗ್ರೆಸ್ಸಿನ ಕೂಸು. ಮತ್ತು ಅದನ್ನು ಬಿಜೆಪಿ ಜಾರಿಗೆ ತರುವಾಗ ಎಲಾ ಪಕ್ಷಗಳೂ ಮತ್ತು ಎಲ್ಲಾ ರಾಜ್ಯ ಸರ್ಕಾರಗಳೂ ಒಪ್ಪಿಗೆ ಸೂಚಿಸಿದ್ದವು. ಏಕೆಂದರೆ ಆಳದಲ್ಲಿ ಈ ಆರ್ಥಿಕ ಕೇಂದ್ರೀಕರಣದ ಭಾಗವಾದ ಈ ಜಿಎಸ್ಟಿ ಎಂಬ ತೆರಿಗೆ ಕೇಂದ್ರೀಕರಣವು ಇಂದಿನ ನವ ಉದಾರವಾದಿ ದೊಡ್ಡ ಬಂಡವಾಳಶಾಹಿ ಅಭಿವೃದ್ಧಿಗೆ ಸಂಪನ್ಮೂಲ ಮತ್ತು ಸೌಕರ್ಯಗಳನ್ನು ಒದಗಿಸಿಕೊಡಲು ಅತ್ಯಗತ್ಯ.
ಹೀಗಾಗಿ ಈ ಉದಾಹರಣೆಗಳು ಮತ್ತೊಮ್ಮ ಸ್ಪಷ್ಟ ಪಡಿಸುವುದು ಇಷ್ಟು: ಕೇಂದ್ರದ ತಾರತಮ್ಯ ನಿಂತು ಜನಪರ ಕರ್ನಾಟಕ ಕಟ್ಟಿಕೊಳ್ಳಲು ಅಡ್ಡಿಯಾಗಿರುವುದು ಉತ್ತರದ ಜನರಲ್ಲ. ಉತ್ತರದ ರಾಜ್ಯಗಳಲ್ಲ. ಬದಲಿಗೆ ಅಖಿಲ ಭಾರತ ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾಗಿರುವ ರಾಜಕೀಯ ವ್ಯವಸ್ಥೆ. ಆದ್ದರಿಂದ.. ಸಂಪತ್ತು ಮತ್ತು ಅಧಿಕಾರಗಳ ಸಮಗ್ರ ಸಮಾಜವಾದಿ ವಿಕೇಂದ್ರೀಕರಣದ ಮೂಲಕ ಮಾತ್ರ ಒಂದು ಜನಪರ ಕರ್ನಾಟಕತ್ವವನ್ನು ಕಟ್ಟಲು ಸಾಧ್ಯ
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply