ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಕುಳಗಳಲ್ಲಿ ಪ್ರಮುಖರಾಗಿದ್ದ ರತನ್ ಟಾಟಾ ರವರು ತಮ್ಮ 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1992ರಿಂದ ಟಾಟಾ ಉದ್ಯಮಗಳ ನಾಯಕತ್ವ ವಹಿಸಿದ್ದ ರತನ್ ಟಾಟಾ ಅವರಿಗೆ ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಇತಿಹಾಸದಲ್ಲಿ ಮಾತ್ರವಲ್ಲ ಭಾರತದ ಜನಸಾಮಾನ್ಯರ ಇತಿಹಾಸದಲ್ಲೂ ಒಂದು ಪ್ರಮುಖ ಪಾತ್ರವಿದೆ. ಏಕೆಂದರೆ 1991 ರಿಂದ ಭಾರತದ ಜನಸಾಮಾನ್ಯರ ಇತಿಹಾಸವನ್ನು ಮತ್ತು ಭವಿಷ್ಯವನ್ನು ಸಂಪೂರ್ಣವಾಗಿ ಬರೆಯುತ್ತಿರುವುದು ಭಾರತದ ಕಾರ್ಪೊರೇಟ್ ಬಂಡವಾಲಶಾಹಿಗಳೇ..ಏಕೆಂದರೆ ಭಾರತದ ಪ್ರಭುತ್ವ ಆ ಅಧಿಕಾರವನ್ನು ಸಂವಿಧಾನಿಕವಾಗಿಯೇ ಅವರಿಗೆ ವಹಿಸಿಬಿಟ್ಟಿದೆ.
ಆದರೆ 1991 ರ ನಂತರ ಭಾರತದ ರೈತರ, ಕಾರ್ಮಿಕರ, ಆದಿವಾಸಿಗಳ, ಸಣ್ಣಪುಟ್ಟ ವ್ಯಾಪಾರಿ-ಉದ್ಯಮಿಗಳ, ದಲಿತರ, ಶೋಷಿತ ಮಹಿಳೆಯರ, ವಿದ್ಯಾರ್ಥಿಗಳ ಮತ್ತು ಯುವಜನರ ಬದುಕು ಮತ್ತು ಭವಿಷ್ಯಗಳು ಹೆಚ್ಚೆಚ್ಚು ಅತಂತ್ರವಾಗುತ್ತಾ ಹೋಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅದು ಇನ್ನಷ್ಟು ದಾರುಣವಾಗಿದೆ. ಇದರ ಪ್ರಧಾನ ಕಾರಣಕರ್ತರು ದೇಶದ ರಾಜಕೀಯ ನಾಯಕತ್ವ ವಹಿಸಿರುವ ಸರ್ಕಾರಗಳು ಮತ್ತು ಸರ್ಕಾರಗಳ ನೀತಿಗಳನ್ನು ಕಾರ್ಪೊರೇಟ್ ಲಾಭಕ್ಕೆ ತಕ್ಕಂತೆ ರೂಪಿಸುತಾ, ಪ್ರಭಾವಿಸುತ್ತಾ ಆರ್ಥಿಕ ನಾಯಕತ್ವ ವಹಿಸಿರುವ ರತನ್ ಟಾಟಾ ರಂತ ಬೃಹತ್ ಕಾರ್ಪೊರೇಟ್ ಉದ್ಯಮಿಗಳು.
ಜನರ ಬವಣೆಗೆ ಕಾರಣರಾದ ರಾಜಕೀಯ ನಾಯಕರು ಎಷ್ಟೇ ಜನಪ್ರಿಯರಾದರೂ ಅವರ ರಾಜಕೀಯ ಹಾಗೂ ತೀರ್ಮಾನಗಳ ಬಗ್ಗೆ ಒಂದಿಷ್ಟಾದರೂ ಟೀಕೆ ಮತ್ತು ವಿಮರ್ಶೆಗಳು ಕೇಳಿ ಬರುತ್ತವೆ. ಆದರೆ ಜನರ ಬವಣೆ ಕಾರಣರಾಗಿರುವ ಮತ್ತು ಅದರ ಪ್ರಧಾನ ಫಲಾನುಭವಿಗಳೂ ಆಗಿರುವ ಉದ್ಯಮಿಗಳ ಬಗ್ಗೆ ವಾಸ್ತವಿಕ ವಿಮರ್ಶೆಗಳೇ ಕಂಡು ಬರುವುದಿಲ್ಲ. ರತನ್ ಟಾಟಾ ರವರ ನಿಧನದ ನಂತರವೂ ಇದೇ ಬಗೆಯ ಉಘೆ ಉಘೆ ಭಜನೆಗಳೇ ಟಿವಿ ಮತ್ತು ಮುದ್ರಣ ಮಾಧ್ಯಮಗಳನ್ನು ಆವರಿಸಿಕೊಂಡಿದ್ದವು. ಅದರಲ್ಲಿ ಹಲವು ಪ್ರಗತಿಪರ ಧೋರಣೆಯ ವ್ಯಕ್ತಿ ಮತ್ತು ಸಂಸ್ಥೆಗಳೂ ಸಹಭಾಗಿಯಾಗಿದ್ದವು.
ಇದಕ್ಕೆ ಹಲವಾರು ವಾಸ್ತವಿಕ ಕಾರಣಗಳಿವೆ:
1.ಮೋದಿ ಕಾಲದಲ್ಲಿ ಸರ್ಕಾರದೊಡನೆ ಇರುವ ಸಾಮೀಪ್ಯವನ್ನು ಮತ್ತು ಮೈತ್ರಿಯನ್ನು ಬಳಸಿಕೊಂಡು ಕಾನೂನುಗಳನ್ನು ಒಗ್ಗಿಸಿ ಬಗ್ಗಿಸಿ ಕಾನೂನುಬಾಹಿರ ಸೌಲಭ್ಯ, ಪ್ರೋತ್ಸಾಹ ಲಾಭ ಪಡೆದುಕೊಂಡಿರುವ ಆದಾನಿ ಮತ್ತು ಅಂಬಾನಿಗಳಿಗೆ ಹೋಲಿಸಿದರೆ ಟಾಟಾ ಗುಂಪು ನೀತಿಬದ್ಧ ಉದ್ಯಮ ನೀತಿಗಳನ್ನು ಅನುಸರಿಸುತ್ತಾ ಬಂದಿದೆ ಎಂಬ ತಪ್ಪು ತಿಳವಳಿಕೆ ಅಥವಾ ಮೂಢ ನಂಬಿಕೆ
2..ಟಾಟಾ ಗುಂಪು ಉಪ್ಪಿನಿಂದ-ಉಪಗ್ರಹದ ತನಕ ದೇಶಕ್ಕೆ ಬೇಕಿರುವ ಎಲ್ಲವನ್ನು ಉತ್ಪಾದನೆ ಮಾಡುತ್ತಾ ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡಿದೆ ಎಂಬ ಆಳುವವರ್ಗದ ಬಂಡವಾಳಶಾಹಿ ಪರ ಕಥನ. ಅವಿಮರ್ಶಾತ್ಮಕವಾಗಿ ಒಪ್ಪಿಕೊಂಡಿರುವುದು (bEDa). ಇದಕ್ಕೆ ಭಾರತದ ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಸಾರ್ವಜನಿಕ ಉದ್ಯಮಗಳು ದೇಶವನ್ನು ಕಟ್ಟಿರುವ ಬಗ್ಗೆ ಮಾಹಿತಿ ಕೊರತೆ ಒಂದು ಕಾರಣವಾದರೆ, ಅವುಗಳನ್ನು ವ್ಯವಸ್ಥಿತವಾಗಿ ಸರ್ವನಾಶ ಮಾಡಿ ಈ ಟಾಟಾ ದಂತ ಉದ್ಯಮಗಳು ಬೆಳದ ಇತಿಹಾಸವನ್ನು ಮರೆತಿರುವುದು, ಮರೆಮಾಚುತ್ತಿರುವುದೂ ಮತ್ತೊಂದು ಕಾರಣ. ಇದಲ್ಲದೆ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಮೂಡಿಸಲಾಗಿರುವ ಬೆರಗು ಹಾಗೂ ಸಮಾಜವಾದಿ ಪರಿಕಲ್ಪನೆಯ ಬಗ್ಗೆ ಬೆಳೆಸಿರುವ ಪೂರ್ವಗ್ರಹಗಳೂ ಕೂಡ ಇದಕ್ಕೆ ಮತ್ತೊಂದು ಕಾರಣ . ಅದರಲೂ ಸೋವಿಯತ್ ರಷ್ಯಾದ ಕುಸಿತದ ನಂತರ ಬಂಡವಾಳಶಾಹಿ ವ್ಯವಸ್ಥೆಯೇ ಮನುಕುಲದ ಚರಮ ಸೀಮೆ ಎಂಬ ಆಸ್ಥಾನ ಪಂಡಿತರ ಪ್ರಭುತ್ವ ಪೋಷಿತ ವ್ಯವಸ್ಥಿತ ಪ್ರಚಾರಗಳಿಂದಾಗಿ ಬಂಡವಾಳಶಾಹಿ ಸುಲಿಗೆಯನ್ನು ಶೋಷಣೆಯೆಂದು ಭಾವಿಸದೆ ಉಪಕಾರವೆಂದು ಭಾವಿಸುವ ಗ್ರಹಿಕೆಯು ಜಾಗತಿಕ ವಿದ್ಯಮಾನವೇ ಆಗಿಬಿಟ್ಟಿದೆ.
3. ಮೂರನೆಯದಾಗಿ ಟಾಟಾ ಗುಂಪು ಶೈಕ್ಷಣಿಕ, ವೈಜ್ನಾನಿಕ ಸಂಸ್ಥೆಗಳ ಸ್ಥಾಪನೆಗಳನ್ನೂ ಒಳಗೊಂಡಂತೆ ಇತರ ಸಾರ್ವಜನಿಕ ಸೇವೆಗಳಲ್ಲೂ ತೊಡಗಿಕೊಂಡು ಜನಸೇವೆ ಮಾಡುತ್ತಿವೆ ಹಾಗೂ ತನ್ನ ಉದ್ಯಮಗಳಲ್ಲಿ ಸಮಾಜದ ದಮನಿತ ಸಮುದಾಯಗಳಿಗೆ ಇತರರಿಗಿಂತ ಹೆಚ್ಚು ಅವಕಾಶ ಕೊಡುತ್ತವೆ ಎಂಬ ಅರ್ಧ ಸತ್ಯಗಳು ಹುಟ್ಟುಹಾಕಿರುವ “ಜನಸೇವಕ ಉದ್ಯಮಿ”, “ಜನೋದ್ಯಮಿ” ಎಂಬ ಪ್ರಭಾವಳಿಗಳೂ ಕಾರಣವಾಗಿವೆ. ಇವೆಲ್ಲವೂ ಕೆಲವು ದಶಕಗಳ ಹಿಂದೆ ಕವಿ ಸಿದ್ಧಲಿಂಗಯ್ಯನವರ ಹಾಡಿನಲ್ಲಿ ಇದ್ದ ” ಯಾರಿಗೆ ಬಂತು? ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ? ಟಾಟಾ ಬಿರ್ಲಾರ ಜೇಬಿಗೆ ಬಂತು 47 ರ ಸ್ವಾತಂತ್ರ್ಯ” ಎಂಬ ಕಾಮನ್ ಸೆನ್ಸ್ ವಿವೇಕವನ್ನು ಹಿಮ್ಮೆಟ್ಟಿಸಿ ಪಂಡಿತರಿಂದ ಪಾಮರರಾದಿಯಾಗಿ ಎಲ್ಲರೂ ಟಾಟಾ ಭಜನೆಯಲ್ಲಿ ತೊಡಗುವಂತೆ ಮಾಡಿದೆ. ಹೀಗಾಗಿ ರತನ್ ಟಾಟಾ ರವರ ಸಾವಿನ ನಂತರದ ವಿದ್ಯಮಾನಗಳು ಬಯಲು ಮಾಡಿರುವುದು ಈ ದೇಶದ ವಿವೇಕದ ಮೇಲೆ ಬಂಡವಾಳಶಾಹಿ ಸಿದ್ಧಾಂತದ ಯಾಜಮಾನ್ಯವನ್ನು. ಏಕೆಂದರೆ ಬಂಡವಾಳಶಾಹಿ ವ್ಯವಸ್ಥೆ ಆಳುವುದು ಕೇವಲ ಪೊಲೀಸರ ಬೂಟುಗಳಿಂದಲ್ಲ. ಬದಲಿಗೆ ಶೋಷಿತರಲ್ಲಿ ಕೀಳರಿಮೆ ಮತ್ತು ಶೋಷಣೆಯ ಬಗ್ಗೆ ವಾಲಂಟರಿ ಸಮ್ಮತಿಯನ್ನು ಉತ್ಪಾದಿಸುವ ಹೆಜೊಮೊನಿ-ಸೈದ್ಧಾಂತಿಕ ಯಾಜಮಾನ್ಯದ ಮೂಲಕ.
ಆದ್ದರಿಂದ ಬಂಡವಾಳಶಾಹಿಯನ್ನು ಸೋಲಿಸಬೇಕೆಂದರೆ ಮೊದಲಿಗೆ ಬಂಡವಾಳಶಾಹಿಯ ಬೌದ್ಧಿಕ ಯಾಜಮಾನ್ಯದಿಂದಲೂ ಬಿಡುಗಡೆ ಹೊಂದಬೇಕಿರುತ್ತದೆ. ಜಾತಿ ದಾಸ್ಯದಿಂದ ಬಿಡುಗಡೆಯಾಗಬೇಕೆಂದರೆ ಬ್ರಾಹ್ಮಣ್ಯ ಹಾಗೂ ನವಬ್ರಾಹ್ಮಣ್ಯದ ಸೈದ್ಧಾಂತಿಕ ಸಂಕೋಲೆಗಳಿಂದ ಬಿಡಿಸಿಕೊಳ್ಳುವ ಅಗತ್ಯವಿರುವಂತೆ. ಅಂಬೇಡ್ಕರ್ ಹೇಳುವಂತೆ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಯಿಂದ ವಿಮೋಚನೆಯಾಗದೆ ಈ ದೇಶದ ದಮನಿತರಿಗೆ ವಿಮೋಚನೆಯಿಲ್ಲ. ಬಂಡವಾಳಶಾಹಿ ಯಾಜಮಾನ್ಯದಿಂದ ಸಮಾಜವಾದಿ ನೆಲೆಯಿಂದಲ್ಲದೆ ಮೃದು ಬಂಡವಾಳಶಾಹಿ ಹತಾರಗಳ ಮೂಲಕ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಟಾಟಾ ಗಳ ಪಾತ್ರದ ವರ್ಗ ಹಿತಾಸಕ್ತಿಯನ್ನು ಅರಿಯುವ ಮೂಲಕ ಬಂಡವಾಳಶಾಹಿ ಬೌದ್ಧಿಕ ಯಾಜಮಾನ್ಯದಿಂದ ಹೊರಬರುವ ಪ್ರಯತ್ನ ಪಡಬಹುದು.
*ಬ್ರಿಟಿಷರ ಹಡಗೇರಿ ಬೆಳದ ಟಾಟಾ ಸಾಮ್ರಾಜ್ಯ*
ಸ್ವಾತಂತ್ರ್ಯ ಪೂರ್ವದ ಇತಿಹಾಸದ ಬಗ್ಗೆ ಮತ್ತು ಸ್ವಾತಂತ್ರ್ಯಾ ನಂತರದ ಪ್ರಾರಂಭಿಕ ದಶಕಗಳಲ್ಲಿ ಆಗಿನ ಭಾರತದ ಪ್ರಮುಖ ಉದ್ಯಮಿಗಳಾಗಿದ್ದ ಟಾಟಾ ಮತ್ತು ಬಿರ್ಲಾಗಳ ಬಗ್ಗೆ ಕಟ್ಟಿರುವ ಕಥನವೇನೆಂದರೆ ಅವರು ಬ್ರಿಟಿಷ್ ವಿರೋಧಿಯಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿದ್ದರು. ಆದ್ದರಿಂದ ಅವರು ದೇಶಭಕ್ತ ರಾಷ್ತ್ರೀಯ ಬಂಡವಾಳಶಾಹಿಗಳಾಗಿದ್ದರು ಎಂಬುದು. ಆದರೆ ಇದಕ್ಕಿಂತ ತಿರುಚಿದ ಇತಿಹಾಸ ಮತ್ತೊಂದಿಲ್ಲ. ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸಲು ಹಾಗೂ ಜಗತ್ತಿನಾದ್ಯಂತ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬೇಕಿದ್ದ ಸರಕು ಸರಬರಾಜುಗಳನ್ನು ಮಾಡುತ್ತಿದ್ದ ವರ್ತಕರು ಟಾಟಾ ಮತ್ತು ಬಿರ್ಲಾಗಳು. ಬ್ರಿಟಿಷ್ ಸಾಮ್ರಾಜ್ಯವನ್ನು ಉಳಿಸಲು ಮತ್ತು ಬೆಳೆಸಲು ಬೇಕಾದ ವ್ಯಾಪಾರಿ ಸಹಾಯ ಮಾಡುತ್ತಲೇ ಈ ಉದ್ಯಮಿಗಳು ತಮ್ಮ ಲಾಭವನ್ನು ಹೆಚ್ಚಿಸಿಕೊಂಡವು. ಮುಂದೆ ಉದ್ಯಮವನ್ನು ಸ್ಥಾಪಿಸಲು ಬೇಕಾದ ಮೂಲ ಬಂಡವಾಳವನ್ನೂ ಸಂಚಯಿಸಿಕೊಂಡವು.
ಅದರಲ್ಲೂ ಟಾಟಾ ಮತ್ತು ಬಿರ್ಲಾಗಳು ಚೀನಾವನು ಸೋಲಿಸಲು ಬ್ರಿಟಿಷ್ ವಸಾಹತುಶಾಹಿಗಳು ಚೀನಾವನ್ನು ಅಫೀಮು ಮತ್ತರನ್ನಾಗಿಸಲು ಪ್ರಾರಭಿಸಿದ ಅಫೀಮು ವ್ಯಾಪಾರದಲ್ಲೂ ಪ್ರಮುಕ ಪಾಲುದಾರರಾಗಿದ್ದರು. ಟಾಟಾ ಗಳಂತೂ ಆಗಿನ ಅಬಿಸೀನಿಯಾ ಅಥವಾ ಈಗಿನ ಎಥಿಯೋಪಿಯಾದಲ್ಲಿ ಬ್ರಿಟಿಷ ಸೈನ್ಯ ಮತ್ತು ಯುದ್ಧ ಕ್ಕೆಬೇಕಾದ ಎಲ್ಲಾ ಸರಕುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಿ ಅಪಾರ ಸಂಪತ್ತು ಕೂಡಿಹಾಕಿಕೊಂಡರು. 1911 ರಲ್ಲಿ ಬ್ರಿಟಿಷರ ಸಹಕಾರ ಮತ್ತು ಬಂಡವಾಳ ಸಹಾಯದೊಂದಿಗೆ ಜಮ್ಶೆಡ್ಪುರದಲ್ಲಿ ಟಾಟಾ ಅವರು ಸ್ಥಾಪಿಸಿದ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರಾಖಾನೆಯು ಭಾರತ ಮತ್ತು ಬೇರೆ ದೇಶಗಳಲ್ಲಿದ್ದ ಬ್ರಿಟಿಷ್ ಸೇನಾ ಯಂತ್ರಾಂಗಕ್ಕೆ ಉಕ್ಕಿನ ಶಕ್ತಿಯನ್ನು ತಂದುಕೊಟ್ಟಿತ್ತು.
ಹೀಗೆ ಬ್ರಿಟಿಷ್ ವಸಾಹತುಶಾಹಿಗಳಿಗೂ ಮತ್ತು ಟಾಟಾ ಗಳಂತ ದೊಡ್ಡ ಉದ್ಯಮಿಗಳಿಗೂ ಇದ್ದದ್ದು ಅವಲಂಬಿತ ಸಂಬಂಧವೇ ವಿನಾ ವೈರತ್ವವಲ್ಲ. ಅದಕ್ಕೆ ತದ್ವಿರುದ್ಧವಾಗಿ ಅಖಂಡ ಭಾರತದುದ್ದಕ್ಕೂ ತಲೆ ಎತ್ತುತ್ತಿದ್ದ ಹಲವಾರು ಸಣ್ಣ ಪುಟ್ಟ ಉದ್ಯಮಿಗಳಿಗೆ ಬ್ರಿಟಿಶರೆಂದರೆ ದ್ವೇಷವಿತ್ತು. ಅವರಲ್ಲಿ ಹಲವರು ಸ್ವಾತಂತ್ರ್ಯ ಹೋರಾಟಕ್ಕೆ ಸಹಾಯ ಮಾಡುತ್ತಿದ್ದರು ಅಥವಾ ಭಾಗವಹಿಸುತ್ತಿದ್ದರು. ಆದರೆ ಟಾಟಾ-ಬಿರ್ಲಾಗಳು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲೂ ” ರಾಜಕೀಯ ಸ್ವದೇಶಿ” ಮತ್ತು “ಆರ್ಥಿಕ ಸ್ವದೇಶಿ” ಬೇರೆಬೇರೆ ಎಂದೇ ವಾದ ಮಾಡುತ್ತಿದ್ದರೂ.
ಹೇಗೆ ಹಿಂದೂ ರಾಷ್ಟ್ರ ದ ಹೆಸರಲ್ಲಿ ಬ್ರಿಟಿಷ್ ಸೇನೆಯನ್ನು ಗಟ್ಟಿಗೊಳಿಸಲು ಹಿಂದೂ ಯುವಕರನ್ನು ಬ್ರಿಟಿಷ್ ಸೇನೆಗೆ ನೇಮಕಾತಿ ಮಾಡಿಸಿಕೊಳ್ಳುವ ಗುತ್ತಿಗೆ ಪಡೆದಿದ್ದ ಸಾವರ್ಕರ್ ರನ್ನು ಬ್ರಿಟಿಷ್ ವಿರೋಧಿ ಎನ್ನಲು ಸಾಧ್ಯವಿಲ್ಲವೋ. ಅದೇ ಕಾರಣಕ್ಕೆ ಟಾಟಾ-ಬಿರ್ಲಾಗಳಂತ ಬೃಹತ್ ವರ್ತಕ ಉದ್ಯಮಿಗಳನ್ನೂ ರಾಷ್ಟ್ರೀಯವಾದಿ ಬಂದವಾಳಶಾಹಿಗಳೆನ್ನಲು ಸಾಧ್ಯವಿಲ್ಲ. ಭಾರತದ ಈ ದೊಡ್ಡ ಬಂಡವಾಳಶಾಹಿಗಳು ಹುಟ್ಟಿದ್ದೇ ಬ್ರಿಟಿಶ ವಶಾಹತುಶಾಹಿಗಳ ಬೆಂಬಲ ಮತ್ತು ಸಹಕಾರದಿಂದ.
*ಸ್ವಾತಂತ್ರ್ಯೋತ್ತರ ಮಿಶ್ರ ಆರ್ಥಿಕತೆ- ರೋಡು ಸರ್ಕಾರದ್ದು, ಕಾರು ಟಾಟಾ-ಬಿರ್ಲಾಗಳದ್ದು!*
ಸ್ವಾತಂತ್ರ್ಯಾನಂತರದಲ್ಲಿ ಭಾರತದ ಸಂವಿಧಾನದ ಆಶಯ ಸಮಾಜಾವಾದಿ ಸಮಾಜದ ಸೃಷ್ಟಿಯೆಂದು ಬರೆದುಕೊಂಡಿದ್ದರೂ ಅವೆಲ್ಲವನ್ನು ಹಕ್ಕಾಗಿಸದೆ, ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸಲಾಗದ ಪ್ರಭುತ್ವ ನಿರ್ದೇಶನದ ತತ್ವಗಳಲ್ಲಿ ಸೇರಿಸಲಾಯಿತು. ಹೀಗಾಗಿ ಸ್ವಾತಂತ್ರ್ಯ ನಂತರದ ಹಲವು ದಶಕಗಳವರೆಗೆ ಭೂಮಾಲೀಕತ್ವವೂ ರದ್ದಾಗಲಿಲ್ಲ. ಬಂಡವಾಳಶಾಯಿಯೂ ಬೆಳೆಯಿತು ಮತ್ತು ಬಲಿಯಿತು. ಇದನ್ನು ಸಾಧ್ಯಗೊಳಿಸಲು ಮಿಶ್ರ ಅರ್ಥಿಕತೆಯೆಂಬ ವ್ಯವಸ್ಥೆಯನ್ನು ಟಾಟಾ ನೇತೃತ್ವದ ಭಾರತದ ದೊಡ್ಡ ಬಂಡವಾಳಶಾಹಿಗಳು ಪ್ರತಿಪಾದಿಸಿದ್ದನ್ನು ಭಾರತದ ಪ್ರಭುತ್ವ ಚಾಚೂ ತಪ್ಪದೇ ಅನುಸರಿಸಿತು.
ಮಿಶ್ರ ಅರ್ಥಿಕತೆಯ ಸಾರವಿಷ್ಟೆ. ಭಾರತದ ಖಾಸಗಿ ಬಂಡವಾಳಶಾಹಿಗಳ ಬಳಿ ಬಂಡವಾಳವು ಕಡಿಮೆ ಇರುವುದರಿಂದ ದೇಶಕ್ಕೆ ಅಗತ್ಯವಿರುವ ದೊಡ್ಡ ದೊಡ್ಡ ಉದ್ಯಮಗಳನ್ನು ಜನರ ತೆರಿಗೆ ದುಡ್ಡಿನಲ್ಲಿ ಸಾರ್ವಜನಿಕ ರಂಗದಲ್ಲಿ ಕಟ್ಟಲಾಗುವುದು. ಅದಕ್ಕೆ ಬೇಕಿರುವ ಸರಬರಾಜು ಮತ್ತು ಉತ್ಪನ್ನಗಳನ್ನು ಆಧರಿಸಿ ಖಾಸಗಿ ಬಂಡವಳಶಾಹಿ ರಂಗ ಬೆಳೆಯಲು ಸರ್ಕಾರ ಅವಕಾಶ ಮಾಡಿಕೊಡುವುದು. ಅಂದರೆ ಸರ್ಕಾರವೇ ಟಾಟ ಮತ್ತು ಬಿರ್ಲಾಗಳನ್ನು ಪೋಷಿಸುವ ಬೆಳೆಸುವ ಜವಾಬ್ದಾರಿ ಹೊತ್ತಿತು. ಮತ್ತು ದೊಡ್ದ ರೀತಿಯಲ್ಲಿ ಉತ್ತೇಜನ, ಸಹಾಯ ಮತ್ತು ಸಹಕಾರಗಳನ್ನು ಕೊಟ್ಟು ಈ ದೊಡ್ಡ ಉದ್ಯಮಿಗಳನ್ನು ಬೆಳೆಸಲಾಯಿತು. ನಂತರ ಅವರ ಬಂಡವಾಳ ಶಕ್ತಿಬೆಳೆದ ನಂತರ ಸರ್ಕಾರ ತಾನು ಜನರ ತೆರಿಗೆಯಲ್ಲಿ ಬೆಳೆಸಿದ ಉದ್ಯಮಗಳನ್ನೆಲಾ ಅವರಿಗೆ ಬಿಟ್ಟುಕೊಡಬೇಕೆನ್ನುವ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಮಿಶ್ರ ಭಾಷೆಯಲ್ಲಿ ಮಿಶ್ರ ಆರ್ಥಿಕತೆಎಂದು ಕರೆಯಲಾಯಿತು.
*ತುರ್ತುಸ್ಥಿತಿ ಮತ್ತು ಟಾಟಾ ಮೆಮೊರಾಂಡಮ್*
ಭಾರತದ ಪ್ರಜಾತಂತ್ರದಲ್ಲಿ ಅಂತರ್ಗತವಾಗಿರುವ ಸರ್ವಾಧಿಕಾರಿ ಧೋರಣೆಯನ್ನು ಹೊರಗೆ ತಂದದ್ದು ಇಂದಿರಾಗಾಂಧಿ ಜಾರಿ ಮಾಡಿದ ತುರ್ತುಸ್ಥಿತಿ. ಅದನ್ನು ಈಗ (ಬೇಡ ) 77 ರಲ್ಲಿ ತೆರವು ಮಾಡಿದರೂ ದೇಶದ ಬಹುಪಾಲು ಭಾಗಗಳ ಬದುಕುಗಳೂ ಶಾಶತ ತುರ್ತುಸ್ಥಿತಿಯಲ್ಲೇ ಇವೆ. ಮೋದಿ ಬಂದ ಮೇಲೆ ಅದು ಜಾಸ್ತಿಯಾಗಿದೆ. ಆದರೆ ಪ್ರಜಾತಂತ್ರದ ಎಥಿಕ್ಸ್ ಗಳಿಗೆ ತದ್ವಿರುದ್ಧವಾಗಿದ್ದ ತುರ್ತುಸ್ಥಿತಿಯ ಸಂದರ್ಭದಲ್ಲಿ ನೀತಿವಂತ ಬಂಡವಾಳಶಾಹಿ-Ethical Capitalists- ಎಂದೆಲ್ಲಾ ಹೊಗಳಿಕೆಗಳಿಗೆ ಗುರಿಯಾಗಿರುವ ಟಾಟಾ ಗಳ ಪಾತ್ರವೇನಿತ್ತು? ಮೊದಲನಯೆದಾಗಿ ಭಾರತದ ದೊಡ್ಡ ಬಂಡವಾಳಶಾಹಿಗಳಾಗಿರುವ ಟಾಟಾ, ಬಿರ್ಲಾಗಳು ಈ ರಾಜಕೀಯ ಸರ್ವಾಧಿಕಾರವನ್ನು ಬಂಡವಾಳಶಾಹಿಯ ಸರ್ವಾಧಿಕಾರವನ್ನಾಗಿ ಮಾಡಿಕೊಂಡರು.
ದೇಶದೆಲ್ಲೆಡೆ ಪೋಲಿಸ್ ರಾಜ್ಯ ಸ್ಥಾಪಿತವಾಗಿರುವುದರಿಂದ ಮತ್ತು ಮುಶ್ಕರ, ಹರತಾಳಗಳು ನಿಶೇಧವಾಗಿರುವುದರಿಂದ ಕಾರ್ಮಿಕರಲ್ಲಿ ಶಿಸ್ತು ಬರಲಾರಂಭಿಸಿದೆ. ಇದರಿಂದ ರೈಲುಗಳೂ ಸರಿಯಾದ ಸಮಯಕ್ಕೆ ಬರುತ್ತಿವೆ. ಇದರಿಂದ ದೇಶದ ಅಭಿವೃದ್ಧಿಯಾಗಲಿದೆಯೆಂದೂ ಸರ್ವಾಧಿಕಾರಿ ಇಂದಿರಾಗಾಂಧಿಯನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿದರು.
ಮತ್ತೊಂದೆಡೆ ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶದ ಎಲ್ಲಾ ಜನರ ಸಣ್ಣಪುಟ್ಟ ಉಳಿತಾಯವೂ ದೊಡ್ಡ ಇಡುಗಂಟಾಗಿ ಬಂಡವಾಳವಾಗಿ ದೊರೆಯಲು ಪ್ರಾರಂಭಿಸಿತು. ಇದರ ಲಾಭದ ಅಂದಾಜು ಇದ್ದ ಆಗಿನ ಟಾಟಾ ಸಮೂಹದ ಅಧ್ಯಕ್ಷ ಜೆ.ಆರ್.ಡಿ ಟಾಟಾ ಅವರು ಆಗ ಇಂದಿರಾಗಾಂಧಿಗೆ “ಟಾಟಾ ಮೆಮೋರಾಂಡಮ್” ಒಂದನ್ನು ಸಲ್ಲಿಸಿದರು. ಅದರಲ್ಲಿ ಈ ಬ್ಯಾಂಕ್ ಬಂಡವಾಳವನ್ನು ದೊಡ್ಡ ಉದ್ಯಮಿಗಳಿಗೆ ಕಡಿಮೆ ದರದಲ್ಲಿ ಒದಗಿಸುವ, ಸರ್ಕಾರಿ-ಖಾಸಗಿ ಪ್ರಾಯೋಜಿತ್ವದಲ್ಲಿ ಉದ್ಯಮಗಳನ್ನು ನಡೆಸುವ, ಸರ್ಕಾರಿ ಉದ್ಯಮಗಳನ್ನು ಖಾಸಗಿಯವರಿಗೆ ಬಿಟ್ಟುಕೊಡುವ ..ಒಟ್ಟಿನಲ್ಲಿ ಸಾರ್ವಜನಿಕ ಕ್ಶೇತ್ರವನ್ನು ಕೊಂದು ಲಾಭಕೋರ ಖಾಸಗಿ ಕ್ಶೇತ್ರವನ್ನು ಬೆಳೆಸುವ ಅತ್ಯಂತ ಅನೀತಿಯುತ ರಹದಾರಿಯನ್ನು ನೀತಿಯುತ ಬಂಡವಾಳ ಶಾಹಿ ಎಂಬ ಹೆಗ್ಗಳಿಕೆಯ ಟಾಟಾ ಮುಂದಿಟ್ಟರು. 1980ರ ನಂತರ ಎರಡನೇ ಬಾರಿ ಇಂದಿರಾ ಗಂಧಿ ಪ್ರಧಾನಿಯಾದ ಮೇಲೆ ಹಾಗೂ 1985 ರಿಂದ ರಾಜೀವ್ ಗಾಂಧಿ ಆನುಸರಿಸಿದ ನೀತಿಗಳಲ್ಲೇ ಸಾರ್ವಜನಿಕ ಕ್ಷೇತ್ರವನ್ನು ಖಾಸಗಿ ಲಾಭಕ್ಕೆ ಬಲಿಯಾಗಿಸುವ ಅತ್ಯಂತ Unethical Cpitalism ನ ಅನುಷ್ಠಾನವೇ ಆಗಿತ್ತು. ಅದರ ಪ್ರಮುಖ ರೂವಾರಿ ಮತ್ತು ಫಲಾನುಭವಿ ಈ ಟಾಟಾ ಸಮೂಹವೇ ಆಗಿತ್ತು.
*1991 ರ ನಂತರದ ಕೊಲೆಗಡುಕ ಬಂಡವಾಳಶಾಹಿ ಯುಗದ ನೇತಾರ*
1991 ರಲ್ಲಿ ಸೋವಿಯತ್ ಒಕ್ಕೂಟ ಕುಸಿದ ನಂತರದಲ್ಲಿ ನವ ವಸಾಹತುಶಾಹಿ ಅಮೆರಿಕ ಪ್ರಾಯೋಜಿತ, ಅಮೆರಿಕನ್ ಮಾದರಿ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯನ್ನು ವಿಶ್ವಬ್ಯಾಂಕ್, ಐಎಂಎಫ಼್ ಮತ್ತು ವಿಶ್ವವಾಣಿಜ್ಯ ಸಂಸ್ಥೆಗಳು ಭಾರತದಂತ ಬಡದೇಶಗಳ ಮೇಲೂ ಹೇರಲಾರಂಭಿಸಿತು. ಭಾರತವೂ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ ನೇತೃತ್ವದಲಿ ಆವರೆಗೆ ನೆಪಮಾತ್ರಕ್ಕಾದರೂ ಇದ್ದ ದೇಶರಕ್ಷಕ, ಜನಪರ ನೀತಿಗಳನ್ನು ಕಿತ್ತು ಹಾಕಿ ಖಾಸಗೀಕರಣ-ಉದಾರೀಕರಣ-ಜಾಗತೀಕರಣ ನೀತಿಗಳ ಮೂಲಕ ಈ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯನ್ನು ಜಾರಿ ಮಾಡಲಾರಂಭಿಸಿದರು.
ಇದರ ಪ್ರಧಾನ ಅಂಶಗಳು:
ಸರ್ಕಾರದ ಸ್ವತ್ತುಗಳನ್ನು ಖಾಸಗಿಯವರಿಗೆ ಪರಭಾರೆ ಮಾಡುವುದು, ಸರ್ಕಾರಿ ರಂಗವನ್ನು ಮುಚ್ಚುವುದು, ತೆರಿಗೆ ಹಣ, ಬ್ಯಾಂಕು ಬಂಡವಾಳ ದ ಮೊದಲ ಹಕ್ಕುದಾರರು ದೊಡ್ದ ಬಂಡವಾಳಿಗರು, ವಿದೇಶಿ ಮತ್ತು ಸ್ವದೇಶಿ ಬಂಡವಾಳಿಗರ ಪ್ರವೇಷಕ್ಕೆ ಇದ್ದ ಎಲ್ಲಾ ಅಡೆತಡೆಗಳ ನಿವಾರಣೆ, ಹಾಗೂ ಬಂಡವಾಳ ಶಾಹಿ ಲಾಭಕ್ಕೆ ಪೂರಕವಾಗಿ ಎಲ್ಲಾ ಕಾರ್ಮಿಕ, ಅರಣ್ಯ, ಇತ್ಯಾದಿ ಕಾನೂನುಗಳನ್ನು ಬದಲಿಸಿ ಸಾರದಲ್ಲಿ ಪ್ರಕೃತಿಯ ಮೇಲೆ ಮತ್ತು ಕಾರ್ಮಿಕರ ಮೇಲೆ ಬಂದವಾಳ ಶಾಹಿ ಸುಲಿಗೆಯನ್ನು ಸರ್ವಾಧಿಕಾರವನ್ನು ಕಾನೂನುಬದ್ಧಗೊಳಿಸುವ ಆಳ್ವಿಕೆ . ಸಂವಿಧಾನದಲ್ಲಿದ್ದ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ತದ್ವಿರುದ್ಧವಾಗಿ ಒಂದು ಬಂಡವಾಳಶಾಹಿ ಸರ್ವಾಧಿಕಾರವನ್ನು ಖಾಯಂಗೊಳಿಸುವ ಪೊಲೀಸು ರಾಜ್ಯದ ಜಾರಿ.
ಹಾಗೆ ನೋಡಿದರೆ ಬಂಡವಾಳಶಾಹಿ ವ್ಯವಸ್ಥೆಯೇ ಹಲವರನ್ನು ಸುಲಿದು ಕೆಲವರು ಬೆಳೆಯುವ ಆಮಾನವೀಯ ವ್ಯವಸ್ಥೆ. ಹೀಗಾಗಿ ನೀತಿಯುತ ಬಂಡವಾಳಶಾಹಿ ಎನ್ನುವ ಪದವೇ ತದ್ವಿರುದ್ದ ಪದಗಳ ಸಮೂಹ. ಆದರೆ ಮೇಲ್ನೋಟಕ್ಕೆ ಕಾಣುವಂತೆ 91 ರ ನಂತರಜಾರಿಯಾದದ್ದು ಅದಕ್ಕಿಂದಲ್ಲೂ ಘೋರವಾದ ಕೊಲೆಗಡುಕ ಬಂಡಾವಾಳಶಾಹಿ ವ್ಯವಸ್ಥೆ. ಇದೇ ಕಾಲಘಟ್ಟದಲ್ಲೇ , 1991 ರಲ್ಲಿ ರತನ್ ಟಾಟಾ ರವರು ಟಾಟಾ ಸಮೂಹದ ನೇತಾರರಾಗಿ ಅಧಿಕಾರ ಸ್ವೀಕರಿಸಿದರು. ಭಾರತವು ಹೊರಳಿಕೊಂಡ ಈ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯ ಯುಗದ ಬಗ್ಗೆ ನೀತಿಯುತ ಬಂಡವಾಳಶಾಹಿ ಎಂಬ ಹೆಗ್ಗಳಿಕೆಯ ಟಾಟಾ ಉದ್ಯಮದ ನಿಲುವು ಮತ್ತು ಪ್ರತಿಕ್ರಿಯೆ ಏನಿತ್ತು?
ವಾಸ್ತವದಲ್ಲಿ ಈ ನೀತಿಯ ಪ್ರಮುಖ ಪ್ರತಿಪಾದಕರು ಮತ್ತು ಫಲಾನುಭವಿಗಳು ಟಾಟಾ ಉದ್ಯಮವೇ ಆಗಿತ್ತು. ಆಗ ವಿದೇಶಿ ಬಂಡವಾಳಕ್ಕೆ ಇಡಿಯಾಗಿ ಅವಕಾಶ ಕೊಡಬೇಕೆ ಎಂಬ ಬಗ್ಗೆ ಬೃಹತ್ ಬಂಡವಾಳ ಶಾಹಿಗಳ ಬಾಂಬೆ ಕ್ಲಬ್ ಮತ್ತು ಕೋಲ್ಕತ್ತ ಕ್ಲಬ್ ಗಳ ವಾಗ್ವಾದಗಳಲ್ಲಿ ಟಾಟಾ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ ಪರವಾದ ನಿಲುವನ್ನು ಹೊಂದಿದ್ದರು. ಅದೇ ರೀತಿ ಅರಣ್ಯ ಗಳಿಂದ ಆದಿವಾಸಿಗಳನ್ನು ಎತ್ತಂಗಡಿ ಮಾಡಿ ಖನಿಜ ಸಂಪತ್ತಿನ ಲೂಟಿ ಮಾಡಲು ಬೇಕಾದ ಕಾನೂನು ರಚಿಸುವುದರಲ್ಲಿ, ಬ್ಯಾಂಕ್ ಬಂಡವಳವು ಸಾಮಾನ್ಯ ಜನರಿಗಿಂತ ಜಾಸ್ತಿ ದೊಡ್ಡ ಉದ್ಯಮಿಗಳಿಗೆ ದಕ್ಕಬೇಕೆಂಬ ನೀತಿಯನ್ನು ರೂಪಿಸುವುದರಲ್ಲಿ, ಬಂದರು, ಏರ್ ಪೋರ್ಟ್ ಇನ್ನಿತರ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಹಂತಹಂತವಾಗಿ ಖಾಸಗೀಕರಿಸುವ, ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ಮಾಲೀಕರ ಪರಗೊಳಿಸುವ ಎಲ್ಲಾ ಬದಲಾವಣೆಗಳಲ್ಲೂ ರತನ್ ಟಾಟಾ ರವರು ದೇಶದ ಹಿತಾಸಕ್ತಿ ಯ ಹೆಸರಿನಲ್ಲಿ ಬಂಡವಾಳಶಾಹಿ ಹಿತಾಸಕ್ತಿಯನ್ನು ಪ್ರತಿಪಾದಿಸಿ ಅಂತ ಬದಲಾವಣೆಗಳು ಕಾನೂನಾಗಲು ಶ್ರಮಿಸಿದರು.
ಇದೇ ಅವಧಿಯಲ್ಲಿ ಕಾರ್ಮಿಕರ ಪ್ರತಿಭೆಯನ್ನು ಹೊರಗುತ್ತಿಗೆಗೆಕೊಟ್ಟು ದುಡಿಸಿ ಲಾಭಗಳಿಸಿಕೊಳ್ಳುವ ಅತ್ಯಂತ ಅನೀತಿಯುತ ” ಬಾಡಿ ಶಾಪಿಂಗ್” ಉದ್ಯಮದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅನ್ನು ರತನ್ ಟಾಟಾ ಪ್ರಾರಂಭಿಸಿದರು ಮತ್ತು ಅದನ್ನು ಜಗತ್ತಿನಾದ್ಯಂತ ವಿಸ್ತರಿಸಿದರು. ಆ ನಂತರ ಅದೇ ಮಾದರಿಯನ್ನು ಇನ್ಫೋಸಿಸ್, ವಿಪ್ರೋಗಳು ಮುಂದುವರೆಸಿದರು. ವ್ಯಕ್ತಿಗಳು ಎಷ್ಟೇ ಸಜ್ಜನರಾಗಿದ್ದರೂ ಲಾಭವೇ ಪ್ರಧಾನವಾಗಿರುವ ಕೊಲೆಗಡುಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮೌಲ್ಯಗಳನ್ನು, ಸಂಸ್ಥೆಗಳನ್ನು, ಕಾರ್ಮಿಕರನ್ನು ,ದೇಶದ ಸಂಪತ್ತನ್ನು ಬಲಿಗೊಡದೆ ಬೆಳೆಯರು. ಹೀಗಾಗಿಯೇ 1991 ರ ನಂತರದಲ್ಲಿ ಟಾಟಾ ಇತಿಹಾಸವೂ ದಲಿತರ -ಆದಿವಾಸಿಗಳ ರಕ್ತಸಿಕ್ತ ಇತಿಹಾಸವೇ.ಆಗಿದೆ. ಕಾರ್ಮಿಕರ ಅಸಾಹಾಯಕ ನಿಟ್ಟುಸಿರಿನ ಇತಿಹಾಸವೇ ಆಗಿದೆ.
1996 ರಲ್ಲಿ ಬದಲಾದ ಅರಣ್ಯ ನೀತಿಗಳ ಲಾಭವನ್ನು ಬಳಸಿಕೊಂಡು ಟಾಟಾ ತಮ್ಮ ಉಕ್ಕು ಉದ್ಯಮವನ್ನು ಒರಿಸ್ಸಾದ ಗೋಪಾಲ್ ಪುರಕ್ಕೆ ವಿಸ್ತರಿಸಿದರು. ಆದರೆ ಅಲ್ಲಿ ಆದಿವಾಸಿಗಳನ್ನು ಎತ್ತಂಅಗಡಿ ಮಾಡದೆ ಉದ್ಯಮ ಸ್ಥಾಪನೆ ಸಾಧ್ಯವಿರಲಿಲ್ಲ. ಮೊದಲಿದ್ದ ಕಾನೂನುಗಳು ಆ ಅವಕಾಶ ಕೊಡುತ್ತಿರಲಿಲ್ಲ. 91 ರ ನಂತರದ ಕೊಲೆಗಡುಕ ಕಾನೂನುಗಳು ಆದಿವಾಸಿಗಳನ್ನು “ರಾಷ್ರ್ರೀಯ ಹಿತಾಸಕ್ತಿಯ” ಹೆಸರಿನಲ್ಲಿ ಬಲವತವಾಗಿ ಎತ್ತಂಗಡಿ ಮಾಡುವ ಅವಕಾಶವಿತ್ತಿತು. ಇಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಂದರೆ ಆದಿವಾಸಿಗಳ ಹಿತಾಸಕ್ತಿಯಲವಲ್ಲ. ಕೇವಲ ಟಾಟಾ-ಬಿರ್ಲಾ-ಆದಾನಿ-ಅಂಬಾನಿ ಇತ್ಯಾದಿಗಳ ಹಿತಾಸಕ್ತಿ.
ಇದೇ 1991 ರ ನಂತರ ಬದಲಾದ ಭಾರತದ ಸಾರಾಂಶ. ಆದರೆ ಆದಿವಾಸಿಗಳು ಹೋರಾಡಿದರು. ಆದರೆ ಅವರ ನಾಯಕರು ಗುಟ್ಟಾಗಿ ಕೊಲೆಯಾದರು. ಕೊನೆಗೆ ಟಾಟಾ ಕಾರ್ಖಾನೆ ಪಕ್ಕದ ಕಳಿಂಗಪುರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಬೃಹತ್ ಆದಿವಾಸಿಗಳ ಹೋರಾಟವನ್ನು ಬಗ್ಗು ಬಡಿದು 12 ಆದಿವಾಸಿಗಳನ್ನು ಕೊಂದು ಟಾಟಾ ಉಕ್ಕು ಕಾರ್ಖಾನೆಯನ್ನು ನೀತಿವಂತ ಟಾಟಾ ಸ್ಥಾಪಿಸಿದರು.
ಹಾಗೆಯೇ , ದುಡಿದ ಶ್ರಮಕ್ಕೆ ತಕ್ಕ ಕೂಲಿ ಮತ್ತು ಭದ್ರತೆ ಒದಗಿಸುವುದು ಮಾನವೀಯ ನೀತಿಯಲ್ಲವೇ? ಆದರೆ ಅದಕ್ಕೆ ತದ್ವಿರುದ್ಧವಾಗಿ ಬದಲಾದ ಕಾರ್ಮಿಕ ನೀತಿಗಳ ಸೌಲಭ್ಯವನ್ನು ಬಳಸಿಕೊಂಡು ಕಾರ್ಮಿಕರನ್ನು ದೊಡ್ಡ ಮಟ್ಟದಲ್ಲಿ ನೀತಿವಂತ ಟಾಟಾ ಉದ್ಯಮಗಳು ಕಿತ್ತೊಗೆದವು. ಉದಾಹರಣೆಗೆ ಕೇವಲ ಮೂರು ವರ್ಷಗಳಲ್ಲಿ ಟಾಟಾ ಕಾರ್ಖಾನೆಗಳಲ್ಲಿ ಪರ್ಮನೆಂಟ್ಕೆ ಕಾರ್ಮಿಕರ ಸಂಖ್ಯೆ 30 ಸಾವಿರದಷ್ಟು ಇಳಿಯಿತು. ಅಲ್ಲದೆ ದೊಡ್ಡ ಸಂಖ್ಯೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದವರಲ್ಲಿ ಟಾಟಾ ಉದ್ಯಮವೇ ಮೊದಲಿಗ.
ಟಾಟಾ ಗಳ ಎಥಿಕ್ಸ್ಗಳ ಸೋಗಲಾಡಿತನ ಎದ್ದು ಕಾಣುವುದು, ಭೂಪಾಲ್ ದುರಂತಕ್ಕೆ ಕಾರಣವಾದ ಕಂಪನಿಯ ಮೇಲಿನ ಹೊರೆಗಳನ್ನು ಕಡಿಮೆ ಮಾಡುವಲ್ಲಿ ಟಾಟಾ ವಹಿಸಿದ ಪಾತ್ರ. ಅಮೆರಿಕದ ಯುನಿಯನ್ ಕಾರ್ಬೈಡ್ ಕಂಪನಿಯ ಲಾಭಾಸಕ್ತ ಬೇಜವಬ್ದಾರಿಯ ಕಾರಣಕ್ಕಾಗಿ 1984 ಡಿಸೆಂಬರ್ನಲ್ಲಿ ಅದರ ಭೂಪಲ್ ಘಟಕದಲ್ಲಿ ವಿಷಾನಿಲ ಸೊರಿಕೆಯಾಗಿ ತತ್ ಕ್ಷಣದಲ್ಲಿ ಸಾವಿರಾರು ಜನ ಸತ್ತರು. ಲಕ್ಷಾಂತರ ಜನ ಈಗಲೂ ಒಂದಿಲ್ಲೊಂದು ಬಾಧೆಗೆ ಒಳಗಾಗಿದ್ದಾರೆ. ನಂತರ ಅದನ್ನು ಅಮೆರಿಕದ ಮತ್ತೊಂದು ರಾಸಾಯನಿಕ ಕಂಪನಿಯಾದ ಡೌ ಕಂಪನಿ ಕೊಂಡುಕೊಂಡಿತು. ಆದರೆ ಅದು ಯುನಿಯನ್ ಕರ್ಬೈಡ್ ಕಂಪನಿ ಮಾಡಿದ ಅನಹುತದ ಜವಾಬ್ದಾರಿ ಮತ್ತು ಪರಿಹಾರದ ಜವಾಬ್ದಾರಿ ಹೊರಲು ನಿರಾಕರಿಸಿತು. ಆಗ ಟಾಟ ಕಂಪನಿ ದೇಶದ ಜನರ ಪರವಾಗಿ ನಿಲ್ಲದೆ ಡೌ ಕಂಪನಿ ಪರವಾಗಿ ಭೂಪಲ್ ಘಟಕವನ್ನು ಶುಧ್ಹೀಕರಿಸುವ ಚೌಕಾಸಿ ಮಾಡಿತು. ಏಕೆಂದರೆ ಡೌ ಕಂಪನಿಗೆ ಅಮೆರಿಕದಲ್ಲಿ ಟಾಟಾದ ಟಿಸಿಎಸ್ ಕಂಪನಿಯೊಂದಿಗೆ ಸುದೀರ್ಘ ಒಪ್ಪಂದವಾಗಿತ್ತು.
ಇದಲ್ಲದೆ ಟಾಟಾ ಕಾರ್ಖಾನೆಯಿರುವ ಜಮಶೇಡ್ ಪುರವನ್ನು ಚುನಾಯಿತ ಆಡಳಿತವಿರುವ ಮುನಿಸಿಪಾಲಿಟಿ ಮಾಡಲು ಟಾಟಾ ಗಳು ದೊಡ್ಡ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಈಗಲೂ ಇಡೀ ಭಾರತದಲ್ಲಿ ಚುನಾಯಿತ ಆಡಳಿತವಿಲ್ಲದ ಉದ್ಯಮವೊಂದು ಆಡಳಿತ ನಡೆಸುವ ಏಕೈಕ ನಗರ ಜಮ್ ಶೆಡ್ ಪುರವಾಗಿದೆ. ಈಗ ಬೆಂಗಳೂರಿನಲ್ಲಿರುವ ಎಲೆಕ್ಟ್ರಾನಿಕ್ಸ್ ಸಿಟಿಯ ಉದ್ಯಮಿಗಳೂ ಅದೇ ಅಪ್ರಜಾತಾಂತ್ರಿಕ ಬಂಡವಾಳಶಾಯಿ ಸರ್ವಾಧಿಕಾರದ ಆಡಳಿತ ಮಾದರಿ ಬೇಕೆಂದು ಆಗ್ರಹಿಸುತ್ತಿದ್ದಾರೆ. ನೀತಿವಂತ ಟಾಟಾಗಳ ಸೋಗಲಾಡಿತನಕ್ಕೆ ಮತ್ತೊಂದು ಉದಾಹರಣೆ ಅವರ ಇಸ್ರೇಲ್ ನೀತಿ. ಇಸ್ರೇಲ್ 2005 ರಲ್ಲಿ ಪ್ಯಲೆಸ್ತಿನಿನ ಮೇಲೆ ನಿರಂತರ ದಾಳಿ ಮಾಡುತ್ತಾ ಗಾಜಾ ಪಟ್ಟಿಯನ್ನು ಬಹಿರಂಗ ಸೆರೆಮನೆಯಾಗಿಸಿದಾಗ ಯಾವ ನೀತಿ ದ್ವಂದ್ವಗಳನ್ನು ಇಟ್ಟುಕೊಳ್ಳದೆ ಇಸ್ರೇಲಿನಲ್ಲಿ ಉದ್ಯಮವನ್ನು ವಿಸ್ತರಿಸಿದ ಮೊದಲಿಗರು ಟಾಟಾಗಳೇ.
*CSR – ಶೋಷಣೆಗೆ ಸೇವೆಯ ಮುಖವಾಡ*
ಈ ಬಂಡವಾಳಶಾಹಿ ಬರ್ಬರತೆ ಕಾಣಿಸದಂತೆ ಮಾಡಲೆಂದೇ 2000 ದಿಂದ Corporate Social Resposibility – ಎಂಬ ಸೋಗಲಾಡಿ ಕಾರ್ಪೊರೇಟ್ ಸಮಾಜಸೇವೆ ಎಂಬ ಯೋಜನೆ ಜಾರಿಗೆ ಬಂದಿದೆ. ಇದರ ಪ್ರಕಾರ ಲಾಭ ಮಾಡುವ ಕಾರ್ಪೊರೇಟ್ ಉದ್ಯಮಗಳು ತಮ್ಮ ಲಾಭದ ಶೇ. 2 ರಷ್ಟನ್ನು ಸಾರ್ವಜನಿಕ ಕಲ್ಯಾಣಕ್ಕೆ ಬಳಸಬೇಕು. ಹಲವಾರು ಉದ್ಯಮಗಳು ಇದನ್ನು ಗಿಡ ಮರ ನೆಡಲು, ಕುಡಿಯುವ ನೀರು, ಶಾಲೆ ದತ್ತು ಇನ್ನಿತ್ಯಾದಿ ಕಾರ್ಯಕ್ರಮಗಳಿಗೆ ಬಳಸಿ ಜನರಲ್ಲಿ ತಾವು ಮಾಡುತ್ತಿರುವ ಶೋಷಣೆಯನ್ನು ಮರೆಸಿ ಬಂಡವಾಳಶಾಹಿ ಶೋಷಣೆಗೆ ಮತ್ತು ವ್ಯವಸ್ಥೆಗೆ ಸಾಮಾಜಿಕ ಮನ್ನಣೆ ಗಳಿಸಿಕೊಳ್ಳುತ್ತಿವೆ. .
ಟಾಟ ಇದರಲ್ಲಿಯೂ ಮುಂದಾಳು. ಹೀಗಾಗಿಯೇ ರತನ್ ಟಾಟಾ ನಿಧನರಾದ ನಂತರ ಕಳಿಂಗನಗದರಲ್ಲಿ ನಡೆದ ಮತ್ತು ನಡೆಯುತ್ತಿರುವ ದಮನದ ಬದಲಿಗೆ ಅಥವಾ ದೇಶದ ಅರಣ್ಯ ಸಂಪತ್ತನ್ನು ಕಾರ್ಪೊರೇಟ್ ಉದ್ಯಮಿಗಳು ಸುಲಿಯುತ್ತಿರುವ ಕಥನಗಳ ಬದಲಿಗೆ ಅವರ ಉದ್ಯಮದಲ್ಲಿ ಕೆಲಸ ಪಡೆದ ದಲಿತರ- ಆದಿವಾಸಿಗಳ ಕಥೆ ಹೆಚ್ಚು ಪ್ರಚಾರ ಪಡೆಯುತ್ತದೆ. 1991 ರ ನಂತರದ ಟಾಟಾ ಸಾಮ್ರಾಜ್ಯದ ಇತಿಹಾಸ ಇಂಥಾ ನೂರಾರು ರಕ್ತಸಿಕ್ತ ಕಥೆಗಳನ್ನು ಹೊಂದಿದೆ. ಕೇವಲ ಟಾಟಾ ಸಾಮ್ರಾಜ್ಯವಲ್ಲ. ಎಲ್ಲಾ ಬೃಹತ್ ಕಾರ್ಪೊರೇಟ್ ಉದ್ಯಮಗಳ ಕಥೆಗಳಲ್ಲೂ 1991ರ ನಂತರದ ಆದಿವಾಸಿ ಭಾರತದ, ದಲಿತ ಭಾರತದ, ಕಾರ್ಮಿಕ ಭಾರತದ ಸುಟ್ಟ ಹೊಗೆಯ ವಾಸನೆ ದಟ್ಟವಾಗಿ ಸಿಗುತ್ತದೆ. ಬಂಡವಾಳಶಾಹಿ ವ್ಯವಸ್ಥೆಯೇ ಅನೀತಿಯುತವಾದದ್ದು. ಅದರಲ್ಲೂ 91 ರ ನಂತರದ ಬಂಡವಾಳಶಾಹಿ ಜಗತ್ತು ಅತ್ಯಂತ ಅಮಾನುಷ ಕೊಲೆಗಡುಕ ಜಗತ್ತು. ಅದರಲ್ಲಿ ಜನಪರತೆ ಅಥವಾ ಕಡಿಮೆ ದುಷ್ಟತೆ ಹುಡುಕುವುದು ಅಸಾಹಯಕ ಆತ್ಮವಂಚನೆ. ಹೀಗಾಗಿ ಇಂದೋ ಮುಂದೋ ಪ್ರಕೃತಿ, ಸಮಾಜ ಮತ್ತು ಮನುಷ್ಯತ್ವ ಉಳಿಯಬೇಕೆಂದರೆ ಬಂಡವಾಳಶಾಹಿ ಇಡಿಯಾಗಿ ಅಳಿಯಲೇ ಬೇಕು. ಎಲ್ಲರೂ ಎಲ್ಲರಿಗಾಗಿ ಬದುಕುವ ಸಮಾಜವಾದಿ ವ್ಯವಸ್ಥೆ ರೂಪುಗೊಳ್ಳಲೇ ಬೇಕು. ಬೇರೆ ಪರ್ಯಾಯವಿಲ್ಲ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply