ಮೊಸಾಬ್ ಅಬು ತಾಹಾ ಅವರು ಇಸ್ರೇಲ್ ಈಗ ನಿರ್ನಾಮ ಮಾಡಿರುವ ಪ್ರಸಿದ್ಧಾ ಗಾಜಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರೆಫೆಸರ್ ಆಗಿದ್ದರು.ಈಗ ಅವರು ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿದ್ದಾರೆ.
2023 ರಲ್ಲಿ ಇಸ್ರೇಲ್ ಉತ್ತರ ಗಾಜಾ ಮೇಲೆ ದಾಳಿ ಪ್ರಾರಂಭಿಸಿದಾಗ ದಕ್ಷಿಣದ ಕಡೆ ಇತರ ನೂರಾರು ಜನರ ಜೊತೆ ವಲಸೆ ಹೊರಟಿದ್ದ ಇವರನ್ನು ಇಸ್ರೇಲ್ ಪದೇ ಬಂಧಿಸಿ , ಇಸ್ರೇಲಿಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟರು. ಆದರೆ ಅವರ ಬಿಡುಗಡೆಗೆ ವಿಶ್ವಾದ್ಯಂತ ಒತ್ತಡ ಹೆಚ್ಚಿದ ನಂತರ ಅವರನ್ನು ಬಿಡುಗಡೆ ಮಾಡಿದರು. ಈಗ ಅವರು ಕುಟುಂಬದೊಂದಿಗೆ ಈಜಿಪ್ಟ್ ನಲ್ಲಿದ್ದಾರೆ.
ಇದು ಮೊಸಾಬ್ ಅಬು ತಾಹಾ ಅವರು ಗಾಜಾ ಮೇಲಿನೆ ದಾಳಿಗೆ ವರ್ಷ ತುಂಬಿದ ನೆನಪಿನಲ್ಲಿ ಮೆಹದಿ ಹಸನ್ ಅವರ ZETEO ವೆಬ್ ತಾಣಕ್ಕಾಗಿ ಬರೆದ ವಿಶೇಷ ಮತ್ತು ತಾಜಾ ಕವನಗಳು.
ಮೂಲ ಕವನಗಳಿಗೆ ಮತ್ತು ಅವರೇ ಮಾಡಿರುವ ಆ ಕವನಗಳ ವಾಚನಕ್ಕೆ ಈ ಕೊಂಡಿ ಬಳಸಿ:
(https://zeteo.com/p/exclusive-an-original-poem-from-acclaimed?utm_campaign=post&utm_medium=email&triedRedirect=true)
ನೀವು ಬಾಂಬುಗಳನ್ನು ಹಾಕುತ್ತೀರಿ- ನಾವು ಮರದ ಮೇಲೆ ಹೂಗಳಾಗಿ ಚಿಗುರುತ್ತೇವೆ
i
ವಾಯು ದಾಳಿಯ ನಂತರ
ಅವರಿಗೆ
ಹಿಪ್ಪು ನೇರಳೆಯ ಪೊದೆಗಳ ಬಳಿ
ಅಲುಗಾಡದೆ ಬಿದ್ದಿದ್ದ
ಹುಡುಗನೊಬ್ಬನ ದೇಹ ಕಂಡಿತು…
ಅವನ ಒಂದು ಕಣ್ಣು
ಪೂರ್ತಿ ಮುಚ್ಚಿಕೊಂಡಿತ್ತು
ಮತ್ತೊಂದು ಅರ್ಧ ತೆರೆದಿತ್ತು
ಸಿಡಿದ ಗುಂಡಿನ ಹರಿತ ಚೂರುಗಳು ಬಡಿದು
ಮತ್ತೊಮ್ಮೆ
ತನ್ನನ್ನು ಸಾಯಿಸಬಹುದೇನೋ ಎಂದು
ಕಾವಲು ಕಾಯುವಂತ್ತಿತ್ತು…
ii
ಅಂದು ಅವರ ಸೇನೆಯು
ನನ್ನ ಊರಿನ
ಎಲ್ಲಾ ಗಂಡಸರನ್ನು
ಅಟ್ಟಾಡಿಸುತ್ತಾ ಒಂದೆಡೆಗೆ ಒಟ್ಟಿತು…
ನಮ್ಮೆಲ್ಲರನ್ನೂ ಶಾಲೆಯ ಗೋಡೆಗೆ
ಮುಖ ಮಾಡಿ ನಿಲ್ಲಿಸಿದರು..
ಮೇಲೆತ್ತಿದ ಕೈಗಳಿಗೆ
ಗೋಡೆಗೆ ಹಚ್ಚಿದ್ದ ಹೊಸ ಪೇಂಟು
ತಾಕುತ್ತಿತ್ತು
ನಡುಕದಿಂದ ಕಂಪಿಸುತ್ತಿದ್ದ ದೇಹಕ್ಕೆ
ಹಿಂದಿನಿಂದ ಬುಲ್ಲೆಟ್ಟುಗಳು
ಬಡಿಯುವ ಮುಂಚೆ
ಪಿಯಾನೋ ಬಾರಿಸುವ ತಯಾರಿಯಂತೆ..
iii
ವಾಯು ದಾಳಿ ನಡೆಯುವಾಗ
ನಾವೆಲ್ಲ
ಧೂಳು ತುಂಬಿದ, ಟೈಲು ಹಾಸಿದ
ಕೊಠಡಿಯೊಂದರ
ನೆಲದ ಮೇಲೆ ಒತ್ತೋತ್ತಾಗಿ ಕೂತೆವು…
ಸಕಲರೂ ಸತ್ತ ಪಟ್ಟಣದಲ್ಲಿ
ಫಾರ್ಮಸಿಯೊಂದರ
ಪೇರಿಸಿಟ್ಟ ಬಾಟಲಿಯೊಳಗಿನ
ರೋಗನಿರೋಧಕ
ಟ್ಯಾಬ್ಲೆಟ್ಟುಗಳಂತೆ…
iv
ಅವನ ಮುಂಗೈ ಮಣಿಕಟ್ಟನ್ನೇ
ದಿಟ್ಟಿಸಿ ನೋಡುವೆ…
ಅದು ನಜ್ಜುಗುಜ್ಜಾಗಿದೆ…
ಹೆಚ್ಚು ಕಡಿಮೆ ತುಂಡಾಗಿದೆ…
ನಂತರ ಅವನ ಭುಜವನ್ನು
ನೋಡಿದೆ…
ಮೂಳೆಯೊಂದು ಮುರಿದಿದೆ…
ಅವನಿಗೆ ಕೇವಲ ನಾಲ್ಕು ವರ್ಷ…
ನನ್ನ ಮಡದಿಗೆ ಹೇಳುವೆ..
ನೋಡು ಎಷ್ಟು ಧೈರ್ಯಶಾಲಿ
ಆ ಹುಡುಗ…
ಜೊತೆಗೆ ಅಪ್ಪ ಅಮ್ಮ
ಇಲ್ಲದಿದ್ದರೂ
ಅವನು ಅಳುತ್ತಿಲ್ಲ..
ನೋವೆಂದು ಮುಲುಗುತ್ತಿಲ್ಲ…
ನಾನು ಅವನ ಮುಖವನ್ನೇ
ನಿರುಕಿಸಿ ನೋಡುತ್ತೇನೆ…
ಅವನ ಕಣ್ಣುಗಳಲ್ಲಿ ಚಲನೆಯಿಲ್ಲ
ಅವನ ಎದೆ ಬಡಿಯುತ್ತಿಲ್ಲ…
ಅವನು ವಿಶ್ರಮಿಸುತ್ತಿದ್ದಾನೆ…
v
ಕೈ ಒಂದನ್ನು ಕೈ ಎನ್ನಬಹುದೇ?
ಕುಲುಕಲು ಮತ್ತೊಂದು ಕೈ
ಸಿಗುವವರೆಗೆ…
ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು
ಅನ್ನ ಸಿಗುವವರೆಗೆ…
ಬರೆಯಲು ಒಂದು ಪೆನ್ನು
ಸಿಗುವವರೆಗೆ….
ನಾಯಿಯೊಂದು ತಿನ್ನಲು
ಉಳಿದ ಮಾಂಸ ಅದೊಂದೇ
ಆಗುವವರೆಗೆ….
ಮತ್ತು ಅದು ಶಾಶ್ವತವಾಗಿ
ಕಣ್ಮರೆಯಾಗಿಬಿಡುವವರೆಗೆ…
vi
ಮಾನ್ಯರೇ
ನಮ್ಮ ಕೆಲಸ ಇಷ್ಟೇನಾ ಹಾಗಾದರೆ…
ಬೆಳಗಾನ ಏಳುವುದು
ಕಳೆದ ರಾತ್ರಿ ನಡೆದ
ಹತ್ಯಾಕಾಂಡದ ಕಥೆ ಗಳನ್ನೂ
ನಿಮಗೆ ಹೇಳುವುದು?
ನಮ್ಮ ಸಾವುಗಳ ವರದಿ ಕೊಡುವುದು
ತುಂಡರಿಸಿದ ನಮ್ಮ ದೇಹಗಳನ್ನು ಚಿತ್ರಿಸುವುದು
ಮತ್ತು ನಿಮ್ಮ ಸಹಾಯ ಕೇಳುವುದು?
ಇಷ್ಟೇನಾ ನಮ್ಮ ಕೆಲಸ ..?
ನೀವು ಎಚ್ಚರವಾಗುವುದು ಎಂದು ಸ್ವಾಮಿ ?
ನೀವು ಎಚ್ಚರವಾಗಬೇಕೆಂದರೆ
ನಿಮ್ಮ ಮನೆಗೂ ಬೆಂಕಿ ಬೀಳಬೇಕೇ?
ನಿಮ್ಮ ಮಗುವೂ ಬೆಂದು ಬೂದಿಯಾಗಬೇಕೇ?
ಔಷಧಗಳೇ ಇಲ್ಲದ ಆಸ್ಪತ್ರೆಗಳಲ್ಲಿ
ನಿಮ್ಮ ಹೆಂಡತಿ ಸೇರುವಂತಾಗಬೇಕೇ?
ನಿಮ್ಮ ಮನೆಗಳು ನೆರೆ ಹೊರೆಗಳು
ನಿರ್ನಾಮವಾಗಬೇಕೇ?….
ಬೇಡ ಖಂಡಿತಾ ಬೇಡ
ಇನ್ನಾದರೂ ಎಚ್ಚರವಾಗಿ…
ಸಾಕಿನ್ನು…
ಆರಾಮ ಕುರ್ಚಿಯಲ್ಲಿ ಕೂತು
ನಮ್ಮ ಫೋಟೋಗಳನ್ನು ನೋಡಿದ್ದು
ನಿಮ್ಮ ಮೌನದಲ್ಲಿ
ನಾವು ಮುಳುಗಿಹೋಗುತ್ತಿದ್ದೇವೆ…
ನಮ್ಮ ಆಕ್ರಂದನಗಳು
ನಿಮ್ಮ ಕಿವಿಮೇಲೆ ಬೀಳದು…
ಏಕೆಂದರೆ ಅವನ್ನು ನೀವು ನಿಮ್ಮ
ಕಿವಿ ಕವಚದಲ್ಲಿ ಇಟ್ಟು ಮುಚ್ಚಿಟ್ಟಿದ್ದೀರಿ…
ನಿಮ್ಮ ಆ ಕಿವಿ ಕವಚದಿಂದ
ರಕ್ತಧಾರೆ ಹೊರಬರುತ್ತಿದೆ…
ಅದು ನಮ್ಮ ಆಕ್ರಂದನ,
ನಮ್ಮ ಕಣ್ಣೀರು
ನಮ್ಮ ರಕ್ತ….
vii
ನಿಮ್ಮನ್ನು ನಿಮ್ಮ ನೆಲದಿಂದ
ಹೊರದೂಡುತ್ತಾರೆ…
ನೀವು ಗಾಯಗೊಂಡರೂ
ಬದುಕುಳಿಯುತ್ತೀರಿ….
ಕ್ಷಿಪಣಿಯೊಂದು ನಿಮ್ಮ ಆಸ್ಪತ್ರೆಯ
ಮೇಲೆ ದಾಳಿ ಮಾಡಿದಾಗ
ಮಂಚದಿಂದ ಕೆಳಗೆ ಜಿಗಿಯುತ್ತೀರಿ…
ಟೆಂಟ್ ಒಂದರಲ್ಲಿ ಆಶ್ರಯ ಪಡೆಯುತ್ತೀರಿ..
ಮತ್ತೆ ನಿಮ್ಮನ್ನು ಅಲ್ಲಿಂದಲೂ ಹೋರದೂಡುತ್ತಾರೆ
ಮತ್ತೆ ಮತ್ತೆ ನಿಮ್ಮನ್ನು ಹೋರದಬ್ಬುತ್ತಾರೆ…
ಕೆಲವೊಮ್ಮೆ ಊರುಗೋಲು,
ಕೆಲವೊಮ್ಮೆ ವೀಲ್ ಚೇರು…
ನೀವು
ಸಾವಿರ ಸಾವಿರ ಬಾರಿ
‘ಗಾಜಾ’ ಗೊಳಿಸಲ್ಪಡುತ್ತಲೇ ಇರುತ್ತೀರಿ….
viii
ನಾವು ನಮ್ಮ ಮನೆಗಳಲ್ಲೇ ಇದ್ದರೂ
ಅವರು
ನಮ್ಮ ಮೇಲೆ ಬಾಂಬ್ ಹಾಕುತ್ತಾರೆ..
ನಾವು ಶಾಲೆಯೊಳಗೆ
ಆಶ್ರಯ ಪಡೆದುಕೊಂಡಿದ್ದರೂ..
ಅವರು
ನಮ್ಮ ಮೇಲೆ ಬಾಂಬ್ ಹಾಕುತ್ತಾರೆ…
ವಾಯುದಾಳಿಯಿಂದ ತಪ್ಪಿಸಿಕೊಳ್ಳಲು
ಓಡುತ್ತಿದ್ದರೂ…
ಅವರು
ನಮ್ಮ ಮೇಲೆ ಬಾಂಬ್ ಹಾಕುತ್ತಾರೆ…
ಇವು ಯಾವುದನ್ನೂ ಮಾಡದಿದ್ದರೂ…
ಅವರು
ನಮ್ಮ ಮೇಲೆ ಬಾಂಬ್ ಹಾಕುತ್ತಾರೆ…
ನಾವು ಒಡಾಡದೆ ಮರದಂತೆ ನಿಂತುಬಿಟ್ಟರೂ
ಅಥವಾ
ಕೆಲಕಾಲ ಶಿಶಿರದಲ್ಲಿ ಕೆಳಗೆ ಬಿದ್ದ
ತರಗೆಲೆಗಳಂತೆ ಬಿದ್ದುಕೊಂಡಿದ್ದರೂ ..
ಅವರು
ನಮ್ಮ ಮೇಲೆ ಬಾಂಬ್ ಹಾಕುತ್ತಾರೆ…
ಆದರೆ
ವಸಂತ ಕಾಲ ಬಂದೆ ಬರಲಿದೆ
ಆಗ ನಮ್ಮ ಮೇಲೆ ಬಾಂಬ್ ಹಾಕಿದವರಿಗೆ
ಹೂವುಗಳ ನಡುವೆ ಬಾಂಬ್ ಗಳೇನೂ
ಸಿಗುವುದಿಲ್ಲ….
ಆಗ….
ನಾವು ಮರದ ಮೇಲೆ ಚಿಗುರಿ
ಸೂರ್ಯ ಸ್ನಾನ ಮಾಡುತ್ತಿರುತ್ತೇವೆ…
ಮತ್ತು ಅವರಿಗೆ…
ನಮ್ಮ ಮೇಲೆ ಬಾಂಬ್ ಹಾಕಿದವರಿಗೆ…
ಸೂರ್ಯನೂ ಸಿಗುವುದಿಲ್ಲ
ಉಳಿಯಲೊಂದು ನೆಲೆಯೂ ಸಿಗುವುದಿಲ್ಲ
ಓಡಿಹೋಗಲು ಕಾಲುಗಳು ಇರುವುದಿಲ್ಲ…
ix
ಅವನು ಮತ್ತೆ ಮೇಲಕ್ಕೆ ಏಳಲೇ ಇಲ್ಲ…
ನನಗಲ್ಲಿ
ಹಾಸಿಗೆ, ಹೊದಿಕೆ, ಜ್ಯುಸರ್..ಇತ್ಯಾದಿ
ದಾಳಿಯ ನಂತರ ಮನೆಯಲ್ಲೂಳಿದ
ಸಾಮಾನುಗಳು ಕಾಣುತ್ತವೆ…
ಬಾಸ್ಕೆಟ್ಟಿನಲ್ಲಿ ಇರುವುದು
ಆಲೂವೋ, ಈರುಳ್ಳಿಯೋ
ಬಾಂಬಿನ ಧೂಳಿನಲ್ಲಿ ಸ್ಪಷ್ಟ ಕಾಣುತ್ತಿಲ್ಲ…
ಆದರೆ
ಸಾವನ್ನು ನಾನು ಸ್ಪಷ್ಟವಾಗಿ ಗುರುತಿಸಬಲ್ಲೆ…
ತೆರೆದಿರುವ ಬಾಯಿಗಳಲ್ಲಿ
ಮುಚ್ಚಿದ ಕಣ್ಣುಗಳಲ್ಲಿ
ಸಾವನ್ನು ಸ್ಪಷ್ಟವಾಗಿ ಕಾಣಬಲ್ಲೆ….
ಅವಶೇಷಗಳ ಕೆಳಗೆ ಹುದುಗಿರುವ
ನಮ್ಮೊಳಗಿನ ಪ್ರತಿಯೊಬ್ಬರನ್ನು
ನಾನು ಗುರುತಿಸಬಲ್ಲೆ…
ಇಂಗ್ಲಿಷ್- ಮೊಸಾಬ್ ಅಬು ತಾಹಾ
ಕನ್ನಡಕ್ಕೆ – ಶಿವಸುಂದರ್
Leave a reply