ಲಂಡನ್ : 127 ದೇಶಗಳಲ್ಲಿ ನಡೆಸಿದ ವಿಶ್ವ ಹಸಿವು ಸೂಚ್ಯಂಕ-2024 ವರದಿಯಲ್ಲಿ ಭಾರತವು 105 ನೇ ಸ್ಥಾನದಲ್ಲಿದೆ. Global Hunger Index (GHI) ಎಂಬುದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವ ಮತ್ತು ಗುರುತಿಸುವ ಸಾಧನವಾಗಿದೆ. ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆ, ಮಕ್ಕಳ ಕ್ಷೀಣತೆ ಮತ್ತು ಮಕ್ಕಳ ಮರಣದಂತಹ ನಾಲ್ಕು ಅಂಶಗಳ ಆಧಾರದ ಮೇಲೆ GHI ಅಂಕಗಳನ್ನು ನೀಡಲಾಗುತ್ತದೆ. ಈ ಅಂಕಗಳ ಆಧಾರದ ಮೇಲೆ, ದೇಶಗಳನ್ನು ಕಡಿಮೆ, ಮಧ್ಯಮ, ತೀವ್ರ, ಆತಂಕ ಮತ್ತು ತೀವ್ರ ಆತಂಕಕಾರಿ ವರ್ಗಗಳಾಗಿ ವಿಂಗಡಿಸಲಾಗಿದೆ. ಈ ಸೂಚ್ಯಂಕದ ಪ್ರಕಾರ ಭಾರತವು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿದೆ.
27.3 ಅಂಕಗಳೊಂದಿಗೆ ಭಾರತವು ‘ತೀವ್ರ ಆತಂಕಕಾರಿ ದೇಶಗಳ’ ಪಟ್ಟಿಯಲ್ಲಿದೆ. ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಒಟ್ಟು 42 ದೇಶಗಳು ‘ತೀವ್ರ ಆತಂಕಕಾರಿ ದೇಶಗಳ’ ಪಟ್ಟಿಯಲ್ಲಿವೆ. ಇತರೆ ದಕ್ಷಿಣ ಏಷ್ಯಾದ ನೆರೆಯ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ “ಮಧ್ಯಮ” ವಿಭಾಗದಲ್ಲಿವೆ. ಗಾಜಾ ಮತ್ತು ಸುಡಾನ್ನಲ್ಲಿನ ಯುದ್ಧಗಳು ಅಭೂತಪೂರ್ವ ಆಹಾರ ಬಿಕ್ಕಟ್ಟಿಗೆ ಕಾರಣವಾಗಿವೆ ಎಂದು ವರದಿ ಹೇಳಿದೆ. ಕೆಲವು ಆಫ್ರಿಕನ್ ದೇಶಗಳು “ಆತಂಕಕಾರಿ” ವಿಭಾಗದಲ್ಲಿವೆ ಎಂದು ಅದು ಹೇಳಿದೆ.
ಭಾರತದ ಜನಸಂಖ್ಯೆಯ 13.7% ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, 35.5% ಮಕ್ಕಳು ಸರಿಯಾದ ಬೆಳವಣಿಗೆ ಇಲ್ಲದೆ ಕುಂಠಿತರಾಗಿದ್ದಾರೆ, 18.7% ಮಕ್ಕಳು ಕ್ಷೀಣಿಸುತ್ತಿದ್ದಾರೆ. 2.9% ಐದು ವರ್ಷದೊಳಗಿನ ಮಕ್ಕಳು ಸಾಯುತ್ತಿದ್ದಾರೆ ಎಂದು ವರದಿ ಹೇಳಿದೆ. “ತೀವ್ರ” ಅಪೌಷ್ಟಿಕತೆಯಿಂದಾಗಿ ತಮ್ಮ ಎತ್ತರಕ್ಕಿಂತ ಕಡಿಮೆ ತೂಕ ಹೊಂದಿರುವ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇದ್ದಾರೆ. ಪೌಷ್ಟಿಕಾಹಾರದ ಕೊರತೆ ಮತ್ತು ಅನಾರೋಗ್ಯ ವಾತಾವರಣದಿಂದ ಸಾವುಗಳು ಸಂಭವಿಸುತ್ತಿದೆ ಎಂದು ಹೇಳಿದೆ. “ಸಮರ್ಪಕ ಆಹಾರದ ಹಕ್ಕಿನ ಪ್ರಾಮುಖ್ಯತೆಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯವು ಪದೇಪದೇ ಒತ್ತಿ ಹೇಳುತ್ತಿದ್ದರೂ, ಸ್ಥಾಪಿತ ಮಾನದಂಡಗಳು ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಆಹಾರದ ಹಕ್ಕನ್ನು ನಿರ್ಲಕ್ಷಿಸಲಾಗಿದೆ ಎಂಬ ವಾಸ್ತವಾಂಶದ ನಡುವೆ ಮುಚುಗರವೆನಿಸುವ ಅಸಮಾನತೆ ಇದೆ,” ಎಂದು ವರದಿ ಮುಕ್ತಾಯಗೊಳಿಸಿದೆ.
ಜಾಗತಿಕವಾಗಿ, ಸುಮಾರು 2.8 ಶತಕೋಟಿ ಜನರಿಗೆ ಆರೋಗ್ಯಕರ ಆಹಾರದ ಸಿಗುತ್ತಿಲ್ಲ. ಆದರೆ 733 ಮಿಲಿಯನ್ ಜನರು ಸಮರ್ಪಕವಾಗಿ ಆಹಾರ ಸಿಗದೆ ಪ್ರತಿದಿನ ಹಸಿವಿನಿಂದ ಬಳಲುತ್ತಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಹೈಟಿ, ಮಾಲಿ ಮತ್ತು ಸಿರಿಯಾ ಸೇರಿದಂತೆ ಇತರೆಡೆಯೂ ಸಂಘರ್ಷ ಮತ್ತು ನಾಗರಿಕ ಕಲಹಗಳು ಆಹಾರ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿವೆ.
Leave a reply