ಬೆಂಗಳೂರು : ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಾದವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿಶೇಷ ನ್ಯಾಯಾಲಯವು ಅಕ್ಟೋಬರ್ 9 ರಂದು ಅವರಿಗೆ ಜಾಮೀನು ನೀಡಿತು. 11ರಂದು ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.
ವಾಘ್ಮೋರೆ ಮತ್ತು ಯಾದವ್ ಜೊತೆಗೆ ಅಮೋಲ್ ಕಾಳೆ, ರಾಜೇಶ್ ಡಿ ಬಂಗೇರ, ವಾಸುದೇಶ್ ಸೂರ್ಯವಂಶಿ, ಋಷಿಕೇಶ್ ದೇವಡೇಕರ್, ಗಣೇಶ್ ಮಿಸ್ಕಿನ್ ಮತ್ತು ಅಮಿತ್ ರಾಮಚಂದ್ರ ಬಡ್ಡಿ ಅವರಿಗೂ ಅಕ್ಟೋಬರ್ 9 ರಂದು ಜಾಮೀನು ಮಂಜೂರಾಗಿತ್ತು.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ನಿವಾಸದ ಹೊರಗೆ ಆರೋಪಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪೊಲೀಸರು 25 ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈವರೆಗೆ 18 ಮಂದಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ಆರೋಪಿಗಳನ್ನು ಸಂಘಪರಿವಾರ ಮತ್ತು ಶ್ರೀರಾಮಸೇನೆಯಂತಹ ಹಿಂದುತ್ವ ಗುಂಪುಗಳು ಸನ್ಮಾನಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕರ್ನಾಟಕದ ವಿಜಯಪುರದ ತಮ್ಮ ಸ್ವಗ್ರಾಮಕ್ಕೆ ಮರಳಿದವರಿಗೆ ಹಿಂದೂ ಸಮಾಜದ ಮುಖಂಡರು ಹೂಮಾಲೆ ಹಾಕಿ ಕೇಸರಿ ಶಾಲು ಹೊದಿಸಿ ಸನ್ಮಾನಿಸಿ, ಘೋಷಣೆಗಳೊಂದಿಗೆ ಸ್ವಾಗತಿಸಿದರು. ಇಬ್ಬರನ್ನೂ ಛತ್ರಪತಿ ಶಿವಾಜಿ ಪ್ರತಿಮೆಯೆಡೆಗೆ ಕರೆದೊಯ್ದು ಮಾಲಾರ್ಪಣೆ ಮಾಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಹಿಂದುತ್ವವಾದಿ ಗುಂಪುಗಳು ಮತ್ತು ಬಿಜೆಪಿ ನಾಯಕರು ಸನ್ಮಾನ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆಗಸ್ಟ್ನಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಆರೋಪಿ ಕೆ.ಟಿ. ನವೀನ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು.
Leave a reply