ಪ್ರಸ್ತುತ ನಮ್ಮ ದೇಶದಲ್ಲಿ ಮಹಿಳೆಯರು ಉದ್ಯೋಗ, ಮನೆಗೆಲಸ ಮತ್ತು ಮಕ್ಕಳ ಪೋಷಣೆಯಂತಹ ಮೂರು ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡದ ಹೊರತು ಸಂಬಳವಿಲ್ಲದೆ ಕೆಲಸ ಮಾಡುವ ಕೋಟಿಗಟ್ಟಲೆ ಮಹಿಳೆಯರು ನಮ್ಮ ದೇಶದಲ್ಲಿದ್ದಾರೆ. ಸೇಲ್ಸ್ ಗರ್ಲ್ಸ್, ಆಸ್ಪತ್ರೆ ಸಿಬ್ಬಂದಿ, ಹೋಟೆಲ್ಗಳು, ಕಾಲ್ ಸೆಂಟರ್ಗಳು, ಲ್ಯಾಬ್ ಟೆಕ್ನಿಷಿಯನ್ಗಳು, ಕಾರ್ಖಾನೆಯ ಕೆಲಸಗಾರರು ಬೆಳಿಗ್ಗೆ 9 ರಿಂದ 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು. ಈ ಕೆಲಸದ ಸಮಯದ ಜೊತೆಗೆ ಆಫೀಸಿಗೆ ಬರುವುದು ಹೋಗುವುದು, ಮನೆಗೆಲಸ, ಮಕ್ಕಳನ್ನು ಸಾಕುವುದು, ಅವರ ವಿಶ್ರಾಂತಿಗೆ ದಿನದಲ್ಲಿ ಎಷ್ಟು ಸಮಯ ಉಳಿದಿದೆ?
ಒತ್ತಡವನ್ನು ಎದುರಿಸುತ್ತಾ..
ಜೀವನಕ್ಕೆ ಸಂಪಾದನೆ ಬಹಳ ಮುಖ್ಯವಾದ್ದರಿಂದ ಆ ಸಂಪಾದನೆಯ ಬಹುಪಾಲು ಮಕ್ಕಳ ವಿದ್ಯಾಭ್ಯಾಸಕ್ಕೆ, ವೈದ್ಯಕೀಯ ಸೇವೆಗೆ ಮತ್ತು ಸಾರಿಗೆಗೆ ವಿನಿಯೋಗಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಗಂಡ ಮತ್ತು ಹೆಂಡತಿ ಇಬ್ಬರೂ ದುಡಿಯಲೇಬೇಕಿರುತ್ತದೆ. ಪುರುಷರಿಗೆ ಕೆಲಸದಲ್ಲಿ ಮಾತ್ರ ಒತ್ತಡ ಇರುತ್ತದೆ. ಆದರೆ ಮಹಿಳೆಯರಿಗೆ ಮನೆಗೆಲಸದ ಜೊತೆಗೆ ಉದ್ಯೋಗದ ಒತ್ತಡವೂ ಇದೆ. ಅಡುಗೆಯನ್ನು ಅವರೇ ಮಾಡಬೇಕು. ಮಕ್ಕಳ ಕೆಲಸ, ಬಟ್ಟೆ ಒಗೆಯುವುದು, ಮನೆಯನ್ನು ಶುಚಿಗೊಳಿಸುವುದು, ಅತಿಥಿ ಸತ್ಕಾರ, ಅತ್ತೆಮಾಮ ಇದ್ದರೆ ಅವರ ಯೋಗಕ್ಷೇಮ… ಹೀಗೆ ಎಲ್ಲ ರೀತಿಯ ಕೆಲಸಗಳು ಅವರಿಗೆ ಹೊರೆಯಾಗಿವೆ. ಈ ಕೆಲಸ ಮತ್ತು ಉದ್ಯೋಗ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗದೆ, ಅವರು ಮೌನವಾಗಿ ಒತ್ತಡವನ್ನು ಎದುರಿಸುತ್ತಿದ್ದಾರೆ. ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ.
ಗುಲಾಮರಂತೆ ನೋಡುವುದು..
ಮೊದಲು ಸರ್ಕಾರಿ ಕೆಲಸದಲ್ಲಿ ಸ್ವಲ್ಪ ನಮ್ಯತೆ ಇತ್ತು. ಪ್ರಸ್ತುತ ಅಲ್ಲಿಯೂ ಕೆಲಸದ ಒತ್ತಡ ಸಾಕಷ್ಟು ಹೆಚ್ಚಾಗಿದೆ. ಆರಾಮದಾಯಕ ಕೆಲಸವೆಂದರೆ ಬ್ಯಾಂಕ್ ಉದ್ಯೋಗವೆಂದು ಬಹಳಷ್ಟು ಜನ ಅಂದುಕೊಳ್ಳುತ್ತಿದ್ದರು. ಆದರೆ ಈಗ ಅದು ಸಂಪೂರ್ಣ ವ್ಯತಿರಿಕ್ತವಾಗಿದೆ. ಬ್ಯಾಂಕ್ಗಳಲ್ಲಿ ಚಾಕರಿ ಗಣನೀಯವಾಗಿ ಹೆಚ್ಚಿದೆ. ಅಗಾಧ ಸಂಬಳ ಪಡೆಯುವ ಸಾಫ್ಟ್ ವೇರ್ ಕ್ಷೇತ್ರವನ್ನು ನೋಡುವುದಾದರೆ.. ವರ್ಕ್ ಫ್ರಮ್ ಹೋಂ ಬಂದ ನಂತರ ದಿನದ ಇಪ್ಪತ್ನಾಲ್ಕು ಗಂಟೆಯೂ ಮನೆಯಲೇ ಕುಳಿತು ಕೆಲಸ ಮಾಡುವ ಭಾವನೆ ಮೂಡುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯ ಉದ್ಯೋಗಿಗಳನ್ನು ಮನುಷ್ಯರಂತೆ ಅಲ್ಲ ಗುಲಾಮರಂತೆ ನೋಡಲಾಗುತ್ತಿದೆ. ಲಾಗಿನ್ ಆಗುವುದು ಮಾತ್ರವೇ ಅವರ ಕೈಯಲ್ಲಿರುತ್ತದೆ. ಅದರ ನಂತರ ಎಷ್ಟು ಗಂಟೆ ಕೆಲಸ ಮಾಡಬೇಕೆಂಬುದು ಅವರಿಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಕೆಲಸ ಹಾಗೂ ಕೌಟುಂಬಿಕ ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದಾರೆ.
ಪ್ರಾಣದ ಹಂಗು ತೊರೆದು
ಕೊರೊನಾ ನಂತರ ಸಾಫ್ಟ್ವೇರ್ ಉದ್ಯೋಗಿಗಳ ಪರಿಸ್ಥಿತಿ ಹದಗೆಟ್ಟಿದೆ. ಬರುತ್ತಿರುವ ಸಂಬಳದ ಬಗ್ಗೆ ಮಾತನಾಡುವುದಕ್ಕಿಂತ ಅವರು ಎದುರಿಸುತ್ತಿರುವ ಸಮಸ್ಯೆಗಳೇ ಹೆಚ್ಚಾಗಿವೆ. ಬದುಕನ್ನು ನೀಡಬೇಕಾದ ಉದ್ಯೋಗಗಳು ಜೀವ ತೆಗೆಯುತ್ತಿವೆ. ಪುಣೆಯಲ್ಲಿ ಸಾವನ್ನಪ್ಪಿದ ಚಾರ್ಟರ್ಡ್ ಅಕೌಂಟೆಂಟ್ ಪ್ರಕರಣವು ಕೇವಲ ಒಂದು ಉದಾಹರಣೆಯಾಗಿದೆ. ಇಂತಹ ಎಷ್ಟೋ ಘಟನೆಗಳು ಜಗತ್ತಿನ ಮುಂದೆ ಬರುವುದೇ ಇಲ್ಲ? ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಯುವ ಮಹಿಳಾ ಉದ್ಯೋಗಿಗಳು ವಿಶ್ವದ ಇತರರಿಗಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ವಾರಕ್ಕೆ 40 ಗಂಟೆಗಳ ನಿಯಮವು ಹಳೆಯದಾಗಿದೆ. ಪ್ರಸ್ತುತ ಕಾರ್ಪೊರೇಟ್ ಕಂಪನಿಗಳು ಮಹಿಳೆಯರನ್ನು 55 ರಿಂದ 60 ಗಂಟೆಗಳ ಕಾಲ ದುಡಿಸುತ್ತಿವೆ. ಸಾಫ್ಟ್ವೇರ್, ಐಟಿ ಮತ್ತು ಫೈನಾನ್ಸ್ ಕ್ಷೇತ್ರಗಳಲ್ಲಿ, 18 ಗಂಟೆಗಳ ಕೆಲಸದ ದಿನಗಳು ಸಾಮಾನ್ಯವಾಗಿದೆ. ಕೆಲಸದ ಸಮಯ ಮುಗಿದ ನಂತರ ಮನೆಯಲ್ಲಿದ್ದರೂ ಅಥವಾ ವಾರಾಂತ್ಯದಲ್ಲಿಯೂ ಟಾರ್ಗೆಟ್ ಪೂರ್ಣಗೊಳಿಸಲು ಸಂಸ್ಥೆಗಳು ಉದ್ಯೋಗಿಗಳನ್ನು ಬೆನ್ನಟ್ಟುತ್ತಿವೆ. ಕುಟುಂಬ, ವೈಯಕ್ತಿಕ ಜೀವನ ಮತ್ತು ಆರೋಗ್ಯವನ್ನು ತ್ಯಾಗ ಮಾಡದೆ ಈ ರೀತಿಯ ಕೆಲಸವನ್ನು ಮಾಡಲಾಗುವುದಿಲ್ಲ.
ಭಾರತಕ್ಕೆ ಸ್ಥಾನವೇ ಇಲ್ಲ
ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ದೇಶಗಳಲ್ಲಿ, ಅಂತಹ ಚಾಕರಿಗಳು ಮಾನ್ಯವಾಗಿಲ್ಲ. ಜಗತ್ತಿನಲ್ಲೇ ಅತ್ಯಂತ ಕಡಿಮೆ ಕೆಲಸದ ಅವಧಿಯನ್ನು ಹೊಂದಿರುವ 20 ದೇಶಗಳಲ್ಲಿ ಭಾರತಕ್ಕೆ ಸ್ಥಾನವಿಲ್ಲ. ನಮ್ಮ ದೇಶದಲ್ಲಿ ನಾವು ಬದುಕುವುದಕ್ಕಾಗಿ ದುಡಿಯುತ್ತೇವೋ ಅಥವಾ ದುಡಿಯುವುದಕ್ಕಾಗಿಯೇ ಬದುಕಿದ್ದೇವೋ ಎನ್ನುವಷ್ಟರ ಮಟ್ಟಿಗೆ ಕೆಲಸ ಜೀವನವನ್ನು ಕಬಳಿಸುತ್ತಿದೆ. ಇದು ಒಂದು ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. 1948 ರಲ್ಲಿ, ಕೆಲಸದ ಪರಿಸ್ಥಿತಿಗಳು ಏನಾಗಿರಬೇಕು ಎಂಬ ವಿಷಯದ ಮೇಲೆ ಹೆಚ್ಚಿನ ದೇಶಗಳು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದವು. ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸಲು ಈ ಘೋಷಣೆಯನ್ನು ರಚಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ. ಆದರೆ ನಮ್ಮ ಸರ್ಕಾರಗಳು ಮತ್ತು ವ್ಯವಸ್ಥೆಗಳು ಅದನ್ನು ಅನುಸರಿಸಲು ಮತ್ತು ಕಾನೂನುಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ. ಆದ್ದರಿಂದಲೇ ಭಾರತೀಯರಿಂದ ಗುಲಾಮ ಚಾಕರಿ ಮಾಡಿಸಿಕೊಳ್ಳುವ ಕಂಪನಿಗಳು ಹೆಚ್ಚಾಗಿದೆ.
ಸ್ಮಾರ್ಟ್ ವರ್ಕ್ ಅಗತ್ಯ..
ಹೆಚ್ಚಿನ ಗಂಟೆಗಳ ಕಾಲ ಕೆಲಸ ಮಾಡುವುದು ಉದ್ಯೋಗಿಗಳ ಸಮರ್ಪಣೆಯ ಅಳತೆಗೋಳಲ್ಲ ಎಂಬುದನ್ನು ಸಂಸ್ಥೆಗಳು ಗುರುತಿಸಬೇಕು. ವರ್ಕಿಂಗ್ ಕಂಡೀಷನ್ ಯಾವುದೇ ರೀತಿಯಲ್ಲೂ ಅನುಕೂಲವಿಲ್ಲದಿರುವ ಕಡೆ ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಮಾಡುವುದು ಅತ್ಯಗತ್ಯ. ಸಂತೋಷವಾಗಿ ಮತ್ತು ಆರೋಗ್ಯಕರವಾಗಿ ಜೀವಿಸಬೇಕೆಂದರೆ ಪ್ರತಿಭಟಿಸುವುದೇ ಉತ್ತಮ ಮಾರ್ಗವಾಗಿದೆ. ಇಷ್ಟು ಗಂಟೆ ಎಷ್ಟು ಕೆಲಸ ಮಾಡಬಲ್ಲೆವು ಎಂದು ಹೇಳಬೇಕು. ಅವರವರ ಜೀವನ ಅವರವರ ಕೈಯಲ್ಲೆ ಇರಬೇಕೆಂದರೆ ಪ್ರತಿಭಟಿಸಲು ಮುಂದಾಗಬೇಕಿದೆ
Leave a reply